ಬಿಜೆಪಿಯ ಫ್ಲಾಪ್ ಯಾತ್ರೆ: ಕುಗ್ಗುತ್ತಿರುವ ಜನಪ್ರಿಯತೆಯಿಂದಾಗಿ ಎಡಶಕ್ತಿಗಳ ಮೇಲೆ ದಾಳಿ

ಕೇರಳದಲ್ಲಿ ಆರೆಸ್ಸೆಸ್-ಬಿಜೆಪಿ ಗೂಂಡಾಗಳು ಸಿಪಿಐ(ಎಂ) ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವುದನ್ನು, ಖಂಡಿಸಿ, ಅಕ್ಟೋಬರ್ 17ರಂದು ದಿಲ್ಲಿಯಲ್ಲಿ ಬಿಜೆಪಿ ಮುಖ್ಯ ಕಛೇರಿಗೆ ಇನ್ನೊಂದು ಪ್ರತಿಭಟನಾ ಮೆರವಣಿಗೆ ನಡೆಯಿತು. ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ಯೆಚುರಿ, ಪೊಲಿಟ್‍ಬ್ಯುರೊ ಸದಸ್ಯರಾದ ಮಹಮ್ಮದ್ ಸಲೀಂ, ಸುಭಾಷಿಣಿ ಅಲಿ ಮತ್ತು ರಾಘವುಲು, ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದರು. 11, ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೆರಿ ಮುಂದೆ ಪ್ರತಿಭಟನಾ ಸಭೆ ನಡೆಯಿತು. ತಾವೇ ಕೊಲೆಗಡುಕ ರಾಜಕೀಯವನ್ನು ನಡೆಸಿ ಬೇರೆಯವರನ್ನು ದೂಷಿಸುತ್ತಿದ್ದಾರೆ, ಈ ‘ಎನ್‍ಕೌಂಟರ್ ಸ್ಪೆಷಲಿಸ್ಟ್’ಗಳದ್ದು ವಾಸ್ತವವಾಗಿ ಆರೆಸ್ಸೆಸ್ ರಕ್ಷಾ ಯಾತ್ರೆ ಎಂದು ಸಭೆಯನ್ನುದ್ದೆಶಿಸಿ ಮಾತಾಡಿದ ಮುಖಂಡರು ವರ್ಣಿಸಿದರು.

ಅಕ್ಟೋಬರ್ 14 ರಿಂದ 16ರ ವರೆಗೆ ನವದೆಹಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿ ಕೇರಳದಲ್ಲಿ ಬಿಜೆಪಿಯದ್ದು ಫ್ಲಾಪ್ ಯಾತ್ರೆ ಎಂದು ವರ್ಣಿಸಿದೆ. ಸಭೆಯ ನಂತರ ನೀಡಿರುವ ಅದರ ಹೇಳಿಕೆ  ರಾಜ್ಯದಲ್ಲಿ ಹಿಂಸಾಚಾರವನ್ನು ಹರಡಲು ಬಿಜೆಪಿ ಹಲವು ರೀತಿಗಳಲ್ಲಿ ಉದ್ರೇಕಕಾರಿಯಾಗಿ ವರ್ತಿಸಿದರೂ ಅದರ ಪಿತೂರಿಯನ್ನು ಕೇರಳದ ಜನತೆ ವಿಫಲಗೊಳಿಸಿದ್ದಾರೆ ಎಂದು ಪ್ರಶಂಸಿಸಿದೆ. ಆರಂಭದ ಹಂತದಲ್ಲೆ ಯಾತ್ರೆಗೆ ಸಿಕ್ಕ ಉಪೇಕ್ಷೆಯ ಪ್ರತಿಕ್ರಿಯೆ ಬಿಜೆಪಿ ಅಧ್ಯಕ್ಷರು ನಡುವೆಯೇ ಯಾತ್ರೆ ಬಿಟ್ಟು ದಿಲ್ಲಿಗೆ ಹಿಂದಿರುಗುವಂತೆ ಮಾಡಿದೆ ಎಂದು ಹೇಳಿದೆ.

ಕೇರಳದಲ್ಲಿ ಮತ್ತೆ-ಮತ್ತೆ ಕಾಣ ಬರುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಆರೆಸ್ಸೆಸ್-ಬಿಜೆಪಿಯ ಭಯೋತ್ಪಾದನೆಯೇ ಹೊಣೆ ಎಂಬದು ಕೇರಳದ ಜನತೆಗೆ ತಿಳಿದಿದೆ. ವಾಸ್ತವವಾಗಿ ಈ ಹಿಂಸಾಚಾರವನ್ನು ಆರೆಸ್ಸೆಸ್‍ನವರೇ ನಾಲ್ಕುವರೆ ದಶಕಗಳ ಹಿಂದೆ ಆರಂಭಿಸಿದ್ದು. ಎಲ್‍ಡಿಎಫ್ ಅಧಿಕಾರಕ್ಕೆ ಬಂದಾಗಲೆಲ್ಲ ಇದನ್ನು ಮತ್ತಷ್ಟು ಹರಡುವ ಪ್ರಯುತ್ನ ನಡೆದಿದೆ. ಇವಕ್ಕೆಲ್ಲ ಸಾಕಷ್ಟು ದಾಖಲೆಗಳಿವೆ.

ಹದಿನೈದು ದಿನಗಳ ಈ ಯಾತ್ರೆ ನಕಾರಾತ್ಮಕ ಪರಿಣಾಮವನ್ನೇ ಉಂಟು ಮಾಡಿದೆ ಎಂಬುದನ್ನು ವೆಂಗರ ವಿಧಾನನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ತೋರಿಸಿದೆ. ಅಲ್ಲಿ ಬಿಜೆಪಿಯ ಮತಗಳು ತೀವ್ರವಾಗಿ ಇಳಿದವು, ಅದು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.  ದಿಲ್ಲಿಯಲ್ಲಿಯೂ ಬಿಜೆಪಿ 14 ದಿನಗಳ ಕಾಲ ಸಿಪಿಐ(ಎಂ) ಮುಖ್ಯ ಕಚೇರಿಯ ಎದುರು ಪ್ರತಿಭಟನೆಗಳನ್ನು ನಡೆಸಿತು. ಕೇಂದ್ರೀಯ ಸಚಿವರು ನೇತೃತ್ವ ನೀಡಿದರು.

ಕೇಂದ್ರದ ಆಳುವ ಪಕ್ಷ 14 ದಿನಗಳ ಕಾಲ ಸತತವಾಗಿ ಒಂದು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷದ ಕೇಂದ್ರ ಕಚೇರಿಯ ಎದುರು ಮತಪ್ರದರ್ಶನ ನಡೆಸಿ ಸುತ್ತಲಿನ ವಾಹನ ಸಂಚಾರ, ಮಾರುಕಟ್ಟೆಗಳು ಮತ್ತು ಶಾಲೆಗಳ ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಿರುವುದು ಬಿಜೆಪಿ ಪ್ರಜಾಪ್ರಭುತ್ವಕ್ಕೆ ಏನೊಂದೂ ಗೌರವ ಕೊಡುತ್ತಿಲ್ಲ ಎಂಬುದನ್ನು, ಅದು ಎಂತಹ ಹೀನ ರಾಜಕೀಯಕ್ಕೆ ಇಳಿದಿದೆ ಎಂಬುದನ್ನು ಪ್ರದರ್ಶಿಸಿದೆ.

ಪ್ರತಿಭಟನೆಯ ಹೆಸರಲ್ಲಿ ಬಿಜೆಪಿ-ಆರೆಸ್ಸೆಸ್ ಗೂಡಾಗಳು ಭುವನೇಶ್ವರ, ವಿಶಾಖ ಪಟ್ಟನ, ಡೆಹ್ರಾಡೂನ್ ಮತ್ತಿತರ ಕಡೆಗಳಲ್ಲಿ ಸಿಪಿಐ(ಎಂ) ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಸಿಪಿಐ(ಎಂ) ಮತ್ತು ಎಡಪಕ್ಷಗಳು ಬಿಜೆಪಿ-ಆರೆಸ್ಸೆಸ್‍ನ  ಕೋಮುವಾದಿ ರಾಜಕೀಯವನ್ನು, ನವ-ಉದಾರವಾಧಿ ಆರ್ಥಿಕ ಸುಧಾರಣೆಗಳನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ಹಾಗೂ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸಂಸ್ಥೆಗಳನ್ನು ಬುಡಮೇಲು ಮಾಡುವುದನ್ನು, ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿಗೆ ಅದರ ನಾಚಿಕಗೆಟ್ಟ ಶರಣಾಗತಿಯ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಿರುವುದರಿಂದಾಗಿಯೇ  ಅವರು ಸಿಪಿಐಎಂ) ಮತ್ತು ಎಡಪಕ್ಷಗಳ ವಿರುದ್ಧ ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ ಎಂಬುದನ್ನು ಗಮನಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ, ಬಿಜೆಪಿ ನೇತೃÀತ್ವದ ಎನ್‍ಡಿಎ ಸರಕಾರದ ಜನಪ್ರಿಯತೆ ಪಾತಾಳಕ್ಕಿಳಿದಿರುವುದರಿಂದ ಎಡಶಕ್ತಿಗಳ ಮೇಲೆ ಇಂತಹ ದಾಳಿಗಳಿಗೆ ಇಳಿದಿದೆ ಎಂಬ ತೀರ್ಮಾನಕ್ಕೆ ಬಂದಿದೆ.

ಸಿಪಿಐ(ಎಂ) ಇಂತಹ ದಾಳಿಗಳಿಗೇನೂ ಮಣಿಯುವುದಿಲ್ಲ ಎಂದಿರುವ ಕೇಂದ್ರ ಸಮಿತಿ ಈ ಸರಕಾರದ ಜನ-ವಿರೋಧಿ  ಮತ್ತು ರಾಷ್ಟ್ರ-ವಿರೋಧಿ ಧೋರಣೆಗಳ ವಿರುದ್ಧ ತನ್ನ ಪ್ರಚಾರಾಂದೋಲನವನ್ನು ತೀವ್ರಗೊಳಿಸಲು ನಿರ್ಧರಿಸಿದೆ.

ಜಯ ಅಮಿತ್ ಷಾ ವಿರುದ್ಧ  ತನಿಖೆ ನಡೆಯಬೇಕು

2014ರ ಲೋಕಸಭಾ ಚುನಾವಣೆಗಳಲ್ಲಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಗಂಟಲು ಹರಿಸಿ ಪ್ರಚಾರ ಮಾಡಿದ್ದರೂ ಬಿಜೆಪಿ ಕೇಂದ್ರದಲ್ಲಾಗಲೀ, ಅದರ ಆಳ್ವಿಕೆಯ ರಾಜ್ಯಗಳಲ್ಲಾಗಲೀ, ಮುನ್ನೆಲೆಗೆ ಬಂದ ಯಾವುದೇ ಭ್ರಷ್ಟಾಚಾರದ ಪ್ರಕರಣದಲ್ಲಿ ಕ್ರಮ ಕೈಗೊಂಡಿಲ್ಲ ಎಂಬುದನ್ನು ಗಮನಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಬಿಜೆಪಿ ಅಧ್ಯಕ್ಷ ಅಮಿತ್ ಷಾರವರ ಮಗ ಜಯ ಷಾರವರನ್ನು ಒಳಗೊಂಡ ಇತ್ತೀಚಿನ ಹಗರಣದಲ್ಲಿ ಆತನ ರಕ್ಷಣೆಗೆ ಕೇಂದ್ರ ಮಂತ್ರಿಗಳನ್ನೇ ಆ ಪಕ್ಷ ಕಣಕ್ಕಿಳಿಸಿದೆ. ಆದರೆ ಈ ಯಾವ ವಕ್ತಾರರೂ ಬಯಲಿಗೆ ಬಂದಿರುವ ಸಂಗತಿಗಳಿಗೆ ಸವಾಲು ಹಾಕಿಲ್ಲ.

ಮೋದಿ ಸರಕಾರ ಕೆಲವು ವ್ಯಾಪಾರಸ್ಥರು ಮತ್ತು ಪ್ರತಿಪಕ್ಷಗಳ ರಾಜಕಾರಣಿಗಳ ಭ್ರಷ್ಟಾಚಾರ ಮತ್ತು  ಕಪ್ಪು  ಹಣವನ್ನು ಬಿಳಿ ಮಾಡುವ ಪ್ರಕರಣಗಳಲ್ಲಿ  ಮಾಡಿರುವಂತೆ, ಜಯ ಷಾರವರ ಪ್ರಕರಣವನ್ನೂ ಸಿಬಿಐ, ಇಡಿ(ಜಾರಿ ನಿರ್ದೇಶನಾಲಯ), ಮತ್ತು ಆದಾಯ ತೆರಿಗೆ ಇಲಾಖೆಗೆ ವಹಿಸಿಕೊಡುತ್ತಾರೆ ಎಂದು ನಿರೀಕ್ಷಿಸುವುದು ಬಹಳ ಕಷ್ಟಸಾಧ್ಯ. ಬಿಜೆಪಿ ಮುಖಂಡರ ವ್ಯಾಪಂ ಹಗರಣ, ಬಿಹಾರ ಭೂಹಗರಣ, ಪನಾಮ ಪೇಪರ್‍ಗಳು, ಸಹಾರ-ಬಿರ್ಲಾ ಡೈರಿಗಳು, ಲಲಿತ್ ಮೋದಿ ಪ್ರಕರಣ ಇತ್ಯಾದಿಗಳಲ್ಲಿಯೂ ಸರಕಾರ ಉದ್ದೇಶಪೂರ್ವಕ ವಾಗಿಯೇ ಯಾವುದೇ ಕ್ರಮಗಳನ್ನು ಆರಂಭಿಸಲು ನಿರಾಕರಿಸುತ್ತಿದೆ.

ಮೋದಿ ಸರಕಾರ ಈ ಎಲ್ಲ ಪ್ರಕರಣಗಳಲ್ಲೂ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಕೇಂದ್ರಸಮಿತಿ ಆಗ್ರಹಿಸಿದೆ.

ಕಾನೂನುಬಾಹಿರ ಖಾಸಗಿ ಪಡೆಗಳಿಗೆ ಕಾನೂನು ಬದ್ಧತೆ

ಗೋರಕ್ಷಕರೆಂಬ ಮುಖವಾಡ ಹಾಕಿಕೊಂಡು ಓಡಾಡಿಕೊಂಡಿರುವ, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ಗುರಿಯಿಟ್ಟಿರುವ, ಲೂಟಿ, ಗಲಭೆ, ಹತ್ಯೆಗಳಲ್ಲಿ ತೊಡಗಿರುವ ಖಾಸಗಿ ಸೇನಗಳೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವ ಬದಲು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳ ಕ್ರಮಗಳು ವಾಸ್ತವವಾಗಿ ಈ ಪಡೆಗಳಿಗೆ ಕಾನೂನುಬದ್ಧತೆಯನ್ನು ಒದಗಿಸುತ್ತಿವೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆತಂಕದಿಂದ ಗಮನಿಸಿದೆ.

ಇಂತಹ ಕ್ರಮಗಳಲ್ಲಿ ಇತ್ತೀಚಿನದೆಂದರೆ, ಮಹಮ್ಮದ್ ಅಖ್ಲಾಕ್‍ನ ಕೊಲೆಗಡುಕರನ್ನು ಗೌರವಿಸಿರುವುದು. ಕೆಲವು ಸಮಯದ ಹಿಂದೆ ಜೈಲಿನಲ್ಲಿ ಸತ್ತ ಮುಖ್ಯ ಆಪಾದಿತನ ಶವಕ್ಕೆ ರಾಷ್ಟ್ರೀಯ ಬಾವುಟವನ್ನು ಹೊದಿಸಲಾಗಿತ್ತು, ಮತ್ತು ಆತನ ಪತ್ನಿಗೆ ಉತ್ತರಪ್ರದೇಶ ಸರಕಾರ ಪ್ರಾಥಮಿಕ ಶಾಲೆಯೊಂದರಲ್ಲಿ ಉದ್ಯೋಗದ ಆಶ್ವಾಸನೆ ನೀಡಿತ್ತು. ಈಗ ಇತರ ಆಪಾದಿತರಿಗೆ ರಾಷ್ಟ್ರೀಯ ತಾಪ ವಿದ್ಯುತ್ ನಿಗಮದಲ್ಲಿ ಉದ್ಯೋಗದ ಆಹ್ವಾನ ನೀಡಲಾಗಿದೆ.

ಕ್ರಿಮಿನಲ್‍ಗಳಿಗೆ ಕೊಡಮಾಡುವ ಇಂತಹ ಇನಾಮುಗಳು ಇಂತಹ ಇನ್ನಷ್ಟು ಪಡೆಗಳ ಧೈರ್ಯವನ್ನು ಹಿಗ್ಗಿಸಿ ಇಂತಹ ಇನ್ನಷ್ಟು ಹಲ್ಲೆಗಳಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡುತ್ತದೆ. ಕೇವಲ ಎರಡು ದಿನಗಳ ಹಿಂದೆ ಫರೀದಾಬಾದ್‍ನಲ್ಲಿ ಐವರು ಮುಸ್ಲಿಮರ ಮೇಲೆ ಅವರು ಗೋಮಾಂಸ ಒಯ್ಯುತ್ತಿದ್ದಾರೆಂದು ಆಪಾದಿಸಿ ಹಲ್ಲೆ ಮಾಡಿರುವುದು ಇದನ್ನು ಸಾಬೀತು ಮಾಡುತ್ತದೆ.

ಇಂತಹ ಎಲ್ಲ ಆರೆಸ್ಸೆಸ್-ಪ್ರೇರಿತ ಖಾಸಗಿ ಸೇನೆಗಳ ಮೇಲೆ ಒಂದು ಕೇಂದ್ರೀಯ ನಿಷೇಧ ಇರಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.

ಹದಗೆಡುತ್ತಿರುವ ಆರ್ಥಿಕ ಸನ್ನಿವೇಶ : ಹೆಚ್ಚುತ್ತಿರುವ ಜನಗಳ ಮೇಲಿನ ಹೊರೆಗಳು

ದೇಶದ ಆರ್ಥಿಕತೆ ಹೆಚ್ಚೆಚ್ಚು ಹದಗೆಡುತ್ತಿದೆ ಮತ್ತು ಜನಗಳ ಸಂಕಟಗಳು ಹೆಚ್ಚುತ್ತಿವೆ ಎಂಬದನ್ನು ಸಿಪಿಐ(ಎಂ) ಕೇಂದ್ರ ಸಮಿತಿ ಆತಂಕದಿಂದ ಗಮನಿಸಿದೆ. ನೋಟುರದ್ಧತಿ ಮತ್ತು ಜಿಎಸ್‍ಟಿಯ ವೈಫಲ್ಯಗಳು ಕಾಡಲಾರಂಭಿಸಿವೆ. ಹೆಚ್ಚೆಚ್ಚು ರೈತರು ಹತಾಶೆಯಿಂದ ಆತ್ಮಹತ್ಯೆಗಳನ್ನು ಮಾಡುತ್ತಿರುವುದು ಕರ್ಷಕ ಬಿಕ್ಕಟ್ಟು ಆಳಗೊಳ್ಳುತ್ತಿರುವುದನ್ನು ಬಿಂಬಿಸುತ್ತದೆ, ಮತ್ತು ಮಧ್ಯಮ, ಸಣ್ಣ ಮತ್ತು ಕಿರುಗಾತ್ರದ ಉದ್ದಿಮೆಗಳು ಸುಮಾರಾಗಿ ಧ್ವಂಸಗೊಂಡಿರುವುದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟ ಸಂಭವಿಸುತ್ತಿದೆ. ಮನರೇಗದಂತಹ ಯೋಜನೆಗಳಿಗೆ ಹಣನೀಡಿಕೆಯಲ್ಲಿ ಭಾರೀ ಕಡಿತಗಳು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳ ಕತ್ತನ್ನು ಮತ್ತಷ್ಟು ಹಿಸುಕುತ್ತಿವೆ. ಸೇವಾವಲಯವೂ ಕುಗ್ಗುತ್ತಿದ್ದು ಅದರಿಂದಾಗಿಯೂ ಉದ್ಯೋಗನಷ್ಟಗಳು ಸಂಭವಿಸುತ್ತಿವೆ.  ಆರ್ಥಿಕ ಪರಿಸ್ಥಿತಿಯ ಒಟ್ಟಾರೆ ಚಿತ್ರ ವಿಷಣ್ಣತೆಯಿಂದ ಕೂಡಿದೆ. ಏನು ಮಾಡುವುದೆಂದು ತೋಚದೆ ಮೋದಿ ಸರಕಾರ ಮಾತಿನ ಮಾಯಾಜಾಲ  ಕಟ್ಟುತ್ತಿರುವಂತೆ ಕಾಣುತ್ತಿದೆ.

ಹಬ್ಬದ ಸೀಜನ್ನಿನಲ್ಲೂ ಚಿಲ್ಲರೆ ಮಾರುಕಟ್ಟೆಯಲ್ಲಿ ಮಂಕು ಕವಿದಿದೆ, ದೀಪಾವಳಿ ಸಂದರ್ಭದಲ್ಲೂ ಮಾರಾಟ ಹೆಚ್ಚಿಲ್ಲ.

ಇನ್ನೊಂದೆಡೆಯಲ್ಲಿ ದೊಡ್ಡ ಕಾರ್ಪೊರೇಟ್‍ಗಳು ಮರುಪಾವತಿ ಮಾಡದ ಸಾಲಗಳಲ್ಲಿ 2ಲಕ್ಷ ಕೋಟಿ ರೂ.ಗಳನ್ನು ಮನ್ನಾ ಮಾಡಿರುವುದನ್ನು ಸಿಪಿಐ(ಎಂ) ಕೇಂದ್ರಸಮಿತಿ ಖಂಡಿಸಿದೆ.  ಬಾಕಿ ವಸೂಲಿಗೆ ಕ್ರಮಗಳನ್ನು ಆರಂಭಿಸದೆಯೇ, ಒಟ್ಟು ಸಾಲ ಮತ್ತು ಬಡ್ಡಿ ಬಾಕಿಯ(11.5ಲಕ್ಷ ಕೋಟಿರೂ.) 20%ದಷ್ಟಾಗುವ ಇಷ್ಟು ಹಣವನ್ನು ಬಿಟ್ಟುಕೊಡಲಾಗಿದೆ. ತದ್ವಿರುದ್ಧವಾಗಿ, ಸಣ್ಣ ರೈತರು ಮತ್ತು ಸಣ್ಣ ಸಾಲಗಳಿರುವ ಇತರರು ಮರುಪಾವತಿ ಮಾಡಲಾಗದಾಗ ಅವರ ಆಸ್ತಿಗಳನ್ನು ಕಿತ್ತುಕೊಳ್ಳಲಾಗುತ್ತದೆ.

ಹೆಚ್ಚುತ್ತಿರುವ ಜನತಾ ಹೋರಾಟಗಳು

ರಾಜಸ್ತಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‍ಗಡ ಮತ್ತಿತರ ಕಡೆಗಳಲ್ಲಿ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆ ಕೊಡಿಸುವ ಮತ್ತು ಸಾಲಮನ್ನಾದ ಬಿಜೆಪಿಯ ಚುನಾವಣಾ ಆಶ್ವಾಸನೆಯ ಈಡೇರಿಕೆಗಾಗಿ ಹೋರಾಟಗಳನ್ನು ಆರಂಭಿಸಿರುವ ರೈತರನ್ನು  ಸಿಪಿಐ(ಎಂ) ಕೇಂದ್ರ ಸಮಿತಿ  ಅಭಿನಂದಿಸಿದೆ.

ಇಂತಹ ಕನಿಷ್ಟ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನವನ್ನು ಸರಕಾರ ಖರೀದಿಸುವುದನ್ನು ಕಡ್ಡಾಯಗೊಳಿಸುವ ಒಂದು ಶಾಸನವನ್ನು ತರಬೇಕೆಂಬ ಸಿಪಿಐ(ಎಂ)ನ ಆಗ್ರಹವನ್ನು ಕೇಂದ್ರ ಸಮಿತಿ ಪುನರುಚ್ಚರಿಸಿದೆ.

ಇತರ ವಿವಿಧ ಜನವಿಭಾಗಗಳೂ ವಿನಾಶಕಾರಿ ಆರ್ಥಿಕ ಧೋರಣೆಗಳ ವಿರುದ್ಧ ದೊಡ್ಡ ಹೋರಾಟಗಳಿಗೆ ಸಿದ್ಧತೆಗಳನ್ನು ನಡೆಸುತ್ತಿವೆ ಎಂಬುದನ್ನು ಗಮನಿಸಿರುವ  ಕೇಂದ್ರಸಮಿತಿ ಈ ಪ್ರಯತ್ನಗಳಿಗೆ ಬೆಂಬಲ ಸೂಚಿಸುತ್ತಲೇ, ಮೋದಿ ಸರಕಾರದ ವಿಧ್ವಂಸಕಾರಿ ಪರಿಣಾಮಗಳಿಂದ ನರಳುತ್ತಿರುವ ಜನಗಳು ಕಾರ್ಮಿಕ ಸಂಘಗಳು, ರೈತರು, ವಿದ್ಯಾರ್ಥಿ-ಯುವಜನರು ಮತ್ತು ಇತರ ಜನವಿಭಾಗಗಳು ಯೋಜಿಸುತ್ತಿರುವ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದೆ.

22ನೇ ಮಹಾಧಿವೇಶನಕ್ಕೆ ಸಿದ್ಧತೆಗಳು

ಪಕ್ಷದ 22ನೇ ಮಹಾಧಿವೇಶನವನ್ನು 2018ರ ಎಪ್ರಿಲ್ 18 ರಿಂದ 22ರ ವರೆಗೆ ನಡೆಸಲು ಕೇಂದ್ರ ಸಮಿತಿ ನಿರ್ಧರಿಸಿದೆ. ಒಟ್ಟು 765 ಚುನಾಯಿತ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಅದು ಹೇಳಿದೆ. 22ನೇ ಮಹಾಧಿವೇಶನದ ಕರಡು ರಾಜಕೀಯ ಠರಾವನ್ನು ಪೊಲಿಟ್‍ಬ್ಯುರೊ ರೂಪುರೇಷೆ ಮತ್ತು ಕೇಂದ್ರ ಸಮಿತಿಯಲ್ಲಿನ ಚರ್ಚೆಯ ಆಧಾರದಲ್ಲಿ ಸಿದ್ಧಗೊಳಿಸಲು ಕೇಂದ್ರಸಮಿತಿ ಪೊಲಿಟ್‍ಬ್ಯುರೊಗೆ ಅಧಿಕಾರ ನೀಡಿದೆ.

Leave a Reply

Your email address will not be published. Required fields are marked *