ಧೀರೋದಾತ್ತ ತೆಭಾಗಾ ಹೋರಾಟ

tebhaga2
ಕಲಾವಿದ ಸೋಮನಾಥ ಹೋರೆ ಕಂಡಂತೆ

೧೯೪೬-೪೭ರ ತೆಭಾಗಾ ಚಳುವಳಿಯು ಮರೆಯಲಾಗದ ಪರಿಣಾಮವನ್ನು ಬೀರಿತು; ಹೋರಾಟದ ಕೆಚ್ಚನ್ನು ಮತ್ತು ತ್ಯಾಗ ಭಾವವನ್ನು ಮತ್ತು ಒಡನಾಡಿ ಭಾವನೆಯನ್ನು ರೈತರಲ್ಲಿ ತುಂಬಿತು; ಸಂಘಟಿತ ವರ್ಗ ಹೋರಾಟವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಕಲಿಸಿತು. ದೇಶದ ಇತರ ಭಾಗಗಳ ರೈತ ಹೋರಾಟಗಳಿಗಿಂತ ತೆಭಾಗಾ ಚಳುವಳಿಯು ವಿಶಿಷ್ಟವಾದದ್ದು. ಬೇರೆಲ್ಲಾ ಪ್ರಾಂತಗಳಲ್ಲಿ, ಹೋರಾಟಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು, ಅದೇ ಬಂಗಾಳದಲ್ಲಿ ಚಳುವಳಿಯು ಇಡೀ ಪ್ರಾಂತವನ್ನು ಆವರಿಸಿಕೊಂಡಿತ್ತು. ಚಳುವಳಿಯ ಅತ್ಯಂತ ಗಮನಾರ್ಹ ಅಂಶವೇನೆಂದರೆ ಅದು ವರ್ಗಹೋರಾಟ ಆಧಾರಿತ ಹಿಂದೂ-ಮುಸ್ಲಿಂ ಐಕ್ಯತೆಯ ದೀಪವನ್ನು ಬೆಳಗಿದ್ದು, ಮತ್ತು ಅದು ನೌಖಾಲಿಯನ್ನೂ ಒಳಗೊಂಡಂತೆ ಬಂಗಾಳದ ಎಲ್ಲಾ ಕಡೆಗಳಿಂದಲೂ ಎಲ್ಲಾ ಸಮುದಾಯಗಳ ಲಕ್ಷಾಂತರ ರೈತರನ್ನು ಹುರಿದುಂಬಿಸಿ ತನ್ನ ತೆಕ್ಕೆಗೆ ತೆಗೆದುಕೊಂಡದ್ದು.

Communist100 File copy
ಶತಮಾನೋತ್ಸವ ಲೇಖನ ಮಾಲೆ-೨೬

ಯುದ್ಧಾನಂತರದ ಅವಧಿಯಲ್ಲಿ, ೧೯೪೬ರ ಆದಿಯಲ್ಲಿ, ಬರ್ಗಾದಾರರಿಗೆ ತೆಭಾಗ, ಅಂದರೆ ಮೂರನೇ ಎರಡು ಭಾಗ ಸಿಗಬೇಕು ಎಂಬ ಬೇಡಿಕೆಯ ಆಧಾರದಲ್ಲಿ ಒಂದು ಹೋರಾಟವನ್ನು ಶುರುಮಾಡಬೇಕು ಎಂದು ಬಂಗಾಳ ಪ್ರಾಂತ ಕಿಸಾನ್ ಸಭಾವು ತೀರ್ಮಾನ ಮಾಡಿತು. ಹೀಗಾಗಿ, ಬ್ರಿಟನ್ನಿನಿಂದ ಬಂದ ಕ್ಯಾಬಿನೆಟ್ ಕಮಿಷನ್ (ಸಂಪುಟ ಆಯೋಗ)ನೊಂದಿಗೆ ಚರ್ಚೆ ಮತ್ತು ಇತರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವಾಗಲೇ, ಬಂಗಾಳದಲ್ಲಿ ತೆಭಾಗಾ ಚಳುವಳಿಯ ಅಲೆ ಮೇಲೇರುತ್ತಿತ್ತು.

ಬಂಗಾಳದ ರೈತರು ಭೂಮಾಲಕರ ಪಾಲನ್ನು ಕಡಿಮೆ ಮಾಡಬೇಕೆಂಬ ಘೋಷಣೆ ಎತ್ತುತ್ತಾ ಬಂದಿದ್ದರು. ತೆಭಾಗಾ ಅಂದರೆ ಬೆಳೆದ ಒಟ್ಟು ಫಸಲಿನಲ್ಲಿ ಒಂದು ಭಾಗವನ್ನು ಭೂಮಾಲಕ ಅಥವಾ ಜೋತೆದಾರನಿಗೆ ಕೊಟ್ಟು, ಉಳಿದ ಮೂರನೇ ಎರಡು ಭಾಗವನ್ನು ಬರ್ಗಾದಾರ್(ಅಥವಾ ಅಧಿಯಾರ್ ಅಥವಾ ಬಾಗಿದಾರ್ ಅಥವಾ ಬಾಗ್‌ಚಾಶಿ ಎಂದು ಬಂಗಾಳದ ಬೇರೆ ಬೇರೆ ಕಡೆಗಳಲ್ಲಿ ಕರೆಯುತ್ತಿದ್ದ) ಒಬ್ಬ ಭಾಗ ಬೆಳೆಗಾರ (ಬಂಗಾಳದ ಗೇಣಿ ಕಾಯಿದೆ ೧೮೫೫ ಪ್ರಕಾರ ಗೇಣಿದಾರ ಅಲ್ಲ) ತನಗೇ ಇಟ್ಟುಕೊಳ್ಳುವುದು. ಸಾಮಾನ್ಯ ರೂಢಿಯ ಪ್ರಕಾರ ಫಸಲನ್ನು ಮಾಲಕ ಮತ್ತು ಫಸಲು ಕೊಯ್ಯುವವ ಪರಸ್ಪರ ೫೦:೫೦ ಹಂಚಿಕೊಳ್ಳುವುದು ಇತ್ತು.

ಹಲವಾರು ಪ್ರದೇಶಗಳಲ್ಲಿ, ಬರ್ಗಾದಾರನಿಗೆ ಕೊಟ್ಟ ಬೆಳೆ-ಸಾಲದ ಮೇಲೆ ದುಬಾರಿ ಬಡ್ಡಿ ವಿಧಿಸುವುದು, ಕಡಿಮೆ ಬೆಳೆ ಬಂದ ವರ್ಷ ಬಿತ್ತನೆ ಹಾಗು ನಂತರದ ಸಮಯದಲ್ಲಿ ನೀಡಿದ ಆಹಾರಕ್ಕಾಗಿ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಈ ಸಾಗುವಳಿದಾರನ ಅರ್ಧ ಭಾಗವನ್ನು ಕಡಿತ ಮಾಡಲಾಗುತ್ತಿತ್ತು. ಹೀಗೆ ಸುಗ್ಗಿಯ ನಂತರ ಕೂಡ, ಸಾಗುವಳಿದಾರ ಭೂಮಾಲಕನ ಮರ್ಜಿಯಲ್ಲಿ ದಿವಾಳಿ ಆಗುತ್ತಿದ್ದುದೇ ಹೆಚ್ಚು. ಈ ಶೋಷಣೆಯ ವಿಧಾನವನ್ನು ಬರ್ಗಾದಾರರು ತೀವ್ರವಾಗಿ ವಿರೋಧಿಸುತ್ತಿದ್ದರು ಮತ್ತು ಇದರ ಪರಿಣಾಮವಾಗಿ ಶುರುವಾದ ಚಳುವಳಿಯು ಜನರ ಭಾಷೆಯಲ್ಲಿ ತೆಭಾಗಾ ಚಳುವಳಿ ಎಂದು ಪ್ರಸಿದ್ಧವಾಗಿತ್ತು.

ಬರ್ಗಾದಾರರ ಹಕ್ಕುಗಳನ್ನು ಬಂಗಾಳ ಭೂಕಂದಾಯ ಆಯೋಗವು ೧೯೪೦ರಲ್ಲಿ ಒಪ್ಪಿಕೊಂಡು ಬಂಗಾಳದ ಸರ್ಕಾರಕ್ಕೆ ವರದಿ ನೀಡಿತು. ಇದನ್ನು ಜನರು ಹಾಗೂ ಸರ್ಕಾರ ಒಪ್ಪಿಕೊಂಡರು. ಆದರೆ ಈ ಶಿಫಾರಸುಗಳನ್ನು ಸರ್ಕಾರವು ಜಾರಿ ಮಾಡಲಿಲ್ಲ.

tebhaga3ಆ
ದೊಡ್ಡ ಸಂಖ್ಯೆಯಲ್ಲಿ ಮಹಿಳಾ ರೈತರು ಈ ಚಳುವಳಿಯಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದರು ಮತ್ತು ಪೋಲಿಸರ ವಿರುದ್ಧ ವೀರಾವೇಶದಿಂದ ಹೋರಾಡಿದರು.

ಈ ಹಿನ್ನೆಲೆಯಲ್ಲಿ, ತೆಭಾಗಾ ಬೇಡಿಕೆ ಮೇಲೆ ಕಿಸಾನ್ ಸಭಾ ನೀಡಿದ ಕರೆಯು ಅತ್ಯಂತ ಕಡಿಮೆ ಸಮಯದಲ್ಲಿ ಬಂಗಾಳದ ಲಕ್ಷಾಂತರ ಬರ್ಗಾದಾರರ್‍ನು ಆಕರ್ಷಿಸಿತು. ಕಿಸಾನ್ ಸಭಾ ನೇತೃತ್ವದ ಬಂಗಾಳದ ರೈತರ ಈ ತೆಭಾಗಾ ಚಳುವಳಿಯು ಅತ್ಯಂತ ದೊಡ್ಡ, ಉಗ್ರ ರೂಪದ ವಿಶಾಲ ತಳಹದಿಯ ವರ್ಗ ಹೋರಾಟವಾಗಿತ್ತು, ಅದು ಕಮ್ಯುನಿಸ್ಟರ ನಾಯಕತ್ವದಲ್ಲಿತ್ತು. ಆದು ಪ್ರಾಂತೀಯ ಮಟ್ಟದ ಚಳುವಳಿಯಾಗಿದ್ದರೂ, ವಿಶೇಷವಾಗಿ ಬರ್ಗಾದಾರರ ಸಂಖ್ಯೆ ಎಲ್ಲಿ ಹೆಚ್ಚಿತ್ತೋ ಮತ್ತು ಶೋಷಣೆ ಹೆಚ್ಚಾಗಿತ್ತೋ, ಬಂಗಾಳದ ಆ ಉತ್ತರ ಜಿಲ್ಲೆಗಳಲ್ಲಿ ಬರ್ಗಾದಾರರ ಸ್ಪಂದನೆ ಅತ್ಯಮೋಘವಾಗಿತ್ತು. ಅದು ತನ್ನ ತೆಕ್ಕೆಯಲ್ಲಿ ಬಂಗಾಳದ ೨೮ ಜಿಲ್ಲೆಗಳ ೧೫ ಜಿಲ್ಲೆಗಳನ್ನು ಒಳಗೊಂಡಿತ್ತು ಮತ್ತು ಜೋತೆದಾರರು, ಅವರ ಗೂಂಡಾಗಳು ಮತ್ತು ಪೋಲಿಸರ ವಿರುದ್ಧ ಕನಿಷ್ಟ  ೫೦ ಲಕ್ಷ ಬಡ ಹಾಗೂ ತೀರ ದಮನಿತ ವಿಭಾಗದ ರೈತರು ವೀರೋಚಿತವಾಗಿ ಹೋರಾಡಿದರು; ಎಲ್ಲಾ ಕಡೆಗಳಲ್ಲೂ ಕೋಮು ದ್ವೇಷ ಹಾಗೂ ಗಲಭೆಗಳ ನಡುವೆಯೂ ಸರ್ಕಾರಿ ಹಾಗೂ ಸರ್ಕಾರೇತರ ಅಪಪ್ರಚಾರಗಳನ್ನು ಧಿಕ್ಕರಿಸಿದರು. ಮಾರ್ಗದರ್ಶನ ನೀಡುವ ಹಾಗೂ ಸ್ಥಳೀಯವಾಗಿ ಚಳುವಳಿಯನ್ನು ನಡೆಸುವ ಸಲುವಾಗಿ ರೈತರು ತಾವೇ ತಾವಾಗಿ ಹಲವಾರು ಪ್ರದೇಶಗಳಲ್ಲಿ ಸ್ಥಳೀಯ ಕ್ರಿಯಾ ಸಮಿತಿಗಳನ್ನು ರಚಿಸಿಕೊಂಡಿದ್ದರು.

ನವೆಂಬರ್ ೧೯೪೬ ರಿಂದ  ಫೆಬ್ರವರಿ ೧೯೪೭ರವರೆಗೆ ಇಡೀ ಸುಗ್ಗಿಯ ಸಮಯದಲ್ಲಿ ಈ ಚಳುವಳಿ ವ್ಯಾಪಿಸಿತ್ತು. ಎಲ್ಲ ಕಡೆಗಳಲ್ಲೂ ಮುಖ್ಯವಾಗಿ ಉತ್ತರ ಜಿಲ್ಲೆಗಳಾದ ದಿನಾಜ್‌ಪುರ್, ರಂಗ್‌ಪುರ್ ಮತ್ತು ಜಲಪೈಗುರಿ, ಕರಾವಳಿಯಲ್ಲಿ ೨೪-ಪರಗಣ ಮತ್ತು ಖುಲ್ನಾ, ಪೂರ್ವದಲ್ಲಿ ಮೈಮೆನ್‌ಸಿಂಗ್ ಜಿಲ್ಲೆ, ಆದಿವಾಸಿ ಪ್ರದೇಶಗಳಾದ ಅಸ್ಸಾಮ್ ಗಡಿಯಲ್ಲಿನ ಗಾರೋ ಬೆಟ್ಟಪ್ರದೇಶದಲ್ಲಿ ಹೋರಾಡುತ್ತಿದ್ದ ರೈತರ ಮೇಲೆ ಪೋಲಿಸರು ಭೀಕರ ದಾಳಿ ದಬ್ಬಾಳಿಕೆಗಳನ್ನು ನಡೆಸಿದರು. ಜೋತೆದಾರರು ಮತ್ತವರ ಗೂಂಡಾಗಳು ರೈತರನ್ನು ಹೊಡೆದರು ಮತ್ತು ಕೊಂದು ಹಾಕಿದರೂ ಕೂಡ.

ನಂತರದ ತಿಂಗಳಲ್ಲಿ ಮುಖ್ಯವಾಗಿ ಜನವರಿ ಮತ್ತು ಫೆಬ್ರವರಿ ೧೯೪೭ರಲ್ಲಿ, ಶಸ್ತ್ರಸಜ್ಜಿತ ಪೋಲಿಸ್ ಪಡೆಗಳು ಅನೇಕ ಕಡೆಗಳಲ್ಲಿ ಗೋಲಿಬಾರ್ ಮಾಡಿದರು. ಎಲ್ಲರೂ ಸೇರಿ ೭೦ ರೈತರು – ಹಿಂದೂ, ಮುಸ್ಲಿಂ ಮತ್ತು ಆದಿವಾಸಿ ಪುರುಷರು ಮತ್ತು ಮಹಿಳೆಯರು  ಈ ಚಳುವಳಿಯಲ್ಲಿ ಪ್ರಾಣ ತೆತ್ತರು. ಬಹುಪಾಲು ಪೋಲಿಸ್ ಗೋಲಿಬಾರಿನಲ್ಲಿ ಮಡಿದರೆ ನಾಲ್ವರು ಜೈಲಿನಲ್ಲಿ ಕೊನೆಯುಸಿರೆಳೆದರು. ರೈತರ ಹೋರಾಟವನ್ನು ಬಗ್ಗುಬಡಿಯಬೇಕೆಂದು ತೀರ್ಮಾನಿಸಿದ ಮುಸ್ಲಿಂ ಲೀಗ್ ಸಚಿವ ಸಂಪುಟ ಭಾರಿ ದಾಳಿ ದಬ್ಬಾಳಿಕೆಗಳನ್ನು ಮಾಡಿತು. ಹಿಂದು ಮತ್ತು ಮುಸ್ಲಿಂ ಜೋತೆದಾರರು ಭವಿಷ್ಯದ ಸಂವಿಧಾನ ಮತ್ತು ಮಧ್ಯಂತರ ಸರ್ಕಾರದ ವಿಚಾರವಾಗಿ ಪರಸ್ಪರ ಕಚ್ಚಾಡುತ್ತಿದ್ದರೂ, ಲೀಗ್ ಸರ್ಕಾರದ ದಾಳಿ ದಬ್ಬಾಳಿಕೆಯ ದಮನಕಾರಿ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮೂಲಕ ತಮ್ಮ ವರ್ಗ ಗುಣವನ್ನು ಬಯಲು ಮಾಡಿಕೊಂಡರು.

ಆದರೆ, ಹೋರಾಡುತ್ತಿದ್ದ ರೈತರು ಎಂದಿಗೂ ಶರಣಾಗಲಿಲ್ಲ, ಬದಲು ತಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ಅದಮ್ಯ ನಂಬಿಕೆ ಇಟ್ಟು ಧೈರ್ಯದಿಂದ ದಾಳಿಯನ್ನು ಎದುರಿಸಿದರು. ತೆಭಾಗಾ ಚಳುವಳಿಯು ಇಡೀ ರೈತ ಸಮುದಾಯವನ್ನು, ಪುರುಷರು ಮತ್ತು ಮಹಿಳೆಯರು ಜತೆಗೂಡಿ, ಮುಖ್ಯವಾಗಿ ಕೃಷಿಕೂಲಿಗಾರರನ್ನೂ ಒಳಗೊಂಡಂತೆ ಎಲ್ಲಾ ಬಡ ವಿಭಾಗದ ದುಡಿಯುವವರನ್ನು ಬಡಿದೆಬ್ಬಿಸಿತು, ಹಲವಾರು ಕಡೆಗಳಲ್ಲಿ ಉಗ್ರ ಹೋರಾಟ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಮಹಿಳಾ ರೈತರು ಈ ಚಳುವಳಿಯಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದರು ಮತ್ತು ಪೋಲಿಸರ ವಿರುದ್ಧ ವೀರಾವೇಶದಿಂದ ಹೋರಾಡಿದರು. ಜನಜನಿತವಾದ ಘಟನೆಯೊಂದರಲ್ಲಿ, ರೈತ ಮಹಿಳೆಯೊಬ್ಬರು ಶಸ್ತ್ರಸಜ್ಜಿತ ಪೋಲಿಸರೊಬ್ಬರಿಂದ ರೈಫಲನ್ನು ಕಸಿದುಕೊಂಡರು ಕೂಡ.

tebhaga1
  ರೈತ ಸ್ವಯಂಸೇವಕ ಪಡೆ

೧೯೪೬-೪೭ರ ತೆಭಾಗಾ ಚಳುವಳಿಯು ಮರೆಯಲಾಗದ ಪರಿಣಾಮವನ್ನು ಬೀರಿತು; ಹೋರಾಟದ ಕೆಚ್ಚನ್ನು ಮತ್ತು ತ್ಯಾಗ ಭಾವವನ್ನು ಮತ್ತು ಒಡನಾಡಿ ಭಾವನೆಯನ್ನು ರೈತರಲ್ಲಿ ತುಂಬಿತು; ಸಂಘಟಿತ ವರ್ಗ ಹೋರಾಟವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ; ಕೃಷಿ ಕಾರ್ಮಿಕರು ಮತ್ತು ಬಡ ರೈತರು ಬರ್ಗಾದಾರರನ್ನೂ ಒಳಗೊಂಡಂತೆ ಹೋರಾಡಲು ಒಗ್ಗೂಡಬೇಕು, ಆ ಮೂಲಕ ವರ್ಗ ಐಕ್ಯತೆ ಹಾಗೂ ಸ್ವಾಭಿಮಾನವನ್ನು ಬೆಳೆಸುತ್ತದೆ; ವರ್ಗ ಹೋರಾಟದಲ್ಲಿ ಮಹಿಳಾ ರೈತರೂ ಪ್ರಮುಖವಾದ ಪಾತ್ರ ವಹಿಸಬೇಕು; ವರ್ಗ ಹೋರಾಟದಲ್ಲಿ ಶೋಷಕರು ಯಾವಾಗಲೂ ನಂಬಿಕೆ ದ್ರೋಹ ಬಗೆಯುತ್ತಾರೆ; ಮತ್ತು ಈ ಚಳುವಳಿಯನ್ನು ಸಾಕಷ್ಟು ತಯಾರಿಯೊಂದಿಗೆ ಮತ್ತು ಉತ್ತಮ ರಾಜಕೀಯ ತಿಳುವಳಿಕೆಯೊಂದಿಗೆ ಮುಂದುವರಿಸಬೇಕು ಎಂಬುದನ್ನು ಕಲಿಸಿತು.

ಇವೆಲ್ಲವುಗಳ ನಡುವೆಯೂ, ನಾಯಕತ್ವದಿಂದ ಕೆಲವು ತಪ್ಪುಗಳು ಆದವು: ಪೋಲಿಸ್ ಮತ್ತು ಜೋತೆದಾರರ ದಾಳಿಗಳಿಂದ ರಕ್ಷಣೆ ಪಡೆಯಲು ಸ್ವಯಂಸೇವಕರ ಸಂಘಟನೆಯನ್ನು ರಚಿಸುವ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆಯಾಗಿರಲಿಲ್ಲ; ದೊಡ್ಡ ಮಟ್ಟದಲ್ಲಿ ಪೋಲಿಸ್ ದಬ್ಬಾಳಿಕೆ ಶುರುವಾಗುವ ತನಕವೂ ಕಾರ್ಮಿಕ ವರ್ಗದ ಬೆಂಬಲ ಪಡೆದಿರಲಿಲ್ಲ; ಈ ಚಳುವಳಿಗೆ ಬೆಂಬಲವಾಗಿ ಪ್ರಟ್ಟಣಗಳ ಮಧ್ಯಮ ವರ್ಗದವರನ್ನು ಕರೆತರುವಲ್ಲಿ ಅಗತ್ಯ ಪ್ರಯತ್ನ ಮಾಡಿರಲಿಲ್ಲ; ಬರ್ಗಾದಾರರಿಗೆ ಮೂರನೇ ಎರಡು ಪಾಲು ಪಡೆಯುವಲ್ಲಿ ದೊಡ್ಡ ಮತ್ತು ಸಣ್ಣ ಜೋತೆದಾರರ ನಡುವೆ ವ್ಯತ್ಯಾಸ ಮಾಡದ ಪರಿಣಾಮವಾಗಿ ದೊಡ್ಡ ಜೋತೆದಾರರು ಬಹುಪಾಲು ಸಣ್ಣ ಜೋತೆದಾರರನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡು, ದಾಳಿಯಲ್ಲಿ ಅವರ ಬೆಂಬಲವನ್ನೂ ಪಡೆಯಲು ಸಾಧ್ಯವಾಯಿತು; ಹಾಗೆಂದ ಮಾತ್ರಕ್ಕೆ, ಈ ತಪ್ಪುಗಳು ಈ ಚಳುವಳಿಯ ಮಹತ್ವವನ್ನು ಅಥವಾ ವೀರಾವೇಶವನ್ನು ಯಾವುದೇ ಕಾರಣಕ್ಕೂ ಕುಗ್ಗಿಸಲಿಲ್ಲ.

ದೇಶದ ಇತರ ಭಾಗಗಳ ರೈತ ಹೋರಾಟಗಳಿಗಿಂತ ತೆಭಾಗಾ ಚಳುವಳಿಯು ವಿಶಿಷ್ಟವಾದದ್ದು. ಬೇರೆಲ್ಲಾ ಪ್ರಾಂತಗಳಲ್ಲಿ, ಹೋರಾಟಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು, ಅದೇ ಬಂಗಾಳದಲ್ಲಿ ಚಳುವಳಿಯು ಇಡೀ ಪ್ರಾಂತವನ್ನು ಆವರಿಸಿಕೊಂಡಿತ್ತು. ಉದಾಹರಣೆಗೆ, ಕೇರಳದಲ್ಲಿ ಭೂಮಾಲಕರ ವಿರುದ್ಧದ ರೈತ ಚಳುವಳಿಯು ಹಿಂದಿನ ಮಲಬಾರ್ ಜಿಲ್ಲೆಗೆ, ವಿಶೇಷವಾಗಿ ಉತ್ತರದ ಪ್ರದೇಶಗಳಿಗೆ ಸೀಮಿತವಾಗಿತ್ತು. ಅದೇ ರೀತಿಯಲ್ಲಿ, ಆಂಧ್ರದಲ್ಲಿ, ರೈತ ಚಳುವಳಿಯು(ತೆಲಂಗಾಣ ಚಳುವಳಿ ಹೊರತುಪಡಿಸಿ) ಬಹುಪಾಲು ಕೃಷ್ಣಾ, ಗುಂಟೂರು ಮತ್ತು ಗೋದಾವರಿ ಜಿಲ್ಲೆಗಳಿಗೆ ಸೀಮಿತವಾಗಿತ್ತು. ಮತ್ತು ಮಹಾರಾಷ್ಟ್ರದಲ್ಲಿ ರೈತ ಚಳುವಳಿಯು ವಾರ್ಲಿ ರೈತರು ಮತ್ತು ಒಂದೆರಡು ತಾಲೂಕುಗಳಿಗೆ ಮಾತ್ರ ಸೀಮಿತವಾಗಿತ್ತು.

ಬಹಳ ಮುಖ್ಯವಾಗಿ, ಆಗಸ್ಟ್ ೧೯೪೬ರಲ್ಲಿ ಕಲ್ಕತ್ತಾದಲ್ಲಿ ಪದೇ ಪದೇ ಏಳುತ್ತಿದ್ದ ಸಣ್ಣ-ಸಣ್ಣ ಅವಧಿಗಳ ಕೋಮು ಹತ್ಯಾಕಾಂಡ ಮತ್ತು ಅಕ್ಟೋಬರ್ ೧೯೪೬ರಲ್ಲಿ ಪೂರ್ವ ಜಿಲ್ಲೆಗಳಲ್ಲಿ ಒಂದಾಗಿದ್ದ ನೌಖಾಲಿಯಲ್ಲಿನ ಗಲಭೆಗಳ ಹಿಂದೆಯೇ ನಡೆದ ಶೋಷಿತ ರೈತರ ವರ್ಗ-ಚಳುವಳಿಯಾಗಿತ್ತು ತೆಭಾಗಾ ಚಳುವಳಿ. ಈ ಚಳುವಳಿ ನಡೆದ ಮುಖ್ಯ ಪ್ರದೇಶದಲ್ಲಿ ಯಾವುದೇ ಒಂದು ಸಮುದಾಯಕ್ಕೆ ಸೇರಿದ ರೈತರಾಗಿರದೇ ಅವರು ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳಿಗೆ ಸೇರಿದವರಾಗಿದ್ದರು. ಅಲ್ಲಿ ಜತೆಯಲ್ಲೇ ಆದಿವಾಸಿ ವಿಭಾಗದ ರೈತರೂ ಇದ್ದರು. ಈ ಚಳುವಳಿಯ ಅತ್ಯಂತ ಗಮನಾರ್ಹ ಅಂಶವೇನೆಂದರೆ ಅದು ವರ್ಗಹೋರಾಟ ಆಧಾರಿತ ಹಿಂದೂ-ಮುಸ್ಲಿಂ ಐಕ್ಯತೆಯ ದೀಪವನ್ನು ಬೆಳಗಿದ್ದು, ಮತ್ತು ಅದು ನೌಖಾಲಿಯನ್ನೂ ಒಳಗೊಂಡಂತೆ ಬಂಗಾಳದ ಎಲ್ಲಾ ಕಡೆಗಳಿಂದಲೂ ಎಲ್ಲಾ ಸಮುದಾಯಗಳ ಲಕ್ಷಾಂತರ ರೈತರನ್ನು ಹುರಿದುಂಬಿಸಿ ತನ್ನ ತೆಕ್ಕೆಗೆ ತೆಗೆದುಕೊಂಡದ್ದು.

ಬಂಗಾಳ ಮತ್ತು ಬಿಹಾರದ ಕೋಮು ಗಲಭೆಗಳನ್ನು ವಿರೋಧಿಸುವಲ್ಲಿ ತೆಭಾಗಾ ಚಳುವಳಿ ಮತ್ತು ಕಿಸಾನ್ ಸಭಾ ಅಸಾಧಾರಣವಾದ ಪಾತ್ರ ವಹಿಸಿದೆ. ಬಂಗಾಳದ ನೌಖಾಲಿ-ತಿಪ್ಪೇರಾ ಜಿಲ್ಲೆಯ ಪ್ರದೇಶಗಳಲ್ಲಿ ಕೋಮು ಗಲಭೆಗಳಾಗಲಿಲ್ಲ ಎನ್ನುವ ಅಂಶವನ್ನು ನಿರ್ದಿಷ್ಟವಾಗಿ ಗಮನಿಸಬೇಕು: ಅಲ್ಲಿ ಕಿಸಾನ್ ಸಭಾ ಸಾಕಷ್ಟು ಪ್ರಭಾವ ಹೊಂದಿತ್ತು. ಅಂತಹ ಪ್ರದೇಶಗಳಲ್ಲಿ, ಕಿಸಾನ್ ಸಭಾ ಮತ್ತು ತೆಭಾಗಾ ಚಳುವಳಿಯ ಕಾರ್ಯಕರ್ತರು ಪಕ್ಕದ ಗಲಭೆ ಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಪರಿಹಾರ ಕೇಂದ್ರಗಳನ್ನು ಸಂಘಟಿಸಿದರು. ಅದೇ ರೀತಿಯಲ್ಲಿ, ಬಿಹಾರದ ಮೊಂಘೈರ್ ಜಿಲ್ಲೆಯ ಮೋಘ್‌ಪುರದಲ್ಲಿ ಕಮ್ಯುನಿಸ್ಟ್ ಪಕ್ಷ, ಕಿಸಾನ್ ಸಭಾ ಮತ್ತು ಇತರ ಸಾಮೂಹಿಕ ಸಂಘಟನೆಗಳು ಗಲಭೆ ಪೀಡಿತ ಪ್ರದೇಶಗಳ ಜನರನ್ನು ರಕ್ಷಿಸಲು ಮತ್ತು ಕೋಮು ಗಲಭೆಗಳಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ಪರಿಹಾರ ಕೇಂದ್ರಗಳನ್ನು ಸಂಘಟಿಸಿದ್ದರು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶ ಎರಡೂ ಕಡೆಗಳಲ್ಲಿ, ಕಮ್ಯುನಿಸ್ಟ್ ಪಕ್ಷವು ಮುಂದೆ ನಿಂತು ಆ ಚಟುವಟಿಕೆಗಳಿಗೆ ನಾಯಕತ್ವ ನೀಡಿತು.

ಗಲಭೆಗಳನ್ನು ನಿಲ್ಲಿಸಿ ವಿವಿಧ ಸಮುದಾಯಗಳ ಜನರನ್ನು ಒಂದುಗೂಡಿಸಲು ಇರುವ ಒಂದೇ ಮಾರ್ಗವೆಂದರೆ ಬ್ರಿಟಿಷ್ ಆಳರಸರ ವಿರುದ್ಧ ಪಟ್ಟುಬಿಡದ ಹೋರಾಟ ನಡೆಸುವುದು ಮತ್ತು ಬಂಡವಾಳಶಾಹಿಗಳು ಹಾಗೂ ಭೂಮಾಲಕರ ವಿರುದ್ಧ ಕಾರ್ಮಿಕರು ಮತ್ತು ರೈತರನ್ನು ಅವರವರ ಬೇಡಿಕೆಗಳ ಆಧಾರದಲ್ಲಿ ಹೋರಾಟಕ್ಕೆ ಇಳಿಸುವುದು ಎಂದು ಕಮ್ಯುನಿಸ್ಟ್ ಪಕ್ಷ ಪರಿಗಣಿಸಿತು. ಆದರೆ ತನಗೆ ಸರಿ ಮತ್ತು ಸ್ಪಷ್ಟ ಎಂದೆನಿಸಿದ್ದನ್ನು  ಕಾರ್ಯಾಚರಣೆಗೆ ಇಳಿಸಲು ಸಾಕಷ್ಟು ಶಕ್ತಿಯಿಲ್ಲದ ಕಾರಣ, ಭಾರತದ ರಾಜಕಾರಣವು, ಬ್ರಿಟಿಷ್ ಆಳರಸರು ಮತ್ತು ಕಾಂಗ್ರೆಸ್ ಹಾಗೂ ಲೀಗ್ ನಾಯಕರ ನಡುವಿನ ಆಖಾಡಾವಾಗಿದ್ದರಿಂದ ಒಂದು ಬಿಕ್ಕಟ್ಟಿನಿಂದ ಮತ್ತೊಂದಕ್ಕೆ ಚಲಿಸಿತು.

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *