ಮೋದಿಯವರ ವಿರುದ್ಧ ಕ್ಷಿಪ್ರ ಕ್ರಮಕೈಗೊಳ್ಳಿ : ಚುನಾವಣಾ ಆಯುಕ್ತರಿಗೆ ಮತ್ತೊಂದು ಪತ್ರ

  • ಚುನಾವಣಾ ಆಯೋಗದ ಪ್ರತಿಷ್ಠೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯಿರಿ
  • ಮುಖ್ಯ ಚುನಾವಣಾ ಆಯುಕ್ತರಿಗೆ ಯೆಚುರಿಯವರ ಮತ್ತೊಂದು ಪತ್ರ

ಆರನೇ ಘಟ್ಟದ ಮತದಾನದ ಮುನ್ನಾದಿನ ನ್ಯೂಸ್‍ ನೇಶನ್‍ ಚಾನಲ್ ಪ್ರಸಾರ ಮಾಡಿರುವ ಒಂದು ಸಂದರ್ಶನದಲ್ಲಿ ಮೋದಿಯವರು ಒಂದು ಅತಿರೇಕದ ದಾವೆ ಇಟ್ಟಿದ್ದಾರೆ. ಭಾರತೀಯ ವಾಯುಪಡೆಯ ಗಡಿಯಾಚೆಗಿನ ಮಿಶನ್‍ ಗೆ ತಾನು ಹವಾಮಾನ ಕೆಟ್ಟದಾಗಿದ್ದರೂ ಮತ್ತು ವೃತ್ತಿಪರ ಪರಿಣಿತರ ಸಲಹೆಯ ವಿರುದ್ಧ ಮಂಜೂರಾತಿಯನ್ನು, ಮೋಡಗಳು ಭಾರತೀಯ ಫೈಟರ್‍ ಜೆಟ್‍ಗಳನ್ನು ಪಾಕಿಸ್ತಾನಿ ರಾಡಾರ್‍ ಗಳಿಂದ ಮರೆಮಾಚುತ್ತವೆ ಎಂಬ ಕಾರಣಕ್ಕೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮಿಶನ್‍ನ ಯೋಜನೆ ರಚಿಸಿದ್ದ ರಕ್ಷಣಾ ಪರಿಣಿತರ ಸಂದೇಹಗಳನ್ನು ನಿವಾರಿಸಲು ತನ್ನ “ಕಚ್ಚಾ ಜಾಣ್ಮೆ” ಯನ್ನು ಉಪಯೋಗಿಸಿದೆ ಎಂದು ಈ ಸಂದರ್ಶನದಲ್ಲಿ ಅವರು ತನ್ನ ಬೆನ್ನು ತಟ್ಟಿಕೊಳ್ಳುತ್ತ “ನನ್ನನ್ನು ದೂಷಿಸುವ ದೇಶದ ಪಂಡಿತರಿಗೆ ಇದು ಹೊಳೆಯಲೇ ಇಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ” ಎಂದೂ ಅವರು ಹೇಳಿದರು. ಇದು ದೇಶಾದ್ಯಂತ ಟೀಕೆಗಳಿಗೆ, ನಗೆಚಾಟಿಕೆಗಳಿಗೆ ಗುರಿಯಾಗಿದೆ.

ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಮುಖ್ಯ ಚುನಾವಣಾ ಆಯುಕ್ತರಿಗೆ ಮೇ 12 ರಂದು ಮತ್ತೊಂದು ಪತ್ರ ಬರೆದಿದ್ದಾರೆ. ಮತದಾನದ ಹಿಂದಿನ ದಿನದ ಪ್ರಚಾರ ನಿಲ್ಲಿಸಬೇಕಾದ ‘ಮೌನ ಅವಧಿ’ಯಲ್ಲಿ “ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಒಂದು ಸೂಕ್ಷ್ಮವಾದ ಮಿಲಿಟರಿ ಮಿಶನ್‍ ನ ಕಾರ್ಯವಿವರಗಳನ್ನು ಹೊರಹಾಕಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಗಂಭೀರ ಮಹತ್ವದ ವಿಷಯ. ಪ್ರಧಾನ ಮಂತ್ರಿಗಳು ಎಲ್ಲ ನಿಯಮಗಳನ್ನು, ಸಂಹಿತೆಗಳನ್ನು ಮತ್ತು ಮಾರ್ಗಸೂತ್ರಗಳನ್ನು ಮುಲಾಜಿಲ್ಲದೆ ಉಲ್ಲಂಘಿಸುತ್ತ ಚುನಾವಣಾ ಆಯೋಗವನ್ನು ಅಣಕಿಸುತ್ತಿರುವಂತೆ ಕಾಣುತ್ತದೆ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎನ್ನುತ್ತ ಯೆಚುರಿಯವರು, ನಮ್ಮ ಈ ಪ್ರಜಾಪ್ರಭುತ್ವದ ಪಾಲಕನಾಗಿರುವ ಚುನಾವಣಾ ಆಯೋಗದ ಪ್ರತಿಷ್ಠೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಮುಖ್ಯ ಚುನಾವಣಾ ಆಯುಕ್ತರು ಎತ್ತಿ ಹಿಡಿಯುತ್ತಾರೆ, ಮೋದಿಯವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸಿದ್ದಾರೆ.

ಈ ಪತ್ರದಲ್ಲಿ, ಪ್ರಧಾನ ಮಂತ್ರಿಗಳು ಮರುದಿನವೇ ಕುಶಿನಗರದಲ್ಲಿ ಮಾಡಿರುವ ಚುನಾವಣಾ ಭಾಷಣದಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಕೊಂದಿರುವುದು ತಾನು, ನಮ್ಮ ಸಶಸ್ತ್ರ ಪಡೆಗಳಲ್ಲ ಎಂಬ ಅರ್ಥ ಬರುವಂತಹ ಮಾತುಗಳ ಭರದಲ್ಲಿ ಮತ್ತೊಮ್ಮೆ ಚುನಾವಣಾ ಆಯೋಗವನ್ನು ಅಣಕ ಮಾಡಿದ್ದಾರೆ ಎಂದೂ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ “ಚುನಾವಣಾ ಆಯೋಗ, ಶ್ರೀ ಮೋದಿ ಮತ್ತು ಶ್ರೀ ಅಮಿತ್‍ ಷಾ  ಚುನಾವಣಾ ಪ್ರಕ್ರಿಯೆಗೆ ಮೀರಿದವರು, ಮಾದರಿ ಆಚಾರ ಸಂಹಿತೆ ಅವರಿಗೆ ಅನ್ವಯವಾಗುವುದಿಲ್ಲ ಎಂದು ಯೋಚಿಸಿರುವಂತೆ ಕಾಣುತ್ತದೆ. ಇದನ್ನು ಹಲವಾರು ವ್ಯಂಗ್ಯಚಿತ್ರಕಾರರು, ಪತ್ರಿಕಾ ಸಂಪಾದಕೀಯಗಳು ಮತ್ತು ಟಿಪ್ಪಣಿಗಾರರು ಗಮನಿಸಿದ್ದಾರೆ. ಅವರೆಲ್ಲರ ಭಾವನೆ ತಪ್ಪು ಎಂದು ಚುನಾವಣಾ ಆಯೋಗ ಸಾಬೀತು ಮಾಡುತ್ತದೆ, ಮತ್ತು ಕ್ಷಿಪ್ರ ಹಾಗೂ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ” ಎಂದು ತಮ್ಮ ಪತ್ರದ ಕೊನೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಮೊದಲು ಈ ಬಗ್ಗೆ ಟ್ವಿಟರ್‍ ನಲ್ಲಿ ಟಿಪ್ಪಣಿ ಮಾಡುತ್ತ, “ಮೋದಿಯವರ ಪದಗಳು ನಿಜಕ್ಕೂ ನಾಚಿಕೆಗೇಡಿ. ಇನ್ನೂ ಮುಖ್ಯವೆಂದರೆ, ಅವು ನಮ್ಮ ವಾಯು ಪಡೆ ಅಜ್ಞಾನಿ ಮತ್ತು ವೃತ್ತಿಪರ ಪಡೆಯಲ್ಲ ಎಂದು ಅವಮಾನ ಮಾಡಿವೆ” ಎಂದು ಖೇದ ವ್ಯಕ್ತಪಡಿಸಿದ್ದರು.  ಅವರು ಹೀಗೆಲ್ಲ ಮಾತಾಡುತ್ತಿರುವುದೇ ರಾಷ್ಟ್ರ-ವಿರೋಧಿ ನಡವಳಿಕೆ. ಯಾವ ದೇಶಪ್ರೇಮಿಯೂ ಹೀಗೆ ಹೇಳಲಾರ. ರಾಷ್ಟ್ರೀಯ ಭದ್ರತೆಯೆಂಬುದು ಹಗುರವಾಗಿ ಮಾತಾಡುವ ವಿಷಯವಲ್ಲ. ಮೋದಿಯಿಂದ ಇಂತಹ ಹೇಳಿಕೆ ಅನಾಹುತಕಾರಿ, ಇಂತಹವರು ಭಾರತದ ಪ್ರಧಾನ ಮಂತ್ರಿಯಾಗಿ ಉಳಿಯಬಾರದು ಎಂದು ಮುಂದುವರೆದು ಯೆಚುರಿ ಟಿಪ್ಪಣಿ ಮಾಡಿದ್ದಾರೆ.

ಸೀತಾರಾಮ್‍ ಯೆಚುರಿಯವರು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಪ್ರಿಯ ಶ್ರೀ ಅರೋರಾ ಜೀ,

ನಾನು ಮತ್ತೊಮ್ಮೆ ನಿಮಗೆ ಪತ್ರ ಬರೆಯಲೇಬೇಕಾಗಿ ಬಂದಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಗಂಭೀರ ಮಹತ್ವದ ವಿಷಯ. ಮುಕ್ತ ಮತ್ತು ನ್ಯಾಯಪೂರ್ಣ ಚುನಾವಣೆಗಳೇ ಪ್ರಜಾಪ್ರಭುತ್ವದ ಆಧಾರ. ಮಾದರಿ ಆಚಾರ ಸಂಹಿತೆಯನ್ನು ಅನುಷ್ಠಾನಗೊಳಿಸಿ, ಮತ್ತು ತಾನು ಆಗಾಗ ಪ್ರಕಟಿಸಿರುವ ಮಾರ್ಗಸೂತ್ರಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಮುಕ್ತ ಮತ್ತು ನ್ಯಾಯಪೂರ್ಣ ಚುನಾವಣೆಗಳನ್ನು ನಡೆಸುವ ಕೆಲಸವನ್ನು ಚುನಾವಣಾ ಆಯೋಗಕ್ಕೆ ವಹಿಸಲಾಗಿದೆ. ಮಾನ್ಯ ಸುಪ್ರಿಂ ಕೋರ್ಟ್‍, ಇದನ್ನು ಕಣ್ಣುಕುಕ್ಕುವಂತೆ ಉಲ್ಲಂಘಿಸುವವರ ವಿರುದ್ಧ ಕೂಡಲೇ ಮತ್ತು ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಹೇಳುವಾಗ ಇದನ್ನು ಪುನರುಚ್ಚರಿಸಿದೆ.

ಆದರೆ ಬಿಜೆಪಿ ಮುಖಂಡರು ಮತ್ತು ಹೊರಹೋಗುತ್ತಿರುವ ಪ್ರಧಾನ ಮಂತ್ರಿಗಳ ಮೇಲಿನ ಇತ್ತೀಚಿನ ನಿರ್ಧಾರಗಳನ್ನು ನೋಡಿದರೆ ಅವರು ಮಾದರಿ ಆಚಾರ ಸಂಹಿತೆ ಮತ್ತು ಮಾರ್ಗಸೂತ್ರಗಳ ವ್ಯಾಪ್ತಿಯ ಹೊರಗೆ ಇದ್ದಾರೇನೋ ಎಂಬ ಭಾವನೆ ವ್ಯಾಪಕವಾಗಿ ಉಂಟಾಗಿದೆ. ಆದ್ದರಿಂದ ಇನ್ನಷ್ಟು ಭಂಡ ಉಲ್ಲಂಘನೆಗಳ ವಿರುದ್ಧ ನಮ್ಮ ಪ್ರತಿಭಟನೆಯನ್ನು ದಾಖಲಿಸುವುದು ನಮ್ಮ ಆದ್ಯ ಕರ್ತವ್ಯವಾಗುತ್ತದೆ.

ಆರನೇ ಘಟ್ಟದ ಮತದಾನದ ಮುನ್ನಾದಿನ ನ್ಯೂಸ್‍ ನೇಶನ್‍ ಚಾನಲ್ ಪ್ರಸಾರ ಮಾಡಿರುವ ಒಂದು ಸಂದರ್ಶನದಲ್ಲಿ ಶ್ರೀ ಮೋದಿ ಒಂದು ಅತಿರೆಕದ ದಾವೆ ಇಟ್ಟಿದ್ದಾರೆ. ಭಾರತೀಯ ವಾಯುಪಡೆಯ ಗಡಿಯಾಚೆಗಿನ ಮಿಶನ್‍ ಗೆ ತಾನು, ಆಗ ಹವಾಮಾನ ಕೆಟ್ಟದಾಗಿದ್ದರೂ, ವೃತ್ತಿಪರ ಪರಿಣಿತರ ಸಲಹೆಯ ವಿರುದ್ಧ ಮಂಜೂರಾತಿಯನ್ನು, ಮೋಡಗಳು ಭಾರತೀಯ ಫೈಟರ್‍ ಜೆಟ್‍ಗಳನ್ನು ಪಾಕಿಸ್ತಾನಿ ರಾಡಾರ್‍ ಗಳಿಂದ ಮರೆಮಾಚುತ್ತವೆ ಎಂಬ ಕಾರಣಕ್ಕೆ ನೀಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಈ ಮಿಶನ್‍ನ ಯೋಜನೆ ರಚಿಸಿದ್ದ ರಕ್ಷಣಾ ಪರಿಣಿತರ ಸಂದೇಹಗಳನ್ನು ನಿವಾರಿಸಲು ತನ್ನ “ಕಚ್ಚಾ ಜಾಣ್ಮೆ” ಯನ್ನು ಉಪಯೋಗಿಸಿದೆ ಎಂದು ಈ ಸಂದರ್ಶನದಲ್ಲಿ ಅವರು ಹೇಳಿದರು. “ನನ್ನನ್ನು ದೂಷಿಸುವ ದೇಶದ ಪಂಡಿತರಿಗೆ ಇದು ಹೊಳೆಯಲೇ ಇಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ” ಎಂದೂ ಅವರು ಹೇಳಿದರು.

ಶ್ರೀ ಮೋದಿಯವರು ಒಂದು ಸೂಕ್ಷ್ಮವಾದ ಮಿಲಿಟರಿ ಮಿಶನ್‍ ನ ಕಾರ್ಯವಿವರಗಳನ್ನು, ಮತದಾರರ ಮೇಲೆ ಚುನಾವಣಾ ಪ್ರಚಾರದ ಮೌನ ಅವಧಿಯಲ್ಲಿ ಪ್ರಭಾವ ಬೀರುವ ಉದ್ದೇಶದಿಂದ ಹೊರಹಾಕಿರುವ  ಸಂದರ್ಶನವನ್ನು ಆಯೋಗ ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. ಅವರ ವರ್ತನೆ ಮತ್ತು ಹೇಳಿಕೆಗಳು ಚುನಾವಣಾ ಆಯೋಗವು ಮೊದಲ ಸುತ್ತಿನ ಮತದಾನದ ಮೊದಲೇ ಸ್ಪಷ್ಟಪಡಿಸಿದ್ದ ಮತ್ತು ಆಮೇಲೆ ಮತ್ತೆ ಪ್ರಕಟಿಸಿದ ಹಾಗೂ ಪುನರುಚ್ಚರಿಸಿದ, ಸಶಸ್ತ್ರ ಪಡೆಗಳು ಸರ್ವ ಭಾರತಕ್ಕೆ ಸೇರಿರುವಂತದ್ದಾದ್ದರಿಂದ ಅದು ಯಾವುದೇ ಪಕ್ಷಕ್ಕೆ ಮತ ಬಾಚಿಕೊಳ್ಳುವ ಅತಿರೇಕದ ಮತ್ತು ಸುಳ್ಳುದಾವೆಗಳಿಗೆ ಒಂದು ವಿಷಯವಾಗಲಾರದು ಎಂಬ ಮಾರ್ಗಸೂತ್ರದ ಸ್ಪಷ್ಟ ಮತ್ತು ಉದ್ದೇಶಪೂರ್ವಕವಾದ ಉಲ್ಲಂಘನೆಯಾಗಿದೆ.

ಶ್ರೀ ಮೋದಿ ಎಲ್ಲ ನಿಯಮಗಳನ್ನು, ಸಂಹಿತೆಗಳನ್ನು ಮತ್ತು ಮಾರ್ಗಸೂತ್ರಗಳನ್ನು ಮುಲಾಜಿಲ್ಲದೆ ಉಲ್ಲಂಘಿಸುತ್ತ ಚುನಾವಣಾ ಆಯೋಗವನ್ನು ಅಣಕಿಸುತ್ತಿರುವಂತೆ ಕಾಣುತ್ತದೆ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಚುನಾವಣಾ ಆಯೋಗ ನಮ್ಮ ಈ ಪ್ರಜಾಪ್ರಭುತ್ವದ ಪಾಲಕನಾಗಿದೆ. ತಾವು ಚುನಾವಣಾ ಆಯೋಗದ ಪ್ರತಿಷ್ಠೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯುತ್ತೀರಿ, ಶ್ರೀ ಮೋದಿಯವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಿ ಎಂದು ನಾವು ಆಶಿಸುತ್ತೇವೆ.

ಶ್ರೀ ಮೋದಿ ಮತಯಾಚನೆಗೆ ಸಶಸ್ತ್ರ ಪಡೆಗಳನ್ನು ಉಪಯೋಗಿಸಿರುವ ಮತ್ತು ಚುನಾವಣಾ ಆಯೋಗವನ್ನು ಅಣಕಿಸಿರುವ ಮತ್ತೊಂದು ಸುದ್ದಿ ಬಂದಿದೆ. ಈ ಬಾರಿ ಇದು ಕುಶಿನಗರದಲ್ಲಿ ಮೇ 12, 2019ರ ದು ಚುನಾವಣಾ ರ್ಯಾಲಿಯಿಂದ ಬಂದಿದೆ. ಶ್ರೀ ಮೋದಿ “ಇಂದು ಭಯೋತ್ಪಾದಕರನ್ನು ಕಾಶ್ಮೀರದಲ್ಲಿನ ನಮ್ಮ ಸೇನೆ ಸಾಯಿಸಿದೆ. ಈಗ ಕೆಲವು ಮಂದಿಗೆ ಮೋದಿ, ಮತದಾನ ನಡೆಯುತ್ತಿರುವಾಗ ಭಯೋತ್ಪಾದಕರನ್ನು ಯಾಕೆ ಕೊಂದರು ಎಂದು ಬೇಸರವಾಗಿರುತ್ತದೆ. ಸಶಸ್ತ್ರ ಭಯೋತ್ಪಾದಕ ದಾಳಿ ಮಾಡುತ್ತಿದ್ದಾನೆ, ನನ್ನ ಸೈನಿಕರು ಚುನಾವಣಾ ಆಯೋಗಕ್ಕೆ ಅವನನ್ನು ಕೊಲ್ಲಲು ಅನುಮತಿ ಕೇಳಲು ಹೋಗಬೇಕೇ?” ಎಂದು ಕೇಳಿರುವುದಾಗಿ ವರದಿಯಾಗಿದೆ. ಗಮನಿಸಿ ಅವರ ದಾವೆಯನ್ನು: ಭಯೋತ್ಪಾದಕರನ್ನು ಕೊಂದಿರುವುದು ತಾನು, ನಮ್ಮ ಸಶಸ್ತ್ರ ಪಡೆಗಳಲ್ಲ!

ಈ ಹಿಂದೆ ಕೂಡ, ನಾವು, ಅವರ ಉಲ್ಲಂಘನೆಗಳ ಇಂತಹ ಘಟನೆಗಳನ್ನು ತಮ್ಮ ಗಮನಕ್ಕೆ ತಂದಿದ್ದೇವೆ. ಆದರೆ, ಚುನಾವಣಾ ಆಯೋಗ, ಶ್ರೀ ಮೋದಿ ಮತ್ತು ಶ್ರೀ ಅಮಿತ್‍ ಷಾ ಚುನಾವಣಾ  ಪ್ರಕ್ರಿಯೆಗೆ ಮೀರಿದವರು, ಮಾದರಿ ಆಚಾರ ಸಂಹಿತೆ ಅವರಿಗೆ ಅನ್ವಯವಾಗುವುದಿಲ್ಲ ಎಂದು ಯೋಚಿಸಿರುವಂತೆ ಕಾಣುತ್ತದೆ. ಇದನ್ನು ಹಲವಾರು ವ್ಯಂಗ್ಯಚಿತ್ರಕಾರರು, ಪತ್ರಿಕಾ ಸಂಪಾದಕೀಯಗಳು ಮತ್ತು ಟಿಪ್ಪಣಿಗಾರರು ಗಮನಿಸಿದ್ದಾರೆ. ಅವರೆಲ್ಲರ ಭಾವನೆ ತಪ್ಪು ಎಂದು ಚುನಾವಣಾ ಆಯೋಗ ಸಾಬೀತು ಮಾಡುತ್ತದೆ, ಮತ್ತು ಕ್ಷಿಪ್ರ ಹಾಗೂ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ.

ನಿಮ್ಮ ವಿಶ್ವಾಸಿ,

ಸೀತಾರಾಮ್‍ ಯೆಚುರಿ, ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *