ಕರೋನಾ ವೈರಸ್ ನಿಯಂತ್ರಣದ ಪ್ಯಾಕೇಜ್ ಘೋಷಿಸಲು ಒತ್ತಾಯ

ಮುಖ್ಯಮಂತ್ರಿಗಳಿಗೆ ಪತ್ರ,

ದೇಶದಾದ್ಯಂತ ಕರೋನಾ ವೈರಸ್ ಹಾವಳಿಯು ಮೂರನೇ ಹಂತ ತಲುಪುವ ಸಂಕಷ್ಠದಲ್ಲಿ ನಾವಿದ್ದೇವೆ. ಇದು ಇದುವರೆಗಿನ ಪರಿಸ್ಥಿತಿಗಿಂತ ಮತ್ತಷ್ಠು ಗಂಭೀರ ಪರಿಸ್ಥಿತಿಯನ್ನುಂಟು ಮಾಡಲಿದೆ. ಅದಾಗಲೇ ರಾಜ್ಯದಾದ್ಯಂತ ಸಾರ್ವಜನಿಕ ಆರೋಗ್ಯ ಹಾಗೂ ಸೇವೆಯಲ್ಲಿ ಮತ್ತು ಒಟ್ಟು ಆಂತರಿಕ ಉತ್ಪಾದನೆಯ ಮೇಲೆ ಅದರ ದುಷ್ಪರಿಣಾಮವನ್ನು ಕಾಣುತ್ತಿದ್ದೇವೆ. ಇನ್ನು ಮುಂದೆಯೂ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ ಮೇಲೆ, ಅದೇ ರೀತಿ ಬಡ ಜನತೆಯ ಮೇಲೆ ಅದರ ಗಂಭೀರ ಪರಿಣಾಮ ಕಾಣಬಹುದಾಗಿದೆ. ಒಂದೆಡೆ ಕರೋನಾ ಸಮಸ್ಯೆ ಮತ್ತೊಂದೆಡೆ ನಿರುದ್ಯೋಗದ ಸಮಸ್ಯೆ ಬಾಧಿಸಲಿದೆ.

ಇದೇ ಸಂದರ್ಭದಲ್ಲಿ ಇತ್ತೀಚಿನ ಬಜೆಟ್ ಪೂರ್ವ ಮತ್ತು ನಂತರ ಏರಿಸಲಾದ ಅಗತ್ಯ ವಸ್ತುಗಳ ಬೆಲೆಗಳು ಜನತೆಯ ಆದಾಯವನ್ನು ಬಾಧಿಸಿವೆ.

ಈ ಹಿನ್ನೆಲೆಯಲ್ಲಿ, ಸದರಿ ಕರೋನಾ ಸಮಸ್ಯೆಯನ್ನು ಎದುರಿಸಲು ದೇಶದ ಹಾಗೂ ರಾಜ್ಯದ ಜನತೆ, ಸಾಕಷ್ಟು ಮುಂಜಾಗ್ರತೆಯ ಕ್ರಮವನ್ನು ಕೈಗೊಳ್ಳುವ ಮೂಲಕ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಆರೋಗ್ಯ ಮತ್ತಿತರೇ ಇಲಾಖೆಗಳ ಮೂಲಕ ಸಾಕಷ್ಠು ಬಂಡವಾಳವನ್ನು ತೊಡಗಿಸಿ ಸಂಕಷ್ಠಕ್ಕೆ ಸಿಲುಕುವ ಜನತೆಗೆ ನೆರವಾಗ ಬೇಕಾಗಿದೆ. ಈ ವಿಚಾರದಲ್ಲಿ ಇದುವರೆಗೆ ಕೇಂದ್ರ ಹಾಗೂ ಎಲ್ಲ ರಾಜ್ಯಸರಕಾರಗಳಿಗೆ ಹೋಲಿಸಿದರೇ, ಚಿಕ್ಕ ರಾಜ್ಯ ಕೇರಳ ಸರಕಾರದ ಬಂಡವಾಳ ಹೂಡಿಕೆ (೨೦ ಸಾವಿರ ಕೋಟಿ) ಜನ ಮೆಚ್ಚುಗೆ ಪಡೆದಿದೆ. ಆದರೇ, ಕೇಂದ್ರ ಸರಕಾರ ಹಾಗೂ ನಮ್ಮ ರಾಜ್ಯ ಸರಕಾರಗಳ ಇದುವರೆಗಿನ ಕ್ರಮಗಳು ಬೆಳೆಯುತ್ತಿರುವ ಸಂಕಷ್ಠಗಳಿಗೆ ಹೋಲಿಸಿದರೇ ಖಂಡಿತಾ ತೃಪ್ತಿದಾಯಕವಾಗಿಲ್ಲ.

ಆದ್ದರಿಂದ, ಕೇಂದ್ರ ಹಾಗೂ ತಮ್ಮ ಸರಕಾರ ಕೆಳಕಂಡ ಹಕ್ಕೊತ್ತಾಯಗಳನ್ನು ಪರಿಗಣಿಸಿ ತುರ್ತು ಕ್ರಮವಹಿಸಲು ವಿನಂತಿಸುವೆವು.

ಹಕ್ಕೊತ್ತಾಯಗಳು :

  1. ವಿಶೇಷವಾಗಿ ನೆಗಡಿ, ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳಿರುವವರನ್ನು ಪರೀಕ್ಷಿಸಲು ಸಾಧ್ಯವಾಗುವಂತೆ ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಬೇಕು. ಕನಿಷ್ಠ ಪ್ರತಿ ಜಿಲ್ಲೆಯಲ್ಲೂ ಲಭ್ಯವಿರುವಂತೆ ತಕ್ಷಣವೇ ಕ್ರಮವಹಿಸಬೇಕು. ಅಗತ್ಯ ಔಷಧಿ ಮತ್ತಿತರೇ ವ್ಯವಸ್ಥೆ ಒದಗಿಸಬೇಕು.
  2. ಉಚಿತ ತಪಾಸಣೆ ನಡೆಸಲು, ಆಸ್ಪತ್ರೆಗಳಲ್ಲಿ ಸೌಲಭ್ಯಗಳು, ಆರೈಕೆ ಕೇಂದ್ರಗಳು (ಕ್ವಾರಂಟೈನ್ಡ್) ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಲು ಸಾಧ್ಯವಾಗುವಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ಧನ ಸಹಾಯವನ್ನು ಪ್ರಕಟಿಸಬೇಕು. ಕರೋನಾ ಪೀಡಿತರಿಗೆ ಪರಿಹಾರವನ್ನು ಘೋಷಿಸಬೇಕು.
  3. ಜನಧನ್ ಖಾತೆ ಮತ್ತು ಬಿಪಿಎಲ್ ಫಲಾನುಭವಿಗಳಿಗೆ ಕೂಡಲೇ ರೂ. ೫೦೦೦ ನಗದು ವರ್ಗಾವಣೆ ಮಾಡಬೇಕು. ವಿಧವಾ, ವೃದ್ದಾಪ್ಯ ಮುಂತಾದ ಪಿಂಚಣಿ ಮತ್ತಿತರೇ ಮಾಸಿಕ ಸಹಾಯಧನಗಳನ್ನು ಪಡೆಯುವವರಿಗೆ ಕನಿಷ್ಟ ೩ ತಿಂಗಳ ಹಣವನ್ನು ಮುಂಗಡವಾಗಿ ಕೂಡಲೇ ಬಿಡುಗಡೆ ಮಾಡಬೇಕು.
  4. ಎಲ್ಲಾ ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಕನಿಷ್ಢ ಎರಡು ತಿಂಗಳ ಅಗತ್ಯ ಉಚಿತ ರೇಶನ್‌ನ್ನು ಕೊಡಬೇಕು. ಪಡಿತರ ವ್ಯವಸ್ಥೆಯಲ್ಲಿನ ರೇಷನ್ ಮಾತ್ರವಲ್ಲಾ, ಇತರೇ ಅಗತ್ಯ ಆಹಾರ ಧಾನ್ಯಗಳಾದ ಬೇಳೆಕಾಳು, ಅಡುಗೆ ಎಣ್ಣೆ ಮುಂತಾಗಿ ೧೬ ಅಗತ್ಯ ಸಾಮಾನುಗಳನ್ನು ಉಚಿತವಾಗಿ ಒದಗಿಸಬೇಕು. ಕಳೆದ ಬಜೆಟ್‌ನಲ್ಲಿ ಕರ್ನಾಟಕ ಸರಕಾರ ತಲಾ ವ್ಯಕ್ತಿಗೆ ಅಕ್ಕಿ ವಿತರಣೆಯಲ್ಲಿ ಎರಡು ಕೇಜಿ ಕಡಿತ ಮಾಡಿರುವುದನ್ನು ವಾಪಾಸು ಪಡೆದು ಕನಿಷ್ಟ ೧೨ ಕೇಜಿಯಂತೆ ವಿತರಿಸಬೇಕು. ಇದಕ್ಕೆ ಎಫ್‌ಸಿಐ ಗೋದಾಮುಗಳಲ್ಲಿ ದಾಸ್ತಾನಿರುವ ೭.೫ ಕೋಟಿ ಟನ್‌ಗಳ ಧಾನ್ಯಗಳನ್ನು ಬಳಸಬೇಕು. ಈ ಎಲ್ಲ ಕುಟುಂಬಗಳಿಗೂ ಅಗತ್ಯವಿರುವಷ್ಠು ಮಾಸ್ಕ್ ಹಾಗೂ ಸ್ಯಾನಿಟೈಜರ್ ಗಳನ್ನು ಉಚಿತವಾಗಿ ಒದಗಿಸಬೇಕು.
  5. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ೨೦೦ ದಿನಗಳಿಗೆ ವಿಸ್ತರಿಸಿ ಕೆಲಸ ಕೇಳುವವರಿಗೆಲ್ಲರಿಗೂ ಕೊಡಬೇಕು.ಕೂಲಿಯನ್ನು ೭೦೦ ರೂಗಳಿಗೆ ಹೆಚ್ಚಿಸಬೇಕು.
  6. ಮಹಿಳೆಯರು, ದಲಿತರು,ಕೂಲಿಕಾರರು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಪಡೆದಿರುವ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿಯನ್ನು ಕರೋನಾ ವೈರಸ್ ಸಮಸ್ಯೆ ಆರಂಭದಿಂದ ಅದು ಕೊನೆಗೊಂಡಿದೆಯೆಂದು ಹೇಳಲಾಗುವ ದಿನಗಳ ವರೆಗೆ ಬಡ್ಡಿ ಮನ್ನಾ ಘೋಷಿಸಬೇಕು. ಸಾಲ ವಾಪಾಸು ನೀಡಲು ಸಮಯಾವಕಾಶ ಇರುವಂತೆ ಕ್ರಮವಹಿಸಬೇಕು.
  7. ಶಾಲೆಗಳಲ್ಲಿ ಮಧ್ಯಾಹ್ನದ ಉಟದ ಯೋಜನೆಯ ಬದಲು, ರೇಶನ್ ಕಿಟ್‌ಗಳನ್ನು ಮಕ್ಕಳ ಮನೆಗಳಿಗೆ/ ಕುಟುಂಬಗಳಿಗೆ ಒದಗಿಸಬೇಕು.
  8. ಈ ಮಹಾ ವೈರಾಣುವಿನಿಂದ ಬಾಧಿತಗೊಂಡಿರುವ ವಲಯಗಳಿಗೆ ಹಣಕಾಸು ಪ್ಯಾಕೇಜುಗಳನ್ನು ಸ್ಥಾಪಿಸಬೇಕು. ಈ ಹಣಕಾಸು ಬೆಂಬಲವನ್ನು ಕಂಪನಿಗಳು ಮತ್ತು ಉದ್ದಿಮೆಗಳಿಗೆ ಮುಂದಿನ ಮೂರು ತಿಂಗಳು ಲೇ-ಆಫ್ ಮಾಡುವುದಿಲ್ಲ, ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂಬ ಷರತ್ತಿನ ಮೇಲೆ ಕೊಡಬೇಕು.
  9. ಅನೌಪಚಾರಿಕ ಮತ್ತು ಅಸಂಘಟಿತ ವಲಯಗಳಲ್ಲಿ ಜೀವನಾಧಾರಗಳಿಗೆ ತೊಂದರೆಯಾಗಿರುವ ಎಲ್ಲ ಕಾರ್ಮಿಕರಿಗೆ ಹಣಕಾಸು ನೆರವು/ಭತ್ಯೆಯನ್ನು ನೀಡಲು ಒಂದು ನಿಧಿಯನ್ನು ಸ್ಥಾಪಿಸಬೇಕು.
  10. ಕೊರೊನ ವೈರಸ್ ಸೋಂಕಿನಿಂದಾಗಿ ಕೆಲಸದಿಂದ ದೂರವಿರಬೇಕಾದ ಕಾರ್ಮಿಕರು ಮತ್ತು ನೌಕರರಿಗೆ ಸಂಬಳ ಸಹಿತ ಕಾಯಿಲೆ ರಜಾ ನೀಡಬೇಕು.
  11. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಬ್ಯಾಂಕು ಸಾಲಗಳ ಮರುಪಾವತಿಯಲ್ಲಿ ಒಂದು ವರ್ಷದ ಋಣ ವಿಳಂಬದ ಸೌಲಭ್ಯವನ್ನು ನೀಡಬೇಕು.
  12. ಇಂದಿರಾ ಕ್ಯಾಂಟೀನ್ ಗಳಲ್ಲಿ  ಮೂರು ಹೊತ್ತು ಆಹಾರ ಲಭ್ಯವಾಗುವಂತೆ ಕ್ರಮವಹಿಸಬೇಕು.

ಯು. ಬಸವರಾಜ  ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *