ಚುನಾವಣಾ ಬಾಂಡ್ ಬಗ್ಗೆ ಸುಪ್ರಿಂ ಕೋರ್ಟ್: ವಾಸ್ತವ ಪ್ರಶ್ನೆಯಿಂದ ನುಣುಚಿಕೊಳ್ಳುವ ಕ್ರಮ

prakash karat
ಪ್ರಕಾಶ್ ಕಾರಟ್

ಚುನಾವಣಾ ಬಾಂಡುಗಳ ವಿರುದ್ಧ ಅರ್ಜಿಗಳನ್ನು ಕೈಗೆತ್ತಿಕೊಳ್ಳದೇ ಹಾಗೂ ಯೋಜನೆ ಕಾನೂನಿನ ಅಡ್ಡಿಯಿಲ್ಲದೆ ಮೂರು ವರ್ಷಗಳಿಂದ ಜಾರಿಯಲ್ಲಿದೆ ಎಂದು ಹೇಳುವುದು ರಾಜಕೀಯ ದೇಣಿಗೆಯ ಕುತ್ಸಿತ ವ್ಯವಸ್ಥೆಯನ್ನು ವಸ್ತುಶಃ ಕಾನೂನುಬದ್ಧಗೊಳಿಸಿದಂತಾಗಿದೆ. ಮೂರು ವರ್ಷದಷ್ಟು ದೀರ್ಘ ಕಾಲದಿಂದ ಚುನಾವಣಾ ಬಾಂಡ್ ಕುರಿತ ಪ್ರಕರಣವನ್ನು ಕೈಗೆತ್ತಿಕೊಳ್ಳದಿರುವ ಮೂಲಕ ಸುಪ್ರೀಂ ಕೋರ್ಟ್ ಕರ್ತವ್ಯಚ್ಯುತಿ ಎಸಗಿದೆ. ನ್ಯಾಯಾಲಯದ ಮೇಲೆ ರಾಜಕೀಯ ನಿಧಿ ನೀಡಿಕೆಯಲ್ಲಿ  ಪಾರದರ್ಶಕತೆ ಖಾತರಿಪಡಿಸುವ ಹಾಗೂ ಲೆಕ್ಕಕ್ಕೆ ಸಿಗದ ಮತ್ತು ರಹಸ್ಯ ಮೂಲಗಳ ಹಣದ ಮೂಲಕ ಪ್ರಜಾಪ್ರಭುತ್ವದ ವಿಕೃತಿಯನ್ನು ತಡೆಗಟ್ಟುವ ಹೊಣೆಗಾರಿಕೆಯಿದೆ. ವಿಚಾರದಲ್ಲಿ ಕೋರ್ಟ್ ಎಷ್ಟು ಬೇಗ ಕ್ರಮ ಕೈಗೊಳ್ಳುತ್ತದೋ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಷ್ಟು ಒಳ್ಳೆಯದು ಎಂದು ಸಿಪಿಐ(ಎಂ) ಪೋಲಿಟ್‌ ಬ್ಯೂರೋ ಸದಸ್ಯರಾದ ಪ್ರಕಾಶ್‌ ಕಾರಟ್‌ ವಿಶ್ಲೇಷಿದ್ದಾರೆ.

ಏಪ್ರಿಲ್ 1 ರಿಂದ 10 ರ ವರೆಗೆ ಚುನಾವಣಾ ಬಾಂಡ್‌ಗಳ ಪ್ರಸಕ್ತ ಕಂತು ಬಿಡುಗಡೆ ಮಾಡುವುದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಬಾಂಡ್ ನೀಡಿಕೆಗೆ ತಡೆಯಾಜ್ಞೆ ಕೊಡುವಂತೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸರಕಾರೇತರ ಸಂಘಟನೆ ತುರ್ತು ಮನವಿ ಮಾಡಿತ್ತು.

ಬಾಂಡ್ ಯೋಜನೆ ಕಳೆದ ಮೂರು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಸಾಗಿದೆ. ಸುರಕ್ಷತಾ ಕ್ರಮಗಳನ್ನೂ ಅಳವಡಿಸಲಾಗಿದೆ ಎಂದು ಕೋರ್ಟ್ ಹೇಳಿದೆ. ಆದರೆ ಇವು ಒಪ್ಪಬಹುದಾದ ಕಾರಣಗಳಲ್ಲ. ಈ ಯೋಜನೆಯೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಅಪಾರದರ್ಶಕ ಮಾರ್ಗವಾಗಿದೆ ಹಾಗೂ ಅದರೊಳಗೇ ಆಳುವ ಪಕ್ಷದ ಪರವಾದ ಅಂಶ ಸೇರಿಕೊಂಡಿದೆ ಎಂಬುದೇ ಇಡೀ ಅಂಶ ಎನ್ನುವುದನ್ನು ಇಲ್ಲಿ ಗಮನಿಸುವುದು ಮುಖ್ಯ. ತಾವು ಪಡೆದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಸೀಲ್ ಮಾಡಿದ ಲಕೋಟೆಗಳಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ 2019ರಲ್ಲಿ ಆದೇಶಿಸಿತ್ತು. ಇದೇ ಕೋರ್ಟ್ ಉಲ್ಲೇಖಿಸಿರುವ ಸುರಕ್ಷತಾ ಕ್ರಮ. ಅದು ಆ ಸಂದರ್ಭ ಮಂಜೂರು ನೀಡಿದ್ದ ಬಾಂಡ್‌ಗಳ  ಕಂತಿಗೆ ಸಂಬಂಧಿಸಿದ್ದಾಗಿದ್ದು ಅದನ್ನನುಸರಿಸಿ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ.

ELECTORAL BOND-swachhaning
ಕಪ್ಪು ಹಣ-ಸ್ವಚ್ಛತೆಯೇ ಸೇವೆ! – ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

ಮೂಲ ಸಮಸ್ಯೆ

ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು 2018 ರಿಂದಲೂ ಬಾಕಿಯಿವೆ. ಅವನ್ನು ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳುತ್ತಿಲ್ಲ ಎನ್ನುವುದೇ ಮೂಲಭೂತ ಸಮಸ್ಯೆಯಾಗಿದೆ. ಸಿಪಿಐ(ಎಂ) ಕೂಡ ಈ ಬಾಂಡ್ ಗಳಿಗೆ ಸವಾಲು ಹಾಕುವ ಒಂದು ರಿಟ್ ಅರ್ಜಿಯನ್ನು ಸಲ್ಲಿಸಿದೆ.

ಈ ಅರ್ಜಿಗಳನ್ನು ಕೈಗೆತ್ತಿಕೊಳ್ಳದೇ ಹಾಗೂ ಯೋಜನೆ ಕಾನೂನು ಅಡ್ಡಿಯಿಲ್ಲದೆ ಮೂರು ವರ್ಷಗಳಿಂದ ಜಾರಿಯಲ್ಲಿದೆ ಎಂದು ಹೇಳುವುದು ರಾಜಕೀಯ ದೇಣಿಗೆಯ ಒಂದು ಕುತ್ಸಿತ ವ್ಯವಸ್ಥೆಯಾದ ಚುನಾವಣಾ ಬಾಂಡ್ ಯೋಜನೆಯನ್ನು ವಸ್ತುಶಃ ಕಾನೂನುಬದ್ಧಗೊಳಿಸಿದಂತಾಗಿದೆ. ಅದು ಪಾರದರ್ಶಕವಲ್ಲದ, ಆಳುವ ಪಕ್ಷ ಮಾಡಿಕೊಡುವ ಅನುಕೂಲಕ್ಕೆ ಪ್ರತಿಯಾಗಿ ಕಾರ್ಪೊರೇಟ್ ಕಂಪೆನಿಗಳು ದೇಣಿಗೆ ಕೊಡಲು ಅನುವು ಮಾಡಿಕೊಡುವ, ಕೊಡು-ಕೊಳ್ಳುವ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ, ದೇಣಿಗೆದಾರರೂ ತಾವು ಬಾಂಡ್ ಮೂಲಕ ಯಾರಿಗೆ ಹಣ ಕೊಡುತ್ತಿದ್ದೇವೆ ಎಂದು ಬಹಿರಂಗಪಡಿಸಬೇಕಿಲ್ಲ; ಅದೇ ರೀತಿ, ದೇಣಿಗೆಯ ಮೂಲವನ್ನು ಅದನ್ನು ಪಡೆದ ರಾಜಕೀಯ ಪಕ್ಷವೂ ಬಹಿರಂಗ ಪಡಿಸಬೇಕೆಂದೇನೂ ಇಲ್ಲ. ಅಂದರೆ  ಗಿಂಬಳಗಳು ಹಾಗೂ ಅಕ್ರಮ ಹಣ ಹರಿದು ಬರಲು ಒಂದು ಪರಿಪೂರ್ಣ ರಹದಾರಿ. ಅಕ್ರಮ ಹಣವನ್ನು ಒಂದು ರಾಜಕೀಯ ಪಕ್ಷಕ್ಕೆ ಕಾನೂನುಬದ್ಧವಾಗಿ ಹರಿಸಲು ಹುಸಿ (ಶೆಲ್) ಕಂಪೆನಿಗಳನ್ನು ರಚಿಸಬಹುದಾಗಿದೆ.

ಬಿಜೆಪಿಗಷ್ಟೇ ಲಾಭ

ಮಾಹಿತಿ ಹಕ್ಕು ಕಾನೂನು (ಆರ್‌ಟಿಐ) ಅನ್ವಯ ಪಡೆದ ಉತ್ತರಗಳ ಮಾಹಿತಿಗಳ ಪ್ರಕಾರ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 2018ರ ಫೆಬ್ರವರಿಯಿಂದ ಇದುವರೆಗೆ 14 ಹಂತಗಳಲ್ಲಿ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ. 2020ರ ಅಂತ್ಯದವರೆಗೆ ಒಟ್ಟು 12,773 ಬಾಂಡ್‌ಗಳನ್ನು ನೀಡಲಾಗಿದೆ. ಆ ಪೈಕಿ 6,472 ಕೋಟಿ ರೂಪಾಯಿ ಮೌಲ್ಯದ 12,632 ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡಿವೆ. 2018ರ ಫೆಬ್ರವರಿಯಲ್ಲಿ ಮೊದಲ ಕಂತಿನಲ್ಲಿ 222 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಮಾರಲಾಗಿತ್ತು. ಅದರಲ್ಲಿ ಶೇಕಡಾ 94.5ರಷ್ಟು, ಅಂದರೆ 210 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಬಿಜೆಪಿಗೆ ಸಂದಾಯವಾಗಿತ್ತು. ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಸಿದ ಲೆಕ್ಕಪರಿಶೋಧಿತ ವರದಿಯಿಂದ ಇದು ಗೊತ್ತಾಗುತ್ತದೆ. ಮುಂದಿನ ಎಲ್ಲ ಕಂತುಗಳಲ್ಲಿ  ಕೂಡ ಬಿಜೆಪಿಯೇ ಶೇಕಡ 90ಕ್ಕಿಂತ ಅಧಿಕ ಮೌಲ್ಯದ ಬಾಂಡ್‌ಗಳನ್ನು ಪಡೆದಿದೆ.

ಈ ದೇಣಿಗೆಗಳು ಕಾರ್ಪೊರೇಟ್ ಕಂಪೆನಿಗಳು ಅಥವಾ ಅತೀ ಶ್ರೀಮಂತ ವ್ಯಕ್ತಿಗಳಿಂದ ಬಂದಿವೆ ಎನ್ನುವುದು ಸ್ಪಷ್ಟ. ಯಾಕೆಂದರೆ ಇದುವರೆಗೆ ಬಿಡುಗಡೆ ಮಾಡಲಾದ ಬಾಂಡ್‌ಗಳಲ್ಲಿ ಪ್ರತಿಶತ 92.12 ಬಾಂಡ್‌ಗಳ ಮೌಲ್ಯ  ಮುಖಬೆಲೆ ಒಂದು ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನದ್ದು.

ಹಣದ ಹೊಳೆ ಹರಿದು ಬರಲು

ಬಾಂಡ್ ಯೋಜನೆ ಜೊತೆಜೊತೆಯಲ್ಲೇ ಮೋದಿ ಸರ್ಕಾರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು(ಎಂಎನ್‌ಸಿ) ವಿದೇಶಿ ಕಂಪೆನಿಗಳೆಂದು ಪರಿಗಣಿತವಾಗದೆ ಭಾರತದ ಕಂಪೆನಿಗಳೆಂದೇ ದೇಣಿಗೆ ನೀಡಲು ಸಾಧ್ಯವಾಗುವಂತೆ ಸಂಬಂಧಪಟ್ಟ ಕಾನೂನಿಗೆ ತಿದ್ದುಪಡಿ ತಂದಿದೆ. ಇದಲ್ಲದೆ, ಯಾವುದೇ ಕಂಪೆನಿ, ಮೂರು ವರ್ಷಗಳ ಸರಾಸರಿ ಲಾಭದ ಶೇಕಡ 7.5ಕ್ಕಿಂತ ಹೆಚ್ಚಿನ ಹಣವನ್ನು ರಾಜಕೀಯ ದೇಣಿಗೆಯಾಗಿ ನೀಡಬಾರದೆಂಬ ಮಿತಿಯನ್ನು ಕೂಡ ಮೋದಿ ಸರ್ಕಾರ ತೆಗೆದು ಹಾಕಿದೆ.

ಇದು, ವಿದೇಶಿ ಕಂಪೆನಿಗಳಿಂದ ಮತ್ತು ಭಾರತೀಯ ಕಂಪೆನಿಗಳಿಂದ ಲೆಕ್ಕವಿಲ್ಲದಷ್ಟು ಹಣ ಆಳುವ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ಬರಲು  ಹೆಬ್ಬಾಗಿಲನ್ನೇ ತೆರೆದು  ಕೊಟ್ಟಿದೆ. ಮೋದಿ ಸರ್ಕಾರದ ಸರ್ವಾಧಿಕಾರಶಾಹೀ ಸ್ವರೂಪದಿಂದಾಗಿ ಹೆಚ್ಚಿನ ಕಂಪನಿಗಳು ಪ್ರತಿಪಕ್ಷಗಳಿಗೆ ದೇಣಿಗೆ ನೀಡುವ ಅಪಾಯಕ್ಕೆ ಕೈ ಹಾಕುವುದಿಲ್ಲ. ಸಾರ್ವಜನಿಕ ದೃಷ್ಟಿಯಿಂದ ಈ ಬಾಂಡ್‌ಗಳು ಅನಾಮಿಕವಾಗಿದ್ದರೂ ಯಾರು ಬಾಂಡ್‌ಗಳನ್ನು ಪಡೆಯುತ್ತಿದ್ದಾರೆ ಎನ್ನುವುದನ್ನು ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಮೂಲಕ ತಿಳಿಯಲು  ಸರ್ಕಾರಕ್ಕೆ ಸಾಧ್ಯವಿದೆ.

ಇದೇ ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಬಾಂಡ್‌ಗಳು ವಿಧಾನಸಭಾ  ಚುನಾವಣೆಗಳಿಗಾಗಿ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಗೆ ನಿಧಿ ಒದಗಿಸಲು ನೆರವಾಗಲಿವೆ. ಇದುವರೆಗೆ ಮುಂಬಯಿ ಬಿಟ್ಟರೆ ಅತಿ ಹೆಚ್ಚು ಬಾಂಡ್ ಬಿಡುಗಡೆಯಾಗಿರುವುದು ಕೋಲ್ಕತಾದಲ್ಲಿಯೇ. ಮುಂಬಯಿ ನಂತರ  ದೊಡ್ಡ ಉದ್ಯಮಗಳು ಅತೀ ಹೆಚ್ಚಾಗಿ ಕೇಂದ್ರೀಕರಣಗೊಂಡಿರುವುದು ಕೋಲ್ಕತಾದಲ್ಲೇ ಎನ್ನುವುದು ಗಮನಾರ್ಹ.

name is bond-electoral bond
“ಹೆಸರು ಬಾಂಡ್, ಚುನಾವಣಾ ಬಾಂಡ್”- ಪ್ರಜಾಪ್ರಭುತ್ವದೊಂದಿಗೆ ಚೆಲ್ಲಾಟ! – ವ್ಯಂಗ್ಯಚಿತ್ರ: ಸಂದೀಪ್ ಅಧ್ವರ್ಯು, ಟೈಮ್ಸ್‌ ಆಫ್ ಇಂಡಿಯಾ

ಹುರುಳಿಲ್ಲದ ದಾವೆ

ಚುನಾವಣಾ ಬಾಂಡ್ ಯೋಜನೆಯು ಚುನಾವಣೆಗಳಲ್ಲಿ ಕಪ್ಪು ಹಣವನ್ನು ತೊಡೆದು ಹಾಕಿ  ಬಿಳಿ ಹಣಕ್ಕೆ ಪ್ರೋತ್ಸಾಹ ನೀಡುತ್ತದೆ ಎಂಬ ಸರಕಾರದ ದಾವೆಯಲ್ಲಿ ಕೂಡ ಎಳ್ಳಷ್ಟೂ ಹುರುಳಿಲ್ಲ. ಉದ್ಯಮಿಗಳ ಮೂಲದಿಂದ ಬರುವ ಅಪಾರ ಕಪ್ಪುಹಣದ ಮೊತ್ತಗಳೇ ಚುನಾವಣಾ ನಿಧಿಗಳ ಪ್ರಮುಖ ಭಾಗವಾಗಿರುತ್ತವೆ ಎನ್ನುವುದು ಸುಸ್ಪಷ್ಟ. ಬಿಜೆಪಿ, ಬಾಂಡ್‌ಗಳ ಮೂಲಕ ಕಾರ್ಪೊರೇಟ್ ಕುಳಗಳು ಹಾಗೂ ಸೂಪರ್-ಸಿರಿವಂತರಿಂದ ಕಾನೂನುಬದ್ಧ ದೇಣಿಗೆಗಳ ಮೇಲೆ ಏಕಸ್ವಾಮ್ಯ ಸಾಧಿಸುವುದರೊಂದಿಗೇ, ಅವೇ ಮೂಲಗಳಿಂದ ಲೆಕ್ಕವಿಲ್ಲದ ಅಘೋಷಿತ ಹಣದಿಂದಲೂ ಅಪಾರ ಮೊತ್ತಗಳನ್ನು ಎತ್ತುತ್ತದೆ. ದೊಡ್ಡ ಉದ್ಯಮಪತಿಗಳೊಂದಿಗೆ ಸಂಪರ್ಕ ಕೂಟವನ್ನು ಔಪಚಾರಿಕಗೊಳಿಸಲು ಚುನಾವಣಾ ಬಾಂಡ್ ಆಳುವ ಪಕ್ಷಕ್ಕೆ ಅಮೂಲ್ಯ ಸಾಧನವಾಗಿದೆ.

ನ್ಯಾಯಾಲಯದ ಹೊಣೆಗಾರಿಕೆ

ಮೂರು ವರ್ಷದಷ್ಟು ದೀರ್ಘ ಕಾಲದಿಂದ ಚುನಾವಣಾ ಬಾಂಡ್ ಕುರಿತ ಪ್ರಕರಣವನ್ನು ಕೈಗೆತ್ತಿಕೊಳ್ಳದಿರುವ ಮೂಲಕ ಸುಪ್ರೀಂ ಕೋರ್ಟ್ ಕರ್ತವ್ಯಚ್ಯುತಿ ಎಸಗಿದೆ. ಸಂವಿಧಾನದ 370ನೇ ವಿಧಿಯ ರದ್ಧತಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರದಲ್ಲೂ ಅದು ಹೀಗೇ ಮಾಡಿದೆ. ನ್ಯಾಯಾಂಗ ನುಣುಚಿಕೆಯ ಈ ಪ್ರವೃತ್ತಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಾಲದಿಂದ ಎದ್ದು ಕಾಣುತ್ತಿದೆ.

ನ್ಯಾಯಾಲಯದ ಮೇಲೆ ರಾಜಕೀಯ ನಿಧಿ ನೀಡಿಕೆಯಲ್ಲಿ  ಪಾರದರ್ಶಕತೆ ಖಾತರಿಪಡಿಸುವ ಹಾಗೂ ಲೆಕ್ಕಕ್ಕೆ ಸಿಗದ ಮತ್ತು ರಹಸ್ಯ ಮೂಲಗಳ ಹಣದ ಮೂಲಕ ಪ್ರಜಾಪ್ರಭುತ್ವದ ವಿಕೃತಿಯನ್ನು ತಡೆಗಟ್ಟುವ  ಹೊಣೆಗಾರಿಕೆಯಿದೆ. ಈ ವಿಚಾರದಲ್ಲಿ ಕೋರ್ಟ್ ಎಷ್ಟು ಬೇಗ ಕ್ರಮ ಕೈಗೊಳ್ಳುತ್ತದೋ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಅಷ್ಟು ಒಳ್ಳೆಯದಾಗುತ್ತದೆ.

ಅನು: ವಿಶ್ವ

Leave a Reply

Your email address will not be published. Required fields are marked *