ಬಿಬಿಎಂಪಿ ಪುನರಚನೆ: 2015ರ ಮಸೂದೆಗೆ ಅಂಕಿತ ಹಾಕಿ, ಪ್ರತ್ಯೇಕ ಮಸೂದೆ ಹಿಂಪಡೆಯಿರಿ

ಬೃಹತ್ ಬೆಂಗಳೂರು ಕುರಿತು ವಿಧಾನಸಭಾ ಅಧಿವೇಶನದ ಕೊನೆಯ ದಿನ ತರಾತುರಿಯಲ್ಲಿ ಮಂಡಿಸಿರುವ ಪ್ರತ್ಯೇಕ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ೨೦೧೫ರಲ್ಲಿ ರಾಜ್ಯ ಶಾಸನಸಭೆ ಅಂಗೀಕರಿಸಿರುವ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ತಿದ್ದುಪಡಿ ಮಸೂದೆಗೆ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು ಅಂಕಿತ ಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬೆಂಗಳೂರು ದಕ್ಷಿಣ ಸಮಿತಿಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

೨೦೧೪ ರಲ್ಲಿ ಅಂದಿನ ರಾಜ್ಯ ಸರ್ಕಾರವು ನೇಮಿಸಿದ್ದ ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿಯು ಬಿಬಿಎಂಪಿ ಯನ್ನು ೫ ಚಿಕ್ಕ ಮಹಾನಗರ ಪಾಲಿಕೆಗಳನ್ನಾಗಿ ಮಾರ್ಪಡಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಅಗತ್ಯ ಪ್ರತ್ಯೇಕ ಶಾಸನ ರೂಪಿಸಲು ಶಿಫಾರಸ್ಸು ಮಾಡಿತ್ತು. ಅದರಂತೆ ಅಂದಿನ ರಾಜ್ಯ ಸರ್ಕಾರವು ಕೆ.ಎಂ.ಸಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿತ್ತು. ಅಂದು ವಿರೋಧ ಪಕ್ಷವಾಗಿದ್ದ ಬಿಜೆಪಿಯು ಅದನ್ನು ವಿರೋಧಿಸಿತ್ತು. ಆದಕಾರಣ ೫ ವರ್ಷವಾದರೂ ಸಹಾ ಮಸೂದೆಗೆ ಅಂಕಿತ ಸಿಗಲೇ ಇಲ್ಲ.

ಪರಿಣಾಮವಾಗಿ ಮಹಾನಗರದ ಜನತೆಯ ಚಿಕ್ಕ ಹಾಗೂ ಚೊಕ್ಕ ಆಡಳಿತದ ಕನಸು ನನಸಾಗಲೇ ಇಲ್ಲ. ಆದರೆ ಇದೀಗ ಬಿಬಿಎಂಪಿಗೆ ಪ್ರತ್ಯೇಕ ಶಾಸನವನ್ನು ತರಾತುರಿಯಲ್ಲಿ ರೂಪಿಸಿ ವಿಧಾನಸಭೆಯಲ್ಲಿ ಮಂಡಿಸಿದೆ. ತನ್ನ ಸ್ವಪಕ್ಷೀಯ ಶಾಸಕರು, ಮತ್ತು ವಿರೋಧ ಪಕ್ಷಗಳ ಶಾಸಕರ ಒತ್ತಾಯದ ಮೇರೆಗೆ ಮಸೂದೆಯನ್ನು ಸದನದ ಜಂಟಿ ಪರಿಶೀಲನ ಸಮಿತಿಗೆ ವಹಿಸಲಾಗಿದೆ, ಈ ಮಸೂದೆಯು ಬಿ.ಎಸ್.ಪಾಟೀಲ್ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು ಕಸದ ಬುಟ್ಟಿಗೆ ಎಸೆಯಲಿದೆ.

ವಿರೋಧ ಪಕ್ಷವಾದ ಕಾಂಗ್ರೆಸ್ ಸಹಾ ತನ್ನ ಆಡಳಿತ ಅವಧಿಯಲ್ಲಿ ರೂಪಿಸಿದ್ದ ಮಸೂದೆಯನ್ನು ಮರೆತಂತೆ ಕಾಣುತ್ತಿದೆ, ಕಲಾಪ ಸಲಹಾ ಸಮಿತಿಯ ಅನುಮೋದನೆಯನ್ನು ಪಡೆಯದ ರಾಜ್ಯ ಹಾಗೂ ಮಹಾನಗರದ ಜನತೆ ಕೊರೋನ ಭೀತಿಯಲ್ಲಿ ಲಾಕೌನ್ ನಲ್ಲಿರುವಾಗ ಇಂತಹ ಮಸೂದೆ ಮಂಡಿಸಿ ಅಂಗೀಕರಿಸಲು ಮುಂದಾಗಿರುವುದು ಬಿಜೆಪಿಯ ದುಷ್ಟತನ ತೋರುತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ.

Leave a Reply

Your email address will not be published. Required fields are marked *