ಸಾಮ್ರಾಜ್ಯಶಾಹಿ ವಿರೋಧಿ ಯುದ್ಧ

  • ಜಗತ್ತಿನ ಪ್ರತಿಗಾಮಿ ಶಕ್ತಿಗಳ ರಕ್ಷಕನಾಗಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ದುರ್ಬಲಗೊಳಿಸುವುದ್ಕಾಗಿ ಮತ್ತು ಆ ಮೂಲಕ ಜಾಗತಿಕ ಮಟ್ಟದಲ್ಲಿ ಕ್ರಾಂತಿಕಾರಿ ಶಕ್ತಿಗಳನ್ನು ಬಲಪಡಿಸುವ ಹಾಗೂ ತನ್ನ ವಿಮೋಚನೆಗಳಿಸುವ ಸಲುವಾಗಿ ಯಾವ ಷರತ್ತೂ ಇಲ್ಲದೇ ಯುದ್ಧವನ್ನು ಪ್ರತಿರೋಧಿಸುವುದು ಭಾರತದ ಜನರ ಕರ್ತವ್ಯ ಎಂದು ವಿಶ್ಲೇಷಿಸಿದ ಭಾರತ ಕಮ್ಯುನಿಸ್ಟ್ ಪಕ್ಷ ದೇಶವ್ಯಾಪಿ ಯುದ್ಧವಿರೋಧಿ ಚಳುವಳಿಯ ನೆಲೆಯನ್ನು ವಿಸ್ತಾರಗೊಳಿಸಲು, ಕಾರ್ಮಿಕ ವರ್ಗದ ಜತೆಯಲ್ಲೇ ರೈತರು ಹಾಗೂ ವಿದ್ಯಾರ್ಥಿಗಳನ್ನೂ ಯುದ್ಧವಿರೋಧಿ ಮತಪ್ರದರ್ಶನಗಳಲ್ಲಿ ಅಣಿನೆರೆಸುವ ಕಾರ್ಯಕ್ಕೆ ಕೂಡ ಕಮ್ಯುನಿಸ್ಟರು ಒತ್ತುಕೊಟ್ಟಿತು. ಸಮರಶೀಲ ಕಾರ್ಯಾಚರಣೆಗಳ ಸ್ವರೂಪವನ್ನು ಜನಪ್ರಿಯಗೊಳಿಸುವುದು ಮತ್ತು ಸಾಮೂಹಿಕ ಕಾರ್ಯಾಚರಣೆಯನ್ನು ಖಾತ್ರಿಗೊಳಿಸುವುದು; ಇವುಗಳು ಎಷ್ಟು ಸಾಧ್ಯವೋ ಅಷ್ಟು ವಿಶಾಲ ನೆಲೆಯಲ್ಲಿ ರಾಷ್ಟ್ರೀಯ ಚಳುವಳಿಯ ಪ್ರಬಲ ಲಕ್ಷಣವಾಗಬೇಕು ಎನ್ನುವುದು ಈ ಎಲ್ಲಾ ಪ್ರಯತ್ನಗಳ ಹಿಂದಿನ ಮುಖ್ಯವಾದ ಉದ್ದೇಶವಾಗಿತ್ತು.

Communist100 File copy೧೯೩೯ರಲ್ಲಿ ಎರಡನೇ ವಿಶ್ವ ಮಹಾಯುದ್ಧ ಪ್ರಾರಂಭ ಭಾರತದ ರಾಜಕೀಯ ಬೆಳವಣಿಗೆಗಳ ಮೇಲೆ ಭಾರಿ ಪ್ರಭಾವ ಬೀರಿತು. ಬ್ರಿಟಿಷ್ ವೈಸ್ ರಾಯ್ ಯಾವ ಭಾರತೀಯ ಪ್ರತಿನಿಧಿಗಳ ಜತೆಗೂ ಸಮಾಲೋಚನೆ ಮಾಡದೆ, ಆ ಯುದ್ಧದಲ್ಲಿ ಭಾರತ ಕೂಡ ಭಾಗವಹಿಸಲಿದೆ ಎಂದು ಘೋಷಣೆ ಮಾಡಿದ. ಯುದ್ಧ ಘೋಷಣೆಯಾದ ಕೂಡಲೇ ಜೀವನಾಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿದವು. ಅದರ ಪರಿಣಾಮವಾಗಿ ತಮ್ಮ ಜೀವನ ವೆಚ್ಚ ಹೆಚ್ಚಾಗಿದ್ದರ ಬಗ್ಗೆ ಜನರು ಅತೃಪ್ತರಾದರು. ಕಮ್ಯುನಿಸ್ಟ್ ಪಕ್ಷವು ಆ ಕೂಡಲೇ ಯುದ್ಧವನ್ನು ವಿರೋಧಿಸಿ ಹೇಳಿಕೆ ನೀಡಿತು. ಪಕ್ಷದ ಮುಖವಾಣಿಯಾದ ದಿ ಕಮ್ಯುನಿಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ ಹೇಳಿಕೆಯಲ್ಲಿ ಅದು ಜನತೆಯಲ್ಲಿ ವಿನಂತಿ ಮಾಡುತ್ತಾ ಈ ಗಂಭೀರ ರಾಷ್ಟ್ರೀಯ ಬಿಕ್ಕಟ್ಟಿನಲ್ಲಿ ನೀವೇ ಮುಂದಾಳುತ್ವ ವಹಿಸಿಕೊಂಡು ಕ್ರಿಯೆಗೆ ಇಳಿಯಿರಿ ಎಂದು ಕರೆ ನೀಡಿತು.

ಕಮ್ಯುನಿಸ್ಟ್ ಪಕ್ಷದ ಮುಂದಾಳತ್ವದಲ್ಲಿ ಬೊಂಬಾಯಿಯ ಕಾರ್ಮಿಕ ವರ್ಗವು ಯುದ್ಧ ವಿರೋಧಿ ಮುಷ್ಕರವನ್ನು ಸಂಘಟಿಸಿತು ಮತ್ತು ಅದರಲ್ಲಿ ೯೦,೦೦೦ ಕಾರ್ಮಿಕರು ಪಾಲ್ಗೊಂಡಿದ್ದರು. ಎರಡನೇ ಮಹಾಯುದ್ಧದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಘಟನೆ ನಡೆಯಿತು. ಇದಾದ ಕೂಡಲೇ ಬೊಂಬಾಯಿಯ ಜವಳಿ ಗಿರಣಿಯ ೧,೭೫,೦೦೦ ಕಾರ್ಮಿಕರು ತುಟ್ಟಿ ಭತ್ಯೆಗಾಗಿ ಮುಷ್ಕರಕ್ಕೆ ಇಳಿದರು. ತೀವ್ರ ದಾಳಿ ದಬ್ಬಾಳಿಕೆ ಮತ್ತು ಮುಖಂಡರೆಲ್ಲರ ಬಂಧನದ ನಡುವೆಯೂ ಮುಷ್ಕರವು ೪೦ ದಿನಗಳ ಕಾಲ ನಡೆಯಿತು. ಆ ಮುಷ್ಕರಕ್ಕೆ ಬೆಂಬಲವಾಗಿ ಎಲ್ಲಾ ವಿಭಾಗದ ದುಡಿಯುವ ಜನರೂ ಒಂದು ದಿನದ ಸೌಹಾರ್ದ ಮುಷ್ಕರ ನಡೆಸಿದರು. ಈ ಬೊಂಬಾಯಿಯ ಮುಷ್ಕರದ ನಂತರ ದೇಶಾದ್ಯಂತ ಎಲ್ಲಾ ಕಡೆಗಳಲ್ಲಿಯೂ ಮುಷ್ಕರಗಳ ಅಲೆಯೇ ಎದ್ದು ಬಂತು.

ಯುದ್ಧದ ಅವಧಿಯಲ್ಲಿ ಸಿಪಿಐನ ಧೋರಣೆ ಮತ್ತು ಕಾರ್ಯಭಾರಗಳು ಎಂಬ ಶಿರೋನಾಮೆಯಡಿಯಲ್ಲಿ ಒಂದು ಹೇಳಿಕೆಯನ್ನು ಹೊರಡಿಸಿದ ಪಕ್ಷದ ಪೋಲಿಟ್‌ಬ್ಯೂರೋವು, ಇಂತಹ ಸಂದರ್ಭಗಳಲ್ಲಿ ಯಾವ ರೀತಿಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ವಿವರಿಸಿತು. ಜಗತ್ತಿನ ಪ್ರತಿಗಾಮಿ ಶಕ್ತಿಗಳ ರಕ್ಷಕನಾಗಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ದುರ್ಬಲಗೊಳಿಸುವುದ್ಕಾಗಿ ಮತ್ತು ಆ ಮೂಲಕ ಜಾಗತಿಕ ಮಟ್ಟದಲ್ಲಿ ಕ್ರಾಂತಿಕಾರಿ ಶಕ್ತಿಗಳನ್ನು ಬಲಪಡಿಸುವ ಹಾಗೂ ತನ್ನ ವಿಮೋಚನೆಗಳಿಸುವ ಸಲುವಾಗಿ ಯಾವ ಷರತ್ತೂ ಇಲ್ಲದೇ ಯುದ್ಧವನ್ನು ಪ್ರತಿರೋಧಿಸುವುದು ಭಾರತದ ಜನರ ಕರ್ತವ್ಯ ಎಂದು  ಯಾವ ಮುಚ್ಚುಮರೆಯೂ ಇಲ್ಲದೇ ಪಕ್ಷ ಹೇಳಿತು.

ಅನೇಕ ಪ್ರಮುಖ ನಗರಗಳಲ್ಲಿ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಕಾರ್ಮಿಕರು ಮುಷ್ಕರ ಮಾಡಿದರು ಮತ್ತು ಬಹಿರಂಗ ಸಭೆಗಳನ್ನು ನಡೆಸಿದರು; ಅವುಗಳಲ್ಲಿ ಹತ್ತಾರು ಸಾವಿರ ಕಾರ್ಮಿಕರು, ಮತ್ತು ಬಡ ಹಾಗೂ ಮಧ್ಯಮ ವರ್ಗದ ಜನರು ಪಾಲ್ಗೊಂಡಿದ್ದರು. ಕಮ್ಯುನಿಸ್ಟ್ ಪಕ್ಷ ಮತ್ತು ಎಡ ಸಂಘಟನೆಗಳು ಈ ಸಾಮೂಹಿಕ ಹೋರಾಟಗಳಿಗೆ ಸಂಘಟಿತ ನಾಯಕತ್ವ ಒದಗಿಸಿದವು ಹಾಗೂ ಯುದ್ಧ ವಿರೋಧಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿದವು. ಸಾಮಾನ್ಯ ಕಾಂಗ್ರೆಸ್ಸಿಗರು ಮತ್ತು ಕಾಂಗ್ರೆಸ್ ಸಮಿತಿಯ ಒಂದು ವಿಭಾಗ ಈ ಚಟುವಟಿಕೆಗಳಲ್ಲಿ ಸಹಕರಿಸಿದರು. ಕಮ್ಯುನಿಸ್ಟ್ ಪಕ್ಷವು ನಡೆಸಿದ ಈ ಶಕ್ತಿಯುತ ಚಳುವಳಿ ಮತ್ತು ಹೋರಾಟಗಳು, ಬಲಪಂಥೀಯ ಕಾಂಗ್ರೆಸ್ಸಿಗರ ಮೇಲೆ ಒತ್ತಡ ಹೇರಿದವು; ಬಿಕ್ಕಟ್ಟಿನಲ್ಲಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ತಮಗೇನಾದರೂ ಸೌಲಭ್ಯಗಳು ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ಈ ಬಲಪಂಥೀಯ ಕಾಂಗ್ರೆಸ್ಸಿಗರ ನೇತೃತ್ವದ ಸರ್ಕಾರಗಳು, ಕಮ್ಯುನಿಸ್ಟರ ಒತ್ತಡಗಳಿಂದಾಗಿ ರಾಜೀನಾಮೆ ನೀಡಲೇಬೇಕಾದ ಸ್ಥಿತಿಗೆ ಬಂದವು. ದಿ ಕಮ್ಯುನಿಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ(ನವಂಬರ್ ೧೯೩೯) ಲೇಖನವೊಂದರಲ್ಲಿ ಪಕ್ಷವು ನಿಚ್ಚಳವಾಗಿ ಸಾಮ್ರಾಜ್ಯಶಾಹಿಯು ಯಾವುದೇ ರಿಯಾಯಿತಿ ನೀಡಲು ಸಿದ್ಧವಿಲ್ಲ ಎಂದು ಹೇಳಿತು.

ಈ ಸನ್ನಿವೇಶವನ್ನು ಬ್ರಿಟಿಷರು ಹೇಗೆ ಬಳಸಲು ಯತ್ನಿಸುತ್ತಾರೆ ಎನ್ನುವುದನ್ನು ಸರಿಯಾಗಿ ವಿವರಿಸಿತ್ತು: ಪದೇ ಪದೇ ನಿಷೇಧಾಜ್ಞೆಯನ್ನು ಹೇರುವುದರ ಮೂಲಕ, ಕಾಂಗ್ರೆಸ್ಸಿಗರನ್ನು, ಸೋಶಿಯಲಿಸ್ಟರನ್ನು, ಕಮ್ಯುನಿಸ್ಟರನ್ನು, ಕಿಸಾನ್ ಸಭಾ ಮತ್ತು ಕಾರ್ಮಿಕ ಸಂಘಗಳ ಮುಖಂಡರನ್ನು ಬಂಧಿಸುವ ಮೂಲಕ, ತೀವ್ರವಾದಿಗಳ ಪತ್ರಿಕೆಗಳನ್ನು ನಿರ್ಬಂಧಿಸುವ ಮೂಲಕ, ರಾಷ್ಟ್ರೀಯ ಚಳುವಳಿಯ ಕ್ರಾಂತಿಕಾರಿ ಪಡೆಯನ್ನು ನಾಶಗೊಳಿಸಲು ಅವರು ಯತ್ನಿಸುತ್ತಾರೆ. ಕೋಮುವಾದಿ ಶಕ್ತಿಗಳಿಗೆ ಉತ್ತೇಜನ ನೀಡುವ ಮೂಲಕ ಕಾಂಗ್ರೆಸ್ಸಿಗರನ್ನು ಬ್ಲಾಕ್‌ಮೇಲ್ ಮಾಡಿ ಅವರನ್ನು ಧೃತಿಗೆಡಿಸುವ ತಂತ್ರ ಮಾಡುತ್ತಾರೆ. ಸ್ವಲ್ಪ ಸ್ವಲ್ಪವಾಗಿಯೇ ರಾಷ್ಟ್ರೀಯ ಶಕ್ತಿಗಳನ್ನು ಛಿದ್ರಗೊಳಿಸುತ್ತಾರೆ. ರಾಷ್ಟ್ರೀಯ ನಾಯಕತ್ವವನ್ನು ಹೋರಾಟ ಮಾಡದಂತೆ ತಡೆಹಿಡಿಯುವ, ಕಾನೂನಿನ ಚೌಕಟ್ಟಿನಡಿಯಲ್ಲೇ ಹೋರಾಟ ಮಾಡುವಂತೆ ಒತ್ತಡ ಹೇರಿ ರಾಷ್ಟ್ರೀಯ ರಂಗದೊಳಗೇ ನಾಯಕರುಗಳ ನಡುವೆ ತಿಕ್ಕಾಟ ಉಂಟಾಗುವಂತೆ ಮಾಡುವುದರ ಮೂಲಕ ರಾಷ್ಟ್ರೀಯ ಶಕ್ತಿಗಳನ್ನು ದುರ್ಬಲಗೊಳಿಸುತ್ತಾರೆ ಎಂದು ವಿವರಿಸಲಾಗಿತ್ತು.

anti-war1939A
                        ಯುದ್ಧ-ವಿರೋಧಿ ಮುಷ್ಕರ, ಮುಂಬೈ, ೧೯೩೯

ಸಾಮೂಹಿಕ ಯುದ್ಧ ವಿರೋಧಿ ಮುಷ್ಕರಗಳು, ಬಹಿರಂಗ ಸಭೆಗಳು ಮತ್ತಿತರ ಪ್ರತಿಭಟನೆಗಳಲ್ಲದೇ, ಬೀದಿ ಬದಿ ಸಭೆಗಳು, ಕರಪತ್ರಗಳು, ಅಧ್ಯಯನ ಶಿಬಿರಗಳು, ಇತ್ಯಾದಿಗಳ ಮೂಲಕ ಜನರ ನಡುವೆ ವ್ಯಾಪಕ ಪ್ರಚಾರಾಂದೋಲನಗಳನ್ನು ನಡೆಸಲು ಪಕ್ಷ ನಿರ್ಧರಿಸಿತು; ಆ ಮೂಲಕ ಯುದ್ಧದ ನೈಜ ಸ್ವಭಾವ ಏನು ಎಂದು ಬಹಿರಂಗಗೊಳಿಸುತ್ತಾ ಕಾರ್ಮಿಕ ವರ್ಗದವರಿಗೆ ತಮ್ಮ ಪಾತ್ರ ಹಾಗೂ ಕೆಲಸಗಳ ಬಗ್ಗೆ ಪ್ರಜ್ಞೆ ಮೂಡಿಸಬೇಕೆಂದು ಪಕ್ಷ ತೀರ್ಮಾನಿಸಿತು. ಕಾರ್ಮಿಕ ವರ್ಗವು ತಮ್ಮ ಆರ್ಥಿಕ ಬೇಡಿಕೆಗಳಾದ ಕೂಲಿ ಹೆಚ್ಚಳ, ಬೆಲೆ ಏರಿಕೆಗಳಿಗೆ ಮಾತ್ರ ಸೀಮಿತವಾಗದೆ ಮುಂಬರುವ ರಾಜಕೀಯ ಹೋರಾಟಕ್ಕೆ ಶ್ರಮಜೀವಿಗಳ ಧೀರ ನಾಯಕತ್ವ ವಹಿಸಲೂ ಮುಂದಾಗಬೇಕೆಂದು ಹೇಳಿತು. ಈ ತಿಳುವಳಿಕೆಯೊಂದಿಗೆ, ಕಾರ್ಮಿಕರನ್ನು ಸಂಘಟಿಸುವ, ಯುದ್ಧದ ಸಾಮ್ರಾಜ್ಯಶಾಹಿ ಸ್ವಭಾವ ಕುರಿತು ಅವರಿಗೆ ತಿಳಿಹೇಳುವ ಮತ್ತು ಅವರ ದಿನನಿತ್ಯದ ಬೇಡಿಕೆಗಳನ್ನು ಯುದ್ಧವಿರೋಧಿ ಪ್ರಚಾರಕ್ಕೆ ತಳಕು ಹಾಕುವ ಮೂಲಕ ಅವರ ಪ್ರಜ್ಞೆಯನ್ನು ಎತ್ತರಿಸುವ ನಿಟ್ಟಿನಲ್ಲಿ ಪಕ್ಷವು ನಿರಂತರವಾಗಿ ಕೆಲಸ ಮಾಡಿತು.

ಉದಾಹರಣೆಗೆ, ಯುದ್ಧಕ್ಕೆ ದೇಣಿಗೆ ನೀಡಬೇಕೆಂಬ ಸರ್ಕಾರದ ಬೇಡಿಕೆಯನ್ನು ಏರುತ್ತಿರುವ ಬೆಲೆಗಳು ಮತ್ತು ಅವರ ತೀರ ಕಡಿಮೆ ಕೂಲಿಗೆ ತಳಕು ಹಾಕಿ ಕಾರ್ಮಿಕರನ್ನು ಹೋರಾಟಗಳಿಗೆ ಇಳಿಸಲು ಸಣಬು ಮಿಲ್ಲುಗಳು, ರೈಲ್ವೇ, ಕಬ್ಬಿಣ ಕಾರ್ಖಾನೆ ಮುಂತಾದ ಉದ್ದಿಮೆಗಳ ಕಾರ್ಮಿಕರಿಗೆ ಸಿದ್ಧಪಡಿಸಿದ ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆ(೧೯೪೦)ಯಲ್ಲಿ ಹೇಳಲಾಗಿತ್ತು. ಗೃಹ ಇಲಾಖೆಯು ಕಮ್ಯುನಿಸ್ಟರ ಕುರಿತ ತನ್ನ ಗುಪ್ತ ವರದಿಯಲ್ಲಿ ಈ ಕಾರ್ಯವ್ಯೂಹ ಎಷ್ಟು ಫಲಪ್ರದವಾಗಬಹುದು ಎಂದು ಗುರುತಿಸಿತು: ಕಮ್ಯುನಿಸ್ಟರು, ಸೋಶಿಯಲಿಸ್ಟರು, ಕಾರ್ಮಿಕರು ಮತ್ತು ರೈತರಿಗಾಗಿನ ಕಮ್ಯುನಿಸ್ಟರ ಈ ಸಮಾನ ಯೋಜನೆಗಳಲ್ಲಿ ಕಾರ್ಮಿಕರಿಗೆ ೨೫% ಕೂಲಿ ಹೆಚ್ಚಳ ಮತ್ತು ಆಹಾರ ತುಟ್ಟಿ ಭತ್ಯೆಗಳು ಹಾಗೂ ರೈತರಿಗೆ ಗೇಣಿ ಮತ್ತು ಕಂದಾಯ ಕಡಿಮೆ ಮಾಡಬೇಕು ಎನ್ನುವ ಬೇಡಿಕೆಗಳನ್ನು ಈಡೇರಿಸಬೇಕೆಂಬ ಸಲಹೆಗಳನ್ನು ರೂಪಿಸಲಾಗಿದೆ. ಈ ಪ್ರಸ್ತಾಪಗಳ ಜತೆಯಲ್ಲೇ ಹಲವಾರು ಕೇಂದ್ರಗಳಿಗೆ ಕಳಿಸಿದ ರಾಜಕೀಯ ಸೂಚನೆಗಳಲ್ಲಿ ಈ ಬೇಡಿಕೆಗಳೊಂದಿಗೆ ಯುದ್ಧವಿರೋಧಿ ಪ್ರಚಾರವನ್ನು ಬೆರೆಸುವ ಮೂಲಕ ಕಾರ್ಮಿಕರನ್ನು ಮತ್ತು ರೈತರನ್ನು ಒಟ್ಟಿಗೇ ಅಣಿನೆರೆಸಲು ನಮಗೆ ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ. ಈ ಸೂಚನೆಗಳು ಅವರ ಯೋಜನೆಯ ಸ್ಪಷ್ಟವಾದ ಸಾಮರ್ಥ್ಯವನ್ನು ಹೊರಗೆಡಹುತ್ತದೆ.

ದೇಶವ್ಯಾಪಿ ಯುದ್ಧವಿರೋಧಿ ಚಳುವಳಿಗಾಗಿ ನೆಲೆಯನ್ನು ವಿಸ್ತಾರಗೊಳಿಸಲು, ಕಾರ್ಮಿಕ ವರ್ಗದ ಜತೆಯಲ್ಲೇ ರೈತರು ಹಾಗೂ ವಿದ್ಯಾರ್ಥಿಗಳನ್ನೂ ಯುದ್ಧವಿರೋಧಿ ಮತಪ್ರದರ್ಶನಗಳಲ್ಲಿ ಅಣಿನೆರೆಸುವ ಕಾರ್ಯಕ್ಕೆ ಕೂಡ ಕಮ್ಯುನಿಸ್ಟರು ಒತ್ತುಕೊಟ್ಟರು. ಸಮರಶೀಲ ಕಾರ್ಯಾಚರಣೆಗಳ ಸ್ವರೂಪವನ್ನು ಜನಪ್ರಿಯಗೊಳಿಸುವುದು ಮತ್ತು ಸಾಮೂಹಿಕ ಕಾರ್ಯಾಚರಣೆಯನ್ನು ಖಾತ್ರಿಗೊಳಿಸುವುದು; ಇವುಗಳು ಎಷ್ಟು ಸಾಧ್ಯವೋ ಅಷ್ಟು ವಿಶಾಲ ನೆಲೆಯಲ್ಲಿ ರಾಷ್ಟ್ರೀಯ ಚಳುವಳಿಯ ಪ್ರಬಲ ಲಕ್ಷಣವಾಗಬೇಕು ಎನ್ನುವುದು ಈ ಎಲ್ಲಾ ಪ್ರಯತ್ನಗಳ ಹಿಂದಿನ ಮುಖ್ಯವಾದ ಉದ್ದೇಶ. ಈ ಎಲ್ಲಾ ಪ್ರಯತ್ನಗಳ ಫಲವಾಗಿ, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ(ಎ.ಐ.ಎಸ್.ಎಫ್)ವು ಅತ್ಯಂತ ಶಕ್ತಿಯುತ ಹಾಗೂ ಪ್ರಧಾನ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿತು; ಅದು ಸಾಮ್ರಾಜ್ಯಶಾಹಿ-ವಿರೋಧಿ ವಿದ್ಯಾರ್ಥಿಗಳ ಹೋರಾಡುವ ಮತ್ತು ತೀವ್ರವಾದಿ ವಿಭಾಗಗಳ ಎಲ್ಲರನ್ನೂ ಒಂದುಗೂಡಿಸಿತು ಮತ್ತು ಬೆಂಬಲಿಸಿತು ಕೂಡ.

ಈ ಸಮಯದಲ್ಲಿ ಕಮ್ಯುನಿಸ್ಟ್ ಪಕ್ಷ ಮಾಡಿದ ಮತ್ತೊಂದು ಪ್ರಮುಖ ಪ್ರಯತ್ನವೆಂದರೆ ಕೋಮುವಾದದ ವಿರುದ್ಧ ಹೋರಾಟ ಮಾಡಿದ್ದು. ಯುದ್ಧ ಶುರುವಾಗುವಾಗಲೇ ಪಕ್ಷವು ಸ್ಪಷ್ಟವಾಗಿ ಎಚ್ಚರಿಸಿತ್ತು: ಬ್ರಿಟಿಷ್ ಸಾಮ್ರಾಜ್ಯಶಾಹಿ ಕೋಮುವಾದಿ ಶಕ್ತಿಗಳನ್ನು ಉತ್ತೇಜಿಸುತ್ತದೆ, ಅದು ರಾಷ್ಟ್ರೀಯ ಚಳುವಳಿಯನ್ನು ಕೋಮುಗಲಭೆಗಳಲ್ಲಿ ಮುಳುಗಿಸುವ ಅಪಾಯವಿದೆ. ಮುಸ್ಲಿಂ ಲೀಗ್, ಹಿಂದೂ ಮಹಾಸಭಾ, ಮುಂತಾದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಪ್ರೋತ್ಸಾಹ ಪಡೆದಿರುವ ಕೋಮುವಾದಿ ಸಂಘಟನೆಗಳು ಜನರಲ್ಲಿ ಕೋಮು ವಿಷವನ್ನು ಬಿತ್ತುವುದರ ವಿರುದ್ಧ ಪ್ರಬಲ ಪ್ರಚಾರಾಂದೋಲನ ಮಾಡುವುದರ ಮೂಲಕ ಜನರನ್ನು ಎಚ್ಚರಿಸಬೇಕು. ಜನ ಸಮುದಾಯದ ನಡುವೆ ನಡೆಸುವ ವರ್ಗ ಸಮರದ ಕ್ರಾಂತಿಕಾರಿ ಪ್ರಚಾರಾಂದೋಲನ ಮಾತ್ರವೇ ಕೋಮು ದ್ವೇಷದ ವಿಷಕಾರಿ ಕಳೆಗಳನ್ನು ಮೂಲೋತ್ಪಾಟನೆ ಮಾಡಲು ಸಾಧ್ಯ. ಎನ್ನುವ ಸ್ಪಷ್ಟ ವರ್ಗ ದೃಷ್ಟಿಕೋನದಲ್ಲಿ ಪಕ್ಷವು ನಿರ್ಧಾರ ಮಾಡಿತು.

ಕಮ್ಯುನಿಸ್ಟರ ಈ ಎಲ್ಲಾ ಪ್ರಯತ್ನಗಳು ತೀವ್ರ ದಮನವನ್ನು ಎದುರಿಸಬೇಕಾಗಿ ಬಂತು. ಸರ್ಕಾರವು ತನ್ನ ಬಲಾಢ್ಯ ಶಕ್ತಿಯನ್ನು ಬಳಸಿ ಡಿಫೆನ್ಸ್ ಆಫ್ ಇಂಡಿಯಾ ಕಾಯಿದೆಯನ್ನು ಜಾರಿಮಾಡಿ ಕಮ್ಯುನಿಸ್ಟರನ್ನು ಬಂಧಿಸಿತು. ಬಹಿರಂಗ ಸಭೆಗಳ ನಿಷೇಧ ಮತ್ತು ಪತ್ರಿಕಗಳ ಸ್ವಾತಂತ್ರ್ಯ ಹರಣಗಳಲ್ಲದೇ, ತುರ್ತು ಕಾನೂನೊಂದನ್ನು ತಂದು ಸ್ವಯಂಸೇವಾ ಸಂಘಟನೆಗಳನ್ನು ನಿರ್ಬಂಧಿಸಿತು. ಜೂನ್ ೧೯೪೧ರಲ್ಲಿ, ಪಕ್ಷವು ನಿಷೇಧಕ್ಕೆ ಒಳಪಟ್ಟಿತು. ಈ ಅವಧಿಯಲ್ಲಿ ಬಂಧನಕ್ಕೊಳಗಾದ ೭೦೦ ಜನರಲ್ಲಿ, ೪೮೦ ಜನ ಕಮ್ಯುನಿಸ್ಟರಾಗಿದ್ದರು. ಕಮ್ಯುನಿಸ್ಟರು ಬಹಿರಂಗವಾಗಿ ಹಾಗೂ ಭೂಗತರಾಗಿ ಕಾರ್ಯನಿರ್ವಹಿಸಿದರು; ಯಾರು ಬಂಧನಕ್ಕೆ ಒಳಗಾಗಬಹುದು ಮತ್ತು ಯಾರು ಆಗಬಾರದು ಎಂಬುದನ್ನು ಎಚ್ಚರದಿಂದ ನಿರ್ವಹಿಸಿದರು. ೧೯೩೪ರಿಂದಲೇ ಪಕ್ಷವು ನಿಷೇಧಕ್ಕೆ ಒಳಪಟ್ಟಿದ್ದರೂ, ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷ ಹಾಗೂ ಇತರ ಸಾಮಾಹಿಕ ಸಂಘಟನೆಗಳ ವೇದಿಕೆಗಳನ್ನು ಕಮ್ಯುನಿಸ್ಟರು ತಮ್ಮ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದರು. ಸಂಯುಕ್ತ ರಂಗ ಕಾರ್ಯತಂತ್ರ ಕಮ್ಯುನಿಸ್ಟ್ ಚಟುವಟಿಕೆಗಳನ್ನು ವಿಸ್ತರಿಸಲು ಬಹಳ ಸಹಾಯ ಮಾಡಿತು.

ಬ್ರಿಟಿಷರ ವಿರುದ್ಧ ಹೋರಾಡುತ್ತಿರುವ ಎಲ್ಲಾ ಶಕ್ತಿಗಳ ಐಕ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾದದ್ದೆಂದು ಕಮ್ಯುನಿಸ್ಟ್ ಪಕ್ಷ ಅರಿಯಿತು; ಸಾಮ್ರಾಜ್ಯಶಾಹಿ ಮತ್ತು ಯುದ್ಧದ ವಿರುದ್ಧ ಜನಸಮುದಾಯವನ್ನು ಅಣಿನೆರೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ತನ್ನ ನಿರ್ಣಾಯಕ ಪಾತ್ರ ವಹಿಸಬೇಕೆಂದು ಕಮ್ಯುನಿಸ್ಟ್ ಪಕ್ಷ ಆಲೋಚಿಸಿತು. ಆದರೆ ಹಲವಾರು ಪಕ್ಷಗಳ – ಬಲಪಂಥೀಯ ಮತ್ತು ಎಡಪಂಥೀಯ ಕಾಂಗ್ರೆಸ್ಸಿಗರು, ಸಿ.ಎಸ್.ಪಿ, ಫಾರ್ವರ್ಡ್ ಬ್ಲಾಕ್ ಮತ್ತು ಕಮ್ಯುನಿಸ್ಟ್ ಪಕ್ಷ – ನಡುವೆ ಯುದ್ಧ ಸಮಯದಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ತೀವ್ರ ಅಭಿಪ್ರಾಯ ಭೇದಗಳಿದ್ದವು.

ಯುದ್ಧದ ಸ್ವರೂಪ ಮತ್ತು ಅದರಲ್ಲಿ ಬ್ರಿಟಿಷರ ಪಾತ್ರವನ್ನು ಕಮ್ಯುನಿಸ್ಟ್ ಪಕ್ಷವು ಪರಿಶೀಲಿಸಿತು; ಯುದ್ಧ ಆರಂಭವಾದಾಗಿನ ಅಂತರ ರಾಷ್ಟ್ರೀಯ ಹಿನ್ನೆಲೆ, ಅದರ ಪರಿಣಾಮವಾದ ವರ್ಗ ಶಕ್ತಿಗಳು ಮತ್ತು ಅವುಗಳ ಅಂತರ್ ಸಂಬಂಧಗಳನ್ನು ವಸ್ತುನಿಷ್ಠವಾಗಿ ಅಂದಾಜು ಮಾಡಿತು. ಇದರ ಆಧಾರದಲ್ಲಿ, ಬಲಪಂಥೀಯ ಕಾಂಗ್ರೆಸ್ ನಾಯಕತ್ವ, ಸಿ.ಎಸ್.ಪಿ ಮತ್ತು ಫಾರ್ವರ್ಡ್ ಬ್ಲಾಕ್ ಈ ಗುಂಪುಗಳ ರಾಜಕೀಯ ಮತ್ತು ಧೋರಣೆಗಳನ್ನು ಪಕ್ಷವು ವಿಮರ್ಶಾತ್ಮಕವಾಗಿ ಪರೀಕ್ಷಿಸಿತು; ಕಾಂಗ್ರೆಸ್ ನಾಯಕತ್ವವು ಒಂದು ಕಡೆಯಲ್ಲಿ ಫ್ಯಾಸಿಸ್ಟ್ ವಿರೋಧಿ ಘೋಷಣೆಗಳನ್ನು ಕೊಡುತ್ತಲೇ, ಮತ್ತೊಂದೆಡೆ ಬ್ರಿಟಿಷರೊಂದಿಗೆ ಚೌಕಾಶಿ ಮಾಡಲು ಹೆಣಗಾಡುತ್ತಿತ್ತು; ಸಿ.ಎಸ್.ಪಿ. ನಾಯಕತ್ವವು ಕಾಂಗ್ರೆಸ್ಸನ್ನು ವಿರೋಧಿಸುವ ನಾಟಕವಾಡುತ್ತಲೇ ಅತ್ತ ಕಾಂಗ್ರೆಸ್ ನೀತಿಗಳನ್ನು ಅನುಮೋದಿಸುತ್ತಿತ್ತು; ಕಮ್ಯುನಿಸ್ಟ್ ಪಕ್ಷವು ಬ್ರಿಟಿಷ್ ಆಳರಸರ ನೈಜ ಸ್ವಭಾವವನ್ನು ಅದರ ಫ್ಯಾಸಿಸ್ಟ್ ವಿರೋಧಿ ಮುಖವಾಡವನ್ನು ಹರಿದುಹಾಕುವ ಮೂಲಕ ಬಯಲು ಮಾಡಲು ಪ್ರಯತ್ನಿಸುತ್ತಿತ್ತು; ಫಾರ್ವರ್ಡ್ ಬ್ಲಾಕ್ ಫ್ಯಾಸಿಸ್ಟ್ ಶಕ್ತಿಗಳ ಸಹಾಯ ಪಡೆದು ಭಾರತದಲ್ಲಿ ಕ್ರಾಂತಿಯನ್ನು ಸಂಘಟಿಸಲು ಯತ್ನಿಸುತ್ತಿತ್ತು.

ಈ ಭೇದಗಳ ಕಾರಣಗಳಿಂದಾಗಿ, ಶ್ರಮವಹಿಸಿ ಕಟ್ಟಿದ್ದ ಎಡ ಐಕ್ಯತೆಯು ಬಹುತೇಕ ಕುಸಿದುಬಿತ್ತು. ಮಾರ್ಚ್ ೧೯೪೦ರಲ್ಲಿ, ಸಿ.ಎಸ್.ಪಿ.ಯಿಂದ ಕಮ್ಯುನಿಸ್ಟರನ್ನು ಉಚ್ಛಾಟಿಸಲಾಯಿತು.

ಕಮ್ಯುನಿಸ್ಟ್ ಪಕ್ಷ ಎರಡು ಪ್ರಮುಖ ಪ್ರಕಾಶನಗಳು ಸಮರಶೀಲ ಸಾಮೂಹಿಕ ಹೋರಾಟಗಳ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದ್ದ  ದಿ ಪ್ರೋಲೆಟೇರಿಯನ್ ಪಾಥ್(ಶ್ರಮಜೀವಿ ಮಾರ್ಗ), ಮತ್ತು ಕಾಂಗ್ರೆಸ್, ಸಿ.ಎಸ್.ಪಿ ಮತ್ತು ಫಾರ್ವರ್ಡ್ ಬ್ಲಾಕ್ ನೀತಿಗಳ ಕಟು ವಿಮರ್ಶೆ ಮಾಡಿದ್ದ ಪಕ್ಷಗಳು ಮತ್ತು ರಾಜಕೀಯಗಳು ಎಂಬ ಕಿರುಹೊತ್ತಿಗೆ-ಇವು ದೇಶದೆಲ್ಲೆಡೆಯ ಕಮ್ಯುನಿಸ್ಟರಿಗೆ ಸೈದ್ಧಾಂತಿಕ ಸಾಹಿತ್ಯವಾಗಿದ್ದವು; ಇವು ಸಮರಶೀಲ ರಾಷ್ಟ್ರೀಯವಾದ ಮತ್ತು ಶ್ರಮಜೀವಿ ಅಂತರ ರಾಷ್ಟ್ರೀಯವಾದಗಳ ಅಂತರಾರ್ಥ ತಿಳಿಸುವ ಮೂಲಕ ತರಬೇತಿ ನೀಡಿದವು. ಈ ಎರಡೂ ದಸ್ತಾವೇಜುಗಳನ್ನು ಭಾಷಾಂತರಿಸಿ ವ್ಯಾಪಕವಾಗಿ ವಿತರಣೆ ಮಾಡಲಾಯಿತು. ಪ್ರತಿ ವಾರ ತಪ್ಪದೇ ಹೊರಬರುತ್ತಿದ್ದ ಪಕ್ಷದ ಪತ್ರ(ಪಾರ್ಟಿ ಲೆಟರ್)ವನ್ನು ಪಕ್ಷದ ಸಂಗಾತಿಗಳಿಗೆ ಶಿಕ್ಷಣ ನೀಡಲು ಬಳಸಲಾಗುತ್ತಿತ್ತು.

ಜೂನ್ ೨೨, ೧೯೪೧ರಲ್ಲಿ ಸೋವಿಯತ್ ಯೂನಿಯನ್ನಿನ ಮೇಲೆ ನಾಜಿ ದಾಳಿ ಆರಂಭವಾಯಿತು ಮತ್ತು ಅದು ಯುದ್ಧದ ಮತ್ತು ವಿಶ್ವ ರಾಜಕೀಯದ ಮೂಲ ಚಹರೆಯನ್ನೇ ಆಮೂಲಾಗ್ರವಾಗಿ ಬದಲಾಯಿಸಿತು. ಇದು ಪಕ್ಷದ ರಾಜಕೀಯ ನಿಲುಮೆಯನ್ನೂ ಬದಲಾಯಿಸಿತು.

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *