ವಿಶ್ವಾಸಮತಕ್ಕಾದ ಸೋಲು ಪ್ರಜಾಸತ್ತೆಗಾದ ಹಿನ್ನಡೆ

ಮೊನ್ನೆ ವಿಧಾನ ಸಭೆಯಲ್ಲಾದ ವಿಶ್ವಾಸ ಮತದ ಸೋಲು ದೇಶದ ಪ್ರಜಾಸತ್ತೆಗಾದ ತೀವ್ರ ಹಿನ್ನಡೆ ಎಂದು ಸಿಪಿಐಎಂ ರಾಜ್ಯ ಸಮಿತಿ ತನ್ನ ಆತಂಕವನ್ನು ವ್ಯಕ್ತ ಪಡಿಸಿದೆ. ಅಧಿಕಾರ ಮತ್ತು ಹಣದಾಹಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆದು ರಾಜಿನಾಮೆ ಕೊಡಿಸುವಲ್ಲಿ ಮತ್ತು ಮುಂಬೈಗೆ ಕಳುಹಿಸಿ ಕೂಡಿಹಾಕುವಲ್ಲಿ ಈ ಬಾರಿ ಬಿಜೆಪಿಯ ಕುತಂತ್ರ ಯಶಸ್ವಿಯಾಗಿದೆ.

ಮಾತ್ರವಲ್ಲಾ ವಿಪ್ ಜಾರಿಗೊಳಿಸಿ ಅನರ್ಹತೆಯ ಅಂಜಿಕೆಯನ್ನು ಮುಂದೆ ಮಾಡಿ ವಾಪಾಸು ಕರೆಸಿಕೊಳ್ಳುವ ಕಾಂಗ್ರೆಸ್ ಮತ್ತು ಜೆಡಿಎಸ್ ಗಳ ಪ್ರಯತ್ನವನ್ನು ವಿಫಲಗೊಳಿಸಿದೆ.

ಕಳೆದ 15 ತಿಂಗಳಿನಿಂದಲೂ ಬಿಜೆಪಿ ಸುಮಾರು 05 ಬಾರಿ ಇಂತಹ ವಿಫಲ ಯತ್ನಗಳನ್ನು ನಡೆಸುತ್ತಾ ರಾಜ್ಯದ ಮೈತ್ರಿ ಸರಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸುವ ಜನದ್ರೋಹಿ ಕೆಲಸವನ್ನು ಅದು ಮುನ್ನಡೆಸಿದುದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದಾಗಿದೆ.

225 ಸದಸ್ಯ ಬಲದ ಶಾಸನ ಸಭೆಯಲ್ಲಿ ಸರಳ ಬಹುಮತವನ್ನು ಹೊಂದಲು ಕನಿಷ್ಠ 113 ಶಾಸಕ ಬಲವನ್ನು ಸ್ವತಃವಾಗಲೀ ಇಲ್ಲವೇ ಇತರರ ಬೆಂಬಲದಿಂದಾಗಲೀ ಹೊಂದಿದ್ದಲ್ಲಿ ಮಾತ್ರವೇ ಸರಕಾರ ರಚನೆ ಸಾದ್ಯವೆಂಬುದು ಮತ್ತು ತನಗೆ ಅಂತಹ ಬಲ ವಿಧಾನಸಭೆಯಲ್ಲಿ ಇಲ್ಲವೆಂಬುದು ಬಿಜೆಪಿಗೆ ಚೆನ್ನಾಗಿಯೇ ಗೊತ್ತಿತ್ತು. ಆದಾಗ್ಯೂ ತಾನೊಂದು ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುವ ಬದಲು ಇಂತಹ ಪ್ರಜಾಸತ್ತೆಯನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಕೈ ಹಾಕಿರುವುದು ಖಂಡನೀಯವಾಗಿದೆ.

ಹೇಗಾದರೂ ಮಾಡಿ, ಅಧಿಕಾರ ಪಡೆಯಲು, ಅದಕ್ಕಿದ್ದದ್ದು ಒಂದೇ ಅನೈತಿಕ ಮತ್ರು ಅಕ್ರಮ ಮಾರ್ಗ. ಅದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ರಾಜಿನಾಮೆ ಕೊಡಿಸುವುದು.

ಇದೀಗ ಮೈತ್ರಿ ಸರಕಾರದ ಕನಿಷ್ಠ 16 ಶಾಸಕರನ್ನು ಕೋಟಿ ಕೋಟಿ ರೂ. ಹಣ ನೀಡುವ ಮತ್ತು ಮಂತ್ರಿಗಳನ್ನಾಗಿಸುವ ಅಧಿಕಾರದ ಅಮಿಷವೊಡ್ಡಿ ಅವರಿಂದ ರಾಜಿನಾಮೆ ಕೊಡಿಸಿ, ಮೈತ್ರಿ ಸರಕಾರವನ್ನು ಉರುಳಿಸಿದೆ.

ಅಮಿಷಕ್ಕೆ ಬಲಿಯಾಗಿ ಜನತೆಗೆ ವಿಶ್ವಾಸ ದ್ರೋಹ ಎಸಗಲು ಮುಂದಾದ ಶಾಸಕರನ್ನು ಮುಂಬೈಗೆ ಕಳುಹಿಸುವಲ್ಲಿ ಮತ್ತು ಮುಂಬೈ ಹೋಟೆಲ್ ನಲ್ಲಿ ಪಕ್ಷದ ಮುಖಂಡರು ಮತ್ತು ರಾಜ್ಯ ಸರಕಾರದ ಮಂತ್ರಿಗಳು, ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡದಂತೆ ಅಕ್ರಮದಲ್ಲಿ ತೊಡಗಲು ಮಹಾರಾಷ್ಟ್ರ ರಾಜ್ಯ ಸರಕಾರ ಮತ್ತು ಅಲ್ಲಿನ ಪೋಲೀಸ್ ಇಲಾಖೆಯ ದುರುಪಯೋಗ ಮಾಡಿಕೊಂಡಿತು.

ಅದು ಮಾತ್ರವಲ್ಲಾ, ಮಗದೊಮ್ಮೆ,ರಾಜ್ಯದ ರಾಜ್ಯಪಾಲರ ಕಛೇರಿಯ ದುರ್ಬಳಕೆ ಮಾಡಿಕೊಂಡು ಬೇಗನೇ ವಿಶ್ವಾಸ ಮತ ಯಾಚಿಸುವಂತೆ ರಾಜ್ಯಪಾಲರ ಮೂಲಕ ಮುಖ್ಯಮಂತ್ರಿಗಳ  ಹಾಗೂ ಸಭಾದ್ಯಕ್ಷರ ಮೇಲೆ ತೀವ್ರ ಒತ್ತಡ ಹೇರಿತು. ಆ ಮೂಲಕ ತಮ್ಮ ಅಕ್ರಮವು ವಿಧಾನ ಸಭೆಯ ಚರ್ಚೆಯ ಮೂಲಕ ರಾಜ್ಯ ಹಾಗೂ ದೇಶದ ಜನತೆ ಗಮನಕ್ಕೆ ಬಾರದಂತೆ ಮುಚ್ಚಿಡಲು ಯತ್ನಿಸಿರುವುದನ್ನು ಮತ್ತು ಒಟ್ಟಾರೇ ಬಿಜೆಪಿಯ ಅಕ್ರಮವನ್ನು ಇಡೀ ದೇಶವೇ ನಿಬ್ಬೆರಗಾಗಿ ನೋಡಿರುವಾಗ ಶಾಸಕರ ರಾಜಿನಾಮೆಯಲ್ಲಿ ತನ್ನದೇನು ಪಾತ್ರವಿಲ್ಲವೆಂದು ಜನತೆಗೆ ಮತ್ತೊಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಮೂಲಕ ಬಿಜೆಪಿ, ತಾನೊಂದು ನೈತಿಕತೆಯ ಗಂಧ ಗಾಳಿಯೇ ಇಲ್ಲದ ಲಜ್ಜೆಗೇಡಿ ಪಕ್ಷವೆಂಬುದನ್ನು ಸಾಬೀತುಪಡಿಸಿಕೊಂಡಿದೆ.

ಭ್ರಷ್ಠತೆಯ ಆಪರೇಷನ್ ಕಮಲ, ಯುನಿಯನ್ ಸರಕಾರದ ಅಧಿಕಾರ ದುರುಪಯೋಗ ಮತ್ತು ಧಾಳಿ ಹಾಗೂ ಬೆದರಿಕೆ ಮುಂತಾದ ಅನೈತಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳ ಮೂಲಕ, ದೇಶದಾದ್ಯಂತ ವಿರೋಧ ಮುಕ್ತ ಭಾರತ ನಿರ್ಮಾಣ ಮಾಡುವ ಬಿಜೆಪಿ ಮತ್ರು ಸಂಘ ಪರಿವಾರದ ಅಧಿಕಾರ ದಾಹಿ ಅನೈತಿಕ ಯೋಜನೆ ಭಾಗವೇ ಆಗಿರುವ ವಿದ್ಯಮಾನವನ್ನು ಜನತೆ ಕಂಡಿದೆ.

ರಾಜ್ಯದ ಜನತೆ ಈ ಪ್ರಜಾಪ್ರಭುತ್ವ ವಿರೋಧಿ, ಜನದ್ರೋಹಿ ಬಿಜೆಪಿಗೆ ಸರಿಯಾದ ಪಾಠವನ್ನು ಕಲಿಸಲು ಮತ್ತು ಪ್ರಜಾಸತ್ತೆಯನ್ನು ಉಳಿಸಿ ಬಲಪಡಿಸಲು ರಾಜ್ಯದ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆ ಕೈ ಬಲಪಡಿಸ ಬೇಕೆಂದು ಸಿಪಿಐಎಂ ಜನತೆಯಲ್ಲಿ ಮನವಿ ಮಾಡುತ್ತದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *