ಅಪಾರ ಹಾನಿಗಳ ಹಿನ್ನೆಲೆಯಲ್ಲಿ ಕೇಂದ್ರೀಯ ತುರ್ತು ನೆರವನ್ನು 2000 ಕೋಟಿ ರೂ.ಗಳಿಗೇರಿಸಬೇಕು

ಮರುವಸತಿ ಕ್ರಮಗಳಿಗೆ ತುರ್ತು ನೆರವುಗಳನ್ನು  ಒದಗಿಸಬೇಕು

ಕೇರಳದಲ್ಲಿನ ಅಭೂತಪೂರ್ವ ನೈಸರ್ಗಿಕ ವಿಪತ್ತಿನಿಂದ ಆಗಿರುವ ಅಪಾರ ಹಾನಿಗಳ ಹಿನ್ನೆಲೆಯಲ್ಲಿ 500 ಕೋಟಿ ರೂ.ಗಳ ತುರ್ತು ನೆರವು ಏನೇನೂ ಸಾಲದು. ಇದನ್ನು 2000 ಕೋಟಿ ರೂ.ಗಳಿಗೆ ಏರಿಸಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಆಗಸ್ಟ್ 21ರಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಮೊದಲ ಘಟ್ಟ ಹೆಚ್ಚು-ಕಡಿಮೆ ಪೂರ್ಣಗೊಂಡಿದ್ದು, ಮರುವಸತಿಯ ಮುಂದಿನ ಘಟ್ಟದ ಸಮಸ್ಯೆಗಳನ್ನು ಎದುರಿಸಲು ರಾಜ್ಯ ಸರಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಸ್ತಾವಗಳನ್ನೂ ಈ ಪತ್ರದಲ್ಲಿ ಮುಂದಿಡಲಾಗಿದೆ. ಅವು ಹೀಗಿವೆ:

  • ಪ್ರಧಾನ ಮಂತ್ರಿ ಆವಾಸ್ ಯೋಜನಾದಿಂದ ದೊಡ್ಡ ಪ್ರಮಾಣದಲ್ಲಿ ನಿಧಿಗಳ ಬಿಡುಗಡೆ

  • ಧ್ವಂಸಗೊಂಡಿರುವ ರಸ್ತೆ-ಸೇತುವೆಗಳು ಮತ್ತಿತರ ಸಂಪರ್ಕ ಜಾಲಗಳನ್ನು ಮತ್ತೆ ಏರ್ಪಡಿಸಲು ಎನ್‌ಎಹೆಚ್‌ಐ ಮತ್ತಿತರ ಸಂಬಂಧಪಟ್ಟ ಕೇಂದ್ರೀಯ ಸಂಸ್ಥೆಗಳ ಮತ್ತು ಭಾರತೀಯ ಸೇನೆಯ ಇಂಜಿನಿಯರಿಂಗ್ ತುಕಡಿಗಳ, ಗಡಿ ರಸ್ತೆಗಳ ಸಂಘಟನೆಯ ನೆರವು,

  • ಆರೋಗ್ಯ ಪಾಲನೆಯ ಸಮಸ್ಯೆಗಳನ್ನು ಎದುರಿಸಲು ಸೇನಾ ವೈದ್ಯಕೀಯ ತುಕಡಿಗಳು, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತಿತರ ಸಂಸ್ಥೆಗಳ ನೆರವು

  • ವಿದೇಶಗಳಿಂದ ಮಲೆಯಾಳಿಗಳ ಸಂಘಟನೆಗಳು ಕಳಿಸುವ ಸಾಧನ-ಸಾಮಗ್ರಿಗಳ ಮೇಲೆ ಸುಂಕ ವಿನಾಯ್ತಿ.

  • ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ರಾಜ್ಯಗಳಿಗೆ ಸಂಪನ್ಮೂಲ ಎತ್ತಲು ಜಿಎಸ್‌ಟಿಯಲ್ಲಿ ಅಗತ್ಯ ಅಂಶಗಳು.

  • ವಸತಿ ಮತ್ತು ಆರೋಗ್ಯ ಕ್ರಮಗಳನ್ನು ಕುರಿತಂತೆ ವಿಶ್ವಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ನೆರವಿಗಾಗಿ ಪ್ರಯತ್ನ.

ಈ ಪ್ರಸ್ತಾವಗಳನ್ನು ಅವಕ್ಕೆ ಸಲ್ಲಬೇಕಾದ ಗಂಭೀರತೆಯಿಂದ ಪರಿಶೀಲಿಸಬೇಕು, ಮಾನವೀಯ ಪರಿಶೀಲನೆಗಳೊಂದಿಗೆ ಈ ಕ್ರಮಗಳನ್ನು ಅಗತ್ಯ ತುರ್ತಿನಿಂದ ಜಾರಿಗೊಳಿಸಬೇಕು ಎಂದು ಪ್ರಧಾನ ಮಂತ್ರಿಗಳನ್ನು ಸೀತಾರಾಮ್ ಯೆಚುರಿ ವಿನಂತಿಸಿಕೊಂಡಿದ್ದಾರೆ.

ಅವರ ಪತ್ರದ ಪೂರ್ಣ ಪಾಠವನ್ನು ಮುಂದೆ ಕೊಡಲಾಗಿದೆ:

ಪ್ರಿಯ ಪ್ರಧಾನಮಂತ್ರಿಯವರೇ,

ನಾನು ಆಗಸ್ಟ್ 19-20ರಂದು ಕೇರಳಕ್ಕೆ ನೀಡಿದ ಭೇಟಿಯ ಬಗ್ಗೆ ತಿಳಿಸಲು ಮತ್ತು ಭಾರತ ಸರಕಾರ ಇತ್ತೀಚಿನ ನೆರೆಗಳಿಂದಾಗಿ ಅಭೂತಪೂರ್ವ ಹಾನಿಗಳಿಗೆ ಒಳಗಾಗಿರುವ ಲಕ್ಷಾಂತರ ಜನಗಳಿಗೆ ಪರಿಹಾರ ಮತ್ತು ಮರುವಸತಿಗೆ ಈ ಕೆಳಗಿನ ತುರ್ತು ಕ್ರಗಳನ್ನು ಪರಿಶೀಲಿಸಬೇಕೆಂದು ಕೋರಲು ತಮ್ಮ ಸಮಯ ಕೇಳುತ್ತಿದ್ದೇನೆ.

ಭಾರತದ ಜನತೆ ತಾವು ಭೇಟಿ ನೀಡಿ ಹಾನಿಯ ಅಂದಾಜು ಮಾಡಿದ್ದೀರಿ ಎಂದು ಸಂತಸಪಟ್ಟಿದ್ದಾರೆ. ಅಲ್ಲಿ ರಾಜ್ಯಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನೆರೆಗಳಲ್ಲಿ ಸಿಲುಕಿಕೊಂಡ ೧೦ ಲಕ್ಷಕ್ಕೂ ಹೆಚ್ಚು ಜನಗಳನ್ನು ಪಾರು ಮಾಡುವ ಒಂದು ಬಹು ದೊಡ್ಡ ಕೆಲಸವನ್ನು ಮಾಡಿದ್ದಾರೆ ಎಂಬ ಸಂಗತಿಯನ್ನು ತಾವು ಮೆಚ್ಚಿಕೊಂಡಿದ್ದೀರಿ. ಇದು ಇತ್ತೀಚಿನ ದಿನಗಳಲ್ಲೇ ಅಭೂತಪೂರ್ವ ಪ್ರಮಾಣದ ಒಂದು ಕಾರ್ಯಾಚರಣೆ. ತಾವು ೫೦೦ ಕೋಟಿ ರೂ.ಗಳ ಕೇಂದ್ರೀಯ ನೆರವನ್ನು ಮಂಜೂರು ಮಾಡಿದ್ದೀರಿ. ಆದರೆ ಆಗಿರುವ ವ್ಯಾಪಕ ಹಾನಿಗಳ ಹಿನ್ನೆಲೆಯಲ್ಲಿ ಇದು ಏನೇನೂ ಸಾಲದು. ಇದನ್ನು 2000 ಕೋಟಿ ರೂ.ಗಳಿಗೆ ಏರಿಸಬೇಕು ಎಂದು ನಾನು ಕೋರುತ್ತೇನೆ ಮತ್ತು ಅಗತ್ಯ ತುರ್ತಿನಿಂದ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ತಮ್ಮನ್ನು ಆಗ್ರಹಿಸುತ್ತೇನೆ.

ನಾನು ಅತ್ಯಂತ ಹೆಚ್ಚು ಹಾನಿಗಳಿಗೆ ಒಳಗಾಗಿರುವ ಅಲಪುಳ ಸೇರಿದಂತೆ ಮೂರು ಜಿಲ್ಲೆಗಳಲ್ಲಿನ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದೇನೆ. ಶಿಬಿರಗಳಲ್ಲಿನ ಪರಿಸ್ಥಿತಿಗಳ ಬಗ್ಗೆ ಅಲ್ಲಿರುವವರಿಗೆ ತೃಪ್ತಿಯಿದೆ. ಆದರೆ ಅವರ ಮನೆಗಳೆಲ್ಲ ಕೊಚ್ಚಿಕೊಂಡು ಹೋಗಿವೆ, ಅವರ ವಸ್ತುಗಳೆಲ್ಲವೂ ನಾಶವಾಗಿವೆ ಎಂಬ ಬಗ್ಗೆ ಅತೀವ ಸಂಕಟದಲ್ಲಿದ್ದಾರೆ. ಭವಿಷ್ಯವನ್ನು ಎದುರಿಸುವುದು ಹೇಗೆ ಎಂಬುದೀಗ ಅವರ ಬಹುದೊಡ್ಡ ಚಿಂತೆಯಾಗಿದೆ. ಈ ಜನಗಳ ಮರುವಸತಿಗೆ  ಬೃಹತ್ ಪ್ರಮಾಣದಲ್ಲಿ ಸಂಪನ್ಮೂಲಗಳು ಬೇಕಾಗಿವೆ. ಆದ್ದರಿಂದಲೇ ತಕ್ಷಣವೇ ಜೆಚ್ಚಿನ ಕೇಂದ್ರೀಯ ನೆರವನ್ನು ಬಿಡುಗಡೆ ಮಾಡಬೇಕು ಎಂದು  ಈ ವಿನಂತಿ.

ಲಕ್ಷಾಂತರ ಜನಗಳಿಗೆ ಹೊಸ ಮನೆಗಳನ್ನು ಕಟ್ಟಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಕೇಂದ್ರೀಯ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನಾದಿಂದ ದೊಡ್ಡ ಪ್ರಮಾಣದಲ್ಲಿ ನಿಧಿಗಳನ್ನು ಬಿಡುಗಡೆ ಮಾಡಬೇಕಾಗಿದೆ. ಈ ವಿಷಯವನ್ನು ವಿಶ್ವಸಂಸ್ಥೆಯ ವಿವಿ ಅಂಗ ಸಂಸ್ಥೆಗಳೊಡನೆಯೂ ಪ್ರಸ್ತಾಪಿಸಿ ಹೊಸ ಮನೆಗಳನ್ನು ಕಟ್ಟಲು ನೆರವನ್ನು ಕೋರಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ.

ಈ ಅಭೂತಪೂರ್ವ ನೆರೆಗಳು ರಾಜ್ಯದಲ್ಲಿ ಹತ್ತಾರು ನೂರು ಸೇತುವೆಗಳನ್ನು ಮತ್ತು ರಸ್ತೆಗಳನ್ನು ಧ್ವಂಸಗೊಳಿಸಿವೆ. ರಾಜ್ಯದ 41ರಲ್ಲಿ 40 ನದಿಗಳು ಉಕ್ಕಿ ಹರಿಯುತ್ತಿದ್ದು, ಪರಿಹಾರ ಮತ್ತು ಮರುವಸತಿ ಕೆಲಸಗಳಿಗೆ ಅನಿವಾರ್ಯವಾದ ಸಂಪರ್ಕ ಗಂಭೀರವಾಗಿ ಅಸ್ತವ್ಯಸ್ತಗೊಂಡಿದೆ.

ಸಂಪರ್ಕ ಜಾಲಗಳನ್ನು ಮತ್ತೆ ಕಟ್ಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತಿತರ ಕೇಂದ್ರ ಸರಕಾರೀ  ಸಂಸ್ಥೆಗಳು ತಮ್ಮ ಸಂಪನ್ಮೂಲಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸುವಂತೆ ತಿಳಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಇದರೊಂದಿಗೆ ಕಷ್ಟಕರ ಪರಿಸ್ಥಿತಿಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳನ್ನು ಕಟ್ಟುವ ಸಮೃದ್ಧ ಅನುಭವಗಳಿರುವ ಭಾರತೀಯ ಸೇನೆಯ ಇಂಜಿನಿಯರಿಂಗ್ ತುಕಡಿಗಳು ಮತ್ತು ಗಡಿ ರಸ್ತೆಗಳ ಸಂಘಟನೆಯ ನೆರವು ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಪ್ರಯತ್ನಗಳಿಗೆ ಸಿಗುವಂತೆ ಮಾಡಬೇಕಾಗಿದೆ.

ನೆರೆ ನೀರು ಇಳಿಯುತ್ತಿದ್ದಂತೆ ಆರೋಗ್ಯ ಕುರಿತಂತೆ  ಗಂಭೀರ ಆತಂಕಗಳು ಏಳುತ್ತವೆ. ಈ ಸನ್ನಿವೇಶವನ್ನು ಎದುರಿಸುವಲ್ಲಿ ರಾಜ್ಯ ಸರಕಾರಕ್ಕೆ ನೆರವಾಗಲು ಕೇಂದ್ರ ಸರಕಾರ ಸೇನಾ ವೈದ್ಯಕೀಯ ತುಕಡಿಗಳನ್ನು ರಾಜ್ಯ ಸರಕಾರ ನಿರ್ಧರಿಸುವ ಪ್ರದೇಶಗಳಲ್ಲಿ ನಿಯೋಜಿಸಬೇಕು ಮತ್ತು ಅಖಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಂತಹ ಸಂಸ್ಥೆಗಳು ಪರಿಹಾರ ಒದಗಿಸಲು ಮತ್ತು ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ವೈದ್ಯಕೀಯ ತಂಡಗಳನ್ನು ರಚಿಸುವಂತೆ ಕೋರಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನೆರವಿಗಾಗಿ ಕೇಂದ್ರ ಸರಕಾರ ವಿಶ್ವ ಆರೋಗ್ಯ ಸಂಘಟನೆಯನ್ನು ಕೂಡ ಕೇಳಬಹುದು.

ಕೇರಳದ ಜನತೆ ಪ್ರಸಕ್ತ ಸವಾಲುಗಳನ್ನು ಎದುರಿಸುವಲ್ಲಿ ಅದಮ್ಯ ಸ್ಫೂರ್ತಿ ಮತ್ತು ಸೌಹಾರ್ದವನ್ನು ಪ್ರದರ್ಶಿಸಿದ್ದಾರೆ. ವಿವಿಧೆಡೆಗಳಿಂದ ಹಣ ಮತ್ತು ಸಾಮಗ್ರಿಗಳ ದೇಣಿಗೆಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ. ವಿವಿಧ ದೇಶಗಳಲ್ಲಿನ ಮಲೆಯಾಳಿ ಜನಗಳ ಸಂಘಟನೆಗಳು ವೈದ್ಯಕೀಯ ಸಾಧನಗಳನ್ನು ಕಳಿಸುತ್ತಿದ್ದಾರೆ. ಇವು ತುರ್ತು ಪರಿಹಾರ ಮತ್ತು ಮರುವಸತಿಗಾಗಿ ಬರುತ್ತಿರುವುದರಿಂದಾಗಿ ಇವುಗಳ ಮೇಲಿನ ಸುಂಕಗಳಿಂದ ವಿನಾಯ್ತಿ ನೀಡಬೇಕು ಎಂದು ನಾನು ಕೋರುತ್ತೇನೆ.

ಸಂಸತ್ತಿನಲ್ಲಿ ಜಿಎಸ್‌ಟಿ ಮಸೂದೆಯ ಮೇಲಿನ ಚರ್ಚೆಯಲ್ಲಿ ನಾನು ಇಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ಬೇಕಾದ ಸಂಪನ್ಮೂಲಗಳನ್ನು ರಾಜ್ಯಗಳು ಹೇಗೆ ಸಂಗ್ರಹಿಸುವುದು ಎಂಬ ಬಗ್ಗೆ ಆತಂಕಗಳನ್ನು ಎತ್ತಿದ್ದೆ ಎಂಬುದು ನಿಮಗೆ ನೆನಪಿರಬಹುದು. ಆಗ ಕೇಂದ್ರ ಸರಕಾರ ಅಂತಹ ಸಂದರ್ಭಗಳು ಬಂದಾಗ ಅಂತಹ ಅಂಶಗಳನ್ನು ಒದಗಿಸಲಾಗುವುದು ಎಂದು ಆಶ್ವಾಸನೆ ನೀಡಿತ್ತು. ಅಂತಹ ಅಂಶಗಳನ್ನು ಒದಗಿಸಲಿಲ್ಲವಾದರೂ, ಈಗ ಸರಕಾರ ಸದನದಲ್ಲಿ ನೀಡಿರುವ ಆಶ್ವಾಸನೆಯನ್ನು ಈಡೇರಿಸುವ ಸಮಯ ಬಂದಿದೆ. ಕೇರಳದ ರಾಜ್ಯ ಸರಕಾರ ಸಂಬಂಧಪಟ್ಟ ಜಿಎಸ್‌ಟಿ ಅಂಶಗಳನ್ನು ಸಡಿಲಗೊಳಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಒದಗಿಸಬೇಕು.

ಕೇರಳದ ಮುಖ್ಯಮಂತ್ರಿಗಳು ರಕ್ಷಣಾ ಕಾರ್ಯಾಚರಣೆಯ ಮೊದಲ ಘಟ್ಟ ಹೆಚ್ಚು-ಕಡಿಮೆ ಪೂರ್ಣಗೊಂಡಿದೆ ಎಂದು ಪ್ರಕಟಿಸಿದ್ದಾರೆ. ಈಗ ಮರುವಸತಿಯ ಮುಂದಿನ ಘಟ್ಟದ ಸಮಸ್ಯೆಗಳು ಬರುತ್ತವೆ; ಸಂಪರ್ಕ ಕೊಂಡಿಗಳನ್ನು ಮತ್ತೆ ಸ್ಥಾಪಿಸುವುದು ಮತ್ತು ಆರೋಗ್ಯಕ್ಕೆ ಬರಬಹುದಾದ ಅಪಾಯಗಳನ್ನು ಮೀರಿ ನಿಲ್ಲುವುದು ಮುಂತಾದವು.

ಈ ವಿಷಯಗಳ ಬಗ್ಗೆ ನಾನು ಮುಂದಿಟ್ಟಿರುವ ಪ್ರಸ್ತಾವಗಳನ್ನು ಅವಕ್ಕೆ ಸಲ್ಲಬೇಕಾದ ಗಂಭೀರತೆಯಿಂದ ಪರಿಶೀಲಿಸಬೇಕು ಎಂದು ವಿನಂತಿಸುತ್ತೇನೆ. ಮಾನವೀಯ ಪರಿಶೀಲನೆಗಳೊಂದಿಗೆ ಈ ಕ್ರಮಗಳನ್ನು ಅಗತ್ಯ ತುರ್ತಿನಿಂದ ಜಾರಿಗೊಳಿಸಬೇಕು ಎಂದು ತಮ್ಮನ್ನು ಆಗ್ರಹಿಸುತ್ತಿದ್ದೇನೆ.

ನಿಮ್ಮ ವಿಶ್ವಾಸಿ

ಸೀತಾರಾಮ್ ಯೆಚುರಿ

ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *