ಕೆಲವು ಸೈದ್ಧಾಂತಿಕ ಪ್ರಶ್ನೆಗಳ ಪರಿಹಾರಕ್ಕಾಗಿ ಪ್ರಯತ್ನ 1928-1935

  • ವಸಾಹತುಶಾಹಿ ಆಳ್ವಿಕೆಗೆ ಒಳಗಾಗಿದ್ದ ದೇಶಗಳಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿಯಲ್ಲಿ ಬಂಡವಾಳಶಾಹಿಗಳ ಪಾತ್ರದ ಪ್ರಶ್ನೆಯನ್ನು  ಕುರಿತಂತೆ ಕಮ್ಯುನಿಸ್ಟರ ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಆರನೇ ಮತ್ತು ಏಳನೇ ಮಹಾಧಿವೇಶನಗಳ ನಡುವೆ ಬಹಳಷ್ಟು ಚರ್ಚೆಗಳು ನಡೆದವು. ಇವುಗಳ ಅನುಷ್ಠಾನದಲ್ಲಿ ಭಾರತೀಯ ಕಮ್ಯುನಿಸ್ಟರಿಗೆ ಕೆಲವು ಗಂಭೀರವಾದ ಸಂಘಟನಾತ್ಮಕ ಹಾಗೂ ರಾಜಕೀಯ ಸಂದಿಗ್ಧತೆಗಳೂ ಎದುರಾದವು. ೧೯೩೦-೩೨ರಲ್ಲಿ ಪಂಥೀಯವಾದಕ್ಕೂ ಎಡೆ ಮಾಡಿಕೊಟ್ಟಿತು. ಅದು ಪಕ್ಷದ ವರ್ಚಸ್ಸಿಗೆ ದೊಡ್ಡ ಹಾನಿ ಉಂಟುಮಾಡಿತು. ಆ ನಂತರದಲ್ಲಿ ಅಂತರ್ ರಾಷ್ಟ್ರೀಯ ಸನ್ನಿವೇಶದಲ್ಲಿನ ಬದಲಾವಣೆ ಮತ್ತು ಅದನ್ನನುಸರಿಸಿ ಕಾಮಿಂಟರ್ನ್‌ನ ನೀತಿಗಳಲ್ಲಿ ಆದ ಬದಲಾವಣೆಗಳು ನಿಲುವುಗಳಲ್ಲಿನ ದೋಷಗಳನ್ನು ಸರಿಪಡಿಸುವ ದಿಕ್ಕಿನಲ್ಲಿ ಸಹಾಯಕವಾದವು.

ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯ(ಕಾಮಿಂಟರ್ನ್)ದ ಆರನೇ ಮಹಾಧಿವೇಶನ(೧೯೨೮)ವು ಭಾರತದ ಕಮ್ಯುನ್ಟಿ ಚಳುವಳಿಯ ಮೇಲೆ ಗಾಢ ಪರಿಣಾಮ ಬೀರಿತು. ಕಾಮಿಂಟರ್ನ್‌ನ ಎರಡನೇ ಮಹಾಧಿವೇಶನ(೧೯೨೦)ದಲ್ಲಿ ಲೆನಿನ್ ಅವರ ಮಾರ್ಗದರ್ಶನದಲ್ಲಿ ಅಂಗೀಕರಿಸಿದ್ದ ವಸಾಹತುಗಳ ಕುರಿತ ತಾತ್ವಿಕ ತಿಳುವಳಿಕೆಯನ್ನು ಈ ಆರನೇ ಮಹಾಧಿವೇಶನವು ಪರಿಷ್ಕರಿಸಿತು. ಐದನೇ ಮತ್ತು ಆರನೇ ಮಹಾಧಿವೇಶನದ ಮಧ್ಯಂತರದಲ್ಲಿ, ಹಲವಾರು ದೇಶಗಳ ಕಮ್ಯುನಿಸ್ಟ್ ಪಕ್ಷಗಳಿಂದ ಬಲ-ಸಮಯಸಾಧಕ ಗುಂಪುಗಳನ್ನು ಉಚ್ಛಾಟಿಸಲಾಯಿತು ಮತ್ತು ಕಾಮಿಂಟರ್ನ್‌ನಿಂದ ಕೂಡ. ಕಾಮಿಂಟರ್ನ್ ಟ್ರಾಟ್ಸ್ಕಿವಾದದ ವಿರುದ್ಧದ ಹೋರಾಟಕ್ಕೂ ವಿಶೇಷ ಮಹತ್ವ ನೀಡಬೇಕಾಗಿ ಬಂತು. ಅದಲ್ಲದೇ, ಚೈನಾದಲ್ಲಿನ ಘಟನೆಗಳು ಆರನೇ ಮಹಾಧಿವೇಶನದ ವಸಾಹತುಶಾಹಿ ಕುರಿತ ಪ್ರತಿಪಾದನೆಗಳು (ಕೊಲೊನಿಯಲ್ ತೀಸೀಸ್) ಮೇಲೆ ತೀವ್ರ ಪ್ರಭಾವ ಬೀರಿದವು. ಈ ಎಲ್ಲಾ ಬೆಳವಣಿಗೆಗಳು ಕಾಮಿಂಟರ್ನ್‌ನ ನಿಲುವುಗಳನ್ನು ರೂಪಿಸಿದವು.

ಕಮ್ಯುನಿಸ್ಟರು ಅಳವಡಿಸಬೇಕಾದ ತಂತ್ರಗಳ ಕುರಿತು, ಈ ಪ್ರತಿಪಾದನೆಗಳು ಕಮ್ಯುನಿಸ್ಟ್ ಪಕ್ಷಗಳಿಗೆ ನಿರ್ದೇಶನ ನೀಡಿ ಎಲ್ಲಾ ಪುಟ್ಟ ಬಂಡವಾಳಶಾಹಿ ಗುಂಪುಗಳೂ ಮತ್ತು ಪಕ್ಷಗಳಿಂದ ರಾಜಕೀಯವಾಗಿ ಹಾಗೂ ಸಂಘಟನಾತ್ಮಕವಾಗಿಯೂ  ಪ್ರತ್ಯೇಕವಾಗಿರುವಂತೆ ಹೇಳಿದವು. ಕ್ರಾಂತಿಕಾರಿ ಹೋರಾಟಗಳ ಅಗತ್ಯಗಳಿಗೆ ಅನುಸಾರವಾಗಿ, ಒಂದು ತಾತ್ಕಾಲಿಕ ಸಹಕಾರವನ್ನು ಒಪ್ಪಬಹುದು ಮತ್ತು ಕೆಲವು ಸಂದರ್ಭಗಳಲ್ಲಿ, ಒಂದು ಕಮ್ಯುನಿಸ್ಟ್ ಪಕ್ಷ ಮತ್ತು ರಾಷ್ಟ್ರೀಯ ಕ್ರಾಂತಿಕಾರಿ ಚಳುವಳಿಯ ನಡುವೆ, ಆ ಕ್ರಾಂತಿಕಾರಿ ಚಳುವಳಿಯು ಪ್ರಾಮಾಣಿಕವಾಗಿದ್ದರೆ ತಾತ್ಕಾಲಿಕ ಒಕ್ಕೂಟ ಕೂಡ ಒಪ್ಪಿತವಾದದ್ದು; ಆ ಕ್ರಾಂತಿಕಾರಿ ಚಳುವಳಿಯು ನಿಜವಾಗಿಯೂ ಆಳುವ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದು, ರೈತರು ಮತ್ತು ವ್ಯಾಪಕ ಶೋಷಿತ ಜನಸಮುದಾಯವನ್ನು ಕ್ರಾಂತಿಕಾರಿ ವಿಧಾನದಲ್ಲಿ ತರಬೇತುಗೊಳಿಸಿ ಸಂಘಟಿಸುವ ಕಮ್ಯುನಿಸ್ಟರ ಕೆಲಸ ಕಾರ್ಯಗಳಿಗೆ ಅವರ ಪ್ರತಿನಿಧಿಗಳು ಅಡ್ಡಗಾಲು ಹಾಕುವುದಿಲ್ಲವಾದರೆ ಅದನ್ನು ಒಪ್ಪಬಹುದು.

ಭಾರತಕ್ಕೆ ಸಂಬಂಧಪಟ್ಟಂತೆ ಇದರಲ್ಲಿನ ಒಂದು ಮುಖ್ಯ ಅಂಶವೆಂದರೆ ಕಾರ್ಮಿಕರ ಮತ್ತು ರೈತರ ಪಕ್ಷಗಳ ರಚನೆಗೆ ವಿರೋಧ. ಏಕೆಂದರೆ: ಅವು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಬಹಳ ಸುಲಭವಾಗಿ ಸಾಮಾನ್ಯ ಪುಟ್ಟ ಬಂಡವಾಳಶಾಹಿ ಪಕ್ಷಗಳಾಗಿ ಪರಿವರ್ತನೆಯಾಗಿಬಿಡಬಹುದು… ದೇಶದ ವಿಮೋಚನೆಗಾಗಿ, ಪಾಳೇಗಾರಿ ಪದ್ಧತಿಯ ಪಳೆಯುಳಿಕೆಗಳನ್ನು ನಾಶಮಾಡುವ ಸಲುವಾಗಿ, ಕಾರ್ಷಿಕ ಕ್ರಾಂತಿಗಾಗಿ ಮತ್ತು ಸೋವಿಯತ್ ಗಣತಂತ್ರದ ರೀತಿಯಲ್ಲಿ ಶ್ರಮಜೀವಿಗಳ ಹಾಗೂ ರೈತರ ಸರ್ವಾಧಿಕಾರತ್ವವನ್ನು ಸ್ಥಾಪಿಸುವ ಸಲುವಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟ ಮಾಡಬೇಕಾಗಿರುವುದು ಭಾರತೀಯ ಕಮ್ಯುನಿಸ್ಟರ ಬಹು ಮುಖ್ಯವಾದ ಕೆಲಸವಾಗಿದೆ.

ಈ ಕೆಲಸವನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುವುದು ಒಂದು ಬಲಿಷ್ಠವಾದ ಕಮ್ಯುನಿಸ್ಟ್ ಪಕ್ಷವನ್ನು ಸೃಷ್ಟಿಸಿದರೆ ಮಾತ್ರ; ಅದು ಕಾರ್ಮಿಕ ವರ್ಗದ, ರೈತರ ಮತ್ತು ಎಲ್ಲಾ ಶ್ರಮಜೀವಿಗಳ ಅಪಾರ ಜನಸಮುದಾಯದ ಕೇಂದ್ರ ಸ್ಥಾನದಲ್ಲಿ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಳ್ಳಲು ಮತ್ತು ಪಾಳೇಗಾರಿ-ಸಾಮ್ರಾಜ್ಯಶಾಹಿ ಕೂಟದ ವಿರುದ್ಧದ ಹೋರಾಟದಲ್ಲಿ ಅವರಿಗೆ ಮುಂದಾಳತ್ವ ನೀಡಲು ಸಮರ್ಥವಾಗಬೇಕು… ದೇಶಾದ್ಯಂತ ಹಂಚಿಹೋಗಿರುವ ಎಲ್ಲಾ ಕಮ್ಯುನಿಸ್ಟ್ ಗುಂಪುಗಳು ಮತ್ತು ವೈಯಕ್ತಿಕ ಕಮ್ಯುನಿಸ್ಟರನ್ನು ಒಂದುಗೂಡಿಸಿ ಏಕೈಕ ಸ್ವತಂತ್ರ ಕೇಂದ್ರೀಕೃತ ಪಕ್ಷವನ್ನು ಕಟ್ಟುವುದೇ ಭಾರತೀಯ ಕಮ್ಯುನಿಸ್ಟರ ಮೊದಲ ಕೆಲಸ.

ರಾಷ್ಟ್ರೀಯ ವಿಮೋಚನಾ ಚಳುವಳಿಯಲ್ಲಿ ಬಂಡವಾಳಶಾಹಿಗಳ ಪಾತ್ರದ ಪ್ರಶ್ನೆಯು ಕಾಮಿಂಟರ್ನ್‌ನ ಆರನೇ ಮಹಾಧಿವೇಶನದ ಚರ್ಚೆಗಳಲ್ಲಿನ ಒಂದು ಮುಖ್ಯ ಅಂಶವಾಗಿತ್ತು. ರಾಷ್ಟ್ರೀಯ ವಿಮೋಚನಾ ಹೋರಾಟಗಳಲ್ಲಿನ ರಣತಂತ್ರಗಳು ಮತ್ತು ರಾಷ್ಟ್ರೀಯ ಬಂಡವಾಳಶಾಹಿಗಳ ಪಾತ್ರದ ಪ್ರಶ್ನೆಗಳ ಮೇಲೆ ವಸಾಹತುಗಳ ಕುರಿತು ಮಹಾಧಿವೇಶನವು ಅಂಗೀಕರಿಸಿದ ಪ್ರತಿಪಾದನೆಗಳು ಕೆಲವು ದೋಷಪೂರಿತ ಮತ್ತು ವಿರೋಧಾಭಾಸದ ಪ್ರಸ್ತಾಪಗಳನ್ನು ಹೊಂದಿದ್ದವು. ಉದಾಹರಣೆಗೆ, ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯ ಬಂಡವಾಳಶಾಹಿಗಳು ಗಣನೀಯ ಶಕ್ತಿಯಾಗಿಲ್ಲ ಎಂದು ಅದು ಪ್ರತಿಪಾದಿಸಿತ್ತು. ಕಾಮಿಂಟರ್ನ್‌ನ ಆರನೇ ಮಹಾಧಿವೇಶನದಲ್ಲಿ ಅಂಗೀಕರಿಸಿದ್ದ ನಿರ್ಣಯವು ಅದೊಂದು ಸ್ಪಷ್ಟವಾದ ಪಂಥೀಯವಾದದ ಛಾಯೆಯನ್ನು ಹೊಂದಿದೆ ಎಂದು ಸೋವಿಯತ್ ಯೂನಿಯನ್ ಕಮ್ಯುನಿಸ್ಟ್ ಪಕ್ಷದ ೨೦ನೇ ಮಹಾಧಿವೇಶನದಲ್ಲಿ(೧೯೫೪), ಕಾಮಿಂಟರ್ನ್‌ನ ನಾಯಕ ಕೂಸಿನೆನ್ ಒಪ್ಪಿಕೊಂಡರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಾರ್ಮಿಕ ವರ್ಗದ ಸ್ವಭಾವ ಮತ್ತು ಕಾರ್ಷಿಕ ಕ್ರಾಂತಿಯ ಮಹತ್ವದ ಬಗ್ಗೆ ಅದು(ಕಾಮಿಂಟರ್ನ್‌ನ ಆರನೇ ಮಹಾಧಿವೇಶನವು) ಸರಿಯಾಗಿಯೇ ವಿಶ್ಲೇಷಣೆ ಮಾಡಿದೆಯಾದರೂ, ಸಾಮ್ರಾಜ್ಯಶಾಹಿ-ವಿರೋಧಿ ಸಂಯುಕ್ತ ರಂಗವೆಂಬ ಆ ಹಿಂದಿನ ರಣತಂತ್ರದಿಂದ ಒಂದು ಪಲ್ಲಟ ಆ ಪ್ರತಿಪಾದನೆಗಳಲ್ಲಿ ಇತ್ತು. ವಸಾಹುತುಗಳಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿಯ ಮುಂದಾಳುತ್ವ ವಹಿಸುವಲ್ಲಿ ಕಮ್ಯುನಿಸ್ಟ್ ಪಕ್ಷಗಳ ಮತ್ತು ಕಾರ್ಮಿಕ ವರ್ಗದ ಶಕ್ತಿಯನ್ನು ಅದು ಮಿತಿಮೀರಿ ಅಂದಾಜು ಮಾಡಿತ್ತು. ಭಾರತದಲ್ಲಿ ಅಂದಿನ ಆ ಸಮಯದಲ್ಲಿ ವಾಸ್ತವ ಏನಿತ್ತೆಂದರೆ, ವ್ಯವಸ್ಥೆಯು ಅತ್ತ ತಾನೇ ತಾನಾಗಿ ಕುಸಿಯುತ್ತಿರಲಿಲ್ಲ, ಇತ್ತ ವಸಾಹತುಗಳಲ್ಲಿ ವಸಾಹತು ವಿರೋಧಿ ಚಳುವಳಿಗೆ ಕಮ್ಯುನಿಸ್ಟ್ ಪಕ್ಷಗಳು ನೇತೃತ್ವ ನೀಡುವ ಪರಿಸ್ಥಿತಿಯಲ್ಲೂ ಇರಲಿಲ್ಲ. ಹೀಗಿದ್ದಾಗ್ಯೂ, ಸೌಮ್ಯೇಂದ್ರನಾಥ್ ಟಾಗೋರ್ ಡಬ್ಲ್ಯುಪಿಪಿಯ ಪರವಾಗಿ ಮಾತನಾಡಿದ ಮೇಲೂ ಭಾರತೀಯ ನಿಯೋಗವು ವಸಾಹತು ಕುರಿತ ಕರಡು ನಿರ್ಣಯವನ್ನು ಬೆಂಬಲಿಸಿತು.

ಕಾಮಿಂಟರ್ನ್‌ನ ನಿರ್ದೇಶನಗಳು ಭಾರತೀಯ ಕಮ್ಯುನಿಸ್ಟರಿಗೆ ಗಂಭೀರವಾದ ಸಂಘಟನಾತ್ಮಕ ಹಾಗೂ ರಾಜಕೀಯ ಸಂದಿಗ್ಧತೆಯನ್ನು ತಂದೊಡ್ಡಿದವು. ಕಾಮಿಂಟರ್ನ್‌ನ ನಿರ್ದೇಶನದ ಮೇರೆಗೆ, ಅಖಿಲ ಭಾರತ ಕಾರ್ಮಿಕರ ಮತ್ತು ರೈತರ ಪಕ್ಷದ ಸಮ್ಮೇಳನ(ಡಿಸೆಂಬರ್ ೧೯೨೮)ದ ನಂತರ ಕಮ್ಯುನಿಸ್ಟ್ ಮುಖಂಡರು ಕಲ್ಕತ್ತಾದಲ್ಲಿ ಒಂದು ಸಭೆಯನ್ನು ಆಯೋಜಿಸಿದರು. ವಸಾಹತು ಪ್ರಶ್ನೆಯ ಮೇಲಿನ ಪ್ರತಪಾದನೆಗಳನ್ನು ಕೆಲಸದ ಆಧಾರವೆಂದು ಬಗೆದು ಅಂಗೀಕರಿಸಲು ತೀರ್ಮಾನಿಸಿದರು ಮತ್ತು ಒಂದು ಬಹಿರಂಗ ಸಿಪಿಐಯನ್ನು ಸ್ಥಾಪಿಸುವ ಸಾಧ್ಯತೆಯನ್ನು ಪ್ರಯೋಗಿಸಲು ನಿರ್ಣಯಿಸಿದರು. ಕಾರ್ಮಿಕರು ಮತ್ತು ರೈತರ ಪಕ್ಷವನ್ನು ಮುಕ್ತಾಯಗೊಳಿಸುವ ನಿರ್ದೇಶನದ ಬಗ್ಗೆ ಆ ಸಭೆಯು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ.

ಎಲ್ಲಾ ಕಾರ್ಮಿಕರಿಗೆ ಸಿಪಿಐ ಪ್ರಣಾಳಿಕೆಯಲ್ಲಿ ಕಾಮಿಂಟರ್ನ್ ಶಿಫಾರಸು ಮಾಡಿದ ಕಾರ್ಯನೀತಿಗಳು ಪ್ರತಿಬಿಂಬಿತವಾಗಿದ್ದವು. ಡಬ್ಲ್ಯುಪಿಪಿಯ ಜತೆಯಲ್ಲೇ ಸಿಪಿಐಯನ್ನೂ ಪುನಶ್ಚೇತನಗೊಳಿಸಬೇಕಾದ ಅವಶ್ಯಕತೆಯನ್ನು ಆ ದಸ್ತಾವೇಜು ಸಮರ್ಥಿಸಿತು. ಡಬ್ಲ್ಯುಪಿಪಿ ಒಂದು ಅಗತ್ಯವಾದ ಘಟ್ಟ ಎಂದು ಪ್ರಣಾಳಿಕೆ ಬಣ್ಣಿಸಿತು. ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳು ಡಬ್ಲ್ಯುಪಿಪಿಯನ್ನು ಬೆಂಬಲಿಸಬೇಕು ಮತ್ತು ಈಗ ಕಮ್ಯುನಿಸ್ಟ್ ಪಕ್ಷವನ್ನು ಅವರೇನಾದರೂ ಜಯಶೀಲರಾಗಬೇಕಾದರೆ… ತಮ್ಮ ಮುಂಚೂಣಿಯೆಂದು ಸಂಘಟಿಸಬೇಕು ಎಂದು ಪ್ರಣಾಳಿಕೆ ಕರೆ ನೀಡಿತು. ಕಾಮಿಂಟರ್ನ್‌ನ ಸೂಚನೆಗಳೊಂದಿಗೆ ಸಮನ್ವಯಗೊಳ್ಳಲು ಭಾರತದಲ್ಲಿರುವ ಕಮ್ಯುನಿಸ್ಟರು ಮಾಡಿದ ಪ್ರಯತ್ನದ ಭಾಗವೇ ಈ ಪ್ರಣಾಳಿಕೆ. ಒಂದು ನಿರ್ಣಾಯಕ ಮಾರ್ಗವನ್ನು ಗೊತ್ತುಮಾಡಿಕೊಳ್ಳುವ ಮುನ್ನವೇ, ಮಾರ್ಚ್ ೧೯೨೯ರಲ್ಲಿ ಮೀರತ್ ಪಿತೂರಿ ಪ್ರಕರಣವನ್ನು ಹೂಡಲಾಯಿತು, ಅದು ಭಾರತೀಯ ಕಮ್ಯುನಿಸ್ಟರಿಗೆ ದೊಡ್ಡ ಹೊಡೆತ ಕೊಟ್ಟಿತು.

೧೯೩೦ರಲ್ಲಿ ಪಕ್ಷವು ಅಂಗೀಕರಿಸಿದ ಕಾರ್ಯಾಚರಣೆಯ ಘೋಷಣಾ ಪತ್ರದಲ್ಲಿ ಕಾಮಿಂಟರ್ನ್‌ನ ಆರನೇ ಮಹಾಧಿವೇಶನದಲ್ಲಿ ಪ್ರಸ್ತಾಪಿಸಲ್ಪಟ್ಟ ಕೆಲವು ಪ್ರತಿಪಾದನೆಗಳು ಇದ್ದವು. ಜವಾಹರ್‌ಲಾಲ್ ನೆಹರೂ, ಸುಭಾಶ್ ಚಂದ್ರ ಬೋಸ್, ಗಿನ್ವಾಲಾ ಮತ್ತಿತರ ರಾಷ್ಟ್ರೀಯ ಕಾಂಗೆಸ್ಸಿನ ಎಡಪಂಥೀಯ ವ್ಯಕ್ತಿಗಳ ನೇತೃತ್ವದ ಕ್ರಾಂತಿಕಾರಿ ಮಾತುಗಳ ಸೋಗಿನಡಿಯಲ್ಲಿ ನಡೆಸಿದ ಹೋರಾಟವು ಭಾರತದ ಕ್ರಾಂತಿಯ ಗೆಲುವಿಗೆ ಅತ್ಯಂತ ಹಾನಿಕಾರಕ ಹಾಗೂ ಅಪಾಯಕಾರಿ ಅಡಚಣೆಯಾಗಿದ್ದವು ಎಂದು ಅದರಲ್ಲಿ ಹೇಳಲಾಗಿತ್ತು. ಈ ಗ್ರಹಿಕೆಯು ೧೯೩೦-೩೨ರಲ್ಲಿ ಪಂಥೀಯವಾದಕ್ಕೆ ದಾರಿ ಮಾಡಿತು, ಅದು ಪಕ್ಷದ ವರ್ಚಸ್ಸಿಗೆ ದೊಡ್ಡ ಹಾನಿ ಉಂಟುಮಾಡಿತು.

೧೯೩೦ರ ಮಹಾ ಪತನದ ಆರಂಭಕ್ಕೆ ಸಾಕಷ್ಟು ಮುಂಚೆಯೇ ಕಾಮಿಂಟರ್ನ್ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಭಿವಿಷ್ಯ ನುಡಿದಿತ್ತು ಮತ್ತು ಅದು ಸಾಮ್ರಾಜ್ಯಶಾಹಿಯ ವೈರುಧ್ಯಗಳನ್ನು ಇನ್ನೂ ತೀವ್ರಗೊಳಿಸುವುದರ ಮೂಲಕ ಕ್ರಾಂತಿಕಾರಿ ಚಟುವಟಿಕೆಗಳ ಹೊಸ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಕಮ್ಯುನಿಸ್ಟರಿಗೆ ಅಪಾಯದ ಸೂಚನೆ ನೀಡಿತ್ತು. ವರ್ಗ ಹೋರಾಟದ ಈ ಉದ್ರಿಕ್ತ ಸ್ಥಿತಿಯು ಪ್ರಭುತ್ವದ ದಮನಕಾರಿ ಕ್ರಮಗಳಿಗೆ ಕಾರಣವಾಗುತ್ತದೆ ಮತ್ತು ಅದು ಫ್ಯಾಸಿವಾದಕ್ಕೂ ದಾರಿ ಮಾಡುತ್ತದೆ ಎಂದೂ ಅದು ಎಚ್ಚರಿಸಿತ್ತು. ಬಿಕ್ಕಟ್ಟಿಗೆ ತಳ್ಳಲ್ಪಟ್ಟ ಬಂಡವಾಳಶಾಹಿಯ ದಾಳಿಗಳು ಮತ್ತು ಇನ್ನೂ ತೀವ್ರಗೊಳ್ಳುವ ಆಕ್ರಮಣಕಾರಿ ಫ್ಯಾಸಿಸ್ಟ್ ಕುತಂತ್ರಗಳನ್ನು ಎದುರಿಸಲು ಜನಸಮುದಾಯವನ್ನು ಅಣಿನೆರೆಸುವ ತುರ್ತಿನ ಬಗ್ಗೆ ಕಾಮಿಂಟರ್ನ್‌ನ ಹನ್ನೆರಡನೇ ಪ್ಲೀನಂನಲ್ಲಿ ಸಮಾಲೋಚಿಸಿತ್ತು. ಸಂಯುಕ್ತ ರಂಗ ನೀತಿಯತ್ತ ಕಾಮಿಂಟರ್ನ್‌ನ ಪಯಣದ ಆರಂಭವಾಗಿತ್ತು ಈ ಪ್ಲೀನಂ, ಅಂತಿಮವಾಗಿ ೧೯೩೫ರ ಎಳನೇ ಮಹಾಧಿವೇಶನದಲ್ಲಿ ಕಾಮಿಂಟರ್ನ್ ಆ ನೀತಿಯನ್ನು ಅಂಗೀಕರಿಸಿತು.

ಮೇ ೧೯೩೨ರಲ್ಲಿ, ಚೈನಾ, ಗ್ರೇಟ ಬ್ರಿಟನ್ ಮತ್ತು ಜರ್ಮನಿಯ ಕಮ್ಯುನಿಸ್ಟ್ ಪಕ್ಷಗಳು ಜಂಟಿಯಾಗಿ ಹೊರಡಿಸಿದ ಬಹಿರಂಗ ಪತ್ರವನ್ನು ಕಾಮಿಂಟರ್ನ್‌ನ ಸಂಪೂರ್ಣ ಒಪ್ಪಿಗೆಯ ಮೇರೆಗೆ ಅದರ ಅಧಿಕೃತ ಮುಖವಾಣಿ ಇಂಪ್ರೆಕರ್ನಲ್ಲಿ ಪ್ರಕಟಿಸಲಾಯಿತು. ಕಾಂಗ್ರೆಸ್ಸಿನ ಬಂಡವಾಳಶಾಹಿ ನೇತೃತ್ವ ಮತ್ತು ಕಾರ್ಮಿಕರು, ರೈತರು ಹಾಗೂ ಕಾಂಗ್ರೆಸ್ಸಿನ ವಿಶ್ವಾಸಘಾತಕ ಗುಣವನ್ನು ಸರಿಯಾಗಿ ಅರಿಯುವಲ್ಲಿನ ಕೊರತೆಯಿಂದಾಗಿ ಅದನ್ನು ಹಿಂಬಾಲಿಸುತ್ತಿರುವ ಪಟ್ಟಣಗಳ ಪುಟ್ಟ ಬಂಡವಾಳಶಾಹಿಗಳ ಕ್ರಾಂತಿಕಾರಿ ಶಕ್ತಿಗಳ ನಡುವಿನ ವ್ಯತ್ಯಾಸವನ್ನು ಆ ಪತ್ರ ವಿವರಿಸಿತ್ತು. ಕಾಂಗ್ರೆಸ್ ಸಂಘಟಿಸುವ ಎಲ್ಲಾ ಬೃಹತ್ ಮತಪ್ರದರ್ಶನಗಳಲ್ಲಿ ಭಾರತೀಯ ಕಮ್ಯುನಿಸ್ಟರು ಭಾಗವಹಿಸಬೇಕಾದ ಅಗತ್ಯತೆಯ ಬಗ್ಗೆ ಹೇಳಿ, ಅಲ್ಲಿ ತಮ್ಮದೇ ಆದ ಕಮ್ಯುನಿಸ್ಟ್ ಘೋಷಣೆಗಳನ್ನು ಮತ್ತು ಹೋರಾಟಗಳನ್ನು ಹೇಳಲು ಮುಂದಾಗಬೇಕು ಎಂದು ಆ ಪತ್ರವು ಸಲಹೆ ನೀಡಿತ್ತು. ಕಾಂಗ್ರೆಸ್ ಸಂಘಟಿಸುವ ಸಾಮೂಹಿಕ ಕಾರ್ಯಾಚರಣೆಯಲ್ಲಿ ಕಮ್ಯುನಿಸ್ಟ್ ಪಕ್ಷವು ಭಾಗವಹಿಸಬೇಕು ಮತ್ತು ಮುಖ್ಯವಾಹಿನಿಯಿಂದ ಕಮ್ಯುನಿಸ್ಟ್ ಪಕ್ಷ ದೂರವಾಗದಂತೆ ನೋಡಿಕೊಳ್ಳಬೇಕೆಂದು ಆ ಪತ್ರವು ನಿರ್ದೇಶನ ನೀಡಿತ್ತು. ೧೯೩೩ರಲ್ಲಿ, ಚೈನಾ ಕಮ್ಯುನಿಸ್ಟ್ ಪಕ್ಷವು ಭಾರತೀಯ ಕಮ್ಯುನಿಸ್ಟರಿಗೆ ಮತ್ತೊಮ್ಮೆ ಬಹಿರಂಗ ಪತ್ರ ಬರೆಯಿತು.

ಆದರೆ, ಈ ಬಹಿರಂಗ ಪತ್ರಗಳು ತಪ್ಪುಗಳನ್ನು ಮತ್ತು ಪಂಥೀಯ ನಿಲುವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಾಕಾಗಲಿಲ್ಲ. ಪುನಶ್ಚೇತನಕ್ಕಾಗಿನ ಪಕ್ಷದ ಪ್ರಯತ್ನಗಳ ಹೊರತಾಗಿಯೂ, ಸ್ವಾತಂತ್ರ್ಯ ಚಳುವಳಿಯಲ್ಲಿನ ರಾಷ್ಟ್ರೀಯ ಬಂಡವಾಳಶಾಹಿಗಳ ಪಾತ್ರದ ಬಗೆಗಿನ ನಕಾರಾತ್ಮಕ ದೃಷ್ಟಿಕೋನವನ್ನು ಬದಲಿಸಲಾಗಲಿಲ್ಲ. ಬಂಡವಾಳಶಾಹಿಗಳ ಮೋಸವನ್ನು ಬಯಲು ಮಾಡುವುದರ ಬಗ್ಗೆಯೇ ಕಮ್ಯುನಿಸ್ಟರು ಹೆಚ್ಚು ಒತ್ತು ನೀಡಿದರು. ಅಂತರ್ರಾಷ್ಟ್ರೀಯ ಸನ್ನಿವೇಶದಲ್ಲಿನ ಬದಲಾವಣೆ ಮತ್ತು ಆ ನಂತರದಲ್ಲಿ ಕಾಮಿಂಟರ್ನ್‌ನ ನೀತಿಗಳಲ್ಲಿ ಆದ ಬದಲಾವಣೆಗಳು ಕಮ್ಯುನಿಸ್ಟರು ತದನಂತರದಲ್ಲಿ ಅಂಗೀಕರಿಸಿದ ಕೆಲವು ತಂತ್ರಗಾರಿಕೆ ನಿಲುವುಗಳಲ್ಲಿನ ದೋಷಗಳನ್ನು ಸರಿಪಡಿಸುವ ದಿಕ್ಕಿನಲ್ಲಿ ಸಹಾಯಕವಾದವು.

ಕಾಮಿಂಟರ್ನ್‌ನ ಏಳನೇ ಮಹಾಧಿವೇಶ (೧೯೩೫)ವು ವಸಾಹತುಗಳು ಮತ್ತು ಅರೆವಸಾಹತುಗಳಲ್ಲಿನ ರಾಷ್ಟ್ರೀಯ ವಿಮೋಚನಾ ಹೋರಾಟಗಳು ಮತ್ತು ಫ್ಯಾಸಿಸ್ಟ್ ವಿರೋಧಿ ಮತ್ತು ಯುದ್ಧ ವಿರೋಧಿ ಹೋರಾಟಗಳ ನಡುವೆ ನಿಕಟ ಸಂಪರ್ಕ ಕಲ್ಪಿಸಿತು. ಒಂದು ಸಂಯುಕ್ತ ಸಾಮ್ರಾಜ್ಯಶಾಹಿ-ವಿರೋಧಿ ರಂಗದ ಘೋಷಣೆಯನ್ನಾಗಿ ಈ ದೇಶಗಳ ಸಂಯುಕ್ತ ರಂಗಗಳಿಗೆ ನಿರ್ದಿಷ್ಟವಾಗಿ ಹೇಳಲಾಗಿತ್ತು. ಸಾಮ್ರಾಜ್ಯಶಾಹಿ-ವಿರೋಧಿ ನಿಲುವಿಗೆ ರಾಷ್ಟ್ರೀಯ ಬಂಡವಾಳಶಾಹಿಗಳು ದ್ರೋಹ ಎಸಗುತ್ತಿದ್ದಾರೆಂಬ ಪಂಥೀಯ ಪ್ರತಿಪಾದನೆಯನ್ನು ಅದು ತಿರಸ್ಕರಿಸಿತು. ರಾಷ್ಟ್ರೀಯ ಪರಿಷ್ಕರಣವಾದಿಗಳ ನೇತೃತ್ವದಲ್ಲಿನ ಸಾಮ್ರಾಜ್ಯಶಾಹಿ-ವಿರೋಧಿ ಜನಪ್ರಿಯ ಚಳುವಳಿಗಳಲ್ಲಿ ಕಮ್ಯುನಿಸ್ಟರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮತ್ತು ಜಂಟಿಯಾಗಿ ಕೆಲಸ ಮಾಡಿ ಎಂದು ಅದು ಕರೆ ನೀಡಿತು.

ಈ ಮಹಾಧಿವೇಶನದಲ್ಲಿ ದಿಮಿತ್ರೋವ್ ತಮ್ಮ ಭಾಷಣದಲ್ಲಿ, ಅಂದಿನ ಅಂತರ್ರಾಷ್ಟ್ರೀಯ ಸನ್ನಿವೇಶದಲ್ಲಿ ಭಾರತೀಯ ಕಮ್ಯುನಿಸ್ಟರ ಪಾತ್ರದ ಬಗ್ಗೆ ಮಾತನಾಡಿದರು: ಭಾರತದಲ್ಲಿ, ರಾಷ್ಟ್ರೀಯ ಪರಿಷ್ಕರಣವಾದಿಗಳ ನೇತೃತ್ವದ ಅಡಿಯಲ್ಲಿರುವ ಚಟುವಟಿಕೆಗಳನ್ನೂ ಒಳಗೊಂಡಂತೆ ಸಾಮ್ರಾಜ್ಯಶಾಹಿ-ವಿರೋಧಿ ಸಾಮೂಹಿಕ ಚಟುವಟಿಕೆಗಳಲ್ಲಿ ಕಮ್ಯುನಿಸ್ಟರು ಭಾಗವಹಿಸಬೇಕು, ಬೆಂಬಲ ವ್ಯಕ್ತಪಡಿಸಬೇಕು. ತಮ್ಮ ರಾಜಕೀಯ ಹಾಗೂ ಸಂಘಟನಾತ್ಮಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಾಗಲೇ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನೊಳಗೆ, ಅವರ ಸಂಘಟನೆಯೊಳಗೆ ತಮ್ಮ ಕೆಲಸವನ್ನು ಕೈಗೊಳ್ಳಬೇಕು. ಎಂದರು.

ಈ ತಿಳುವಳಿಕೆಯನ್ನು ಮುಂದೆ ಬೆಳೆಸುತ್ತಾ, ೧೯೩೬ರಲ್ಲಿ ಗ್ರೇಟ್ ಬ್ರಿಟನ್ ಕಮ್ಯುನಿಸ್ಟ್ ಪಕ್ಷ(ಸಿಪಿಜಿಬಿ)ದ ರಜನಿ ಪಾಮೆ ದತ್ ಮತ್ತು ಬೆನ್ ಬ್ರಾಡ್ಲಿಯವರು ಭಾರತದಲ್ಲಿನ ಸಾಮ್ರಾಜ್ಯಶಾಹಿ ವಿರೋಧಿ ಜನತಾರಂಗಕ್ಕಾಗಿ ದತ್-ಬ್ರಾಡ್ಲಿ ಪ್ರಮೇಯವನ್ನು ಪ್ರಕಟಿಸಿದರು. ಈ ಪ್ರಮೇಯವು ಭಾರತದ ಕಮ್ಯುನಿಸ್ಟ್ ಚಳುವಳಿಯ ಮೇಲೆ ಅಗಾಧ ಪ್ರಭಾವ ಬೀರಿತು.

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *