ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ: ಟ್ರಸ್ಟ್ ತನ್ನ ಕೆಲಸ ಮಾಡಲಿ

ಅಯೋಧ್ಯಾ ವಿವಾದವನ್ನು ಒಂದೋ ಎರಡೂ ಕಡೆಯವರು ಮಾತುಕತೆಗಳ ಮೂಲಕ ಪರಸ್ಪರ ಒಪ್ಪಿಗೆಯಾದ ಒಂದು ಒಪ್ಪಂದದ ಮೂಲಕ, ಇಲ್ಲವೇ ಒಂದು ನ್ಯಾಯಾಲಯದ ತೀರ್ಪಿನ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಿಪಿಐ(ಎಂ) ಮೊದಲಿಂದಲೂ ಹೇಳುತ್ತ ಬಂದಿದೆ. ಸುಪ್ರಿಂ ಕೋರ್ಟ್ ತನ್ನ ತೀರ್ಪು ನೀಡಿ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿ ಕೊಟ್ಟಿದೆ.

ಆದರೆ ಅದು ಈ ನಿರ್ಮಾಣವನ್ನು ಒಂದು ಟ್ರಸ್ಟ್ ಕೈಗೊಳ್ಳಬೇಕು ಎಂದು ನಿರ್ದೇಶನ ಕೊಟ್ಟಿತ್ತು. ಅಯೋಧ್ಯೆಯಲ್ಲಿ ಭೂಮಿಪೂಜಾ ವಿಧಿಯನ್ನು ಉತ್ತರಪ್ರದೇಶ ಆಡಳಿತವು ವಹಿಸಿಕೊಂಡಿರುವುದು, ಜತೆಗೆ ಕೇಂದ್ರ ಸರಕಾರ ಪ್ರಧಾನ ಮಂತ್ರಿಗಳ ಅತ್ಯುಚ್ಚ ಮಟ್ಟದಿಂದಲೇ ಇದರಲ್ಲಿ ಜತೆಗೂಡಿರುವುದು ಸುಪ್ರಿಂ ಕೋರ್ಟಿನ ತೀರ್ಪಿಗೆ ವಿರುದ್ಧವಾಗಿದೆಯಷ್ಟೇ ಅಲ್ಲ, ಭಾರತದ ಸಂವಿಧಾನದಲ್ಲಿ ಹೇಳಿರುವುದಕ್ಕೂ, ಅದರ ಆಶಯಕ್ಕೂ ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಸುಪ್ರಿಂ ಕೋರ್ಟ್ ಡಿಸೆಂಬರ್ 6, 1992ರ ಬಾಬ್ರಿ ಮಸೀದಿ ಧ್ವಂಸ ಒಂದು ಕ್ರಿಮಿನಲ್‍ ಕೃತ್ಯ ಎಂದು ವರ್ಣಿಸಿ ಅದನ್ನು ಖಂಡಿಸಿತ್ತು ಕೂಡ. ಈ ಅಪರಾಧ ಎಸಗಿದವರನ್ನು ಶಿಕ್ಷಿಸುವುದು  ಅಂತಿರಲಿ, ಕೇಂದ್ರ/ರಾಜ್ಯಸರಕಾರಗಳು ಸೇರಿಕೊಂಡಿರುವುದು ಈ ಧ್ವಂಸಕೃತ್ಯಕ್ಕೆ ಪೂರ್ವಾನ್ವಯವಾಗುವಂತೆ ಕಾನೂನುಬದ್ಧತೆಯನ್ನು ಒದಗಿಸಬಾರದು.

ಕೊವಿಡ್‍-19  ಮಹಾಸೋಂಕು ದೇಶಾದ್ಯಂತ ಹರಡಿದೆ. ಕೇಂದ್ರ ಗೃಹಮಂತ್ರಾಲಯ ವಿಧಿಸಿರುವ ಪ್ರತಿಬಂಧಕ ಕ್ರಮಗಳು ಧಾರ್ಮಿಕ ಸಮಾರಂಭಗಳಿಗೆ ಅವಕಾಶ ನೀಡುವುದಿಲ್ಲ. ಅಯೋಧ್ಯೆಯಲ್ಲಿ ನಿಯೋಜಿಸಿದ ಪುರೋಹಿತರುಗಳು ಮತ್ತು ಪೋಲೀಸ್‍ ಸಿಬ್ಬಂದಿ ಕೊವಿಡ್ ಸೋಂಕಿತರೆಂದು ತಪಾಸಣೆಯಾಗಿರುವುದು ಮಾನವ ಜೀವಗಳಿಗೆ ಇರುವ ಅಪಾಯಗಳನ್ನು ಎತ್ತಿ ತೋರಿದೆ.

ಇಂತಹ ಸಂದರ್ಭದಲ್ಲಿ ಭಾರತದ ಜನತೆ ಮಹಾಸೋಂಕನ್ನು ತಡೆಯುವ ವಿಧಿ-ವಿಧಾನಗಳ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಜನಗಳ ಧಾರ್ಮಿಕ ಭಾವನೆಗಳನ್ನು ಪಕ್ಷಪಾತೀ ರಾಜಕೀಯ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳಲು ಅನುಮತಿ ನೀಡಬಾರದು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *