16 ವಲಸೆ ಕಾರ್ಮಿಕರ ಸಾವಿನ ದುರಂತ: ಕೇಂದ್ರ ಸರಕಾರದ ಕ್ರಿಮಿನಲ್ ನಿರ್ಲಕ್ಷ್ಯದ ಫಲಿತಾಂಶ

ಮಹಾರಾಷ್ಟ್ರದ ಜಾಲ್ನಾದಿಂದ ತಮ್ಮೂರುಗಳಿಗೆ ಹೊರಟಿದ್ದ 16 ವಲಸೆ ಕಾರ್ಮಿಕರ ದುರಂತಮಯ ಸಾವಿನ ಸುದ್ಧಿ ಆಘಾತ ಮತ್ತು ಸಂಕಟವನ್ನು ಉಂಟುಮಾಡುವಂತದ್ದು. ಅವರು ಮಧ್ಯಪ್ರದೇಶದ ಶಾದೊಲ್ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಯತ್ತ ನಡೆದು ಸಾಗಿದ್ದರು. ಈ ಅದೃಷ್ಟಹೀನ ಕಾರ್ಮಿಕರು ನಡೆದು ಸುಸ್ತಾಗಿ ರೈಲ್ವೆ ಹಳಿಗಳ ಮೇಲೆಯೇ ನಿದ್ದೆ ಹೋಗಿದ್ದಾಗ ಮೇ ೮ರ ಮುಂಜಾನೆ ೫.೩೦ರ ಹೊತ್ತಿಗೆ ಈ ದುರಂತ ನಡೆದಿದೆ ಎಂದು ವರದಿಯಾಗಿದೆ.

ಇದು ಒಂದು ಆಕಸ್ಮಿಕ ಸಾವಲ್ಲ, ವಲಸೆ ಕಾರ್ಮಿಕರ ಹೀನಾಯ ಸ್ಥಿತಿ ಮತ್ತು ಅಸಹನೀಯ ಹತಾಶೆಯ ಬಗ್ಗೆ ಕೇಂದ್ರ ಸರಕಾರದ ಕ್ರಿಮಿನಲ್ ನಿರ್ಲಕ್ಷ್ಯದ ಫಲಿತಾಂಶ ಇದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

migrant labour returnಒಂದು ತಿಂಗಳಿಗೂ ಹೆಚ್ಚು ಕಾಲ ರೈಲುಗಳನ್ನು ಓಡಿಸಲು ನಿರಾಕರಣೆ, ನಂತರ ಕಾರ್ಮಿಕರ ಬಳಿ ಬದುಕುಳಿಯಲು ಹಣವಾಗಲೀ, ಆಹಾರವಾಗಲೀ ಇಲ್ಲದಿರುವಾಗ ತಮ್ಮ ಮನೆಗಳಿಗೆ ಹೋಗಲು ಟಿಕೇಟ್ ದರ ವಸೂಲಿಗೆ ಇಳಿದಿರುವುದು ಇಂತಹ ದುರಂತಗಳಿಗೆ ಕಾರಣವಾಗಿದೆ.

ಈ ದುರಂತ ಪ್ರಾಣ ಹೀರಿರುವ ಆ 16 ಮಂದಿಯಲ್ಲಿ ಹೆಚ್ಚಿನವರು ಬುಡಕಟ್ಟು ಜನಗಳಾಗಿರುವುದು ನಮ್ಮ ಬಹುಪಾಲು ಜನಗಳು ಎದುರಿಸುತ್ತಿರುವ ಆಳವಾದ ಸಾಮಾಜಿಕ ಮತ್ತು ಆರ್ಥಿಕ ವಿಭಜನೆ ಹಾಗೂ ಅಸಮಾನತೆಗಳನ್ನು ಎತ್ತಿ ತೋರಿದೆ. ಸರಕಾರ ಒಂದು ತನಿಖೆ ನಡೆಸುತ್ತದೆ ಎಂದು ವರದಿಯಾಗಿದೆ. ಇದು ಈ ಅಪಘಾತವನ್ನು ತಾಂತ್ರಿಕ ಅಂಶಗಳಿಗೆ ಸೀಮಿತಗೊಳಿಸುವ ಒಂದು ಕಣ್ಣೊರೆಸುವ ಕೆಲಸ ಅಷ್ಟೇ.

ಸರಕಾರ ವಲಸೆ ಕಾರ್ಮಿಕರ ಹೀನಾಯ ಸ್ಥಿತಿಯ ಬಗ್ಗೆ ತನ್ನ ದೂಷಣಾರ್ಹ ಜಡ ನಿಲುವನ್ನು ಬಿಡಬೇಕು, ಅವರಿಂದ ಯಾವುದೇ ಹಣ ವಸೂಲಿ ಮಾಡದೆ ಊರುಗಳಿಗೆ ತಲುಪಿಸಲು ವ್ಯವಸ್ಥೆಯನ್ನು ಕೈಗೊಳ್ಳಬೇಕು, ಪ್ರತಿಯೊಬ್ಬ ವಲಸೆ ಕಾರ್ಮಿಕರಿಗೆ ಮೂರು ತಿಂಗಳ ಕಾಲ ತಿಂಗಳಿಗೆ ರೂ.೭೫೦೦ ರಂತೆ ನಗದು ಬೆಂಬಲ ಒದಗಿಸಬೇಕು ಮತ್ತು ಎಲ್ಲರಿಗೂ ಉಚಿತ ರೇಷನ್ ಹಂಚಬೇಕು ಎಂಬ ಆಗ್ರಹವನ್ನು ಸಿಪಿಐ(ಎಂ) ಪುನರುಚ್ಚರಿಸಿದೆ. ದೇಶಕ್ಕೆ ಆಘಾತ ಉಂಟು ಮಾಡಿರುವ ದುರಂತವನ್ನು ಶಮನ ಮಾಡಲು ಕನಿಷ್ಟ ಇಷ್ಟಾದರೂ ಮಾಡಬೇಕು. ಸತ್ತಿರುವವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಸರಕಾರ ಸಾಕಷ್ಟು ಪರಿಹಾರ ಮೊತ್ತವನ್ನು ಕೊಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *