ರಾಜ್ಯ ಸರ್ಕಾರದಿಂದ ಸುಗ್ರೀವಾಜ್ಞೆಯ ಹೊಡೆತ – ಪ್ಯಾಕೇಜ್‌ ನ ತೋರ್ಪಡಿಕೆ

ಸುಗ್ರೀವಾಜ್ಞೆ ಮೂಲಕ ರೈತ ಹಾಗೂ ಕಾರ್ಮಿಕರ ಬೆನ್ನಿಗೆ ಬಲವಾಗಿ ಇರಿದು, ಪ್ಯಾಕೇಜ್ ಮೂಲಕ ಅವರ ತುಟಿಗಳಿಗೆ ಜೇನು ಸವರುವ ಕೆಲಸ  ಮಾಡಿದ ಯಡಿಯೂರಪ್ಪ – ಸಿಪಿಐಎಂ ಪ್ರತಿರೋಧ

ರೈತರು ಹಾಗೂ ನಾಡಿನ ಜನತೆಯ ತೀವ್ರ ಪ್ರತಿರೋಧದ ನಡುವೆಯೂ, ಏಪಿಎಂಸಿ ಕಾಯ್ದೆಗೆ  ಸುಗ್ರೀವಾಜ್ಞೆಗಳನ್ನು ಹೊರಡಿಸುವ ಮೂಲಕ ರೈತರು ಮತ್ತು ಕಾರ್ಮಿಕರ ಹಾಗೂ ಒಟ್ಟಾರೆ ರಾಜ್ಯದ ಬೆನ್ನಿಗೆ ಇರಿದ ಮುಖ್ಯಮಂತ್ರಿ ಶ್ರೀ ಯಡೆಯೂರಪ್ಪ ಈ ಜನಗಳ ತುಟಿಗೆ ಜೇನು ಸವರುವ ಕೆಲಸವನ್ನು ಸಣಕಲು ಪ್ಯಾಕೇಜ್ ಗಳ  ಮೂಲಕ ಮಾಡಿದ್ದಾರೆಂದು, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ಮಾತ್ರವಲ್ಲಾ, ನಾಚಿಕೆ ಇಲ್ಲದೇ  ಕಾರ್ಪೋರೇಟ್ ಕಂಪನಿಗಳ ಪರವಾದ ತಮ್ಮ ಘನ ಕಾರ್ಯಗಳನ್ನು ಸುದ್ಧಿಗೋಷ್ಠಿಯ ಮೂಲಕ ಸಮರ್ಥಿಸಿ ಕೊಂಡಿದ್ದಾರೆಂದು ಕಟುವಾಗಿ ಠೀಕಿಸಿದೆ.

ಅದೇ ರೀತಿ, ಕಾರ್ಪೋರೇಟ್ ಹಾಗೂ ಬಂಡವಾಳದಾರರ ಪರವಾಗಿ ಕಾರ್ಮಿಕರನ್ನು ಎಥೇಚ್ಛವಾಗಿ ಲೂಟಿಗೊಳಪಡಿಸಲು ನೆರವಾಗುವ ಮತ್ತು ಕಾರ್ಮಿಕರನ್ನು 12 ತಾಸುಗಳ ಕಾಲ ದುಡಿಸಿಕೊಳ್ಳಲು ಬಿಡುವ ಸುಗ್ರೀವಾಜ್ಞೆಯನ್ನು ಹೊರಡಿಸುವ ಸಂಚನ್ನು ಸರಕಾರ ನಡೆಸಿದೆ.

ರಾಜ್ಯವನ್ನು ಆರ್ಥಿಕ ದುಸ್ಥಿತಿಯಿಂದ ಮೇಲೆತ್ತುವ ಬದಲು ಇಂತಹ ಕ್ರಮಗಳು ಅದನ್ನು ಮತಷ್ಠು ಪ್ರಪಾತಕ್ಕೆ ತಳ್ಳಲಿವೆ. ಇದರಿಂದ ರಾಜ್ಯವು ಕಾರ್ಪೋರೇಟ್ ಕಂಪನಿಗಳ ವ್ಯಾಪಕ ಲೂಟಿಗೊಳಗಾಗಲಿದೆ. ಇದೊಂದು ಜವಾಬ್ದಾರಿ ಹೀನ ನಡೆ ಯಾಗಿದೆ ಎಂದಿದೆ.

ಅದೇ ರೀತಿ, ಸರಕಾರ ಇವರ ಬೆನ್ನಿಗೆ ಇರಿದ ಸಂದರ್ಭದಲ್ಲಿಯೇ ಹಲವು ಕಂತುಗಳಲ್ಲಿ ಬಿಡುಗಡೆ ಮಾಡುತ್ತಿರುವ  ಸಣಕಲು ಪ್ಯಾಕೇಜ್ ಗಳ ಮೂಲಕ ಅದನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿದೆ. ಖಂಡಿತ ಈ  ಸಣಕಲು ಪ್ಯಾಕೇಜ್ ಗಳ ಮೂಲಕ ಬಿಜೆಪಿಗೆ ಕೊಡಲಿರುವ ಅಗ್ಗದ ಪ್ರಚಾರವು, ಜನತೆಯಿಂದ ಈ  ಇರಿತದ ನೋವನ್ನು ಮರೆ ಮಾಚವು ಎಂದು ಸರಕಾರವನ್ನು ಸಿಪಿಐಎಂ ಎಚ್ಚರಿಕೆ ನೀಡಿದೆ.

ರಾಜ್ಯ ಸರಕಾರ ಈ ಸುಗ್ರೀವಾಜ್ಞೆ ಯನ್ನು ತಕ್ಷಣವೇ ವಾಪಾಸು ಪಡೆಯ ಬೇಕು. ಕಾರ್ಮಿಕರನ್ನು ಲೂಟಿಗೊಳಪಡಿಸುವ ಸುಗ್ರೀವಾಜ್ಞೆಗೆ ಮುಂದಾಗಬಾರದು  ಎಂದು ಸಿಪಿಐಎಂ ಒತ್ತಾಯಿಸಿದೆ.

ಹಣ್ಣು, ಹೂ,ತರಕಾರಿ ಮತ್ತಿತರೆ ಬೆಳೆಗಾರರ ನಡುವೆ ಯಾವುದೇ ವ್ಯತ್ಯಾಸ/ ತಾರತಮ್ಯ ತೋರದೇ, ಎಲ್ಲಾ ಬೆಳೆಗಾರರಿಗೂ ತಲಾ ಎಕರೆಗೆ ಬೆಳೆನಷ್ಠ  ಪರಿಹಾರ ಕನಿಷ್ಠ 10,000 ರೂ ಕೊಡಲೇ ಬೇಕು ಹಾಗೂ ನಷ್ಠಕ್ಕೀಡಾದ ಈ ಎಲ್ಲರ ಸಾಲಮನ್ನಾ ಮಾಡಬೇಕು.

ಎಲ್ಲಾ ಬಡವರಿಗೆ ಅಗತ್ಯ ಪಡಿತರದ ಸಮಗ್ರ ಕಿಟ್ ಒದಗಿಸಬೇಕು ಮತ್ತು ಮುಂದಿನ ಮೂರು ತಿಂಗಳ ಕಾಲ ಮಾಸಿಕ 7,500 ಸಹಾಯವನ್ನು ಘೋಷಿಸ ಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಲೆರಡರಲ್ಲೂ ಕನಿಷ್ಠ 200 ದಿನಗಳ ಕಾಲ ಒದಗಿಸಬೇಕು. ಲಾಕ್ ಡೌನ್ ಅವಧಿಯ ಬಾಕಿ ವೇತನವನ್ನು ಎಲ್ಲ ಕಾರ್ಮಿಕರಿಗೆ ಒಂದೇ ಕಂತಿನಲ್ಲಿ ಒದಗಿಸುವಂತೆ ಸಿಪಿಐಎಂ ಒತ್ತಾಯಿಸಿದೆ.

ರಾಜ್ಯದಾದ್ಯಂತ ಎಲ್ಲ ಕಾರ್ಮಿಕರು, ರೈತರು, ಕೂಲಿಕಾರರು, ನಾಗರೀಕರು ರಾಜ್ಯ ಸರಕಾರದ ಈ ದಬ್ಬಾಳಿಕೆಯ ವಿರುದ್ಧ ತೀವ್ರ ಪ್ರತಿಭಟನೆಯನ್ನು ನಡೆಸಲು ಕರೆ ನೀಡಿದೆ. ಸಿಪಿಐಎಂ ತನ್ನ ಘಟಕಗಳಿಗೆ ರಾಜ್ಯದಾದ್ಯಂತ  ದಿನಾಂಕ 20.05.2020 ರಂದು  ಪ್ರತಿಭಟನೆಯನ್ನು ಆಯೋಜಿಸಲು  ಕರೆ ನೀಡಿದೆ.

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *