ಕಾರ್ಪೋರೇಟ್ ಪರವಾದ ರೈತ-ಕಾರ್ಮಿಕ ಕಾಯ್ದೆ, ಸಂಹಿತೆಗಳನ್ನು ವಾಪಾಸ್ಸು ಪಡೆಯಿರಿ

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ದೇಶ ಹಾಗೂ ರಾಜ್ಯವನ್ನು ತೆರೆದು ಲೂಟಿಗೊಳಪಡಿಸುವ ದುರುದ್ದೇಶದಿಂದಲೇ ಜಾರಿಗೊಸುತ್ತಿರುವ ಕಾನೂನು ಮತ್ತು ಕಾಯ್ದೆಗಳು ಜನಪರ ಅಲ್ಲ, ಜನವಿರೋಧಿಯಾದದ್ದು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

ರೈತ ವಿರೋಧಿಯಾದ, ಒಪ್ಪಂದ ಕೃಷಿ ಕಾಯ್ದೆ, ವಿದ್ಯುತ್ ರಂಗವನ್ನು ಖಾಸಗೀಕರಣ ಮಾಡುವ ವಿದ್ಯುತ್ ತಿದ್ದುಪಡಿ ಮಸೂದೆ, ಏಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ, ಒಟ್ಟು ಐದು ಕೃಷಿ ಕಾಯ್ದೆಗಳನ್ನು  ಮತ್ತು ಕಾರ್ಮಿಕ ವಿರೋಧಿಯಾದ ನಾಲ್ಕು ಕಾರ್ಮಿಕ ಸಂಹಿತೆಗಳು ದೇಶದ ಗ್ರಾಹಕರನ್ನು ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣವೇ ವಾಪಾಸು ಪಡೆಯಬೇಕೆಂದು ಮತ್ತು ಸಾರ್ವಜನಿಕ ರಂಗದ ಉದ್ದಿಮೆಗಳಾದ ಬ್ಯಾಂಕ್, ವಿಮೆ, ಬಿಎಸ್ಎನ್ಎಲ್, ವಿಮಾನ, ರೈಲ್ವೇ, ಸಮುದ್ರ ಸಾರಿಗೆ, ಮುಂತಾದವುಗಳ ಮಾರಾಟವನ್ನು ಕೂಡಲೇ ನಿಲ್ಲಿಸಬೇಕೆಂದು ಸಿಪಿಐ(ಎಂ) ಬಲವಾಗಿ ಒತ್ತಾಯಿಸುತ್ತದೆ.

ಇದು ದೇಶದ ಸ್ವಾತಂತ್ರ್ಯವನ್ನು ಮರಳಿ ಕಾರ್ಪೊರೇಟ್ ಕಂಪನಿಗಳಿಗೆ ಒತ್ತೆ ಇಡುವ ದುಷ್ಠತನವಾಗಿದೆಯೆಂದು ಸಿಪಿಐ(ಎಂ) ಖಂಡಿಸಿದೆ.

ಕಳೆದ ಐದಾರು ತಿಂಗಳಿಂದ ಈ ಕುರಿತಂತೆ ರೈತರು, ಕಾರ್ಮಿಕರು ತೀವ್ರ ರೀತಿಯ ಚಳುವಳಿಯನ್ನು ನಡೆಸುತ್ತಿದ್ದಾರೆ. ದೆಹಲಿ ಸುತ್ತ – ಮುತ್ತ ಲಕ್ಷಾಂತರ ರೈತ ಕುಟುಂಬಗಳು ಕಳೆದ 110 ಕ್ಕೂ ಹೆಚ್ಚು ದಿನಗಳಿಂದ ಅನಿರ್ಧಿಷ್ಠ ಸಾಮೂಹಿಕ ಪ್ರತಿಭಟನಾ ಧರಣಿಯಲ್ಲಿ ತೊಡಗಿದ್ದಾರೆ. ಆದಾಗಲೂ ಕೇಂದ್ರ ಸರಕಾರ ರೈತರನ್ನು ಓಡಿಸುವ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆಯೇ ಹೊರತು ಅವರ ಕೋರಿಕೆಯನ್ನು ಪರಿಗಣಿಸುತ್ತಿಲ್ಲ. ಅದೇ ರೀತಿ, ರಾಜ್ಯದ ರೈತ- ಕಾರ್ಮಿಕರ ತೀವ್ರ ತರದ ಚಳುವಳಿಗೆ ಯಾವುದೇ  ಬೆಲೆಯನ್ನು ನೀಡುತ್ತಿಲ್ಲವೆಂದು ಸರಕಾರಗಳ ನಿರ್ಲಕ್ಷ್ಯವನ್ನು ಸಿಪಿಐ(ಎಂ) ಖಂಡಿಸುತ್ತದೆ.

ರೈತರ ಕುರಿತು ಅನುಸರಿಸುವ ಗೋಸುಂಬೆ ನೀತಿಯನ್ನು ಕೈಬಿಟ್ಟು, ಬೆಲೆಗಳ ಏರಿಳಿತ ಮಾಡಿ ಕೃಷಿಕರನ್ನು ಉತ್ಪನ್ನಗಳನ್ನು ಲೂಟಿಗೊಳಪಡಿಸುವ ಕಾರ್ಪೋರೇಟ್ ಹಾಗೂ ಸಗಟು ವ್ಯಾಪಾರವನ್ನು ನಿಯಂತ್ರಿಸಲು ಕೃಷಿ ಆಯೋಗದ ಅಧ್ಯಕ್ಷರಾಗಿದ್ದ ಡಾ.ಎಂ.ಎಸ್ ಸ್ವಾಮಿನಾಥನ್ ಸಲಹೆಯಂತೆ ವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಸಿ ಅದು ರೈತರಿಗೆ ಖಾತರಿಯಾಗಿ ದೊರೆಯುವಂತೆ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಮತ್ತು ಸಾರ್ವಜನಿಕ ರಂಗದ ಸಾಲ ಅಗತ್ಯದಷ್ಠು ದೊರೆಯುವಂತೆ ಮಾಡುವ ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಫಸಲಿಗೆ ಹಾಗೂ ಉದ್ಯೋಗಕ್ಕೆ ನಷ್ಟ ಉಂಟಾದಾಗ ಸಾಲಮನ್ನಾ ಮಾಡುವಂತಹ ಕೇರಳ ಮಾದರಿಯಲ್ಲಿ ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಅಕ್ರಮವಾಗಿ ಜಾರಿಗೊಳಿಸುತ್ತಿರುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಜಾನುವಾರು ಹಿತ ರಕ್ಷಣೆಯ ಯಾವುದೇ ಉದ್ದೇಶವಿರುವುದಿಲ್ಲ, ಬದಲಿಗೆ ಕೃಷಿಕರ ಉಪಕಸುಬನ್ನು ಅಪಹರಿಸಿ, ಹೈನುಗಾರಿಕೆ ಮತ್ತು ಜಾನುವಾರು ಆಧಾರಿತ ಹೈನು, ಮಾಂಸ, ಚರ್ಮ ಹಾಗೂ ಔಷಧಿ ಉದ್ಯಮಗಳನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆಯುವ ಮತ್ತು ಜನತೆಯನ್ನು ಒಡೆದಾಳುವ ಹಾಗೂ ಜನತೆಯ ಆಹಾರದ ಉದ್ಯೋಗದ ಮತ್ತು ಬದುಕುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ದುರುದ್ದೇಶವಿದೆಯೆಂದು ಸಿಪಿಐ(ಎಂ) ಕಟುವಾಗಿ ಠೀಕಿಸಿದೆ.

ಯು.ಬಸವರಾಜ, ರಾಜ್ಯ ಸಮಿತಿ ಕಾರ್ಯದರ್ಶಿ
ಕೆ.ಶಂಕರ್, ರಾಜ್ಯ ಮುಖಂಡರು
ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ, ಉಡುಪಿ ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *