ಗಣರಾಜ್ಯ ಉಳಿಸಿ, ಜನರಾಜ್ಯ ಬೆಳೆಸಿ: ಜಿ.ವಿ.ಶ್ರೀರಾಮರೆಡ್ಡಿ

ಭಾರತ ಪ್ರಜಾಸತ್ತಾತ್ಮಕ ಸಂವಿಧಾನವೊಂದನ್ನು ಅಂಗೀಕರಿಸಿ ಆ ಸಂವಿಧಾನದ ಮೇಲೆ ಆಧಾರಿತವಾದ ಗಣರಾಜ್ಯ ಎಂದು ಘೋಷಿಸಿ 66 ವರ್ಷಗಳು ಕಳೆದಿವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚಿಸಿದ ಸಂವಿಧಾನ ದೇಶದ ಎಲ್ಲಾ ಜನವಿಭಾಗಗಳು ಭಾಗವಹಿಸಿದ ಸ್ವಾತಂತ್ರ್ಯ ಹೋರಾಟದ ಹಲವು ಆಶಯಗಳನ್ನು ಒಳಗೊಂಡಿದೆ. ಆದರೆ ಈ ಸಂವಿಧಾನ ರೂಪಿಸಿ ಬೆಳೆಸಿದ ಹಲವು ಪ್ರಜಾಸತ್ತಾತ್ಮಕ ಸಂಸ್ಥೆಗಳು, ಆಚರಣೆಗಳು, ಸಂಪ್ರದಾಯಗಳ ಮೇಲೆ, ಇತ್ತೀಚಿನ ವರ್ಷಗಳಲ್ಲಿ 1990ರ ದಶಕದಲ್ಲಿ ಆರಂಭವಾದ ಆಳುವ ವರ್ಗಗಳ ನವ-ಉದಾರವಾದಿ ಧೋರಣೆಗಳ ಮತ್ತು ರಾಜಕೀಯದ ತೀವ್ರ ಕೋಮುವಾದೀಕರಣವಾದ ಹಿನ್ನೆಲೆಯಲ್ಲಿ ತೀವ್ರ ದಾಳಿಗಳು ನಡೆಯುತ್ತಿವೆ. ಮೋದಿ ನಾಯಕತ್ವದ ಬಿಜೆಪಿ ಸರಕಾರದ ಕಳೆದ ಎರಡುವರೆ ವರ್ಷಗಳ ಆಳ್ವಿಕೆಯಲ್ಲಿ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ಗಣರಾಜ್ಯ ವ್ಯವಸ್ಥೆಯ ಮೇಲೆ ಈ ದಾಳಿಗಳು ತೀವ್ರವಾಗಿವೆ.

ಗೋರಕ್ಷಣೆ, ಭಯೋತ್ಪಾದನೆ ಮತ್ತು ಇತರ ಹಲವು ನೆಪಗಳನ್ನು ಮುಂದುಮಾಡಿ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ. ಪ್ರತಿಯೊಂದು ಚುನಾವಣೆಯ ಮೊದಲು ಇಂತಹ ಪ್ರಕರಣಗಳ ಸಂಖ್ಯೆ ಮತ್ತು ಭೀಕರತೆ ತಾರಕಕ್ಕೆ ಏರುತ್ತದೆ. ಉತ್ತರ ಪ್ರದೇಶದ ದಾದ್ರಿಯ ಮಹಮ್ಮದ್ ಅಫ್ಲಾಖ್ ಅವರ ಕೊಲೆ ಇಂತಹ ಪ್ರಕರಣಗಳ ಪ್ರತೀಕವಾಗಿ ಬಿಟ್ಟಿದೆ. ಸುಮಾರು ಒಂದುವರೆ ವರ್ಷದ ನಂತರವೂ ಕೊಲೆಗಾರರಿಗೆ ಮತ್ತು ಅವರ ಹಿಂದಿರುವ ಸಂಘ ಪರಿವಾರದ ವ್ಯಕ್ತಿಗಳಿಗೆ ಶಿಕ್ಷೆ ಆಗಿಲ್ಲ ಮಾತ್ರವಲ್ಲ, ಅಫ್ಲಾಖ್ ಕುಟುಂಬದ ಮೇಲೆನೇ ಕೇಸು ದಾಖಲಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಂತೂ ಮುಸ್ಲಿಮ್ ಅಲ್ಪಸಂಖ್ಯಾತರನ್ನು ತಮ್ಮ ಪ್ರಾಣ ರಕ್ಷಿಸಲೂ ಹಕ್ಕು ಇಲ್ಲದಿರುವ ಎರಡನೇ ದರ್ಜೆಯ ಪ್ರಜೆಯ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ಇತ್ತೀಚಿನ ಹೊಸಪೇಟೆ ಮತ್ತು ಗಂಗಾವತಿ ಕೋಮು ದಾಳಿಯ ಪ್ರಕರಣಗಳು ತೋರಿಸಿದಂತೆ ಇದು ಕರ್ನಾಟಕದ ಇತರ ಪ್ರದೇಶಗಳಿಗೂ ಹಬ್ಬುತ್ತಿದೆ.

ದಲಿತರ ಮೇಲೂ ದಾಳಿಗಳು ಏರುತ್ತಿವೆ. ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಅದನ್ನು ಸಾಧಿಸುತ್ತಿರುವ ದಲಿತರ ಮೇಲೆ ವ್ಯವಸ್ಥಿತ ದಾಳಿಗಳು ಆಗುತ್ತಿವೆ. ವಿದ್ಯಾರ್ಥಿ ನಾಯಕ ರೋಹಿತ್ ವೆಮುಲಾನನ್ನು ಆತ್ಮಹತ್ಯೆಗೆ ತಳ್ಳಿದ ಮತ್ತು ಇನ್ನೂ ತಮ್ಮ ತಪ್ಪು ಒಪ್ಪಿಕೊಳ್ಳದೆ ಹಠ ಸಾಧಿಸುತ್ತಿರುವ ಹೈದರಾಬಾದ್ ಕೇಂಧ್ರೀಯ ವಿ.ವಿ.ದ ಆಡಳಿತದ ಧೋರಣೆ,  ಹಾಗೂ ಗುಜರಾತಿನ ಊನಾದಲ್ಲಿ ದಲಿತರನ್ನು ಸಾರ್ವಜನಿಕ ಥಳಿಸಿದ ಪ್ರಕರಣಗಳು ದಲಿತರ ಮೇಲೆ ದಾಳಿಯ ಪ್ರತೀಕಗಳು. ದಲಿತರ ಮೀಸಲಾತಿ ವ್ಯವಸ್ಥೆ ದುರ್ಬಲಗೊಳಿಸಲು ಅಥವಾ ತೆಗೆಯಲು (ಜಾಟ್, ಪಟೇಲ್, ಮರಾಠಾ ಮುಂತಾದ) ಪ್ರಬಲ ಜಾತಿಗಳ ಅತೃಪ್ತಿ ಮತ್ತು ಮೀಸಲಾತಿಗಾಗಿ ಹೋರಾಟವನ್ನು ಬಳಸಿಕೊಳ್ಳಲಾಗುತ್ತಿದೆ.  ವೆಮುಲಾನನ್ನು ಆತ್ಮಹತ್ಯೆಯ ಮೊದಲ ವಾರ್ಷಿಕಕ್ಕೆ ಆತನ ಸ್ತೂಪದ ಭೇಟಿ ಮಾಡಲು ಆತನ ತಾಯಿ, ಕುಟುಂಬದವರೂ ಸ್ನೇಹಿತರೂ ಹೋದರೆ ಅವರನ್ನು ಬಂಧಿಸಲಾಯಿತು. ಇದನ್ನು ವರದಿ ಮಾಡಲು ಹೋದ ಪ್ರತ್ರಕರ್ತನನ್ನೂ ಬಂಧಿಸಲಾಯಿತು. ಅಹಿಂದ ಸರಕಾರ ಎಂದು ಹೇಳಲಾಗುವ ಕರ್ನಾಟಕದಲ್ಲೂ ದಲಿತರ ಮೇಲೆ ದಾಳಿಗಳು ಅವ್ಯಾಹತವಾಗಿ ಮುಂದುವರೆಯುತ್ತಿವೆ.

ಕಮ್ಯುನಿಸ್ಟರ ಮೇಲೂ ತೀವ್ರ ಹಿಂಸಾತ್ಮಕ ದಾಳಿಗಳೂ ತೀವ್ರವಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರ ಮೇಲೆ ತೀವ್ರ ದಾಳಿಗಳು ನಡೆಯುತ್ತಿವೆ. ಮೇ 2011ರಿಂದ ಜುಲೈ 2016ವರೆಗಿನ ಅವಧಿಯಲ್ಲಿ 183 ಎಡರಂಗದ ಕಾರ್ಯಕರ್ತರ ಕೊಲೆ ಮಾಡಲಾಗಿದೆ. ಕೇರಳದಲ್ಲಿ ಎಲ್.ಡಿ.ಎಫ್. ಅಧಿಕಾರಕ್ಕೆ ಬಂದಾಗಿನಿಂದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲಾಗದೆ ಹತಾಶವಾದ ಸಂಘಪರಿವಾರ ಪುನಃ ಕೊಲೆಯ ರಾಜಕೀಯ ಆರಂಭಿಸಿದೆ. ಸಾಲದು ಎಂಬಂತೆ ತಮ್ಮ ಮೇಲೆ ದಾಳಿ ಎಂದು ಬೊಬ್ಬಿಟ್ಟ ಸಂಘಪರಿವಾರದ ನಾಯಕರ “ರಕ್ಷಣೆಗೆ” ರಾಜ್ಯ ಸರಕಾರಕ್ಕೆ ಗೊತ್ತಿಲ್ಲದೆ ಕೇಂದ್ರೀಯ ಅರೆಸೈನಿಕ ಪಡೆ ಕಳಿಸುವ ಸಂವಿಧಾನ-ವಿರೋಧಿ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲೂ ಸಿಪಿಐ(ಎಂ) ರಾಜ್ಯ ಸಮಿತಿ ಕಚೇರಿಯ ಮೇಲೆ ದಾಳಿ ಪ್ರಯತ್ನ ನಡೆಸಲಾಯಿತು. ದಕ್ಷಿಣ ಕನ್ನಡದ ಸಂಸದ ಕೆಲವು ದಿನಗಳ ಹಿಂದೆ “ಕರ್ನಾಟಕದಲ್ಲೂ ಕಮ್ಯುನಿಸ್ಟರಿಗೆ ಬಾರಿಸುತ್ತೇವೆ” ಎಂದು ಘೋಷಿಸಿದ್ದಾರೆ.

ಸರಕಾರದ ನೀತಿಗಳನ್ನು ಕಣ್ಣುಮುಚ್ಚಿ ಒಪ್ಪದ ಬಹುಪರಾಕು ಹೇಳದ ಬುದ್ಧಿಜೀವಿಗಳ ಮೇಲೆ ಕಳೆದ ಎರಡುವರೆ ವರ್ಷಗಳಲ್ಲಿ ತೀವ್ರ ದಾಳಿಗಳು ಆರಂಭವಾಗಿವೆ. ಡಾ. ದಾಬೋಲ್ಕರ್, ಕಾ. ಗೋವಿಂದ ಪನ್ಸಾರೆ ಮತ್ತು ಡಾ. ಕಲಬುರ್ಗಿ ಅವರುಗಳು ‘ಸರಣಿ ಕೊಲೆ’ ಇಂತಹ ದಾಳಿಗಳ ಪರಾಕಾಷ್ಟೆ. ಚೆನ್ನೈ ಐಐಟಿ, ಎಫ್.ಟಿ.ಐ.ಐ., ಜೆ.ಎನ್.ಯು., ಹೈದಾರಾಬಾದ್ ಕೇಂದ್ರೀಯ ವಿ.ವಿ.ಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಪ್ರಾಥಮಿಕ ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೇಲೆ ಹಲ್ಲೆ; ಐ.ಸಿ.ಎಚ್.ಆರ್. ಮುಂತಾದ ಅಕಾಡೆಮಿಕ್ ಸಂಸ್ಥೆಗಳಿಂದ ಸ್ವತಂತ್ರ ವಿಚಾರಗಳ ಪರಿಣತರನ್ನು ಕೈಬಿಟ್ಟಿರುವುದು; ಎಫ್.ಟಿ.ಐ.ಐ, ಸೆನ್ಸಾರ್ ಬೋರ್ಡಿಗೆ ಆಳುವ ಪಕ್ಷಗಳ ಭಟ್ಟಂಗಿಗಳನ್ನು ನೇಮಿಸಿರುವುದು; ಹಲವು ಐಐಟಿಗಳಲ್ಲಿ ಅನಗತ್ಯ ಹಸ್ತಕ್ಷೇಪಗಳ ಮೂಲಕ ಡೈರೆಕ್ಟರುಗಳು ರಾಜಿನಾಮೆ ಕೊಡುವ ಸನ್ನಿವೇಶ ಸೃಷ್ಟಿಸಿರುವುದು – ಇತ್ಯಾದಿ ಕೆಲವು ಪ್ರಸಿದ್ಧ ಉದಾಹರಣೆಗಳು.

ಮುಸ್ಲಿಮರು, ದಲಿತರು, ಕಮ್ಯುನಿಸ್ಟರು, ಬುದ್ದಿಜೀವಿಗಳ ಮೇಲೆ ದಾಳಿ ಪ್ರಜಾಸತ್ತೆಯ ಮೇಲೆ ಸಂವಿಧಾನಾತ್ಮಕ ಗಣರಾಜ್ಯದ ಮೇಲೆ ತೀವ್ರ ದಾಳಿಯ ಲಕ್ಷಣಗಳು. ಇತ್ತೀಚಿನ 500/1000 ರೂ. ನೋಟು ನಿಷೇಧ ಪ್ರಜಾಸತ್ತೆಯ ಮೇಲೆ ಇನ್ನೊಂದು ಬಲವಾದ ದಾಳಿ. ಭ್ರಷ್ಟಾಚಾರ/ಕಪ್ಪು ಹಣದ ನಿಗ್ರಹದ ಬಗ್ಗೆ ಚುನಾವಣಾ ಭರವಸೆಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ನವ-ಉದಾರವಾದಿ ನಗದು-ರಹಿತ ವ್ಯವಸ್ಥೆಯನ್ನು ಜನತೆಯ ಮೇಲೆ ಹೇರಲು ಇದನ್ನು ಮಾಡಲಾಗಿದೆ. ಈ ಕ್ರಮ ಕೈಗೊಳ್ಳುವಲ್ಲಿ ಜನತೆಯ ತಾವು ದುಡಿದು ಸಂಪಾದಿಸಿದ (ಬ್ಯಾಂಕಿನಲ್ಲಿರುವ ಅಥವಾ ತಮ್ಮ ಹತ್ತಿರ ಇರುವ) ಹಣವನ್ನು ಪಡೆಯುವ, ಖರ್ಚು ಮಾಡುವ ಪ್ರಾಥಮಿಕ ಹಕ್ಕನ್ನು ಕಸಿದುಕೊಳ್ಳಲಾಗಿದೆ.

ಇದನ್ನು ಜಾರಿ ಮಾಡಲು ರಿಸರ್ವ್ ಮತ್ತು ಇತರ ಬ್ಯಾಂಕುಗಳ ಸಾಂಸ್ಥಿಕ ಸ್ವಾಯತ್ತತೆಯ ಮೇಲೆ ದಾಳಿ ಮಾಡಲಾಗುತ್ತಿದೆ. ನೋಟು ನಿಷೇಧದ ಮೂಲ ಉದ್ದೇಶಗಳಾದ – ಕಪ್ಪುಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆಗೆ ಆರ್ಥಿಕ ಕುಮ್ಮಕ್ಕು – ಈಡೇರಿಲ್ಲ. ಮಾತ್ರವಲ್ಲ, ಆರ್ಥಿಕದ ಮೇಲೆ ಜನರ ಬದುಕಿನ ಮೇಲೆ ನೋಟು ನಿಷೇಧದ ದುಷ್ಪರಿಣಾಮಗಳ ಬಗ್ಗೆ ಹಲವು (ಜಿಡಿಪಿ ಶೇ. 1ರಷ್ಟು ಕಡಿತವಾಗುತ್ತದೆ ಎಂದು ಹೇಳಿದ ಐ.ಎಂ.ಎಫ್. ಸೇರಿದಂತೆ) ಸ್ವತಂತ್ರ ಸಂಸ್ಥೆಗಳ ಅಧ್ಯಯನ-ವರದಿಗಳ ನಂತರವೂ,  ಜನತೆಯ ಮೇಲೆ ಹೇರಲಾದ ಪ್ರಾಥಮಿಕ ಆರ್ಥಿಕ ಹಕ್ಕುಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲು ತಯಾರಾಗದಿರುವುದು ಸಹ ಸಂವಿಧಾನಾತ್ಮಕ ಗಣರಾಜ್ಯದ ಮೇಲೆ ತೀವ್ರ ದಾಳಿಯ ಲಕ್ಷಣ.

ಸಂವಿಧಾನದ ಮೂಲ ಆಶಯಗಳಾದ ಜಾತ್ಯತೀತವಾದ, ಸಮಾನತೆ, ಸಾಮಾಜಿಕ ನ್ಯಾಯಗಳ ಮೇಲೆ ದಾಳಿಗಳು ನಡೆಯುತ್ತಿವೆ. ನೋಟು ನಿಷೇಧ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಪಾರ್ಲಿಮೆಂಟಿನ ಹೊರಗೆ ಘೋಷಿಸುವ, ಸುಗ್ರೀವಾಜ್ಞೆಗಳ ಮೂಲಕ ಪಾರ್ಲಿಮೆಂಟಿನ ಪರಮಾಧಿಕಾರದ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆದಿದೆ. ರಾಜ್ಯಸಭಾ ರದ್ದತಿ, ಕೇಂದ್ರ-ರಾಜ್ಯಗಳಲ್ಲಿ ಕಡ್ಡಾಯವಾಗಿ ಒಟ್ಟಿಗೆ ಚುನಾವಣೆ ಮುಂತಾದ ಕ್ರಮಗಳ ಮೂಲಕ ಪಾರ್ಲಿಮೆಂಟ್ ವ್ಯವಸ್ಥೆಯನ್ನು ದುರ್ಬಲಗೊಳಿಸಿ ನಾಶ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಹಣ, ಹಿಂಸಾಚಾರ ಮತ್ತು ಮಾಧ್ಯಮಗಳ ಬಲದ ಮೂಲಕ, ಚುನಾವಣೆಗಳಲ್ಲಿ ಪೂರ್ಣವಾಗಿ ಪ್ರಮುಖ ಪಕ್ಷಗಳು ಮತ್ತು ಶ್ರೀಮಂತರ ಕೈಮೇಲಾಗಿದ್ದು ಪಾರ್ಲಿಮೆಂಟಿನಲ್ಲಿ ಜನತೆಯ ಪ್ರಾತಿನಿಧ್ಯದ ಮೂಲತತ್ವಕ್ಕೆ ಭಂಗ ಬಂದಿದೆ.

ಸಂವಿಧಾನದ ಆಶಯಗಳನ್ನು ಆಚರಣೆಗೆ ತರುವ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳನ್ನು ಶಿಥಿಲಗೊಳಿಸಿ ಹಾಳುಗಡೆವಲಾಗುತ್ತಿದೆ. ‘ವಿಧೇಯ’ ನ್ಯಾಯಾಧೀಶರನ್ನು ನೇಮಿಸುವ ಪ್ರಯತ್ನಗಳ ಮೂಲಕ ನ್ಯಾಯಾಂಗದ ಸ್ವತಂತ್ರ ಪಾತ್ರಕ್ಕೆ ಧಕ್ಕೆ ತರಲಾಗುತ್ತಿದೆ. ಒಕ್ಕೂಟತತ್ವವನ್ನು ದುರ್ಬಲಗೊಳಿಸಿ ನವ-ಉದಾರವಾದಿ ವಿದೇಶಿ ಬಂಡವಾಳದ ಪರ ಮತ್ತು ಕೋಮುವಾದಿ ನೀತಿಗಳನ್ನು ಹೇರಲು ರಾಜ್ಯಗಳ ಅಧಿಕಾರಗಳ ಮೇಲೆ ಸತತವಾಗಿ ದಾಳಿಗಳು ನಡೆಯುತ್ತಿವೆ. ಯೋಜನಾ ಆಯೋಗದ ರದ್ದು ಮತ್ತು ಯೋಜನಾ ಪ್ರಕ್ರಿಯೆಗೆ ತಿಲಾಂಜಲಿ ನೀಡುವ ಮೂಲಕ, ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆಗೆ ವೇದಿಕೆಯಾಗಿದ್ದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಭಾವೈಕ್ಯತೆ ಮಂಡಳಿಗಳ ಸಭೆಯನ್ನು ಕರೆಯದೆ ಒಕ್ಕೂಟತತ್ವಕ್ಕೆ ತಿಲಾಂಜಲಿ ನೀಡಲಾಗುತ್ತಿದೆ.

ಪ್ರಜಾಸತ್ತೆಯ ಮೇಲೆ ಮತ್ತು ಸಂವಿಧಾನಾತ್ಮಕ ಗಣರಾಜ್ಯದ ಮೇಲೆ ದಾಳಿಗಳು ಹೆಚ್ಚಲಿದ್ದು 66 ವರ್ಷಗಳ ನಮ್ಮ ಗಣರಾಜ್ಯ ವ್ಯವಸ್ಥೆ ತೀವ್ರ ಅಪಾಯದಲ್ಲಿದೆ. ಆದ್ದರಿಂದ ಈ ಗಣರಾಜ್ಯದ ದಿನ ಗಣರಾಜ್ಯ ಉಳಿಸಲು ಹೋರಾಟ ಮಾಡುವ ಪಣ ತೊಡುವುದು ಅಗತ್ಯವಾಗಿದೆ. ಗಣರಾಜ್ಯ ಉಳಿಸುವುದು ಎಂದರೆ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ವ್ಯವಸ್ಥೆ ಜನತೆಗೆ ಕೊಡುವ ಹಕ್ಕುಗಳ ಮೇಲೆ ದಾಳಿಗಳ ವಿರುದ್ಧ ಪ್ರತಿರೋಧ ಒಡ್ಡುವುದು, ಹೋರಾಟ ನಡೆಸುವುದು.

ನಮ್ಮ ಸ್ವಾತಂತ್ರ್ಯ ಹೋರಾಟದ ಎಲ್ಲಾ ಮತ್ತು ಸಂವಿಧಾನದ ಆಶಯಗಳೂ ನಿಜವಾಗಿಯೂ ಪೂರ್ಣವಾಗಿಯೂ ಇನ್ನೂ ಈಡೇರಿಲ್ಲ. ಎಲ್ಲಾ ನಾಗರಿಕರಿಗೆ ಆಹಾರ, ಮನೆ, ಆರೋಗ್ಯ, ಶಿಕ್ಷಣದ ಕನಿಷ್ಟ ಹಕ್ಕುಗಳನ್ನು ಪೂರೈಸಲು ಇನ್ನೂವರೆಗೂ ಸಾಧ್ಯವಾಗಿಲ್ಲ. ಘನತೆಯ ಸಮೃದ್ಧ ಬದುಕಿನ ಮಾತು ದೂರ ಉಳಿಯಿತು. ಈ ನಿಟ್ಟಿನಲ್ಲಿ ಮೊದಲ ಕೆಲವು ದಶಕಗಳಲ್ಲಿ ಸಾಧಿಸಿದ ಅಲ್ಪ ಪ್ರಗತಿಯೂ ನವ-ಉದಾರವಾದಿ ನೀತಿಗಳ ದಾಳಿಗಳಿಂದ ಸ್ಥಗಿತಗೊಂಡು ಹಿನ್ನಡೆಯಾಗುತ್ತಿದೆ. ಮುಸ್ಲಿಮರು, ದಲಿತರು, ಆದಿವಾಸಿಗಳು ಮುಂತಾದ ಅಲ್ಪಸಂಖ್ಯಾತರು ಸದಾ ಜೀವಭಯದಲ್ಲಿದ್ದಾರೆ.

ಇಂತಹ ಪರಿಸ್ಥಿತಿಗೆ ಕಾರಣ, ನಿಜವಾದ ಅಧಿಕಾರ ಗುತ್ತೇದಾರಿ ಬಂಡವಾಳಶಾಹಿ ನಾಯಕತ್ವದ  ಬಂಡವಾಳಶಾಹಿ-ಭೂಮಾಲಕ ವರ್ಗಗಳ ಕೈಯಲ್ಲಿರುವುದು. ಜನತೆಯ ಹಕ್ಕುಗಳನ್ನು ದಮನ ಮಾಡಿರುವುದು. ಈ ಆಳುವ ವರ್ಗಗಳಿಗೂ ದುಡಿಯುವ ಜನರ ನಡುವೆ ಇರುವ ಅಸಮಾನತೆ ತೀವ್ರವಾಗಿ ಏರುತ್ತಿದೆ.  ದೇಶದ ಅರ್ಧದಷ್ಟು ಸಂಪತ್ತು ಶೇ. 1 ಅತ್ಯಂತ ಶ್ರೀಮಂತರ ಕೈಯಲ್ಲಿದೆ. ರೈತ-ಕಾರ್ಮಿಕರು ಮತ್ತು ಇತರ ದುಡಿಯುವ ಜನರಿಗೆ ಪ್ರಜಾಸತ್ತೆ ಬರಿಯ ಉಪಚಾರವಾಗಿ ಬಿಟ್ಟಿದೆ. 1990ರ ದಶಕದ ನಂತರದ ಜಾಗತೀಕರಣದ ಅಡಿಯಲ್ಲಿ ಆಳುವ ವರ್ಗಗಳು ಇನ್ನಷ್ಟು ಆಕ್ರಾಮಕವಾಗಿ ದುಡಿಯುವ ಜನರ ಹಿತಾಸಕ್ತಿಗಳನ್ನು ದಮನ ಮಾಡುತ್ತಿವೆ. ತಮ್ಮ ಹಿತಾಸಕ್ತಿಗಳನ್ನು ಇನ್ನಷ್ಟು ಆಕ್ರಾಮಕವಾಗಿ ಎತ್ತಿ ಹಿಡಿಯುತ್ತಿವೆ.

ಸ್ವಾತಂತ್ರ್ಯ ಹೋರಾಟದ ಆಶಯಗಳನ್ನು ಪೂರೈಸಲು ಪ್ರಜಾಸತ್ತೆಯನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ. ಈಗಿನ ಗಣರಾಜ್ಯ ವ್ಯವಸ್ಥೆಯನ್ನು ನಿಜವಾದ ಜನರ ರಾಜ್ಯ – ‘ಜನರಾಜ್ಯ’- ಆಗಿಸುವತ್ತ ಮುನ್ನಡೆಸಬೇಕಾಗಿದೆ. ಇದಕ್ಕಾಗಿ ಅಸಮಾನತೆಯನ್ನು ತೊಡೆದು ಹಾಕುವ ಎಲ್ಲಾ ನಾಗರಿಕರ ಕನಿಷ್ಟ ಆವಶ್ಯಕತೆಗಳನ್ನು ಹಕ್ಕುಗಳನ್ನು ಪೂರೈಸುವ, ಉತ್ಪಾದನಾ ಸಾಮಗ್ರಿಗಳ ಒಡೆತನವನ್ನು ದುಡಿಯುವ ಜನರಿಗೆ ಕೊಡುವ ತೀವ್ರ ಆರ್ಥಿಕ-ರಾಜಕೀಯ-ಸಾಮಾಜಿಕ ಬದಲಾವಣೆಗಳನ್ನು ತರಲು ಹೋರಾಟ ನಡೆಸಬೇಕಾಗಿದೆ. ಇದಕ್ಕೆ ಪ್ರಭುತ್ವದ ಮೇಲೆ ಗುತ್ತೇದಾರಿ ಬಂಡವಾಳಶಾಹಿ ನಾಯಕತ್ವದಲ್ಲಿರುವ  ಬಂಡವಾಳಶಾಹಿ-ಭೂಮಾಲಕ ವರ್ಗಗಳ ಹಿಡಿತಕ್ಕೆ ನಿರ್ಣಾಯಕ ಪೆಟ್ಟು ಕೊಡಬೇಕಾಗಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ನಡೆಯುತ್ತಿರುವ ಅವುಗಳ ಸರ್ವಾಧಿಕಾರ ಕೊನೆಗೊಳಿಸಬೇಕಾಗಿದೆ.

ಇದಕ್ಕಾಗಿ ಆಳುವ ವರ್ಗಗಳ ವಿರುದ್ಧ, ಕಾರ್ಮಿಕ ವರ್ಗದ ನೇತೃತ್ವದಲ್ಲಿ – ರೈತರು, ಕೃಷಿ ಕೂಲಿಕಾರರರು, ಎಲ್ಲಾ ದುಡಿಯುವ ಜನರು, ದಲಿತರು, ಆದಿವಾಸಿಗಳು, ಮುಸ್ಲಿಂ ಮುಂತಾದ ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರ, ಮಧ್ಯಮ ವರ್ಗದವರು, ಸಣ್ಣ-ಮಧ್ಯಮ ಉದ್ಯಮಿಗಳು ವ್ಯಾಪಾರಿಗಳು – ಇವರೆಲ್ಲರ ಹಿತಾಸಕ್ತಿಗಳ ರಕ್ಷಣೆಗೆ ಬದುಕು ಉತ್ತಮ ಪಡಿಸಲು ಹೋರಾಡುವ ವಿಶಾಲ ರಂಗವೊಂದನ್ನು ಕಟ್ಟಬೇಕಾಗಿದೆ. ಇದಕ್ಕಾಗಿ ಎಲ್ಲಾ ಎಡ-ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿ ನೆರೆಸಬೇಕಾಗಿದೆ.

ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಗಣರಾಜ್ಯದ ದಿನದಂದು ಇಡೀ ದಿನ ಎಲ್ಲಾ ಜನರನ್ನು ಒಳಗೊಳ್ಳುವ ಅವರ ಗಮನ ಸೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ!

ಈ ಬಾರಿಯ ಗಣರಾಜ್ಯ ದಿನದಂದು ಈಗಿನ ಗಣರಾಜ್ಯವನ್ನು ಉಳಿಸಿಕೊಂಡು ದುಡಿಯುವ ಜನತೆಯ ಆಶೋತ್ತರಗಳನ್ನು ಈಡೇರಿಸುವ ಜನರಾಜ್ಯವಾಗಿ ಬೆಳೆಸುವ ಪಣ ತೊಡೋಣ! ಈ ಬಗ್ಗೆ ದುಡಿಯುವ ಜನರ ಮಧ್ಯೆ ವ್ಯಾಪಕ ಪ್ರಚಾರ-ಪ್ರಕ್ಷೋಭೆ ಕೈಗೊಳ್ಳೋಣ!

“ಗಣರಾಜ್ಯ ಉಳಿಸಿ, ಜನರಾಜ್ಯ ಬೆಳೆಸಿ”!

Leave a Reply

Your email address will not be published. Required fields are marked *