2ನೇ ಕ್ಷಿಪ್ರಕ್ರಾಂತಿ: ಸಿಬಿಐ ಮುಖ್ಯಸ್ಥರ ವರ್ಗಾವಣೆ

ಹಗರಣಗಳು ಹೊರಬರದಂತೆ ತಡೆಯುವ ಹತಾಶ ಪ್ರಯತ್ನ

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮರನ್ನು ಸುಪ್ರಿಂ ಕೋರ್ಟ್ ಅವರ ಹುದ್ದೆಯಲ್ಲಿ ಮತ್ತೆ ನೆಲೆಗೊಳಿಸಿದ 48 ಗಂಟೆಗಳ ಒಳಗೆ ವರ್ಗಾವಣೆ ಮಾಡಲು ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ನಿರ್ಧರಿಸಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ.

ಸಿಬಿಐ ಮೇಲೆ ಸರಕಾರದ ಹತೋಟಿಯಿರುವಂತೆ ಮಾಡುವುದಕ್ಕಾಗಿ ಮತ್ತು ಅದನ್ನು ತನ್ನ ರಾಜಕೀಯ ಹಾಗೂ ಚುನಾವಣಾ ಅಜೆಂಡಾವನ್ನು ಈಡೇರಿಸಿಕೊಳ್ಳಲು ಒಂದು ಉಪಕರಣವಾಗಿ ಬಳಸಲು ಸಾಧ್ಯವಾಗುವಂತೆ ಮಾಡುವುದಕ್ಕಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಜೆಪಿ ತನ್ನ ವಿಮರ್ಶಕರನ್ನು/ವಿರೋಧಿಗಳನ್ನು ಬೆದರಿಸಲು, ಬ್ಲಾಕ್‌ಮೇಲ್ ಮಾಡಲು ಮತ್ತು ಅವರ ಬಾಯಿಮುಚ್ಚಿಸಲು ಹಾಗೂ ತಮಗೆ ವಿಧೇಯರಾಗಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ಕ್ರಿಯೆಯ ಮೂಲಕ ಮೋದಿ ಸರಕಾರ ತನ್ನ ಕಪಾಟಿನಲ್ಲಿರುವ “ಅಸ್ಥಿಪಂಜರಗಳು” ಹೊರಗೆ ಉರುಳುರುಳಿ ಬರದಂತೆ ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಕೇಂದ್ರೀಯ ವಿಚಕ್ಷಣಾ ಆಯುಕ್ತರ (ಸಿವಿಸಿ) ಒಂದು ಸರಿಯಿದೆಯೇ ಎಂದು ಖಚಿತಪಡಿಸಿಕೊಳ್ಳದ ಮತ್ತು ಪ್ರಶ್ನಾರ್ಹವಾದ ವರದಿಯ ಆಧಾರದಲ್ಲಿ ನಡೆಸಿದ ಅಕ್ಟೋಬರ್ 23, 2018ರ ಮಧ್ಯರಾತ್ರಿಯ ಕ್ಷಿಪ್ರಕ್ರಾಂತಿಯ ನಂತರ ಸುಪ್ರಿಂ ಕೋರ್ಟ್ ಇದು ಕಾನೂನುಬಾಹಿರ ಎಂದು ಕಂಡು ಅಲೋಕ್ ವರ್ಮರಿಗೆ ಮತ್ತೆ ಅವರಿಗೆ ಹುದ್ದೆ ಸಿಗುಂತಾಯಿತು. ಈಗ ಎರಡನೇ ಕ್ಷಿಪ್ರಕ್ರಾಂತಿಯ ನಂತರ ಸದ್ಯದಲ್ಲೇ ನಿವೃತ್ತರಾಗಲಿರುವ ಅವರನ್ನು ವರ್ಗಾವಣೆ ಮಾಡಲಾಗಿದೆ.

ಪ್ರಧಾನ ಮಂತ್ರಿಗಳು ಒಂದು ಬಲವಾದ ಭಿನ್ನಮತವನ್ನು ಬದಿಗೊತ್ತಿ ಹಾಗೂ ಅಲೋಕ್ ವರ್ಮರವರಿಗೆ ಸಿವಿಸಿ ವರದಿಯ ವಿರುದ್ಧ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡದೆ ನಡೆಸಿರುವ ಈ ಕ್ರಿಯೆ ಈ ಸರಕಾರದ ಅತ್ಯುನ್ನತ ಮಟ್ಟಗಳಲ್ಲಿ ಚಮಚಾಗಿರಿ, ಭ್ರಷ್ಟಾಚಾರ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಚಕಾರ ಬಯಲಿಗೆ ಬರದಂತೆ ತಡೆಯುವ ಒಂದು ಪ್ರಯತ್ನ ಎಂಬುದು ಸ್ಪಷ್ಟವಾಗಿದೆ ಎಂದು ಪೊಲಿಟ್‌ಬ್ಯುರೊ ಟೀಕಿಸಿದೆ.

ಮೋದಿ ಸರಕಾರ ಬಹಳಷ್ಟು ಸಂಗತಿಗಳನ್ನು ಮರೆಮಾಚ ಬಯಸುತ್ತದೆ ಎಂಬುದು ಬಹು ಸ್ಪಷ್ಟ ಎಂದಿರುವ ಸಿಪಿಐ(ಎಂ) ಸಾರ್ವತ್ರಿಕ ಚುನಾವಣೆಗಳ ಕೆಲವು ವಾರಗಳ ಮೊದಲಿನ ಈ ನಡೆ ರಫೇಲ್ ವ್ಯವಹಾರ ಸೇರಿದಂತೆ ವಿವಿಧ ಹಗರಣಗಳು ಬಯಲಿಗೆ ಬರಬಹುದೆಂಬ ಭಯ ಮತ್ತು ದಿಗಿಲು ಆವರಿಸಿರುವುದನ್ನು ತೋರಿಸಿದೆ ಎಂದು ಅಭಿಪ್ರಾಯ ಪಟ್ಟಿದೆ.

ಸಿಬಿಐನಂತಹ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಸಂಪೂರ್ಣ ಸಂಚಕಾರ ಬಂದಿದೆ. ಈ ಸರಕಾರ ಸಂವಿಧಾನಿಕ ಸಂಸ್ಥೆಗಳನ್ನು, ಸಿಬಿಐ ಮಾತ್ರವಲ್ಲ, ರಿಝರ್ವ್ ಬ್ಯಾಂಕ್, ನ್ಯಾಯಾಂಗ, ಮಾಹಿತಿ ಆಯೋಗ ಮತ್ತಿತರ ಭಾರತೀಯ ಪ್ರಜಾಪ್ರಭುತ್ವದ ಸ್ಥಂಭಗಳನ್ನು ಧ್ವಂಸ ಮಾಡುವ ಹತಾಶ ಪ್ರಯತ್ನಕ್ಕಿಳಿದಿದೆ. ಭಾರತದ ಜನತೆ ಇದರ ಹಿಂದಿರುವ ಕಪಟವನ್ನು ಕಾಣಬೇಕು, ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ/ಎನ್‌ಡಿಎಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ನೀಡಿದೆ.

Leave a Reply

Your email address will not be published. Required fields are marked *