ಲಿಂಗ ಆಯ್ಕೆಯ ನಿಯಮಗಳ ಅಮಾನತು ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು

– ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ

pcpndt actಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಪ್ರಿಲ್ ೪ರಂದು ಒಂದು ಗಜೆಟ್ ಅಧಿಸೂಚನೆಯ ಮೂಲಕ ಪಿಸಿ&ಪಿಎನ್‌ಡಿಟಿ (ಗರ್ಭಧಾರಣಾ-ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳ) ಕಾಯ್ದೆಯ ಕೆಲವು ನಿಯಮಗಳನ್ನು, ಅಂದರೆ ಲಿಂಗ ಪತ್ತೆ ನಿಷೇಧ ಕುರಿತ ಕೆಲವು ನಿಯಮಗಳನ್ನು ಜೂನ್ 30 ರ ವರೆಗೆ  ಅಮಾನತುಗೊಳಿಸಿರುವುದಾಗಿ ತಿಳಿಸಿದೆ. ಇದನ್ನು ಕೊವಿಡ್-19 ಉಂಟು ಮಾಡಿರುವ ಅಭೂತಪೂರ್ವ ಸನ್ನಿವೇಶದ ಹೆಸರಿನಲ್ಲಿ ಮಾಡಲಾಗಿದೆ.
ವಾಸ್ತವವಾಗಿ ವೈದ್ಯಕೀಯ ಸೌಲಭ್ಯಗಳು ಸರಕಾರ ಪ್ರಕಟಿಸಿರುವ ಆವಶ್ಯಕ ಸೇವೆಗಳ ಪಟ್ಟಿಯಲ್ಲಿವೆ. ಆದ್ದರಿಂದ ಕೊವಿಡ್-19 ರ ಹೆಸರಿನಲ್ಲಿ ಈ ಕ್ರಮದ ಅಗತ್ಯವಿರಲಿಲ್ಲ. ಈ ಅಧಿಸೂಚನೆ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಈ ಕುರಿತು ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಸಿಪಿಐ(ಎಂ)ನ ಹಿರಿಯ ಮುಖಂಡರೂ, ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಬೃಂದಾ ಕಾರಟ್ ಪತ್ರ ಬರೆದು ಇದನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಮುಖ್ಯವಾಗಿ ಈ ನಿಯಮಗಳಲ್ಲಿ ಪರಿಚ್ಛೇದ 9(8) ರ ಅಮಾನತು ಬಹಳ ಕಳವಳಕಾರಿ. ಲಿಂಗ ಪತ್ತೆ ಕೇಂದ್ರಗಳು ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಹಿಂದಿನ ತಿಂಗಳು ಮಾಡಿದ ಎಲ್ಲ ತಪಾಸಣೆಗಳು, ಪರೀಕ್ಷಣೆಗಳು, ವಿಧಾನಗಳು ಮತ್ತು ತಂತ್ರವಿಧಾನಗಳ ಬಳಕೆಯ  ವರದಿಯನ್ನು  ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಬೇಕು ಎಂದು ಈ ನಿಯಮ ಹೇಳುತ್ತದೆ. ಇದರ ಅಮಾನತಿನ ಅರ್ಥ ಜೂನ್ 30ರ ವರೆಗೆ ಇಂತಹ ಯಾವುದೇ ವರದಿಗಳನ್ನು ಸಲ್ಲಿಸಬೇಕಾಗಿಲ್ಲ. ಆವಶ್ಯಕ ಸೇವೆಯೆಂದು ಲಿಂಗ ಪತ್ತೆ ಕೇಂದ್ರಗಳು ತೆರೆದಿರುತ್ತವೆ, ಆದರೆ ಅವು ವರದಿ ಸಲ್ಲಿಸಬೇಕಾಗಿಲ್ಲ ಎಂದರೆ ಈ ಅವಧಿಯಲ್ಲಿ  ಲಿಂಗ ಪತ್ತೆ ಪರೀಕ್ಷೆಗಳನ್ನು ಯಾವುದೇ ಅಡೆ-ತಡೆಯಿಲ್ಲದೆ ನಡೆಸಲು ಇದನ್ನು ದುರುಪಯೋಗ ಪಡಿಸಿಕೊಳ್ಳಬಹುದು.
ಅಲ್ಲದೆ ಲಾಕ್‌ಡೌನ್ ಇರುವುದು ಎಪ್ರಿಲ್ 14 ರ ವರೆಗೆ, ಆದರೂ ಈ ಅಮಾನತು ಅವಧಿಯನ್ನು ಜೂನ್ 30 ರ ವರೆಗೂ ಇಟ್ಟಿರುವುದು ಕೂಡ ಕಳವಳಕಾರಿ.
ನಿಯಮ 8 ಮತ್ತು 18ಎ ಪತ್ತೆ ಕೇಂದ್ರಗಳ ದಾಖಲಾತಿ ಮತ್ತು ಸಲಹಾ ಮಂಡಳಿ ಮತಿತ್ತರ ಪ್ರಾಧಿಕಾರಗಳ ಸಬೆಗಳನ್ನು ಕುರಿತಾಗಿದ್ದು, ಇವನ್ನೂ ಅಮಾನತಿನಲ್ಲಿಡಲಾಗಿದೆ. ಬೇರೆಲ್ಲ ವೃತ್ತಿಪರ ಸಂಸ್ಥೆಗಳ ಸಭೆಗಳನ್ನು  ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಮಾಡುತ್ತಿರುವಾಗ ಈ ಕಾಯ್ದೆಗೆ ಮಾತ್ರ ವಿಶೇಷ ವಿನಾಯ್ತಿ ಏಕೆ ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಕೇಳಿದ್ದಾರೆ.
ಈ ನಿಯಮಗಳನ್ನು ಅಮಾನತುಗೊಳಿಸಲು ತುರ್ತು ಕಾರಣಗಳೇನೂ ಇಲ್ಲ. ಬೇರೆ ಯಾವ ಕಾಯ್ದೆಯ ವಿಷಯದಲ್ಲಿ ಹೀಗೆ ಮಾಡಿಲ್ಲ. ಅಲ್ಲದೆ ಸಂಸತ್ತಿನ ಮುಂದೆ ಇಟ್ಟಿರುವ ನಿಯಮಗಳನ್ನು ಹೀಗೆ ಅಮಾನತಿನಲ್ಲಿಡಲು ಆರೋಗ್ಯ ಮಂತ್ರಾಲಯಕ್ಕೆ ಅಧಿಕಾರ ಇದೆಯೇ ಎಂಬ ಪ್ರಶ್ನೆಯೂ ಏಳುತ್ತದೆ.
ದೇಶದಲ್ಲಿ ಲಿಂಗಾನುಪಾತದ ಪ್ರಶ್ನೆ ಬಹಳ ಗಂಭೀರವಾಗಿರುವಾಗ ಈ ಕಾಯ್ದೆಯ ಅನುಷ್ಠಾನವನ್ನು ದುರ್ಬಲಗೊಳಿಸುವುದು ಸರಿಯಲ್ಲ. ಇದಕ್ಕೆ ಕೊವಿಡ್-19 ಬಿಕ್ಕಟ್ಟು ಒಂದು ಪರದೆಯಾಗದಿರಲಿ ಎಂದು ಹೇಳಿರುವ ಬೃಂದಾ ಕಾರಟ್ ಈ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಆರೋಗ್ಯ ಮಂತ್ರಿಗಳನ್ನು ಕೇಳಿಕೊಂಡಿದ್ದಾರೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) ಕೂಡ ಈ ಅಧಿಸೂಚನೆ ಈ ಕಾಯ್ದೆಯ ಪ್ರಮುಖ ಉದ್ದೇಶಕ್ಕೇ ವಿರುದ್ಧವಾಗಿದ್ದು ಅದನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *