ಮಾ.22 ಕೊರೊನ ವೈರಸ್ ವಿರುದ್ಧ ಹೋರಾಟಕ್ಕೆ ಜನತೆಯ ಸೌಹಾರ್ದತಾ ದಿನಾಚರಣೆ

11 ಬೇಡಿಕೆಗಳೊಂದಿಗೆ ನಡೆಸಲು ಜನತೆಗೆ ಸಿಪಿಐ(ಎಂ) ಮನವಿ

ಮಾರ್ಚ್ 22ನ್ನು ಕೊರೊನ ವೈರಸ್ ವಿರುದ್ಧ ಹೋರಾಟಕ್ಕೆ ಜನತೆಯ ಸೌಹಾರ್ದತೆಯ ದಿನವಾಗಿ ಆಚರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನತೆಗೆ ಮನವಿ ಮಾಡಿದೆ. ಆದರೆ ಪ್ರಧಾನ ಮಂತ್ರಿಗಳು ಈ ಹೋರಾಟದ ಆರೋಗ್ಯ ಮತ್ತು ಆರ್ಥಿಕ ಆಯಾಮಗಳನ್ನು ನಿಭಾಯಿಸುವ ಬಗ್ಗೆ ಯಾವುದೇ ಮೂರ್ತ ಹೆಜ್ಜೆಗಳನ್ನು ಮುಂದಿಟ್ಟಿಲ್ಲವಾದ್ದರಿಂದ ಈ ಸೌಹಾರ್ದತೆಯ ದಿನವನ್ನು ಈ ಕೆಳಗಿನ ಬೇಡಿಕೆಗಳೊಂದಿಗೆ ಆಚರಿಸಬೇಕು ಎಂದು ಪೊಲಿಟ್‌ಬ್ಯುರೊ ಜನತೆಗೆ ಮನವಿ ಮಾಡಿದೆ.

  1. ವೈರಸ್ ಬಗ್ಗೆ ಪರೀಕ್ಷಣೆಯ ಪ್ರಮಾಣವನ್ನು ಸಾಕಷ್ಟು ವ್ಯಾಪಕವಾಗಿ, ವಿಶೇಷವಾಗಿ ನೆಗಡಿ, ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳಿರುವವರನ್ನು ಪರೀಕ್ಷಿಸಲು ಸಾಧ್ಯವಾಗುವಂತೆ ಹೆಚ್ಚಿಸಬೇಕು.
  2. ಸಾಕಷ್ಟು ಉಚಿತ ಪರೀಕ್ಷಣೆ, ಆಸ್ಪತ್ರೆ ಸೌಲಭ್ಯಗಳು, ಪ್ರತ್ಯೇಕವಾಗಿಡುವ ವಾರ್ಡ್‌ಗಳು ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಲು ಸಾಧ್ಯವಾಗುವಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ವೆಚ್ಚವನ್ನು ಪ್ರಕಟಿಸಬೇಕು.
  3. ಜನಧನ್ ಖಾತೆ ಮತ್ತು ಬಿಪಿಎಲ್ ಫಲಾನುಭವಿಗಳಿಗೆ ರೂ.೫೦೦೦ ನಗದು ವರ್ಗಾವಣೆ ಮಾಡಬೇಕು.
  4. ಎಲ್ಲ ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಒಂದು ತಿಂಗಳ ಉಚಿತ ರೇಶನ್‌ನ್ನು ಕೊಡಬೇಕು, ಇದಕ್ಕೆ ಎಫ್‌ಸಿಐ ಗೋದಾಮುಗಳಲ್ಲಿರುವ ೭.೫ ಕೋಟಿ ಟನ್‌ಗಳ ಅಗಾಧ ದಾಸ್ತಾನನ್ನು ಬಳಸಬೇಕು.
  5. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ೧೫೦ ದಿನಗಳಿಗೆ ವಿಸ್ತರಿಸಿ ಕೆಲಸ ಕೇಳುವವರಿಗೆಲ್ಲರಿಗೂ ಕೊಡಬೇಕು.
  6. ಎಲ್ಲ ಅಗತ್ಯ ಸರಕುಗಳನ್ನು ಒಳಗೊಳ್ಳುವಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಬೇಕು.
  7. ಶಾಲೆಗಳಲ್ಲಿ ಮಧ್ಯಾಹ್ನದ ಉಟದ ಯೋಜನೆಯ ಬದಲು, ರೇಶನ್ ಕಿಟ್‌ಗಳನ್ನು ಮಕ್ಕಳ ಮನೆಗಳಿಗೆ/ ಕುಟುಂಬಗಳಿಗೆ ಒದಗಿಸಬೇಕು.
  8. ಈ ಮಹಾಮಾರಿಯಿಂದ ಬಾಧಿತಗೊಂಡಿರುವ ವಲಯಗಳಿಗೆ ಹಣಕಾಸು ಪ್ಯಾಕೇಜುಗಳನ್ನು ಸ್ಥಾಪಿಸಬೇಕು. ಈ ಹಣಕಾಸು ಬೆಂಬಲವನ್ನು ಕಂಪನಿಗಳು ಮತ್ತು ಉದ್ದಿಮೆಗಳಿಗೆ ಮುಂದಿನ ಮೂರು ತಿಂಗಳು ಲೇ-ಆಫ್ ಮಾಡುವುದಿಲ್ಲ, ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂಬ ಷರತ್ತಿನ ಮೇಲೆ ಕೊಡಬೇಕು.
  9. ಅನೌಪಚಾರಿಕ ಮತ್ತು ಅಸಂಘಟಿತ ವಲಯಗಳಲ್ಲಿ ಜೀವನಾಧಾರಗಳಿಗೆ ತೊಂದರೆಯಾಗಿರುವ ಎಲ್ಲ ಕಾರ್ಮಿಕರಿಗೆ ಹಣಕಾಸು ನೆರವು/ಭತ್ಯೆಯನ್ನು ನೀಡಲು ಒಂದು ನಿಧಿಯನ್ನು ಸ್ಥಾಪಿಸಬೇಕು.
  10. ಕೊರೊನ ವೈರಸ್‌ನಿಂದಾಗಿ ಕೆಲಸದಿಂದ ದೂರವಿರಬೇಕಾದ ಕಾರ್ಮಿಕರು ಮತ್ತು ನೌಕರರಿಗೆ ಸಂಬಳ ಸಹಿತ ಕಾಯಿಲೆ ರಜಾ ನೀಡಬೇಕು.
  11. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಬ್ಯಾಂಕು ಸಾಲಗಳ ಮರುಪಾವತಿಯಲ್ಲಿ ಒಂದು ವರ್ಷದ ಋಣವಿಳಂಬದ ಸೌಲಭ್ಯವನ್ನು ನೀಡಬೇಕು.

 

 

Leave a Reply

Your email address will not be published. Required fields are marked *