ಅಸ್ಸಾಂ ಎನ್‌ಆರ್‌ಸಿ: ಎಲ್ಲರಿಗೂ ನ್ಯಾಯ ಒದಗಿಸಬೇಕು

ಬಂಧನ ಶಿಬಿರ ವ್ಯವಸ್ಥೆಯನ್ನು ರದ್ದು ಮಾಡಬೇಕು -ಎಡಪಕ್ಷಗಳ ಆಗ್ರಹ

ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ದಾಖಲೆ(ಎನ್‌.ಆರ್‌.ಸಿ) ಅಂತಿಮ ಪಟ್ಟಿ ನಾಗರಿಕತ್ವಕ್ಕೆ ಅರ್ಜಿ ಹಾಕಿರುವವರಲ್ಲಿ ೧೯.೦೬ ಲಕ್ಷ ಮಂದಿಯನ್ನು ಕೈಬಿಟ್ಟಿದೆ. ಇವರಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತದ ನಾಗರಿಕರಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಆದ್ದರಿಂದ ಇಂತಹವರ ಮನವಿಗಳ ವಿಚಾರಣೆ ನಡೆಸಿ ನಿರ್ಧರಿಸಲು ಒಂದು ನ್ಯಾಯಯುತ ಪ್ರಕ್ರಿಯೆ ಇರುವಂತೆ ಮಾಡುವುದು ಅಗತ್ಯವಾಗಿದೆ. ಈಗ ಹೇಳಿರುವ ವಿಧಾನವೆಂದರೆ, ಹೀಗೆ ಕೈಬಿಡಲಾದವರು ೧೨೦ ದಿನಗಳೊಳಗೆ ನಿರ್ಧಾರಿತ ವಿದೇಶೀಯರ ನ್ಯಾಯಮಂಡಳಿಗಳಿಗೆ ಅರ್ಜಿ ಸಲ್ಲಿಸಬೇಕು. ಈ ನ್ಯಾಯಮಂಡಳಿ ಒಂದು ನ್ಯಾಯಾಂಗ ಸಂಸ್ಥೆ ಅಲ್ಲ. ಅದು ಹೆಚ್ಚಾಗಿ ಕಾರ್ಯಾಂಗದ ರೀತಿಯಲ್ಲೇ ಕೆಲಸ ಮಾಡುವಂತದ್ದು. ಈಗಿರುವ ನಿಯಮಗಳ ಪ್ರಕಾರ, ಅದು ಒಂದು ಅರ್ಜಿ ಸ್ವೀಕಾರಯೋಗ್ಯವೇ ಎಂದು ಪರಿಶೀಲಿಸಿದ ಮೇಲೆಯೇ ಅದನ್ನು ವಿಚಾರಣೆಗೆ ಎತ್ತಿಕೊಳ್ಳಲು ನಿರ್ಧರಿಸುತ್ತದೆ.

ಆದರೆ ಇಂತಹ ಪೂರ್ವ ಪರಿಶೀಲನೆ ಅನಗತ್ಯ. ಒಂದು ನ್ಯಾಯಯುತ ಪ್ರಕ್ರಿಯೆಗಾಗಿ, ಮತ್ತು ಕೈಬಿಡಲಾದವರ ಹಕ್ಕುಗಳ ರಕ್ಷಣೆಗಾಗಿ ಈ ಅರ್ಜಿಗಳು ಒಂದು ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಇತ್ಯರ್ಥಗೊಳ್ಳಬೇಕು. ಆದ್ದರಿಂದ ಅರ್ಜಿಗಳ ವಿಚಾರಣೆಗೆ ನ್ಯಾಯಮಂಡಳಿಗಳಲ್ಲದೆ ಒಂದು ನ್ಯಾಯಾಂಗ ವ್ಯವಸ್ಥೆಯನ್ನು ರಚಿಸಬೇಕು ಎಂದು ಐದು ಎಡಪಕ್ಷಗಳು- ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)ಲಿಬರೇಷನ್, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಮತ್ತು ಆರ್‌ಎಸ್‌ಪಿ – ಆಗ್ರಹಿಸಿವೆ.

ನ್ಯಾಯಮಂಡಳಿಗಳು ವಿದೇಶೀಯರೆಂದು ಘೋಷಿಸುವ ಜನಗಳನ್ನು ಸ್ಥಾನಬದ್ಧತಾ ಶಿಬಿರಗಳಿಗೆ ಕಳಿಸಲಾಗುವುದು. ಈ ಶಿಬಿರಗಳಲ್ಲಿ ಬಂಧಿತರಾದವರಿಗೆ ಪ್ರಾಥಮಿಕ ಮಾನವ ಹಕ್ಕುಗಳೂ ಇರುವುದಿಲ್ಲ. ಜನಗಳನ್ನು ಇಂತಹ ಶಿಬಿರಗಳಲ್ಲಿ ಅನಿರ್ದಿಷ್ಟ ಕಾಲ ಸ್ಥಾನಬದ್ಧತೆಯಲ್ಲಿ ಇಡುವುದು ಕಾನೂನುಬಾಹಿರ ಮತ್ತು ಅಸಂವೈಧಾನಿಕ ಕ್ರಮವಾಗುತ್ತದೆ. ಈ ಬಂಧನ ಶಿಬಿರ ವ್ಯವಸ್ಥೆಯನ್ನು ರದ್ದು ಮಾಡಬೇಕು ಎಂದೂ ಎಡಪಕ್ಷಗಳು ಆಗ್ರಹಿಸಿವೆ.

ಅಸ್ಸಾಂನ ಬಿಜೆಪಿ ಎನ್‌.ಆರ್‌.ಸಿ. ಪಟ್ಟಿಯ ಮರು ಪರೀಕ್ಷಣೆ ನಡೆಸಬೇಕು ಅಥವ ಹೊಸದೊಂದು ಎನ್‌.ಆರ್‌.ಸಿ.ಯನ್ನೇ ನಡೆಸಬೇಕು ಎಂದು ಆಗ್ರಹಿಸುತ್ತಿದೆ. ಇದನ್ನು ಮಾಡಬಾರದು, ಏಕೆಂದರೆ ಇದು ಅದರ ಕೋಮುವಾದಿ ಮತ್ತು ವಿಭಜನಕಾರೀ ಅಜೆಂಡಾವನ್ನು ಮುಂದೊತ್ತಲಿಕ್ಕಾಗಿ ಮಾತ್ರ. ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳಬೇಕು, ಎನ್‌.ಆರ್‌.ಸಿ.ಯಿಂದ ಹೊರಗಿಟ್ಟಿರುವವರನ್ನು ಯಾವುದೇ ರೀತಿಯಲ್ಲಿ ಗುರಿಮಾಡಲು ಬಿಡಬಾರದು ಎಂದು ಅಸ್ಸಾಂನ ಜನತೆಯನ್ನು ಎಡಪಕ್ಷಗಳು ವಿನಂತಿಸಿಕೊಂಡಿವೆ.

ಬಿಜೆಪಿ ಸರಕಾರ ಈ ಎನ್‌.ಆರ್‌.ಸಿ. ಪ್ರಕ್ರಿಯೆಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಬಗ್ಗೆ ಮಾತಾಡುತ್ತಿದೆ. ಇದು ಸಂಪೂರ್ಣವಾಗಿ ಅನಗತ್ಯ, ಕೆಲವು ಜನವಿಭಾಗಗಳ ಮೇಲೆ ಗುರಿಯಿಡುವುದು ಮತ್ತು ಧ್ರುವೀಕರಣವನ್ನು ಸೃಷ್ಟಿಸುವುದೇ ಇದರ ಉದ್ದೇಶ. ಭಾರತದ ಇತರೆಡೆಗಳಿಗೆ ಎನ್‌.ಆರ್‌.ಸಿ. ಪ್ರಕ್ರಿಯೆಯನ್ನು ಯಾವುದೇ ಸ್ವರೂಪದಲ್ಲಿ ವಿಸ್ತರಿಸುವುದನ್ನು ತಾವು ವಿರೋಧಿಸುವುದಾಗಿ ಎಡಪಕ್ಷಗಳು ಹೇಳಿವೆ.

Leave a Reply

Your email address will not be published. Required fields are marked *