“ಮಿಶನ್‍ ಶಕ್ತಿ” ಯ ಸಾಧನೆಯ ಪ್ರಕಟಣೆ ಡಿ.ಆರ್.ಡಿ.ಒ. ಮುಖ್ಯಸ್ಥರ ಬದಲಿಗೆ ಪ್ರಧಾನಿಗಳಿಂದ!

ಪ್ರಸಾರ ಭಾಷಣಕ್ಕೆ  ಅನುಮತಿ ನೀಡಿದ್ದೇಕೆ ? – ಚುನಾವಣಾ ಆಯೋಗಕ್ಕೆ ಯೆಚುರಿ ಪತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಚ್ 27 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತ ಒಂದು ಜೀವಂತ ಉಪಗೃಹವನ್ನು ಹೊಡೆದುರುಳಿಸುವ ಉಪಗೃಹ-ವಿರೊಧಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಪ್ರಕಟಿಸಿದರು. ಇದಕ್ಕೆ ಅರ್ಧ ಗಂಟೆಯ ಮೊದಲು, “ಟೆಲಿವಿಶನ್, ರೇಡಿಯೋ ಅಥವ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವನ್ನು ವೀಕ್ಷಿಸಿ” ಎಂದು ಅವರೇ ಸ್ವತಃ ಟ್ವಿಟರ್‍ ನಲ್ಲಿ ಪ್ರಚಾರ ಮಾಡಿದ್ದರು.

ಸಾಮಾನ್ಯವಾಗಿ ಇಂತಹ ಮಿಶನ್‍ ನ್ನು ಸಾಧಿಸಿದಾಗ ಅದರ ಪ್ರಕಟಣೆಯನ್ನು ಸಂಬಂಧಪಟ್ಟ ವೈಜ್ಞಾನಿಕ-ತಾಂತ್ರಿಕ ಸಂಸ್ಥೆಯ ಪರವಾಗಿ ಮಾಡಲಾಗುತ್ತದೆ. 2012ರಲ್ಲಿ ಭಾರತ ಈ  ಸಾಮರ್ಥ್ಯವನ್ನು ಗಳಿಸಿ ಕೊಂಡಾಗ ಅದನ್ನು ಡಿ.ಆರ್.ಡಿ.ಒ. ಮುಖ್ಯಸ್ಥರು ದೇಶಕ್ಕೆ ತಿಳಿಸಿದ್ದರು. ಈಗಲೂ ಈ ಮಿಶನ್‍ನ ಯಶಸ್ಸನ್ನು ಅವರೇ ದೇಶಕ್ಕೆ ತಿಳಿಸಬೇಕಾಗಿತ್ತು. ಆದರೆ ಪ್ರಧಾನಿಗಳು, ಅದೂ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ, ಇದಕ್ಕೆ ತಮ್ಮದೇ  ಪ್ರಸಾರ ಭಾಷಣದ ದಾರಿ ಹಿಡಿದಿದ್ದಾರೆ.

ಇದಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯಲಾಗಿತ್ತೇ? ಆಯೋಗ ಇದನ್ನು ಪರಿಶೀಲಿಸಿ ಅನುಮತಿ ನೀಡಿತ್ತೇ? ಭಾರತೀಯ ವಿಜ್ಞಾನಿಗಳ ಸಾಧನೆಗಳಿಗೆ ಒಂದು ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ ರಾಜಕೀಯ ಬಣ್ಣ ಪಡೆಯುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಲು ವಿಶೇಷ ಕಾರಣಗಳೇನಾದರೂ ಇವೆಯೇ ಎಂದು ಇಡೀ ದೇಶ ತಿಳಿಯ ಬಯಸುತ್ತದೆ ಎಂದು ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿಯವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಆ ಪತ್ರದ ಪೂರ್ಣ ಒಕ್ಕಣಿಕೆ ಹೀಗಿದೆ:

“ನಮ್ಮ ವಿಜ್ಞಾನಿಗಳ ಮತ್ತೊಂದು ಸಾಧನೆಯ ಪ್ರಕಟಣೆಯನ್ನು ಪ್ರಧಾನ ಮಂತ್ರಿಗಳು ಈಗ ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ನಡುವೆ ರಾಷ್ಟ್ರವನ್ನುದ್ದೇಶಿಸಿದ ಒಂದು ಪ್ರಸಾರ ಭಾಷಣದ ಮೂಲಕ ಮಾಡಿರುವತ್ತ ತಮ್ಮ ಗಮನವನ್ನು ಸೆಳೆಯಲು ನಾನು ಈ ಪತ್ರವನ್ನು ಬರೆಯಬೇಕಾಗಿ ಬಂದಿದೆ.

ಮೊದಲಿಗೆ, ಸಿಪಿಐ(ಎಂ) ಭಾರತೀಯ ವಿಜ್ಞಾನಿಗಳ ಇನ್ನೊಂದು ಸಾಧನೆಯ ಬಗ್ಗೆ ಆಳವಾದ ಮೆಚ್ಚುಗೆಯ ಭಾವವನ್ನು ವ್ಯಕ್ತಪಡಿಸುತ್ತದೆ. ನಮ್ಮ ವಿಜ್ಞಾನಿಗಳು ಈ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ, ಪರೀಕ್ಷಿಸುವಲ್ಲಿ ಮತ್ತು ಒಂದು ಕೆಳಮಟ್ಟದಲ್ಲಿ ಭೂಮಿಯನ್ನು ಸುತ್ತುವ ಉಪಗೃಹದ ಮೇಲೆ ಗುರಿಯಿಡುವಲ್ಲಿ ಯಶಸ್ಸು ಪಡೆದಿದ್ದಾರೆ. ಭಾರತ ಈ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿದೆ ಎಂಬುದನ್ನು “ಡಿಫೆನ್ಸ್ ರಿಸರ್ಚ್ ಅಂಡ್‍ ಡೆವಲೆಪ್‍ಮೆಂಟ್ ಆಗ್ನೈಸೇಷನ್” (ಡಿ.ಆರ್.ಡಿ.ಒ.-ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಘಟನೆ) ಮುಖ್ಯಸ್ಥರು 2012ರಲ್ಲಿ ಪ್ರಕಟಿಸಿದ್ದರು. ಭಾರತೀಯ ವಿಜ್ಞಾನಿಗಳು ಮುಂಬರುವ ದಿನಗಳಲ್ಲಿ ನಿಯಮಿತ ಚಲನೆಯ ಪಥದಲ್ಲಿರುವ ವಿರೋಧಿ ಉಪಗೃಹಗಳ ಮೇಲೂ ಗುರಿಯಿಡುವ ಇನ್ನೂ ಉನ್ನತ ಮಟ್ಟವನ್ನು ಖಂಡಿತ ತಲುಪುತ್ತಾರೆ ಎಂಬ ವಿಶ್ವಾಸ ನಮಗಿದೆ. ಈ ಸಾಧನೆಗಳಿಗೆ ದೇಶ ಹೆಮ್ಮೆ ಪಡುತ್ತದೆ. ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು.

ಇಂತಹ ಮಿಶನ್‍ ಒಂದರ ಪ್ರಕಟಣೆಯನ್ನು ಸಾಮಾನ್ಯವಾಗಿ ದೇಶಕ್ಕೆ ಮತ್ತು ಜಗತ್ತಿಗೆ ಸಂಬಂಧಪಟ್ಟ ಡಿ.ಆರ್‍.ಡಿ.ಒ. ನಂತಹ ವೈಜ್ಞಾನಿಕ ಸಂಘಟನೆಗಳು ಮಾಡಬೇಕು. ಅದರ ಬದಲು, ಭಾರತದ ಪ್ರಧಾನ ಮಂತ್ರಿಗಳು ಇದನ್ನು ಪ್ರಕಟಿಸಲು ರಾಷ್ಟ್ರವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡುವ ದಾರಿಯನ್ನು ಹಿಡಿದಿದ್ದಾರೆ.

ಈ ಪ್ರಕಟಣೆ ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣಾ ಪ್ರಚಾರದ ನಡುವೆ, ಸ್ವತಃ ಪ್ರಧಾನ ಮಂತ್ರಿಗಳೂ ಒಬ್ಬ ಅಭ್ಯರ್ಥಿಯಾಗಿರುವಾಗ, ಬರುತ್ತಿದೆ. ಇದು ಸ್ಪಷ್ಟವಾಗಿಯೂ ಮಾದರಿ ನೀತಿ ಸಂಹಿತೆಯ ಒಂದು ಉಲ್ಲಂಘನೆಯಾಗಿದೆ.

ಪ್ರಧಾನ ಮಂತ್ರಿಗಳು ಇಂತಹ ರಾಷ್ಟ್ರವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡುವ ಬಗ್ಗೆ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿತ್ತೇ, ಮತ್ತು ಚುನಾವಣಾ ಆಯೋಗ ಪ್ರಧಾನ ಮಂತ್ರಿಗಳಿಂದ ಇಂತಹ ಒಂದು ರಾಷ್ಟ್ರವನ್ನುನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡುವುದನ್ನು ಪರಿಶೀಲಿಸಿ, ಅದಕ್ಕೆ ಅನುಮತಿಯನ್ನು ನೀಡಿದೆಯೇ ಎಂದು ನಾನು ತಿಳಿಯ ಬಯಸುತ್ತೇನೆ.

ಭಾರತೀಯ ವಿಜ್ಞಾನಿಗಳ ಸಾಧನೆಗಳಿಗೆ ಒಂದು ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ ರಾಜಕೀಯ ಬಣ್ಣ ಪಡೆಯುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಲು ಇರುವ ವಿಶೇಷ ಕಾರಣಗಳ ಬಗ್ಗೆ ಇಡೀ ದೇಶ ತಿಳಿಯ ಬಯಸುತ್ತದೆ ಎಂದು ನಾನು ಖಂಡಿತವಾಗಿಯೂ ಹೇಳಬಲ್ಲೆ.”

Leave a Reply

Your email address will not be published. Required fields are marked *