ಒಟ್ಟಿಗೇ ಚುನಾವಣೆ ಪರಿಕಲ್ಪನೆ: ಪ್ರಜಾಪ್ರಭುತ್ವ-ವಿರೋಧಿ/ ಒಕ್ಕೂಟ ತತ್ವ-ವಿರೋಧಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳ ಪ್ರಶ್ನೆಯನ್ನು ಕುರಿತಂತೆ ಭಾರತದ ಕಾನೂನು ಆಯೋಗ ಸಿಪಿಐ(ಎಂ)ನ ಅಭಿಪ್ರಾಯ ಕೋರಿ ಪತ್ರ ಬರೆದಿದೆ. ಇದಕ್ಕೆ ಉತ್ತರಿಸುತ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಸಂಸತ್ತಿಗೆ ಮತ್ತು ರಾಜ್ಯ ವಿಧಾನ ಮಂಡಲಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಜಾರಿಗೆ ತರುವ ವಿರುದ್ಧದ ತರ್ಕ ಕೇವಲ ತಾಂತ್ರಿಕ ಸ್ವರೂಪದ್ದೂ ಅಲ್ಲ, ಅಥವ ಅದು ಕಾರ್ಯಸಾಧ್ಯವಲ್ಲ ಎಂಬುದಕ್ಕೂ ಅಲ್ಲ. ಏಕಕಾಲದಲ್ಲಿ ಚುನಾವಣೆಯ ಈ ಪರಿಕಲ್ಪನೆಯೇ ಮೂಲಭೂತವಾಗಿ ಪ್ರಜಾಪ್ರಭುತ್ವ-ವಿರೋಧಿಯಾಗಿದೆ, ಅದು ಸಂವಿಧಾನ ವಿಧಿಸಿರುವ ಸಂಸದೀಯ ಪ್ರಜಾಪ್ರಭುತ್ವದ ಬುಡಕ್ಕೇ ಏಟು ಕೊಡುತ್ತದೆ ಎಂಬುದೇ ಈ ಬಗ್ಗೆ ಇರುವ ಮೂಲ ಆಕ್ಷೇಪ ಎಂದು ಹೇಳಿದ್ದಾರೆ. ಅವರ ಉತ್ತರದ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:

ನಾನು ನಿಮ್ಮ ೧೪ ಜೂನ್ ೨೦೧೮ರ ಪತ್ರಕ್ಕೆ ಸ್ಪಂದಿಸುತ್ತ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಪತ್ರದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪ್ರಶ್ನೆಯ ಮೇಲೆ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಅಭಿಪ್ರಾಯವನ್ನು ಕೇಳಿದ್ದೀರಿ.

ನಿಮ್ಮ ಪತ್ರಕ್ಕೆ ಸ್ಪಂದಿಸಿ ನಾನು ಇಂತಹ ಒಂದು ಪ್ರಸ್ತಾವಕ್ಕೆ ಸಿಪಿಐ(ಎಂ)ನ ಪರ್ಯಾಲೋಚಿಸಿದ ಆಕ್ಷೇಪಗಳನ್ನು ಕುರಿತಂತೆ ಒಂದು ಟಿಪ್ಪಣಿಯನ್ನು ಲಗತ್ತಿಸಿದ್ದೇನೆ.

ನಮ್ಮ ಅಭಿಪ್ರಾಯದಲ್ಲಿ, ಏಕಕಾಲದಲ್ಲಿ ಚುನಾವಣೆಗಳ ಪ್ರಸ್ತಾವದ ಪರಿಗಣನೆ ಒಂದು ಕಾನೂನು ಸುಧಾರಣೆಯ ವ್ಯಾಪ್ತಿಗಿಂತ ಬಹಳ ಆಚೆಗೆ ಹೋಗುತ್ತದೆ, ಅದಕ್ಕೆ ಭಾರತೀಯ ಸಂವಿಧಾನಕ್ಕೆ ಪ್ರಮುಖ ತಿದ್ದುಪಡಿಗಳು ಬೇಕಾಗುತ್ತವೆ. ಇದು, ನಮ್ಮ ಅಭಿಪ್ರಾಯದಲ್ಲಿ, ನಮ್ಮ ಸಂವಿಧಾನಕ್ಕೆ ಅಕ್ಷರಶಃ ಮತ್ತು ಅದರ ಆಶಯಕ್ಕೂ ವಿರುದ್ಧವಾಗಿರುವಂತದ್ದು.

ಭಾರತೀಯ ಸಂವಿಧಾನ ಜನತೆಯ ಇಚ್ಛೆಯೇ ಕೇಂದ್ರಸ್ಥಾನವನ್ನು ಪಡೆದಿದೆ ಎಂದು ನಿರೂಪಿಸುತ್ತದೆ. ಅದರ ಪೀಠಿಕೆ “ನಾವು, ಭಾರತದ ಜನತೆ” ಎನ್ನುತ್ತ ಮತ್ತು “ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸುತ್ತೇವೆ, ಶಾಸನವಾಗಿಸುತ್ತೇವೆ ಮತ್ತು ನಮಗೆ ಕೊಟ್ಟುಕೊಳ್ಳುತ್ತೇವೆ” ಎಂದು ಇದನ್ನು ಅತ್ಯಂತ ಸ್ಫುಟವಾಗಿ ನಿರೂಪಿಸಿದೆ. ಜನತೆ ತಮ್ಮ ಸಾರ್ವಭೌಮತೆಯನ್ನು ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಚಲಾಯಿಸುತ್ತಾರೆ, ಆ ಪ್ರತಿನಿಧಿಗಳು ಜನತೆಗೆ ಉತ್ತರದಾಯಿಯಾಗಿರುತ್ತಾರೆ, ಮತ್ತು ಕಾರ್ಯಾಂಗ, ಅಥವ ಚುನಾವಣೆಗಳ ಪರಿಣಾಮವಾಗಿ ಅಧಿಕಾರ ವಹಿಸಿಕೊಳ್ಳುವ ಸರಕಾರ, ಶಾಸಕಾಂಗಕ್ಕೆ ಜವಾಬುದಾರಿಯಾಗಿರುತ್ತದೆ. ನಮ್ಮ ಸಂವಿಧಾನದ ಈ ಆಯಾಮಗಳನ್ನು ಶಿಥಿಲಗೊಳಿಸಲು ಅಥವ ಚಿವುಟಿ ಹಾಕಲು ಸಾಧ್ಯವಿಲ್ಲ ಎಂಬುದು ನಮ್ಮ ನಂಬಿಕೆ.

ಅಲ್ಲದೆ, ಇಂತಹ ಒಂದು ಪ್ರಸ್ತಾವವೇ ಮೂಲತಃ ಪ್ರಜಾಪ್ರಭುತ್ವ-ವಿರೋಧಿಯಾಗಿದೆ ಮತ್ತು ನಮ್ಮ ಸಂವಿಧಾನದ ಒಂದು ಮೂಲಭೂತ ಲಕ್ಷಣವಾದ ಒಕ್ಕೂಟತತ್ವದ ನೀತಿಗಳನ್ನು ನಿರಾಕರಿಸುತ್ತದೆ ಎಂಬು ನಾವು ನಂಬಿದ್ದೇವೆ.

ಇಲ್ಲಿ ಲಗತ್ತಿಸಿರುವ ಸಿಪಿಐ(ಎಂ)ನ ಟಿಪ್ಪಣಿ ಸ್ವಯಂವಿವರಣೆ ನೀಡುವಂತದ್ದಾದ್ದರಿಂದ, ಒಂದು ವೈಯಕ್ತಿಕ ಸಂವಾದಕ್ಕೆ ನಿಮ್ಮ ಆಹ್ವಾನಕ್ಕೆ ಧನ್ಯವಾದ ಹೇಳುತ್ತಲೇ, ಅದರ ಆವಶ್ಯಕತೆ ಇರಲಿಕ್ಕಿಲ್ಲ ಎಂದು ಭಾವಿಸುತ್ತೇವೆ.

ಏಕಕಾಲದಲ್ಲಿ ಚುನಾವಣೆಗಳ ಬಗ್ಗೆ ಸಿಪಿಐ(ಎಂ) ನಿಲುವು

ಸಂಸತ್ತು ಮತ್ತು ರಾಜ್ಯ ವಿಧಾನ ಮಂಡಲಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಜಾರಿ ಮಾಡುವುದಕ್ಕೆ ವಿರುದ್ಧವಾದ ತರ್ಕ ಕೇವಲ ತಾಂತ್ರಿಕ ಸ್ವರೂಪದ್ದಲ್ಲ, ಅಥವ ಅದು ಕಾರ್ಯಸಾಧ್ಯವಲ್ಲ ಎಂಬುದಕ್ಕಾಗಿಯಷ್ಟೇ ಅಲ್ಲ. ಈ ಪರಿಕಲ್ಪನೆಗೆ ಮೂಲ ಆಕ್ಷೇಪವೆಂದರೆ, ಇದು ಮೂಲಭೂತವಾಗಿ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸಂವಿಧಾನ ವಿಧಿಸಿರುವಂತಹ ಸಂಸದೀಯ ಪ್ರಜಾಪ್ರಭುತ್ವದ ಬುಡಕ್ಕೇ ಏಟು ಕೊಡುತ್ತದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬೇಕಾದರೆ ಸರಕಾರ ಶಾಸಕಾಂಗಕ್ಕೆ ಜವಾಬುದಾರಿಯಾಗಿರಬೇಕು ಎಂಬ ಸಂವಿಧಾನಿಕ ಯೋಚನೆಗೆ ಕೈಹಾಕಿ ಕೆಡಿಸಬೇಕಾಗುತ್ತದೆ. ಮಂತ್ರಿಮಂಡಲದ ಸಾಮೂಹಿಕ ಹೊಣೆಗಾರಿಕೆ ಜನತೆಯ ಸದನಕ್ಕೆ ಎಂದು ಸಂವಿಧಾನದ ವಿಧಿ ೭೫(೩) ಹೇಳುತ್ತದೆ. ಅದೇ ರೀತಿಯಲ್ಲಿ, ಮಂತ್ರಿಮಂಡಲಕ್ಕೆ ಸಂಬಂಧಿಸಿರುವ ವಿಧಿ ೧೬೪(೧) ಅದು ರಾಜ್ಯದ ವಿಧಾನಸಭೆಗೆ ಸಾಮೂಹಿಕವಾಗಿ ಹೊಣೆಗಾರಿಕೆ ಹೊಂದಿದೆ ಎನ್ನುತ್ತದೆ.

ಸಂವಿಧಾನದ ಅಡಿಯಲ್ಲಿ, ಒಂದು ಸರಕಾರ ಒಂದು ಅವಿಶ್ವಾಸ ಠರಾವಿನ ಮೇಲಿನ ಮತಗಳಲ್ಲಿ ಸೋತು ಹೋಗಿ, ಅಥವ ಒಂದು ಹಣ ಮಸೂದೆಯ ಮತದಾನದಲ್ಲಿ ಸೋತು  ಶಾಸಕಾಂಗದ ವಿಶ್ವಾಸವನ್ನು ಕಳಕೊಂಡರೆ, ಅದು ರಾಜೀನಾಮೆ ನೀಡಲೇಬೇಕು. ಒಂದು ಪರ್ಯಾಯ ಸರಕಾರವನ್ನು ರಚಿಸಲು ಸಾಧ್ಯವಿಲ್ಲವಾದರೆ, ಸದನವನ್ನು ವಿಸರ್ಜಿಸಿ ಮಧ್ಯಂತರ  ಚುನಾವಣೆಗಳನ್ನು ನಡೆಸಬೇಕಾಗುತ್ತದೆ.

ಸಂವಿಧಾನದಲ್ಲಿ ಲೋಕಸಭೆಗಾಗಲೀ, ರಾಜ್ಯ ಶಾಸಕಾಂಗಕ್ಕಾಗಲೀ ನಿಗದಿತ ಅಧಿಕಾರಾವಧಿಯನ್ನು ಪ್ರತಿಷ್ಠಾಪಿಸಿಲ್ಲ. ಸಂವಿಧಾನದ ವಿಧಿ ೮೩(೨) ಮತ್ತು ೧೭೨(೧) ಇವೆರಡೂ ಲೋಕಸಭೆ ಮತ್ತು ವಿಧಾನ ಸಭೆಯ ಅವಧಿ, ಐದು ವರ್ಷಗಳದ್ದಾಗಿರುತ್ತದೆ, ಅದಕ್ಕೆ ಮೊದಲೇ ವಿಸರ್ಜಿಸಿರದಿದ್ದರೆ, ಎಂದು ನಿರ್ದಿಷ್ಟ ಪಡಿಸಿವೆ.

ಲೋಕಸಭೆಯ ಅಥವ ಶಾಸನ ಸಭೆಯ ಅವಧಿಯನ್ನು ದೀರ್ಘಗೊಳಿಸುವುದು ಅಸಂವಿಧಾನಿಕ ಮಾತ್ರವಲ್ಲ, ಪ್ರಜಾಪ್ರಭುತ್ವ-ವಿರೋಧಿ ಕೂಡ. ಚುನಾಯಿತ ಪ್ರತಿನಿಧಿಗಳ ಮೂಲಕ ಜನತೆಯ ಇಚ್ಛೆಯದ್ದೇ ಮೇಲುಗೈ ಆಗಬೇಕು.

ಏಕಕಾಲದಲ್ಲಿ ಚುನಾವಣೆಗಳನ್ನು ತರಲು ಸಂವಿಧಾನದ ತಿದ್ದುಪಡಿಗೆ ವಿವಿಧ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಒಂದು, ನೀತಿ ಆಯೋಗ ಬಿಡುಗಡೆ ಮಾಡಿದ ಚರ್ಚಾ ಪ್ರಬಂಧದಲ್ಲಿನ ಸೂಚನೆ. ಅದರ ಪ್ರಕಾರ ಲೋಕಸಭೆಯ ವಿಸರ್ಜನೆಯನ್ನು ತಪ್ಪಿಸಲಾಗದಿದ್ದರೆ, ಮತ್ತು ಅದರ ಬಾಕಿ ಅವಧಿ ಬಹಳ ದೀರ್ಘವೇನೂ ಇಲ್ಲದಿದ್ದರೆ, ಮುಂದಿನ ಸದನ ರಚನೆಯಾಗುವ ವರೆಗೆ ದೇಶದ ಆಡಳಿತವನ್ನು, ರಾಷ್ಟ್ರಪತಿಗಳು, ತಾನು ನೇಮಿಸುವ ಒಂದು ಮಂತ್ರಿಮಂಡಲದ ನೆರವು ಮತ್ತು ಸಲಹೆಯ ಮೇರೆಗೆ ನಡೆಸಲಾಗುವಂತೆ ಅವಕಾಶ ಕಲ್ಪಿಸಬಹುದು. ಈ ಆಕ್ರೋಶಕಾರಿ ಸೂಚನೆ ರಾಷ್ಟ್ರಪತಿಗಳನ್ನು ಕಾರ್ಯಾಂಗದ ಮುಖ್ಯಸ್ಥರನ್ನಾಗಿ ಮಾಡುತ್ತದೆ. ಇದು ಕಾರ್ಯಕಾರಿ ಅಧ್ಯಕ್ಷ ವ್ಯವಸ್ಥೆಯನ್ನು ಹಿಂಬಾಗಿಲಿನಿಂದ ತರುವ ಕೆಲಸ.

ಇನ್ನೊಂದು ಸೂಚನೆಯೆಂದರೆ, ಸದನದ ವಿಸರ್ಜನೆಯ ವೇಳೆಗೆ ಅದರ ಬಾಕಿ ಅವಧಿ ಬಹಳ ದೀರ್ಘವಾಗಿದ್ದರೆ, ಹೊಸ ಚುನಾವಣೆಗಳನ್ನು ಮಾಡುವುದು. ಆದರೆ ಅದರ ಅವಧಿ ವಿಸರ್ಜನೆಯಾದ ಲೋಕಸಭೆಯ ಉಳಿದ ಅವಧಿಯಷ್ಟೇ ಆಗಿರುತ್ತದೆ. ಉದಾ: ಲೋಕಸಭೆ ರಚನೆಯಾಗಿ ಎರಡು ವರ್ಷಗಳಲ್ಲೇ ಅದರ ವಿಸರ್ಜನೆಯಾದರೆ, ನಂತರದ ಚುನಾವಣೆ ಉಳಿದ ಮೂರು ವರ್ಷಗಳ ಅವಧಿಗೆ ಮಾತ್ರ ನಡೆಯುತ್ತದೆ. ಅಂದರೆ, ನಿಜವಾಗಿ, ಇನ್ನೂ ಬೇಗಬೇಗನೇ ಲೋಕಸಭಾ ಚುನಾವಣೆಗಳು ನಡೆಯುತ್ತವೆ.

ಇದು ಆಗಾಗ ಚುನಾವಣೆಗಳು ನಡೆಯುವುದನ್ನು ತಪ್ಪಿಸಬೇಕೆಂಬ ಯಾವ ಉದ್ದೇಶದಿಂದ ಏಕಕಾಲದಲ್ಲಿ ಚುನಾವಣೆಗಳನ್ನು  ನಡೆಸಬೇಕು ಎನ್ನಲಾಗುತ್ತಿದೆಯೋ ಆ ಉದ್ದೇಶವನ್ನೇ  ವಿಫಲಗೊಳಿಸುತ್ತದೆ.

ಏಕಕಾಲದಲ್ಲಿ ಚುನಾವಣೆಗಳನ್ನು ಹೇರುವ ಪ್ರಯತ್ನಗಳ ಮತ್ತೊಂದು ಬಲಿಯೆಂದರೆ ಒಕ್ಕೂಟ ತತ್ವ. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಒಟ್ಟಿಗೇ ನಡೆಯುವಂತೆ ಮಾಡಲು ೨೦೧೫ರ ಸಂಸದೀಯ ಸ್ಥಾಯೀ ಸಮಿತಿಯ ೭೯ನೇ ವರದಿ ಮತ್ತು ನೀತಿ ಅಯೋಗದ ಪ್ರಬಂಧ ಸೂಚಿಸಿರುವ ಒಂದು ಪ್ರಸ್ತಾವ ಎಂದರೆ, ಕೆಲವು ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವುದು, ಅಥವ  ಕೆಲವದರ ಅವಧಿಗಳನ್ನು ಹಂತಹಂತವಾಗಿ ಮೊಟಕುಗೊಳಿಸುವುದು. ವಿಧಾನಸಭೆಯ ಅವಧಿಯನ್ನು ಮೊಟಕುಗೊಳಿಸುವುದು, ಅಥವ ವಿಸ್ತರಿಸುವುದು ಇವೆರಡೂ ರಾಜ್ಯಗಳ ಹಕ್ಕುಗಳ ಮೇಲಿನ ದಾಳಿಯಾಗುತ್ತದೆ, ಅದು ತಮ್ಮ ಶಾಸಕರನ್ನು ಚುನಾಯಿಸುವ ನಾಗರಿಕರ ಹಕ್ಕುಗಳನ್ನು ನಿರ್ಬಂಧಿಸುತ್ತದೆ.

ರಾಜ್ಯ ವಿಧಾನಸಭೆಗಳಿಗೆ ಸಂಬಂಧಪಟ್ಟಂತೆ ಮತ್ತೊಂದು ಸೂಚನೆಯೆಂದರೆ ಕಾರ್ಯಕಾಲದ ಹೆಚ್ಚಿನ ಭಾಗ ಪೂರೈಸಿದ ನಂತರ ವಿಸರ್ಜನೆ ನಡೆದರೆ ರಾಜ್ಯಪಾಲರು ಸದನದ ಬಾಕಿ ಅವಧಿಯ ವರೆಗೆ ರಾಜ್ಯದ ಆಡಳಿತವನ್ನು ನಡೆಸಬಹುದು ಎಂಬುದು. ಇದರ ಅರ್ಥ ಕೂಡ, ಕೇಂದ್ರೀಯ ಆಳ್ವಿಕೆಯೇ.

ಶಾಸಕಾಂಗದ ಜವಾಬುದಾರಿಕೆಯನ್ನು ನಿರ್ಬಂಧಿಸಲು ಮತ್ತು ಸದನದ ಅವಧಿಯನ್ನು ನಿಗದಿತಗೊಳಿಸಲು ವಿವಿಧ ಪ್ರಸ್ತಾವಗಳನ್ನು ಮುಂದಿಡಲಾಗುತ್ತಿದೆ. ಅವುಗಳಲ್ಲಿ ಒಂದು, ಒಂದು ಅವಿಶ್ವಾಸ ಠರಾವನ್ನು ಮಂಡಿಸುವಾಗ, ಅದರ ಜತೆಗೇ ಸದನದ ಒಬ್ಬ ಹೊಸ ಮುಖಂಡರನ್ನು ಚುನಾಯಿಸುವ ಠರಾವು ಕೂಡ ಇರಬೇಕು ಎಂಬುದು. ಭಾರತದ ಕಾನೂನು ಆಯೋಗದ ಕರಡಿನಲ್ಲಿ ಮತ್ತು ಇತರೆಡೆಗಳಲ್ಲಿ ಇದನ್ನು ಸೂಚಿಸಲಾಗಿದೆ. ಇದರ ಅರ್ಥ, ಒಂದು ಸರಕಾರವನ್ನು ಮತದಾನದ ಮೂಲಕ ಇಳಿಸುವ ಶಾಸಕರ ಹಕ್ಕನ್ನು ನಿರ್ಬಂಧಿತಗೊಳಿಸುವುದು, ಅವರು ಒಂದು ಹೊಸ ಸರಕಾರವನ್ನು ಚುನಾಯಿಸಬೇಕೆಂಬ ಶರತ್ತಿಗೆ ಅದನ್ನು ಒಳಪಡಿಸುವುದು ಎಂದೇ ಆಗುತ್ತದೆ.

ಯಾವುದೇ ಸರಕಾರವನ್ನು ಮತದಾನದ ಮೂಲಕ ಇಳಿಸುವ ಚುನಾಯಿತ ಶಾಸಕರ ಮತ್ತು ಲೋಕಸಭೆಯ ಸದಸ್ಯರ ಹಕ್ಕನ್ನು ನಿರ್ಬಂಧಿಸಲು, ಅಥವ ಸದನದಲ್ಲಿ ಸ್ಥಿರ ಬಹುಮತವನ್ನು ಹೊಂದಿರುವ ಒಂದು ಆಳುವ ಪಕ್ಷ ಸದನದ ವಿಸರ್ಜನೆಗೆ ಮತ್ತು ಹೊಸ ಚುನಾವಣೆಗಳನ್ನು ನಡೆಸುವುದಕ್ಕೆ ಶಿಫಾರಸು ಮಾಡುವ ಹಕ್ಕನ್ನು ಮೊಟಕುಗೋಳಿಸುವುದು ಕೂಡ ಸಾಧ್ಯವಿಲ್ಲ.

ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಲೋಕಸಭಾ ಚುನಾವಣೆಯೊಂದಿಗೆ ಹೊಂದಿಸುವ ಎಲ್ಲ ಪ್ರಸ್ತಾವಗಳೂ ಒಕ್ಕೂಟ ನೀತಿಯ ಬಗ್ಗೆ ಮತ್ತು ರಾಜ್ಯಗಳ ಹಕ್ಕುಗಳ ಬಗ್ಗೆ ಒಂದು ಅವಹೇಳನೆಯನ್ನು ಹೊರಗೆಡಹುತ್ತವೆ. ರಾಜ್ಯ ವಿಧಾನ ಸಭೆಗಳಿಗೆ ಹಲವಾರು ಚುನಾವಣೆಗಳು ಸಾರ್ವತ್ರಿಕ ಚುನಾವಣೆಗಳಿಂದ ಪ್ರತ್ಯೇಕವಾಗಿ ನಡೆಯಲು ಪ್ರಥಮತಃ ಕೇಂದ್ರ ಸರಕಾರ ೩೫೬ನೇ ವಿಧಿಯನ್ನು ಮನಬಂದಂತೆ ಬಳಸಿರುವುದೇ ಕಾರಣ. ಈ  ಪ್ರಕ್ರಿಯೆ ೧೯೫೯ರಲ್ಲಿ ಕೇರಳದ ಕಮ್ಯುನಿಸ್ಟ್ ಮಂತ್ರಿಮಂಡಲವನ್ನು ವಜಾ ಮಾಡುವುದರೊಂದಿಗೆ ಆರಂಭವಾಯಿತು.

ಏಕಕಾಲದಲ್ಲಿ ಚುನಾವಣೆ ನಡೆಸುವ ಹೆಸರಿನಲ್ಲಿ , ಈ ಎಲ್ಲ ಪ್ರಸ್ತಾವಗಳು ರಾಜ್ಯಪಾಲರ ಮತ್ತು ಕೇಂದ್ರೀಯ ಹಸ್ತಕ್ಷೇಪದ ಪಾತ್ರವನ್ನು ಹೆಚ್ಚಿಸುವಂತವುಗಳು.

ಭಾರತ ಹತ್ತಾರು ವೈವಿಧ್ಯತೆಗಳನ್ನು ಹೊಂದಿರುವ ಒಂದು ವಿಶಾಲವಾದ ದೇಶ. ಒಂದು ಒಕ್ಕೂಟ ವ್ಯವಸ್ಥೆಯಿಂದ ಮಾತ್ರವೇ ಇಲ್ಲಿ ರಾಜಕೀಯ ಪ್ರಜಾಪ್ರಭುತ್ವವನ್ನು ಕಾಯ್ದುಕೊಳ್ಳಲು ಸಾಧ್ಯ. ರಾಜ್ಯಗಳಲ್ಲಿ ವಿಭಿನ್ನ ಸಮಯಗಳಲ್ಲಿ  ಚುನಾವಣೆಗಳು ಒಕ್ಕೂಟ ವ್ಯವಸ್ಥೆಯ ಒಂದು ಆಯಾಮ.

ಆದ್ದರಿಂದ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಏಕಕಾಲದಲ್ಲಿ ಚುನಾವಣೆಗಳನ್ನು ತರುವ ಯಾವುದೇ ಕೃತಕ ಪ್ರಯತ್ನವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಏಕೆಂದರೆ ಇದನ್ನು ಈಗಿರುವ ಸಂಸದೀಯ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತುಳಿಯುವ ಮೂಲಕ ಮಾತ್ರವೇ ಮಾಡಲು ಸಾಧ್ಯ.

Leave a Reply

Your email address will not be published. Required fields are marked *