ರಾಜಕೀಯ ವರದಿ: ಜೂನ್ 2ರಂದು ನಡೆದ ಪೊಲಿಟ್‌ಬ್ಯೂರೋ ಸಭೆಯಲ್ಲಿ ಅಂಗೀಕರಿಸಿದ್ದು

ಪಿಡಿಎಫ್‌ ನ ಪುಸ್ತಕ ಆವೃತ್ತಿಯಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿರಿ..

ರಾಜಕೀಯ ವರದಿ

(ಜೂನ್ 2, 2020ರಂದು ನಡೆದ ಪೊಲಿಟ್‌ಬ್ಯೂರೋ ಸಭೆಯಲ್ಲಿ ಅಂಗೀಕರಿಸಿದ್ದು)

ಈ ವರದಿಯಲ್ಲಿರುವ ಕೊವಿಡ್-19 ಸಂಬಂಧಿತ ಮತ್ತು ಇತರ ಅಂಕೆಸಂಖ್ಯೆಗಳು ಜೂನ್ 2 ಅಥವಾ ಅದಕ್ಕಿಂತ ಮೊದಲಿನವು

ಅಂತರ‍್ರಾಷ್ಟ್ರೀಯ
ಕೋವಿಡ್-19ಮಹಾಮಾರಿ

ಇಡೀ ಜಗತ್ತು ಕೋವಿಡ್-19ಮಹಾಮಾರಿಯ ವಿರುದ್ಧದ ತುಂಬಾ ಕಠಿಣ ಯುದ್ದದಲ್ಲಿನ ಒಂದು ನಿರ್ಣಾಯಕ ಘಟ್ಟವನ್ನು ಹಾದು ಹೋಗುತ್ತಿದೆ. ಆಯಾ ದೇಶಗಳಲ್ಲಿನ ಮಹಾಮಾರಿಯ ಹರಡುವಿಕೆಯ ಕುರಿತಂತೆ ಅಂದಾಜಿನ ಆಧಾರದ ಮೇಲೆ ಅನೇಕ ದೇಶಗಳು ವಿವಿಧ ಮಟ್ಟಗಳ ಲಾಕ್‌ಡೌನ್‌ಗಳನ್ನು ವಿಧಿಸಿವೆ. ಇದು ಜಗತ್ತಿನಾದ್ಯಂತ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ.

ಮಹಾಮಾರಿಯು ವಿಶ್ವದ 210 ದೇಶಗಳಿಗೆ ಹರಡಿದೆ. ಈ ವೈರಸ್ ನಿಂದ ಸುಮಾರು 60 ಲಕ್ಷಕ್ಕೂ ಹೆಚ್ಗಿನ ಜನರು ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ಸುಮಾರು 4 ಲಕ್ಷ ಜನರು ಸಾವನ್ನಪ್ಪಿದ್ದಾರೆ. (ಯು.ಎಸ್ ಒಂದೇ ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಮರಣ ಹೊಂದಿದ್ದಾರೆ). ಭಾರತದಲ್ಲಿ ಜೂನ್ 2ರ ಹೊತ್ತಿಗೆ, ಅಧಿಕೃತ ಅಂಕಿ ಅಂಶಗಳ ಪ್ರಕಾರ, 1,01,077 ಸಕ್ರಿಯ ಪ್ರಕರಣಗಳು ಮತ್ತು 5815  ಸಾವುಗಳು ಸಂಭವಿಸಿವೆ. ಈ ಅಂಕಿಅಂಶಗಳು ವಾಸ್ತವವಾಗಿ ಮತ್ತಷ್ಟು ಹೆಚ್ಚಾಗಬಹುದು. ಸಾಯುವವರ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ ಮತ್ತು ಎಲ್ಲಾ ಪ್ರಮುಖ ಆರ್ಥಿಕತೆಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದ ಜಾಗತಿಕ ಆರ್ಥಿಕ ಹಿಂಜರಿತವು ಈಗ ಖಚಿತವಾಗಿದೆ.

ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ಸಮಾಜಗಳಲ್ಲಿ ಸೋಂಕಿತರ ಮತ್ತು ಸಾವು-ನೋವುಗಳ ಸಂಖ್ಯೆ ಉಳಿದ ಸಮಾಜಗಳಿಗಿಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿವೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಮಹಾಮಾರಿಯು ಹರಡುವ ಸ್ಪಷ್ಟ ಲಕ್ಷಣಗಳು ಕಂಡುಬಂದಿದ್ದರೂ,ಜನತೆಯ ಪ್ರಾಣಕ್ಕಿಂತ ಲಾಭವನ್ನು ಆದ್ಯತೆಯೆಂದು ಬಗೆಯುವ ಬಂಡವಾಳಶಾಹಿಯ ಲೂಟಿಕೋರನಡೆಗಳು, ಆ ಆರ್ಥಿಕತೆಗಳನ್ನು ಮಹಾಮಾರಿಯ ಬಲಿಪಶುಗಳಾಗುವಂತೆ ಮಾಡಿವೆ. ನಾಗರಿಕತೆಗೆೆ ಅಪಾಯ ತರುವ ಎಲ್ಲಾ ಸವಾಲುಗಳನ್ನು ಎದುರಿಸಲು ಏಕಮಾತ್ರ ಪರಿಹಾರ ಎಂದು ಪರಿಗಣಿಸಲ್ಪಡುವ ಕಾರ್ಪೊರೇಟುಗಳಿಗೆ ಮತ್ತು ಮಾರುಕಟ್ಟೆಗೆ,ಜನತೆಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಖರ್ಚು ಮಾಡುವುದರಲ್ಲಿ ಯಾವುದೇ ಲಾಭದ ಸಾಧ್ಯತೆ ಕಂಡಿಲ್ಲ ಎಂಬುದೇ ಇದಕ್ಕೆ ಕಾರಣ.

ಬೃಹತ್ ಆರೋಗ್ಯ ಬಜೆಟುಗಳ ಹೊರತಾಗಿಯೂ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಹೆಚ್ಚಾಗಿ ಖಾಸಗಿ ವಿಮೆ ಮತ್ತು ದೊಡ್ಡ ಫಾರ್ಮಾ(ಔಷಧಿ) ಕಾರ್ಪೊರೇಟ್ ಗಳ ಮರ್ಜಿಗೆ ಬಿಡಲಾಯಿತು.  ಈ ದೇಶಗಳ ಒಳಗೆ ಮತ್ತು ನಡುವೆ ಬೆಳೆಯುತ್ತಿರುವ ಅಗಾಧ ಅಸಮಾನತೆಗಳು, ಮಹಾಮಾರಿಯ ವಿನಾಶಕಾರಿ ಧ್ವಂಸ ಕಾರ್ಯಕ್ಕೆ ಬಂಡವಾಳಶಾಹಿ ಜಗತ್ತು ತುತ್ತಾಗುವುದಕ್ಕೆ ಫಲವತ್ತಾದ ನೆಲೆಯನ್ನು ಒದಗಿಸಿಕೊಟ್ಟಿವೆ.

ನವ-ಉದಾರವಾದ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದ ಬಲಪಂಥೀಯ ಆಳ್ವಿಕೆಯಿದ್ದ ಯು.ಎಸ್, ಗ್ರೇಟ್ ಬ್ರಿಟನ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ, ಮಹಾಮಾರಿಯ ಧ್ವಂಸ ಕಾರ್ಯವು ಅತ್ಯಂತ ಭೀಕರವಾಗಿರುವುದು ಆಶ್ಚರ್ಯಕರವೇನಲ್ಲ. ಇವು ಮಹಾಮಾರಿಯನ್ನು ಎದುರಿಸಲು ಸನ್ನದ್ದತೆಯನ್ನು ನಿರ್ಮಿಸುವಲ್ಲಿ ವೈಜ್ಞಾನಿಕ ಸಲಹೆಗಳನ್ನು ಪೂರ್ಣವಾಗಿ ನಿರ್ಲಕ್ಷಿಸಿದ ದೇಶಗಳು ಸಹ.

ಈ ಕೋವಿಡ್-19 ರೋಗಕಾರಕದಿಂದ ಮನುಷ್ಯರನ್ನು ರಕ್ಷಿಸಲು ‘ಲಸಿಕೆ’ ಅಭಿವೃದ್ಧಿ ಪಡಿಸುವವರೆಗೂ, ವಿವಿಧ ಹಂತಗಳ ನಿರ್ಬಂಧಗಳನ್ನು ಅನುಸರಿಸಬೇಕಾಗುತ್ತದೆ. ಆದಾಗ್ಯೂ ವೈರಸ್ ತನ್ನ ಬಲಿಯನ್ನು ತೆಗೆದುಕೊಳ್ಳಲಿದೆ. ಮಾನವ ಜನಾಂಗವು ಉಳಿಯುತ್ತದೆ ಎಂಬುದರ ಕುರಿತು ಸಂಶಯವಿಲ್ಲ.ಆದರೆ ಅಷ್ವರಲ್ಲಿ, ಎಷ್ಟು ಗರಿಷ್ಠ ಜೀವಗಳನ್ನು ರಕ್ಷಿಸಲು ಸಾಧ್ಯವೆಂಬುದು ನಮ್ಮ ಮುಂದಿರುವ ಪ್ರಶ್ನೆ.

ಸಮಾಜವಾದಿ ದೇಶಗಳು: ಇದಕ್ಕೆ ವ್ಯತಿರಿಕ್ತವಾಗಿ, ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶಗಳು ಮಾನವನ ಪ್ರಾಣಹಾನಿಯನ್ನು ಕನಿಷ್ಠಗೊಳಿಸುವ ಮೂಲಕ ಮಹಾಮಾರಿಯನ್ನು ಹೆಚ್ಚು ಉತ್ತಮ ರೀತಿಯಲ್ಲಿ ಎದುರಿಸಿವೆ. ವಿಶೇಷವಾಗಿ, ಸಮಾಜವಾದಿ ರಾಷ್ಟ್ರಗಳು, ಈ ವಿಷಯದಲ್ಲಿ ಹೆಚ್ಚು ಗಮನಾರ್ಹ ರೀತಿಯಲ್ಲಿ ಎದ್ದು ಕಾಣುತ್ತವೆ. ಈ ದೇಶಗಳಲ್ಲಿ, ಪರೀಕ್ಷೆ ಗಳು ಸೇರಿದಂತೆ ಕೋವಿಡ್ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿದೆ. ಚೀನಾವು ಸುಮಾರು, 83,000 ಪ್ರಕರಣಗಳನ್ನು ವರದಿ ಮಾಡಿದೆ. 4,634 ಸಾವುಗಳು ಆಗಿವೆ ಮತ್ತು ಉಳಿದವರು ಚೇತರಿಸಿಕೊಂಡಿದ್ದಾರೆ.  ಪ್ರಸ್ತುತ ಕೇವಲ 83 ಸಕ್ರಿಯ ಪ್ರಕರಣಗಳು ಅಲ್ಲಿವೆ. ಇನ್ನು ಕ್ಯೂಬಾ 1,689 ಸಕ್ರಿಯ ಪ್ರಕರಣಗಳನ್ನು ಮತ್ತು 82 ಸಾವುಗಳಾಗಿವೆ ಎಂದು ಘೋಷಿಸಿದೆ. ವಿಯೆಟ್ನಾಮ್ ನಲ್ಲಿ, ಕೋವಿಡ್ ಮಹಾಮಾರಿಯಿಂದ ಇಲ್ಲಿಯವರೆಗೆ, ಒಂದು ಸಾವು ಸಹ ಸಂಭವಿಸಿಲ್ಲ.  ಅದು ಪ್ರಸ್ತುತ 58 ಸಕಾರಾತ್ಮಕ ಪ್ರಕರಣಗಳನ್ನು ಹೊಂದಿದೆ. ಅಂತೆಯೇ, ಲಾವೋಸ್ ನಲ್ಲಿಯೂ ಒಂದೂ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಇಲ್ಲಿಯೂ ಸಕ್ರಿಯ ಪ್ರಕರಣಗಳು ಕೇವಲ 19.ಹೊರಜಗತ್ತಿಗೆ ಸಂಪರ್ಕ ಸೀಮಿತವಾಗಿರುವುದರಿಂದ, ಡಿ.ಪಿ.ಆರ್.ಕೆ (ಉತ್ತರ ಕೊರಿಯಾ) ಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

ಚೀನಾದ ಹುಬೈ ಪ್ರಾಂತ್ಯದಲ್ಲಿ ಮಾತ್ರ 80 ವರ್ಷಕ್ಕಿಂತಲೂ ಮೇಲ್ಪಟ್ಟ ವಯಸ್ಕರ 3,600 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಗುಣಪಡಿಸಲಾಗಿದೆ. ಹುಬೈ ಪ್ರಾಂತ್ಯದ ರಾಜಧಾನಿ ವ್ಯೂಹಾನ್ ನಲ್ಲಿ ಹಲವಾರು ಶತಮಾನೋತ್ಸವ ವಯಸ್ಸಿನ ರೋಗಿಗಳನ್ನು ಕೂಡಾ, ಅದರಲ್ಲೂ 108 ವಯಸ್ಸಿನ ವೃದ್ಧರೊಬ್ಬರನ್ನು ಸಹಾ ಗುಣಪಡಿಸಲಾಗಿದೆ ಎಂದು ವರದಿಯಾಗಿದೆ.ಚೀನಾವು ಸುಮಾರು 150 ದೇಶಗಳಿಗೆ ಮತ್ತು 4 ಅಂತರಾಷ್ಟ್ರೀಯ ಸಂಸ್ಥೆಗಳಿಗೆ ವೈದ್ಯಕೀಯ ನೆರವು ರವಾನಿಸಿದೆ. ಇದರೊಂದಿಗೆ, ಸುಮಾರು 57 ಶತಕೋಟಿ ಮುಖಗವಸುಗಳನ್ನು ಮತ್ತು 25 ಕೋಟಿ ರಕ್ಷಣಾ ಸಾಧನಗಳನ್ನು ರಫ್ತು ಮಾಡಿದೆ. ಕ್ಯೂಬಾ ವೈದ್ಯಕೀಯ ತಂಡಗಳು ಮತ್ತು ಔಷಧಿ ಗಳನ್ನು ವಿಶ್ವದ ಸುಮಾರು 50 ದೇಶಗಳಿಗೆ ಕಳುಹಿಸಿ, ಅಂತರಾಷ್ಟ್ರೀಯ ವೈದ್ಯಕೀಯ ಸೌಹಾರ್ದವನ್ನು ಮೆರೆದಿದೆ.

ಇದರಿಂದಾಗಿ, ಮಹಾಮಾರಿಯನ್ನು ತಡೆಗಟ್ಟುವಲ್ಲಿ ಸಮಾಜವಾದಿ ವ್ಯವಸ್ಥೆಯ ಶ್ರೇಷ್ಠತೆಯು ಗಮನಾರ್ಹವಾಗಿ ವಿಶ್ವಕ್ಕೆ ಗೋಚರಿಸುತ್ತದೆ.

ಕೇರಳ: ಭಾರತದಲ್ಲಿ ಈ ಮಹಾಮಾರಿಯನ್ನು ನಿಭಾಯಿಸುವಲ್ಲಿ ಕೇರಳದ  ಎಡ ಮತ್ತು ಪ್ರಜಾಸತ್ತಾತ್ಮಕ ಸರ್ಕಾರ ಒಂದು ಆದರ್ಶಪ್ರಾಯ ಉದಾಹರಣೆಯಾಗಿ ನಮ್ಮ ಮುಂದಿದೆ. ಅದು “ಕೇರಳ ಮಾದರಿ” ಎಂದು ಅಂತರಾಷ್ಟ್ರೀಯ ಮೆಚ್ಚುಗೆ ಯನ್ನು ಗಳಿಸಿದೆ ಮತ್ತು ಡಬ್ಲ್ಯೂಎಚ್.ಒ ನಿಂದ ಪ್ರಶಂಸೆಗೆ ಪಾತ್ರವಾಗಿದೆ. (ವಿವರಗಳು ಅನುಬಂಧದಲ್ಲಿವೆ).

ಜಾಗತಿಕ ಆರ್ಥಿಕತೆ

ಕೋವಿಡ್-19 ನ್ನು ಜಾಗತಿಕ ಮಹಾಮಾರಿ ಎಂದು ಡಬ್ಲ್ಯೂಎಚ್.ಒ ಪೋಷಿಸುವ ಮೊದಲೇ, ಕೇರಳದಲ್ಲಿ ಜನವರಿಯ ತಿಂಗಳಿನಲ್ಲಿ ಸೇರಿದ್ದ ಕೇಂದ್ರ ಸಮಿತಿ ಸಭೆಯಲ್ಲಿ, ಜಾಗತಿಕ ಆರ್ಥಿಕತೆಯು ಹಿಂಜರಿತದತ್ತತೀವ್ರವಾಗಿ ಸಾಗುತ್ತಿರುವುದನ್ನು ಗಮನಿಸಿದೆ. ಈ ಮಹಾಮಾರಿ ಮತ್ತು ಇದರ ಪರಿಣಾಮವಾಗಿ ಲಾಕ್ ಡೌನ್, ಜಾಗತಿಕ ಆರ್ಥಿಕತೆಯ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಎಲ್ಲ ಅಂತರಾಷ್ಟ್ರೀಯ ಏಜೆನ್ಸಿಗಳು 2020 ರಲ್ಲಿ ಜಾಗತಿಕ ಆರ್ಥಿಕತೆಯ ಗಮನಾರ್ಹ ಕುಗ್ಗುವಿಕೆಯ ಬಗ್ಗೆ ಮುನ್ಸೂಚನೆ ನೀಡಿವೆ. ಅದು 2021 ರಲ್ಲಿಯೂ ಪರಿಣಾಮ ಬೀರುತ್ತದೆ.

ವಿಶ್ವ ಸಂಸ್ಥೆಯ‘ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ಅಂದಾಜು’ 2020 ರಲ್ಲಿ ಜಾಗತಿಕ ಆರ್ಥಿಕತೆಯು ಶೇ.3.2 ರಷ್ಟು ಕುಗ್ಗುತ್ತದೆ ಮತ್ತು 2020 ಮತ್ತು 2021 ರ ಅವಧಿಯಲ್ಲಿ ಒಟ್ಟಾಗಿ ಸುಮಾರು 8.5 ಟ್ರಿಲಿಯನ್ ಡಾಲರ್ ಉತ್ಪಾದನಾ ನಷ್ಟ ಉಂಟಾಗುತ್ತದೆ ಎಂದು ಹೇಳಿದೆ. ಇದು ಹಿಂದಿನ 4 ವರ್ಷಗಳ ಎಲ್ಲಾ ಹೆಚ್ಚಳಗಳನ್ನು ಅಳಿಸಿ ಹಾಕುತ್ತದೆ ಎಂದು ಅಂದಾಜಿಸಿದೆ. ವಿಶ್ವ ಬ್ಯಾಂಕ್ ಜಾಗತಿಕ ಜಿಡಿಪಿ ಶೇ.3.9 ನಷ್ಟವನ್ನು ಅನುಭವಿಸುತ್ತದೆ ಎಂದಿದೆ. 2020 ರ ಜಾಗತಿಕ ಆದಾಯದ ಬೆಳವಣಿಗೆ ಶೇ.3 ರಷ್ಟಿರುತ್ತದೆ ಎಂದು ಜನವರಿಯಲ್ಲಿ ಅಂದಾಜಿಸಿದ ಐ.ಎಂ.ಎಫ್ ಮೇ ತಿಂಗಳಲ್ಲಿ ಶೇಕಡಾ 3 ರಷ್ಟು ಕುಸಿತದ ಮುನ್ಸೂಚನೆ ನೀಡಿದೆ. ಇದು 2008 ರಲ್ಲಿ ವಾಲ್ ಸ್ಟ್ರೀಟ್ ಕುಸಿತದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿಗಿಂತ ಇದು ಕೆಟ್ಟದಾಗಿದೆ ಎಂದೂ ಐ.ಎಂ.ಎಫ್ ಹೇಳಿದೆ.

ಜಾಗತಿಕ ಉತ್ಪಾದನೆಯಲ್ಲಿನ ಈ ಕುಗ್ಗುವಿಕೆಯಿಂದಾಗಿ  ಸ್ವಾಭಾವಿಕವಾಗಿಯೇ, ಬಡತನ, ನಿರುದ್ಯೋಗಗಳುಹೆಚ್ಚಿ, ಅದುಜನರ ಜೀವನೋಪಾಯದ ಮತ್ತು ಒಟ್ಟಾರೆ ಆರ್ಥಿಕ ಸಮೃದ್ಧಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.  ಏಕೆಂದರೆ, ವಿದೇಶಿ ಹೂಡಿಕೆಗಳ ಹರಿವು ಕುಗ್ಗುತ್ತದೆ ಮತ್ತು ಅದರೊಂದಿಗೆ ವಿಶ್ವ ವ್ಯಾಪಾರವು ಮತ್ತಷ್ಟು ಕುಗ್ಗುತ್ತದೆ.

ಡಬ್ಲ್ಯೂಟಿ.ಒ ಪ್ರಕಾರ, ವಿಶ್ವ ಸರಕುಗಳ ವ್ಯಾಪಾರವು 2020 ರಲ್ಲಿ ಶೇಕಡಾ 13 ರಿಂದ ಶೇ.32 ರವರೆಗೆ ಕುಸಿಯುತ್ತದೆ ಎಂದು ಊಹಿಸಲಾಗಿದೆ.  ಸರಕು ಮತ್ತು ಸೇವೆಗಳಲ್ಲಿನ ವಿಶ್ವ ವ್ಯಾಪಾರವು ನಿಜ ಬೆಲೆಗಳಲ್ಲಿ ಶೇ.15 ರಷ್ಟು ಸಂಕುಚಿತಗೊಳ್ಳುತ್ತದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.  ವಿಶ್ವ ಬ್ಯಾಂಕ್ ವಿದೇಶಿ ನೇರ ಹೂಡಿಕೆಯು ಶೇ.35 ರಷ್ಟು ಕಡಿತಗೊಳ್ಳುತ್ತದೆ ಎಂದು ಅಂದಾಜಿಸಿದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಾತ್ರವೇ, ವಿದೇಶಿ ನೇರ ಹೂಡಿಕೆಯು ಶೇ.22ರಷ್ಟು – ಅಂದರೆ 2020ರಲ್ಲಿ ಸುಮಾರು 110 ಶತಕೋಟಿ ಡಾಲರುಗಳಷ್ಟು – ಕಡಿತಗೊಳ್ಳುತ್ತದೆ ಎಂದಿದೆ.

ಜಾಗತಿಕ ಬಡತನ:

ವಿಶ್ವ ಸಂಸ್ಥೆಯ ನಿರೀಕ್ಷೆಯ ಪ್ರಕಾರ, ಸುಮಾರು 3.5 ಕೋಟಿ ಹೆಚ್ಚುವರಿ ಜನ, ಪ್ರಮುಖವಾಗಿ ಅನೌಪಚಾರಿಕ ವಲಯದ ಕಾರ್ಮಿಕರು, ಈ ವರ್ಷ ತೀವ್ರ ಬಡತನದ ರೇಖೆಗಿಂತ ಕೆಳಗೆ ಕುಸಿಯುತ್ತಾರೆ. ವಿಶ್ವಬ್ಯಾಂಕಿನ ಅಂದಾಜಿನಂತೆ, ಇದು ಕಳೆದ 3 ವರ್ಷಗಳಲ್ಲಿ ಮಾಡಿರುವ ಬಡತನ ನಿವಾರಣೆಯ ಎಲ್ಲಾ ಮುನ್ನಡೆಗಳನ್ನು ಅಳಿಸಿ ಹಾಕಿ, 6 ಕೋಟಿ ಹೆಚ್ಚುವರಿ ಜನರನ್ನು ತೀವ್ರ ಬಡತನದ ಕೂಪಕ್ಕೆ ತಳ್ಳುತ್ತದೆ. ಯು.ಎನ್.ಡಿ.ಪಿ ಅಂದಾಜಿನಂತೆ, ವಿಶ್ವದ ಶಿಕ್ಷಣ, ಆರೋಗ್ಯ ಮತ್ತು ಜೀವನ ಮಟ್ಟದ ಸಂಯೋಜಿತ ಅಳತೆಗೋಲಾದ ಜಾಗತಿಕ ಮಾನವ ಅಭಿವೃದ್ಧಿ ಸೂಚಕ, ಕಳೆದ 30 ವರ್ಷಗಳಲ್ಲಿ  ಮೊದಲ ಬಾರಿಗೆ ಕುಸಿಯುತ್ತದೆ. ವಿಶ್ವದಾದ್ಯಂತ ಸುಮಾರು 120 ದೇಶಗಳಲ್ಲಿ, ಶಾಲೆಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳು ರಾಷ್ಟ್ರವ್ಯಾಪಿ ಮುಚ್ಚಿವೆ.  ಇದರಿಂದ ಜಾಗತಿಕವಾಗಿ, ಎಲ್ಲಾ ದೇಶಗಳಲ್ಲಿ, ಸುಮಾರು 125 ಕೋಟಿ ಮಕ್ಕಳು ಮತ್ತು ಯುವ ಜನರು ಶೈಕ್ಷಣಿಕ ತೊಂದರೆಗೆ ತುತ್ತಾಗುತ್ತಾರೆ.  ಇದರಿಂದಾಗಿ, ಶೈಕ್ಷಣಿಕ ಅಸಮಾನತೆಯ ವಿಭಜನೆಗಳು, ದೇಶಗಳ ಒಳಗೆ ಮತ್ತು ನಡುವೆÉ ವಿಸ್ತರಿಸಲಿವೆ.

ವಿಶ್ವ ಆಹಾರ ಕಾರ್ಯಕ್ರಮದ ಹೇಳಿಕೆಯ ಪ್ರಕಾರ, ಸುಮಾರು 26.5 ಕೋಟಿಯಷ್ಟು ಜನರು, ತೀವ್ರ ಬಿಕ್ಕಟ್ಟಿನ ಮಟ್ಟದ ಹಸಿವಿಗೆ ತುತ್ತಾಗುತ್ತಾರೆ. ಸರ್ಕಾರಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದರೆ, ಅವರೆಲ್ಲರೂ ಸಾಯುವ ಗಂಭೀರ ಸ್ಥಿತಿಯನ್ನು ಕಾಣಬೇಕಾಗುತ್ತದೆ ಎಂದಿದೆ.

ಅಸಮಾನತೆಗಳು:

ಕೋವಿಡ್-19ಮಹಾಮಾರಿ ಮತ್ತು ಅದರಿಂದ ಉಂಟಾದ ಲಾಕ್ ಡೌನ್ ನಿಂದಾಗಿಮತ್ತಷ್ಟು ಉಲ್ಬಣಗೊಂಡ ಜಾಗತಿಕ ಆರ್ಥಿಕ ಕುಸಿತದ ಹೊರತಾಗಿಯೂ, ಜಾಗತಿಕ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅತಿ ಶ್ರೀಮಂತರ ಸಂಪತ್ತು ಅನೇಕ ಪಟ್ಟು ಹೆಚ್ಚಾಗಿದೆ. 614 ಅಮೆರಿಕನ್‌ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತು ಕೇವಲ 23 ದಿನಗಳಲ್ಲಿ 280 ಶತಕೋಟಿ ಡಾಲರ್ ಗಳಷ್ಟು ಹೆಚ್ಚಾಗಿದೆ (ಡಬ್ಲ್ಯೂ 7 ನ್ಯೂಸ್, ಏಪ್ರಿಲ್ 28, 2020), ಕೌಟುಂಬಿಕ ದೌರ್ಜನ್ಯ ಸೇರಿದಂತೆ, ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಹ ಆತಂಕಕಾರಿ ವರದಿಗಳಿವೆ.

ನಿರುದ್ಯೋಗ:

ಮುಂದಿನ ಕೆಲವು ತಿಂಗಳುಗಳಲ್ಲಿ ಅರ್ಧದಷ್ಟು ದುಡಿಯುವ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಐ.ಎಲ್.ಒ ಅಂದಾಜಿಸಿದೆ. ವಿಶ್ವದ ಪ್ರತಿಯೊಂದು ದೇಶದಲ್ಲಿಯೂ ನಿರುದ್ಯೋಗ ಮಟ್ಟ  ಏರಿಕೆಯಾಗಿದೆ. ಅದರಲ್ಲಿ ಯು.ಎಸ್ ನಲ್ಲಿ ಏಪ್ರಿಲ್ ಒಂದು ತಿಂಗಳಿನಲ್ಲಿಯೇ 2.05 ಕೋಟಿ ಉದ್ಯೋಗಗಳು ನಷ್ಟವಾಗಿವೆ ಮತ್ತು ಬ್ರಿಟನ್ ನಲ್ಲಿ21 ಲಕ್ಷ ಜನ ನಿರುದ್ಯೋಗ ಭತ್ಯೆ ಪಾವತಿಗೆ ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆ ಏಪ್ರಿಲಿನಲ್ಲಿ ಶೇ 69ರಷ್ಟು ಹೆಚ್ಚಳವಾಗಿದೆ.  ಬಹುತೇಕ ಯುರೋಪಿನ ಎಲ್ಲಾ ರಾಷ್ಟಗಳು ಎರಡು ಅಂಕಿಗಳ ನಿರುದ್ಯೋಗ ಮಟ್ಟವನ್ನು ದಾಟಿವೆ. ಜಾಗತಿಕ ಉದ್ಯೋಗಗಳಲ್ಲಿ ಕುಸಿತವು 15.8 ರಿಂದ 24.2 ಕೋಟಿ ಉದ್ಯೋಗಗಳಷ್ಟು ಎಂದು ಏಷ್ಯನ್ ಅಭಿವೃಧ್ಧಿ ಬ್ಯಾಂಕ್ ಅಂದಾಜಿಸಿದೆ.  ಇದರಲ್ಲಿ ಶೇ. 70 ಏಷ್ಯಾ ಮತ್ತು ಪೆಸಿಫಿಕ್ ದೇಶಗಳಲ್ಲಿ ಇರುತ್ತದೆ.  ಜಾಗತಿಕವಾಗಿ, ಕಾರ್ಮಿಕರ ಒಟ್ಟು ಆದಾಯವು 1200ಶತಕೋಟಿ ಡಾಲರ್ ನಿಂದ1800ಶತಕೋಟಿ ಡಾಲರುಗಳಷ್ಟು ಕುಸಿಯುತ್ತದೆ.

ಇದು ಅನೌಪಚಾರಿಕ ವಲಯದ ಕಾರ್ಮಿಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪ್ರಸ್ತುತ, 160 ಕೋಟಿ ಕಾರ್ಮಿಕರು ಪ್ರತಿಕೂಲ ಪರಿಣಾಮ ಎದುರಿಸುತ್ತಿದ್ದಾರೆ ಎಂದು ಐ.ಎಲ್.ಒ ಅಂದಾಜಿಸಿದೆ.

ಬಂಡವಾಳಶಾಹಿಯ ದಿವಾಳಿತನ:

ಕೋವಿಡ್-19 ಹರಡುವಿಕೆಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ,  ಜಾಗತಿಕವಾಗಿ ಬಂಡವಾಳಶಾಹಿ ರಾಷ್ಟಗಳು ಅಸಮರ್ಥವಾಗಿವೆ.  ಮಹಾಮಾರಿಯನ್ನು ಏಕೋಮನಸ್ಸಿನಿಂದ ಎದುರಿಸಲು,  ಒಟ್ವಾಗಿ ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ, ಮತ್ತು  ಜನರ ಆರ್ಥಿಕ ದುಃಖಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವಲ್ಲಿ ಬಂಡವಾಳಶಾಹಿ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಾಗಿ ದಿನೇ ದಿನೇ ಜಗತ್ತಿಗೆ ಅರಿವಾಗುತ್ತಿದೆ. ಪರಿಹಾರ ಮತ್ತು ಸುರಕ್ಷತೆಯನ್ನು ಒದಗಿಸುವಲ್ಲಿ ಪ್ರಭುತ್ವದ ನಿರ್ಣಾಯಕಮಧ್ಯಪ್ರವೇಶಕ್ಕಾಗಿ ಜನ ಹಾತೊರೆಯುತ್ತಿದ್ದಾರೆ.  ನವ ಉದಾರವಾದಿ ನೀತಿಗಳ ಜಾರಿಯಿಂದಾಗಿ ಸಾರ್ವಜನಿಕ ಸೇವೆಗಳ ಖಾಸಗೀಕರಣ ಮತ್ತು ವಾಣಿಜ್ಯೀಕರಣ, ವಿಶೇಷವಾಗಿ ಸಾರ್ವಜನಿಕ ಆರೋಗ್ಯ ಆರೈಕೆ ಇಲ್ಲದಿರುವುದರ ನಿಷ್ಕರುಣ ದುಷ್ಪರಿಣಾಮಗಳು ಈ ಮಹಾಮಾರಿಯ ಸಮಯದಲ್ಲಿ ಢಾಳಾಗಿ ಕಂಡಿವೆ. ಸ್ಪೇನ್ ನಂತಹ ದೇಶಗಳು ದೇಶದ ಖಾಸಗಿ ಆರೋಗ್ಯ ವ್ಯವಸ್ಥೆಯ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ರಾಷ್ಟ್ರೀಕರಣ ಮಾಡಬೇಕಾಯಿತು. ಅಂತರರಾಷ್ಟ್ರೀಯ ಬಂಡವಾಳದ ನೇತೃತ್ವದ ನವ ಉದಾರವಾದಿ ಜಾಗತೀಕರಣದ ಅಡಿಯಲ್ಲಿ, ಸಾರ್ವಜನಿಕ ಸರಕು ಮತ್ತು ಸೇವೆಗಳನ್ನು ಖಾಸಗೀಕರಿಸುವ ಮೂಲಕ ತಮ್ಮ ಲಾಭಗಳನ್ನು ಹೆಚ್ಚಿಸಿಕೊಳ್ಳುವ ಹಂಬಲವು,ಈ ರೀತಿಯ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಬುಡಮೇಲು ಮಾಡುತ್ತದೆ.

ಜಾಗತಿಕ ಉತ್ಪಾದನೆಯ ಕುಸಿತವು ನಮ್ಮ ಜನರ ಜೀವನೋಪಾಯದ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ನವ ಉದಾರವಾದದ ವ್ಯವಸ್ಥೆಯಲ್ಲ್ಲಿ, ಅಂತರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೊಡ್ಡ ವಹಿವಾಟುದಾರರಿಗೆ ದೊಡ್ಡ ಪ್ರಮಾಣದ ಪರಿಹಾರಾತ್ಮಕ ಬೇಲ್ ಔಟ್ ಗಳ ಪ್ಯಾಕೇಜುಗಳನ್ನು ನೀಡಲಾಗಿದೆ. ಆದರೆ, ಬಿಕ್ಕಟ್ಟಿನ ಹೊರೆಯನ್ನು ಬಲವಂತವಾಗಿ ಕಾರ್ಮಿಕರ ಮೇಲೆ ಹೊರಿಸಲಾಗುತ್ತಿದೆ. ಅವರ ಜೀವನೋಪಾಯವನ್ನು ಹೆಚ್ಚು ತೀವ್ರವಾಗಿ ಹಿಸುಕುವ ಪ್ರಕ್ರಿಯೆ ನಡೆಯುತ್ತದೆ. ಕಾರ್ಮಿಕ ವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಸಲಾಗುವುದು.  ಈ ಪರಿಸ್ಥಿತಿಗಳು ವರ್ಗ ಹೋರಾಟಗಳು ಮತ್ತಷ್ಟು ತೀವ್ರಗೊಳ್ಳಲು ಕಾರಣವಾಗುತ್ತದೆ.

ಯು.ಎಸ್ ಸಾಮ್ರಾಜ್ಯಶಾಹಿಯ ಯಜಮಾನಿಕೆಯ ಓಟ:

ಪ್ರಸ್ತುತ ಪರಿಸ್ಥಿತಿಯಲ್ಲಿಮಹಾಮಾರಿಯನ್ನು ಎದುರಿಸುವಲ್ಲಿ ಮತ್ತು ಕೋಟ್ಯಾಂತರ ಜನರ ಕಷ್ಟಗಳನ್ನು ಪರಿಹರಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ಅಂತರಾಷ್ಟ್ರೀಯ ಸಹಕಾರವು ತುರ್ತು ಅಗತ್ಯ. ಇದರ ಬದಲಾಗಿ, ಈ ಎರಡೂ ಅಂಶಗಳಲ್ಲಿಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಈ ಮಹಾಮಾರಿಯನ್ನು, ಯು.ಎಸ್ ಜಾಗತಿಕ ಪ್ರಾಬಲ್ಯವನ್ನು ಬಲಪಡಿಸಲು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ.  ಇದು, ಮತ್ತೊಮ್ಮೆ ಸಾಮ್ರಾಜ್ಯ ಶಾಹಿಯ ಕ್ರೂರ ಮಾನವ-ವಿರೋಧಿ ಗುಣವನ್ನು ಬಯಲುಗೊಳಿಸುತ್ತದೆ.

ಜಾಗತಿಕ ವೈಜ್ಞಾನಿಕ ಸಹಕಾರದ ಬದಲು, ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ಮಹಾಮಾರಿ ರೋಗದ ಹರಡುವಿಕೆಯ ಆಪಾದನೆಯನ್ನು ಹೊರಿಸುವ ಚೀನಾ-ವಿರೋಧಿ ಪ್ರಚಾರವನ್ನು ಹರಿಯಬಿಟ್ಟಿದ್ದಾರೆ. ಡಬ್ಲ್ಯೂಎಚ್.ಒ ಚೀನಾವನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿ, ಟ್ರಂಪ್ ಯುಎನ್ ಅಡಿಯಲ್ಲಿಯೇ ಸಂಘಟಿತವಾದ ಜಾಗತಿಕ ಆರೋಗ್ಯ ಸಂಸ್ಥೆಯಾದ ಡಬ್ಲ್ಯೂಎಚ್.ಒ ಯಿಂದ  ಹೊರ ಬಂದಿದ್ದಾರೆ.  ಮಹಾಮಾರಿ ಹರಡುವಿಕೆಯನ್ನು ತಡೆಗಟ್ಟುವಲ್ಲಿ ವ್ಯಾಪಕವಾದ ಪರೀಕ್ಷೆ, ಸಂಪರ್ಕ ಪತ್ತೆ ಹಚ್ಚುವಿಕೆ, ಪ್ರತ್ಯೇಕತೆ ಮತ್ತು ಕ್ವಾರಂಟೈನ್ ಮೂಲಕ ಚೀನಾವು ಕೈಗೊಂಡ ಕ್ರಮಗಳನ್ನು ಟ್ರಂಪ್ ಆರಂಭದಲ್ಲಿ ಪ್ರಶಂಸೆ ಮಾಡಿದ್ದರು. ಆದರೆ ಯು.ಎಸ್ ಮಾತ್ರ ಇವುಗಳಲ್ಲಿ ಯಾವುದನ್ನು ವೈಜ್ಞಾನಿಕವಾಗಿ ಅನುಸರಿಸದೆ, ನಿರ್ಲಕ್ಷ ತೋರಿದೆ.  ದುರದೃಷ್ಟವಶಾತ್ ಇತರೆ ಬಂಡವಾಳಶಾಹಿ ದೇಶಗಳು ಸಹ ಯು.ಎಸ್ ನ್ನು ಅನುಸರಿಸಿದವು. ಸಮಾಜವಾದಿ ದೇಶಗಳಲ್ಲದೆ ದಕ್ಷಿಣ ಕೊರಿಯಾ, ತೈವಾನ್, ಸಿಂಗಾಪುರ್ ದೇಶಗಳು ಮಹಾಮಾರಿಹರಡುವಿಕೆಯ ಬೆಳವಣಿಗೆಯನ್ನು ಕನಿಷ್ಠಗೊಳಿಸಿ ತಡೆ ಹಿಡಿಯುವುದರಲ್ಲಿ ಯಶಸ್ವಿಯಾಗಿರುವುದನ್ನು ಗಮನಿಸಬಹುದು.

ಇದಲ್ಲದೇ, ‘ಕೋವಿಡ್ ವಿರೋಧಿ ಲಸಿಕೆ’ ಯನ್ನು ಅಭಿವೃದ್ಧಿ ಪಡಿಸಿದಾಗ, ಲಸಿಕೆಯ ಪೇಟೆಂಟ್ ಹಕ್ಕುಗಳನ್ನು ಮನ್ನಾ ಮಾಡಲು ನಿರಾಕರಿಸುವ ಮೂಲಕ, ಲಸಿಕೆಯು ಜಗತ್ತಿನ ಎಲ್ಲ ದೇಶಗಳಿಗೆ ಸಾರ್ವತ್ರಿಕವಾಗಿಲಭ್ಯವಿರುವುದನ್ನು ಯು.ಎಸ್ ವಿರೋಧಿಸಿದೆ. ಇದರಲ್ಲಿ ಅದರ ನಿಕಟ ಮಿತ್ರ ರಾಷ್ಟ್ರ ಟೋರಿ ಸರಕಾರದ ಅಡಿಯಲ್ಲಿರುವ ಯು.ಕೆ ಮಾತ್ರ ಅದರ ಜತೆಗಿದೆ. ಇದನ್ನೇ ಬಂಡವಾಳಶಾಹಿಯ ಲೂಟಿಕೋರ ವರ್ಗ ಗುಣವೆನ್ನುವುದು. ಅಂದರೆ, ಸಾವು-ನೋವುಗಳಂತಹ ಪರಿಸ್ಥಿತಿಯಲ್ಲಿಯೂ ತಮ್ಮ ಲಾಭಕೋರತನವೇ ಬಂಡವಾಳಶಾಹಿಗೆ ಮೊದಲ ಆದ್ಯತೆ. ಇತರ ಎಲ್ಲ ದೇಶಗಳು ಲಸಿಕೆಯ ಪೇಟೆಂಟ್ ಹಕ್ಕುಗಳನ್ನು ಮನ್ನಾ ಮಾಡುವುದನ್ನು ಮತ್ತು ಸಾರ್ವತ್ರಿಕ ಲಭ್ಯತೆಯನ್ನು ಬೆಂಬಲಿಸಿದ್ದವು.

ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸುವುದು ಮತ್ತು  ಕೋವಿಡ್ ನಂತರದ ಜಗತ್ತಿನಲ್ಲಿ ಯು.ಎಸ್ ನ್ನು ‘ಸರ್ವೋಚ್ಛ ಅಧಿಪತ್ಯದ’ ಶಕ್ತಿಯ ಸ್ಥಾನದಲ್ಲಿ ಸ್ಥಾಪಿಸುವುದು ಟ್ರಂಪ್ ರ ಉದ್ದೇಶವೆನ್ನುವುದು ಸ್ಪಷ್ಟ. ಕೋವಿಡ್ ಮಹಾಮಾರಿಯನ್ನು ನಿಭಾಯಿಸುವಲ್ಲಿ ಟ್ರಂಪ್ ರ ವೈಫಲ್ಯಗಳಿಂದಾಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಯು.ಎಸ್ ಪ್ರತಿಷ್ಠೆಗೆ ಆಘಾತವಾಗಿದೆ.

ಮಿನಿಯಾಪೋಲಿಸ್ ಪೋಲಿಸರು ಜಾರ್ಜ್ ಫ್ಲಾಯ್ಡ್ ನನ್ನು ಕ್ರೂರವಾಗಿ ಹತ್ಯೆ ಮಾಡಿದ ನಂತರ,ಯು.ಎಸ್ ನಪ್ರತಿಷ್ಠೆಗೆ ಮತ್ತಷ್ಟು ಆಘಾತವಾಗಿದೆ. ವರ್ಣದ್ವೇ಼ಷ ಮತ್ತು ಹಿಂಸಾಚಾರ ಹೆಚ್ಚುತ್ತಲೇ ಇದೆ.  ವ್ಯಾಪಕವಾಗಿ ಹಬ್ನಿದ ಪ್ರತಿಭಟನೆಗಳನ್ನು ಟ್ರಂಪ್ ನಿರ್ವಹಣೆ ಮಾಡಿದ ರೀತಿಯು ವ್ಯಾಪಕ ಟೀಕೆಗೆ ಗುರಿಯಾಗಿ ಪರಿಸ್ಥಿತಿಯನ್ಜು ಇನ್ನಷ್ಟು ಹದಗೆಡಿಸಿದೆ. ಇಂತಹ ಜನಾಂಗೀಯ ಹಿಂಸಾಚಾರದ ಅಪರಾಧಗಳನ್ನು ಎಸಗುವವರನ್ನು ಶಿಕ್ಷಿಸಿ, ಹಿಂಸಾಚಾರದ ಬಲಿಪಶುಗಳಿಗೆನ್ಯಾಯವನ್ನು ಒದಗಿಸುವುದು ಟ್ರಂಪ್ ರ  ಅಧ್ಯಕ್ಷತೆಯಲ್ಲಿ ಯುಎಸ್ ಆಡಳಿತಕ್ಕೆ ಅಸಾಧ್ಯವಾಗಿದೆ.

ಯುಎಸ್ ಸಾಮ್ರಾಜ್ಯ ಶಾಹಿಯು ಚೀನಾವು ಕೋವಿಡ್ ನಂತರದ ಜಗತ್ತಿನಲ್ಲಿ ಇನ್ನಷ್ಟು ಪ್ರಬಲವಾಗಿ ಹೊಮ್ಮುತ್ತದೆ ಎಂದು ನಿರೀಕ್ಷಿಸುತ್ತಿದ್ದು, ಚೀನಾವನ್ನು ಅದು ಹೆಚ್ಚು ಆಕ್ರಮಣಕಾರಿಯಾಗಿ ಗುರಿಯಾಗಿಸಿದೆ. ಯು.ಎಸ್ ನೇತೃತ್ವದ ಚೀನಾ-ವಿರೋಧಿ ಅಭಿಯಾನದ ಹೊರತಾಗಿಯೂ, ಚೀನಾವು ಮಹಾಮಾರಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಿದೆ ಮತ್ತು ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದು ಜಗತ್ತಿಗೆ ತೋರಿಸಿದೆ. ಈ ಬೆಳವಣಿಗೆಗಳು, ಎಲ್ಲಾ ಪ್ರಮುಖ ಜಾಗತಿಕ ವೈರುಧ್ಯಗಳ ಮೇಲೆ ಪರಿಣಾಮ ಬೀರುವ ಹಲವು ಬೆಳವಣಿಗಳಿಗೆ ಚಾಲನೆ ನೀಡಲಿವೆ.

ಚೀನಾ ಸರ್ಕಾರವು, ಬಡತನವನ್ನು ಹೋಗಲಾಡಿಸುವ ಮೂಲಕ ಈ ವರ್ಷ ಸುಮಾರು ಶೇಕಡಾ 4 ರಷ್ಟು ಜಿಡಿಪಿ ಕುಸಿತವನ್ನು ಮೀರಿ ನಿಂತು, 2020 ಕ್ಕೆ ನಿಗದಿ ಪಡಿಸಿಕೊಂಡಿರುವ ಮತ್ತು ಎಲ್ಲಾ ರೀತಿಯಲ್ಲೂ ಸಾಧಾರಣ ಸಮೃದ್ದ ಸಮಾಜವನ್ನು ನಿರ್ಮಿಸುವ ಗುರಿಯನ್ನು ಸಾಧಿಸಲಿದೆ ಎಂದು ರಾಷ್ಟ್ರೀಯ ಜನತಾ ಕಾಂಗ್ರೆಸ್ (ಚೀನಾದ ಪಾರ್ಲಿಮೆಂಟ್) ಗೆ ವರದಿ ಮಾಡಿದೆ. ಸುಮಾರು 90 ಲಕ್ಷ ಹೊಸ ನಗರ ಉದ್ಯೋಗಗಳನ್ನು ಸೃಷ್ಟಿಸಲು, ಸುಮಾರು 3 ಕೋಟಿ ಹಿರಿಯ ನಾಗರಿಕರಿಗೆ ಪಿಂಚಣಿ ಹಣವನ್ನು ಒದಗಿಸಲು, 1400 ಕೋಟಿ ಚೀನೀಯರಿಗೆ ಅಗತ್ಯವಾದ ಆಹಾರ ಪೂರೈಕೆಯನ್ನು ಖಚಿತ ಪಡಿಸಿಕೊಳ್ಳಲು ಮತ್ತು ಜನರ ಆದಾಯವನ್ನು ಮತ್ತಷ್ಟು ಹೆಚ್ಚಿಸುವ ದೊಡ್ಡ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲು ನಿರೀಕ್ಷಿಸಲಾಗಿದೆ ಎಂದಿದೆ. ಅಂತಹ ಚೀನಾದ ಆರ್ಥಿಕ ಚೇತರಿಕೆಯು, ಕೋವಿಡ್ ನಂತರದ ಜಗತ್ತಿನಲ್ಲಿ ಯು.ಎಸ್ ನ ಜಾಗತಿಕ ಪ್ರಾಬಲ್ಯಕ್ಕೆ ಗಂಭೀರ ಸವಾಲನ್ನು ಒಡ್ಡುತ್ತದೆ.

ಯು.ಎಸ್ ಮಧ್ಯಪ್ರವೇಶಗಳು:

ಯು.ಎಸ್ ತನ್ನ ಜಾಗತಿಕ ಅಧಿಪತ್ಯದ ಓಟದಲ್ಲಿ ಸ್ವತಂತ್ರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸುವ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಪ್ರಪಂಚವೇ ಗಂಭೀರವಾಗಿ ಕೋವಿಡ್ ಮಹಾಮಾರಿಯನ್ನು ಎದುರಿಸುತ್ತಿರುವಾಗ, ಮೇ 12 ರಂದು ಯು.ಎಸ್ ವಿದೇಶಾಂಗ ಇಲಾಖೆ ಇರಾನ್, ಉತ್ತರ ಕೊರಿಯಾ, ಸಿರಿಯಾ, ವೆನೆಜುವೆಲಾ ಮತ್ತು ಕ್ಯೂಬಾ ಗಳನ್ನು, ಶಸ್ತ್ರಾಸ್ತ್ರ ರಪ್ತು ನಿಯಂತ್ರಣ ಕಾಯಿದೆಯ ಸೆಕ್ಸನ್ 40 ಎ(ಎ) ಅಡಿಯಲ್ಲಿ 2019 ರಲ್ಲಿ ಯುಎಸ್ ಭಯೋತ್ಪಾದನಾ-ವಿರೋಧಿ ಪ್ರಯತ್ನಗಳೊಂದಿಗೆ ಈ ದೇಶಗಳು ಸಹಕರಿಸಲಿಲ್ಲವೆಂದು ಪ್ರಮಾಣೀಕರಿಸುವ ಘೋಷಣೆ ಮಾಡಿದೆ. ವೆನೆಜುವೆಲಾದ ಚುನಾಯಿತಾ ಅಧ್ಯಕ್ಷ ನಿಕೊಲಸ್ ಮಡುರೊ ರವರ ಸರಕಾರವನ್ನು ಉರುಳಿಸಲು ಸಂಚು ನಡೆಸಿ, ಭದ್ರತಾ ಕಂಪನಿಯ ನೇತೃತ್ವದಲ್ಲಿಬಾಡಿಗೆ ಸೈನಿಕರನ್ನು ಯುಎಸ್ ಕಳುಹಿಸಿತ್ತು. ವೆನೆಜುವೆಲಾದ ಭದ್ರತಾ ಪಡೆಯ ಎಚ್ಚರಿಕೆಯಿಂದಾಗಿ, ಕ್ಷಿಪ್ರ ದಂಗೆಯನ್ನು ವಿಫಲಗೊಳಿಸಲಾಯಿತು.

ಚೀನಾದ ಅಲಿಬಾಬಾ ಗುಂಪು ದಾನ ಮಾಡಿದ್ದ ಕೋವಿಡ್ ಪರೀಕ್ಷಾ ಕಿಟ್ ಗಳು, ಮುಖವಾಡಗಳು ಮತ್ತು ಕೃತಕ ಉಸಿರಾಟದ ವೈದ್ಯಕೀಯ ಸಾಧನಗಳುಕ್ಯೂಬಾಕ್ಕೆ ಬಂದು ತಲುಪಲೇ ಇಲ್ಲ, ಎಂದು ಕ್ಯೂಬನ್ ಸರಕಾರ ಹೇಳಿದೆ. ಏಕೆಂದರೆ, ಅಮೆರಿಕಾದ ಕಂಪನಿಯು ಕ್ಯೂಬಾದ ಮೇಲಿನ ಯುಎಸ್ ನಿರ್ಬಂಧಗಳನ್ನು ಉಲ್ಲಂಘಿಸುತ್ತದೆ ಎಂಬ ಭಯದಲ್ಲಿ ಸಾಗಾಣಿಕೆಯನ್ನು ಮಾಡಲಿಲ್ಲ.

ಇರಾನ್ ಮತ್ತು ವೆನೆಜುವೆಲಾ ಗಳು, ಹಣಕಾಸು ಮತ್ತು (ವಿಶೇಷವಾಗಿ ತುರ್ತು ಅಗತ್ಯವಿರುವ ವೈದ್ಯಕೀಯ ಉಪಕರಣಗಳ) ಆಮದುಗಳನ್ನು ನಿರ್ಬಂಧಿಸುವ ಯು.ಎಸ್ ನ ಕಠಿಣ ಆರ್ಥಿಕ ನಿರ್ಬಂಧಗಳ ಹೊರೆಯೊಂದಿಗೆ ಮಹಾಮಾರಿಯನ್ನು ಎದುರಿಸುತ್ತಿವೆ. ಅಮೆರಿಕಾದ ಒತ್ತಡದಿಂದಾಗಿ ಕೋವಿಡ್ ವಿರುದ್ದ ಹೋರಾಡಲು ವೆನೆಜುವೆಲಾ ಮತ್ತು ಇರಾನ್‌ಗೆ ತುರ್ತು ನಿಧಿಯನ್ನು ಸಹ ಐಎಂಎಫ್ ನಿರಾಕರಿಸಿತು.

ಕೋರೊನಾ ವೈರಸ್ ಬಿಕ್ಕಟ್ಟಿನ ಹೊರಲಾರದ ಸನ್ನಿವೇಶವೇ, ಇರಾನ್, ವೆನೆಜುವೆಲಾ ಮತ್ತು ಕ್ಯೂಬಾ ಸರ್ಕಾರಗಳನ್ನು ಉರುಳಿಸಲು ಸೂಕ್ತವಾದ ಕೊನೆಯ ಬಾಣವೆಂದುಟ್ರಂಪ್ ಆಡಳಿತದ ಆಸೆ.

ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಅಗತ್ಯವಿರುವ ವೈದ್ಯಕೀಯ ಉಪಕರಣಗಳು, ಆಹಾರ ಮತ್ತು ಇತರೆ ಸರಬರಾಜುಗಳನ್ನು ಪಡೆಯುವುದನ್ನು ಖಚಿತ ಪಡಿಸಲು ಕ್ಯೂಬಾ, ಇರಾನ್ ಮತ್ತು ವೆನೆಜುವೆಲಾ ಗಳ ವಿರುದ್ದ ಯು.ಎಸ್ ನಿರ್ಬಂಧಗಳನ್ನು ಮನ್ನಾ ಮಾಡಬೇಕೆಂದು ವಿಶ್ವಸಂಸ್ಥೆ ಕರೆ ನೀಡಿತ್ತು. ಆದಾಗ್ಯೂ, ಯು.ಎಸ್ ಈ ವಿಶ್ವಸಂಸ್ಥೆಯ ಕರೆಯನ್ನು ಆಲಿಸಲು ನಿರಾಕರಿಸಿದೆ.

ಉತ್ತೇಜಕ ಹಣಕಾಸು ಪ್ಯಾಕೇಜುಗಳು:

ವಿಶ್ವದ ಬಹುತೇಕ ಎಲ್ಲಾ ರಾಷ್ಟಗಳು ತಮ್ಮ ದೇಶಗಳಲ್ಲಿನ ಆರ್ಥಿಕತೆಯ ವಿನಾಶವನ್ನು ತಡೆಗಟ್ಟುವ ಮತ್ತು ಜನರಿಗೆ ಆರ್ಥಿಕ ಪರಿಹಾರ ನೀಡಲು, ಉತ್ತೇಜಕ ಹಣಕಾಸು ಪ್ಯಾಕೇಜುಗಳನ್ನು ಘೋಷಿಸಿವೆ. ಯು.ಎಸ್ ತನ್ನ ಜಿಡಿಪಿಯಲ್ಲಿ ಶೇ.13 ರಷ್ಟು, ಜಪಾನ್ ಶೇ 20 ರಷ್ಟು, ಸ್ವೀಡನ್ ಶೇ.12 ರಷ್ಟು, ಜರ್ಮನಿ ಶೇ 10.7 ರಷ್ಟು, ಫ್ರಾನ್ಸ್ ಶೇ.9.3 ರಷ್ಟು, ಸ್ಪೇನ್ ಶೇ.7.3 ರಷ್ಟು, ಮತ್ತು ಇಟಲಿ ಶೇ. 5.7 ರಷ್ಟು  ಜಿಡಿಪಿಯ ಶೇಕಡಾವಾರು ಪ್ಯಾಕೇಜುಗಳನ್ನು ಘೋಷಿಸಿವೆ. ಭಾರತವು ಶೇಕಡಾ 10 ರಷ್ಟು ಪ್ಯಾಕೇಜ್ ಘೋಷಣೆ ಮಾಡಿದೆ ಎಂದಿದೆ.

ಈ ಉತ್ತೇಜಕ ಪ್ಯಾಕೇಜುಗಳಲ್ಲಿ ಸರ್ಕಾರದ  ನೇರ ಖರ್ಚು ಮತ್ತು ಆಯಾ ಸರ್ಕಾರಗಳು ಸಾಲಗಳು, ಷೇರುಗಳುಮತ್ತು  ಹಣಕಾಸು ಗ್ಯಾರಂಟಿಗಳಿಗೆ ಮಾಡಿಕೊಡುವ ಅವಕಾಶಗಳು ಸೇರಿವೆ.ಈ ಎರಡನ್ನೂ ಬೇರ್ಪಡಿಸಬೇಕು.  ಏಕೆಂದರೆ, ಉತ್ತೇಜಕ ಎಂದರೆ ಸರ್ಕಾರದ ಹೆಚ್ಚುವರಿ ನೇರ ಖರ್ಚುಗಳು ಮಾತ್ರ.  ಸಾಲಗಳನ್ನು ಮತ್ತು ಮುಂಗಡಗಳಿಗೆ ಕೊಡುವ ಅವಕಾಶಉತ್ತೇಜಕಗಳಲ್ಲ. ಇವುಗಳನ್ನು ಬೇರ್ಪಡಿಸಿದ ನಂತರವಷ್ಟೇ, ನೇರ ಹೆಚ್ಚುವರಿ ಖರ್ಚುಗಳನ್ನು ಮಾತ್ರ ಕೋವಿಡ್ ಪರಿಹಾರದ ಪ್ಯಾಕೇಜ್ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಹೀಗೆ ಮಾಡಿದಾಗ  ಯು.ಎಸ್, ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಆಪ್ರಿಕಾ, ಕೆನಡಾ, ಸೌದಿ ಅರೇಬಿಯಾ ಇಂಡೋನೇಷ್ಯಾ, ರಷ್ಯಾ, ಟರ್ಕಿ ಮತ್ತು ಮೆಕ್ಸಿಕೊ ದೇಶಗಳು ಮಾತ್ರ ಸಾಲಗಳನ್ನು ಒದಗಿಸುವುದರ ಜೊತೆಗೆ, ಕೋವಿಡ್ ಪರಿಹಾರಕ್ಕೆ ಹೆಚ್ಚುವರಿ ನೇರ ಖರ್ಚು ಮಾಡುವ ಪ್ರಮುಖ ದೇಶಗಳಾಗಿವೆ. ಆದರೆ, ಭಾರತದಒಟ್ಟು ನೇರ ಖರ್ಚಿನ ಗಾತ್ರ ಮತ್ತು  ಉತ್ತೇಜಕ ಪ್ಯಾಕೇಜ್ ನಲ್ಲಿ ಅದರ ಪ್ರಮಾಣವನ್ನು ಗಮನಿಸಿದರೆ, ಕೆಳಗಿನ ಸ್ಥಾನದಲ್ಲಿದೆ. ಎಲ್ಲಾ ದೇಶಗಳಿಗೆ ಹೋಲಿಸಿದರೆ, ಜಿಡಿಪಿಯ ಶೇಕಡಾ 10 ರಷ್ಟು ಪರಿಹಾರ ಪ್ಯಾಕೇಜ್ ಎಂಬ ಘೋಷಣೆಗೆ ಪ್ರತಿಯಾಗಿ, ನೇರ ಹೆಚ್ಚುವರಿ ಖರ್ಚು ಇರುವುದು ಜಿಡಿಪಿಯ ಶೇಕಡಾ 1 ರಷ್ಟು ಮಾತ್ರ.

ರಾಷ್ಟ್ರೀಯ ಪರಿಸ್ಥಿತಿ:

ಕೋವಿಡ್-19  ಮಹಾಮಾರಿಯು ನಮ್ಮ ಮೇಲೆ ಪರಿಣಾಮ ಬೀರುವ ಮೊದಲೇ ಭಾರತದ ಆರ್ಥಿಕತೆಯು ಅದಾಗಲೇ ಗಿರಕಿ ಹೊಡೆಯುತ್ತಾ ಹಿಂಜರಿತದತ್ತ ಸಾಗಿತ್ತು. 2019-20ರ ಅವಧಿಯ ಜಿಡಿಪಿ ಬೆಳವಣಿಗೆ ದರದ ಅಂಕಿಯು ಅಧಿಕೃತವಾಗಿ ಮೇ29 ರಂದು ಬಿಡುಗಡೆಯಾಯಿತು. 2018-19ರಲ್ಲಿನ ಶೇಕಡಾ 6.1 ಕ್ಕೆ ಹೋಲಿಸಿದರೆ ಅದು ಹನ್ನೊಂದು ವರ್ಷದ ಕನಿಷ್ಠ ಶೇಕಡಾ 4.2 ಕ್ಕೆ ಇಳಿದಿತ್ತು. ಜಿಡಿಪಿ ಬೆಳವಣಿಗೆ ದರವು ಶೇಕಡಾ 5 ರಷ್ಟು ಆಗುತ್ತದೆ ಎಂದು ಫೆಬ್ರವರಿ 28 ರಂದು ಪ್ರಕಟಿಸಿದ್ದ ಎರಡನೇ ಮುಂದುವರಿದ ಅಂದಾಜಿಗೆ ವ್ಯತಿರಿಕ್ತವಾಗಿ ನಾಲ್ಕನೇ ತ್ರೆöÊಮಾಸಿಕ, ಜನವರಿ-ಮಾರ್ಚ್ 2020ರ ಹೊತ್ತಿಗೆ ಜಿಡಿಪಿ ಬೆಳವಣಿಗೆ ದರವು ಶೇಕಡಾ 3.1 ಕ್ಕೆ ಕುಸಿಯಿತು. ಹಲವಾರು ಅಂತರ್‌ ರಾಷ್ಟ್ರೀಯ ರೇಟಿಂಗ್(ಆರ್ಥಿಕ ಬೆಳವಣಿಗೆ ಅಂದಾಜು ಮಾಡುವ) ಸಂಸ್ಥೆಗಳು ಮತ್ತು ದೇಶೀಯ ಸ್ವತಂತ್ರ ಸಂಸ್ಥೆಗಳು ಈ ಜಿಡಿಪಿ ಬೆಳವಣಿಗೆ ದರದ ಇಳಿತವು ಇದಕ್ಕಿಂತಲೂ ಹೆಚ್ಚಿದೆ ಎಂದು ಅಂದಾಜು ಮಾಡಿವೆ. ಅವು ಮಾರ್ಚ್ ಕೊನೆಯ ವಾರವನ್ನು ಹೊರತುಪಡಿಸಿದರೆ, ಲಾಕ್‌ಡೌನ್ ಘೋಷಿಸುವ ಅವಧಿಗೆ ಮುಂಚಿನ ಅವಧಿಗೆ ಸೇರಿದ ಅಂಕಿಅಂಶಗಳಾಗಿವೆ.

ಆ ಮಹಾಮಾರಿ ಮತ್ತು ಆ ನಂತರದ ಲಾಕ್‌ಡೌನ್ ನಮ್ಮ ಬಹುಭಾಗದ ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ನಿರ್ನಾಮ ಮಾಡಿವೆ, ಅದು ನಮ್ಮ ಬಹುಪಾಲು ಜನರ ಬದುಕಿನ ಸ್ಥಿತಿಯನ್ನು ತೀವ್ರವಾಗಿ ಬಾಧಿಸಿದೆ.

ಮಹಾಮಾರಿಯ ಮುನ್ಸೂಚನೆಗಳು:

ಜಗತ್ತಿನಲ್ಲಿ ಈ ರೋಗದಿಂದಾದ ಮೊದಲ ಸಾವು ಡಿಸೆಂಬರ್ 2019ರ ಕೊನೆಯಲ್ಲಿ ಚೀನಾದ ವುಹಾನಿನಿಂದ ವರದಿಯಾಗಿದೆ. ಜಾಗತಿಕವಾಗಿ ಹರಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಗತ್ತಿನೆಲ್ಲೆಡೆ ಎಚ್ಚರಿಕೆ ವಹಿಸಲಾಯಿತು ಮತ್ತು ಹಲವಾರು ದೇಶಗಳು ರೋಗ ನಿಯಂತ್ರಣ ಕ್ರಮಗಳನ್ನು ಆರಂಭಿಸಿದವು. ಆದರೆ ಭಾರತದಲ್ಲಿ, ಅಂತಹ ಯಾವುದೇ ತಯಾರಿಗೆ ಮುಂದಾಗಲಿಲ್ಲ.

ಭಾರತದಲ್ಲಿ ಮೊಟ್ಟಮೊದಲ ರೋಗ ಲಕ್ಷಣ ಜನವರಿ 30 ರಂದು ಕೇರಳದಲ್ಲಿ ಕಂಡುಬಂತು. ಕೇರಳದ ಎಡರಂಗ ಸರ್ಕಾರವು, ಜಾಗತಿಕ ಎಚ್ಚರಿಕೆಯ ಹಿಂದೆಯೇ, ಜನರು, ಮುಖ್ಯವಾಗಿ ವಿದ್ಯಾರ್ಥಿಗಳು ವುಹಾನಿನಿಂದ ಮತ್ತು ವಿಶ್ವದ ಇತರ ಭಾಗಗಳಿಂದ ಹಿಂತಿರುಗಬಹುದು ಮತ್ತು ಅವರು ಮಾರಕ ಸೋಂಕನ್ನು ತರಬಹುದೆಂದು ನಿರೀಕ್ಷಿಸಿ ಸಿದ್ಧತೆಯನ್ನು ಪ್ರಾರಂಭಿಸಿತು. ರೋಗ ಲಕ್ಷಣದ ಸೂಚನೆ ಸಿಗುವ ಮೊದಲೇ, ಜನವರಿ 2020ರಲ್ಲೇ ಜಿಲ್ಲಾ ನಿಯಂತ್ರಣ ಕೇಂದ್ರಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು.

ಕೇಂದ್ರ ಸರ್ಕಾರವು ಇಡೀ ಫೆಬ್ರವರಿ ತಿಂಗಳು ಮತ್ತು ಮಾರ್ಚ್ ತಿಂಗಳ ಮೊದಲ ಮೂರು ವಾರಗಳವರೆಗೆ ಯಾವ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ. ಈ ಅವಧಿಯಲ್ಲಿ, ಹೆಚ್ಚು ಜನರನ್ನು ಒಳಗೊಳ್ಳುವ ದೊಡ್ಡ ಕಾರ್ಯಕ್ರಮಗಳನ್ನು ನಡೆದವು, ದೈಹಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ ಮತ್ತು ಶುದ್ಧಗೊಳಿಸುವ(ಸ್ಯಾನಿಟೈರ‍್ಸ್)ದ್ರವಗಳನ್ನು ಬಳಸುವ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ವಾಗತಕ್ಕಾಗಿ ದೊಡ್ಡ ದೊಡ್ಡ ಸಭೆಗಳು ಅಹಮದಾಬಾದಿನಲ್ಲಿ ಜರುಗಿದವು. ಫೆಬ್ರವರಿ 24, 2020ರಂದು ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರನ್ನು ಅಣಿನೆರೆಸಲಾಗಿತ್ತು.

ಈಗಾಗಲೇ ಆ ರೋಗವು ವ್ಯಾಪಕವಾಗಿ ಹರಡಿರುವ ದೇಶಗಳಾದ ಮಲೇಶಿಯಾ, ಇಂಡೋನೇಶಿಯಾ ಮತ್ತಿತರ ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಲಿರುವ ತಬ್ಲೀಗ್ ಮರ್ಕಾಜ್ ದೆಹಲಿಯಲ್ಲಿ ನಡೆಯಿತು. ಇಂತಹ ಪರಿಸ್ಥಿತಿಯಲ್ಲೂ ಆ ಕಾರ್ಯಕ್ರಮವನ್ನು ನಡೆಸಿರುವುದು ಸಂಘಟಕರ ಅತ್ಯಂತ ಹೊಣೆಗೇಡಿತನವೇ ಸರಿ. ಆದರೆ, ಅದಕ್ಕೆ ಅಗತ್ಯವಾದ ಪರವಾನಗಿ ಮತ್ತು ವೀಸಾಗಳನ್ನು ಕೇಂದ್ರ ಸರ್ಕಾರವೇ ಮಂಜೂರು ಮಾಡಿದೆ. ಅದಕ್ಕೆ ವ್ಯತಿರಿಕ್ತವಾಗಿ, ಮಹಾರಾಷ್ಟç ಸರ್ಕಾರವು ಇಂತಹದೇ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತು. ಮಾರ್ಚ್ 23ರವರೆಗೂ ಸಂಸತ್ ಅಧಿವೇಶನ ನಡೆದು, ನಂತರವಷ್ಟೇ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲಾಯಿತು. ಅವತ್ತಿನ ಸಂಜೆಯೇ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಕುದುರೆ ವ್ಯಾಪಾರದ ಮೂಲಕ ಪತನಗೊಳಿಸಿ, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತು. ಭೋಪಾಲಿನಲ್ಲಿ ನಡೆದ ಬಹಿರಂಗ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನಸೇರಿದ್ದರು.

ರಾಷ್ಟç ಮಟ್ಟದ ಲಾಕ್‌ಡೌನ್: ಸರಿ ಸುಮಾರು ಈ ಹೊತ್ತಿಗೆ ಪ್ರಧಾನ ಮಂತ್ರಿಗಳು ಮಾರ್ಚ್ 22 ರಂದು ಜನತಾ ಕರ್ಫ್ಯೂ ಪ್ರಕಟಿಸಿದರು. ಮಾರ್ಚ್ 24 ರಂದು, ದೇಶಕ್ಕೆ, ರಾಜ್ಯ ಸರ್ಕಾರಗಳಿಗೆ ಮತ್ತು ಜನರಿಗೆ ಕೇವಲ ನಾಲ್ಕು ಗಂಟೆಗಳ ನೋಟೀಸ್ ನೀಡಿ ಪ್ರಧಾನ ಮಂತ್ರಿಗಳು 21 ದಿನಗಳ ರಾಷ್ಟ್ರೀಯ ಲಾಕ್‌ಡೌನ್ ಘೋಷಿಸಿದರು. ಆನಂತರ ಮೂರು ಬಾರಿ ಈ ಲಾಕ್‌ಡೌನ್ ವಿಸ್ತರಿಸಲಾಯಿತು. ಈಗಿನ ಲಾಕ್‌ಡೌನ್ 4.0 ಜೂನ್ 1ಕ್ಕೆ ಮುಗಿಯಬೇಕಿದೆ. ಆದರೆ, ಕೆಲವು ವಾಣಿಜ್ಯ ಹಾಗೂ ವ್ಯಾಪಾರಿ ಚಟುವಟಿಕೆಗಳನ್ನು ಮೇ 25ರಿಂದ ತೆರೆಯಲು ನಿರ್ಬಂಧಗಳನ್ನು ಸಡಿಲಿಸಲಾಯಿತು. ಮಾರ್ಚ್ 24 ರಂದು ಭಾರತದಲ್ಲಿ 564 ಸಕ್ರಿಯ ಪ್ರಕರಣಗಳಿದ್ದವು ಮತ್ತು 10 ಸಾವು ಸಂಭವಿಸಿದ್ದವು. ಮೇ 24 ರಂದು, 73,560 ಸಕ್ರಿಯ ಪ್ರಕರಣಗಳು ಮತ್ತು 3,867 ಸಾವು ಆಗಿತ್ತು. ಲಾಕ್‌ಡೌನಿನ ನಿರ್ಬಂಧಗಳನ್ನು ಸಡಿಲಿಸಿದಂದಿನಿಂದ, ಪ್ರತಿದಿನ ಹೆಚ್ಚೆಚ್ಚು ಪ್ರಕರಣಗಳು ಮತ್ತು ಸಾವುಗಳು ವರದಿಯಾಗುತ್ತಿವೆ.

ಲಾಕ್‌ಡೌನ್ ರೋಗ ಪರಿಹಾರವಲ್ಲ, ಆದರೆ ಪ್ರಧಾನ ಮಂತ್ರಿಗಳ ಪುಡಾರಿತನವು ಮಹಾಭಾರತದ 18 ದಿನಗಳ ಯುದ್ಧ 18 ದಿನಗಳಲ್ಲಿ ಮುಗಿದಂತೆ, ಭಾರತವೂ ಮಹಾ ರೋಗವನ್ನು 21 ದಿನಗಳಲ್ಲಿ ಗೆದ್ದುಬಿಡುತ್ತದೆ ಎಂಬಂತೆ ಜನರ ಮನಸ್ಸನ್ನು ಒಗ್ಗಿಸಿತ್ತು. ಆದರೆ ಲಾಕ್‌ಡೌನ್ ಈಗಲೂ ಜನರ ಮೇಲೆ ಹೊರಿಸುತ್ತಿರುವ ದುಃಖ, ಸಂಕಟಗಳೇ ಕ್ರೂರ ವಾಸ್ತವ.

ಸಾಮಾನ್ಯವಾಗಿ ದೇಶಗಳು ಮಹಾ ರೋಗವು ಹೆಚ್ಚಾದಾಗ ಹರಡುವಿಕೆಯನ್ನು ನಿಯಂತ್ರಿಸಲು ಲಾಕ್‌ಡೌನನ್ನು ಹೇರುತ್ತವೆ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಅದನ್ನು ಖಾತರಿಪಡಿಸುತ್ತವೆ, ಏರುತ್ತಿದ್ದ ಮಹಾರೋಗದ ವಕ್ರರೇಖೆ ಸಮನಾಗುತ್ತದೆ. ಆದರೆ, ಭಾರತದ ಮಟ್ಟಿಗೆ, ಲಾಕ್‌ಡೌನ್ ಅವಧಿಯಲ್ಲಿ ಮಹಾಮಾರಿಯ ವಕ್ರರೇಖೆ ಸತತವಾಗಿ ಏರುತ್ತಲೇ ಇದೆ ಮತ್ತು ಈಗ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆ ಸ್ಪೋಟಗೊಳ್ಳಬಹುದು.

ವೃದ್ಧಿಯಾಗದ ಆರೋಗ್ಯ ಸವಲತ್ತುಗಳು: ನಮ್ಮ ವೈದ್ಯಕೀಯ ಹಾಗೂ ಆಸ್ಪತ್ರೆ ಸೌಲಭ್ಯಗಳನ್ನು ಹೆಚ್ಚಿಸಲು ಲಾಕ್‌ಡೌನ್ ಅವಧಿಯನ್ನು ಬಳಸಬೇಕಿತ್ತು, ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ರಕ್ಷಣಾ ಸಲಕರಣೆ(ಪಿಪಿಇ)ಗಳನ್ನು ಪೂರೈಸಬೇಕಿತ್ತು ಮತ್ತು ಭಾರಿ ಪ್ರಮಾಣದಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಬೇಕಿತ್ತು. ಇವಾವ ವಿಷಯಗಳ ಬಗ್ಗೆಯೂ ಕೇಂದ್ರ  ಸರ್ಕಾರವು, ಲಾಕ್‌ಡೌನ್ ಅವಧಿಯಲ್ಲಾಗಲೀ ಅಥವಾ ಅದು ತೆರವಾದ ಮೇಲಾಗಲೀ ತಲೆಕೆಡಿಸಿಕೊಳ್ಳಲಿಲ್ಲ. ಭಾರತದ ಸ್ಥಿತಿ ತೀರ ಕಳಪೆಯಾಗಿದ್ದು ಒಂದು ಸಾವಿರ ಜನರಿಗೆ 0.8 ವೈದ್ಯರನ್ನು ಮತ್ತು ಒಂದು ಸಾವಿರ ಜನರಿಗೆ 0.7 ಆಸ್ಪತ್ರೆಗಳ ಹಾಸಿಗೆಗಳನ್ನು ಹೊಂದಿದೆ. ಖಾಸಗಿ ಆಸ್ಪತ್ರೆಗಳ ಜಾಗವನ್ನು ಕೇಂದ್ರ ಸರ್ಕಾರವು ಬಲವಂತವಾಗಿ ವಶಕ್ಕೆ ಪಡೆದು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಬೇಕಿತ್ತು. ಇದು ಇಲ್ಲಿಯವರೆಗೂ ಆಗಿಲ್ಲ. ಸ್ಪೇನ್‌ನಂತಹ ದೇಶಗಳು ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನು ರಾಷ್ಟ್ರೀಕರಣ ಮಾಡಿವೆ. ನಮ್ಮಲ್ಲಿ ಪಿಪಿಇಗಳು ಈಗಲೂ ಕಡಿಮೆ ಪೂರೈಕೆಯಾಗುತ್ತಿವೆ. ಈಗ ಒಂದು ಸಾವಿರ ಜನಕ್ಕೆ 2.1 ಜನ ಪರೀಕ್ಷೆಯಾಗುತ್ತಿರುವ ಸಂಗತಿ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಆಗಿದೆ. ಕೇಂದ್ರ ಸರ್ಕಾರವು ಲಾಕ್‌ಡೌನಿನ ಉದ್ದೇಶವನ್ನೇ ಸಂಪೂರ್ಣವಾಗಿ ಮರೆತಿದೆ, ಮಹಾಮಾರಿಯ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ.

ಜನರ ಕಷ್ಟ ಕೋಟಲೆಗಳು: ಯೋಜನಾರಹಿತ, ಅವೈಜ್ಞಾನಿಕ ಹಾಗೂ ಏಕಾಏಕಿ ಲಾಕ್‌ಡೌನ್, ಆರ್ಥಿಕತೆ ಮತ್ತು ಬಹುತೇಕ ಜನರ ಜೀವನೋಪಾಯಗಳು ಎರಡನ್ನೂ ನಾಶಮಾಡಿದೆ. ಅತ್ಯಂತ ಕೆಟ್ಟ ಪ್ರಕರಣವೆಂದರೆ ವಲಸೆ ಕಾರ್ಮಿಕರದ್ದು, ಎರಡು ತಿಂಗಳಾದ ಮೇಲೆ ಈಗಲೂ ಕೂಡ ರಸ್ತೆಯ ಮೇಲೆ ನಡೆದುಕೊಂಡೇ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಸ್ವಲ್ಪ ತಯಾರಿ ಮಾಡಿಕೊಳ್ಳಲು ಸಮಯ ನೀಡಿ ಲಾಕ್‌ಡೌನನ್ನು ತಂದಿದ್ದರೆ, ಬಹುತೇಕ ಈ ವಲಸೆ ಕಾರ್ಮಿಕರು ಅವರದೇ ಖರ್ಚಿನಲ್ಲಿ ಅವರವರ ಊರುಗಳಿಗೆ ಹೋಗಿರುತ್ತಿದ್ದರು. ಹಠಾತ್ತನೇ ಲಾಕ್‌ಡೌನ್ ಘೋಷಣೆ ಮಾಡಿ ಅವರನ್ನು ಕಷ್ಟ ಕೋಟಲೆಗೆ ತಳ್ಳಿದ ಬಿಜೆಪಿ ಕೇಂದ್ರ ಸರ್ಕಾರವು ಅವರಿಗೆ ಉಚಿತವಾಗಿ ಸಂಚಾರದ ವ್ಯವಸ್ಥೆ ಒದಗಿಸಲು ನಿರಾಕರಿಸಿತು.

ಶ್ರಮಿಕ್ ವಿಶೇಷ ರೈಲುಗಳನ್ನು ಪ್ರಾರಂಭ ಮಾಡಿದ ಮೇಲೂ, ರಾಜ್ಯ ಸರ್ಕಾರಗಳು ರೈಲ್ವೇ ಇಲಾಖೆಗೆ ಮುಂಗಡ ಹಣ ನೀಡಬೇಕೆಂದು ಒತ್ತಾಯಿಸಿತು. ಅವೈಚಾರಿಕ ಏಕಾಏಕಿ ಏಕಪಕ್ಷೀಯ ಲಾಕ್‌ಡೌನ್‌ನ ಪರಿಣಾಮಗಳ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಬಲವಂತದಿಂದ ಹೇರಲಾಗುತ್ತಿದೆ. ಆದರೆ, ಪ್ರಧಾನ ಮಂತ್ರಿಗಳ ಹೆಸರಿನ ಒಂದು ಖಾಸಗಿ ಟ್ರಸ್ಟ್ ನಿಧಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿರುವಾಗಲೂ, ರಾಜ್ಯಗಳಿಗೆ ಆರ್ಥಿಕ ನೆರವನ್ನು ನೀಡುತ್ತಿಲ್ಲ.

8.5 ಕೋಟಿ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂತಿರುಗಲು ಬಯಸುತ್ತಿದ್ದಾರೆಂದು ಹಣಕಾಸು ಸಚಿವರು ಹೇಳುತ್ತಿದ್ದಾರೆ. ಹತ್ತು ಕೋಟಿ ವಲಸೆ ಕಾರ್ಮಿಕರಿದ್ದಾರೆಂದು ಭಾರತದ ಸಂಸತ್ತಿಗೆ ತಿಳಿಸಲಾಗಿದೆ. ಇತರೆ ಒಂದು ಅಂದಾಜಿನ ಪ್ರಕಾರ ಅವರು 14 ಕೋಟಿ ಇದ್ದಾರೆ. ಆ ಸಂಖ್ಯೆಗಳು ಏನೇ ಇರಲಿ, ಈ ಏಕಾಏಕಿ ಲಾಕ್‌ಡೌನ್ ಕೋಟ್ಯಾಂತರ ಜನರನ್ನು ಹೇಳಲಾಗದ ಕಷ್ಟ ಕೋಟಲೆಗೆ ತಳ್ಳಿದೆ.

ನಗದು ಹಣ ವರ್ಗಾವಣೆ ಮತ್ತು ಉಚಿತ ಆಹಾರ: ಲಾಕ್‌ಡೌನ್ ಘೋಷಣೆಯಾದಾಗಿನಿಂದ ತೆರಿಗೆ ವ್ಯಾಪ್ತಿಗೆ ಬರದ ಎಲ್ಲಾ ಕುಟುಂಬಗಳಿಗೂ ನಗದು ಹಣ ವರ್ಗಾವಣೆ ಮಾಡಬೇಕು ಮತ್ತು ಉಚಿತ ಆಹಾರ ಪೂರೈಕೆ ಮಾಡಬೇಕೆಂದು ಪಕ್ಷವು ಒತ್ತಾಯಿಸುತ್ತಿದೆ. ಆಗ ಕೇಂದ್ರ ಆಹಾರ ಉಗ್ರಾಣದಲ್ಲಿ ಭಾರಿ ಪ್ರಮಾಣದ (77 ಮಿಲಿಯನ್ ಟನ್ನುಗಳು) ಆಹಾರಧಾನ್ಯಗಳು ಸಂಗ್ರಹವಾಗಿದ್ದವು. ಈ ಸುಗ್ಗಿಯ ಸಂಗ್ರಹ ಸೇರಿದರೆ ಇನ್ನೂ ಹೆಚ್ಚಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಅದನ್ನು ಮಾಡಲು ತಯಾರಿಲ್ಲ, ಜನರನ್ನು ಹಸಿವು ಮತ್ತು ಉದ್ಯೋಗ ನಷ್ಟದ ಕೃಪೆಗೆ ತಳ್ಳಿಬಿಟ್ಟಿದೆ.

ಆರ್ಥಿಕ ಪರಿಣಾಮ:

ನಿರುದ್ಯೋಗ: ಲಾಕ್‌ಡೌನಿನ ಅವಧಿಯಲ್ಲಿ, 15 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ಅಂದಾಜು ಮಾಡಿದೆ. ಏಪ್ರಿಲ್ ಮತ್ತು ಮೇ ನಡುವೆ, ನಿರುದ್ಯೋಗ ದರವು ಶೇಕಡಾ 23.5 ರಿಂದ ಶೇಕಡಾ 27.1 ಕ್ಕೆ ಏರಿದೆ. 2019-20 ಅವಧಿಯಲ್ಲಿ, ಸರಾಸರಿ ಉದ್ಯೋಗವು 40.4 ಕೋಟಿ ಆಸುಪಾಸಿನಲ್ಲಿತ್ತು ಮತ್ತು ಏಪ್ರಿಲ್ 2020ರ ಹೊತ್ತಿಗೆ, ಲಾಕ್‌ಡೌನಿನ ಮೊದಲ ತಿಂಗಳಲ್ಲಿ, ಈ ಅಂಕಿಯು 28.2 ಕೋಟಿಗೆ ಕುಸಿಯಿತು- ಸುಮಾರು ಶೇಕಡಾ 30 ರಷ್ಟು ಕುಸಿತ.

ದಿನಗೂಲಿ ಕೆಲಸಗಾರರು, ಅನೌಪಚಾರಿಕ ವಲಯದ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಇವುಗಳಲ್ಲಿನ ಬಹುಪಾಲು ನಷ್ಟ ಅನುಭವಿಸಿದ್ದಾರೆ. ಈ ವಿಭಾಗದ ಕಾರ್ಮಿಕರು 2019-20 ರಲ್ಲಿ ಸರಾಸರಿ 12.8 ಕೋಟಿ ಇದ್ದರು. ಏಪ್ರಿಲ್ ಕೊನೆಯ ಹೊತ್ತಿಗೆ, ಇದು 3.7 ಕೋಟಿಗೆ ಕುಸಿಯಿತು, ಒಂದೇ ತಿಂಗಳಲ್ಲಿ 9.1 ಕೋಟಿ ಜೀವನೋಪಾಯಗಳು ಭಾರಿ ನಷ್ಟಕ್ಕೊಳಗಾಗಿವೆ. ನಿಶ್ಚಿತ ಆಸ್ತಿಗಳನ್ನು ಹೊಂದಿರುವ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಶೇಕಡಾ 23 ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ, ಅಂದರೆ 2019-20ರಲ್ಲಿ 7.8 ಕೋಟಿ ಇದ್ದವರು ಏಪ್ರಿಲ್ 2020ರ ಹೊತ್ತಿಗೆ 6.0 ಕೋಟಿ ಆದರು. 1.8 ಕೋಟಿ ವಾಣಿಜ್ಯ ಸಿಬ್ಬಂದಿಗಳು ಅವರ ಕೆಲಸ ಕಳೆದುಕೊಂಡಿದ್ದಾರೆಂದು ಅಂದಾಜು ಮಾಡಲಾಗಿದೆ. 2019-20 ರಲ್ಲಿ ಸಂಬಳ ಪಡೆಯುತ್ತಿದ್ದ ನೌಕರರು 8.6 ಕೋಟಿ ಇದ್ದವರು ಏಪ್ರಿಲ್ 2020 ರ ಹೊತ್ತಿಗೆ 6.8 ಕೋಟಿಗೆ ಇಳಿದರು, ಅಂದರೆ ಐದರಲ್ಲಿ ಒಬ್ಬರು ಸಂಬಳ ಪಡೆಯುವ ನೌಕರರು ಉದ್ಯೋಗ ಕಳೆದುಕೊಂಡರು. ನಮ್ಮ ಯುವಜನರ ಮೇಲಿನ ಈ ನಿರುದ್ಯೋಗದ ಪರಿಣಾಮವು ನಿಜಕ್ಕೂ ನೆಮ್ಮದಿಗೆಡಿಸುತ್ತದೆ. 20 ರಿಂದ 27 ರವರೆಗಿನ ವಯಸ್ಸಿನ 2.7 ಕೋಟಿ ಯುವಜನರು ಕೆಲಸ ಕಳೆದುಕೊಂಡಿದ್ದಾರೆ. 30 ರಿಂದ 39 ರವರೆಗಿನ ವಯಸ್ಸಿನ ಗುಂಪಿನವರು 3.3 ಕೋಟಿ ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ.

ಉದ್ದಿಮೆ:  ಕೈಗಾರಿಕಾ ಉತ್ಪಾದನಾ ಸೂಚ್ಯಾಂಕ(ಐಐಪಿ)ದ ಶೇಕಡಾ 54 ರಷ್ಟು ವಲಯವು ಲಾಕ್ಡೌನ್ ಅವಧಿಯಲ್ಲಿ ವಿನಾಯಿತಿಗೆ ಒಳಪಟ್ಟಿದ್ದರೂ, ಐಐಪಿಯು ಗಣನೀಯವಾಗಿ ಕುಸಿಯಿತು. ಮಾರ್ಚ್ ತಿಂಗಳೊಂದರಲ್ಲೇ(ಇತ್ತೀಚಿನ ಲಭ್ಯ ಅಂಕಿಅಂಶಗಳು), ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯು ಶೇಕಡಾ 17.8 ಇಳಿದಿದೆ; ಕಲ್ಲಿದ್ದಲು ಬಳಕೆ ಶೇಕಡಾ 10.3 ಇಳಿದಿದೆ; ಉಕ್ಕು ಉತ್ಪಾದನೆ ಶೇಕಡಾ 27.4 ಇಳಿದಿದೆ; ವಿದ್ಯುತ್ ಉತ್ಪಾದನೆ ಶೇಕಡಾ 8.8 ಇಳಿದಿದೆ. ವಿದ್ಯುಚ್ಛಕ್ತಿಯ ಬೇಡಿಕೆಯು ಲಾಕ್ಡೌನಿಗಿಂತ ಮುಂಚೆ ಇದ್ದ 350 ಕೋಟಿ ಯೂನಿಟ್‌ಗಳಿಂದ ಮಾರ್ಚ್ ಕೊನೆಯ ಹೊತ್ತಿಗೆ 280 ಕೋಟಿ ಯೂನಿಟ್ಟುಗಳಿಗೆ ಕುಸಿಯಿತು, ಅಂದರೆ ಶೇಕಡಾ 8.8 ಕುಸಿತ. ಅದೇರೀತಿ, ಯೂರಿಯಾ, ಆಹಾರ ಉತ್ಪನ್ನಗಳು, ಸಕ್ಕರೆ ಉತ್ಪಾದನೆ- ಹೆಚ್ಚು ಕಡಿಮೆ ಉಳಿದೆಲ್ಲಾ ಗ್ರಾಹಕ ಉತ್ಪನ್ನಗಳ ಮಾರಾಟ ಕುಸಿದಿದೆ. ಈ ಎಲ್ಲಾ ಅಂಕಿಅಂಶಗಳು ಮಾರ್ಚ್ ಕೊನೆಯ ಹೊತ್ತಿನದು, ಆಗಿನ್ನೂ ಲಾಕ್ಡೌನ್ ನಿಜವಾದ ಪರಿಣಾಮ ಬೀರಿರಲಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ, ಅಂಕಿಅಂಶಗಳನ್ನು ಏನಾದರೂ ಬಿಡುಗಡೆ ಮಾಡಿದರೆ, ಪರಿಸ್ಥಿತಿ ಖಂಡಿತವಾಗಿಯೂ ಇನ್ನೂ ಬಿಗಡಾಯಿಸಿರುತ್ತದೆ.

ಲಾಕ್ಡೌನ್ ಅವಧಿಯಲ್ಲಿ ಲಾಭಕೋರತನ: ಉತ್ಪಾದನೆ ಮತ್ತು ಸೇವೆಗಳಲ್ಲಿ ಸರ್ವತೋಮುಖವಾಗಿ ಇಳಿಕೆಯಾಗುತ್ತಿದ್ದರೂ ಸಹ, ಭಾರತದ ಅತಿ ಶ್ರೀಮಂತರ ಸಂಪತ್ತು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿಯ ಸಂಪತ್ತು 17.7 ಬಿಲಿಯನ್ ಡಾಲರಿನಷ್ಟು ಹೆಚ್ಚಾಗಿ ಏಪ್ರಿಲ್ 2020ರ ಹೊತ್ತಿಗೆ 49.9 ಬಿಲಿಯನ್ ಡಾಲರಿನಷ್ಟಾಗಿ  ಏಶಿಯಾದಲ್ಲೇ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ, ಜನವರಿಯ ನಮ್ಮ ಕೇಂದ್ರ ಸಮಿತಿ ಸಭೆಯಲ್ಲಿ ಟಿಪ್ಪಣಿ ಮಾಡಿದಂತೆ, ಕೊರೋನಾಪೂರ್ವ ಅವಧಿಯಲ್ಲಿ, ಭಾರತದ ಆದಾಯ ಅಸಮಾತೆಯು ಹೇಸಿಗೆ ಹುಟ್ಟಿಸುವಷ್ಟರ ಮಟ್ಟಕ್ಕೆ ತಲುಪಿತ್ತು, ಜನಸಂಖ್ಯೆಯ ಕೆಳಗಿನ ಶೇಕಡಾ 70ರಷ್ಟು ಜನರ ಒಟ್ಟು ಸಂಪತ್ತಿನ ನಾಲ್ಕು ಪಟ್ಟು ಸಂಪತ್ತನ್ನು ಅತ್ಯಂತ ಶ್ರೀಮಂತ ಶೇಕಡಾ 1 ರಷ್ಟು ಜನರು ಕಲೆ ಹಾಕಿದ್ದರು.

ಕೃಷಿ: ಅಕಾಲಿಕ ಮಳೆಯಿಂದಾಗಿ 2019ರ ಖಾರಿಫ್ ಬೆಳೆಗೆ ಉಂಟಾದ ನಷ್ಟವನ್ನು ತುಂಬಿಕೊಳ್ಳಲು, ಪ್ರಮುಖ ರಾಬಿ ಬೆಳೆಯುವ ರಾಜ್ಯಗಳ ರೈತರು 2020ರಲ್ಲಿ ಸಾಗುವಳಿ ಜಮೀನಿನ ವ್ಯಾಪ್ತಿಯನ್ನು ಎಕರೆಗಟ್ಟಲೆ ಹೆಚ್ಚು ಮಾಡಿದ್ದರು. ಸಮೃದ್ಧವಾದ ಸುಗ್ಗಿಯನ್ನು ಅವರು ನಿರೀಕ್ಷಿಸಿದ್ದರು. ಎಫ್.ಸಿ.ಐ.(ಭಾರತದ ಆಹಾರ ನಿಗಮ) ಈಗಾಗಲೇ ದಾಖಲೆ ಗೋಧಿ ಸಂಗ್ರಹವನ್ನು ವರದಿಮಾಡಿದೆ. ಆದರೆ, ಬೇರೆ ಬೆಳೆಗಳು, ಅಗತ್ಯ ಬೆಂಬಲ ಬೆಲೆಯಲ್ಲಿ ಸಂಗ್ರಹ ಆಗದೇ ಇರುವುದರಿಂದ, ರೈತರು ದುರ್ದೆಸೆ ಮಾರಾಟಕ್ಕೆ ಒಳಗಾಗಿ ಸಾಲದ ಬಲೆಯಲ್ಲಿ ಸಿಕ್ಕಿಬೀಳುತ್ತಿದ್ದಾರೆ. 2020ರ ಖಾರಿಫ್ ಕಾಲದ ಸಿದ್ಧತೆಯು ಜೂನ್‌ನಲ್ಲಿ ಶುರುವಾಗುತ್ತದೆ. ಬೀಜ, ಗೊಬ್ಬರ ಮತ್ತು ಇತರೆ ಲಾಗುವಾಡಗಳ ತೀವ್ರ ಕೊರತೆಯಾಗಿವೆ. ಸರ್ಕಾರವು ಇಲ್ಲಿಯವರೆಗೂ ಯಾವುದೇ ವ್ಯವಸ್ಥೆ ಮಾಡಿಲ್ಲ.

ಪ್ರಮುಖ ಸಮಸ್ಯೆಗಳು: ಪಕ್ಷದ ಅನುಭವಗಳು:

ಜನರಿಗೆ ಪರಿಹಾರ ಒದಗಿಸುವಲ್ಲಿ ಮತ್ತು ಮುಖ್ಯವಾದ ಆರೋಗ್ಯ ಸೌಲಭ್ಯಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ಎಲ್ಲಾ ರಾಜ್ಯಗಳ ಪಕ್ಷದ ರಾಜ್ಯ ಸಮಿತಿಗಳು ಮತ್ತು ಸಾಮೂಹಿಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ರಾಜ್ಯ ಸಮಿತಿಗಳಿಂದ ವರದಿಗಳನ್ನು ಕಳಿಸುವಂತೆ ಪಕ್ಷದ ಕೇಂದ್ರವು ಕೇಳಿಕೊಂಡ ಸುತ್ತೋಲೆಗಳನ್ನು ಕೇಂದ್ರ ಸಮಿತಿಯ ಎಲ್ಲಾ  ಸದಸ್ಯರುಗಳಿಗೆ ಮತ್ತು ರಾಜ್ಯ ಸಮಿತಿಗಳಿಗೆ ಕಳಿಸಿಕೊಡಲಾಗಿದೆ. ಈ ವರದಿಗಳಿಂದ ಪಡೆದ ಪಕ್ಷವು ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಪ್ರಮುಖ ವಿಷಯಗಳು ಈ ಕೆಳಗಿನಂತಿವೆ:

ಆರೋಗ್ಯ ಮೂಲಸೌಕರ್ಯಗಳು: ಕೇರಳವನ್ನು ಹೊರತುಪಡಿಸಿ, ಬೇರೆಲ್ಲಾ ರಾಜ್ಯಗಳಲ್ಲಿ ಅತ್ಯಂತ ಕಳಪೆಯ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಿವೆ, ಅಂದರೆ ಮಹಾಮಾರಿಯ ಬಿಕ್ಕಟ್ಟನ್ನು ಎದುರಿಸಲು ಏನೇನೂ ಸಾಲದಾಗಿದೆ. ಆರೋಗ್ಯ ಮೂಲಸೌಕರ್ಯಗಳನ್ನು ಉತ್ತಮಪಡಿಸಲು, ಆಸ್ಪತ್ರೆಯ ಜಾಗವನ್ನು ಹೆಚ್ಚಿಸಿಕೊಳ್ಳುವಲ್ಲಾಗಲೀ, ಅಥವಾ ಅಗತ್ಯವಾದ ಪಿಪಿಇ ಅಥವಾ ಸಾಕಷ್ಟು ಪರೀಕ್ಷಾ ಕೇಂದ್ರಗಳನ್ನು ಒದಗಿಸುವಲ್ಲಿ ಲಾಕ್ಡೌನ್ ಅವಧಿಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಸರಿಸುಮಾರು ಎಲ್ಲಾ ರಾಜ್ಯಗಳಲ್ಲೂ, ಪರೀಕ್ಷಾ ಉಪಕರಣಗಳ ತೀವ್ರ ಕೊರತೆ ಇದೆ ಮತ್ತು ನಮ್ಮ ಪಕ್ಷದ ಸಮಿತಿಗಳ ವರದಿಯ ಪ್ರಕಾರ ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳು ಈ ಕೊರತೆಯನ್ನು ದುರ್ಬಳಕೆ ಮಾಡಿಕೊಂಡು ದತ್ತಾಂಶಗಳನ್ನು ಮತ್ತು ವರದಿಗಳನ್ನು ತಿದ್ದಿ ಕೋವಿಡ್ ಸಾವನ್ನು ತೀರ ಕಡಿಮೆ ತೋರಿಸುತ್ತಿವೆ.

ಸಾಕಷ್ಟು ಮತ್ತು ಸರಿಯಾದ ಪರೀಕ್ಷೆ ಮಾಡಿದ್ದೇ ಆದರೆ ಸೋಂಕು ತಗುಲಿರುವ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಈಗ ವರದಿಯಾಗಿರುವುದಕ್ಕಿಂತ ಇನ್ನೂ ಹೆಚ್ಚಾಗುತ್ತವೆ, ಪ್ರಾಯಶಃ ಎರಡು ಪಟ್ಟು ಆಗಬಹುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಈಗಿರುವ ಆಸ್ಪತ್ರೆ ಸೌಲಭ್ಯಗಳು ಗಂಭೀರ ಪ್ರಕರಣಗಳನ್ನು ಎದುರಿಸಲು ಬೇಕಾದ ಕನಿಷ್ಠ ವೆಂಟಿಲೇಟರುಗಳನ್ನೂ ಹೊಂದಿಲ್ಲ. ಉದಾಹರಣೆಗೆ, ಬಿಜೆಪಿಯ ಮಾದರಿ ರಾಜ್ಯವಾದ ಗುಜರಾತಿನಲ್ಲಿ, ರಾಜಧಾನಿಯಾದ ಅಹಮದಾಬಾದಿನಲ್ಲಿ ಕೇವಲ 180 ವೆಂಟಿಲೇಟರುಗಳು ಮಾತ್ರ ಲಭ್ಯ ಇವೆ. ಇಡೀ ರಾಜ್ಯದಲ್ಲಿ, ಕೇವಲ 18 ಪರೀಕ್ಷಾ ಕೇಂದ್ರಗಳು ಮಾತ್ರ ಇವೆ. ಬಿಹಾರದಲ್ಲಿ, ಕೇವಲ 8 ಪರಿಕ್ಷಾ ಕೇಂದ್ರಗಳಿವೆ ಮತ್ತು ಇಡೀ ರಾಜ್ಯದಲ್ಲಿ ಕೇವಲ 50 ವೆಂಟಿಲೇಟರುಗಳಿವೆ. ಮಧ್ಯಪ್ರದೇಶದಲ್ಲಿ ಕೇವಲ 20 ಪರೀಕ್ಷಾ ಕೇಂದ್ರಗಳಿವೆ. ಐಸಿಯು ಮತ್ತು ವೆಂಟಿಲೇಟರುಗಳನ್ನು ಹೊಂದಿರುವ ನಿಗದಿತ ಕೋವಿಡ್ ಆಸ್ಪತ್ರೆಗಳು ಇಡೀ ರಾಜ್ಯದಲ್ಲಿ ಕೇವಲ 25 ಇವೆ, ಅವುಗಳಲ್ಲಿ ಭೋಪಾಲ್ ಹಾಗೂ ಇಂದೋರನಲ್ಲೇ ಪ್ರತಿಯೊಂದರಲ್ಲೂ ನಾಲ್ಕು ಇವೆ. ಅಸ್ಸಾಮಿನಲ್ಲಿ, 34 ಜಿಲ್ಲೆಗಳಲ್ಲಿ, 17 ಜಿಲ್ಲೆಗಳಲ್ಲಿ ಐಸಿಯ ಅಥವಾ ವೆಂಟಿಲೇಟರುಗಳು ಇರುವ ಆಸ್ಪತ್ರೆ ಹಾಸಿಗೆಗಳಿಲ್ಲ. ಇಡೀ ತ್ರಿಪುರಾ ರಾಜ್ಯದಲ್ಲಿ ಕೇವಲ ಒಂದು ಪರೀಕ್ಷಾ ಕೇಂದ್ರವಿದೆ.

ಇವು ಬಿಜೆಪಿ ಆಡಳಿತ ಇರುವ ರಾಜ್ಯಗಳ ಪರಿಸ್ಥಿತಿ. ಕೇರಳವನ್ನು ಹೊರತುಪಡಿಸಿದರೆ, ಇನ್ನುಳಿದ ಎಲ್ಲಾ ರಾಜ್ಯಗಳಲ್ಲಿಯೂ, ಆರೋಗ್ಯ ಸೌಲಭ್ಯಗಳು ಕಳಪೆಯಾಗಿವೆ, ಮತ್ತೆ ಕೆಲವು ರಾಜ್ಯಗಳಲ್ಲಿ ತೀರ ಕಳಪೆ.

ವಲಸೆ ಕಾರ್ಮಿಕರು: ವಲಸೆ ಕಾರ್ಮಿಕರ ನೋಂದಾವಣೆ ಆಗಿಲ್ಲ ಮತ್ತು ಅವರ ಸಂಖ್ಯೆಯ ಬಗ್ಗೆ ನಿರ್ದಿಷ್ಟ ದತ್ತಾಂಶಗಳು ಇಲ್ಲ ಎಂದು ಎಲ್ಲಾ ರಾಜ್ಯಗಳು ವರದಿ ಮಾಡಿದ್ದವು. ಈಗ ಮಾತ್ರ, ಈ ಬಿಕ್ಕಟ್ಟು ಮತ್ತು ವಲಸೆ ಕಾರ್ಮಿಕರ ಸ್ಥಳಾಂತರದ ನಂತರ, ವಿವಿಧ ರಾಜ್ಯಗಳ ಎಷ್ಟು ಕಾರ್ಮಿಕರು ತಮ್ಮ ರಾಜ್ಯಗಳಿಂದ ಹಿಂತಿರುಗುತ್ತಿದ್ದಾರೆ ಎಂಬ ಹೊಸ ಮಾಹಿತಿಯನ್ನು ಹಲವಾರು ರಾಜ್ಯಗಳು ವರದಿ ಮಾಡಿವೆ. ಅವರು ಹೊಟ್ಟೆಪಾಡಿಗಾಗಿ ಎಲ್ಲಿಗೆ ಹೋಗಿದ್ದಾರೋ ಆ ರಾಜ್ಯಗಳಲ್ಲಿ ಲಾಕ್ಡೌನಿನ ಮಾನಸಿಕ ಆಘಾತಕ್ಕಿಂತ ಮುಂಚೆ ವಲಸೆ ಕಾರ್ಮಿಕರ ಘೋರ ಶೋಚನೀಯ ಸ್ಥಿತಿ, ಅವರ ಕೆಲಸದ ಮತ್ತು ಬದುಕುವ ಪರಿಸ್ಥಿತಿಯನ್ನು ಎಲ್ಲಾ ವರದಿಗಳು ಪ್ರಸ್ತಾಪಿಸಿವೆ.

ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯಿದೆ 1979 ನ್ನು ನಿರಂತರವಾಗಿ ಜಾರಿ ಮಾಡದೆ ಇದ್ದ ಕಾರಣದಿಂದ ಎಂತಹ ಸನ್ನಿವೇಶ ಉದ್ಭವವಾಗಿದೆ ಎಂದರೆ ಯಾವುದೇ ಸಂಸ್ಥೆಯು, ರಾಜ್ಯ ಸರ್ಕಾರವಾಗಲೀ ಅಥವಾ ಸಾರ್ವಜನಿಕ ಸಂಸ್ಥೆಗಳಾಗಲೀ ವಲಸೆ ಕಾರ್ಮಿಕರ ದಾಖಲೆಯನ್ನು ಇಟ್ಟಿಲ್ಲ. ಕಾರ್ಮಿಕ ಸಂಘಗಳೂ ಕೂಡ ಇಟ್ಟಿಲ್ಲ. ನಮ್ಮ ಪರಿಹಾರ ಕಾರ್ಯಗಳು ಅವರ ಒಂದು ವಿಭಾಗವನ್ನು ಸ್ವಲ್ಪ ಮಟ್ಟಿಗೆ ತಲುಪಲು ಸಹಾಯಕವಾಗಿವೆ.

ಆದರೆ ಅದೇ ಸಮಯದಲ್ಲಿ, ಅವರ ಸಾಮರ್ಥ್ಯ ಅಥವಾ ಅಂತಃಶಕ್ತಿಯನ್ನು ನಾವು ಗಮನಿಸಲೇ ಬೇಕು. ಅವರು ಅನೌಪಚಾರಿಕ ವಲಯದವರು ಮಾತ್ರವಲ್ಲ, ಅವರ ಗಣನೀಯ ವಿಭಾಗದವರು ಸಂಘಟಿತ ವಲಯದಲ್ಲಿ ಕೂಡ ಇದ್ದಾರೆ. ವಲಸೆ ಕಾರ್ಮಿಕರು ಎಲ್ಲಾ ಅಡೆತಡೆಗಳನ್ನು ಎದುರಿಸುತ್ತಲೇ, ತಮ್ಮ ಊರುಗಳತ್ತ ಈಗಲೂ ಕೂಡ ನಡೆದುಕೊಂಡು ಹೋಗುತ್ತಿರುವ ರೀತಿಯು ಒಂದು ಸಂಘಟಿತವಾದದ್ದಲ್ಲದೇ ಇದ್ದಾಗ್ಯೂ ಒಂದು ಮೌನ ಬಂಡಾಯವನ್ನು ಪ್ರತಿಬಿಂಬಿಸುತ್ತದೆ. ಇದು ಸಂಬಂಧಪಟ್ಟ ಎಲ್ಲರ ಗಮನವನ್ನು ಸೆಳೆಯಲು ಸಾಧ್ಯವಾಯಿತು, ಮುಖ್ಯವಾಹಿನಿ ಮಾಧ್ಯಮದವರು ಕೂಡ ಅದನ್ನು ಕಡೆಗಣಿಸಲಾಗಲಿಲ್ಲ. ಇವತ್ತಿನ ಸನ್ನಿವೇಶದಲ್ಲಿ, ಅವರು ದೇಶದ ಉತ್ಪಾದನಾ ಶಕ್ತಿಯ ನಿರ್ಣಾಯಕ ವಿಭಾಗವನ್ನು ಪ್ರತಿನಿಧಿಸುತ್ತಾರೆ.

ಕೇರಳ ರಾಜ್ಯದಲ್ಲಿ ಮಾತ್ರವೇ ಸಿಐಟಿಯು ಕಾಳಜಿ ವಹಿಸಿ ವಲಸೆ ಕಾರ್ಮಿಕರನ್ನು ಕಾರ್ಮಿಕ ಸಂಘಗಳಿಗೆ ಸೇರುವಂತೆ ಪ್ರೇರೇಪಿಸಿತು, ಅವರನ್ನು ನೋಂದಾಯಿಸಿತು, ಅವರಿಗೆ ರೇಷನ್ ಕಾರ್ಡುಗಳನ್ನು ಮತ್ತಿತರ ಸೌಲಭ್ಯಗಳನ್ನು ಒದಗಿಸಿತು. ಬಹುತೇಕ ರಾಜ್ಯಗಳು ವರದಿ ಮಾಡಿದಂತೆ ವಲಸೆ ಕಾರ್ಮಿಕರ ಪುನರಾಗಮನಕ್ಕೆ ರಾಜ್ಯ ಸರ್ಕಾರಗಳಿಂದ ಪ್ರತಿರೋಧವಿದ್ದು, ಅವರನ್ನು ಹಿಂದಕ್ಕೆ ಕರೆತರಲು ಆ ರಾಜ್ಯಗಳಿಗೆ ಮನಸ್ಸಿಲ್ಲ. ಅಂತಹ ವರದಿಗಳು ಪಶ್ಚಿಮ ಬಂಗಾಳ, ಬಿಹಾರ್, ಮುಂತಾದ ರಾಜ್ಯಗಳಿಂದ ಬಂದಿವೆ. ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರನ್ನು ಸ್ಥಳಾಂತರ ಮಾಡಲು ಯಾವುದೇ ವ್ಯವಸ್ಥೆಯನ್ನು ಮಾಡದಿರುವಾಗ, ಅದಕ್ಕೆ ವ್ಯತಿರಿಕ್ತವಾಗಿ,  ಗುಜರಾತ್ ಮತ್ತು ದೇಶದ ಬೇರೆ ಕಡೆಗಳ ಶ್ರೀಮಂತ ಯಾತ್ರಾರ್ಥಿಗಳನ್ನು ಲಾಕ್ಡೌನಿನ ಆರಂಭದ ದಿನಗಳಲ್ಲಿ ಸರ್ಕಾರದ ಖರ್ಚಿನಲ್ಲಿ ಐಷಾರಾಮಿ ವಾಹನಗಳಲ್ಲಿ ಸ್ಥಳಾಂತರ ಮಾಡಿದ ವರದಿಗಳು ಇವೆ. ಆ ಕಾರ್ಮಿಕರನ್ನು ಸ್ಥಳಾಂತರ ಮಾಡಲು ಆದ ವೆಚ್ಚದ 85%ನ್ನು ತಾನು ಭರಿಸಿರುವುದಾಗಿ ಕೇಂದ್ರ ಸರ್ಕಾರವು ಸತ್ಯವಲ್ಲದ ಹೇಳಿಕೆಯನ್ನು ನೀಡಿದೆ. ಅಂತಿಮವಾಗಿ, ಆ ಕಾರ್ಮಿಕರನ್ನು ಸ್ಥಳಾಂತರ ಮಾಡಲು ರಾಜ್ಯ ಸರ್ಕಾರಗಳು ರೈಲ್ವೇ ಇಲಾಖೆಗೆ ಶುಲ್ಕ ಸಂದಾಯ ಮಾಡಿವೆ, ಹೆಚ್ಚಿನ ರಾಜ್ಯ ಸರ್ಕಾರಗಳು ಅದನ್ನು ಕಾರ್ಮಿಕರಿಂದ ವಸೂಲಿ ಮಾಡಿವೆ.

ಇಲ್ಲಿ ಕೆಲವು ಗಂಭೀರ ವಿಷಯಗಳು ಉದ್ಭವಿಸಿವೆ: (ಅ) ವಲಸೆ ಕಾರ್ಮಿಕರ ವಾಪಸಾತಿಗೆ ಒಂದು ಸಮಾನ ನೀತಿ ಇಲ್ಲ, (ಆ) ಅವರು ಕೆಲಸ ಮಾಡುತ್ತಿದ್ದ ರಾಜ್ಯಗಳಿಂದ ತಮ್ಮ ಊರುಗಳಿಗೆ ಹಿಂತಿರುಗುವಾಗ ರೋಗ ಪತ್ತೆಗೆ ಪರೀಕ್ಷೆ ಮಾಡಲಿಲ್ಲ, (ಇ) ಹಿಂತಿರುಗುವಾಗ ದೈಹಿಕ ಅಂತರ ಕಾಪಾಡಿಕೊಳ್ಳಲಿಲ್ಲ, (ಈ) ಅವರು ಹಿಂತಿರುಗಿದ ರಾಜ್ಯಗಳಲ್ಲಿ ಏಕಾಂತವಾಸ(ಕ್ವಾರಂಟೈನ್) ಕೇಂದ್ರಗಳಿರಲಿಲ್ಲ ಮತ್ತು (ಉ) ಉತ್ತರ ಪ್ರದೇಶ ಮತ್ತು ಬಿಹಾರ್‌ನಂತಹ ರಾಜ್ಯಗಳಲ್ಲಿ ವಾಸಯೋಗ್ಯವಲ್ಲದ ಕೇಂದ್ರಗಳಿಂದ ಕಾರ್ಮಿಕರು ತಪ್ಪಿಸಿಕೊಂಡು ಮಹಾಮಾರಿಯ ಹರಡುವಿಕೆಯ ಅಪಾಯ ಉಂಟಾಗಿದೆ.

ಇದರ ಪರಿಣಾಮವಾಗಿ, ಅವರಲ್ಲಿ ಮಹಾಮಾರಿಯ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ತಮ್ಮ ಊರುಗಳಿಗೆ ಮತ್ತು ಮನೆಗಳಿಗೆ ಹಿಂತಿರುಗಿದಾಗ ಸಾಮಾಜಿಕ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ.

ಆಹಾರ ಭದ್ರತೆ: ಹಲವಾರು ರಾಜ್ಯಗಳಲ್ಲಿ ರೇಷನ್ ಕಾರ್ಡು/ಬಿಪಿಎಲ್/ಅಂತ್ಯೋದಯ ಮುಂತಾದವುಗಳ ಕೊರತೆಯಿಂದಾಗಿ ಆಹಾರ ಧಾನ್ಯಗಳನ್ನು ವಿತರಿಸುವ ಯೋಜನೆಗಳಲ್ಲಿ ಭಾರಿ ಸಂಖ್ಯೆಯ ಜನರನ್ನು ಕೈಬಿಡಲಾಗಿದೆ ಎಂಬ ವರದಿಗಳಿವೆ.

ಅದಕ್ಕೆ ಸಂಬಂಧಪಟ್ಟ ವಿಷಯಗಳಾದ ಸವಲತ್ತುಗಳ ಅಸಮರ್ಪಕ ಪೂರೈಕೆ ಮತ್ತು ಕಳಪೆ ಪಡಿತರ ಪದ್ಧತಿಗಳನ್ನೂ ಒಳಗೊಂಡಂತೆ ಇಂತಹ ಗಂಭೀರ ವಿಷಯಗಳನ್ನು ನಾವು ಕೈಗೆತ್ತಿಕೊಳ್ಳಬೇಕಾಗಿದೆ.

ಈ ಬಿಕ್ಕಟ್ಟಿನ ಅವಧಿಯಲ್ಲಿ, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ವಿರುದ್ಧ ಈಗಾಗಲೇ ಇರುವ ಸಾಮಾಜಿಕ ಅಸಮಾನತೆಗಳು ತೀವ್ರಗೊಂಡಿವೆ. ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ವಿಧಿವಿಧಾನಗಳು ಮತ್ತು ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಮಹಿಳೆಯರು ಅತ್ಯಂತ ಹೆಚ್ಚು ಸಂಕಟಪಡುತ್ತಿದ್ದಾರೆ, ಮುಖ್ಯವಾಗಿ ಬಡ ಮಹಿಳೆಯರು ತೀವ್ರ ಅಭಾವದ ಈ ಅವಧಿಯಲ್ಲಿ ಕುಟುಂಬದ ಆರೈಕೆಯ ಹೊರೆಯನ್ನು ಹೊರಬೇಕಾಗಿದೆ.

ಜಮ್ಮು ಮತ್ತು ಕಾಶ್ಮೀರ:

ಕಳೆದ ಅಗಸ್ತಿನಿಂದ ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಲಾಕ್ ಡೌನ್ ಇತ್ತು. ಅದರ ಮೇಲೆ (ಕೋರೋನಾ ಪ್ರಯುಕ್ತದ) ರಾಷ್ಟ್ರೀಯ ಲಾಕ್ ಡೌನ್ ಬಂತು. ಮಾಜಿ ಮುಖ್ಯಮಂತ್ರಿ ಶ್ರೀಮತಿ ಮೆಹಬೂಬ ಮುಫ್ತಿ ಸಹಿತ ನೂರಾರು ಜನ ಇನ್ನೂ ಬಂಧನದಲ್ಲೇ ಇದ್ದಾರೆ. ನಮ್ಮ ಕೇಂದ್ರ ಸಮಿತಿ ಸದಸ್ಯರಾದ ಮಹಮ್ಮದ್ ಯೂಸುಫ್ ತರಿಗಮಿ ಮತ್ತು ಇತರ ಹಲವರು ಗೃಹ ಬಂಧನದಲ್ಲಿದ್ದಾರೆ.

ರಾಷ್ಟ್ರೀಯ ಲಾಕ್ ಡೌನ್ ಹೇರಿದ ಮೇಲೂ ಕೋವಿಡ್ ಪೀಡಿತರ ಸಂಖ್ಯೆ ಏರುತ್ತಲೇ ಇದೆ. ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳು ಶೋಚನೀಯ ಸ್ಥಿತಿಯಲ್ಲಿದ್ದು ಪೀಡಿತ ಜನರಿಗೆ ಆರೋಗ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಈಗಾಗಲೇ ದುಸ್ಥಿತಿಗಿಳಿದಿರುವ ಜೀವನ ಈಗ ಯಾತನಾಮಯವಾಗಿದೆ.

ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ನೇರವಾಗಿ ನಡೆಸುತ್ತಿರುವ  ಕೇಂದ್ರ ಸರ್ಕಾರದ ಗೃಹ ಮಂತ್ರಾಲಯ ಇಂತಹ ಗಂಭೀರ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವ ಬದಲು ಆರ್.ಎಸ್.ಎಸ್./ಬಿಜೆಪಿ ರಾಜಕೀಯ ಕಾರ್ಯಸೂಚಿಯನ್ನು ಮುಂದಕ್ಕೊಯ್ಯುವ ಹುನ್ನಾರದಲ್ಲಿದೆ. ಈ ಪ್ರದೇಶದ ನಿವಾಸಿ ಎಂಬುದರ ನಿರೂಪಣೆಯನ್ನೇ ಈಗ ಬದಲಾಯಿಸಿರುವುದರಿಂದ ಹೊರಗಿನವರು ನಿವಾಸಿಯೆಂಬ ಸ್ಥಾನಮಾನ ಹೊಂದಲು, ಅಂದರೆ ಇಲ್ಲಿ ಸರ್ಕಾರಿ ನೌಕರಿ ಹೊಂದಲು ಮತ್ತು ಜಮೀನು ಖರೀದಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ಕಣಿವೆಯಲ್ಲಿನ ಜನಸಂಖ್ಯಾ ಸ್ವರೂಪವನ್ನೇ ಬದಲಾಯಿಸುವ ಆರ್.ಎಸ್.ಎಸ್. ಅಜೆಂಡಾವನ್ನು ಸಾಧಿಸುವ ಕೆಲಸವನ್ನು ಅದು ಮಾಡುತ್ತಿದೆ. ಇದರ ಜೊತೆ ಜೊತೆಗೇ ಜನರ ಪ್ರಜಾಸತ್ತಾತ್ಮಕ ಮತ್ತು ನಾಗರಿಕ ಹಕ್ಕುಗಳನ್ನು ದಮನಿಸಲಾಗುತ್ತಿದೆ. ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಎಲ್ಲರನ್ನೂ ಭಯೋತ್ಪಾದಕರೆಂಬ ಹಣೆಪಟ್ಟಿ ತೊಡಿಸಿ ಕರಾಳ ಕಾಯ್ದೆಯ ಅಂಶಗಳ ಅಡಿಯಲ್ಲಿ ಬಂಧಿಸಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ “ರಾಜ್ಯ” ಸ್ಥಾನಮಾನವನ್ನು ಮತ್ತು ಅದರ ಜೊತೆಗೆ ಕಲಮು 370ನ್ನು ಮತ್ತೆ ನೆಲೆಗೊಳಿಸಬೇಕು. ಇದು ಆ ಪ್ರದೇಶವನ್ನು ಭಾರತಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ನೀಡಿರುವ ವಾಗ್ಧಾನ, ಅದರ ಜೊತೆಗೆ ನೀಡಿದ್ದ ಎಲ್ಲ  ವಚನಗಳನ್ನು ಭಾರತ ಸರ್ಕಾರ ಜಾರಿಗೊಳಿಸಬೇಕು. ಈ ವಿಷಯವೀಗ ಸುಪ್ರೀಂ ಕೋರ್ಟಿನ ಮುಂದಿದೆ. ಎಂಟು ತಿಂಗಳಿಂದಲೂ ಸುಪ್ರೀಂ ಕೋರ್ಟು ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ. 2019 ರ ಅಗಸ್ತಿನಿಂದ ಬಂಧನದಲ್ಲಿರುವ ಎಲ್ಲರನ್ನೂ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲ ತರಹದ ಸಂಪರ್ಕ/ ಸಂವಹನದ ವ್ಯವಸ್ಥೆಗಳನ್ನು ಮತ್ತೆ ಸ್ಥಾಪಿಸಿ ಜನರ ಮುಕ್ತ ಚಲನೆಗೆ ಅನುಕೂಲ ಮಾಡಿಕೊಡಬೇಕು. ಇದು ಕೋವಿಡ್ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಬಾಧಿತ ಜನಗಳಿಗೆ ಪರಿಹಾರ ಒದಗಿಸಲು ನೆರವಾಗುತ್ತದೆ.

ಉತ್ತೇಜನಾ ಪ್ಯಾಕೇಜ್:

20 ಲಕ್ಷ ಕೋಟಿ ರೂಪಾಯಿಗಳ ಉತ್ತೇಜನಾ ಪ್ಯಾಕೇಜ್: ಪ್ರಧಾನ ಮಂತ್ರಿಗಳು ದೊಡ್ಡ ರೀತಿಯಲ್ಲಿ ಘೋಷಣೆ ಮಾಡಿ, ನಂತರ ಹಣಕಾಸು ಮಂತ್ರಿಗಳು ಐದು ಕಂತುಗಳಲ್ಲಿ ಪ್ರಕಟಿಸಿದ 20 ಲಕ್ಷ ಕೋಟಿ ರೂಪಾಯಿಗಳ ಉತ್ತೇಜನಾ ಪ್ಯಾಕೇಜ್ ನ ವಿವರಗಳನ್ನು ನೀಡಿದರು.

ಸ್ವಾವಲಂಬನೆಯಲ್ಲ ಸ್ವಯಂ-ಅಡಿಯಾಳುತನ: ಈ ಉತ್ತೇಜನಾ ಪ್ಯಾಕೇಜನ್ನು ಭಾರತದ ಸ್ವಾವಲಂಬನೆಯ ಹೆಸರಿನಲ್ಲಿ ಮುಂದಿಡಲಾಗಿದೆ.

ಆದರೆ ಮೋದಿಯವರ ಈ ಪ್ಯಾಕೇಜ್ ಸ್ವಾವಲಂಬನೆಯನ್ನಂತೂ ಬಲಪಡಿಸುವುದಿಲ್ಲ, ಬದಲು ಭಾರತವನ್ನು ಹೆಚ್ಚು ಸ್ವಯಂ-ಅಡಿಯಾಳಾಗಿ ಮಾಡುತ್ತದೆ. ಇದರಲ್ಲಿನ ಪ್ರಸ್ತಾಪಗಳು ವಿದೇಶಿ ಮತ್ತು ಭಾರತದ ಕಂಪನಿಗಳು ತಮ್ಮ ಲಾಭಗಳನ್ನು ಗರಿಷ್ಠ ಪಡಿಸಿಕೊಳ್ಳಲು ಅನುವು ಮಾಡಿಕೊಡುವಂತಹವು. ಈ ಪ್ರಕ್ರಿಯೆಯಲ್ಲಿ ನಾವು ಕಳೆದ ಆರು ವರ್ಷಗಳಲ್ಲಿ ಕಂಡಂತಹ ಬಂಟ ಬಂಡವಾಳಶಾಹಿಯ ಅಸಹ್ಯಕರ ಮಟ್ಟಗಳನ್ನು ಬಲಪಡಿಸಲು ಇನ್ನಷ್ಟು ದಾರಿಗಳನ್ನು ಅವು ಹುಟ್ಟಿಹಾಕುತ್ತವೆ. ಈ ಪ್ರಸ್ತಾಪಗಳು ಭಾರತದ ರಾಷ್ಟ್ರೀಯ ಆಸ್ತಿಗಳ ಮಹಾಲೂಟಿಯಲ್ಲದೆ ಬೇರೇನೂ ಅಲ್ಲ. ಇವು ತಾವಾಗಿಯೇ ದೊಡ್ಡ-ದೊಡ್ಡ ಭ್ರಷ್ಟಾಚಾರದ ಹಗರಣಗಳಿಗೆ ದಾರಿಗಳನ್ನು ಸೃಷ್ಟಿಸುತ್ತವೆ, ಇಂತಹ ಹಗರಣಗಳು ಖಂಡಿತವಾಗಿಯೂ ಹೆಚ್ಚುತ್ತವೆ.

ಅರ್ಥ ವ್ಯಾಖ್ಯಾನದ ಪ್ರಕಾರ ಉತ್ತೇಜನಾ ಪ್ಯಾಕೇಜ್ ಎಂದರೆ ಬಡ್ಜೆಟ್ ನಲ್ಲಿ ಅನುಮೋದನೆ ಪಡೆದದ್ದನ್ನು ಹೊರತು ಪಡಿಸಿ ಹೆಚ್ಚಿನ ಖರ್ಚನ್ನು ಸರ್ಕಾರ ಈ ಹಣಕಾಸು ವರ್ಷದಲ್ಲಿ ಮಾಡುತ್ತದೆ. ಆದರೆ ಈ ಪ್ಯಾಕೇಜಿನಲ್ಲಿರುವುದು ಈಗಾಗಲೇ ಬಡ್ಜೆಟ್ಟಿನಲ್ಲಿ ಅನುಮೋದನೆಗೊಂಡಿರುವ ಖರ್ಚುಗಳು. ಈಗಾಗಲೇ ಪ್ರಕಟಿಸಿರುವ ಸ್ಕೀಮುಗಳಿಗೆ ಹೊಸ ಹೊದಿಕೆ ತೊಡಿಸಲಾಗಿದೆ. ಸರ್ಕಾರ ನೇರವಾಗಿ ಖರ್ಚು ಮಾಡುವ ಬದಲು ಬ್ಯಾಂಕುಗಳು ಮತ್ತು ಹಣಕಾಸು ವ್ಯವಸ್ಥೆಯ ಮೂಲಕ ಸಾಲ ಕೊಡಿಸುವ ಅಂಶಗಳ ಮೇಲೆಯೇ ಒತ್ತು ನೀಡಲಾಗಿದೆ.

ಈ ಪ್ಯಾಕೇಜಿನಲ್ಲಿ ಸರ್ಕಾರಕ್ಕೆ ಹೆಚ್ಚುವರಿ ಖರ್ಚಿನ ಬಾಬ್ತು 2 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ. ಅಂದರೆ ನಮ್ಮ ದೇಶದ ಜಿಡಿಪಿಯ  ಶೇ. 1 ಕ್ಕಿಂತಲೂ ಕಡಿಮೆ. ಅರ್ಥಶಾಸ್ತ್ರಜ್ನರು ಈ ಖರ್ಚನ್ನು ಜಿಡಿಪಿಯ  ಶೇ. 0.8 ರಿಂದ ಶೇ. 1.5 ರವರೆಗೆ ಅಂದಾಜು ಮಾಡಿದ್ದಾರೆ. ಇದು ಇಂದಿನ ಪರಿಸ್ಥಿತಿಯಲ್ಲಿ  ಯಾವುದೇ ರೀತಿಯ ಉತ್ತೇಜನೆಯಾಗುವುದಿಲ್ಲ.

ಈ ಸಾಲಿನ ಬಡ್ಜೆಟ್‌ನಲ್ಲಿ ಖರ್ಚಿಗೆ ಸಂಸತ್ತು ಅನುಮೋದನೆ ನೀಡಿರುವ ಮೊತ್ತ 30,42,230 ಕೋಟಿ ರೂಪಾಯಿಗಳು.  ಉತ್ತೇಜನೆ ಎಂದರೆ ಇದಕ್ಕಿಂತ ಹೆಚ್ಚಿನ ಖರ್ಚು. ಮೇಲೆ ಕಾಣಿಸಿದ ಮೊತ್ತದಲ್ಲಿ ಖರ್ಚುಗಳನ್ನು ಮಾಡಲಾಗಿದೆಯೋ ಇಲ್ಲವೋ ಗೊತ್ತಿಲ್ಲ.  ಕೋವಿಡ್ ಮಹಾಮಾರಿ ಬರುವ ಮೊದಲೇ ಸರ್ಕಾರಿ ಕಂದಾಯಗಳಿಗೆ ಹೊಡೆತ ಬಿದ್ದಿತ್ತು. ಲಾಕ್ ಡೌನ್ ಸಮಯದಲ್ಲಿ ಅದು ಇನ್ನೂ ಕಡಿತ ಕಂಡಿರುತ್ತದೆ. ಆದ್ದರಿಂದ ಈ ಹೆಚ್ಚಿನ ಖರ್ಚಿನಲ್ಲಿ ಎಷ್ಟು ನಿಜವಾಗುತ್ತದೆ ಎಂಬುದು ಅನಿಶ್ಚಿತ.  ನಿಷ್ಟುರವಾಗಿ ಹೇಳುವುದಾದರೆ, ಸರ್ಕಾರ ತನ್ನ ಆಯ-ವ್ಯಯಗಳ ಅಂದಾಜಿನ ನಿಖರ ಮಾಹಿತಿಗಳೊಂದಿಗೆ ಉತ್ತೇಜನಾ ವ್ಯಯದಲ್ಲಿ ಎಷ್ಟು ಸಾಧ್ಯವಾಗಬಹುದು ಅಥವ ಸಾಧ್ಯವಾಗದು ಎಂದು ಹೇಳಿಕೆ ನೀಡಬೇಕು.

ಕೃಷಿ: ಕೃಷಿ ಕ್ಷೇತ್ರದ ಯಾತನೆಯನ್ನು ಹೆಚ್ಚಿನ ಸಾರ್ವಜನಿಕ ಹೂಡಿಕೆಯ ಮೂಲಕ ಕಡಿಮೆ ಮಾಡುವ ಬದಲು ಸಾಲ ಬಾಧೆಯಿಂದ ನಲುಗಿ ಹೋಗಿರುವ ರೈತನಿಗೆ ಮತ್ತೆ ಹೆಚ್ಚಿನ ಸಾಲ ನೀಡುವ ಮಾತನಾಡಲಾಗುತ್ತಿದೆ. ಸಾಲದ ಹೊರೆಯಿಂದ ಆತ್ಮಹತ್ಯೆಗೆ ಇಳಿಯುತ್ತಿರುವ ರೈತರು ಮತ್ತೆ  ಹೆಚ್ಚಿನ ಸಾಲ ಪಡೆಯಲು ಹೋಗಲಾರರು.

ಈ ಪ್ಯಾಕೇಜ್  ಶೈತ್ಯಾಗಾರಗಳು, ಮಾರಾಟ, ಎಲ್ಲಕ್ಕೂ ಮುಖ್ಯವಾಗಿ ಆವಶ್ಯಕ ಉತ್ಪನ್ನಗಳ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ಕಾಯ್ದೆಯ ತಿದ್ದುಪಡಿ ಇತ್ಯಾದಿಗಳನ್ನು ಜ್ಯಾರಿಗೆ ತರುವ ಮೂಲಕ ರಾಜ್ಯದಿಂದ ರಾಜ್ಯಕ್ಕೆ ಆಹಾರ ಧಾನ್ಯಗಳ ಮುಕ್ತ ಚಲನೆ ಮತ್ತು ಅನಿರ್ಬಂಧಿತ ಬೆಲೆ ನಿಗದಿಗಳನ್ನು ತರಬಯಸುತ್ತದೆ. ಇದರಿಂದಾಗಿ ದೇಶದ ಆಹಾರ ಭಧ್ರತೆಯ ಮೇಲೆ ತೀವ್ರ ತರಹದ ಪ್ರತಿಕೂಲ ಪರಿಣಾಮ ಆಗುತ್ತದೆ. ಬೆಳೆಗಾರ ಮತ್ತು ಗ್ರಾಹಕರಿಬ್ಬರೂ ಲಾಭ ಪಿಪಾಸು ಮಧ್ಯವರ್ತಿಗಳ ಕಪಿಮುಷ್ಟಿಗಳಿಗೆ ಸಿಕ್ಕು ಕೃತ್ರಿಮ ಕೊರತೆ ಮತ್ತು ಅಭಾವ ಸ್ಥಿತಿಗಳ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ರೈತರು ಕನಿಷ್ಠ ಬೆಂಬಲ ಬೆಲೆಯ ಅಲ್ಪ ರಕ್ಷಣೆಯನ್ನೂ ಕಳೆದುಕೊಳ್ಳುತ್ತಾರೆ. ಅಲ್ಲದೆ, ಇದರಿಂದ ಅಲ್ಪ ಸ್ವಲ್ಪ ಇರುವ ಸಾರ್ವಜನಿಕ ವಿತರಣಾ ಪದ್ದತಿಯೂ ನಶಿಸಿ ಹೋಗುತ್ತದೆ. ಮಹತ್ವದ ಸಂಗತಿಯೆಂದರೆ, ಈ ಕ್ರಮಗಳು ಭಾರತದ ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆಗಳು ಬಹುರಾಷ್ಟ್ರೀಯ ಕೃಷಿ ವ್ಯಾಪಾರಿ ಮತ್ತು ದೇಶೀ ಕಾರ್ಪೊರೇಟ್‌ಗಳ ತೆಕ್ಕೆಗೆ ಬೀಳಲು ದಾರಿ ತೆರೆದು ಕೊಡುತ್ತವೆ.  ‘ಗುತ್ತಿಗೆ ವ್ಯವಸಾಯ’ದ ಬಗೆಗೂ ಮಾರ್ಗದರ್ಶಿ ಸೂತ್ರಗಳನ್ನು ಆಗಲೇ ಸೂಚಿಸಲಾಗಿದೆ.

ಹಣಕಾಸು ಮಂತ್ರಿಗಳು ಬಿಡುಗಡೆ ಮಾಡಿರುವ ಅಂಕೆ-ಸಂಖ್ಯೆಗಳ ಪ್ರಕಾರ ಪ್ರತಿ ರೈತನಿಗೆ 2000 ರೂಪಾಯಿಗಳ ಪಿಎಂ-ಕಿಸಾನ್  ಯೋಜನೆಯಡಿ ಬರೀ 18700 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಅರ್ಥವೇನೆಂದರೆ  ಈ ಯೋಜನೆಯಡಿ  ಈ ಮೊದಲು ಪ್ರಕಟಿಸಿರುವಂತರ 14 ಕೋಟಿ ರೈತರನ್ನು ಒಳಗೊಳ್ಳುವ ಬದಲು ಬರೀ 9.35 ಕೋಟಿ ರೈತರಿಗೆ ಮಾತ್ರ ಈ ಹಣವನ್ನು ಒದಗಿಸಲಾಗಿದೆ!!

ಮನರೇಗಾ: ಕಳೆದ ಸಾಲಿನಲ್ಲಿ 8.23 ಕೋಟಿ ಜನರಿಗೆ ಕೆಲಸ ನೀಡಲಾಗಿತ್ತು. 2019-20 ರಲ್ಲಿ 1 ಕೋಟಿಯಷ್ಟು ಹೆಚ್ಚು ಕುಟುಂಬಗಳಿಗೆ ಕನಿಷ್ಠ 100 ದಿನಗಳ ಉದ್ಯೋಗ ನೀಡಬೇಕು. ಇದಕ್ಕೆ ತಗಲುವ ಖರ್ಚು 2,46,000 ಕೋಟಿ ರೂಪಾಯಿಗಳು. ಆದರೆ ತೆಗೆದಿರಿಸಿದ ಹಣ 90,000 ಕೋಟಿ ರೂಪಾಯಿಗಳು ಮಾತ್ರ. ಈ ಪ್ಯಾಕೇಜಿನಲ್ಲಿ ತೆಗೆದಿರಿಸಿರುವ ಹೆಚ್ಚುವರಿ ಹಣ ಬರೀ 40000 ಕೋಟಿ ರೂಪಾಯಿಗಳು. ಇದು ಯೋಜನೆಯ ಅನುಷ್ಟಾನಕ್ಕೆ ಏನೇನೂ ಸಾಲದಾಗುತ್ತವೆ.
ಆಹಾರ ವಿತರಣೆ: ಈ ಸರ್ಕಾರ ಉಚಿತ ಧಾನ್ಯ ವಿತರಣೆಯ ಬಗೆಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತದೆ. ವಾಸ್ತವ ಕೆಳಗಿನಂತಿದೆ:

  • ಭಾರತೀಯ ಆಹಾರ ನಿಗಮ(ಎಫ್‌ಸಿಐ)ದ ಬಳಿ 8.78 ಕೋಟಿ ಟನ್ನುಗಳಷ್ಟು ಆಹಾರ ಧಾನ್ಯಗಳ ಸಂಗ್ರಹವಿದೆ.
  • ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ರಾಜ್ಯಗಳಿಗೆ ತಿಂಗಳಿಗೆ ಸರಾಸರಿ 43 ಲಕ್ಷ ಟನ್ನುಗಳಷ್ಟು ಆಹಾರ ಧಾನ್ಯಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ.
  • ಸರ್ಕಾರ ಹೇಳಿಕೊಂಡಿರುವಂತೆ ಪ್ರತಿಯೊಬ್ಬರಿಗೆ 5 ಕೆ ಜಿ ಆಹಾರ ಧಾನ್ಯ ಪುಕ್ಕಟೆ  ನೀಡುವುದಾದರೆ ಈ ನೀಡಿಕೆ ದುಪ್ಪಟ್ಟು ಆಗಬೇಕಾಗುತ್ತದೆ.
  • ಏಪ್ರಿಲ್ ತಿಂಗಳಿನಲ್ಲಿ ಪ್ರಧಾನ ಮಂತ್ರಿ ಕಲ್ಯಾಣ ಯೋಜನೆಯಡಿ ಹಂಚಿದ ಹೆಚ್ಚುವರಿ ಆಹಾರ ಧಾನ್ಯ ಕೇವಲ 26 ಲಕ್ಷ ಟನ್ನುಗಳು ಮತ್ತು ಮೇ ತಿಂಗಳಿನಲ್ಲಿ ಇದು ಕೇವಲ 29 ಲಕ್ಷ ಟನ್ನುಗಳು.

ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು: ಉತ್ತೇಜನಾ ಪ್ಯಾಕೇಜಿನ ಪ್ರಕಾರ ಮಧ್ಯಮ, ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ ಒಟ್ಟು 3.5 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ಸಾಲವನ್ನು ಲಭ್ಯ ಮಾಡಬೇಕು.  ಕೇಂದ್ರದ ಮಂತ್ರಿಗಳಾದ ನಿತಿನ್ ಗಡ್ಕರಿಯವರು ಸಾರ್ವಜನಿಕವಾಗಿ ಹೇಳಿರುವ ಪ್ರಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಿಂದ ಇವುಗಳಿಗೆ 5 ಲಕ್ಷ  ಕೋಟಿ ರೂಪಾಯಿಗಳು ಪಾವತಿಗೆ ಬಾಕಿಯಿವೆ. ಪ್ಯಾಕೇಜಿನಲ್ಲಿ ಇದನ್ನು ಹಿಂತಿರಿಗಿಸುವ ಮಾತೇ ಇಲ್ಲ.

ಅಲ್ಲದೆ ಈ ಪ್ಯಾಕೇಜಿನಲ್ಲಿ ಘೋಷಿಸಿರುವ ಮೊತ್ತದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ಈ ಮೊದಲು ಪ್ರಕಟಿಸಿದ 2010 ರಲ್ಲಿ ಇದ್ದುದಕ್ಕಿಂತ ಕಡಿಮೆ ವೆಚ್ಚದ 5.2 ಲಕ್ಷ ಕೋಟಿ ರೂಪಾಯಿಗಳ ಸಾಲಗಳೂ  ಸೇರಿವೆ. ಈ ಯೋಜನೆಯಡಿ ಯಾರೂ ಸಾಲ ಪಡೆಯಲು ಹೋಗಿಲ್ಲ. ಭಾರತೀಯ ರಿಜರ್ವ್ ಬ್ಯಾಂಕಿನ ಖಾತೆಯಲ್ಲಿ ಮಾರ್ಚ್ 27 ರಂದು 3 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಮೊತ್ತ ಏಪ್ರಿಲ್ ಕೊನೆಯಲ್ಲಿ 8.4ಲಕ್ಷ ಕೋಟಿ ರೂಪಾಯಿಗಳಿಗೆ ಏರಿತ್ತು. ಆದ್ದರಿಂದ ಮಧ್ಯಮ, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಸಾಲಗಳನ್ನು ಲಭ್ಯಗೊಳಿಸುವದರಿಂದೇನೂ ಯಾವುದೇ ಆರ್ಥಿಕ ಪುನಶ್ಚೇತನ ಆಗುವುದಿಲ್ಲ.

ರಾಜ್ಯಗಳ ಮೇಲೆ ದಾಳಿಗಳು:

ರಾಜ್ಯಗಳು ಕೋವಿಡ್ ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿವೆ. ಅವುಗಳಿಗೆ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ವರ್ಗಾಯಿಸುವ ಬದಲು ನ್ಯಾಯಯುತವಾಗಿ ಸಲ್ಲಬೇಕಾದ ಸಂಪನ್ಮೂಲಗಳನ್ನೂ ವಿತರಿಸದೆ ಸತಾಯಿಸುತ್ತಿದೆ. ಉದಾಹರಣೆಗೆ ಜಿ.ಎಸ್.ಟಿ ಯಲ್ಲಿ ರಾಜ್ಯಗಳ ಪಾಲನ್ನು ಕೊಡುವ ಆಶ್ವಾಸನೆಯಿಲ್ಲ. ರಾಜ್ಯಗಳು ತಮ್ಮ ರಾಜ್ಯಗಳ ಒಟ್ಟುತ್ಪಾದನೆ(ಜಿಡಿಪಿ)ಯ ಶೇ 3 ರಷ್ಟು ಮೊತ್ತದ ಸಾಲಗಳನ್ನು ಎತ್ತಲು ಅರ್ಹವಾಗುತ್ತವೆ. ಇದನ್ನು ಈಗ ಶೇ 5 ಕ್ಕೆ ಏರಿಸಲಾಗಿದೆ.

ಆದರೆ ಈ ಏರಿಕೆಗೆ ಅರ್ಥವಿಲ್ಲ, ಏಕೆಂದರೆ ಇವನ್ನು ವಾಣಿಜ್ಯ ದರಗಳಲ್ಲಿ ಪಡೆಯಬೇಕಾಗುತ್ತದೆ. ಅಂದರೆ ಹೆಚ್ಚಿನ ಬಡ್ಡಿದರಗಳು ರಾಜ್ಯ ಸರ್ಕಾರಗಳನ್ನು ಹೆಚ್ಚಿನ ಸಾಲಭಾರದತ್ತ ತಳ್ಳುತ್ತವೆ. ಭಾರತೀಯ ರಿಜರ್ವ್ ಬ್ಯಾಂಕು ರಾಜ್ಯಗಳು ನೀಡುವ ಬಾಂಡುಗಳನ್ನು ಘೋಷಿತ ರೆಪೊ ದರದಲ್ಲಿ ಖರೀದಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಪ್ಯಾಕೇಜಿನಲ್ಲಿ ಇದರ ಉಲ್ಲೇಖವಿಲ್ಲ. ಇದಕ್ಕೂ ಕೆಟ್ಟದ್ದೇನೆಂದರೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಲೇಬೆಕಾಗಿರುವ  ‘ವಿಪತ್ತು ಪರಿಹಾರ ನಿಧಿ’ಯನ್ನೂ ಈ ಪ್ಯಾಕೇಜಿನ ಲೆಕ್ಕಕ್ಕೆ ಸೇರಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ಹೆಸರಿನಲ್ಲಿ ಕೋವಿಡ್ ಮಹಾಮಾರಿಯ ವಿರುದ್ದದ ಹೋರಾಟಕ್ಕೆ ಸಂಗ್ರಹಿಸಿದ ಸಾವಿರಾರು ಕೋಟಿ ರೂಪಾಯಿಗಳನ್ನು ಕೂಡಲೇ ಹಣವನ್ನು ರಾಜ್ಯಗಳಿಗೆ ವರ್ಗಾಯಿಸ ಬೇಕು.

ಈ ಪ್ಯಾಕೇಜಿನ ಇನ್ನೂ ಹಲವು ಇಂತಹ ಭಾಗಗಳನ್ನು ಈ ರೀತಿಯ ವಿಶ್ಲೇಷಣೆಗೆ ಒಳಪಡಿಸಿ ಇವುಗಳಲ್ಲಿ ಹೆಚ್ಚಿನವು ದೀರ್ಘ ಕಾಲದ ಕ್ರಮಗಳು ಮತ್ತು ತಕ್ಷಣವೇ ಆರ್ಥಿಕಕ್ಕೆ ಉತ್ತೇಜನೆ ನೀಡುವ ಕ್ರಮಗಳೂ ಅಲ್ಲ, ಅಥವಾ ನರಳುತ್ತಿರುವ ಜನರಿಗೆ ಕೂಡಲೇ ಪರಿಹಾರ ಒದಗಿಸುವ ಕ್ರಮಗಳೂ ಅಲ್ಲ ಎಂದು ತೋರಿಸಬಹುದು.

ಸಿಪಿಐ(ಎಂ)ನ ಪರ್ಯಾಯ ಆರ್ಥಿಕ ಮಾರ್ಗ ನಕಾಶೆ:

ಪಕ್ಷ ಇಂದಿನ ಪರಿಸ್ಥಿತಿಯಲ್ಲಿ ದೇಶವು ಎಂತಹ ಆರ್ಥಿಕ ದಾರಿಯನ್ನು ಕ್ರಮಿಸಬೇಕೆಂಬ ಬಗ್ಗೆ ತನ್ನ ಸೂಚನೆಗಳನ್ನು ಸಾರ್ವಜನಿಕವಾಗಿ ಮುಂದಿಟ್ಟಿತ್ತು. ರಾಷ್ಟçಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ  ಮತ್ತು ವಿರೋಧ ಪಕ್ಷಗಳ ನಾಯಕರುಗಳಿಗೆ ಇದನ್ನು ಕಳುಹಿಸಿತ್ತು. ಅದರಲ್ಲಿ “ಸರಕಾರ ತಕ್ಷಣವೇ ಒಂದು ಆರ್ಥಿಕ ಯೋಜನೆಯನ್ನು ಕೈಗೊಳ್ಳಬೇಕಾಗಿದೆ.  ಆರ್ಥಿಕ ಬಿಕ್ಕಟ್ಟನ್ನು ಮತ್ತು ಅದರಿಂದಾಗಿ ಜನರಿಗೆ ಆಗಿರುವ ನೋವನ್ನು ಪರಿಹರಿಸಲುತಕ್ಷಣದ ಕಾರ್ಯಭಾರಗಳನ್ನು,  ಮಧ್ಯಮಾವದಿ ಕ್ರಮಗಳನ್ನು ಮತ್ತು ದೀರ್ಘಾವಧಿ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಈ ಮೂರನ್ನೂ ಈಗಿಂದೀಗಲೇ ಪ್ರಾರಂಭಿಸಬೇಕು” ಎಂದು ಹೇಳಲಾಗಿತ್ತು.

ಈ ಮಾರ್ಗನಕಾಶೆ ಮಹಾಮಾರಿಯ ಮೊದಲೇ ಹಿಂಜರಿತವನ್ನು ಪ್ರವೇಶಿಸಿರುವ ಭಾರತದ ಆರ್ಥಿಕತೆಯನ್ನು ಬಾಧಿಸುತ್ತಿರುವ ಮೂಲ ಸಮಸ್ಯೆಯೆಂದರೆ, ಆಂತರಿಕ ಬೇಡಿಕೆಯ ಮಟ್ಟಗಳಲ್ಲಿ ತೀವ್ರ ಇಳಿಕೆ ಎಂದು ಸರಿಯಾಗಿ ಗುರುತಿಸಿತ್ತು.. ನಮ್ಮ ಜನರ ಕೊಳ್ಳುವ ಶಕ್ತಿ ಎಷ್ಟು ತೀವ್ರವಾಗಿ ಕುಸಿದಿದೆಯೆಂದರೆ, ಬೇಡಿಕೆ ಇಲ್ಲದೆ ಹಲವಾರು ಉದ್ದಿಮೆಗಳು ಮಹಾಮಾರಿಯ ಮೊದಲೇ ಮುಚ್ಚಿ ಹೋಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ-ನಷ್ಟಗಳು ಆಗಿದ್ದವು. ರಾಷ್ಟ್ರೀಯ ಲಾಕ್‌ಡೌನ್ ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಆದ್ದರಿಂದ, ಯಾವುದೇ ತಕ್ಷಣದ, ಮಧ್ಯಮಾವಧಿಯ ಮತ್ತು ದೀರ್ಘಾವಧಿಯ ಆರ್ಥಿಕ ಯೋಜನೆ ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವು ಆಧಾರದಲ್ಲಿ ಆರ್ಥಿಕ ಪುನರುಜ್ಜೀವನದ ಬಹು ಮುಖ್ಯ ಪ್ರಶ್ನೆಯನ್ನು ನಿಭಾಯಿಸಬೇಕಾಗಿದೆ.

ಇವತ್ತಿನ ಸಂದರ್ಭದಲ್ಲಿ, ಪಕ್ಷ, ಆದಾಯ ತೆರಿಗೆ ವ್ಯಾಪ್ತಿಗೆ ಬರದ ಪ್ರತಿ ಕುಟುಂಬಕ್ಕೂ ಮೂರು ತಿಂಗಳ ವರೆಗೆ ಮಾಸಿಕ 7500 ರೂಪಾಯಿಗಳ ನೇರ ವರ್ಗಾವಣೆಯನ್ನು ಮಾಡಬೇಕೆಂದು ಒತ್ತಾಯಿಸಿದೆ. ಇದು ಅವರು ಜೀವದಿಂದಿರಲು ಸ್ವಲ್ಪ ಹಣ ಒದಗಿಸುತ್ತದೆ. ಹಸಿವು ಮತ್ತು ಅಪೌಷ್ಟಿಕತೆ ಹರಡಿರುವ ಸಂದರ್ಭದಲ್ಲಿ ಅಗತ್ಯವಿರುವ ಎಲ್ಲರಿಗೆ ಆಹಾರ ಧಾನ್ಯಗಳ ಉಚಿತ ವಿತರಣೆ ಅತ್ಯಂತ ತುರ್ತಿನ ಅವಶ್ಯಕತೆ.  ಪ್ರತಿ ವ್ಯಕ್ತಿಗೂ 10 ಕಿಲೋಗ್ರಾಂ ಆಹಾರ ಧಾನ್ಯವನ್ನು ಆರು ತಿಂಗಳ ವರೆಗೆ ಪ್ರತಿ ತಿಂಗಳೂ ಕೇಂದ್ರದ ದಾಸ್ತಾನು ಮಳಿಗೆಗಳಿಂದ ಉಚಿತವಾಗಿ ವಿತರಿಸಬೇಕು. ವಲಸೆ ಕಾರ್ಮಿಕರನ್ನು ಶುಲ್ಕ ರಹಿತವಾಗಿ ಅವರ ಮನೆಗಳಿಗೆ ತಲುಪಿಸಬೇಕು.

ಸಾರ್ವಜನಿಕ ಹೂಡಿಕೆಗಳು: ಜನರ ಕೊಳ್ಳುವ ಶಕ್ತಿ ಸಾಲಗಳನ್ನು ಒದಗಿಸುವುದರಿಂದ ಹೆಚ್ಚುವುದಿಲ್ಲ, ಬದಲಿಗೆ, ಸರಕಾರದ ನೇರ ಖರ್ಚಿನಿಂದ ಹೆಚ್ಚುತ್ತದೆ. ನಮಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಕಟ್ಟಲು ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ಹೂಡಿಕೆಯ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು.. ಈ ಕೆಲಸವನ್ನು ಖಾಸಗಿ ಬಂಡವಾಳಕ್ಕೆ ಬಿಟ್ಟರೆ ಸಾಧನೆಯಾಗುವುದಿಲ್ಲ. ಯಾಕೆಂದರೆ ಹೂಡಿಕೆಯಿಂದ ಲಾಭಗಳಿಕೆಗೆ ಬಹಳಷ್ಟು ಸಮಯ ಬೇಕಾಗುತ್ತದೆ. ಅವರ ಮಟ್ಟಿಗೆ ಇದು ಅವರು ಸಾಲಗಳಿಂದ ಎತ್ತುವ ಬಂಡವಾಳಕ್ಕೆ ಬಡ್ಡಿ ಪಾವತಿಗೆ ಇದು ಬಹಳ ದೀರ್ಘವಾದ ಅವಧಿ.

ಹೀಗೆ ಸಾರ್ವಜನಿಕ ಹೂಡಿಕೆ ಮಾಡಿದರೆ, ನಮ್ಮ ಮೂಲರಚನೆಗಳನ್ನು ಕಟ್ಟಲು ಕೋಟಿಗಟ್ಟಳೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಯಾವಾಗ ಕಾರ್ಮಿಕರು ತಮ್ಮ ದುಡಿಮೆ ಹಣದಿಂದ ಕೊಳ್ಳುವಿಕೆ ಪ್ರಾರಂಭಿಸುತ್ತಾರೋ ಆಗ ಆಂತರಿಕ ಬೇಡಿಕೆ ಎಂಬುದು ಏರಲಾರಂಭಿಸುತ್ತದೆ, ಇದರಿಂದ ಮುಚ್ಚಿದ ಫ್ಯಾಕ್ಟರಿಗಳು ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳು ಮತ್ತೆ ತೆರೆಯುವ ಪ್ರಕ್ರಿಯೆ ಆರಂಭವಾಗುತ್ತದೆ.

ಈ ಕ್ರಮಗಳ ಬದಲು ಸರ್ಕಾರದ ಹಣಕಾಸು ಪ್ಯಾಕೇಜ್ ಬಂಡವಾಳಿಗರಿಗೆ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮಗಾತ್ರದ ಉದ್ದಿಮೆಗಳಿಗೆ ಹೂಡಿಕೆಯ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಲಭ್ಯಗೊಳಿಸುವುದರ ಮೇಲೆಯೆ ಗಮನ ಕೇಂದ್ರೀಕರಿಸಿದೆ. ಬಂಡವಾಳಿಗರು ಲಾಭ ದೊರೆವ ಸೂಚನೆ ಇದ್ದರೆ ಮಾತ್ರ ಹೂಡಿಕೆ ಮಾಡುತ್ತಾರೆ. ಆರ್ಥಿಕದಲ್ಲಿ ಬೇಡಿಕೆ ಇಲ್ಲದಿರುವಾಗ ಮಾರಾಟ ಆಗುವುದಿಲ್ಲ. ರಫ್ತು ಮಾಡುವುದೂ ಸಾಧ್ಯವಿಲ್ಲ. ಯಾಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆರ್ಥಿಕ ಹಿಂಜರಿತವಿದೆ. ಹೀಗೆ ಲಾಭ ಪಡೆಯುವುದು ಸಾಧ್ಯವಿಲ್ಲ. ಸರ್ಕಾರ ಬಂಡವಾಳದ ಲಭ್ಯತೆ ಹೆಚ್ಚಿಸಿ ಸುಲಭ ದರದಲ್ಲಿ ನೀಡಿದರೂ ಬೇಡಿಕೆಯಿಲ್ಲದೆ ಆರ್ಥಿಕ ಸುಧಾರಿಸುವುದು ಸಾಧ್ಯವಿಲ್ಲ. ಆದ್ದರಿಂದ ಈ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಆರ್ಥಿಕವನ್ನು ಬೆಳವಣಿಗೆಯತ್ತ ಪ್ರಚೋದಿಸಲಾರದು ಅಥವಾ ಜನತೆಯ ನೋವಿಗೆ ಪರಿಹಾರ ನೀಡಲಾರದು.

ಆರ್ ಎಸ್ ಎಸ್ /ಬಿ ಜೆ ಪಿ ಕಾರ್ಯಸೂಚಿಯ ಬಿರುಸಿನ ಅನುಸರಣೆ:

ಬಿಜೆಪಿ ಕೇಂದ್ರ ಸರ್ಕಾರ ಕೋವಿಡ್ ಸಾಂಕ್ರಾಮಿಕದ ಸಂಧರ್ಭವನ್ನು ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಮುಂದಕ್ಕೊಯ್ಯಲು, ಜತೆಗೇ  ನವ ಉದಾರವಾದಿ ಆರ್ಥಿಕ ನೀತಿಗಳನ್ನು ಬಿರುಸಿನಿಂದ ಅನುಸರಿಸಲು ಬಳಸಿಕೊಳ್ಳುತ್ತಿದೆ.

ಮೊದಲನೆಯದಾಗಿ, ಪ್ರಧಾನ ಮಂತ್ರಿಗಳು ಘೋಷಿಸಿದ ನಮ್ಮ ದೇಶದ ಜಿಡಿಪಿ ಯ ಶೇ 10ರಷ್ಟು ಎಂಬ ಈ ಉತ್ತೇಜನಾ ಪ್ಯಾಕೇಜಿನ ಮೂಲಕ ನವ ಉದಾರವಾದಿ ಆರ್ಥಿಕ ಸುಧಾರಣೆಗಳನ್ನು ಅದು ಬಿರುಸಿನಿಂದ ಜಾರಿಗೆ ತರುತ್ತಿದೆ. ಸ್ವಾವಲಂಬನೆಯ ಹೆಸರಿನಲ್ಲಿ ಘೋಷಿಸಿರುವ ಈ ಪ್ಯಾಕೇಜ್ ಭಾರತವನ್ನು ಸ್ವಯಂ-ಅಡಿಯಾಳುತನದತ್ತ ತಳ್ಳುವ ನೀಲ ನಕ್ಷೆ. ಈ ಪ್ಯಾಕೇಜಿನ ಪ್ರಸ್ತಾಪಗಳು ನೇರವಾಗಿ ವಿದೇಶಿ ಮತ್ತು ದೇಶಿ ಕಾರ್ಪೊರೇಟ್‌ಗಳಿಗೆ ಗರಿಷ್ಟ ಲಾಭಗಳಿಕೆಗೆ ಪ್ರೋತ್ಸಾಹ ನೀಡುವಂತವುಗಳು. ನಮ್ಮ ಆರ್ಥಿಕದ ಎಲ್ಲ ವಲಯಗಳನ್ನು, ರಕ್ಷಣಾ ಉತ್ಪಾದನೆ ಮತ್ತು ಅಣುಶಕ್ತಿಯನ್ನೂ ಕೂಡ 74ಶೇ.ವರೆಗೆ ತಂತಾನೇ ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಗೆ ತೆರೆದು ಕೊಡಲಾಗಿದೆ. ಹೆಚ್ಚಿನ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಈಗ ಖಾಸಗೀಕರಿಸಲಾಗುತ್ತಿದೆ. ಇದು ನಾವು ಈ ಸರ್ಕಾರದಲ್ಲಿ ಕಳೆದ ಆರು ವರ್ಷಗಳಲ್ಲಿ ಕಂಡಿರುವ ಬಂಟ ಬಂಡವಾಳಶಾಹಿಯನ್ನು ಇನ್ನಷ್ಟು ಅಸಹ್ಯಕಾರೀ ಮಟ್ಟಗಳ ವರೆಗೆ ಬಲಪಡಿಸುತ್ತದೆ.  ಇದು  ನಿರ್ದಯವಾಗಿ ಗರಿಷ್ಟ ಲಾಭಗಳಿಸುವ ದಾರಿ, ಇದರರ್ಥ ಅದಕ್ಕೆ ಅನುವು ಮಾಡಿಕೊಡಲು ದುಡಿವ ಜನರನ್ನು ಶೋಷಣೆಯನ್ನು ತೀವ್ರಗೊಳಿಸಲಾಗುವುದು.

ಕಾರ್ಮಿಕರ ಇಂತಹ ತೀವ್ರ ಶೋಷಣೆಯನ್ನು ಸಾಧ್ಯಗೊಳಿಸಲು ಎಲ್ಲ ಕಾರ್ಮಿಕ ಕಾಯಿದೆಗಳನ್ನು, ದಿನಕ್ಕೆ 8 ಗಂಟೆಗಳ ಕೆಲಸದ ಕಾಯಿದೆಯನ್ನೂ ಕೂಡ  ಹಾಗೂ ಇನ್ನೂ ಮುಖ್ಯವಾಗಿ ಕಾರ್ಮಿಕ ವರ್ಗ ಹೋರಾಡಿ ಪಡೆದಿರುವ ಹಕ್ಕುಗಳನ್ನು ರದ್ದುಗೊಳಿಸಲಾಗುತ್ತಿದೆ. ಇದು ಖುಲ್ಲಂಖುಲ್ಲಾ ಲೂಟಿ ಮತ್ತು ದುಡಿಮೆಗಾರ-ವಿರೋಧಿ ಪ್ರಹಾರಗಳ ಸಂಯೋಜನೆ.

ಎರಡನೇಯದಾಗಿ, ಕೋವಿಡ್ ಸಾಂಕ್ರಾಮಿಕದ ವಿರುದ್ದ ಹೋರಾಡುವ ಹೆಸರಿನಲ್ಲಿ ಆರ್‌ಎಸ್‌ಎಸ್/ಬಿಜೆಪಿ ಕೋಮು ಧ್ರುವೀಕರಣವನ್ನು ಇನ್ನೂ ಹರಿತಗೊಳಿಸುವ ಕೆಲಸ ಮಾಡುತ್ತಿವೆ. ಈ ದಿಸೆಯಲ್ಲಿ ಮುಸ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗುತ್ತಿದೆ.

ಈ ಅವಧಿಯನ್ನು ಸಿಏಏ/ಎನ್‌ಆರ್‌ಸಿ/ಎನ್‌ಪಿಆರ್ ಗಳ ವಿರುದ್ದ ಶಾಂತಿಯುತ ಪ್ರತಿಭಟನೆಗಳನ್ನು ಸಂಘಟಿಸುವಲ್ಲಿ ಪಾತ್ರ ವಹಿಸಿದವರನ್ನು ಗುರಿಯಾಗಿüಸಲು ಉಪಯೋಗಿಸಿಕೊಳ್ಳಲಾಗುತ್ತಿದೆ. ಇವರನ್ನು ಕರಾಳ ಕಾನೂನು ಅಂಶಗಳ ಅಡಿಯಲ್ಲಿ ಬಂಧಿಸಲಾಗುತ್ತಿದೆ. ಮತ್ತೊಮ್ಮೆ ಕೋಮುವಾದಿ ದೃಷ್ಟಿಯಿಂದ ನೋಡಲಾಗುತ್ತಿದೆ, ಮತ್ತು ಅದನ್ನು ಈ ಬಂಧನಗಳಲ್ಲೂ ದುಷ್ಟ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಅವರ ವಿರುದ್ಧ  ‘ಕೋರೋನ ಜಿಹಾದ್’ ಇತ್ಯಾದಿ ಪ್ರಚಾರಗಳ ಅಡಿಯಲ್ಲಿ ಸುಳ್ಳು ಸುದ್ದಿಗಳ ಮೂಲಕ ವಿಚ್ಛೀದ್ರಕಾರಿ ಸಾಮಾಜಿಕ ಮಾಧ್ಯಮ ಪ್ರಚಾರಗಳನ್ನು ನಡೆಸಲಾಗುತ್ತಿದೆ.

ಮೂರನೇಯದಾಗಿ, ಭಿನ್ನಮತದ ಎಲ್ಲ ಧ್ವನಿಗಳು, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪ್ರತಿಪಾದಿಸುವವರು, ನಾಗರಿಕ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕುಗಳು, ಮತ್ತು ಇತರ ದಮನಿತರ ಹಕ್ಕುಗಳ ಪರವಾಗಿ ಹೋರಾಡುವವರನ್ನು ದೇಶದ್ರೋಹ, ಯುಏಪಿಏ, ರಾಷ್ಟ್ರೀಯ ಭದ್ರತಾ ಕಾಯಿದೆ, ಇತ್ಯಾದಿಗಳ ಅಡಿ ಬಂಧಿಸಿ ಜೈಲಿಗೆ ತಳ್ಳಲಾಗುತ್ತಿದೆ. ಸರ್ಕಾರದ ವಿರುದ್ದ ದನಿಯೆತ್ತಿದ, ಅದರ ನೀತಿಗಳನ್ನು ಪ್ರತಿಭಟಿಸಿದ ಪತ್ರಕರ್ತರು/ ಮಾಧ್ಯಮದವರನ್ನು ಕಿರುಕುಳಕ್ಕೆ ಒಳಪಡಿಸಿ, ಬಲಿಪಶು ಮಾಡಿ ಮೊಕದ್ದಮೆ ಹೂಡಲಾಗುತ್ತಿದೆ.

ನಾಲ್ಕನೇಯದಾಗಿ, ಲಾಕ್ ಡೌನ್ ಅವಧಿಯನ್ನು ಕೇಂದ್ರ ಸರಕಾರ ಎಲ್ಲ ಅಧಿಕಾರಗಳನ್ನು ಕೇಂದ್ರೀಕರಿಸುವ ಭರಾಟೆಯನ್ನು ಇನ್ನಷ್ಟು ಗಟ್ಟಿಗೊಳಿಸಲು, ಚುನಾಯಿತ ರಾಜ್ಯ ಸರ್ಕಾರಗಳ ಅಧಿಕಾರಗಳನ್ನು ಮತ್ತು ದೇಶದ ಸಂವಿಧಾನದ ಮೂಲ ಲಕ್ಷಣವಾದ ಒಕ್ಕೂಟ ತತ್ವವನ್ನು ಸಂಪೂರ್ಣವಾಗಿ ಮೊಟಕುಗೊಳಿಸಲು ಉಪಯೋಗಿಸುತ್ತಿದೆ. ಇದು ಒಂದು ಏಕಘಟಕ ಪ್ರಭುತ್ವವ ರಚನೆಯನ್ನು ಸ್ಥಾಪಿಸುವ ಬಿಜೆಪಿಯ ಹುನ್ನಾರ. ಕಣ್ಗಾವಲನ್ನು ಆಧರಿಸಿದ ‘ಭದ್ರತಾ ಪ್ರಭುತ್ವ’ದ ಗುರಿಯನ್ನು ಪೂರೈಸಿಕೊಳ್ಳಲು ಮತ್ತು ಆರ್.ಎಸ್.ಎಸ್.ನ ಫ್ಯಾಸಿಸ್ಟ್ ಮಾದರಿ ಪರಿಯೋಜನೆಯನ್ನು ಈಡೇರಿಸಿಕೊಳ್ಳಲು ಇದು ಅನುಕೂಲ ಕಲ್ಪಿಸಿ ಕೊಡುತ್ತದೆ. ಎಲ್ಲ ಮುಖ್ಯ ನಿರ್ಧಾರಗಳನ್ನು ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ತೆಗೆದುಕೊಂಡು ಅದರ ಪರಿಣಾಮಗಳ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹಾಕಿ ಅವು ಹೊರುವಂತೆ ಮಾಡಲಾಗುತ್ತಿದೆ.

ಐದನೇಯದಾಗಿ, ಈ ಅವಧಿಯನ್ನು ಮೋದಿ ಮತ್ತು ಬಿಜೆಪಿ ಕೇಂದ್ರ ಸರ್ಕಾರ ಅಮೆರಿಕನ್ ಸಾಮ್ರಾಜ್ಯಶಾಹಿಯೊಂದಿಗೆ ಭಾರತದ ಅಡಿಯಾಳು ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಉಪಯೋಗಿಸುತ್ತಿವೆ. ಚೀನಾ ವಿರುದ್ದ ಅಮೆರಿಕಾ ನಡೆಸಿರುವ ಎಲ್ಲ ಪ್ರಚಾರಗಳಲ್ಲಿ ಭಾರತ ಅಮೆರಿಕ ಪರ ನಿಲುವನ್ನು ತಳೆಯುತ್ತಿದೆ.  ಇದರಿಂದ ದೇಶದ ವಿದೇಶಾಂಗ ನೀತಿಯ ಮೇಲೆ ಕೆಟ್ಟ ಪರಿಣಾಮ ಆಗುವುದಲ್ಲದೆ, ನಿರ್ದಿಷ್ಟವಾಗಿ ನಮ್ಮ ನೆರೆ ಹೊರೆಯ ದೇಶಗಳೊಂದಿಗಿನ ಸಂಬಂಧದಲ್ಲಿ ತೊಡಕುಗಳುಂಟಾಗುತ್ತವೆ.  ಈಗಾಗಲೇ ಲಡಾಕ್‌ನಲ್ಲಿ ಚೀನಾದೊಂದಿಗಿನ ಹತೋಟಿ ರೇಖೆಯಲ್ಲಿ ಮತ್ತು ನೇಪಾಳ ತನ್ನ ಸಾರ್ವಭೌಮ ನೆಲ ಎಂದು ಹೇಳಿಕೊಳ್ಳುವ ಒಂದು ಪ್ರದೇಶದ ಮೂಲಕ ಒಂದು ರಸ್ತೆಯನ್ನು ನಿರ್ಮಿಸುವುದರ ಮೇಲೆ ಸಮಸ್ಯೆಗಳು ಉಲ್ಬಣಗೊಂಡಿರುವ ವರದಿಗಳಿವೆ.

ಅಮೆರಿಕನ್ ಸಾಮ್ರಾಜ್ಯಶಾಹಿಗೆ ಇಂತಹ ಅಡಿಯಾಳುತನ ಭಾರತದ ಮತ್ತು ದೇಶದ ಜನಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಇದೀಗ, ಕೋವಿಡ್ ಮಹಾಮಾರಿ ಎದುರಾಗಿರುವಾಗ ಸರಕಾರ, ಜನತೆ ಮತ್ತು ದೇಶ ಈ ಮಹಾಮಾರಿಯನ್ನು ತಡೆಯಲು, ಜನರ ಜೀವ ಉಳಿಸಲು ಮತ್ತು ಲಾಕ್ ಡೌನ್ ಹೆಚ್ಚಿಸಿದ ಜನಗಳ ಸಂಕಟಗಳನ್ನು ಶಮನಗೊಳಿಸಲು ಏಕಮನಸ್ಸಿನಿಂದ ಗಮನ ಕೇಂದ್ರೀಕರಿಸಬೇಕಾದ ಸಮಯದಲ್ಲಿ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ನಿಜವಾದ ಕಾರ್ಯಸೂಚಿಯಾಗಿದೆ.
ಕಾರ್ಯಭಾರಗಳು:

ಇಂತಹ ಸನ್ನಿವೇಶದಲ್ಲಿ ಪಕ್ಷವು ಮಹಾಮಾರಿ ಹೆಚ್ಚುತ್ತಿರುವ ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸುತ್ತಲೇ ಈ ಕೆಳಗಿನ ಕಾರ್ಯಭಾರಗಳನ್ನು ಎತ್ತಿಕೊಳ್ಳಬೆಕಾಗಿದೆ:

1. ಸ್ಥಳೀಯ ಪ್ರಶ್ನೆಗಳು:
ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ಡೌನ್ನಿಂದಾಗಿ ಹಲವು ಸ್ಥಳೀಯ ಪ್ರಶ್ನೆಗಳು-ಜೀವನಾಂಶದ ವಿಷಯಗಳು, ಆಹಾರ ಮತ್ತು  ಪಡಿತರ, ಬೆಲೆ ಏರಿಕೆ, ಆರೋಗ್ಯ ಸೌಕರ್ಯಗಳು ಮುಂತಾದವುಗಳು ಎದುರಾಗುತ್ತವೆ. ಆಯಾ ಪ್ರದೇಶ /ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷ ಮತ್ತು ಸಾಮೂಹಿಕ  ಸಂಘಟನೆಗಳು ಈ ವಿಷಯಗಳ ಮೇಲೆ ಸ್ಥಳೀಯವಾಗಿ ಪ್ರಚಾರ, ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಈ ಪ್ರಚಾರಾಂದೋಲನಗಳನ್ನು ನಡೆಸುವಾಗ ದೈಹಿಕ ಅಂತರ ಕಾಯ್ದುಕೊಳ್ಳುವ, ಮುಖಗವುಸು ಧರಿಸುವ, ಇತ್ಯಾದಿ ಮುನ್ನೆಚ್ಚರಿಕೆ ವಹಿಸಬೇಕು. ಹಂತ ಹಂತವಾಗಿ ರಾಜ್ಯಮಟ್ಟದ ಮತ್ತು ರಾಷ್ಟ್ರ ಮಟ್ಟದ ಆಂದೋಲನಗಳನ್ನು ಕೈಗೆತ್ತಿಕೊಳ್ಳಬೇಕು.

2. ವಲಸೆ ಕಾರ್ಮಿಕರು:
ಎಲ್ಲಾ ರಾಜ್ಯ ಸಮಿತಿಗಳು ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯವಾಗಿ ಕೈಗೆತ್ತಿಕೊಳ್ಳಬೇಕು. ವಲಸೆ ಕಾರ್ಮಿಕರ ಕುರಿತಾದ ಮಾಹಿತಿ ಹಲವಾರು ರಾಜ್ಯ ಸಮಿತಿಗಳಿಗೆ ಲಭ್ಯವಿರುವುದರಿಂದ, ಇವರನ್ನು ಸಂಘಟಿಸಿ, ಸಂಘ ರಚಿಸಲು ಮುತುವರ್ಜಿ ವಹಿಸಬೇಕು. ರಾಜ್ಯ ಕಾರ್ಮಿಕ ರಂಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚನೆಯ ಮೂಲಕ ಈ ಕ್ರಮಗಳನ್ನು ಬಲಪಡಿಸಬೇಕು. ವಲಸೆ ಕಾರ್ಮಿಕರು ದುಡಿಯುವ ವರ್ಗದ ಬೆನ್ನೆಲುಬು. ಇವರು ಅನೌಪಚಾರಿಕ ವಲಯದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದರೂ, ಹಲವರು  ರೆಗ್ಯುಲರ್, ಕ್ಯಾಶುಯಲ್ ಹಾಗೂ ಗುತ್ತಿಗೆ ಕಾರ್ಮಿಕರಾಗಿ ಮತ್ತು ಅಪ್ರೆಂಟಿಸ್‌ಗಳಾಗಿ ಸಹ ದುಡಿಯುತ್ತಿದ್ದಾರೆ. ಇವರಿಗಾಗಿ ನಾವು ಬೇಡಿಕೆಗಳ ಪಟ್ಟಿಯನ್ನು ರೂಪಿಸಬೇಕು ಮತ್ತು ಇವನ್ನು  ಪ್ರಚುರಪಡಿಸಬೇಕು. ವಲಸೆ ಕಾರ್ಮಿಕರ ಅಂತರ ರಾಜ್ಯ ಕಾರ್ಮಿಕ ಕಾಯಿದೆ 1979ಅನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ನಾವು ವಿರೋಧಿಸಬೇಕು ಮತ್ತು ಈ  ಕಾಯಿದೆಯನ್ನು ಬಲಪಡಿಸುವಂತೆ ಆಗ್ರಹಿಸಬೇಕು.

3. ಸಾರ್ವತ್ರಿಕ ಆರೋಗ್ಯ:
ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಅಸಮರ್ಪಕತೆಯನ್ನು ಬಯಲಿಗೆಳೆದಿರುವ ಈ ಸಮಯದಲ್ಲಿ ಎಲ್ಲಾ ರಾಜ್ಯ ಘಟಕಗಳು  ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪ್ರಚಾರ ಕೈಗೊಳ್ಳುವ ಯೋಜನೆ ತಯಾರಿಸಲು ಮುಂದಾಗಬೇಕು. ಈಗಾಗಲೇ ಹಲವು ರಾಜ್ಯಗಳು ಈ ಯೋಜನೆ ಹಾಕಿಕೊಂಡಿವೆ. ಸಾರ್ವತ್ರಿಕ ಆರೋಗ್ಯ ಸೌಕರ್ಯಗಳು ಇರದೆಡೆ ಈ ಪ್ರಚಾರ ಬಲಗೊಳ್ಳಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸ್ಥಳೀಯ ಮಟ್ಟದ ಆಸ್ಪತ್ರೆಗಳು, ಜಿಲ್ಲಾ ಮಟ್ಟದ ಆಸ್ಪತ್ರೆಗಳು ಇತ್ಯಾದಿ ಸ್ಪಷ್ಟ ಬೇಡಿಕೆಗಳನ್ನು ಇವರ ಮುಂದಿಡಬೇಕು. ಸಾರ್ವತ್ರಿಕ ಆರೋಗ್ಯ ಜಿಡಿಪಿಯ ಶೇ. 1ಕ್ಕಿಂತಲೂ ಕಡಿಮೆ ಪ್ರಮಾಣವಿರುವ ಕೇಂದ್ರ ವೆಚ್ಚವನ್ನು ಕನಿಷ್ಠ ಶೇ. 3ಕ್ಕೆ ಹೆಚ್ಚಿಸಬೇಕು ಎಂದು ಪಕ್ಷ ಎಂದಿನಿಂದಲೂ ಒತ್ತಾಯಿಸುತ್ತಿದ್ದು, ಈ ಬೇಡಿಕೆಯನ್ನು ಅಖಿಲ ಭಾರತ ಮಟ್ಟದಲ್ಲಿ ಕೈಗೆತ್ತಿಕೊಳ್ಳಬೇಕು.

4. ನಿರುದ್ಯೋಗ:
ಈ ಮೊದಲು ಗಮನಿಸಿದಂತೆ, ನಿರುದ್ಯೋಗದ ಪ್ರಶ್ನೆಯ ಮೇಲೆ, ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು, ನಿರ್ದಿಷ್ಟವಾಗಿ ಕಾರ್ಮಿಕ ಸಂಘಗಳು. ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಂದುಗೂಡಿಸಲು ಮುತುವರ್ಜಿ ವಹಿಸಬೇಕು. ರಾಜ್ಯದಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ, ನಿರುದ್ಯೋಗ ಭತ್ಯೆಯೂ ಸೇರಿದಂತೆ ಸೂಕ್ತ ಘೋಷಣೆಗಳನ್ನು ಎತ್ತಬೇಕು. ಮನರೇಗವನ್ನು ಒಂದು ವರ್ಷದಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ ಕನಿಷ್ಟ 200 ದಿನಗಳ ಕೆಲಸವನ್ನು ಖಾತ್ರಿ ಪಡಿಸುವಂತೆ ವಿಸ್ತರಿಸಬೇಕು. ಉದ್ಯೋಗ ಖಾತ್ರಿ ಸ್ಕೀಮನ್ನು ನಗರದ ಬಡವರಿಗೂ ವಿಸ್ತರಿಸಬೇಕು, ಜತೆಗೆ ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ತಕ್ಷಣವೇ ಪ್ರಕಟಿಸಬೇಕು.

5. ಶಿಕ್ಷಣ-ಡಿಜಿಟಲ್ ವಿಭಜನೆ ಬೇಡ:
ಶೈಕ್ಷಣಿಕ ವರ್ಷ ಮುಗಿಯುವಾಗ ಮತ್ತು ಪರೀಕ್ಷೆ ಪ್ರಾರಂಭವಾಗಬೇಕಾದ ಸಂದರ್ಭದಲ್ಲಿ ಬಂದ ಲಾಕ್ಡೌನ್ ವಿದ್ಯಾರ್ಥಿಗಳ ಒಂದು ತಲೆಮಾರಿನ ಭವಿಷ್ಯವನ್ನು ಕದಡಿದೆ. ಇದು ನಮ್ಮ ದೇಶದ ಭವಿಷ್ಯವನ್ನೂ ಕದಡುತ್ತದೆ. ಈ ಪರಿಸ್ಥಿತಿಯನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಅನುಮೋದನೆ ಪಡೆಯದ ತನ್ನ ಪ್ರತಿಗಾಮಿ ಶಿಕ್ಷಣ ನೀತಿಯ ಜಾರಿಗೆ ಮತ್ತು ಡಿಜಿಟಲ್ ಶಿಕ್ಷಣ /ಕಲಿಕೆ  ವಿಧಾನವನ್ನು ಹೇರಲು ಮುಂದಾಗುತ್ತಿದೆ. ಭಾರತದ ಭವಿಷ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಶಿಕ್ಷಣ ಪದ್ಧತಿಯ ಮೇಲೆ ಡಿಜಿಟಲ್ ವಿಭಜನೆಯನ್ನು ಹೇರಬಾರದು. ಶಾಲೆ-ಕಾಲೇಜುಗಳಲ್ಲಿ ಪಾರಂಪರಿಕ ಅಧ್ಯಾಪನಶಾಸ್ತಿçಯ  ಬೋಧನೆಯ ಜಾಗದಲ್ಲಿ  ಡಿಜಿಟಲ್ ವಿಧಾನಗಳನ್ನು ತರುವುದನ್ನು ಪಕ್ಷ ಎಂದಿನಿಂದಲೂ ವಿರೋಧಿಸುತ್ತಲೇ ಬಂದಿದೆ ಮತ್ತು ಮುಂದೆಯೂ ವಿರೋಧಿಸುತ್ತದೆ. ಆದರೆ ಈ ಮಹಾಮಾರಿ ಮತ್ತು ಅದರಿಂದಾಗಿ ಕದಡಿರುವ ಅವಧಿಯಲ್ಲಿ  ಈ ಶೈಕ್ಷಣಿಕ ವರ್ಷಕ್ಕೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಡಿಜಿಟಲ್ ವಿಧಾನಗಳನ್ನು ಬಳಸಬಹುದು. ಆದರೆ ಇದು ಎಂದಿಗೂ ಬದಲೀ ವ್ಯವಸ್ಥೆಯಾಗದು. ಇವನ್ನೂ ಸಹ ಯಾವುದೇ ಒಂದು ಪ್ರದೇಶದ ಎಲ್ಲಾ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಧನದ ಲಭ್ಯತೆ ಇರುವೆಡೆ ಮಾತ್ರ ಬಳಸಬೇಕು. ಶಿಕ್ಷಣದಲ್ಲಿ ಯಾವುದೇ ಡಿಜಿಟಲ್ ವಿಭಜನೆಯನ್ನು ಪಕ್ಷ ವಿರೋಧಿಸುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೀಕ್ಷೆ ಸುಸೂತ್ರವಾಗಿ ನಡೆಯುವಂತೆ ಮತ್ತು ವಿದ್ಯಾರ್ಥಿಗಳಿಗೆ ಒಂದು ವರ್ಷ ನಷ್ಟವಾಗದಂತೆ ಶೈಕ್ಷಣಿಕ ಅವಧಿಯನ್ನು ಪುನರ್ ರೂಪಿಸಬೇಕು.  ಆಯಾ ರಾಜ್ಯಗಳಲ್ಲಿನ ನಿರ್ದಿಷ್ಟ ಪರಿಸ್ಥಿತಿಗಳನ್ನು ಗಮನಿಸಿಕೊಂಡು ಪಕ್ಷವು ಸಂಬಂಧಪಟ್ಟ ಸಾಮೂಹಿಕ ಸಂಘಟನೆಗಳು ಮತ್ತು ಇನ್ನಿತರ ಶೈಕ್ಷಣಿಕ/ ಬುದ್ಧಿಜೀವಿ/ ರಾಜಕೀಯ ಶಕ್ತಿಗಳೊಡನೆ ಸಮಾಲೋಚಿಸಿ ಕಾರ್ಯಾಚರಣೆಯ ಕಾರ್ಯಕ್ರಮವನ್ನು ನಿರ್ಧರಿಸಬೇಕು.

6. ನವ ಉದಾರವಾದಿ ಸುಧಾರಣೆಗಳು:
ಪಕ್ಷವು ಸಾರ್ವಜನಿಕ ವಲಯದ ಖಾಸಗೀಕರಣ ಮತ್ತು ಕಾರ್ಮಿಕ ಕಾನೂನುಗಳ ರದ್ದತಿಯನ್ನು ಬಲವಾಗಿ ವಿರೋಧಿಸುತ್ತದೆ.

7. ಗ್ರಾಮೀಣ ಬೇಗುದಿ:
ಈಗಾಗಲೇ ಆಳವಾಗುತ್ತಿದ್ದ ಕರ್ಷಕ ಬೇಗುದಿಯನ್ನು ಲಾಕ್ ಡೌನ್ ಇನ್ನಷ್ಟು ಉಲ್ಬಣಗೊಳಿಸಿದೆ.  ಈ ಸಮಯದಲ್ಲಿ ಧಾನ್ಯ ಖರೀದಿಯನ್ನು ಉತ್ಪಾದನಾ ವೆಚ್ಚಕ್ಕಿಂತ ಶೇ. 50 ಹೆಚ್ಚಿನ ದರದಲ್ಲಿ ಮಾಡುವುದು ಅಗತ್ಯ.  ರೈತರ ಪ್ರಸಕ್ತ ಬೇಗುದಿಯನ್ನು ಎದುರಿಸಲು ಮತ್ತು ನಮ್ಮ ರೈತರು ಇನ್ನಷ್ಟು ಹತಾಶ ಆತ್ಮಹತ್ಯೆಗಳಿಗೆ ಇಳಿಯುವುದನ್ನು ತಪ್ಪಿಸಲು ಎಲ್ಲಾ ರೈತರಿಗೂ ಒಂದು ಬಾರಿ ಸಾಲ ಮನ್ನಾ ಸೌಲಭ್ಯ ಒದಗಿಸಬೇಕು.

8. ಅಲ್ಪಸಂಖ್ಯಾತರು:
ರಾಷ್ಟ್ರೀ ಯ ಲಾಕ್‌ಡೌನ್‌ಸಿಎಎ/ಎನ್.ಪಿ.ಆರ್/ಎನ್.ಆರ್.ಸಿ ವಿರುದ್ಧದ ಶಾಂತಿಯುತ ಪ್ರತಿಭಟನೆ ಗಳಿಗೆ ಹೆಚ್ಚುತ್ತಿದ್ದ ಜನ ಬೆಂಬಲವನ್ನು ತಣ್ಣಗಾಗಿಸಿದೆ.  ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಮತ್ತು ದಾಳಿಗಳ ವಿರುದ್ಧದ ಅವರ ಹೋರಾಟಗಳನ್ನು ಬಲಪಡಿಸಬೇಕು.  ಅಲ್ಪಸಂಖ್ಯಾತರನ್ನು ಪಕ್ಷಕ್ಕೆ ಮತ್ತು ಸಾಮೂಹಿಕ ಸಂಘಟನೆಗಳತ್ತ ಸೆಳೆಯಲು ಎಲ್ಲ ಪ್ರಯತ್ನಗಳನ್ನು ನಾವು ಮಾಡಬೇಕು.

9. ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ:
ಕರಾಳ ಕಾನೂನುಗಳಾದ ಯುಎಪಿಎ, ರಾಜದ್ರೋಹದ ಕಾಯ್ದೆ ಮತ್ತು ಎನ್.ಎಸ್.ಎ.ಯನ್ನು ಶಾಂತಿಯುತ ಪ್ರತಿಭಟನೆಕಾರರು ಮತ್ತು ರಾಜಕೀಯ ಕಾರ್ಯಕರ್ತರ ಮೇಲೆ ಬಳಸುವುದನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ; ಪತ್ರಿಕಾ ಸ್ವಾತಂತ್ರ‍್ಯಕ್ಕೆ ಧಕ್ಕೆ ಮತ್ತು ಪ್ರಜಾಸತ್ತಾತ್ಮಕ ಹಕ್ಕು ಹಾಗೂ ನಾಗರಿಕ ಸ್ವಾತಂತ್ರ‍್ಯದ ಮೇಲಿನ ಬೆದರಿಕೆಗಳು ಈ ಅವಧಿಯಲ್ಲಿ ತೀವ್ರಗೊಳ್ಳುತ್ತಿವೆ.

10. ಕೇರಳ ಮಾದರಿ:
ಕೇರಳದ ಎಡ ಪ್ರಜಾಸತ್ತತ್ಮಕ ರಂಗ ಸರ್ಕಾರವು ನಮ್ಮ ಪಕ್ಷದ ಮುಂದಾಳತ್ವದಲ್ಲಿ ಈ ಮಹಾಮಾರಿಯನ್ನು  ಎದುರಿಸಲು ಪ್ರಯತ್ನಗಳನ್ನು ಕೈಗೊಂಡ ಮತ್ತು ಜನರ ಆತಂಕಕ್ಕೆ ಸ್ಪಂದಿಸಿದ ರೀತಿಯನ್ನು ನಮ್ಮ ಪರ್ಯಾಯ ಎಂದು ಎತ್ತಿ ತೋರಬೇಕು.  ಎಡರಂಗ ಸರಕಾರ ಬಿಕ್ಕಟ್ಟನ್ನು ಎದುರಿಸಿದ ರೀತಿ ಇತರ  ರಾಜ್ಯ ಸರಕಾರಗಳಿಗಿಂತ, ಮುಖ್ಯವಾಗಿ ಬಿಜೆಪಿ ರಾಜ್ಯ ಸರ್ಕಾರಗಳಿಗಿಂತ ಹೇಗೆ ಭಿನ್ನವಾಗಿತ್ತು ಎನ್ನುವುದನ್ನು ಎತ್ತಿ ತೋರಲು ಅನುಬಂಧವಾಗಿ ಕೊಟ್ಟಿರುವ ಟಿಪ್ಪಣಿಯ ನೆರವಿನೊಂದಿಗೆ ಪ್ರಚಾರ ಮಾಡಬೇಕು.  ಇದಲ್ಲದೆ, ರಾಜ್ಯ ಸಮಿತಿಗಳು ಕೇರಳದ ಪಕ್ಷದ ನಾಯಕರು/ಸಚಿವರುಗಳ ಜೊತೆಯಲ್ಲಿ ವಿಡಿಯೋ ತರಗತಿಗಳನ್ನು ಆಯೋಜಿಸಬಹುದು.

11. ಎಡ ಐಕ್ಯತೆ ಯನ್ನು ಬಲಪಡಿಸಿ:
ಇಂದಿನ ಸಂದರ್ಭದಲ್ಲಿ ಎಡ ಪಕ್ಷಗಳ ಐಕ್ಯ ಕಾರ್ಯಾಚರಣೆಗಳು ಎಡ ಪರ್ಯಾಯವನ್ನು ಮುಂದಿಡುವುದು ಮತ್ತು ಜನತೆ ಸದ್ಯ ಎದುರಿಸುತ್ತಿರುವ ತೀವ್ರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಬಹಳ ಮುಖ್ಯವಾಗಿದೆ.  ದೇಶದಲ್ಲಿ ಎಡ ಪಕ್ಷಗಳ ಜೊತೆಗೂಡಿ ಎಲ್ಲ ಮಟ್ಟಗಳಲ್ಲಿ ಇನ್ನಷ್ಟು ಗಟ್ಟಿಯಾದ ಸಮನ್ವಯ, ಜಂಟಿ ಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳನ್ನು ಯೋಜಿಸಬೇಕು.

12. ಐಕ್ಯ ಕಾರ್ಯಾಚರಣೆಗಳನ್ನು ಬೆಸೆಯಬೇಕು:
ಲಾಕ್ ಡೌನನ್ನು ತೆರವು ಮಾಡುತ್ತಿದ್ದ ಹಾಗೆಯೇ, ಕಳೆದ ಎರಡು ತಿಂಗಳುಗಳಿಂದ ವಿವಿಧ ಜನ ವಿಭಾಗಗಳಲ್ಲಿ ಹೆಚ್ಚುತ್ತಿದ್ದ ಅತೃಪ್ತಿ ಸ್ವಯಂಸ್ಫೂರ್ತ ಕ್ರಿಯೆಗಳಿಗೆ ದಾರಿ ಮಾಡಿಕೊಡಬಹುದು. ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಈ ವಿಷಯಗಳಲ್ಲಿ ಪ್ರಜ್ಞಾಪೂರ್ವಕವಾಗಿ ಮಧ್ಯ ಪ್ರವೇಶಿಸಬೇಕು ಮತ್ತು ಮುತುವರ್ಜಿ ವಹಿಸಲು ಸಿದ್ಧವಾಗಿರಬೇಕು.  ಜನಪರ ವಿಷಯಗಳಿಗೆ ಸ್ಪಂದಿಸ ಬಯಸುವ ಎಲ್ಲರೊಡಗೂಡಿ ಐಕ್ಯ ಚಟುವಟಿಕೆಗಳನ್ನು ಅಥವ ಕಾರ್ಯಾಚರಣೆಗಳನ್ನು ಬೆಸೆಯಲು ಪ್ರಯತ್ನಿಸಬೇಕು.  ವಿಶೇಷವಾಗಿ, ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಮತ್ತು ಸರ್ಕಾರದ ವಿರುದ್ಧ ಭಿನ್ನಮತ ವ್ಯಕ್ತಪಡಿಸಿದ್ದಕ್ಕಾಗಿ ಕಲ್ಪಿತ ಆರೋಪಗಳ ಆಧಾರದಲ್ಲಿ ಬಂಧಿತರಾಗಿರುವ ಬಂಧಿಗಳ ಬಿಡುಗಡೆಯ  ವಿಷಯಗಳನ್ನು ನಾವು ಎತ್ತಬೇಕು.

13.ಆರೆಸ್ಸೆಸ್/ಬಿಜೆಪಿ ವಿರುದ್ಧದ ರಾಜಕೀಯ ಪ್ರಚಾರ ವನ್ನು ಬಲಪಡಿಸಿ:
ನಮ್ಮ ರಾಜಕೀಯ ದಾಳಿಯು ಆರೆಸ್ಸೆಸ್/ಬಿಜೆಪಿಯ ಮೇಲೆ ಮತ್ತು ಇವರ ಅಜೆಂಡವನ್ನು ಜಾರಿ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕೇಂದ್ರೀಕೃತವಾಗಿರಬೇಕು.  ಲಾಕ್ ಡೌನ್ ಸಡಿಲಗೊಳಿಸಿದ ನಂತರವೂ ಸಾರ್ವಜನಿಕ ಸಭೆಗಳು, ಪ್ರತಿಭಟನೆಗಳು ಮತ್ತು ಹೋರಾಟಗಳನ್ನು ಆಯೋಜಿಸುವ ಹಕ್ಕುಗಳಿಗೆ ನಿರ್ಬಂಧಗಳು ಮುಂದುವರೆಯಬಹುದು.  ಆರೆಸ್ಸೆಸ್/ಬಿಜೆಪಿಅಜೆಂಡವನ್ನು ಮುಂದೊಯ್ಯಲು ಕಾರ್ಮಿಕರು ಮತ್ತು ಜನರ ಮೇಲಿನ ದಾಳಿ ಮುಂದುವರೆಯುತ್ತದೆ.  ರಾಜಕೀಯ ಪ್ರಚಾರದ ಭಾಗವಾಗಿ ಈ ವಿಷಯಗಳಿಗೆ ವಿರೋಧ ಒಡ್ಡಲೇಬೇಕು.

ಸಂಘಟನಾತ್ಮಕ:

  1. ಕೋವಿಡ್ -19 ಕ್ಕೆ ಒಂದು ಚುಚ್ಚುಮದ್ದನ್ನು ಕಂಡು ಹಿಡಿಯುವವರೆಗೂ ಅಪಾಯ ಮುಂದುವರೆಯುತ್ತದೆ.  ಹೀಗಾಗಿ ನಮ್ಮ ಸಂಗಾತಿಗಳು ದೈಹಿಕ ಅಂತರ, ಮಾಸ್ಕ್ ಧರಿಸುವುದು, ಇತ್ಯಾದಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧರಿರಬೇಕು.  ಕಾರ್ಯಕ್ರಮಗಳು ಮತ್ತು ಚಟುವಟಿಕೆ ಗಳನ್ನು ಅವಶ್ಯವಿರುವ ಮುನ್ನೆಚ್ಚರಿಕೆಯಿಂದಲೇ ನಡೆಸಬೇಕು.
  2. ಲಾಕ್ ಡೌನ್ ಅವಧಿಯಲ್ಲಿ ಎಲ್ಲ ಸಮಿತಿಗಳು ಡಿಜಿಟಲ್ /ವಿಡಿಯೋ ಸಾಧನಗಳನ್ನು ಬಳಸಿವೆ.  ಇವುಗಳ ಮೂಲಕ ಬಹು ಸಂಖ್ಯೆಯ ಜನರನ್ನು ತಲುಪಲು ನಮಗೆ ಸಾಧ್ಯವಾಗಿದೆ.  ನಮ್ಮ ದೈನಂದಿನ ಚಟುವಟಿಕೆ ಜೊತೆಯಲ್ಲಿ ಇಂತಹ ತಂತ್ರಜ್ಞಾನ ಸಾಧನಗಳನ್ನು ಬಳಸುತ್ತಿರಬೇಕು.  ಪಕ್ಷದ ಸಾಮಾಜಿಕ ಮಾಧ್ಯಮವನ್ನು ಇನ್ನಷ್ಟು ಬಲಪಡಿಸಬೇಕು.
  3. ಲಾಕ್ ಡೌನ್ ಅವಧಿಯಲ್ಲಿ ನಮ್ಮ ಪಕ್ಷವು ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ.  ಈ ಸಂಪರ್ಕಗಳನ್ನು ಕ್ರೋಢೀಕರಿಸಬೇಕು ಮತ್ತು ಇವರುಗಳನ್ನು ಸಂಘಟನಾ ಚೌಕಟ್ಟಿನೊಳಗೆ ತರಲು ಪ್ರಯತ್ನಿಸಬೇಕು.
  4. ಪಕ್ಷದ ಶಾಖೆಗಳನ್ನು ಒಳಗೊಂಡಂತೆ, ಎಲ್ಲಾ ಸಮಿತಿಗಳ ಕಾರ್ಯನಿರ್ವಹಣೆ ಪುನರಾರಂಭವಾಗಬೇಕು.  ಇಂದಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಮತ್ತು ನಿರ್ಬಂಧಗಳನ್ನು (ಡಿಜಿಟಲ್ ಸಾಧನಗಳ ಬಳಕೆಯೂ ಸೇರಿದಂತೆ) ಕಟ್ಟುನಿಟ್ಟಾಗಿ ಪಾಲಿಸಬೇಕು.

ಅನುಬಂಧ

“ಕೇರಳ ಮಾದರಿ”
ಕೋವಿಡ್ ಮಹಾಮಾರಿಯ ಸವಾಲನ್ನು ಎಲ್.ಡಿ.ಎಫ್. ಸರ್ಕಾರ ಮತ್ತು ಪಕ್ಷ ಎದುರಿಸಿದ್ದು ಹೇಗೆ?

ಚೀನಾದ ವುಹಾನ್ ನಿಂದ ಬಂದಿದ್ದ ಒಬ್ಬ ವಿದ್ಯಾರ್ಥಿಯಲ್ಲಿ ಭಾರತದ ಮೊದಲ ಕೊರೊನ ವೈರಸ್ ಸೋಂಕು ಕೇರಳದಲ್ಲಿ ಜನವರಿ 30 ರಂದು ಪತ್ತೆಯಯಿತು. ಆದರೆ, ಈ ವೈರಾಣು ಹರಡದಂತೆ ಮಾಡುವ ಕೆಲಸ ಕೇರಳದಲ್ಲಿ ಅದಕ್ಕೂ ಮುಂಚಿನಿಂದಲೇ ಶುರುವಾಗಿತ್ತು.  ವಿಶ್ವ ಆರೋಗ್ಯ ಸಂಸ್ಥೆ ಇದು ಜಾಗತಿಕ ಮಟ್ಟದ ಮಹಾಮಾರಿ ಎಂದು ಘೋಷಿಸಿದ್ದ ತಕ್ಷಣವೇ ಕೇರಳ ರಾಜ್ಯವು ವೈರಾಣುವಿನ ಪರಿಣಾಮವನ್ನು ಕಡಿಮೆ ಮಾಡಲು ಅಲ್ಲದಿದ್ದರೂ ಇದನ್ನು ತಡೆಯಲು ಬುಡಮಟ್ಟದ ತಯಾರಿ ಆರಂಭಿಸಿತು. ಸರ್ಕಾರದ ಎಲ್ಲಾ ಆಡಳಿತ ಜಾಲವನ್ನು ವೈರಾಣು ಪ್ರಸರಣೆ ತಡೆಯಲು ಮಿಷನ್ ವಿಧಾನದಲ್ಲಿ ನೆಲೆಗೊಳಿಸಲಾಯಿತು..ರಾಜ್ಯ ಮಟ್ಟದ ನಿಯಂತ್ರಣ ಕೋಷ್ಟವೂ ಸೇರಿದಂತೆ ವಿವಿಧ ಏರ್ಪಾಡುಗಳನ್ನು ಮಾಡಲಾಯಿತು ಮತ್ತು ಕೋವಿಡ್ -19 ನಿಯಂತ್ರಿಸಲು ನಿಯಮಾವಳಿ (ಪ್ರೋಟೋಕಾಲ್) ತಯಾರಿಸಲಾಯಿತು.

ಯಾವುದೇ ಚುಚ್ಚುಮದ್ದು ಅಥವ ಔಷಧಿ ಇಲ್ಲದಿರುವ ಪರಿಸ್ಥಿತಿಯಲ್ಲಿ ಇದ್ದ ಸಾರ್ವತ್ರಿಕ ಆರೋಗ್ಯ ಮೂಲರಚನೆಯೊಳಗೆ ಸೋಂಕಿನ ಪ್ರಸರಣೆಯನ್ನು ತಡೆಗಟ್ಟುವುದು ಮುಖ್ಯವಾಗಿತ್ತು.  ಇದರ ಭಾಗವಾಗಿ 1296 ಸರ್ಕಾರಿ ಆಸ್ಪತ್ರೆಗಳು ಮತ್ತು 866 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳಿಗಾಗಿ 1,31,606 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಯಿತು.  ಅಲ್ಲದೆ, 2378 ವೆಂಟಿಲೇಟರ್‌ಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ಧಗೊಳಿಸಲಾಗಿತ್ತು.  ಒಂದು ವೇಳೆ ಸೋಂಕು ವ್ಯಾಪಕವಾಗಿ ಹರಡಿದರೆ ಆ ತುರ್ತು ಪರಿಸ್ಥಿತಿ ನಿಭಾಯಿಸಲು ಸರ್ಕಾರದ ವಿವಿಧ ಇಲಾಖೆಗಳು ಕಟ್ಟಡಗಳನ್ನು ಗುರುತಿಸಿದ್ದವು.  ರಾಜ್ಯದ ಎಲ್ಲಾ ಸರಕಾರೀ ವೈದ್ಯಕೀಯ ಕಾಲೇಜುಗಳು, ಸಾರ್ವಜನಿಕ  ಆಸ್ಪತ್ರೆಗಳು ಮತ್ತು ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆ ಮತ್ತು ನಿಗಾ ವಹಿಸಲು ಪ್ರತ್ಯೇಕ ವಾಸದ ವಾರ್ಡ್ಗಳನ್ನು ಸ್ಥಾಪಿಸಲಾಯಿತು.

ಇದರ ಮುಂದುವರಿಕೆಯಾಗಿ ವೈಯಕ್ತಿಕ ಶುಚಿತ್ವ ಮತ್ತು ಜಾಗತಿಕ ಮಟ್ಟದ ತಪಾಸಣಾ ಸೌಕರ್ಯಗಳ ಕುರಿತು ಒಂದು ಪರಿಣಾಮಕಾರಿ ಪ್ರಚಾರ ಕೈಗೊಳ್ಳಲಾಯಿತು.  ರಾಜ್ಯವ್ಯಾಪಿ ‘ದಿಶಾ’ (ದಿಕ್ಕು) ಹೆಸರಿನ ಕೊರೊನ ಕಾಲ್ ಸೆಂಟರ್ ಶುರು ಮಾಡಲಾಯಿತು.  ಇಲ್ಲಿಯವರೆಗೆ, ಒಂದು ಲಕ್ಷಕ್ಕೂ ಮೀರಿದ ಫೋನ್ ಕರೆಗಳನ್ನು ‘ದಿಶಾ’ ನಿಭಾಯಿಸಿದೆ.  ವೈರಾಣು ದಾಳಿಯ ಮಾನಸಿಕ ಒತ್ತಡವನ್ನು ನಿಭಾಯಿಸಲು ಸಹ ಗಮನ ಹರಿಸಲಾಯಿತು. ಸ್ವಯಂಸೇವಕರು ಮತ್ತು ಫೋನ್ ಸಲಹೆಗಾರರ ತಂಡಗಳು ಕಾರ್ಯಾಚರಣೆಗೆ ಇಳಿದವು.

ಕೊವಿಡ್ ವಿರುದ್ಧ ಹೋರಾಟದಲ್ಲಿ ಕೇರಳ ಸರಕಾರದ ಇನ್ನೊಂದು ಮಹತ್ವದ ಕ್ರಮವೆಂದರೆ ಕೊವಿಡ್-19ರ ಪ್ರಸರಣದ ಮೇಲೆ ಹತೋಟಿಯಿಡಲು ತೆಗೆದುಕೊಂಡ ಲಾಕ್ ಡೌನ್ ಮತ್ತು ಇತರ ಕ್ರಮಗಳಿಂದ ವಿವಿಧ ಜನವಿಭಾಗಗಳು ಎದುರಿಸಬೇಕಾಗಿ ಬಂದ ಕಷ್ಟಗಳನ್ನು ಶಮನ ಮಾಡಲು ಕ್ರಮಗಳನ್ನು ಕೈಗೊಳ್ಳಲಾಯಿತು.  ರಾಜ್ಯ ಸರಕಾರ ಉದ್ಯೋಗ ಮತ್ತು ಜೀವನಾಧಾರಗಳನ್ನು ಕಳಕೊಂಡ ಎಲ್ಲರಿಗೂ ಪರಿಹಾರ, ನೆರವು ಮತ್ತು ಸಹಾಯ ಒದಗಿಸಲು 20,000 ಕೋಟಿ ರೂ.ಗಳ ಒಂದು ಪ್ಯಾಕೇಜನ್ನು ಆರಂಭಿಸಿತು. 54 ಲಕ್ಷ ಫಲಾನುಭವಿಗಳಿಗೆ ಮುಂಗಡ ಸಾಮಾಜಿಕ ಭದ್ರತಾ ಪೆನ್ಶನ್ ಒದಗಿಸಲು 4709 ಕೋಟಿ ರೂ.ಗಳನ್ನು ಕೊಟ್ಟಿತು. ಕಲ್ಯಾಣ ಮಂಡಳಿಗಳು 73 ಲಕ್ಷ ಕಾರ್ಮಿಕರಿಗೆ ತಲಾ 1000ರೂ. ಕೊಟ್ಟಿವೆ. ಬಡತನದ ರೇಖೆಯ ಕೆಳಗಿನ ಪಡಿತರ ಕಾರ್ಡುದಾರರಿಗೆ ತಿಂಗಳಿಗೆ 35 ಕೆ.ಜಿ. ಹೆಚ್ಚುವರಿ ಅಕ್ಕಿಯನ್ನು ಉಚಿತವಾಗಿ ಕೊಡಲಾಗಿದೆ. ಇತರ ಕಾರ್ಡುದಾರರಿಗೆ, ಬಡತನದ ರೇಖೆಯ ಮೇಲಿರುವವರು ಮತ್ತು ಆದ್ಯತೆಯಲ್ಲದ ಕಾರ್ಡುದಾರರಿಗೂ 15 ಕೆ.ಜಿ. ಉಚಿತ ಅಕ್ಕಿ ದೊರೆತಿದೆ. ಆವಶ್ಯಕ ಸಾಮಗ್ರಿಗಳಿದ್ದ 87.59 ಲಕ್ಷ ಕಿಟ್‌ಗಳನ್ನು ಉಚಿತವಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಹಂಚಲಾಗಿದೆ. ಇದಕ್ಕೆ 879 ಕೋಟಿ ರೂ. ವೆಚ್ಚವಾಗಿದೆ.

ಇನ್ನೊಂದು ಅಂಶವೆಂದರೆ ರಾಜ್ಯದ ಯಾವುದೇ ಓರ್ವ ಪ್ರಜೆ ಕೋವಿಡ್ -19 ನಿಂದಾಗಿ ಹಸಿದಿರಬಾರದು ಎಂಬ ಸರ್ಕಾರದ ದೃಢ ನಿರ್ಧಾರ. ಉಚಿತ ಪಡಿತರ, ದಿನಸಿ ಮತ್ತು ಉಚಿತ ಆಹಾರವನ್ನು ಸಮುದಾಯ ಅಡುಗೆ ಮನೆ ಮೂಲಕ ನೀಡಲಾಯಿತು. 1034 ಪಂಚಾಯತಿ, ಪುರಸಭೆ ಮತ್ತು ನಗರಸಭೆಗಳಲ್ಲಿ 1137 ಸಮುದಾಯ ಅಡುಗೆ ಮನೆಗಳನ್ನು ರಚಿಸಲಾಯಿತು. ಏಪ್ರಿಲ್ 30 ರ ವರೆಗೆ ಇವು 1,33,883 ಜನರಿಗೆ ಆಹಾರ ನೀಡಿದ್ದು, ಇದರಲ್ಲಿ 1,07,128 ಜನರಿಗೆ ಉಚಿತ ಆಹಾರ ನೀಡಲಾಗಿದೆ ಮತ್ತು ಉಳಿದವರಿಗೆ ಒಂದು ಊಟಕ್ಕೆ ರೂ. 20 ರಂತೆ ದರ ವಿಧಿಸಲಾಗಿದೆ.

ಹಾಗೆಯೇ ಅತಿಥಿ ಕಾರ್ಮಿಕರಿಗಾಗಿ ವಸತಿ ಮತ್ತು ಉಚಿತ ಆಹಾರ ವ್ಯವಸ್ಥೆ ಮಾಡಲಾಯಿತು.  ರಾಜ್ಯದಾದ್ಯಂತ 19,902 ಕ್ಯಾಂಪ್ ಗಳಲ್ಲಿ 3,52,515 ಅತಿಥಿ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಲಾಯಿತು.  ಇವರಿಗೆ ಗೃಹ ಇಲಾಖೆಯಿಂದ ವಿಶೇಷ ಗುರುತಿನ ಚೀಟಿ ನೀಡಲಾಗಿತ್ತು.  ರಾಜ್ಯ ಸರಕಾರ ಇವರುಗಳನ್ನು ಅವರವರ ರಾಜ್ಯದಲ್ಲಿ ವಿಶೇಷ ರೈಲುಗಳಲ್ಲಿ ಕಳುಹಿಸಲು ಮುಂದಾಗಿದೆ.

ಕೋವಿಡ್ -19 ಮಹಾಮಾರಿ ಮತ್ತು ಇದನ್ನು ನಿಯಂತ್ರಿಸಲು ಕೈಗೊಂಡ ಸಂಪೂರ್ಣ ಲಾಕ್ ಡೌನ್ ಮತ್ತಿತರ ಕ್ರಮಗಳು ಸರಕು ಉತ್ಪಾದನೆ ಮತ್ತು ಸೇವೆಗಳನ್ನು ಸುಮಾರಾಗಿ ಸಂಪೂರ್ಣವಾಗಿಯೇ ಸ್ಥಗಿತಗೊಳಿಸಿಬಿಟ್ಟಿದೆ.  ಅನಿವಾಸಿ ಕೇರಳೀಯರಿಂದ ಬರುತ್ತಿದ್ದ ನಿಧಿಗಳಿಗೆ  ಹೊಡೆತ ಬಿದ್ದಿರುವುದರ ದುಷ್ಪರಿಣಾಮ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇಡೀ ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಕೊವಿಡ್-19 ಪ್ರಸರಣೆ ತಡೆಯುವಲ್ಲಿ ಮತ್ತು ಪರಿಹಾರ ಒದಗಿಸುವಲ್ಲಿ ಸಕ್ರಿಯವಾಗಿವೆ. ಜನರ ನಡುವೆ ಜಾಗೃತಿ ಅಭಿಯಾನ ಮತ್ತು ನಿಯಂತ್ರಣ ಕಾರ್ಯದಲ್ಲಿ ಪಕ್ಷ ಸಕ್ರಿಯವಾಗಿ ಪಾಲ್ಗೊಂಡಿದೆ. ಪಕ್ಷದ ಸದಸ್ಯರು ಆಹಾರ ಮತ್ತು ಇತರ ಆವಶ್ಯಕ ಸಾಮಗ್ರಿಗಳ ಅಗತ್ಯವಿದ್ದವರಿಗೆ ಅವನ್ನು ಸಂಗ್ರಹಿಸಿ ವಿತರಣೆ ಮಾಡುವಲ್ಲಿ ಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಪಕ್ಷದ ಘಟಕಗಳು ಮುಖಗವಸುಗಳನ್ನು ತಯಾರಿಸಿ, ಅವನ್ನು ಮತ್ತು ಶುಚಿಕಾರಕಗಳನ್ನು ಜನಸಾಮಾನ್ಯರಿಗೆ ಮತ್ತು ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಆರೋಗ್ಯ ಕಾರ್ಯಕರ್ತರಿಗೆ ಹಂಚಿದ್ದಾರೆ.

ಈಗ ರಾಜ್ಯ ಸರ್ಕಾರವು ಅನಿವಾಸಿ ಕೇರಳೀಯರನ್ನು ದೇಶದ ಒಳಗಿಂದಲೂ, ಹೊರಗಿಂದಲೂ ಮರಳಿ ತರಲು ಕ್ರಮ ಕೈಗೊಳ್ಳುತ್ತಿದೆ.  ಸುಮಾರು 4 ಲಕ್ಷ ಜನ ಹೊರದೇಶದಿಂದ ಕೇರಳಕ್ಕೆ ಮರಳಿ ಬರಲು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.  ಬೇರೆ ರಾಜ್ಯಗಳಿಂದ 1.5 ಲಕ್ಷ ಕೇರಳೀಯರು ಈಗಾಗಲೇ ಈ ಕಾರ್ಯಕ್ರಮದಡಿ ರಿಜಿಸ್ಟರ್ ಮಾಡಿಸಿದ್ದಾರೆ.  ಇದು ಎರಡನೇ ಅಲೆಯನ್ನು ಸೃಷ್ಟಿಸಲಿದೆ.  ಎಲ್.ಡಿ.ಎಫ್. ಸರ್ಕಾರ ಮತ್ತು ಪಕ್ಷ ಈ ಸವಾಲು ಎದುರಿಸಲು ಸಿದ್ಧವಾಗುತ್ತಿವೆ.  ಈ ಕೆಳಕಾಣಿಸಿದ ಗ್ರಾಫ್‌ನಲ್ಲಿ ಕಾಣುವಂತೆ  ಇಳಿಯುತ್ತಿದ್ದ ಸೋಂಕಿತರ ಸಂಖ್ಯೆ ಮತ್ತೆ ಏರಲಾರಂಭಿಸಿದೆ.

ಇಂಗ್ಲೀಷ್‌ ಆವೃತ್ತಿಗಾಗಿ ಈ ಕೆಳಗಿನಿ ಲಿಂಕ್‌ ಕ್ಲಿಕ್‌ ಮಾಡಿರಿ…

https://cpim.org/documents/report-adopted-polit-bureau

 

Leave a Reply

Your email address will not be published. Required fields are marked *