ಐ.ಆರ್.ಎಸ್. ಅಧಿಕಾರಿಗಳ ಮೇಲಿನ ಶಿಸ್ತುಕ್ರಮ ವಜಾ ಮಾಡಬೇಕು

‘ಕಡು’ ಶ್ರೀಮಂತರಿಗೆ ಕೊವಿಡ್‍ ತೆರಿಗೆಯ ಸೂಚನೆಗೆ ಸರಕಾರದ ಸಿಟ್ಟು- ಶ್ರೀಮಂತ-ಪರ ನಿಲುವಿನ ಭಂಡ ಪ್ರದರ್ಶನ

ಮೋದಿ ಸರಕಾರ ಇಂಡಿಯನ್ ರೆವಿನ್ಯೂ ಸರ್ವಿಸ್(ಐ.ಆರ್.ಎಸ್.)ನ ಅಧಿಕಾರಿಗಳ ಗುಂಪೊಂದರ ವಿರುದ್ಧ ಅವರು ತೆರಿಗೆ ಆದಾಯಗಳನ್ನು ಹೆಚ್ಚಿಸುವ ಕುರಿತ ಒಂದು ಪ್ರಸ್ತಾವವನ್ನು ಅಧಿಕೃತ ಅನುಮತಿಯಿಲ್ಲದೆ ಪ್ರಕಟಿಸಿದ್ದಾರೆಂದು ಹೇಳಿ ಶಿಸ್ತು ಕ್ರಮಗಳನ್ನು ಆರಂಭಿಸಿರುವುದಾಗಿ ವರದಿಯಾಗಿದೆ. ಇದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ.

ಕೊವಿಡ್ ಪರಿಣಾಮಗಳ ನಡುವೆ ಅರ್ಥವ್ಯವಸ್ಥೆಯನ್ನು ಮತ್ತೆ ಕಟ್ಟಲು ಒಂದು ಹಣಕಾಸು ಮಾರ್ಗ-ನಕಾಶೆ ತಯಾರಿಸುವಲ್ಲಿ ನೆರವಾಗುವ ಸಲಹೆ-ಸೂಚನೆಗಳನ್ನು ಕೊಡಬೇಕೆಂಬ ಸರಕಾರದ ಕೇಳಿಕೆಗೆ ಸ್ಪಂದಿಸಿ ಈ ಪ್ರಸ್ತಾವಗಳನ್ನು ಐ.ಆರ್.ಎಸ್. ಅಧಿಕಾರಿಗಳ ಈ ಗುಂಪು ‘ಫೋರ್ಸ್’ (ಫಿಸ್ಕಲ್ ಆಪ್ಶನ್ಸ್ ಅಂಡ್ ರೆಸ್ಪಾನ್ಸಸ್ ಟು ಕೊವಿಡ್-೧೯ ಎಪಿಡೆಮಿಕ್-ಕೊವಿಡ್-೧೯ ಸಾಂಕ್ರಾಮಿಕಕ್ಕೆ ವಿತ್ತೀಯ ಆಯ್ಕೆಗಳು ಮತ್ತು ಸ್ಪಂದನೆಗಳು) ಎಂಬ ಪ್ರಬಂಧವನ್ನು ತಯಾರಿಸಿದ್ದು, ಸೂಪರ್ ಶ್ರೀಮಂತರ ಆದಾಯ ತೆರಿಗೆಯ ದರಗಳನ್ನು ೪೦%ಕ್ಕೆ ಹೆಚ್ಚಿಸಬೇಕು, ಮತ್ತು ೪% ದರದಲ್ಲಿ ಕೊವಿಡ್ ಸೆಸ್ ಹಾಕಬೇಕು ಎಂಬುದು ಅದರಲ್ಲಿ ನೀಡಿರುವ ಎರಡು ಸೂಚನೆಗಳು ಎನ್ನಲಾಗಿದೆ.

ಈ ಪ್ರಬಂಧ ಸರಕಾರವನ್ನು ಸಿಟ್ಟಿಗೆಬ್ಬಿಸಿರುವುದು ಸ್ವಯಂವೇದ್ಯ. ಆದ್ದರಿಂದಲೇ ಅದು ಇಷ್ಟು ದುಷ್ಟತನದಿಂದ ವರ್ತಿಸುತ್ತಿದೆ. ಇದು ಶ್ರೀಮಂತರನ್ನು ರಕ್ಷಿಸುವ ಅದರ ನಾಚಿಕೆಗೆಟ್ಟ ಆಶಯವನ್ನು ಬಯಲು ಮಾಡುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ. ಈ ಪ್ರಸ್ತಾವಗಳು ’ಮಾರುಕಟ್ಟೆ’ಯಲ್ಲಿ ಅನಿಶ್ಚಿತತೆಗಳನ್ನು ಸ್ಫುರಿಸುತ್ತವೆ ಎಂದು ಸರಕಾರ ಔಪಚಾರಿಕವಾಗಿಯೇ ಹೇಳಿದೆ. ಅಂದರೆ  ಈ ಆಳುವ ಕೂಟಕ್ಕೆ ಸೂಪರ್ ಶ್ರೀಮಂತರು `ಪವಿತ್ರ ಗೋವುಗಳು’ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಈ ಸರಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು ಹಿಂದಿನ ದಿನಾಂಕದಿಂದಲೇ ಮತ್ತು ಮುಂದೆಯೂ  ಅನ್ವಯವಾಗುವಂತೆ ಸ್ಥಂಭನಗೊಳಿಸಿರುವುದು ಅದರ  ಶ್ರೀಮಂತ-ಪರ, ಬಡವರ-ವಿರೋಧಿ ಮತ್ತು ದುಡಿಯುವ ಜನ-ವಿರೋಧಿ ನಿಲುವನ್ನು ಎತ್ತಿ ತೋರಿಸುತ್ತದೆ.

ಇದೊಂದು ಭಾರೀ ಮೊತ್ತವಾಗುತ್ತದೆ ಎಂದು ಲೆಕ್ಕ ಹಾಕಲಾಗಿದೆ. ಉದ್ದೇಶಪೂರ್ವಕವಾಗಿಯೇ ಸುಸ್ತಿದಾರರಾಗಿರುವವರು ಮತ್ತು ತಲೆಮರೆಸಿಕೊಂಡಿರುವವರ ಸಾಲಗಳ ರೈಟ್ ಆಫ್ ಬಗ್ಗೆ ಸಂಸತ್ತಿನಲ್ಲಿ ಕೇಳಿದಾಗ ಮೌನಧರಿಸಿ ತಪ್ಪಿಸಿಕೊಳ್ಳುವ ಸರಕಾರದ ಪ್ರಯತ್ನ ಈಗ ಆರ್.ಟಿ.ಐ. ಉತ್ತರಗಳಿಂದಾಗಿ ವ್ಯರ್ಥವಾಗಿದೆ. ಈ ಉತ್ತರಗಳಿಂದ ದೇಶಗಳು ಮತ್ತು ಜನಗಳನ್ನು ಲೂಟಿ ಹೊಡೆಯುವ ಸರಕಾರ-ಕಾರ್ಪೊರೇಟ್ ಶಾಮೀಲು ಬಯಲಿಗೆ ಬಂದಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಐ.ಆರ್.ಎಸ್. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಅರ್ಥವ್ಯವಸ್ಥೆಯ ಪುನರುಜ್ಜೀವನದ ಬಗ್ಗೆ ಒಂದು ಮುಕ್ತ ಮತ್ತು ಪಾರದರ್ಶಕ ಸಂವಾದವನ್ನು ಆರಂಭಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದಿದೆ. ಅತಿ ಶ್ರೀಮಂತರಿಗೆ ಲೂಟಿ ಮಾಡಲು ಮತ್ತು ಸಂಪತ್ತು ರಾಶಿ ಹಾಕಲು ಬಿಟ್ಟು, ಕೊವಿಡ್ ಪರಿಣಾಮಗಳ ಹೊರೆಯನ್ನು ಬಡವರು ಮತ್ತು ದುಡಿಯುವ ಜನಗಳ ಹೆಗಲ ಮೇಲೆ ಏಕಪಕ್ಷೀಯವಾಗಿ ದಾಟಿಸುವ ಸರಕಾರದ ನಡೆಗಳನ್ನು ತಾನು ಖಂಡಿತವಾಗಿಯೂ ಪ್ರತಿರೋಧಿಸುವುದಾಗಿ ಈ ಕುರಿತ ತನ್ನ ದೃಢ ನಿರ್ಧಾರವನ್ನೂ ಸಿಪಿಐ(ಎಂ) ಪೊಲಿಟ್ ಬ್ಯುರೊ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *