ಮದ್ರಾಸ್‍ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವರ್ಗಾವಣೆ, ಮಹಿಳೆಯರಿಗೇ ಮಾಡಿರುವ ಅವಮಾನ – ಬೃಂದಾ ಕಾರಟ್

ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿಜಯಾ ತಹಿಲ್ರಮಣಿಯವರ ವರ್ಗಾವಣೆ ಮತ್ತು ತದನಂತರ ಅವರ ರಾಜೀನಾಮೆಯ ಸುದ್ದಿ  ಅತ್ಯಂತ ಆಘಾತಕಾರಿ ಮತ್ತು ಆತಂಕಕಾರಿ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍ ಹೇಳಿದ್ದಾರೆ.

ನ್ಯಾಯಾಧೀಶರುಗಳ ನೇಮಕ ಮಾಡುವ ಸುಪ್ರಿಂ ಕೋರ್ಟಿನ ಐದು ಹಿರಿಯ ನ್ಯಾಯಾಧೀಶರ ಕೊಲೇಜಿಯಂ ಅವರನ್ನು ಆಗಸ್ಟ್ 28ರಂದು ಮೇಘಾಲಯ ಹೈಕೋರ್ಟಿಗೆ ವರ್ಗಾವಣೆ ಮಾಡಿತ್ತು. ಇದನ್ನು ಮರುಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ವಿಜಯಾ ತಹಿಲ್ರಮಣಿ ಕೊಲೇಜಿಯಂಗೆ ಮನವಿ ಮಾಡಿಕೊಂಡರು. ಆದರೆ ಇದು ನ್ಯಾಯಾಂಗದ ಅಗತ್ಯಗಳಿಗೆ ಅನುಗುಣವಾಗಿ ಸಾಮಾನ್ಯವಾಗಿ ನಡೆಯುವ ವರ್ಗಾವಣೆ ಎನ್ನುತ್ತ ಅವರ ಕೋರಿಕೆಯನ್ನು ತಿರಸ್ಕರಿಸಲಾಯಿತು. ಈ ಹಿನ್ನೆಲೆಯಲ್ಲಿ ಅವರು ಮುಖ್ಯ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

75 ನ್ಯಾಯಾಧೀಶರುಗಳಿರುವ ಒಂದು ದೊಡ್ಡ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಅವರನ್ನು ಕೇವಲ ಇಬ್ಬರು ನ್ಯಾಯಾಧೀಶರಿರುವ ದೇಶದ ಅತಿ ಸಣ್ಣ ಹೈಕೋರ್ಟಿಗೆ ವರ್ಗ ಮಾಡಿರುವುದನ್ನು ‘ಸಾಮಾನ್ಯ’ ಎಂದು ಹೇಳಲು ಸಾಧ್ಯವಿಲ್ಲ. ಇದು ಅವರಿಗೆ ಮಾಡಿರುವ ಅವಮಾನ ಮತ್ತು ವಿಧಿಸಿರುವ ಹಿಂಬಡ್ತಿಯೆಂದೇ ಹೇಳಬಹುದು ಎಂದು ಬೃಂದಾ ಕಾರಟ್‍ ಟಿಪ್ಪಣಿ ಮಾಡಿದ್ದಾರೆ. ಅವರಿಗೆ ಒಂದು ವರ್ಷದ ಹಿಂದೆಯಷ್ಟೇ ಮದ್ರಾಸ್ ‍ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಬಡ್ತಿ ನೀಡಲಾಗಿತ್ತು. ಅದಕ್ಕೆ ಮೊದಲು ಅವರು ಸ್ವಲ್ಪ ಕಾಲ ದೇಶದ ಇನ್ನೊಂದು ದೊಡ್ಡ ಹೈಕೋರ್ಟ್ ಆಗಿರುವ ಮುಂಬೈ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿಯೂ ಕಾರ್ಯನಿರ್ವಹಿಸಿದ್ದರು.

ಉನ್ನತ ಮಟ್ಟದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯೇ ಕಡಿಮೆ. ಅಲ್ಲದೆ ಅವರು ನ್ಯಾಯಾಧೀಶರಾಗಿ ನಿಷ್ಕಳಂಕ ದಾಖಲೆ ಹೊಂದಿರುವವರು ಮತ್ತು ದೇಶದ ಹೈಕೋರ್ಟ್ ನ್ಯಾಯಾಧೀಶರುಗಳಲ್ಲಿ ಅತ್ಯಂತ ಹಿರಿಯರಲ್ಲಿ ಒಬ್ಬರು. ಆದ್ದರಿಂದ ಅವರೊಂದಿಗೆ ಇಂತಹ ನಡವಳಿಕೆ ಅವರಿಗೆ ಮಾತ್ರವಲ್ಲ, ಒಟ್ಟು ಮಹಿಳೆಯರಿಗೇ ಮಾಡಿರುವ ಅವಮಾನ ಎಂದು ಬೃಂದಾ ಕಾರಟ್ ‍ಖೇದ ವ್ಯಕ್ತಪಡಿಸಿದ್ದಾರೆ.

ಈ ಇಡೀ ಪ್ರಕರಣ ನ್ಯಾಯಾಂಗದಲ್ಲಿನ ನೇಮಕಗಳು ಮತ್ತು ವರ್ಗಾವಣೆಗಳ ವ್ಯವಸ್ಥೆಯಲ್ಲಿ ಇರುವ ಅಪಾರದರ್ಶಕ ವ್ಯವಸ್ಥೆ ಎಷ್ಟು ಅತೃಪ್ತಿಕರವಾಗಿದೆ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿದೆ ಎಂದು ಬೃಂದಾ ಕಾರಟ್‍ ಹೇಳಿದ್ದಾರೆ.

Leave a Reply

Your email address will not be published. Required fields are marked *