ಸಾರ್ವಜನಿಕ ಸ್ಮಶಾನಗಳನ್ನು ಒದಗಿಸಲು ಆಗ್ರಹ

ಕರ್ನಾಟಕದ ಹಳ್ಳಿಗಳು, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಮಶಾನಗಳನ್ನು ಒದಗಿಸಲು ಯಡಿಯೂರಪ್ಪ ಸರ್ಕಾರ ಏನೇನು ಕ್ರಮಕೈಗೊಳ್ಳದಿರುವುದು ಅಮಾನವೀಯ ಕ್ರಮವಾಗಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 39,340 ಗ್ರಾಮಗಳಿವೆ. ಈ ಪೈಕಿ 7,069 ಗ್ರಾಮಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶವನ್ನೇ ಕಲ್ಪಿಸಲಾಗಿಲ್ಲ.

ಸ್ಮಶಾನದ ಕೊರತೆ ಹೊಸ ಸಮಸ್ಯೆಯೇನೂ ಅಲ್ಲ. ಹಲವಾರು ಗ್ರಾಮಗಳ ಜನರು ಅನೇಕ ದಶಕಗಳಿಂದಲೂ ಸ್ಮಶಾನಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ವ್ಯಕ್ತಿಯೊಬ್ಬ ಮೃತ ಪಟ್ಟಾಗ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ದೊರೆಯದಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳು ಹಲವು ಬಾರಿ ಈ ಕುರಿತು ಸರ್ಕಾರಗಳ ಗಮನ ಸೆಳೆದಿವೆ.

ಸ್ಮಶಾನದ ಕೊರತೆ ಗ್ರಾಮೀಣ ಪ್ರದೇಶದ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಸ್ವಂತ ಜಮೀನು ಹೊಂದಿರುವ ಕುಟುಂಬಗಳು ತಮ್ಮ ಜಮೀನಿನಲ್ಲೇ ಅನಿವಾರ್ಯವಾಗಿ ಶವಸಂಸ್ಕಾರ ನಡೆಸುತ್ತಾರೆ. ಆದರೆ ಭೂರಹಿತ ಕುಟುಂಬಗಳಲ್ಲಿ ಸಾವು ಸಂಭವಿಸಿದಾಗ ಆ ಕುಟುಂಬಗಳು ಅನುಭವಿಸುವ ಪಡಿಪಾಟಲು ಹೇಳತೀರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ಸಮುದಾಯಗಳ ಪರಿಸ್ಥಿತಿ ಇನ್ನೂ ಶೋಚನೀಯ.

ಸಾರ್ವಜನಿಕ ಸ್ಮಶಾನಗಳನ್ನು ಹೊಂದಿರುವ ಹಳ್ಳಿಗಳಲ್ಲೂ ಸಮಸ್ಯೆಗಳಿಗೆ ಕೊನೆ ಇಲ್ಲ. ಹಲವೆಡೆ ಬಲಾಢ್ಯರು ಸ್ಮಶಾನದ ಜಮೀನುಗಳನ್ನೇ ಒತ್ತುವರಿ ಮಾಡಿಕೊಂಡಿರುವ ಅನೇಕ ಉದಾಹರಣೆಗಳಿವೆ. ಸ್ಮಶಾನಗಳನ್ನು ಎಲ್ಲರೂ ಮುಕ್ತವಾಗಿ ಬಳಸಲು ಅವಕಾಶ ಇಲ್ಲದಂತಹ ಸ್ಥಿತಿ ಕೆಲವು ಹಳ್ಳಿಗಳಲ್ಲಿ ಈಗಲೂ ಇದೆ.

ಸ್ಮಶಾನಗಳ ಕೊರತೆಯ ಸಮಸ್ಯೆಯ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕ್ ತಹಶಿಲ್ದಾರರ ಕಚೇರಿ ಮುಂಭಾಗ ಸಾಮೂಹಿಕ ಧರಣಿ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಇದೇ ಉದ್ದೇಶಕ್ಕಾಗಿ ಚುನಾವಣಾ ಬಹಿಷ್ಕಾರ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳಿಗೆ ಘೇರಾವ್ ಹಾಕುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ, ಆದರೆ ನ್ಯಾಯ ಸಿಕ್ಕಿದ್ದು ವಿರಳ.

ಇದೇ ವಿಷಯದಲ್ಲಿ ಹಳ್ಳಿಗಳಲ್ಲಿ ಆಗಾಗ ಸಂಘರ್ಷಗಳೂ ನಡೆದಿವೆ. ಶವಗಳನ್ನೆ ಮುಂದೆ ಇರಿಸಿಕೊಂಡು ಧರಣಿ ನಡೆಸುವುದು, ರಸ್ತೆ ಬದಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಜನರು ತಮ್ಮ ಆಕ್ರೋಶ ಹೊರಹಾಕಲು ಪ್ರಯತ್ನಿಸುತ್ತಾ ಇವೆ.

ಕರ್ನಾಟಕ ಭೂ ಕಾಯ್ದೆಯ ಸೆಕ್ಷನ್ 71ರ ಅಡಿಯಲ್ಲಿ ಸ್ಮಶಾನಕ್ಕೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಭೂಮಿಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗಾಗಿ ಸ್ಮಶಾನ ಒದಗಿಸಲು ಉಪಯೋಜನೆ ಅನುದಾನ ಬಳಕೆಗೆ ಕಾನೂನು ಅವಕಾಶ ಇದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ ಧೋರಣೆ ಸಮರ್ಥನೀಯವಲ್ಲ. ಪ್ರತಿ ಹಳ್ಳಿಗೆ ಕನಿಷ್ಟ ಒಂದಾದರೂ ಸಾರ್ವಜನಿಕ ಸ್ಮಶಾನವನ್ನು ಒದಗಿಸಲು ಸರ್ಕಾರ ಭೂಮಿಯನ್ನು ಒದಗಿಸಬೇಕು.

ಸ್ಮಶಾನಗಳಲ್ಲಿ ಮಸಣ ಕಾರ್ಮಿಕರಾಗಿ ದುಡಿಯುತ್ತಿರುವ ಕೆಲಸಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಯಾವುದೇ ಕಾಯಂ ವೇತನವಿಲ್ಲ. ಯಾರೊಬ್ಬನು ಸಾಯುವುದನ್ನೇ ಅವರು ಎದುರು ನೋಡಬೇಕಾಗಿದೆ. ಇವರನ್ನು ನಗರಸಭೆ, ಪುರಸಭೆ ಅಥವಾ ಗ್ರಾಮ ಪಂಚಾಯತಿಗಳ ಕೆಲಸಗಾರರೆಂದು ನೇಮಿಸಿ ಕನಿಷ್ಠ ವೇತನ ಮುಂತಾದ ಕಾನೂನು ಸೌಲಭ್ಯಗಳನ್ನು ಒದಗಿಸಬೇಕಾಗಿದೆ.

Leave a Reply

Your email address will not be published. Required fields are marked *