ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಬಿಡಿಸಿ ಚುನಾವಣೆಗಳ ಪ್ರಹಸನ

“ದೇಶದ ಗೃಹಮಂತ್ರಿಗಳು ಅಸತ್ಯಗಳ ಮೂಲಕ ದೇಶವನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು”

ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ಟೋಬರ್‍ 24ರಂದು ಬ್ಲಾಕ್‍ ಆಭಿವೃದ್ಧಿ ಮಂಡಳಿ(ಬಿಡಿಸಿ)ಗಳಿಗೆ ಮತದಾನ ನಡೆಯುತ್ತದೆ  ಎಂದು ಅಲ್ಲಿನ ಮುಖ್ಯ ಚುನಾವಣಾ ಆಯುಕ್ತರು ಪ್ರಕಟಿಸಿರುವುದು ಪ್ರಜಾಪ್ರಭುತ್ವದ ಒಂದು ಅಣಕ. ಇದು, ವಾಸ್ತವವಾಗಿ ಅಲ್ಲಿ ಕಳೆದ ಎರಡು ತಿಂಗಳಿಂದ ಸಂಪರ್ಕಗಳನ್ನು, ನಾಗರಿಕರ ಚಲವಲನಗಳನ್ನು ಹಿಂದೆಂದೂ ಕಾಣದ ರೀತಿಯಲ್ಲಿ ನಿರ್ಬಂಧಿಸಿಟ್ಟಿದ್ದರೂ, ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಈಗಲೂ ಜೈಲುಗಳಲ್ಲಿಟ್ಟಿದ್ದರೂ, ಪರಿಸ್ಥಿತಿ “ಸಾಮಾನ್ಯವಾಗಿದೆ” ಎಂದು ಜಗತ್ತಿಗೆ ಚಿತ್ರಿಸುವ ಒಂದು ಪ್ರಯತ್ನ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಟೀಕಿಸಿದೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಬಿಡಿಸಿ ಗಳಿಗೆ ಚುನಾವಣೆಯೆಂಬುದು ಕಪಟತನವಲ್ಲದೇ ಬೇರೇನೂ ಅಲ್ಲ ಎಂದು ಅದು ಹೇಳಿದೆ.

ಇದಲ್ಲದೆ, ಬಿಡಿಸಿ ಚುನಾವಣೆಗಳಲ್ಲಿ ಮತನೀಡಬೇಕಾದವರು ಗ್ರಾಮ ಪಂಚಾಯತುಗಳ ಚುನಾಯಿತ ಪಂಚರು ಮತ್ತು ಸರಪಂಚರು. ಆದರೆ 61%ಕ್ಕೂ ಹೆಚ್ಚು ಪಂಚರು ಮತ್ತು ಸರಪಂಚರ ಸ್ಥಾನಗಳು ಖಾಲಿಯಾಗಿಯೇ ಉಳಿದಿದೆ. ಏಕೆಂದರೆ ಡಿಸೆಂಬರ್‍ 2018ರಲ್ಲಿ ನಡೆದ ಚುನಾವಣೆಗಳಲ್ಲಿ ಜನಗಳು, ವಿಶೇಷವಾಗಿ ಕಣಿವೆಯ 138 ಬ್ಲಾಕುಗಳಲ್ಲಿ, ಮತದಾನದಲ್ಲಿ ಭಾಗವಹಿಸಲಿಲ್ಲ. ಬಿಡಿಸಿ ಚುನಾವಣೆಗಳನ್ನು ನಡೆಸುವ ಮೊದಲು ರಾಜ್ಯ ಚುನಾವಣಾ ಆಯೋಗ ಈ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣೆಗಳನ್ನು ನಡೆಸಬೇಕಾಗಿತ್ತು ಎಂಬುದು ಸ್ವಯಂವೇದ್ಯ.

ಈ ಸಮಸ್ತ ಪ್ರಹಸನಕಾರೀ ಕಸರತ್ತನ್ನು ಯೋಜಿಸಿರುವುದು ಕೇಂದ್ರ ಸರಕಾರ. ಅದೇ ಸಮಯದಲ್ಲಿ ದೇಶದ ಗೃಹಮಂತ್ರಿ ಅಮಿತ್‍ ಷಾ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ನಿರ್ಬಂಧಗಳಿಲ್ಲ, ಇವೆಲ್ಲವೂ ಇರುವುದು ಸರಕಾರವನ್ನು ವಿರೋಧಿಸುವ ಪ್ರತಿಪಕ್ಷಗಳ ಮನಸ್ಸಿನಲ್ಲಿ ಮಾತ್ರ ಎಂದು ಹೇಳಿಕೆ ನೀಡಿದ್ದಾರೆ. ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಎಷ್ಟು ರೋಗಿಗಳಿದ್ದಾರೆ, ಎಷ್ಟು ಟೆಲಿಫೋನ್‍ ಲೈನುಗಳು ಕೆಲಸ ಮಾಡುತ್ತಿವೆ ಎಂಬ ಅಂಕೆ-ಸಂಖ್ಯೆಗಳನ್ನು ಉದ್ಧರಿಸುವ ಬದಲು, ಅವರು ಇಂಟರ್ನೆಟ್‍ ಮತ್ತು ಮೊಬೈಲ್‍ ಫೋನ್‍ ಸಂಪರ್ಕಗಳನ್ನು ಏಕೆ ಮತ್ತೆ ನೀಡಿಲ್ಲ, ಮುಖ್ಯ ಬಾಜಾರುಗಳು ಮತ್ತು ಅಂಗಡಿಗಳು ಈಗಲೂ ಏಕೆ ಮುಚ್ಚಿವೆ, ಶಾಲೆಗಳು ಏಕೆ ನಡೆಯುತ್ತಿಲ್ಲ, ಕಚೇರಿಗಳಲ್ಲಿ ಹಾಜರಾತಿ ಈಗಲೂ ಏಕೆ ಕಡಿಮೆಯಿದೆ ಮತ್ತು ಎಲ್ಲ ಮುಖಂಡರೂ ಇನ್ನೂ ಏಕೆ ಜೈಲುಗಳಲ್ಲಿದ್ದಾರೆ ಎಂದು  ಪ್ರಶ್ನಿಸುತ್ತ ಇವಕ್ಕೆಲ್ಲ ಮೊದಲು ಉತ್ತರ ಕೊಡಬೇಕಾಗಿತ್ತು, ಇವೆಲ್ಲ ಕೇವಲ ನಿರ್ಬಂಧಗಳಲ್ಲ, ಪ್ರಜಾಪ್ರಭುತ್ವದ ಮೇಲೆ ಮುಂದುವರೆಯುತ್ತಿರುವ  ಹೊಡೆತಗಳು ಎಂದು ಪೊಲಿಟ್‍ ಬ್ಯುರೊ ವರ್ಣಿಸಿದೆ. ದೇಶದ ಗೃಹಮಂತ್ರಿಗಳು ಅಸತ್ಯಗಳ ಮೂಲಕ ದೇಶವನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಅದು ಆಗ್ರಹಿಸಿದೆ.

ಸಾಮಾನ್ಯ ಸ್ಥಿತಿ ಮತ್ತೆ ನೆಲೆಗೊಳ್ಳುವಂತೆ ಮಾಡಬೇಕು, ಎಲ್ಲ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಮತ್ತು ರಾಜಕೀಯ ಚಟುವಟಿಕೆಯ ಹಕ್ಕನ್ನು ಮತ್ತೆ ನೆಲೆಗೊಳಿಸಿದ ಮೇಲೆಯೇ ಚುನಾವಣೆಗಳನ್ನು ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಪುನರುಚ್ಚರಿಸಿದೆ.

Leave a Reply

Your email address will not be published. Required fields are marked *