ಚಮಚಾಗಳಿಗೆ ಉತ್ಕೃಷ್ಟತೆಯ ಬೋಗಸ್‍ ಮನ್ನಣೆ

ಮೋದಿ ಸರಕಾರ ಇನ್ನೂ ಅಸ್ತಿತ್ವಕ್ಕೇ ಬಂದಿರದ, ಕಾಗದದ ಯೋಜನೆಯಲ್ಲೇ ಇರುವ ರಿಲಯಂಸ್‍ ಫೌಂಡೇಷನ್‍ ನ ಜಿಯೋ ಇನ್ಸ್ ಟಿಟ್ಯೂಟ್‍ ಗೆ  ‘ಉತ್ಕೃಷ್ಟತೆ’ಯ ಸಂಸ್ಥೆ’ ಎಂಬ ಮನ್ನಣೆ ಕೊಟ್ಟಿರುವ ನಡೆಯನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ವಿರೋಧಿಸಿದೆ.

ಕೆಲವು ಸಮಯದ ಹಿಂದೆ ಸರಕಾರ ತಲಾ ಹತ್ತು ಸಾರ್ವಜನಿಕ ನಿಧಿಯಿಂದ ನಡೆಯುವ ಮತ್ತು ಖಾಸಗಿ ವಲಯದ  ಶೈಕ್ಷಣಿಕ ಸಂಸ್ಥೆಗಳನ್ನು ಉತ್ಕೃಷ್ಟತೆಯ ಸಂಸ್ಥೆಗಳಾಗಿ ಆರಿಸಲಾಗುವುದು ಎಂದು ಪ್ರಕಟಿಸಿತ್ತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿಯವರ ಅಧ್ಯಕ್ಷತೆಯ ಒಂದು ಸಮಿತಿಗೆ ಈ ಸಂಸ್ಥೆಗಳನ್ನು ಗುರುತಿಸುವ ಕೆಲಸವನ್ನು ಹಚ್ಚಲಾಯಿತು. ಈ  ಇಡೀ ಕಸರತ್ತು ಮತ್ತು ಪರಿಗಣನೆಗಳು ಬಹುಪಾಲು ಸಾರ್ವಜನಿಕ ವ್ಯಾಪ್ತಿಯ ಹೊರಗೇ ಇದ್ದವು. ಈಗ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ಒಂದು ಪ್ರಕಟಣೆಯನ್ನು ಮಾಡಿದೆ. ಇಂತಹ ಸಂಸ್ಥಗಳ ಸಂಖ್ಯೆಯನ್ನು 20ರಿಂದ ಕೇವಲ 6ಕ್ಕೆ ಇಳಿಸಲಾಗಿದೆ. ಖಾಸಗಿ ವಲಯದಿಂದ ಆರಿಸಿದ ಮೂರು ಸಂಸ್ಥೆಗಳಲ್ಲಿ  ರಿಲಯಂಸ್‍ ಫೌಂಡೇ಼ಷನ್‍ ನ ಜಿಯೊ ಇನ್ಸ್ಟಿಟ್ಯೂಟ್ ಕೂಡ ಒಂದು.

ಒಂದು ಸಂಸ್ಥೆ ಸಮಯದ ಒರೆಗಲ್ಲಿನಲ್ಲಿ ನಿಲ್ಲುವುದು ಮತ್ತು ನಿಜವಾಗಿಯೂ ‘ವಿಶ್ವ ದರ್ಜೆ’ಯ ಉನ್ನತ ಅಧ್ಯಯನ ಮತ್ತು ಸಂಶೋಧನೆಯ ಸಂಸ್ಥೆಯಾಗಿ ವಿಕಾಸಗೊಳ್ಳುವದು ಒಂದು ಸವಾಲಿನ ಪ್ರಕ್ರಿಯೆ. ಉತ್ಕೃಷ್ಟತೆಯ ಮನ್ನಣೆ ಗಳಿಸಲು ಅಪಾರ ಅವಿರತ ಶ್ರಮ ಮತ್ತು ಸೃಜನಾತ್ಮಕತೆ ಬೇಕಾಗುತ್ತದೆ. ಅಸ್ತಿತ್ವದಲ್ಲೇ ಇರದ, ಕೇವಲ ಕಲ್ಪನೆಯ ಮಟ್ಟದಲ್ಲೇ ಇರುವ ಜಿಯೋ ಇನ್ಸ್ಟಿಟ್ಯೂಟ್ ಗೆ ಆ ಮನ್ನಣೆಯನ್ನು ಕೇವಲ ಕಾಗದದ ಮೇಲಿನ ‘ರೂಪುರೇಷೆ’ಯ ಆಧಾರದಲ್ಲೇ ಕೊಟ್ಟಿರುವುದು ತಬ್ಬಿಬ್ಬು ಮಾಡಿರುವ ಸಂಗತಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ವರ್ಣಿಸಿದೆ.

ಇದನ್ನು ಭಂಡ ಚಮಚಾಗಾರಿಕೆ ಎಂದಲ್ಲದೆ ಬೇರೆ ಯಾವ ರೀತಿಯಲ್ಲೂ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಪೊಲಿಟ್‍ಬ್ಯುರೊ ಇದನ್ನು ಖಂಡಿಸಿದೆ. ಇದು ಸಮಸ್ತ  ಉನ್ನತ ಶಿಕ್ಷಣ ವಲಯವನ್ನು ಕುಗ್ಗಿಸುವ ಪರಿಣಾಮ ಬೀರುತ್ತದೆ, ಸಾರ್ವಜನಿಕ ನಿಧಿಯಿಂದ ನಡೆಸುವ ಉನ್ನತ ಶಿಕ್ಷಣವನ್ನು ಬುಡಮೇಲು ಮಾಡಿ ಖಾಸಗೀಕರಣವನ್ನು ಪ್ರೋತ್ಸಾಹಿಸುವ ಗೀಳಿನಲ್ಲೇ ಈ ಸರಕಾರ ಮುಳುಗಿದೆ ಎಂಬುದನ್ನು ಎತ್ತಿ ತೋರುತ್ತಿದೆ ಎಂದು ಅದು ಟಿಪ್ಪಣಿ ಮಾಡಿದೆ.

ಈ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು “ಒಂದು ಕಾರ್ಪೊರೇಟ್ ನ  ಅಸ್ತಿತ್ವದಲ್ಲೇ ಇರದ ವಿಶ್ವವಿದ್ಯಾಲಯಕ್ಕೆ ‘ಉತ್ಕೃಷ್ಟತೆ’ಯ ಮನ್ನಣೆ ನೀಡುವುದು ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಪೊರೇಟ್ ಮಿತ್ರರುಗಳಿಗೆ ಮೂರು ಲಕ್ಷ ಕೋಟಿ ರೂ.ಗಳ ಸಾಲಮಾಫಿಗೆ ಅನುಗುಣವಾಗಿಯೇ ಇದೆ ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *