ಅಸ್ಸಾಮ್ ಮತ್ತು ಸುರ್ಮಾ ಕಣಿವೆಯಲ್ಲಿ ರೈತ ಹೋರಾಟಗಳು

ಯುದ್ಧಾನಂತರದ ಸಾಮ್ರಾಜ್ಯಶಾಹಿ-ವಿರೋಧಿ ಜನಾಂದೋಲನದ ಅವಧಿಯಲ್ಲಿ, ಸುರ್ಮಾ ಕಣಿವೆಯ ಪೂರ್ವ ದಿಕ್ಕಿನ ಪ್ರದೇಶಗಳಲ್ಲಿನ ಅತ್ಯಂತ ದಮನಕ್ಕೊಳಗಾಗಿದ್ದ ರೈತ ವಿಭಾಗವು ಅರೆಗುಲಾಮಿ ನಂಕಾರ್ ಪದ್ಧತಿಗೆ ಒಂದು ತೀವ್ರವಾದ ಪೆಟ್ಟನ್ನು ಕೊಟ್ಟಿತು. ೧೯೪೬ರಲ್ಲಿ ಪ್ರಾರಂಭವಾಗಿ ವಿಭಜನೆಯ ನಂತರದ ಅವಧಿಯಲ್ಲೂ ಮುಂದುವರಿದ ದೊಡ್ಡ ಸಂಘಟಿತ ಚಳುವಳಿ ಅದಾಗಿತ್ತು. ಜಮೀನ್ದಾರರನ್ನು ದ್ವೇಷಿಸುತ್ತಿದ್ದ ಗೇಣಿದಾರರು ಹೋರಾಟವನ್ನು ಬೆಂಬಲಿಸಿದರು ಮತ್ತು ಅದು ಹೋರಾಟದ ತೀಕ್ಷ್ಣತೆಯನ್ನು ಇನ್ನೂ ಹೆಚ್ಚಿಸಿತು.

Communist100 File copy
ಶತಮಾನೋತ್ಸವ ಲೇಖನ ಮಾಲೆ-೨೯

ವಿಭಜನೆಪೂರ್ವ ಅಸ್ಸಾಮಿನಲ್ಲಿ ಎರಡು ಪ್ರಾಂತೀಯ ಕಿಸಾನ್ ಸಭಾಗಳನ್ನು ಭಾಷಾಧಾರಿತವಾಗಿ ರಚಿಸಲಾಗಿತ್ತು – ಎರಡು ಬಂಗಾಳಿ ಮಾತನಾಡುವ ಜಿಲ್ಲೆಗಳ(ಕಚಾರ್ ಮತ್ತು ಸಿಲ್ಹೆಟ್) ಸುರ್ಮಾ ಕಣಿವೆ ಪ್ರಾಂತ ಕಿಸಾನ್ ಸಭಾವನ್ನು ೧೯೩೬ರಲ್ಲಿ ರಚಿಸಲಾಗಿತ್ತು ಮತ್ತು ಅಸ್ಸಾಮಿನ ಇನ್ನುಳಿದ ಎಲ್ಲಾ ಜಿಲ್ಲೆಗಳಲ್ಲಿ ಅಸ್ಸಾಮ್ ಪ್ರಾಂತ ಕಿಸಾನ್ ಸಭಾವನ್ನು ೧೯೪೬ರಲ್ಲಿ ರಚಿಸಲಾಗಿತ್ತು. ಆದರೆ ಅಸ್ಸಾಮಿನಲ್ಲಿ ಕಿಸಾನ್ ಸಭಾದ ಚಟುವಟಿಕೆಗಳು ೧೯೪೩ರಲ್ಲಿಯೇ ಶುರುವಾಗಿದ್ದವು.

ಆ ಭಾಗದ ಜಮೀನ್ದಾರಿ ಪ್ರದೇಶಗಳಲ್ಲಿ, ಗೇಣಿದಾರರು ನೆಲೆಸಿದ್ದ ಅಥವಾ ಸಾಗುವಳಿ ಮಾಡುತ್ತಿದ್ದ ಜಮೀನುಗಳಿಗೆ ಹಕ್ಕುಪತ್ರಗಳಿರಲಿಲ್ಲ. ಜಮೀನುದಾರರ ಮನಸೋಯಿಚ್ಛೆ ಅವರನ್ನು ಒಕ್ಕಲೆಬ್ಬಿಸಲಾಗುತ್ತಿತ್ತು. ಅವರು ನೆಲೆಸಿದ್ದ ಜಮೀನಿನಲ್ಲಿ ಒಂದು ಪಕ್ಕಾ ಮನೆಯನ್ನು ಕಟ್ಟುವ ಅಥವಾ ಜಮೀನಿನಲ್ಲಿ ಕೆರೆಯನ್ನು ಅಗೆಯುವ ಹಕ್ಕು ಅವರಿಗಿರಲಿಲ್ಲ ಮತ್ತು ಮರ ಕಡಿಯುವ ಹಕ್ಕು ಕೂಡ ಇರಲಿಲ್ಲ. ಜಮೀನುದಾರರ ಮನೆಗೆ ಹೋಗುವಾಗ ಅವರು ಚಪ್ಪಲಿ ಅಥವಾ ಶೂಗಳನ್ನು ಧರಿಸುವಂತಿರಲಿಲ್ಲ ಮತ್ತು ಕೊಡೆ ಬಳಸುವಂತಲೂ ಇರಲಿಲ್ಲ.

ʻಸುಆಲ್ʼ ಗೇಣಿಯನ್ನು ಹಣ ಅಥವಾ ವಸ್ತುಗಳ ರೂಪದಲ್ಲಿ ಕೊಡುವುದಲ್ಲದೇ, ಬೇರೆ ಬೇರೆ ಹಬ್ಬಗಳ ಸಮಯದಲ್ಲಿ ಮತ್ತು ಜಮೀನುದಾರರ ಮನೆಯಲ್ಲಿ ಬೇರಾವುದಾದರೂ ಸಮಾರಂಭಗಳಾದರೆ ಜಮೀನುದಾರರು ʻಅಬ್ವಾಬ್ʼ ಅಥವಾ ʻನಜರಾನಾʼವನ್ನು ಕಿತ್ತುಕೊಳ್ಳುತ್ತಿದ್ದರು. ಈ ಬಲಾತ್ಕಾರದ ವಸೂಲಿಗಳು ಜಮೀನುದಾರರ ಕಾನೂನು ಸಮ್ಮತ ಹಕ್ಕುಗಳಾಗಿದ್ದವು. ಜಮೀನುದಾರರ ಇಂತಹ ಸಾಮಾಜಿಕ ದಬ್ಬಾಳಿಕೆಗಳು ಮತ್ತು ಬಲಾತ್ಕಾರದ ಆರ್ಥಿಕ ವಸೂಲಿಗಳಿಂದಾಗಿ ಗೇಣಿದಾರರ ಬದುಕು ಅಸಹನೀಯವಾಗಿದ್ದವು.

೧೯೩೬ರಲ್ಲಿ ಸುರ್ಮಾ ಕಣಿವೆ ಕಿಸಾನ್ ಸಭಾವು ಗೇಣಿದಾರರ ಈ ಬೇಡಿಕೆಗಳಿಗಾಗಿ ಒತ್ತಾಯ ಮಾಡಿತು: ಜಮೀನುದಾರರ ಜಮೀನನ್ನು ೧೨ ವರ್ಷಗಳಿಗಿಂತ ಹೆಚ್ಚು ಸಾಗುವಳಿ ಮಾಡಿದ್ದರೆ, ಅಂಥಹ ಗೇಣಿದಾರರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು(ಅಂದರೆ ಅವರನ್ನು ಜಮೀನುದಾರರು ಮನಸ್ಸಿಗೆ ಬಂದಹಾಗೆ ಒಕ್ಕಲೆಬ್ಬಿಸುವಂತಿಲ್ಲ); ಹಕ್ಕು ಪತ್ರ ಹೊಂದಿರುವ ಗೇಣಿದಾರರು ಕೆರೆ ಅಗೆಯಲು ಮತ್ತು ಪಕ್ಕಾ ಮನೆ ಕಟ್ಟಿಕೊಳ್ಳಲು ಅಧಿಕಾರ ಹೊಂದುತ್ತಾರೆ; ಎಲ್ಲಾ ಕಾನೂನುಬಾಹಿರ ಬಲಾತ್ಕಾರದ ವಸೂಲಿಯನ್ನು ನಿಲ್ಲಿಸಬೇಕು; ಜಮೀನುದಾರರ ಮನೆಗಳಲ್ಲಿ ಮತ್ತು ಜಮೀನುಗಳಲ್ಲಿ ಮಾಡುತ್ತಿದ್ದ ಬಿಟ್ಟಿ ಚಾಕರಿಯನ್ನೂ ಒಳಗೊಂಡಂತೆ ನಂಕಾರ್ ಪದ್ಧತಿ(ಅರೆಗುಲಾಮ ಪದ್ಧತಿ)ಯನ್ನು ರದ್ದುಮಾಡಬೇಕು ಮತ್ತು ಗೇಣಿದಾರರು ಸಾಗುವಳಿ ಮಾಡುತ್ತಿದ್ದ ಜಮೀನುದಾರರ ಜಮೀನಿನ ಒಂದು ಭಾಗದಲ್ಲಿ ಕಟ್ಟಿಕೊಂಡ ಮನೆಯ ಹಕ್ಕುಪತ್ರವನ್ನೂ ನೀಡುವಂತೆ ಗೇಣಿ ಕಾಯಿದೆಯಲ್ಲಿ ನಮೂದಿಸಬೇಕು; ಟೀ ತೋಟಗಳಲ್ಲಿ ನೆಲೆಸಿರುವ ಗೇಣಿದಾರರಿಗೆ ಕೂಡ ಅವರು ನೆಲೆಸಿರುವ ಜಮೀನಿಗೆ ಹಕ್ಕುಪತ್ರ ನೀಡಬೇಕು ಮತ್ತು ಗೇಣಿದಾರರ ಮೇಲೆ ನಡೆಯುತ್ತಿದ್ದ ಎಲ್ಲಾ ರೀತಿಯ ದಬ್ಬಾಳಿಕೆಗಳು ನಿಲ್ಲಬೇಕು ಹಾಗೂ ಎಲ್ಲಾ ಸಾಮಾಜಿಕ ಅವಮಾನ ಮತ್ತು ಕಡೆಗಣಿಕೆಗಳನ್ನು ತೆಗೆದುಹಾಕಬೇಕು.

ಈ ಬೇಡಿಕೆಗಳಿಗಾಗಿ ಪ್ರಚಾರ ಮಾಡುತ್ತಾ ನೂರಾರು ಸಭೆಗಳನ್ನು ಸಿಲ್ಹೆಟ್ ಜಿಲ್ಲೆಯಾದ್ಯಂತ ನಡೆಸಲಾಯಿತು ಮತ್ತು ಎಲ್ಲಾ ಜಮೀನುದಾರಿ ಪ್ರದೇಶಗಳಲ್ಲಿ ಮೆರವಣಿಗೆಗಳನ್ನು ಸಂಘಟಿಸಲಾಯಿತು. ಜಮೀನುದಾರರು ಈ ಮೆರವಣಿಗೆಗಳ ಮೇಲೆ ದಾಳಿ ಮಾಡುವ ಮೂಲಕ ಭಾಗವಹಿಸಿದವರಿಗೆ ಬೆದರಿಕೆ ಒಡ್ಡಿದರು, ಅನೇಕರು ಗಾಯಗೊಂಡರು. ಈ ಮೆರವಣಿಗೆಗಳ ಮೇಲೆ ದಾಳಿ ಮಾಡಲು ಜಮೀನ್ದಾರರು ತಮಗೆ ನಿಷ್ಠರಾಗಿದ್ದ ಅರೆಗುಲಾಮ(ನಂಕಾರ್‌ಗಳನ್ನು)ರನ್ನು ಬಳಸಿದರು. ಇದು ಚಳುವಳಿಯಲ್ಲಿನ ದುರ್ಬಲ ಅಂಶವನ್ನು ಬಯಲುಮಾಡಿತು. ಕಿಸಾನ್ ಸಭಾವು ಗೇಣಿದಾರರ ಬೇಡಿಕೆಗಳ ಮೇಲೆ ಹೆಚ್ಚು ಒತ್ತು ನೀಡುತ್ತಾ ನಂಕಾರರ ಬೇಡಿಕೆಗಳನ್ನು ಕಡೆಗಣಿಸಿತ್ತು. ಆ ಧೋರಣೆಯನ್ನು ಆ ನಂತರದಲ್ಲಿ ತಿದ್ದಿಕೊಳ್ಳಲಾಯಿತು.

ನಂಕಾರರು ಮತ್ತವರ ಕುಟುಂಬದವರು ಜಮೀನ್ದಾರರು ನೀಡಿದ ಒಂದು ತೀರ ಚಿಕ್ಕ ಸಾಗುವಳಿ ಜಮೀನು ಅಥವಾ ಮನೆ ಕಟ್ಟಿಕೊಂಡ ಅತಿ ಸಣ್ಣ ಜಾಗಕ್ಕೆ ಬದಲಾಗಿ ಜಮೀನ್ದಾರರಿಗೆ ಬಿಟ್ಟಿ ಚಾಕರಿ ಮಾಡಬೇಕಾಗುತ್ತಿತ್ತು. ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತಿರಲಿಲ್ಲ, ಅವರಿಗೆ ಲಕ್ಷಣವಾದ ಅಥವಾ ಒಳ್ಳೆಯ ಹೆಸರನ್ನೂ ಇಡುವಂತಿರಲಿಲ್ಲ. ಜಮೀನ್ದಾರರ ಕಾಮದಾಸೆಯಿಂದ ನಂಕಾರರ ಹೆಂಡತಿ ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸುವ ಮಾರ್ಗ ಕೂಡ ಇರಲಿಲ್ಲ. ಗುಲಾಮಗಿರಿ ಪದ್ಧತಿಯ ಯಾವ ಪಾರಂಪರಿಕ ನಿಯಮವನ್ನು ಉಲ್ಲಂಘಿಸಿದರೂ ಮೃಗೀಯ ಹಿಂಸೆ ಸಾಮಾನ್ಯವಾಗಿತ್ತು. ಈ ಎಲ್ಲಾ ದಮನಕಾರಿ ಸ್ಥಿತಿಯ ಹಿನ್ನೆಲೆಯಲ್ಲಿ, ಅವರ ಬೇಡಿಕೆಗಳ ಮೇಲೆ ವ್ಯಾಪಕ ಪ್ರಚಾರವನ್ನು ನಡೆಸಲಾಯಿತು ಮತ್ತು ಇದರ ಪರಿಣಾಮವಾಗಿ ದೊಡ್ಡ ಸಂಖ್ಯೆಯ ನಂಕಾರರು ಚಳುವಳಿಗೆ ಸೇರಿದರು.

೧೯೩೮ರಲ್ಲಿ, ಹಿಂದೆಂದೂ ಕಂಡಿಲ್ಲದ ಮತಪ್ರದರ್ಶನವನ್ನು ಶಿಲ್ಲಾಂಗಿನಲ್ಲಿ ನಡೆಸಲಾಯಿತು, ನೂರಾರು ರೈತರು ಮತ್ತು ನಂಕಾರರು ೮೬ ಮೈಲಿಗಳ ದೂರ ಗುಡ್ಡ ಬೆಟ್ಟಗಳನ್ನು ದಾಟಿ ಬಂದು ಅದರಲ್ಲಿ ಪಾಲ್ಗೊಂಡಿದ್ದರು. ನಂಕಾರ್ ಪದ್ಧತಿಯನ್ನು ರದ್ದುಮಾಡಬೇಕೆಂಬ ಬೇಡಿಕೆಯೊಂದಿಗೆ ನಂಕಾರರು ಈ ಚಳುವಳಿಯಲ್ಲಿ ಸೇರಿದ್ದರು.

ನಂಕಾರರ ಚಳುವಳಿಯು ಗೇಣಿದಾರರ ಚಳುವಳಿಯ ಅವಿಭಾಜ್ಯ ಅಂಗವಾಗಿತ್ತು. ನಂಕಾರರ ಹೋರಾಟವು ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದಾಗ್ಯೂ ಎರಡೂ ಚಳುವಳಿಗಳ ಯಶಸ್ಸು ನಿಕಟ ಅಂತರ್ಸಂಬಂಧ ಹೊಂದಿದ್ದವು. ಧಾರ್ಮಿಕ ಭಿನ್ನತೆಯನ್ನು ಮೀರಿನಿಂತು, ಮುಸ್ಲಿಂ ಮತ್ತು ಹಿಂದು ನಂಕಾರರು ಭುಜಕ್ಕೆ ಭುಜ ಕೊಟ್ಟು ಹೋರಾಡಿದರು, ಅದು ಚಳುವಳಿಗೆ ಒಂದು ಹೊಸ ಶಕ್ತಿಯನ್ನು ತಂದಿತು. ಜಮೀನ್ದಾರರು ಮತ್ತು ಸರ್ಕಾರ ಕೋಪದಿಂದ ಕೆರಳಿದವು; ಬಂಧನ ಮತ್ತು ನಿರ್ದಯ ಹೊಡೆತಗಳಲ್ಲದೇ ನಂಕಾರರು ಮತ್ತು ಗೇಣಿದಾರರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಿದರು.

ಜಮೀನ್ದಾರರ ಜತೆ ಶಾಮೀಲಾಗಿ ಸರ್ಕಾರಿ ಯಂತ್ರವು ಆನೆಗಳನ್ನು ಬಳಸಿ ಗೇಣಿದಾರರ ಮನೆಗಳನ್ನು ದ್ವಂಸ ಮಾಡಿತು ಮತ್ತು ಸಶಸ್ತ್ರ ಪಡೆಗಳನ್ನು ಬಳಸಿ ತೀವ್ರ ದಬ್ಬಾಳಿಕೆ ನಡೆಸಿ ಹೋರಾಟವನ್ನು ದಮನ ಮಾಡಿದರು. ಇದರೊಂದಿಗೆ ಸುರ್ಮಾ ಕಣಿವೆಯ ಹೋರಾಟದ ಮೊದಲ ಹಂತ ಕೊನೆಗೊಂಡಿತು; ಆದರೆ ಆ ಪ್ರದೇಶದ ಎಲ್ಲಾ ಗೇಣಿದಾರರು ಜಮೀನ್ದಾರರ ದಬ್ಬಾಳಿಕೆ ಮತ್ತು ಬಲಾತ್ಕಾರದ ವಸೂಲಿಯ ವಿರುದ್ಧ ಅಚಲವಾಗಿದ್ದರು. ಅದು ಇಡೀ ಅಸ್ಸಾಮಿನ ಜಮೀನ್ದಾರಿ ಪ್ರದೇಶದಲ್ಲಿ ವ್ಯಾಪಕ ಚಳುವಳಿಗೆ ಕಾರಣವಾಯಿತು, ಗೇಣಿದಾರಿಕೆಯ ರಕ್ಷಣೆಗಾಗಿ ಮತ್ತು ನ್ಯಾಯಯುತ ಗೇಣಿಯ ಖಾತ್ರಿಗಾಗಿ ಗೇಣಿ ಕಾಯಿದೆ ತರಬೇಕೆಂದು ಒತ್ತಾಯಿಸಿದರು.

ಮೂವತ್ತರ ದಶಕದಲ್ಲಿ ಅಸ್ಸಾಮಿನ ಕಣಿವೆಯಲ್ಲಿ, ಕಿಸಾನ್ ಚಳುವಳಿಯು ಪ್ರಥಮತಃ ಕಾಂಗ್ರೆಸ್‌ನ ಅಡಿಯಲ್ಲಿತ್ತು. ಶ್ರೀಮಂತ ರೈತರ ನೇತೃತ್ವದಲ್ಲಿದ್ದ ಅದು ಬಡ ಹಾಗೂ ಭೂಹೀನ ರೈತರ, ಆದಿ-ಕಂಡ್ವಾ(ಪಾಲುಗುತ್ತಿಗೆದಾರ) ಮತ್ತು ಕೃಷಿ ಕೂಲಿಗಾರರ ಬೇಡಿಕೆಗಳನ್ನು ಎತ್ತಿಕೊಳ್ಳಲಿಲ್ಲ. ಜನಬೆಂಬಲದ ಕೊರತೆಯಿಂದಾಗಿ ಈ ರೈತ ಸಭಾಗಳು ೧೯೪೦ರ ನಂತರ ನಿಷ್ಕ್ರಿಯವಾದವು.

ಕಮ್ಯುನಿಸ್ಟ್ ಕಾರ್ಯಕರ್ತರು, ವೈಯಕ್ತಿಕವಾಗಿ ಅಥವಾ ಗುಂಪುಗಳಾಗಿ ೧೯೩೮ರಿಂದಲೂ ಅಸಾಮ್ ಕಣಿವೆಯ ಬೇರೆ ಬೇರೆ ಜಾಗಗಳಲ್ಲಿ ರೈತರ ನಡುವೆ ಕೆಲಸ ಮಾಡುತ್ತಿದ್ದಾಗ್ಯೂ, ಅಸ್ಸಾಮ್ ಕಣಿವೆ ಸಮಿತಿ(ಬಹಳ ಬೇಗ ಅಸ್ಸಾಮ್ ಪ್ರಾಂತ ಸಂಘಟನಾ ಸಮಿತಿಯಾಗಿ ಮಾರ್ಪಾಟಾಯಿತು) ರಚನೆಯಾದ ಮೇಲೆಯೇ ೧೯೪೩ರಲ್ಲಿ ಎಐಕೆಎಸ್ ಸ್ಥಾಪನೆಯ ಸಿದ್ಧತೆಗಳು ಮತ್ತು ಅದರ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಅದಕ್ಕೂ ಮುಂಚೆ, ೧೯೪೦ರಲ್ಲಿ ಕಮ್ಯುನಿಸ್ಟ್ ಲೀಗ್ ನೇತೃತ್ವದಲ್ಲಿ ಅಸ್ಸಾಮ್ ಕಿಸಾನ್ ಬನುವಾ(ಪೆಸೆಂಟ್ಸ್ ಅಂಡ್ ಲೇಬರ್ ಯೂನಿಯನ್) ಸ್ವತಂತ್ರವಾಗಿ ಮತ್ತು ಕಾಂಗ್ರೆಸ್ಸಿಗೆ ವಿರುದ್ಧವಾಗಿ ರಚನೆಗೊಂಡಿತ್ತು. ಈ ಸಂಘಟನೆಯು ಕಾಮರೂಪ್, ಶಿಬ್ಸಾಗರ್ ಮತ್ತು ದಿಬ್ರೂಗರ್ ಪ್ರದೇಶಗಳ ಭಾಗಗಳಲ್ಲಿ ಸಕ್ರಿಯವಾಗಿತ್ತು.

ಮೊದಲ ಕಿಸಾನ್ ಸಮ್ಮೇಳನವನ್ನು ಕಮ್ಯುನಿಸ್ಟರ ನೇತೃತ್ವದಲ್ಲಿ ೧೯೪೩ರಲ್ಲಿ ಹಾವೋರರ್ಪ್‌ನಲ್ಲಿ ನಡೆಸಲಾಯಿತು. ಬೆಲೆ ಏರಿಕೆ, ಕಾಳಸಂತೆ ಮತ್ತು ಕಳ್ಳದಾಸ್ತಾನುಗಳ ವಿರುದ್ಧ, ಕೃಷಿ ಸಾಲ, ಭತ್ತದ ಬೀಜಗಳ ವಿತರಣೆಗಾಗಿ ಒತ್ತಾಯಿಸಿ, ಜಮೀನ್ದಾರರು, ಜೊತೆದಾರರು ಹಾಗೂ ಬಡ್ಡಿ ಸಾಹುಕಾರರ ದಬ್ಬಾಳಿಕೆ ವಿರುದ್ಧ ಸಮ್ಮೇಳನ ನಿರ್ಣಯಗಳನ್ನು ಅಂಗೀಕರಿಸಿತು. ೧೯೪೪ರಲ್ಲಿ ನಡೆದ ಗೋಲ್ಪಾರ ಮಹಾಕುಮಾ ಕಿಸಾನ್ ಸಮ್ಮೇಳನದಲ್ಲಿ ಜಮೀನ್ದಾರಿ ಪದ್ಧತಿಯ ರದ್ದಿಗಾಗಿ ನಿರ್ಣಯ ಅಂಗೀಕರಿಸಲಾಯಿತು.

ಆದಿವಾಸಿ ರೈತರನ್ನು ಸಂಘಟಿಸುವ ಸಲುವಾಗಿ, ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದ ಆದಿವಾಸಿ ಸಂಘವನ್ನು ಪುನರ್‌ ಸಂಘಟಿಸಲು ಕಮ್ಯುನಿಸ್ಟರು ಮುತುವರ್ಜಿ ವಹಿಸಿದರು. ಅದರ ಬ್ಯಾನರ್ ಅಡಿಯಲ್ಲಿ, ಅವರು ಆರ್ಥಿಕ ಸಮಸ್ಯೆಗಳನ್ನೂ ಕೈಗೆತ್ತಿಕೊಳ್ಳಲು ಶುರುಮಾಡಿದರು. ಇದು ಬಂಗ್ಲಾಬಾರಿ, ಬಿಜ್ನಿ ದುವಾರ ಟೀ ತೋಟಗಳ ಗೇಣಿದಾರರನ್ನು ಪ್ರಭಾವಿಸಿತು; ಗೇಣಿಯನ್ನು ಹಣದ ಬದಲು ಭತ್ತದ ರೂಪದಲ್ಲಿ ನೀಡಬೇಕೆಂಬ ನಿಲುವಿನ ವಿರುದ್ಧ ಮತ್ತು ಬಂಗಲೆಯ ಎದುರು ಯಾರೂ ಕೊಡೆಯೊಂದಿಗೆ ಮತ್ತು ಶೂ ಹಾಕಿಕೊಂಡು ಬರಬಾರದೆಂಬ ಹಾಗೂ ತೋಟದ ಮ್ಯಾನೇಜರ್‌ನ ಮತ್ತಿತರ ಕಿರುಕುಳಗಳ ವಿರುದ್ಧ ಮಗುರ್ಮಾರಿಯಲ್ಲಿ ಸಭೆ ನಡೆಸಲಾಯಿತು. ಮ್ಯಾನೇಜರನ ದಬ್ಬಾಳಿಕೆಯ ವಿರುದ್ಧ ಕೆಂಬಾವುಟಗಳನ್ನು ಹಿಡಿದು ದೊಡ್ಡ ಮತಪ್ರದರ್ಶನ ನಡೆಸಲಾಯಿತು. ಆ ನಂತರದಲ್ಲಿ, ಮ್ಯಾನೇಜರನ ಬಂಗಲೆ ಎದುರಿನ ರಸ್ತೆಯಲ್ಲಿ ಓಡಾಡುವಾಗಿನ ನಿರ್ಬಂಧ ತೆಗೆದುಹಾಕಲಾಯಿತು.

ಯುದ್ಧಾನಂತರದ ಸಾಮ್ರಾಜ್ಯಶಾಹಿ-ವಿರೋಧಿ ಜನಾಂದೋಲನದ ಅವಧಿಯಲ್ಲಿ, ಸುರ್ಮಾ ಕಣಿವೆಯ ಪೂರ್ವ ದಿಕ್ಕಿನ ಪ್ರದೇಶಗಳಲ್ಲಿನ ಅತ್ಯಂತ ದಮನಕ್ಕೊಳಗಾಗಿದ್ದ ರೈತ ವಿಭಾಗವು ಅರೆಗುಲಾಮಿ ನಂಕಾರ್ ಪದ್ಧತಿಗೆ ಒಂದು ತೀವ್ರವಾದ ಪೆಟ್ಟನ್ನು ಕೊಟ್ಟಿತು. ೧೯೪೬ರಲ್ಲಿ ಪ್ರಾರಂಭವಾಗಿ ವಿಭಜನೆಯ ನಂತರದ ಅವಧಿಯಲ್ಲೂ ಮುಂದುವರಿದ ದೊಡ್ಡ ಸಂಘಟಿತ ಚಳುವಳಿ ಅದಾಗಿತ್ತು. ಜಮೀನ್ದಾರರನ್ನು ದ್ವೇಷಿಸುತ್ತಿದ್ದ ಗೇಣಿದಾರರು ಹೋರಾಟವನ್ನು ಬೆಂಬಲಿಸಿದರು ಮತ್ತು ಅದು ಹೋರಾಟದ ತೀಕ್ಷ್ಣತೆಯನ್ನು ಇನ್ನೂ ಹೆಚ್ಚಿಸಿತು.

೧೯೪೬ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಜಮೀನ್ದಾರರ ಜತೆ ಶಾಮೀಲಾಗಿ ತೀವ್ರ ದಮನಕಾರಿ ದಾಳಿಯನ್ನು ಹರಿಬಿಟ್ಟಿತು. ವಿಭಜನೆಯ ನಂತರವೂ, ಸಿಲ್ಹೆಟ್ ಪೂರ್ವ ಪಾಕಿಸ್ತಾನ(ಬಾಂಗ್ಲಾದೇಶ)ದ ಭಾಗವಾದ ಮೇಲೂ, ನಂಕಾರರು ಕೆಂಬಾವುಟದ ಅಡಿಯಲ್ಲಿ ಹೋರಾಟ ಮುಂದುವರಿಸಿದರು. ಆಗ ಆದ ಒಂದೇ ಬದಲಾವಣೆಯೆಂದರೆ, ಭಯಾನಕ ದಬ್ಬಾಳಿಕೆ ಕಾಂಗ್ರೆಸ್ ಸರ್ಕಾರದ ಬದಲು ಮುಸ್ಲಿಂ ಲೀಗಿನದಾಗಿತ್ತು. ಚಳುವಳಿಯನ್ನು ಬಗ್ಗುಬಡಿಯಲು ಆಗದ ಲೀಗ್ ಸರ್ಕಾರ ನಂಕಾರರ ಕೆಲವು ಬೇಡಿಕೆಗಳನ್ನು ಈಡೇರಿಸಿತು.

irabat singh
ಕಾಂ. ಇರಾವತ್ ಸಿಂಗ್

೧೯೪೪ರಿಂದ ಯುದ್ಧ ಕಾಲದ ದಾಳಿಗಳಾದ ಬರಗಾಲದ ನಮೂನೆಯ ಸ್ಥಿತಿಗಳು, ತೀವ್ರ ಬೆಲೆ ಏರಿಕೆ ಹಾಗೂ ಕಾಳ ಸಂತೆಗಳನ್ನು ವಿರೋಧಿಸುವ ಮೂಲಕ ಕಿಸಾನ್ ಸಭಾವು ತನ್ನ ನೆಲೆಯನ್ನು ಉತ್ತಮ ಪಡಿಸಿಕೊಂಡಿತು. ಸ್ವಾತಂತ್ರ್ಯ ಚಳುವಳಿಯನ್ನು ಕಟ್ಟಿ ದಂತಕತೆಯಾಗಿದ್ದ ಮತ್ತು ಮಣಿಪುರದ ಕಮ್ಯುನಿಸ್ಟ್ ಚಳುವಳಿಯ ನೇತಾರರೂ ಆಗಿದ್ದ ಕಾಂ.ಇರಾವತ್ ಸಿಂಗ್ ಅವರು ಕಚಾರ್ ನಲ್ಲಿ ಕಿಸಾನ್ ಕಾರ್ಯವನ್ನು ಕೈಗೆತ್ತಿಕೊಂಡ ಮೇಲೆ ಅದರ ಸಾಮುದಾಯಿಕ ಪ್ರಭಾವ ಹೆಚ್ಚಾಯಿತು. ಅವರು ಸಿಲ್ಹೆಟ್ ಜೈಲಿನಲ್ಲಿ ತಮ್ಮ ಶಿಕ್ಷೆಯ ಅವಧಿಯಲ್ಲಿ ಅನೇಕ ಕಮ್ಯುನಿಸ್ಟರನ್ನು ಭೇಟಿ ಮಾಡಿದ ನಂತರ ಕಮ್ಯುನಿಸ್ಟರಾದವರು. ಬಿಡುಗಡೆಯಾದ ಮೇಲೆ ಮಣಿಪುರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದಾಗಿ, ಸಿಲ್ಚಾರಿನಲ್ಲಿಯೇ ಉಳಿದುಕೊಂಡು ಕಿಸಾನ್ ಸಭಾವನ್ನು ಗಟ್ಟಿಗೊಳಿಸಲು ಕೆಲಸ ಮಾಡಿದರು. ಬಂಗಾಳದ ತೇಭಾಗಾ ಹೋರಾಟದ ಪ್ರಭಾವದ ಜತೆಯಲ್ಲೇ, ಇಲ್ಲಿ ಮಾಡಿದ ತಳಮಟ್ಟದ ಕೆಲಸವೂ ಸೇರಿಕೊಂಡು ಇದೇ ವಿಷಯಗಳ ಮೇಲಿನ ಆಧಾರದಲ್ಲಿ ೧೯೪೬ರಲ್ಲಿ ಕಾಚಾರಿನಲ್ಲಿ ಹೋರಾಟ ಸಿಡಿದೆದ್ದಿತು. ಅದು ಹತ್ತಾರು ಸಾವಿರ ಪಾಲುಬೆಳೆಗಾರರು, ಬಡ ರೈತರು ಮತ್ತು ಕೃಷಿ ಕೂಲಿಗಾರರ ನಡುವೆ ಜನಪ್ರಿಯವಾಯಿತು.

ಸಾಧ್ಯವಾದ ಎಲ್ಲಾ ರೀತಿಯ ಕ್ರೂರ ದಮನಕಾರಿ ದಾಳಿಗಳ ಮೂಲಕ ಹೋರಾಟವನ್ನು ಬಗ್ಗುಬಡಿಯಲು ಕಾಂಗ್ರೆಸ್ ಸರ್ಕಾರ ಯತ್ನಿಸಿತು. ಮತ್ತೊಂದೆಡೆ, ದೃಢಸಂಕಲ್ಪ ಮಾಡಿದ್ದ ರೈತರು ತಮ್ಮ ಹೋರಾಟವನ್ನು ಉತ್ತುಂಗಕ್ಕೆ ಒಯ್ದು ತಮ್ಮ ಧೀರತನವನ್ನು ಮತ್ತು ಶಿಸ್ತನ್ನು ಪ್ರದರ್ಶಿಸಿದರು.

ಪಾಲುಬೆಳೆಗಾರರ ಮೇಲೆ ಹಲ್ಲೆ ಮಾಡಿದ ಪೋಲಿಸರನ್ನು ಮಹಿಳಾ ಕಾರ್ಯಕರ್ತರು ಎದುರಿಸಿ ನಿಂತರು ಮತ್ತು ಅವರು ಹಿಂದೆ ಸರಿಯುವಂತೆ ಮಾಡಿದರು. ಜಿಲ್ಲೆಯಾದ್ಯಂತ ಆ ಮಹಿಳಾ ನಾಯಕಿಯರ ಹೆಸರು ಜನಪ್ರಿಯವಾಯಿತು. ಇಮಾಚೌ ದೇವಿ, ಮಣಿಪುರದ ಮಹಿಳಾ ಕೃಷಿ ಕೂಲಿಗಾರ್ತಿ ಮತ್ತು ಇತರ ನಾಲ್ಕು ರೈತರು ೧೯೪೯ರಲ್ಲಿ ಪಾಲುಬೆಳೆಗಾರರ ಭತ್ತವನ್ನು ರಕ್ಷಿಸುತ್ತಿರುವಾಗ ಅಸಾಮ್ ರೈಫಲ್ಸ್‌ರ ಗುಂಡಿಗೆ ಬಲಿಯಾದರು. ಪಾಲು ಬೆಳೆಗಾರರ ಭತ್ತವನ್ನು ಕಸಿದುಕೊಂಡುಹೋಗುತ್ತಿದ್ದ ಜಮೀನ್ದಾರರಿಗೆ ಪೋಲಿಸರು ಸಹಾಯ ಮಾಡುತ್ತಿದ್ದರು. ಮತ್ತೊಂದೆಡೆ, ಹೋರಾಡುವ ರೈತರು ಲಾರಿಗಳನ್ನು ತಡೆದು ತಮ್ಮ ಪಾಲಿನ ಭತ್ತವನ್ನು ಹಿಂತಿರುಗಿಸಲು ಕಾದಾಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿದರು ಮತ್ತು ಕೊಂದರು ಕೂಡ.

ಈ ಹೋರಾಟ ಮತ್ತು ಅದರ ನಂತರ ೧೯೪೮-೫೦ರ ಜೀವ ಕೊಟ್ಟೇವು, ಭತ್ತ ಕೊಡುವುದಿಲ್ಲ ಎಂಬ ಘೋಷಣೆಯೊಂದಿಗೆ ಅಸ್ಸಾಮಿನ ಬ್ರಹ್ಮಪುತ್ರ ಕಣಿವೆ ಜಿಲ್ಲೆಯ ಕಿಸಾನ್ ಹೋರಾಟವು ಪಾಲುಬೆಳೆಗಾರರ ಕಾಯಿದೆಯೊಂದನ್ನು ಕಾಂಗ್ರೆಸ್ ಸರ್ಕಾರವು ಅನಿವಾರ್ಯವಾಗಿ ಅಂಗೀಕರಿಸುವಂತೆ ಮಾಡಿತು. ಮತ್ತು ಇನ್ನೂ ಕೆಲವು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿತು. ತಮ್ಮ ಕಹಿ ಅನುಭವಗಳಿಂದ ರೈತರು ಕಾಂಗ್ರೆಸ್ ಸರ್ಕಾರವು ಜಮೀನ್ದಾರರ ಪರವಾಗಿದೆಯೇ ವಿನಃ ತಮ್ಮ ಪರವಾಗಿಲ್ಲ ಎನ್ನುವುದನ್ನು ಮನಗಂಡರು.

 

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *