ಆರ್ಥಿಕ ಯಾತನೆಗಳನ್ನು ಆಳಗೊಳಿಸುವ ಕೇಂದ್ರ ಬಜೆಟ್

ಮತ್ತಷ್ಟು ಕಷ್ಟಕೋಟಲೆಗಳನ್ನು, ಸಂಕಟಗಳನ್ನು ಹೇರುತ್ತಿರುವುದರ ವಿರುದ್ಧ ಪ್ರತಿಭಟನೆಗಳನ್ನು ತೀವ್ರಗೊಳಿಸಲು ಜನತೆಗೆ ಕರೆ

ಹಣಕಾಸು ಮಂತ್ರಿಗಳ ಬಜೆಟ್ ಭಾಷಣ ದೇಶವನ್ನು ಈಗ ಆವರಿಸಿರುವ ಬಿಕ್ಕಟ್ಟನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಯಾವ ಹೊಳಹೂ ಈ ಸರಕಾರದ ಬಳಿ ಇಲ್ಲ ಎಂಬುದನ್ನು ಪ್ರಕಟಪಡಿಸಿದೆ ಎಂದು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಫೆಬ್ರುವರಿ ೧ರಂದು ಮಂಡಿಸಿರುವ ಬಜೆಟ್ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಸಮಸ್ಯೆಗಳನ್ನು ನೇರವಾಗಿ ಎದುರಿಸುವ ಒಂದು ಸುಸಂಗತ ಧೋರಣೆಯ ಬದಲು, ಎರಡೂವರೆ ಗಂಟೆಗಳ ಕಾಲ ಸಂಕಟಗ್ರಸ್ತ ಅರ್ಥವ್ಯವಸ್ಥೆಯ ವಾಸ್ತವತೆಗಳನ್ನು ಮರೆಮಾಚುವ ಸ್ವಗತವಷ್ಟೇ ಕಂಡು ಬಂತು  ಎಂದು ಅದು ಈ ಬಾರಿಯ ಬಜೆಟ್ ಭಾಷಣವನ್ನು ವರ್ಣಿಸಿದೆ.

budget 2020-21ಜನಗಳ ಕಲ್ಯಾಣಕ್ಕೆ  ಮಾಡುವ ವೆಚ್ಚಗಳಲ್ಲಿ ಮತ್ತಷ್ಟು ಕಡಿತ ಮತ್ತು ಕಾರ್ಪೊರೇಟ್‌ಗಳಿಗೆ ಮತ್ತು ಶ್ರೀಮಂತರಿಗೆ ಮತ್ತಷ್ಟು ರಿಯಾಯ್ತಿಗಳು ಹಾಗೂ ಇದಕ್ಕಾಗಿ ದೇಶದ ಆಸ್ತಿಗಳ ಮಾರಾಟದ ಚಾಳಿಯೂ ಮುಂದುವರೆದಿದೆ. ಸರಕಾರ ಎಷ್ಟೊಂದು ಹತಾಶಗೊಂಡಿದೆಯೆಂದರೆ ಅದು ತನ್ನ ಸ್ಕೀಮುಗಳಿಗೆ ಎಲ್ಲರಿಗಿಂತ ಹೆಚ್ಚು ಹಣ ಒದಗಿಸುತ್ತಿರುವ, ಒಂದು ಪ್ರತೀಕವೇ ಆಗಿಬಿಟ್ಟಿರುವ  ಎಲ್‌ಐಸಿ ಯಲ್ಲಿನ ತನ್ನ ಶೇರುಗಳನ್ನೂ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖೇದ ವ್ಯಕ್ತಪಡಿಸಿದೆ.

೨೦೨೦-೨೧ ರಲ್ಲಿ ಜಿಡಿಪಿಯಲ್ಲಿ ಪ್ರಸಕ್ತ ಬೆಲೆಗಳಲ್ಲಿ ೧೦% ಹೆಚ್ಚಳವಾಗುತ್ತದೆ ಎಂದು ಅಂದಾಜು ಮಾಡಿಯೂ ವೆಚ್ಚಗಳಲ್ಲಿ ಖರ್ಚುಗಳ ಬಾಬ್ತುಗಳಲ್ಲಿ  ಕಳೆದ ವರ್ಷದ ಬಜೆಟಿಗಿಂತ ೯.೨% ಹೆಚ್ಚಳವನ್ನಷ್ಟೇ ಮಾಡಲಾಗಿದೆ. ಹಿಂದಿನ ವರ್ಷಗಳ ಅನುಭವಗಳಿಂದ ಹೇಳುವುದಾದರೆ, ವಿತ್ತೀಯ ಕೊರತೆಯ ಪ್ರಮಾಣವನ್ನು ಕಾಯ್ದುಕೊಳ್ಳಲೆಂದು ಇಷ್ಟನ್ನೂ ಕೂಡ ಖರ್ಚು ಮಾಡುವ ಸಂಭವವಿಲ್ಲ.

ಆದ್ದರಿಂದ ಈ ಕೇಂದ್ರ ಬಜೆಟ್ ಆರ್ಥಿಕ ಮಂದಗತಿಯನ್ನು ಎದುರಿಸುವ ಬದಲು ಬೇಡಿಕೆಯ ಕೊರತೆಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ, ಮತ್ತು ವ್ಯಾಪಕಗೊಂಡಿರುವ ಆರ್ಥಿಕ ಯಾತನೆಗಳನ್ನು ಇನ್ನಷ್ಟು ಆಳಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ನಮ್ಮ ದೇಶದ ಆಸ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವುದರ ವಿರುದ್ಧ, ಎಲ್‌ಐಸಿ ಮತ್ತು ವಿಮಾವಲಯದಲ್ಲಿ ಶೇರು ಮಾರಾಟದ ವಿರುದ್ಧ, ನಮ್ಮ ಬಹುಪಾಲು ಜನಗಳ ಮೇಲೆ ಮತ್ತಷ್ಟು ಕಷ್ಟಕೋಟಲೆಗಳನ್ನು, ಸಂಕಟಗಳನ್ನು ಹೇರುತ್ತಿರುವುದರ ವಿರುದ್ಧ ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು ಎಂದು ಜನತೆಗೆ ಕರೆ ನೀಡಿದೆ.

ಮಾಹಿತಿಗಳನ್ನು ತಿರುಚುವ ವಂಚಕ ಪ್ರಯತ್ನಗಳೇನೇ ಮಾಡಿದರೂ, ಆರ್ಥಿಕ ಬಿಕ್ಕಟ್ಟು ಬಜೆಟಿನ ಅಂಕೆ-ಸಂಖ್ಯೆಗಳಲ್ಲಿ ಪ್ರಕಟಗೊಂಡಿದೆ. ಇದು, ಮೋದಿ ಸರಕಾರಕ್ಕೆ ಕಾರ್ಪೊರೇಟ್ ವಲಯಕ್ಕೆ ಮತ್ತು ಶ್ರೀಮಂತರಿಗೆ ಪರಿಹಾರ ಕೊಡುವುದರಲ್ಲಿಯೇ ಆಸಕ್ತಿಯೇ ಹೊರತು, ಆರ್ಥಿಕ ಮಂದಗತಿಗೆ ಮೂಲ ಕಾರಣವಾದ,  ದುಡಿಯುವ ಜನಗಳು-ಕಾರ್ಮಿಕರು, ರೈತರು ಮತ್ತು ಸ್ವ ಉದ್ಯೋಗಕ್ಕೆ ತಳ್ಳಲ್ಪಟ್ಟವರ ಹೆಚ್ಚೆಚ್ಚು ಗಂಭೀರಗೊಳ್ಳುತ್ತಿರುವ ಉದ್ಯೋಗ ಮತ್ತು ಜೀವನಾಧಾರದದ ಪರಿಸ್ಥಿತಿಗಳನ್ನು ಎದುರಿಸುವ ಬಗ್ಗೆ ಏನೇನೂ ಆಸಕ್ತಿಯಿಲ್ಲ ಎಂಬುದನ್ನು ಇವೆಲ್ಲ ಪ್ರಕಟಗೊಳಿಸುತ್ತಿವೆ.

ಆದಾಯಗಳ ಬಿಕ್ಕಟ್ಟನ್ನು ಎದುರಿಸಬೇಕಾದರೆ ಬೇಢಿಕೆ ಮತ್ತು ಸಂಪನ್ಮೂಲಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಅದಕ್ಕಾಗಿ ವೆಚ್ಚಗಳನ್ನು ಹೆಚ್ಚಿಸುವ ಒಂದು ಕಾರ್ಯಕ್ರಮವನ್ನು ಮುಂದಿಡುವ ಬದಲು, ಈ ಬಜೆಟ್ ಕಸರತ್ತುಗಳು ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವುದಕ್ಕೇ ಈ ಸರಕಾರ ಬದ್ಧವಾಗಿದೆ ಎಮಬುದನ್ನು ತೋರಿಸುತ್ತಿವೆ, ಅದಕ್ಕಾಗಿ  ಇವರ ಬಳಿ ಇರುವುದು ಸರ್ಕಾರದ ಖರ್ಚುಗಳನ್ನು ಕಡಿತ ಮಾಡುವ ಮತ್ತು ದೇಶದ ಆಸ್ತಿಗಳನ್ನು ದೊಡ್ಡ ಕಾರ್ಪೊರೇಟ್‌ಗಳಿಗೆ ಮಾರುವ ಯೋಚನೆಯಷ್ಟೇ. ಇವೆಲ್ಲವುಗಳ ಹೊರೆಯನ್ನು ಅನುಭವಿಸಬೇಕಾದವರು ದೇಶದ ದುಡಿಯುವ ಜನಗಳು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೋ ಈ ಎರಡನೇ ಮೋದಿ ಸರಕಾರದ ಎರಡನೇ ಬಜೆಟನ್ನು ವಿಶ್ಲೇಷಿಸುತ್ತ ಅಭಿಪ್ರಾಯ ಪಟ್ಟಿದೆ.

ವಾಸ್ತವತೆಗಳನ್ನು ಮರೆಮಾಚಲು ಅಂಕಿ-ಅಂಶಗಳಲ್ಲಿ ಕೈಚಳಕ

ಈ ಬಜೆಟಿನಲ್ಲಿನ ಮೊದಲ ಕೈಚಳಕ  ರೆವಿನ್ಯೂ ಅಂಕೆ-ಸಂಖ್ಯೆಗಳ ಪರಿಷ್ಕೃತ ಅಂದಾಜುಗಳಲ್ಲಿ ಕಾಣುತ್ತದೆ ಎಂದು ಪೊಲಿಟ್‌ಬ್ಯುರೊ ವಿಶ್ಲೇಷಿಸಿದೆ. ಪರಿಷ್ಕೃತ ಅಂದಾಜುಗಳು ೨೦೧೮-೧೯ರಲ್ಲಿ ರೆವಿನ್ಯೂ ಸಂಗ್ರಹ ಬಜೆಟಿನಲ್ಲಿ ಅಂದಾಜು ಮಾಡಿದ್ದಕಿಂತ ಬಹಳ ಕಡಿಮೆ ಇದೆ ಎಂದು ತೋರಿಸುತ್ತವೆ. ಆದರೆ ಅವು ಇದರಲ್ಲಿನ ಕೊರತೆಯ ಪ್ರಮಾಣವನ್ನು ನಿಜವಾಗಿ ಇರುವುದಕ್ಕಿಂತ ಕಡಿಮೆ ಮಾಡಿ ತೋರಿಸುತ್ತಿವೆ. ಕೇಂದ್ರೀಯ ತೆರಿಗೆ ಆದಾಯಗಳ ಪರಿಷ್ಕೃತ ಅಂದಾಜುಗಳು ಸಿಜಿಎ ವರದಿ ಮಾಡಿರುವ ಎಪ್ರಿಲ್-ಡಿಸೆಂಬರ್ ೨೦೧೯ರ ಅವಧಿಯ ನಿಜವಾದ ತೆರಿಗೆ ಸಂಗ್ರಹದೊಂದಿಗೆ ತಾಳೆಯಾಗುವುದಿಲ್ಲ. ಒಂದು ವಾಸ್ತವವಾದ ಪರಿಷ್ಕೃತ ಅಂದಾಜು ಕೇಂದ್ರೀಯ ತೆರಿಗೆಗಳ ಸಂಗ್ರಹದಲ್ಲಿ ಸುಮಾರು ೧.೫ಲಕ್ಷ ಕೊಟಿ ರೂ.ಗಳ ಕೊರತೆ ಆಗಿರುವುದನ್ನು ತೋರಿಸುತ್ತಿತ್ತು.

budget 2020-21-2ನಿಜವಾದ ರೆವಿನೂ ಪರಿಸ್ಥಿತಿಯನ್ನು ಮುಚ್ಚಿಡುವ ಈ ಕೃತ್ಯದೊಂದಿಗೆ, ಕೊನೆಗೂ ರೆವಿನ್ನೂ ಸಂಗ್ರಹ ಕಡಿಮೆಯಾದಾಗ ವಿತ್ತೀಯ ಕೊರತೆಯನ್ನು ಎದುರಿಸಲು ಅಂತಿಮವಾಗಿ ವೆಚ್ಚಗಳಲ್ಲಿ ಎಷ್ಟರ ಮಟ್ಟಿಗೆ ಕಡಿತವಾಗಬಹುದು ಎಂಬುದನ್ನು ಪರಿಷ್ಕೃತ ಅಂದಾಜುಗಳಲ್ಲಿ ಪ್ರಕಟ ಪಡಿಸದಿರುವ ಕೃತ್ಯವೂ ಸೇರಿಕೊಂಡಿದೆ. ಇದನ್ನು ಕಳೆದ ವರ್ಷವೂ ಮಾಡಲಾಗಿತ್ತು. ಈ ವರ್ಷ ಅದರ ಪುನರಾವರ್ತನೆಯಾಗಿದೆ. ಈ ಬಜೆಟ್ ಕೂಡ ೨೦೨೦-೨೧ರ ಅಂಕಿ-ಅಂಶಗಳನ್ನು ಅಂದಾಜು ಮಾಡುವಾಗ ಅದೇ ಪಕ್ಷಪಾತವನ್ನು ಬಿಂಬಿಸುತ್ತಿದೆ- ಅಂದರೆ ರೆವಿನ್ಯೂ ಆದಾಯಗಳನ್ನು ಹಿಗ್ಗಿಸಿ ತೋರಿಸುವುದು, ಅದೇ ವೇಳೆಗೆ ವೆಚ್ಚದ  ಬಾಬ್ತುಗಳನ್ನೂ ಹೆಚ್ಚಿಸಲಾಗಿದೆ ಎಂದು  ತೋರಿಸುವುದು, ಆದರೆ ಅಷ್ಟು ಖರ್ಚು ಮಾಡದಿರುವುದು.

ಬಹಳಷ್ಟು ಕೈಚಳಕಗಳ ನಂತರವೂ ೨೦೧೮-೧೯ರ ರೆವಿನ್ಯೂ ಅಂಕಿಯ ಪರಿಷ್ಕೃತ ಅಂದಾಜು ಬಜೆಟ್ ಅಂದಾಜಿಕ್ಕಿಂತ ೨.೯೮ ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಿದೆ. ಇದರಲ್ಲಿ ೧.೫೩ಲಕ್ಷ ಕೊಟಿ ರೂ.ಗಳಷ್ಟು ಹೊಡೆತವನ್ನು ರಾಜ್ಯಗಳು ಅನುಭವಿಸಬೇಕಾಗಿದೆ, ಕೇಂದ್ರೀಯ ತೆರಿಗೆಗಳಲ್ಲಿ ಅವುಗಳ ಪಾಲಿನಲ್ಲಿ ಇಷ್ಟು ಮೊತ್ತದ ಕಡಿತವಾಗುತ್ತದೆ. ಜಿಎಸ್‌ಟಿ ರೆವನ್ಯೂ ಕೊರತೆಗೆ ಸಂಬಂಧಪಟ್ಟಂತೆ ರಾಜ್ಯಗಳಿಗೆ ವರ್ಗಾಯಿಸುವ ಮೊತ್ತ ಪರಿಹಾರ ಸೆಸ್ ಸಂಗ್ರಹಗಳಿಗೆ ಸೀಮಿತವಾಗಿರುತ್ತದೆ ಎಂದೂ ರಾಜ್ಯಗಳನ್ನು ಬೆದರಿಸಲಾಗಿದೆ.  ಕೇಂದ್ರೀಯ ಸರಕಾರದ ವೆಚ್ಚಗಳ ಪರಿಷ್ಕೃತ ಅಂದಾಜು ಕೂಡ ಹಲವು ಬಾಬ್ತುಗಳಲ್ಲಿ ಬಜೆಟ್ ಅಂದಾಜುಗಳಿಗಿಂತ ಬೃಹತ್ ಪ್ರಮಾಣದ ಕಡಿತಗಳಾಗಿರುವುದನ್ನು ತೋರಿಸುತ್ತವೆ. ಇಷ್ಟೆಲ್ಲ ಮಾಡಿದರೂ ವಿತ್ತೀಯ ಕೊರತೆ ಬಜೆಟ್‌ನಲ್ಲಿ ಮಾಡಿದ್ದ ಅಂದಾಜಿಗಿಂತ ಹೆಚ್ಚಾಗಿದೆ.

ಸಾರ್ವಜನಿಕ ವೆಚ್ಚಗಳಲ್ಲಿ ಕಡಿತ

ವಿತ್ತೀಯ ಕೊರತೆ ಈ ರೀತಿ ಹೆಚ್ಚಿರುವುದು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಮಟ್ಟವನ್ನು ಹೆಚ್ಚಿಸಲಿಕ್ಕಾಗಿ ವೆಚ್ಚಗಳನ್ನು ಹೆಚ್ಚಿಸಿದ್ದರಿಂದಾಗಿ ಅಲ್ಲ ಎಂಬುದು ಇಲ್ಲಿರುವ ದುರಂತ.  ಇದರ ಬದಲು ಬೇಡಿಕೆಗಳನ್ನು ವಿಸ್ತರಿಸಬಹುದಾದ ಬಾಬ್ತುಗಳಲ್ಲಿ ವೆಚ್ಚಗಳಲ್ಲಿ ಕಡಿತ ಉಂಟು ಮಾಡಲಾಗಿದೆ; ೨೦೧೯-೨೦ರಲ್ಲಿ ಕೇಂದ್ರೀಯ ವಲಯದ ಸ್ಕೀಮುಗಳಲ್ಲಿ ವೆಚ್ಚಗಳನ್ನು ಬಜೆಟಿನಲ್ಲಿ ತೋರಿಸಿದಕ್ಕೆ ಹೋಲಿಸಿದರೆ ೧೧% ದಷ್ಟು ಕಡಿತ ಮಾಡಲಾಗಿದೆ ಮತ್ತು ಕೇಂದ್ರೀಯ ಪ್ರಾಯೋಜಿತ ಸ್ಕೀಮುಂಗಳಲ್ಲಿ ೪.೫% ದಷ್ಟು ಕಡಿತ ಮಾಡಲಾಗಿದೆ. ಇದರಲ್ಲಿ ಆಹಾರ ಸಬ್ಸಿಡಿ, ಕೃಷಿ ಮತ್ತು ಇತರ ಸಂಬಂಧಪಟ್ಟ ಚಟುವಟಿಕೆಗಳು, ಈಶಾನ್ಯ ಭಾರತದ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ, ವಿದ್ಯುತ್ ಇತ್ಯಾದಿಗಳ ಮೇಲಿನ ವೆಚ್ಚಗಳೂ ಸೇರಿವೆ.

೨೦೨೦-೨೧ ರಲ್ಲಿ ಮಾಡುವ ವೆಚ್ಚಗಳ ಕಡಿತಗಳಲ್ಲಿ ಮನರೇಗಕ್ಕೆ ಮಾಡುವ ವೆಚ್ಚವನ್ನು ಕಳೆದ ವರ್ಷದ ೭೧,೦೦೦ ಕೋಟಿ ರೂ.ಗಳಿಂದ, ಈಗ ೬೧,೫೦೦ ಕೋಟಿ ರೂ.ಗಳಿಗೆ ಕಡಿತ ಮಾಡುವ ಪ್ರಸ್ತಾವ ಮಾಡಲಾಗಿದೆ, ರಸಗೊಬ್ಬರ ಸಬ್ಸಿಡಿ ಕೂಡ ಈ ಕಡಿತದ ಪಟ್ಟಿ ಸೇರಲಿದೆ. ಈ ಸರಕಾರದ ಬಾವುಟ ಮೆರೆಸುವ ಯೋಜನೆಗಳಾದ ಪಿಎಂಜೆಎವೈ-ಆಯುಷ್ಮಾನ್  ಭಾರತ, ಸ್ವಚ್ಛ ಭಾರತ ಮತ್ತು ಪಿಎಂ-ಕಿಸಾನ್ ಕೂಡ ದೊಡ್ಡ ಕಡಿತಗಳನ್ನು ಅನುಭವಿಸಿವೆ. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಕಲ್ಯಾಣಕ್ಕೆ ಮಾಡುವ ವೆಚ್ಚಗಳು ಈಗಾಗಲೇ ಕಾನೂನು ವಿಧಿಸಿರುವುದಕ್ಕಿಂತ ಬಹಳ ಕೇಳಗಿನ ಮಟ್ಟದಲ್ಲಿ ಇವೆ. ೨೦೧೯-೨೦ರಲ್ಲಿ ಅದರಲ್ಲೂ ಕಡಿತ ಮಾಡಲಾಗಿತ್ತು. ೨೦೨೦-೨೧ರ ಲಿಂಗ ಬಜೆಟಿನಲ್ಲೂ ಸ್ಥಗಿತತೆ ಮುಂದುವರೆದಿದೆ.

ಶ್ರೀಮಂತರಿಗೆ ಮತ್ತಷ್ಟು ರಿಯಾಯ್ತಿಗಳಿಗೆ ಮತ್ತಷ್ಟು ಶೇರು ಹಿಂಪಡಿಕೆ

ತೆರಿಗೆ ಪ್ರಸ್ತಾವಗಳಲ್ಲಿ,  ಹಣಕಾಸು ಮಂತ್ರಿಗಳು ಕಾರ್ಪೊರೇಟ್‌ಗಳಿಗೆ ಮತ್ತು ಶ್ರೀಮಂತರಿಗೆ ಮತ್ತಷ್ಟು ತೆರಿಗೆ ರಿಯಾಯ್ತಿಗಳನ್ನು ಪ್ರಕಟಿಸಿದ್ದಾರೆ( ಅತ್ಯಂತ ಶ್ರೀಮಂತ ೧% ಮಂದಿಯ ಬಳಿ, ಅತ್ಯಂತ ಕೆಳಗಿರುವ ೭೦% ಜನಗಳು, ಅಂದರೆ ಸುಮಾರು ೧೦೦ ಕೋಟಿ ಜನಗಳ ಬಳಿಯಿರುವ ಸಂಪತ್ತಿನ ನಾಲ್ಕು ಪಟ್ಟು ಸಂಪತ್ತು ಹೊಂದಿರುವ ನಂತರವೂ ಈ ರಿಯಾಯ್ತಿಗಳು ಬರುತ್ತಿವೆ). ಕಾರ್ಪೊರೇಟ್ ತೆರಿಗೆಗಳಲ್ಲಿ ಈ ಮೊದಲು ಕೊಟ್ಟಿರುವ ರಿಯಾಯ್ತಿಗಳಿಂದ ಈಗಾಗಲೇ ೨೦೧೯-೨೦ರ ಬಜೆಟ್ ಅಂದಾಜುಗಳಿಗಿಂತ ಪರಿಷ್ಕೃತ ಅಂದಾಜುಗಳಲ್ಲಿ ೧.೫೫ ಲಕ್ಷ ಕೋಟಿ ರೂ. ಕೊರತೆ ಕಂಡಿದೆ. ಆದರೂ ೨೦೧೯-೨೦ರ ಈ ಹಿಗ್ಗಿಸಿದ ತೋರಿಸಿದ ತೆರಿಗೆ ಆದಾಯಕ್ಕಿಂತಲೂ ೧೨ % ಹೆಚ್ಚು ತೆರಿಗೆ ಆದಾಯ ೨೦೨೦-೨೧ರಲ್ಲಿ ಬರುತ್ತದೆ ಎಂದು ತೋರಿಸಲಾಗಿದೆ. ಇದರ ಅರ್ಥ, ಖಾಸಗೀಕರಣ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಶೇರು ಮಾರಾಟದಿಂದ ಇದನ್ನು ಎತ್ತಲಾಗುತ್ತದೆ ಎಂಬುದು ಸ್ಪಷ್ಟ.

ಈ ಬಾಬ್ತು ೨೦೧೯-೨೦ ರ ಪರಿಷ್ಕೃತ ಅಂದಾಜಿನಲ್ಲಿ ೬೫,೦೦೦ ಕೋಟಿ ರೂ. ಇದ್ದದ್ದು, ೨೦೨೦-೨೧ರಲ್ಲಿ ೨ಲಕ್ಷ ಕೋಟಿ ರೂ. ಗೆ ಹೆಚ್ಚಲಿದೆ. ಇದು ನಿಜವಾದ ಬಂಡವಾಳ ಖರ್ಚಿನಲ್ಲಿ ೬೨,೦೦೦ ಕೋಟಿ ರೂ.ಗಳ ಹೆಚ್ಚಳವನ್ನು ಸರಿದೂಗಿಸಲು ಹೆಚ್ಚೇ ಆಗುತ್ತದೆ. ಸರಕಾರ ಎಷ್ಟೊಂದು ಹತಾಶಗೊಂಡಿದೆಯೆಂದರೆ ಅದು ಒಂದು ಪ್ರತೀಕದಂತಿರುವ, ಸರಕಾರದ ಸ್ಕೀಮುಗಳಿಗೆ ಎಲ್ಲರಿಗಿಂತ ಹೆಚ್ಚು ಹಣ ಒದಗಿಸುತ್ತಿರುವ  ಎಲ್‌ಐಸಿಯಲ್ಲಿರುವ ತನ್ನ ಶೇರುಗಳನ್ನೂ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖೇದ ವ್ಯಕ್ತಪಡಿಸಿದೆ.

ಈ ಮೇಲೆ ಹೇಳಿದಂತೆ, ಕೇಂದ್ರ ಬಜೆಟ್ ಆರ್ಥಿಕ ಮಂದಗತಿಯನ್ನು ಎದುರಿಸುವ ಬದಲು ಬೇಡಿಕೆಯ ಕೊರತೆಯ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ , ಮತ್ತು ವ್ಯಾಪಕಗೊಂಡಿರುವ ಆರ್ಥಿಕ ಯಾತನೆಗಳನ್ನು ಇನ್ನಷ್ಟು ಆಳಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ನಮ್ಮ ದೇಶದ ಆಸ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವುದರ ವಿರುದ್ಧ, ಎಲ್‌ಐಸಿ ಮತ್ತು ವಿಮಾವಲಯದಲ್ಲಿ ಶೇರು ಮಾರಾಟದ ವಿರುದ್ಧ, ನಮ್ಮ ಬಹುಪಾಲು ಜನಗಳ ಮೇಲೆ ಮತ್ತಷ್ಟು ಕಷ್ಟಕೋಟಲೆಗಳನ್ನು, ಸಂಕಟಗಳನ್ನು ಹೇರುತ್ತಿರುವುದರ ವಿರುದ್ಧ ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು ಎಂದು ಜನತೆಗೆ ಕರೆ ನೀಡಿದೆ.

Leave a Reply

Your email address will not be published. Required fields are marked *