ವಲಸೆ ಕಾರ್ಮಿಕರಿಗೆ ಹಣಕಾಸು ಮಂತ್ರಿಗಳ ಪ್ಯಾಕೇಜ್ : ಒಂದು ಕ್ರೂರ ವಂಚನೆ

೨೦ ಲಕ್ಷ ಕೋಟಿ ರೂ.ಗಳ ಹಣಕಾಸು ಪ್ಯಾಕೇಜಿನ ಎರಡನೆ ಕಂತು ಒಂದು ಕ್ರೂರ ವಂಚನೆಯಾಗಿ ಬಿಟ್ಟಿದೆ. ಈ ಪ್ಯಾಕೇಜಿನಲ್ಲಿ ವಲಸೆ ಕಾರ್ಮಿಕರು, ರೈತರು ಮತ್ತು ಇತರ ಬಡವರಿಗೆ ಪರಿಹಾರದ ನಿರೀಕ್ಷೆಗಳಿದ್ದವು. ಹಣಕಾಸು ಮಂತ್ರಿಗಳ ಭಾಷಣ ಸರಕಾರ ಜನಗಳಿಗೆ ನೆರವಾಗಲು ಏನು ಮಾಡಿದೆ ಎಂಬುದರ ಬಗ್ಗೆ ಸುಳ್ಳು ದಾವೆಗಳನ್ನೇ ಮಾಡಿದ್ದಾರೆ. ನಮ್ಮ ಜನಗಳ ಅತ್ಯಂತ ಹೆಚ್ಚು ಬಾಧಿತವಾದ ಯಾವ ವಿಭಾಗಕ್ಕೂ, ನಿರ್ದಿಷ್ಟವಾಗಿ ವಲಸೆ ಕಾರ್ಮಿಕರು, ಬೀದಿ ಮಾರಾಟಗಾರರು, ಮನೆಗೆಲಸದವರು, ಮೀನುಗಾರಿಕಾ ಕಾರ್ಮಿಕರು ಮುಂತಾದವರಿಗೆ ಸರಕಾರ ಒಂದೇ ಒಂದು ಪೈಸೆಯನ್ನೂ ವರ್ಗಾಯಿಸಿಲ್ಲ. ಇದು ಮುಖ್ಯವಾಗಿ ಸಾಲಗಳಿಗೆ ಅನುವು ಮಾಡಿಕೊಡುವ ಪ್ಯಾಕೇಜಷ್ಟೇ ಆಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಟೀಕಿಸಿದೆ.

 ಒಂದೇ ಒಂದು ನೇರ ಪ್ರಯೋಜನ ಎಂದರೆ ಉಚಿತವಾಗಿ ಆಹಾರಧಾನ್ಯಗಳನ್ನು ಒದಗಿಸುವುದನ್ನು ವಿಸ್ತರಿಸಲು ೩೫೦೦ ಕೋಟಿ ರೂ.ಗಳು ಮಾತ್ರ. ಭ್ರಷ್ಟಾಚಾರ ನಡೆದಿದೆ ಎನ್ನುತ್ತ ಕೋಟ್ಯಂತರ ರೇಷನ್ ಕಾರ್ಡ್‌ಗಳನ್ನು ರದ್ದು ಮಾಡಿ ಬಡವರು ಕಷ್ಟ ಪಡುವಂತೆ ಮಾಡಿದ್ದ ಸರಕಾರ ಇದು. ಈಗ ರೇಷನ್ ಕಾರ್ಡ್ ಇಲ್ಲದವರೂ ೫ ಕೆಜಿ ಆಹಾರಧಾನ್ಯಗಳು ಮತ್ತು ಒಂದು ಕೆ.ಜಿ. ಬೇಳೆಯನ್ನು ಪಡೆಯಬಹುದೆಂದು ಉದಾರತೆಯ ಪ್ರದರ್ಶನ ಮಾಡುತ್ತಿದೆ. ಈಗಿರುವ ಸ್ಕೀಮುಗಳನ್ನೇ ಹೊಸ ಪೊಟ್ಟಣದಲ್ಲಿ ಕಟ್ಟಿ ಕೊಡಲಾಗುತ್ತಿದೆಯಷ್ಟೇ. ಉದಾಹರಣೆಗೆ ’ಒಂದು ರಾಷ್ಟ್ರ ಒಂದು ಪಡಿತರ’(ಒಎನ್‌ಒಆರ್) ಈಗ ೨೦೨೧ರ ಮಧ್ಯಭಾಗದಲ್ಲಿಬೆಳಕು ಕಾಣಲಿದೆ. ಆದರೆ ಈ ಹೊಸ ಪೊಟ್ಟಣದಲ್ಲಿರುವ ಹಳೆಯ ಕ್ರಮಗಳು ಇಂದು ಘೋರ ಸಂಕಟಗಳನ್ನು ಎದುರಿಸುತ್ತಿರುವ ಜನಗಳಿಗೆ ಯಾವ ಪ್ರಯೋಜನಕ್ಕೂ ಇಲ್ಲ.

 ಪ್ರಧಾನ ಮಂತ್ರಿಗಳು ವಲಸೆ ಕಾರ್ಮಿಕರ ಸಂಖ್ಯೆಯನ್ನು ೮ ಕೋಟಿಗೆ ಇಳಿಸಿದ್ದಾರೆ. ಸದ್ಯದ ಅಂದಾಜು ೧೦ ಕೋಟಿ ಎಂದು ಮಾರ್ಚ್ ೨೦೨೦ರಲ್ಲಿ ಸಂಸತ್ತಿಗೆ ಹೇಳಲಾಗಿತ್ತು. ಇದರರ್ಥ ಉಚಿತ ಆಹಾರಕ್ಕೆ ನೀಡಿರುವ ಮೊತ್ತವೂ ಎಲ್ಲರನ್ನೂ ತಲುಪುವಂತಿಲ್ಲ.corona 2lakh crore

ಮನರೇಗದಲ್ಲಿ ಉದ್ಯೋಗ ನಿರ್ಮಾಣದಲ್ಲಿ ೪೦ರಿಂದ ೫೦ಶೇ. ಹೆಚ್ಚಳವಾಗಿದೆ ಎಂದು ಹಣಕಾಸು ಮಂತ್ರಿಗಳು ದೇಶವನ್ನು ತಪ್ಪುದಾರಿಗೆಳೆದಿದ್ದಾರೆ. ಕಳೆದ ವರ್ಷ ಎಪ್ರಿಲ್‌ನಲ್ಲಿ ೨೭.೩ ಕೋಟಿ ವ್ಯಕ್ತಿದಿನಗಳ ಉದ್ಯೋಗ ನಿರ್ಮಾಣವಾಗಿತ್ತು. ಈ ವರ್ಷ ಅದು ೧೧.೧ ಕೋಟಿಗೆ ಇಳಿದಿದೆ. ಆದ್ದರಿಂದ ತಮ್ಮ ಊರುಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ನಿರುದ್ಯೋಗ ಕಾಡಲಿದೆ. ರಿಟ್ರೆಂಚ್ ಆಗಿರುವ ಕಾರ್ಮಿಕರ ಬಗ್ಗೆಯೂ ಹಣಕಾಸು ಮಂತ್ರಿಗಳು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಉದ್ದಿಮೆಗಳಿಗೆ ಮತ್ತು ವ್ಯವಹಾರಗಳಿಗೆ ಸಾಲ ನೀಡಿಕೆಗಳನ್ನು ಅವರು ತಮ್ಮ ಶ್ರಮಿಕ ಪಡೆಯನ್ನು ರಕ್ಷಿಸಬೇಕು ಎಂಬ ಷರತ್ತಿಗೆ ಒಳಪಡಿಸುವ ಬದಲು  ಮತ್ತು ಆ ಶ್ರಮಿಕರ ಸಂಬಳಗಳ ಒಂದಂಶವನ್ನು ಹಣಕಾಸು ನೆರವಾಗಿ ಕೊಡುವುದಾಗಿ ಹೇಳುವ ಬದಲು, ಹಣಕಾಸು ಮಂತ್ರಿಗಳು ರಿಟ್ರೆಂಚ್ ಆದವರಿಗೆ ಹೊಸ ನಿಪುಣತೆಯನ್ನು ಕಲಿಸಲಾಗುವುದು ಎಂದಷ್ಟೇ ಹೇಳಿದ್ದಾರೆ. ಹೀಗಿದೆ ಈ ಸರಕಾರದ ಕಾರ್ಮಿಕ-ವಿರೋಧಿ ಮನೋಭಾವ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಖೇದ ವ್ಯಕ್ತಪಡಿಸಿದೆ.

 ಹಣಕಾಸು ಮಂತ್ರಿಗಳು ’ಪರಿಹಾರಾತ್ಮಕ ಅರಣ್ಯೀಕರಣ ನಿಧಿ ಕಾಯ್ದೆ’(ಸಿಎಎಂಪಿಎ)ಯ ಅಡಿಯಲ್ಲಿರುವ ಹಣವನ್ನು ಬಳಸುವ ಬಗ್ಗೆ ಹೇಳಿದ್ದಾರೆ. ಆದರೆ ಇಂತಹ ನಿರ್ದೇಶನಗಳನ್ನು ಕೊಡುವ ಯಾವುದೇ ಹಕ್ಕು ಕೇಂದ್ರ ಸರಕಾರಕ್ಕೆ ಇಲ್ಲ. ಈ ನಿಧಿಯಲ್ಲಿರುವ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ರಾಜ್ಯ ಸರಕಾರಗಳು ಸ್ಥಳೀಯ ಸಮುದಾಯಗಳು, ಮುಖ್ಯವಾಗಿ ಪ್ರಾಜೆಕ್ಟುಗಳಿಂದ ಬಾಧಿತರಾಗುವ ಬುಡಕಟ್ಟು ಜನಗಳೊಂದಿಗೆ ನಿರ್ಧರಿಸಬೇಕು, ಕೇಂದ್ರ ಸರಕಾರದ ನಿರ್ದೇಶನಗಳಂತೆ ಅಲ್ಲ ಎಂದು ಸಿಪಿಐ(ಎಂ)ಪೊಲಿಟ್‌ಬ್ಯುರೊ ನೆನಪಿಸಿದೆ.

ಹಣಕಾಸು ಮಂತ್ರಿಗಳು ವಲಸೆ ಕಾರ್ಮಿಕರ ಆಹಾರದ ಅಗತ್ಯಗಳನ್ನು ಕೇಂದ್ರ ಸರಕಾರ ನೋಡಿಕೊಂಡಿದೆ ಎಂದು ಹೇಳಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಸ್‌ಡಿಆರ್‌ಎಫ್(ರಾಜ್ಯ ವಿಪತ್ತು ಪರಿಹಾರ ನಿಧಿ)ಗೆ ವಿಪತ್ತು ಇರಲಿ, ಇಲ್ಲದಿರಲಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ೭೫:೨೫ ಶೇಕಡಾ ಪ್ರಮಾಣದಲ್ಲಿ ದೇಣಿಗೆ ನೀಡಬೇಕು. ಆದ್ದರಿಂದ ಕೇಂದ್ರ ಸರಕಾರ ಕಾನೂನು ಪ್ರಕಾರ ಕೊಡಲೇಬೇಕಾದ ಹಣವನ್ನು ಕೊಟ್ಟಿದೆಯಷ್ಟೇ, ಎಂದೂ ಸಿಪಿಐ(ಎಂ) ಪೊಲಿಟ್‌ಬುರೊ ಸರಕಾರಕ್ಕೆ ನೆನಪಿಸಬೇಕಾಗಿ ಬಂದಿದೆ. ನಿಜ ಹೇಳಬೇಕೆಂದರೆ, ಒಂದೇ ಒಂದು ಪೈಸೆ ಹೆಚ್ಚುವರಿ ಹಣವನ್ನು ಯಾವುದೇ ರಾಜ್ಯ ಸರಕಾರಕ್ಕೆ ಕೊಟ್ಟಿಲ್ಲ. ಆದರೆ ಈಗ ತಾನು ಕಾನೂನು ಪ್ರಕಾರ ಮಾಡಲೇಬೇಕಾದ್ದನ್ನು ತನ್ನ ಉದಾರತೆ ಎಂಬಂತೆ ಪ್ರದರ್ಶಿಸುತ್ತಿದೆ !

ಮಹಾಮಾರಿಯನ್ನು ಎದುರಿಸಲು ದೇಶ ಮತ್ತು ಜನತೆ ಏಕಾಗ್ರತೆಯಿಂದ ಕೆಲಸ ಮಾಡಬೇಕಾಗಿರುವ ಮತ್ತು ಜನಗಳಿಗೆ ಒಂದು ಆರೋಗ್ಯವಂತ ಬದುಕು ಹಾಗೂ ಜೀವನೋಪಾಯವನ್ನು ಖಾತ್ರಿಪಡಿಸಬೇಕಾದ ಸಮಯದಲ್ಲಿ ಈ ಸರಕಾರ ಅತ್ಯಂತ ನಿರ್ಲಕ್ಷ್ಯದಿಂದ, ಈ ಮಹಾಮಾರಿಯನ್ನು, ಶ್ರೀಮಂತರನ್ನು ಶ್ರೀಮಂತರಾಗಿಸುವ ಮತ್ತು ಬಡವರನ್ನು ಮತ್ತಷ್ಟು ದಾರಿದ್ರ್ಯಕ್ಕೆ ಇಳಿಸುವ ತನ್ನ ಆರ್ಥಿಕ ಸುಧಾರಣೆಗಳ ಅಜೆಂಡಾವನ್ನು ಮುಂದೊಯ್ಯುವ ಒಂದು ಅವಕಾಶವಾಗಿ ಕಾಣುತ್ತಿದೆ ಎಂದು ಖೇದ ವ್ಯಕ್ತಪಡಿಸಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ತನ್ನ ಈ ಕೆಳಗಿನ ಆಗ್ರಹಗಳನ್ನು ಪುನರುಚ್ಚರಿಸಿದೆ:

  • ಲಾಕ್‌ಡೌನ್ ಹೇರಿದ ನಂತರ  ೧೪ ಕೋಟಿಯಷ್ಟು ನಿರುದ್ಯೋಗ ಬೆಳೆದಿರುವಾಗ, ನಗರ ಪ್ರದೇಶಗಳ ೮೦ಶೇ. ಬಡವರು ತಮ್ಮ ಉದ್ಯೋಗವನ್ನು ಕಳಕೊಂಡಿರುವಾಗ, ಸರಕಾರ ಮುಂದಿನ ಮೂರು ತಿಂಗಳು ಆದಾಯ ತೆರಿಗೆಯ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೂ ಕನಿಷ್ಟ ೭೫೦೦ರೂ. ನಗದು ವರ್ಗಾವಣೆ ಮಾಡುವುದು ಅತ್ಯಗತ್ಯವಾಗಿದೆ.
  • ಮೂರನೇ ಒಂದರಷ್ಟು ಕುಟುಂಬಗಳ ಬಳಿ ಒಂದು ವಾರಕ್ಕಿಂತ ಹೆಚ್ಚು ಕಾಲ ತಾಳಿಕೊಳ್ಳುವ ಸಂಪನ್ಮೂಲಗಳು ಇಲ್ಲದಿರುವಾಗ, ಪ್ರತಿವ್ಯಕ್ತಿಗೆ ತಿಂಗಳಿಗೆ ೧೦ ಕೆ.ಜಿ.ಆಹಾರಧಾನ್ಯಗಳನ್ನು ಆರು ತಿಂಗಳ ವರೆಗೆ ಉಚಿತವಾಗಿ ನಮ್ಮ ಗೋದಾಮುಗಳಲ್ಲಿರುವ ೭.೭ ಕೋಟಿ ಟನ್ ದಾಸ್ತಾನಿನಿಂದ ಕೊಡುವುದು ಅಗತ್ಯವಾಗಿದೆ.
  • ಲಾಕ್‌ಡೌನಿನಿಂದ ಕೃಷಿ ಸಂಕಟ ಇನ್ನಷ್ಟು ಆಳಗೊಂಡಿರುವುದರಿಂದಾಗಿ, ನಮ್ಮ ರೈತರು ಬದುಕುಳಿಯಬೇಕಾದರೆ ಒಂದು ಬಾರಿಯ ಸಾಲ ಮನ್ನಾ ಅಗತ್ಯವಾಗಿದೆ.
  • ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣಕಾಸು ನೆರವನ್ನು ತುರ್ತಾಗಿ ಕೊಡುವುದು ಅಗತ್ಯವಾಗಿದೆ.
  • ಎಲ್ಲಕ್ಕಿಂತ ತುರ್ತಾಗಿ, ಕಳೆದ ಐವತ್ತು ದಿನಗಳಿಂದ ಬೀದಿಗಳ ಮೇಲಿರುವ, ಪ್ರಾಣ ಕಳಕೊಳ್ಳುತ್ತಿರುವ, ಹಸಿವು, ಸಂಕಟಗಳಿಂದ ನರಳುತ್ತಿರುವ ನಮ್ಮ ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕಾಗಿದೆ.

ಮೋದಿ ಸರಕಾರ ಇವುಗಳಲ್ಲಿ ಯಾವುದೊಂದೂ ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಈ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದೆ.

Leave a Reply

Your email address will not be published. Required fields are marked *