ಅನಾಣ್ಯೀಕರಣದ ನಿಜ ಉದ್ದೇಶಗಳನ್ನು ಬಯಲಿಗೆಳೆಯಲು ಪ್ರಚಾರಾಂದೋಲನ

ನವ-ಉದಾರವಾದಿ ಆರ್ಥಿಕ ಸುಧಾರಣೆಗಳಿಗೆ ಬದ್ಧವಾಗಿರುವ ಈ ಬಿಜೆಪಿ ಸರಕಾರ ಅದರ ಭಾಗವಾಗಿ ನಡೆಸಿರುವ ಅನಾಣ್ಯೀಕರಣದ ನಿಜ ಉದ್ದೇಶಗಳನ್ನು ಬಯಲಿಗೆಳೆಯಲು ಜನವರಿ ತಿಂಗಳ ಕೊನೆಯ ಭಾಗದಲ್ಲಿ ಒಂದು ಸ್ವತಂತ್ರ ಪ್ರಚಾರಾಂದೋಲನ ನಡೆಸಲು ಸಿಪಿಐ(ಎಂ) ನಿರ್ಧರಿಸಿದೆ. ಜನವರಿ 6ರಿಂದ 8ರ ವರೆಗೆ ತಿರುವನಂತಪುರದಲ್ಲಿ ನಡೆದ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆ ಈ ನಿರ್ಧಾರವನ್ನು ಮಾಡಿದೆ.

ಸಿಪಿಐ(ಎಂ)ನೊಂದಿಗೆ ಕೈಜೋಡಿಸುವ ಎಲ್ಲ ಸಾಮೂಹಿಕ ಸಂಘಟನೆಗಳು ನಿರ್ದಿಷ್ಟ ಜನಸಮೂಹಗಳ, ಅಂದರೆ ಅಸಂಘಟಿತರು, ದಿನಗೂಲಿ ಕಾರ್ಮಿಕರು, ಕೃಷಿ ಕೂಲಿಕಾರರು, ರೈತರು, ಮಹಿಳೆಯರು, ಯುವಜನರು ಮುಂತಾದವರ ಮೇಲೆ ಇದರಿಂದಾಗಿರುವ ದುಷ್ಪರಿಣಾಮಗಳು, ಸಂಕಟಗಳ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸುತ್ತವೆ ಹಾಗೂ ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳು ಜಂಟಿಯಾಗಿ ಪ್ರತಿಭಟನೆಗಳನ್ನು ನಡೆಸುತ್ತವೆ ಎಂದೂ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ಇವೆಲ್ಲ ಹತ್ತು ಬೇಡಿಕೆಗಳ ಮೇಲೆ ನಡೆಯುತ್ತವೆ.

ಬ್ಯಾಂಕುಗಳಿಂದ/ಎಟಿಎಂ ಮೂಲಕ ತಮ್ಮ ಹಣವನ್ನು ತೆಗೆಯಲು ಜನಗಳ ಮೇಲೆ ಹಾಕಿರುವ ಮಿತಿಗಳನ್ನೆಲ್ಲ ತಕ್ಷಣ ತೆಗೆಯಬೇಕು ಮತ್ತು ಡಿಜಿಟಲ್ ವ್ಯವಹಾರಗಳನ್ನೇ ನಡೆಸುವಂತೆ ಜನಗಳಿಗೆ ಜುಲುಮೆ ಮಾಡಬಾರದು ಎಂಬ ಬೇಡಿಕೆಗಳ ಮೇಲೆ ಜಂಟಿ ಪ್ರತಿಭಟನೆಗಳಲ್ಲಿ ಸಿಪಿಐ(ಎಂ) ಎಲ್ಲ ಪಕ್ಷಗಳೊಂದಿಗೆ ಆಂದೋಲನಗಳೊಂದಿಗೆ ಸಹಕರಿಸುತ್ತದೆ ಎಂದೂ ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಯಾವ ಉದ್ದೇಶವನ್ನೂ ಈಡೇರಿಸದ ಅನಾಣ್ಯೀಕರಣದ ಕ್ರಮ

ಪ್ರಧಾನ ಮಂತ್ರಿಗಳು ನವಂಬರ್ 8ರಂದು ಪ್ರಕಟಿಸಿದ 1000 ಮತ್ತು 500 ರೂಪಾಯಿ ನೋಟುಗಳ ಅನಾಣ್ಯೀಕರಣ ನಮ್ಮ ಆರ್ಥಿಕ ವ್ಯವಸ್ಥೆಗೆ ಅಪಾರ ನಷ್ಟ ಉಂಟುಮಾಡಿದೆ, ಕೋಟ್ಯಂತರ ಜನಗಳ ಜೀವನಾಧಾರಕ್ಕೆ ಕಲ್ಲು ಹಾಕಿ ಸಂಕಟಪಡುವಂತೆ ಮಾಡಿದೆ. ಐವತ್ತು ದಿನಗಳ ಅವಕಾಶ ಕೋರಿದ ಪ್ರಧಾನ ಮಂತ್ರಿಗಳು ಆ ಮೇಲೆ ಪರಿಸ್ಥಿತಿ ಸಾಮಾನ್ಯಗೊಳ್ಳುವುದೆಂದು ಭರವಸೆ ನೀಡಿದರು. ಆದರೆ ಪರಿಸ್ಥಿತಿ ಸಾಮಾನ್ಯಗೊಂಡಿಲ್ಲ, ಮಾತ್ರವಲ್ಲ, ಜನಗಳ ಸಂಕಟಗಳು ಮುಂದುವರೆಯುತ್ತಲೇ ಇವೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ವಿಶ್ಲೇಷಿಸಿದೆ. ಜನಗಳು ಬ್ಯಾಂಕುಗಳಲ್ಲಿ ಇರಿಸಿರುವ ತಮ್ಮದೇ ಹಣವನ್ನು ತೆಗೆಯಲು ಹಾಕಿರುವ ಮಿತಿಗಳು ಮುಂದುವರೆಯುತ್ತಲೇ ಇವೆ.

ಪ್ರಧಾನ ಮಂತ್ರಿಗಳು ಈ ಕ್ರಮ ಕೈಗೊಳ್ಳಲು ಪಟ್ಟಿ ಮಾಡಿದ ನಾಲ್ಕು ಉದ್ದೇಶಗಳಲ್ಲಿ, ಅಂದರೆ ಕಪ್ಪು ಹಣದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಖೋಟಾ ನೋಟುಗಳ ವಿರುದ್ಧ ಮತ್ತು ಭಯೋತ್ಪಾದನೆಗೆ ಹಣ ನೀಡಿಕೆಯ ವಿರುದ್ಧ ಹೋರಾಟಗಳು-ಯಾವುದೂ ಈಡೇರಿಲ್ಲ. ಸ್ವತಃ ಪ್ರಧಾನ ಮಂತ್ರಿಗಳೇ ಕಪ್ಪು ಹಣದ 90%ವನ್ನು ವಿದೇಶಿ ತೆರಿಗೆಮುಕ್ತಧಾಮಗಳಲ್ಲಿ ಇಡಲಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದರು. ಆದರೆ ಇದುವರೆಗೂ ಅದರಲ್ಲಿ ಒಂದು ರೂಪಾಯಿಯನ್ನೂ ಮುಟ್ಟಿಲ್ಲ, ಅವುಗಳನ್ನು ವಸೂಲಿ ಮಾಡುವ ಪ್ರಯತ್ನವನ್ನೂ ಮಾಡಿಲ್ಲ.

ಕಪ್ಪು ಹಣ ಬಿಳಿಯಾಗಿದೆ ಖೋಟಾ ನೋಟು ಸಾಚಾ ಆಗಿದೆ?

ಈಗ ಅನಾಣ್ಯೀಕರಣ ಮಾಡಿರುವ ಸುಮಾರಾಗಿ ಎಲ್ಲ ಹಣವೂ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿರುವುದರಿಂದ ನಗದು ರೂಪದಲ್ಲಿದ್ದ ಕಪ್ಪು ಹಣವೂ ಈಗ ಬಿಳಿಯಾಗಿ ಪರಿವರ್ತನೆಗೊಂಡು ಬ್ಯಾಂಕುಗಳಲ್ಲಿ ಇದೆ. ಬ್ಯಾಂಕುಗಳಲ್ಲಿ ಠೇವಣಿಯಾದ ನೋಟುಗಳ ಒಟ್ಟು ಮೊತ್ತ ಎಷ್ಟು ಎಂಬುದನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಅದು ಹಿಂತೆಗೆದುಕೊಂಡ ನೋಟುಗಳ ಮೊತ್ತಕ್ಕಿಂತಲೂ ಹೆಚ್ಚಿದ್ದರೆ, ಚಲಾವಣೆಯಲ್ಲಿದ್ದ ಖೋಟಾ ನೋಟುಗಳೂ ಸಾಚಾ ಆಗಿ ಬಿಟ್ಟಿವೆ ಎಂದರ್ಥವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಹೊಸ ನೋಟುಗಳನ್ನು ವಶಪಡಿಸಿಕೊಂಡಿರುವುದು ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಇನ್ನೂ ಇದೆ ಎಂಬುದನ್ನು ಸೂಚಿಸುತ್ತದೆ. ಈ ಕ್ರಮ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವುದು ಅಂತಿರಲಿ, ಅದು ಹೊಸ ಮತ್ತು ಇನ್ನೂ ಮೇಲ್ಮಟ್ಟದ ಭ್ರಷ್ಟಾಚಾರದ ಸ್ವರೂಪಗಳನ್ನು ಸೃಷ್ಟಿಸಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಇನ್ನು, ಭಯೋತ್ಪಾದನೆಗೆ ಹಣದ ಪೂರೈಕೆಯನ್ನು ತಡೆಯುತ್ತದೆ ಎಂಬ ಬಗ್ಗೆ ಪರಿಶೀಲಿಸಿದರೆ, ಇದು ಯಾವ ಪರಿಣಾಮವನ್ನೂ ಬೀರಿಲ್ಲ ಎಂಬುದನ್ನು ಸಪ್ಟಂಬರ್ 30ರ ‘ಮಿಂಚಿನ ಪ್ರಹಾರ’ದ ನಂತರ 33 ಭದ್ರತಾ ಸಿಬ್ಬಂದಿ ಭಯೋತ್ಪಾದಕ ದಾಳಿಗಳಲ್ಲಿ ಪ್ರಾಣ ಕಳಕೊಂಡಿದ್ದಾರೆ ಎಂಬ ಸಂಗತಿಯೇ ಹೇಳುತ್ತದೆ. ಇದರಿಂದಾಗಿ 2016ರಲ್ಲಿ ಭದ್ರತಾ ಸಿಬ್ಬಂದಿಯ ಸಾವಿನ ಪ್ರಮಾಣ 2015ರ ದುಪ್ಪಟ್ಟು ಎಂಬ ಸಂಗತಿಯತ್ತವೂ ಸಿಪಿಐ(ಎಂ) ಗಮನ ಸೆಳೆದಿದೆ.

ಈ ಅನಾಣ್ಯೀಕರಣ ಕೋಟ್ಯಂತರ ಭಾರತೀಯರ ಬದುಕನ್ನು ಚಿಂದಿ ಮಾಡಿದೆ. ಇದು ದೇಶದಲ್ಲಿನ ಆರ್ಥಿಕ ಅಸಮಾನತೆಗಳ ಮೇಲೂ ಪರಿಣಾಮ ಬೀರುವುದು ಖಂಡಿತ. ಈಗಾಗಲೇ ಈ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡ ಎರಡು ವರ್ಷಗಳಲ್ಲೇ ಅದು ತೀವ್ರವಾಗಿ ಏರಿದೆ. 2014ರಲ್ಲಿ ಭಾರತೀಯ ಜನಸಂಖ್ಯೆಯ 1 ಶೇಕಡಾದಷ್ಟು ಸೂಪರ್ ಶ್ರೀಮಂತರು ದೇಶದ ಜಿಡಿಪಿಯ 49%ದಷ್ಟು ಆಸ್ತಿಗಳನ್ನು ಹೊಂದಿದ್ದರು. 2016ರ ವೇಳೆಗೆ ಪ್ರಧಾನ ಮಂತ್ರಿ ಮೋದಿಯವರ ನವ-ಉದಾರವಾದಿ ಧೋರಣೆಗಳಿಂದಾಗಿ ಇದು 58.4ಶೇ.ಕ್ಕೆ ಏರಿದೆ. ಈಗ ಅನಾಣ್ಯೀಕರಣದ ಪ್ರಭಾವದಿಂದಾಗಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರಾಗಿಸುವ ಮತ್ತು ಬಡವರನ್ನು ಮತ್ತಷ್ಟು ದಾರಿದ್ರ್ಯಕ್ಕೆ ತಳ್ಳುವ ಕ್ರಿಯೆ ಇನ್ನಷ್ಟು ತೀವ್ರಗೊಳ್ಳುತ್ತದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಘೋಷಿತ ಉದ್ದೇಶಗಳು ಯಾವುದೂ ನೆರವೇರದೆ, ನಗದು ಆರ್ಥಿಕವನ್ನು ಒಂದು ಡಿಜಿಟಲ್ ಆರ್ಥಿಕವಾಗಿ ಪಲ್ಲಟಗೊಳಿಸಲು ಹಾಕುತ್ತಿರುವ ಒತ್ತಿನಿಂದ ಈ ಅನಾಣ್ಯೀಕರಣದ ನಿಜ ಉದ್ದೇಶ ಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಡಿಜಿಟಲ್ ಪಾವತಿಗಳತ್ತ ಪಲ್ಲಟದ ಮಾತು ಹಾಸ್ಯಾಸ್ಪದ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ವಿಶ್ಲೇಷಿಸಿದೆ. ಏಕೆಂದರೆ ಗ್ರಾಮಿಣ ಭಾರತದ 13% ಮಂದಿಗೆ, ಅಂದರೆ 83.4 ಕೋಟಿ ಜನರಲ್ಲಿ 10.8 ಕೋಟಿ ಜನಗಳಿಗೆ ಮಾತ್ರ ಇಂಟರ್ನೆಟ್ ಸೌಲಭ್ಯ ಲಭ್ಯವಿದೆ. ಕೇವಲ 26%ಮಂದಿಗಷ್ಟೇ ಸ್ಮಾರ್ಟ್‍ಫೋನ್‍ಗಳು ಲಭ್ಯ ಇವೆ. ನಗದು ವ್ಯವಹಾರಗಳ ಮೇಲೆಯೇ ಬಹಳಷ್ಟು ಅವಲಂಬಿಸಿರುವುದರಿಂದಾಗಿ ಹಲವಾರು ವಲಯಗಳಿಗೆ ತಟ್ಟಿರುವ ಹಾವಳಿ ಅಪಾರ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಗಮನಿಸಿದೆ.

ಅದೇ ವೇಳೆಯಲ್ಲಿ, ಡಿಜಿಟಲ್ ವ್ಯವಹಾರಗಳತ್ತ ಚಲಿಸುವುದರ ಮೇಲೆ ಹಾಕುತ್ತಿರುವ ಒತ್ತು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಕಾರ್ಪೊರೇಟ್‍ಗಳಿಗೆ ಗರಿಷ್ಟ ಲಾಭಗಳಿಕೆಗೆ ನೀಡಿರುವ ಬಕ್ಷೀಷು ಎಂದು ಸಿಪಿಐ(ಎಂ) ವರ್ಣಿಸಿದೆ. ಪ್ರತಿಯೊಂದು ಡಿಜಿಟಲ್ ವ್ಯವಹಾರದಲ್ಲಿ ವ್ಯವಹಾರದ ವೆಚ್ಚ ಎಂಬಿದಿದೆ, ಇದು ಬಳಕೆದಾರರ ಮೇಲೆ ಹೆಚ್ಚಿನ ಹೊರೆ ಹಾಕಿದರೆ, ಕಾರ್ಪೊರೇಟ್‍ಗಳಿಗೆ ಲಾಭದ ಒಂದು ಮೂಲವಾಗಿದೆ. ಅಂದರೆ, ಈ ಸರಕಾರ ನವ-ಉದಾರವಾದಕ್ಕೆ ಭಾರತದ ಅಡಿಯಾಳುತನದ ಭಾಗವಾಗಿ ಈ ಅನಾಣ್ಯೀಕರಣದ ಕಸರತ್ತನ್ನು ನಡೆಸಿದೆ ಎಂಬುದು ಸ್ಪಷ್ಟ.

ಈ ಹಿನ್ನೆಲೆಯಲ್ಲಿ 10 ಬೇಡಿಕೆಗಳ ಮೇಲೆ ಜನಗಳನ್ನು ಅಣಿನೆರೆಸಲು ಸಿಪಿಐ(ಎಂ) ನಿರ್ಧರಿಸಿದೆ:

  1. ಡಿಸೆಂಬರ್ 30ರ ಗಡುವು ಮುಗಿದಿದೆಯಾದ್ದರಿಂದ ಜನಗಳು ತಾವು ಕಷ್ಟಪಟ್ಟು ಸಂಪಾದಿಸಿ ಬ್ಯಾಂಕುಗಳಲ್ಲಿಟ್ಟಿರುವ ಹಣವನ್ನು ಬೇಕಾದಾಗ ಪಡೆಯಲು ಇರುವುದರ ಮೇಲೆ ಹಾಕಿರುವ ಎಲ್ಲ ಮಿತಿಗಳನ್ನೂ ತಕ್ಷಣವೇ ತೆಗೆಯಬೇಕು.
  2. ಎಂದಿನ ಕೃಷಿ ಚಟುವಟಿಕೆಗಳು ಅಸ್ತವ್ಯಸ್ತ ಗೊಂಡಿದ್ದರಿಂದಾಗಿ ಸಂಕಟಗಳಿಗೆ ಒಳಗಾಗಿರುವ ರೈತರಿಗೆ ತಕ್ಷಣವೇ ಸಾಲ ಮನ್ನಾ.
  3. ಗ್ರಾಮೀಣ ಉದ್ಯೋಗವನ್ನು ಹೆಚ್ಚಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅರ್ಜಿ ಹಾಕಿಕೊಂಡವರಿಗೆಲ್ಲ ಉದ್ಯೋಗ ಒದಗಿಸಲು ಈ ಯೋಜನೆಗೆ ಹಣನೀಡಿಕೆಯನ್ನು ದ್ವಿಗುಣಗೊಳಿಸಬೇಕು
  4. ಹಿಂಗೆದುಕೊಂಡ ನೋಟುಗಳ ವಿನಿಮಯಕ್ಕಾಗಿ ಅಥವ ತಮ್ಮದೇ ಹಣವನ್ನು ಪಡೆಯಲು ಸಾಲಿನಲ್ಲಿ ನಿಂತಿದ್ದಾಗ ಪ್ರಾಣ ಕಳಕೊಂಡವರ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕು.
  5. ತಮ್ಮ ಉದ್ಯೋಗಗಳನ್ನು, ಜೀವನಾಧಾರವನ್ನು ಕಳಕೊಂಡವರಿಗೆಲ್ಲರಿಗೂ, ನಿರ್ದಿಷ್ಟವಾಗಿ, ಕೃಷಿ ಕೂಲಿಕಾರರು ಮತ್ತು ದಿನಗೂಲಿ ಮಾಡುವವರಿಗೆ ಪರಿಹಾರ ನೀಡಬೇಕು.
  6. ತಮ್ಮ ಆರ್ಥಿಕ ಚಟುವಟಿಕೆಗಳನ್ನು ಮುಖ್ಯವಾಗಿ ನಗದು ವ್ಯವಹಾರಗಳಲ್ಲೇ ನಡೆಸುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ತೆರಿಗೆ ರಿಯಾಯ್ತಿ ಒದಗಿಸಬೇಕು.
  7. ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿಗಳು ಮತ್ತು ನಿಕಾಲೆಗಳ ಮೇಲೆ ಹಾಕಿರುವ ಮಿತಿಗಳನ್ನೆಲ್ಲ ತೆಗೆಯಬೇಕು.
  8. ರಾಜ್ಯಗಳಿಗೆ ಆಗುತ್ತಿರುವ ರೆವಿನ್ಯೂ ನಷ್ಟವನ್ನು ಕೇಂದ್ರ ಸರಕಾರ ಭರ್ತಿ ಮಾಡಬೇಕು.
  9. ಜನಗಳಿಗೆ ಡಿಜಿಟಲ್ ವ್ಯವಹಾರಗಳನ್ನು ನಡೆಸಬೇಕು ಎಂದು ಬಲವಂತ, ಜುಲುಮೆ ಮಾಡಬಾರದು.
  10. ಎಲ್ಲ ರೇಶನ್ ಕಾರ್ಡ್‍ದಾರರಿಗೆ ಪೂರೈಕೆಗಳು ಲಭ್ಯವಾಗಬೇಕು. ಆಧಾರ್ ಕಾರ್ಡನ್ನು ಕಡ್ಡಾಯ ಮಾಡುವ ಶರತ್ತಿನಿಂದಾಗಿ ಬಹಳಷ್ಟು ಜನಗಳಿಗೆ ರೇಶನ್‍ಗಳನ್ನು ನಿರಾಕರಿಸಲಾಗುತ್ತಿದೆ. ಇದನ್ನು ಹಿಂತೆಗೆದುಕೊಳ್ಳಬೇಕು.

ರಾಜಕೀಯ ಭ್ರಷ್ಟಾಚಾರ – ಪ್ರಧಾನ ಮಂತ್ರಿಗಳಿಗೆ ಸವಾಲು

ಎಲ್ಲ ರಾಜಕೀಯ ಪಕ್ಷಗಳು ತಾವು ಪಡೆಯುವ ಹಣದ ಬಗ್ಗೆ ಸ್ವಚ್ಛವಾಗಿರಬೇಕು ಮತ್ತು ಪಾರದರ್ಶಕತೆ ಇರಬೇಕು ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ. ಪ್ರಧಾನ ಮಂತ್ರಿಗಳೇ ಮೊದಲು ದೇಶದ ಎಲ್ಲೆಡೆಗಳಲ್ಲಿ ಅವರ ರ್ಯಾಲಿಗಳಿಗೆ ಬಿಜೆಪಿ ಎಲ್ಲಿಂದ ಹಣ ತರುತ್ತದೆ ಮತ್ತು ಪ್ರತಿ ರ್ಯಾಲಿಗೆ ಮಾಡಿದ ಖರ್ಚು ಎಷ್ಟು ಎಂದು ಸಾರ್ವಜನಿಕವಾಗಿ ತಿಳಿಸಲಿ ಎಂದು ಸಿಪಿಐ(ಎಂ) ಸವಾಲು ಹಾಕಿದೆ. 2014ರ ಚುನಾವಣಾ ಪ್ರಚಾರಕ್ಕೆ ಪ್ರಧಾನ ಮಂತ್ರಿ ಮೋದಿ ಮಾಡಿರುವ ಖರ್ಚೆಷ್ಟು ಎಂದು ಇದುವರೆಗೂ ದೇಶಕ್ಕೆ ತಿಳಿದಿಲ್ಲ. ಪ್ರಧಾನ ಮಂತ್ರಿಗಳು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‍ಗಳು ಹಣ ನೀಡುವುದನ್ನು ನಿಷೇಧಿಸಬೇಕು ಎಂಬ ಸಿಪಿಐ(ಎಂ) ಸೂಚನೆಯನ್ನು ಸ್ವೀಕರಿಸುತ್ತಾರೆಯೇ? ಚುನಾವಣೆಗಳ ಸಮಯದಲ್ಲಿ ರಾಜಕೀಯ ಪಕ್ಷಗಳು ಮಾಡುವ ಖರ್ಚುಗಳನ್ನು ಅಭ್ಯರ್ಥಿಗಳ ಖರ್ಚಿನ ಮೇಲೆ ಚುನಾವಣಾ ಆಯೋಗ ವಿಧಿಸಿರುವ ಮಿತಿಗಳಿಗೆ ಸೇರಿಸಬೇಕು ಎಂಬುದಕ್ಕೆ ಒಪ್ಪುತ್ತಾರೆಯೇ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಪ್ರಶ್ನಿಸಿದೆ.

ಲೋಕಸಭೆ ಮತ್ತು ವಿಧಾನ ಸಭೆಗೆ ಒಟ್ಟಿಗೇ ಚುನಾವಣೆಗಳು: ಸಂಪೂರ್ಣ ಪ್ರಜಾಪ್ರಭುತ್ವ-ವಿರೋಧಿ ಪ್ರಸ್ತಾವ

ಲೋಕಸಭೆ ಮತ್ತು ವಿಧಾನ ಸಭೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯಬೇಕು ಎಂಬ ಪ್ರಧಾನ ಮಂತ್ರಿಗಳ ಪ್ರಸ್ತಾವ ಸಂಪೂರ್ಣವಾಗಿ ಪ್ರಜಾಪ್ರಭುತ್ವ-ವಿರೋಧಿ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ. ಸ್ವತಂತ್ರ ಭಾರತದ ಚುನಾವಣಾ ಇತಿಹಾಸ 1952 ರಲ್ಲಿ ಏಕಕಾಲದಲ್ಲಿ ಚುನಾವಣೆಗಳೊಂದಿಗೇ ಆರಂಭವಾಯಿತು. ಆದರೆ ಇದನ್ನು ಕೇಂದ್ರದಲ್ಲಿ ಆಳಿದ ಪಕ್ಷಗಳೇ 356ನೇ ಕಲಮಿನ ದುರುಪಯೋಗ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ರಾಜ್ಯ ಸರಕಾರಗಳನ್ನು ವಜಾ ಮಾಡುವ ಮೂಲಕ ಛಿದ್ರಗೊಳಿಸಿದವು. ಅಷ್ಟೇ ಅಲ್ಲ, ಒಂದು ಪ್ರಜಾಪ್ರಭುತ್ವದಲ್ಲಿ ಸಮ್ಮಿಶ್ರ ಸರಕಾರವೊಂದು ಕುಸಿಯಬಹುದು, ಆಗ ಜನತೆಯ ಬಳಿಗೆ ಮತ್ತೆ ಹೋಗುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಅವಕಾಶವಿಲ್ಲದಂತೆ ಮಾಡುವುದು ಎಂದರೆ ಪ್ರಾಥಮಿಕ ಪ್ರಜಾಪ್ರಭುತ್ವ ಹಕ್ಕುಗಳ ನಿರಾಕರಣೆಯಾಗುತ್ತದೆ, ಮತ್ತು ನಮ್ಮ ಸಂವಿಧಾನದ ಒಕ್ಕೂಟ ರಚನೆಯ ಉಲ್ಲಂಘನೆಯಾಗುತ್ತದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಖಡಾಖಂಡಿತವಾಗಿ ಹೇಳಿದೆ.

ಮುಂಬರುವ ವಿಧಾನಸಭಾ ಚುನಾವಣೆಗಳು

ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ) ಅಂಗೀಕರಿಸಬೇಕಾದ ಕಾರ್ಯತಂತ್ರದ ಬಗ್ಗೆ ಕೇಂದ್ರ ಸಮಿತಿ ಚರ್ಚಿಸಿತು. ಸಿಪಿಐ(ಎಂ) ಇತರ ಎಡಪಕ್ಷಗಳೊಂದಿಗೆ ಈ ಚುನಾವಣೆಗಳಲ್ಲಿ ಸ್ಪರ್ಧಿಸಿ ಜನಗಳ ಮೇಲೆ ಪ್ರಸಕ್ತ ನವ-ಉದಾರವಾದಿ ಆರ್ಥಿಕ ದಾಳಿಗಳು ಮತ್ತು ಕೋಮುವಾದಿ ಧ್ರುವೀಕರಣದ ಅಪಾಯಗಳ ವಿರುದ್ಧ ಎಡ ಪರ್ಯಾಯ ಧೋರಣೆಗಳನ್ನು ಸ್ವತಂತ್ರವಾಗಿ ಪ್ರಸ್ತುತ ಪಡಿಸಬೇಕು ಎಂದು ನಿರ್ಧರಿಸಿದೆ.

ಕೇರಳ ಕುರಿತ ಪಿಬಿ ಆಯೋಗ

ಕೇರಳ ಜುರಿತಂತೆ ರಚಿಸಿದ ಪೊಲಿಟ್‍ಬ್ಯುರೊ ಆಯೋಗದ ವರದಿಯನ್ನು ಕೇಂದ್ರ ಸಮಿತಿ ಮಂಜೂರು ಮಾಡಿತು. ಅದು ವರದಿಯಲ್ಲಿ ಗುರುತಿಸಿದ ಪಕ್ಷದ ನೀತಿ-ನಿಯಮಗಳ ಉಲ್ಲಂಘನೆಗಳ ಬಗ್ಗೆ ಕಾಮ್ರೇಡ್ ವಿ ಎಸ್ ಅಚ್ಯುತಾನಂದನ್ ಅವರಿಗೆ ಎಚ್ಚರಿಕೆ ನೀಡಿತು. ಮತ್ತು ಪಕ್ಷದ ಸಂಘಟನಾ ನಿಯಮಾವಳಿ ಹಾಗೂ ಶಿಸ್ತನ್ನು ಪಾಲಿಸಬೇಕು ಎಂದು ಅವರಿಗೆ ಹೇಳಿತು.

ಕೇಂದ್ರ ಸಮಿತಿಯ ಸಭೆ ನಾಲ್ಕು ನಿರ್ಣಯಗಳನ್ನು ಅಂಗೀಕರಿಸಿತು.

  1. ದಕ್ಷಿಣ ಭಾರತದ ಐದೂ ರಾಜ್ಯಗಳು ಎದುರಿಸುತ್ತಿರುವ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯಸರಕಾರಗಳನ್ನು ಆಗ್ರಹಿಸಿ
  2. 2013ರ ಭೂಸ್ವಾಧೀನ ಕಾಯ್ದೆಯ ಪ್ರಯೋಜನಕಾರಿ ಅಂಶಗಳನ್ನು ಬುಡಮೇಲು ಮಾಡುವ ಕ್ರಮಗಳ ವಿರುದ್ಧ
  3. ಈಗಾಗಲೇ ಸಾರ್ವತ್ರಿಕ ಪಡಿತರ ಹೊಂದಿರುವ ಕೇರಳದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜಾರಿಯ ಬಗ್ಗೆ
  4. ರೋಹಿತ್ ವೆಮುಲ ಸಾಂಸ್ಥಿಕ ಕೊಲೆಯ ಮೊದಲ ವಾರ್ಷಿದ ಆಚರಣೆಯನ್ನು ಬೆಂಬಲಿಸುತ್ತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಪಕ್ಷಪಾತವನ್ನು ನಿವಾರಿಸಲು ‘ರೋಹಿತ್ ಕಾಯ್ದೆ’ ತರಬೇಕೆಂಬ ಬೇಡಿಕೆಯನ್ನು ಬೆಂಬಲಿಸಿ.

 

 

 

Leave a Reply

Your email address will not be published. Required fields are marked *