ಸಿವಿಸಿ ಮುಖ್ಯಸ್ಥರನ್ನು ಕೂಡಲೇ ತೆಗೆದು ಹಾಕಿ: ಅವರನ್ನು ತನಿಖೆಗೆ ಆದೇಶಿಸಬೇಕು

ಸಿಬಿಐ ನಿರ್ದೇಶಕರಾದ ಅಲೋಕ್ ವರ್ಮರವರನ್ನು ಅವರ ಹುದ್ದೆಯಿಂದ ತೆಗೆದು ಹಾಕಿರುವುದು ಒಂದು ಸ್ವೇಚ್ಛಾಚಾರಿ ಮತ್ತು ಆಘಾತಕಾರಿ ಕ್ರಮ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ.  ಈ ಕ್ರಮ ಕೇಂದ್ರೀಯ ವಿಚಕ್ಷಣಾ ಆಯುಕ್ತರು(ಸಿವಿಸಿ) ಸಲ್ಲಿಸಿದ ವರದಿಯನ್ನು ಆಧರಿಸಿದ್ದು, ಈ ವರದಿಯಲ್ಲಿ ಆಪಾದನೆಗಳನ್ನು ಸಾಬೀತುಪಡಿಸಬಹುದಾದ ಸಾಕ್ಷ್ಯ ಬಹಳ ದುರ್ಬಲವಾಗಿದೆ ಎಂಬುದೀಗ ಕಂಡು ಬಂದಿದೆ.

ಸಿವಿಸಿ ವರದಿ ಸಿಬಿಐ ಅಧಿಕಾರಿ ರಾಕೇಶ್‍ ಆಸ್ಥಾನಾರವರು ಮಾಡಿದ ಆರೋಪಗಳನ್ನು ಆಧರಿಸಿದೆ. ದಿಲ್ಲಿ ಹೈಕೋರ್ಟಿನಲ್ಲಿ  ರಾಕೇಶ್‍ ಆಸ್ಥಾನಾ ತಮ್ಮ ಮೇಲಿನ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆಗಳನ್ನು ರದ್ದುಗೊಳಿಸಬೇಕು ಎಂದು ಕೇಳಿ ಸಲ್ಲಿಸಿರುವ ಅರ್ಜಿಯನ್ನು ಆ ನ್ಯಾಯಾಲಯ ತಿರಸ್ಕರಿಸಿ, ಒಂದು ನಿರ್ದಿಷ್ಟ ಸಮಯಮಿತಿಯೊಳಗೆ ತನಿಖೆಯನ್ನು ನಡೆಸಬೇಕು ಎಂದು ಆದೇಶ ನೀಡಿದೆ. ಅಂದರೆ, ರಾಕೇಶ್‍ ಆಸ್ಥಾನಾರವರು ಮೇಲ್ನೋಟಕ್ಕೆ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂಬುದು ನ್ಯಾಯಾಂಗಕ್ಕೆ ಕಂಡು ಬಂದಿದೆ ಎಂಬುದು ಸ್ಪಷ್ಟ ಎಂದು ಈ ಕುರಿತು ವಿಶ್ಲೇಷಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಅಲೋಕ್ ವರ್ಮಾರವರ ವಿರುದ್ಧ ಆರೋಪಗಳ ಸಿವಿಸಿ ತನಿಖೆಯ ಉಸ್ತುವಾರಿಗೆ ಸುಪ್ರಿಂ ಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಸಿವಿಸಿ ತನಿಖೆಯಲ್ಲಿ ವರ್ಮಾರವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಸಾಕ್ಷಿ ಕಂಡುಬರಲಿಲ್ಲ ಎಂದು ಸಾರ್ವಜನಿಕವಾಗಿಯೇ ಹೇಳಿದ್ದಾರೆ ಮತ್ತು ಈ ಮೂಲಕ ವರದಿಯಿಂದ ತನ್ನನ್ನು ದೂರವಿರಿಸಿಕೊಂಡಿದ್ದಾರೆಂದು ಪೊಲಿಟ್‍ಬ್ಯುರೊ ಗಮನ ಸೆಳೆದಿದೆ.

ಕೇಂದ್ರೀಯ ವಿಚಕ್ಷಣಾ ಆಯುಕ್ತ ಕೆ.ವಿ.ಚೌಧರಿಯವರ ಪ್ರಶ್ನಾರ್ಹ ಪಾತ್ರದ ಬಗ್ಗೆ ಹೆಚ್ಚು ಸಂಗತಿಗಳು ಬಯಲಿಗೆ ಬಂದಿವೆ. ಅವರು ಆಗಿನ ಸಿಬಿಐ ನಿರ್ದೇಶಕರೊಂದಿಗೆ ಆಸ್ಥಾನಾ ರವರ ಪರವಾಗಿ ಮಾತಾಡಿದ್ದರು ಎಂಬುದು ಈಗ ಸಾರ್ವಜನಿಕವಾಗಿರುವ ಸಂಗತಿಯಾಗಿದೆ. ಇವೆಲ್ಲ ಸಂಗತಿಗಳೂ ಅಲೋಕ್‍ ವರ್ಮಾರವರನ್ನು ತೆಗೆದು ಹಾಕುವ ಮೋದಿ ನೇತೃತ್ವದ ಸಮಿತಿಯ ನಿರ್ಧಾರ ಪಕ್ಷಪಾತಪೂರ್ಣವಾಗಿದೆ ಮತ್ತು ದುರುದ್ದೇಶಪೂರಿತವಾಗಿದೆ ಎಂಬುದನ್ನು ತೋರಿಸುತ್ತದೆ, ವರ್ಮಾರವರಿಗೆ  ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ತಿರಸ್ಕರಿಸಿ ಸ್ವಾಭಾವಿಕ ನ್ಯಾಯದ ನೀತಿಯನ್ನು ಉಲ್ಲಂಘಿಸಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಇವೆಲ್ಲವೂ, ಕೇಂದ್ರ ಸರಕಾರ ಮತ್ತು ಅದರ ಅತ್ಯುನ್ನತ ರಾಜಕೀಯ ಮುಖಂಡತ್ವವನ್ನು ಒಳಗೊಂಡ ಭ್ರಷ್ಟಾಚಾರದ ಗಂಭೀರ ಕೇಸುಗಳ ತನಿಖೆಗಳನ್ನು ತಡೆಯಲು ಅಲೋಕ್‍ ವರ್ಮಾರವರನ್ನು ತೆಗೆದು ಹಾಕುವ ಅತ್ಯಂತ ತರಾತುರಿಯಲ್ಲಿ ಮೋದಿ ಸರಕಾರ ಇತ್ತೆ ಎಂಬ ಸಂದೇಹವನ್ನು ದೃಢಪಡಿಸುತ್ತವೆ. ಇವುಗಳಲ್ಲಿ ರಫೇಲ್‍ ಹಗರಣ ಮತ್ತು ಇತರ ಭ್ರಷ್ಟಾಚಾರದ ಹಗರಣಗಳು ಸೇರಿವೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಬಹಿರಂಗಕ್ಕೆ ಬಂದಿರುವ  ಸಂಗತಿಗಳ ಬೆಳಕಿನಲ್ಲಿ, ಕೇಂದ್ರೀಯ ವಿಚಕ್ಷಣಾ ಆಯುಕ್ತರನ್ನು ತಕ್ಷಣವೇ ಅವರ ಹುದ್ದೆಯಿಂದ ತೆಗೆದು ಹಾಕಬೇಕು ಮತ್ತು ಆಗಿನ ಸಿಬಿಐ ನಿರ್ದೇಶಕರನ್ನು ಕುರಿತ ವ್ಯವಹಾರವನ್ನು ಅವರು ನಿರ್ವಹಿಸಿದ ರೀತಿಯ ಬಗ್ಗೆ ಒಂದು ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *