ರೈತರಿಗೆ ಕನಿಷ್ಟ ಬೆಂಬಲ ಬೆಲೆ: ಮೋದಿ ಸರಕಾರದ ಮೋಸ

ರೈತರಿಗೆ ಕೇಂದ್ರ ಸರಕಾರ ಜೂನ್ ೪ರಂದು ಭತ್ತ ಮತ್ತು ಇತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಗಳಲ್ಲಿ ಏರಿಕೆಯನ್ನು ಪ್ರಕಟಿಸುವ ಮೂಲಕ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ತನ್ನ ಆಶ್ವಾಸನೆಯನ್ನು ಈಡೇರಿಸಿದೆ ಎಂದು ಹೇಳಿಕೊಂಡಿದೆ.

ಇದು ಮೋಸದಿಂದ ತುಂಬಿದ ದಾವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಟೀಕಿಸಿದೆ. ಆಯೋಗ ಉತ್ಪಾದನಾ ಖರ್ಚನ್ನು ಹೇಗೆ ಲೆಕ್ಕ ಹಾಕಬೇಕು ಎಂಬುದನ್ನೂ ಶಿಫಾರಸು ಮಾಡಿದೆ ಮತ್ತು ಅದರ ಆಧಾರದಲ್ಲಿ ರೈತರಿಗೆ 50% ಲಾಭ ಸಿಗುವ ರೀತಿಯಲ್ಲಿ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಎಂದು ಹೇಳಿದೆ ಎಂದು ಪೊಲಿಟ್‌ಬ್ಯುರೊ ನೆನಪಿಸಿದೆ.

ಇದು ಹೆಚ್ಚುತ್ತಿರುವ ಉತಾದನಾ ವೆಚ್ಚಗಳಿಂದಾಗಿ ಭಾರೀ ಸಾಲಗಳ ಹೊರೆಯಿಂದ ನರಳುತ್ತಿರುವ ರೈತರೊಂದಿಗೆ ಮಾಡಿರುವ ಒಂದು ಕ್ರೂರ ತಮಾಷೆಯಾಗಿದೆ. ಏಕೆಂದರೆ ಮೋದಿ ಸರಕಾರ ಖರ್ಚುಗಳನ್ನು ಲೆಕ್ಕ ಹಾಕಲು ಉದ್ದೇಶಪೂರ್ವಕವಾಗಿಯೇ, ಮಹತ್ವಪೂರ್ಣ ಅಂಶಗಳನ್ನು ಕೈಬಿಟ್ಟಿರುವ ಒಂದು ಅಳತೆಯನ್ನು ಬಳಸಿ, ಆಮೂಲಕ ಖರ್ಚುಗಳ ಲೆಕ್ಕಾಚಾರವನ್ನು ಕಳೆದ ವರ್ಷ ರಾಜ್ಯಸರಕಾರಗಳು, ಬಿಜೆಪಿಯ ರಾಜ್ಯಸರಕಾರಗಳು ಕೂಡ ಪ್ರಸ್ತಾವಿಸಿದದ್ದಕ್ಕಿಂತಲೂ ಕೆಳಗಿನ ಮಟ್ಟಕ್ಕೆ ತಂದಿದೆ. ಇದು ರೈತರು ವಾಸ್ತವವಾಗಿ ಮಾಡಿದ ಖರ್ಚುಗಳಿಗಿಂತಲೂ ಕಡಿಮೆಯಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ರೈತರಿಗೆ ಎಷ್ಟು ಬೆಲೆ ಸಿಗಬೇಕು ಎಂದು ಸ್ವಾಮಿನಾಥನ್ ಆಯೋಗ ಶಿಫಾರಸು ಮಾಡಿದೆಯೋ ಮತ್ತು ಮೋದಿ ಸರಕಾರ ಈಗ ಎಷ್ಟನ್ನು ಪ್ರಕಟಿಸಿದೆಯೋ ಇವುಗಳ ನಡುವೆ ಅಪಾರ ಅಂತರಗಳು ಕಾಣುತ್ತಿವೆ, ರೈತರಿಗೆ ಭತ್ತದಲ್ಲಿ ಕ್ವಿಂಟಾಲಿಗೆ ೬೦೦ರೂ.ಗಳಿಂದ ಹಿಡಿದು, ವಿವಿಧ ಬೇಳೆ ಕಾಳುಗಳು, ನೆಲಗಡಲೆ ಮತ್ತು ಕಬ್ಬಿಗೆ ೧೮೦೦ರಿಂದ ೨೦೦೦ರೂ.ಗಳಷ್ಟು ನಷ್ಟವನ್ನು ಉಂಟಾಗುತ್ತಿದೆ.

ಅಲ್ಲದೆ, ರೈತರು ಈ ಬೆಲೆಯನ್ನು ಕೂಡ ಪಡೆಯುತ್ತಾರೆ ಎಂಬ ಗ್ಯಾರಂಟಿ ಇಲ್ಲ, ಏಕೆಂದರೆ ಕೇಂದ್ರ ಸರಕಾರದ ಧಾನ್ಯ ಖರೀದಿ ಕ್ರಮಗಳನ್ನು ಉದ್ದೇಶಪೂರ್ವಕವಾಗಿ ಕಡಿತ ಮಾಡಲಾಗಿದೆ, ಇದರಿಂದಾಗಿ ರೈತರು ಹತಾಶ ಬೆಲೆಗಳಲ್ಲಿ ಮಾರಾಟ ಮಾಡಬೇಕಾಗಿ ಬರುತ್ತಿದೆ.

ಇದು ರೈತರಲ್ಲಿ ಮೋದಿ ಸರಕಾರದ ವಿರುದ್ಧ ಹೆಚ್ಚುತ್ತಿರುವ ಅಸಂತೃಪ್ತಿಯನ್ನು ಒಂದು ಚುನಾವಣಾ ವರ್ಷದಲ್ಲಿ ಬೇರೆಡೆಗೆ ತಿರುಗಿಸುವ ಹತಾಶ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ರೈತರಿಗೆ ಮಾಡಿರುವ ಈ ಮೋಸವನ್ನು ಪಕ್ಷ ಬಯಲಿಗೆಳೆಯುತ್ತದೆ, ಬಹುಪಾಲು ಸಣ್ಣ ಮತ್ತು ಮಧ್ಯಮ ರೈತರಾಗಿರುವ ಬೇಸಾಯಗಾರರು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿ ಮತ್ತು ಇತರ ತಮ್ಮ ನ್ಯಾಯಬದ್ಧ ಬೇಡಿಕೆಗಳ ಮೇಲೆ ನಡೆಸುವ ಎಲ್ಲ ಹೋರಾಟಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.

Leave a Reply

Your email address will not be published. Required fields are marked *