ಗೋಡ್ಸೆಯನ್ನು ದೇಶಭಕ್ತನೆಂದ ಪ್ರಜ್ಞಾಸಿಂಗ್ ಠಾಕುರ್‌ ರನ್ನು ತಿರಸ್ಕರಿಸಿ

ಬಿಜೆಪಿಯನ್ನು ಸೋಲಿಸಿ ಭಾರತದ ಗಣತಂತ್ರವನ್ನು ರಕ್ಷಿಸಿ- ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ

ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ನಾಥುರಾಂ ಗೋಡ್ಸೆ “ಒಬ್ಬ ದೇಶಭಕ್ತನಾಗಿದ್ದರು, ಆಗಿದ್ದಾರೆ ಮತ್ತು ಮುಂದೆಯೂ ಆಗಿರುತ್ತಾರೆ…” ಎಂದು ವರ್ಣಿಸಿರುವ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾಸಿಂಗ್ ಠಾಕುರ್‌ ರವರ ಆಕ್ರೋಶಕಾರಿ ಹೇಳಿಕೆಯನ್ನು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಬಲವಾಗಿ ಖಂಡಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಕೆಯನ್ನು “ಭಾರತದ ನಾಗರಿಕತೆಯ ಪರಂಪರೆಯ ಒಂದು ಸಂಕೇತ” ಎಂದು ಬಿಜೆಪಿಯ ಅಭ್ಯರ್ಥಿಯಾಗಿ ಆಕೆಯ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತ ವರ್ಣಿಸಿದ್ದರು. ವಾಸ್ತವವಾಗಿ ಆಕೆಯನ್ನು ಕಣಕ್ಕಿಳಿಸಿ ಆರೆಸ್ಸೆಸ್-ಬಿಜೆಪಿ ಕೋಮುವಾದಿ ಧ್ರುವೀಕರಣವನ್ನು ಬಡಿದೆಬ್ಬಿಸಲು ಮತ್ತು “ಹಿಂದುತ್ವ ಕೋಮುವಾದಿ ವೋಟ್ ಬ್ಯಾಂಕ್ ” ನ್ನು ಕ್ರೋಡೀಕರಿಸ ಬಯಸಿದ್ದಾರೆ  ಎಂದಿರುವ ಸಿಪಿಐ(ಎಂ) ಪೊಲಿಟ್‌ ಬ್ಯುರೊ, ಇದು ಭಯೋತ್ಪಾದನೆ, ಒಬ್ಬ ಭಯೋತ್ಪಾದನೆಯ ಆರೋಪಿ ಮತ್ತು ಮಹಾತ್ಮ ಗಾಂಧಿಯವರ ಹಂತಕನ ಬಗ್ಗೆ ಬಿಜೆಪಿಯ ನಿಲುವನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದೆ. ಆಕೆ ಈಗ ಬಿಜೆಪಿಯ ಆಣತಿಯಂತೆ ಕ್ಷಮೆ ಕೇಳಿರುವುದು ಕಣ್ಣೊರೆಸಲಿಕ್ಕಾಗಿಯಷ್ಟೇ, ಆಕೆ ತನ್ನ ನಿಲುವಿಗೆ ಬದ್ಧರಾಗಿದ್ದಾರೆ ಎಂಬುದನ್ನು ದೃಢಪಡಿಸುತ್ತದೆ ಎಂದೂ ಅದು ಹೇಳಿದೆ.

ಈ ವಿಷಯದಲ್ಲಿ, ಚುನಾವಣಾ ಆಯೋಗದ ಇತ್ತೀಚಿನ ವರ್ತನೆಗಳನ್ನು ನೋಡಿದ ಮೇಲೆ, ಸಿಪಿಐ(ಎಂ) ಪೊಲಿಟ್‌ ಬ್ಯುರೊ ಅದರ ಬಳಿ ಹೋಗುವುದಿಲ್ಲ ಎನ್ನುತ್ತ, ಭಾರತೀಯ ಸಂವಿಧಾನಾತ್ಮಕ ಗಣತಂತ್ರವನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಮತ್ತು ಬಲಪಡಿಸಲಿಕ್ಕಾಗಿ ಬಿಜೆಪಿಯನ್ನು ಸೋಲಿಸಿ ಮತ್ತು ತಿರಸ್ಕರಿಸಿ ಎಂದು  ಭಾರತೀಯ ಜನತೆಗೆ ಕರೆ ನೀಡಿದೆ.

ಆಕೆ ಕ್ಷಮೆ ಕೇಳಿಲ್ಲ, ತನ್ನ ಪಕ್ಷದ ನಿಲುವನ್ನು ದೃಢಪಡಿಸಿದ್ದಾರೆ- ಸೀತಾರಾಮ್‍ ಯೆಚುರಿ

ಪ್ರಜ್ಞಾ ಸಿಂಗ್‍ ಠಾಕುರ್ “ನನ್ನ ಸಂಘಟನೆ ಬಿಜೆಪಿಯ ಬಗ್ಗೆ ನಿಷ್ಠೆ ಹೊಂದಿದ್ದೇನೆ, ಅದರ ಕಾರ್ಯಕರ್ತಳಾಗಿದ್ದೇನೆ, ಮತ್ತು ಪಕ್ಷದ ಲೈನ್‍ ನನ್ನ ಲೈನ್‍ ಆಗಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಟಿಪ್ಪಣಿ ಮಾಡುತ್ತ, ಆಕೆ ಕ್ಷಮೇ ಕೇಳಿಲ್ಲ, ಯಾವ ಅಳತೆಗೋಲಿನಿಂದಲೂ ಇದನ್ನು ಕ್ಷಮೆ ಎಂದು ಹೇಳಲು ಸಾಧ್ಯವಿಲ್ಲ, ನಿಜ ಹೇಳಬೇಕೆಂದರೆ, ಆಕೆ ತಾನು ಹೇಳಿರುವುದು ಪಕ್ಷದ ಲೈನ್‍ ಎಂದು ಈ ಮೂಲಕ ದೃಢಪಡಿಸಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಹೇಳಿದ್ದಾರೆ.

ಮುಂದುವರೆದು ಅವರು, ಈ ಕಾರಣಕ್ಕಾಗಿಯೇ ಸರ್ದಾರ್ ಪಟೇಲ್‍ ಗಾಂಧೀಜಿ ಹತ್ಯೆಯ ನಂತರ ಆರ್ ಎಸ್ ಎಸ್ ನ್ನು ನಿಷೇಧಿಸಿದ್ದು. ಇದು ಈಗಲೂ ಒಬ್ಬ ಭಯೋತ್ಪಾದನೆಯ ಆರೋಪಿಯನ್ನು ಬೆಂಬಲಿಸುತ್ತಿರುವ ಸಂಘಟನೆ ಎಂಬುದು ವಾಸ್ತವ ಎಂದು ಟಿಪ್ಪಣಿ ಮಾಡಿದ್ದಾರೆ.

Leave a Reply

Your email address will not be published. Required fields are marked *