ಹಿರಿಯ ಕಾರ್ಮಿಕ ಮುಖಂಡ ಶ್ಯಾಮಲ್ ಚಕ್ರವರ್ತಿ ನಿಧನ

ಸಿಪಿಐ(ಎಂ)ನ ಕೇಂದ್ರ ಸಮಿತಿ ಸದಸ್ಯ ಕಾಂ. ಶ್ಯಾಮಲ್ ಚಕ್ರವರ್ತಿ ಆಗಸ್ಟ್ 6ರಂದು ನಿಧನರಾಗಿದ್ದಾರೆ. ಅವರಿಗೆ 77ವರ್ಷವಾಗಿತ್ತು. ಕೆಲವು ದಿನಗಳ ಹಿಂದೆ ಅವರನ್ನು ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಕೊವಿಡ್-19 ಸೋಂಕು ತಗಲಿದ್ದು ದೃಢಪಟ್ಟಿತು. ಸಿಪಿಐ(ಎಂ) ಪೊಲಿಟ್ ಬ್ಯುರೊ ಅವರ ನಿಧನಕ್ಕೆ ಆಳವಾದ ದುಃಖ ವ್ಯಕ್ತಪಡಿಸಿದೆ.

1960ರ ದಶಕದಲ್ಲಿ ಶ್ಯಾಮಲ್ ಚಕ್ರವರ್ತಿ ವಿದ್ಯಾರ್ಥಿ ಆಂದೋಲನವನ್ನು ಸೇರಿದರು. ಕೊಲ್ಕತಾದ ವಿದ್ಯಾಸಾಗರ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದರು.

1960ರಲ್ಲಿ ಅವರು ಅವಿಭಜಿತ ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು. 1981ರಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಲ ವಿಧಾನಸಭೆಗೆ ಚುನಾಯಿತರಾದರು. ನಂತರ ಮತ್ತೆ ಮೂರು ಬಾರಿ ಆಯ್ಕೆಗೊಂಡ ಅವರು 9 ವರ್ಷಗಳ ಕಾಲ ಪಶ್ಚಿಮ ಬಂಗಾಲದ ಸಾರಿಗೆ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. ಒಂದು ಅವಧಿಗೆ ಅವರು ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

ಹಲವಾರು ಕಾರ್ಮಿಕ ಸಂಘಟನೆಗಳೊಡನೆ ಸಂಬಂಧ ಹೊಂದಿದ್ದ ಶ್ಯಾಮಲ್ ಚಕ್ರವರ್ತಿಯವರು ಸಿಐಟಿಯು ನಲ್ಲಿ ವಿವಿಧ ಹುದ್ದೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದರು, ಪಶ್ಚಿಮ ಬಂಗಾಲ ಘಟಕದ ಅಧ್ಯಕ್ಷರೂ ಆಗಿದ್ದರು. ಕಾರ್ಮಿಕ ವರ್ಗದ ಪರವಾದ ಹೋರಾಟದಲ್ಲಿ ಅವರು ಒಂದು ವರ್ಷ ಜೈಲುವಾಸವನ್ನೂ ಅನುಭವಿಸಿದರು, ಆರು ತಿಂಗಳು ಭೂಗತರಾಗಿಯೂ ಇದ್ದರು.

ಅವರು 1978ರಲ್ಲಿ ಸಿಪಿಐ(ಎಂ)ನ ಪಶ್ಚಿಮ ಬಂಗಾಲ ರಾಜ್ಯ ಸಮಿತಿಗೆ ಆಯ್ಕೆಯಾದರು, 2002ರಲ್ಲಿ ಕೇಂದ್ರ ಸಮಿತಿಗೆ ಆಯ್ಕೆಯಾದರು.

ಸಿಪಿಐ(ಎಂ) ಪೊಲಿಟ್ ‌ಬ್ಯುರೊ ಅವರ ಮಗಳು ಉಷಾಸಿಯವರಿಗೆ ಮತ್ತು ಪಶ್ಚಿಮ ಬಂಗಾಲದ ಪಕ್ಷದ ಎಲ್ಲ ಸದಸ್ಯರಿಗೂ ತನ್ನ ಹಾರ್ದಿಕ ಸಂತಾಪವನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *