ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ

೨೦೨೦ ಆಗಸ್ಟ್ ೨೦ ರಿಂದ ೨೬ ರವರೆಗೆ ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ದೇಶದಲ್ಲಿ ಕೊವಿಡ್-೧೯ ರ ಹಾವಳಿ ತೀವ್ರವಾಗುತ್ತಲೇ ಇದೆ. ಈಗಾಗಲೇ ಐವತ್ತು ಸಾವಿರ ಭಾರತದ ಅಮಾಯಕ ಪ್ರಜೆಗಳು ಸಾವನ್ನಪ್ಪಿದ್ದಾರೆ. ಸುಮಾರು ೫೦ ಲಕ್ಷದಷ್ಟು ಜನ ಈ ಭಯಂಕರ ಸಾಂಕ್ರಾಮಿಕ ಪಿಡುಗಿನ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯ ದಿನಗಳ ಭವಿಷ್ಯ ನುಡಿಯುತ್ತಿದ್ದ ಜಾದುಗಾರ ಮೋದಿ ತನ್ನ ವೈಫಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಒಂದೆಡೆ ಗಡಿಯಲ್ಲಿ ಯುದ್ಧೋನ್ಮಾದವನ್ನು ಹುಟ್ಟುಹಾಕಿ ಜನರಲ್ಲಿ ಆತಂಕವನ್ನು ಉಂಟುಮಾಡುತ್ತಿದ್ದಾರೆ, ಇನ್ನೊಂದೆಡೆ ಅಯೋಧ್ಯೆಯಲ್ಲಿ ಮಂದಿರ ಕಟ್ಟುವತ್ತ ದೇಶದೆಲ್ಲೆಡೇ ಜನಜಂಗುಳಿಯನ್ನು ಬಡಿದೆಬ್ಬಿಸಲು ಮುಂದಾಗಿದೆ.

ಲಾಕ್‌ಡೌನ್ ವೈಫಲ್ಯ: 

ಪ್ರಧಾನಿ ಮೋದಿಯವರು ಹಿಂದೆ ನೋಟ್ ಅಮಾನ್ಯೀಕರಣ ಮಾಡಿದಂತೆ ಯಾವುದೇ ಸಿದ್ಧತೆಯಿಲ್ಲದೆ ಏಕಪಕ್ಷೀಯವಾಗಿ ಘೋಷಿಸಿದ ಲಾಕ್‌ಡೌನ್ ಈ ಸೋಂಕು ಹರಡುವುದನ್ನು ತಡೆಯುವಲ್ಲಿ ವಿಫಲವಾಗಿದೆ ಎಂಬುದು ಸಾಬೀತಾಗಿದೆ. ಬದಲಿಗೆ, ಲಾಕ್‌ಡೌನ್ ದೇಶದ ಬಹುಪಾಲು ಜನಗಳ ಮೇಲೆ, ಅದರಲ್ಲೂ ದಲಿತರು, ಬುಡಕಟ್ಟು ಜನಗಳು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಾಂಗರ ಮೇಲೆ ಹೇಳತೀರದ ಸಂಕಷ್ಟಗಳನ್ನು ಹೇರಿತು. ಕೇಂದ್ರ ಬಿಜೆಪಿ ಸರ್ಕಾರ ಅವರ ನೆರವಿಗೆ ಧಾವಿಸಲಿಲ್ಲ. ಅಂತಹ ಕುಟುಂಬಗಳಿಗೆ ನಗದು ವರ್ಗಾವಣೆ ಮತ್ತು ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವುದನ್ನು ನಿರಾಕರಿಸುತ್ತಲೇ ಬಂದಿದೆ.

ಸೋಂಕು ಹರಡುವುದನ್ನು ತಡೆಯುವಲ್ಲಿ ವಿಫಲವಾದ ಮೋದಿ ಸರಕಾರ ಈಗ ಅಷ್ಟೇ ಬೇಜವಾಬ್ದಾರಿಂದ ಲಾಕ್‌ಡೌನ್ ತೆರವು ಮಾಡುತ್ತಾ ತಾನು ಉಂಟುಮಾಡಿದ ಸಮಸ್ಯೆಗಳನ್ನು ಎದುರಿಸುವ ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ.

ಆರ್ಥಿಕ ಪರಿಸ್ಥಿತಿ ಅಧೋಗತಿಗೆ:

ಕೊರೊನಾ ದಾಳಿ ಆಗುವ ಮೊದಲೇ ಮೋದಿ ನೇತೃತ್ವದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹಿಂಜರಿತದತ್ತ ಜಾರತೊಡಗಿತ್ತು. ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ ಸಾರ್ವಜನಿಕ ರಂಗವನ್ನು ಬಲಪಡಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸ ಬಹುದಾಗಿತ್ತು. ಜನರಿಗೆ ಉದ್ಯೋಗ ದೊರೆಯುವಂತೆ ಮಾಡಿ ಅವರ ಆದಾಯವನ್ನು ಹೆಚ್ಚಿಸಿ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸಬಹುದಾಗಿತ್ತು. ಆದರೆ ಮೋದಿ ಸರ್ಕಾರ ರೈಲ್ವೆ, ವಿದ್ಯುತ್, ಬಿಎಸ್‌ಎನ್‌ಎಲ್, ಕಲ್ಲಿದ್ದಲು, ಪೆಟ್ರೋಲಿಯಂ, ಬ್ಯಾಂಕಿಂಗ್, ವಿಮೆ ಮೊದಲಾದ ಹಣಕಾಸು ವಲಯವನ್ನು ಖಾಸಗೀಕರಣಕ್ಕೆ ಒಳಪಡಿಸಿ ದೇಶದ ಆಸ್ತಿಯನ್ನು ಲೂಟಿ ಮಾಡಲು ಲಾಭಕೋರ ಕಾರ್ಪೋರೇಟ್ ಕಂಪನಿಗಳಿಗೆ ಬಾಗಿಲು ತೆರೆದಿಡತೊಡಗಿದೆ.

ಕಾರ್ಮಿಕ ವರ್ಗದ ಸುಲಿಗೆ:

ದೇಶದಲ್ಲಿ ಕಾರ್ಪೋರೇಟ್ ಕಂಪನಿಗಳ ಸೇವೆಗೆ ಬದ್ಧವಾಗಿರುವ ಮೋದಿ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ಬದಲಾಸಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ದಿನದ ದುಡಿಮೆಯನ್ನು ೮ ರಿಂದ ೧೨ ಗಂಟೆಗಳಿಗೆ ಏರಿಸಲಾಗುತ್ತಿದೆ. ನಿರುದ್ಯೋಗಿಗಳ ಸೈನ್ಯವನ್ನೇ ಹುಟ್ಟುಹಾಕಿ ದುಡಿಮೆಯ ಮಾರುಕಟ್ಟೆಯಲ್ಲಿ ಕಾರ್ಮಿಕರ ಚೌಕಾಸಿಯ ಶಕ್ತಿಯನ್ನು ಕುಗ್ಗಿಸಲಾಗುತ್ತಿದೆ. ದಿನಗೂಲಿ/ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನಿರಾಕರಿಸಲಾಗುತ್ತದೆ. ಅಂಗನವಾಡಿ, ಬಿಸಿಯೂಟ, ಆಶಾ ಮೊದಲಾದ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಹಕ್ಕುಗಳನ್ನು ಅನ್ವಯಿಸಲು ಕಾರ್ಮಿಕ ವಿರೋಧಿ ಮೋದಿ ಸರ್ಕಾರ ಮುಂದಾಗುತ್ತಿಲ್ಲ.

ರೈತರನ್ನು ನೇಣಿಗೆ ತಳ್ಳುತ್ತಿರುವ ಸರ್ಕಾರ:

ದೇಶಕ್ಕೆ ಅನ್ನ ನೀಡುವ ರೈತರ ದುರಾವಸ್ಥೆ ಮೋದಿ ಕಣ್ಣುಗಳಿಗೆ ಕಾಣುವುದೇ ಇಲ್ಲ. ಅವರನ್ನು ಕೃಷಿ ರಂಗದಿಂದಲೇ ಹೊರಹಾಕುವ ಸಂಚು ನಡೆದಿದೆ. ಕಾರ್ಪೊರೇಟ್ ಕಂಪೆನಿಗಳಿಗೆ ಕೋಟ್ಯಾಂತರ ರೂಪಾಯಿಗಳ ರಿಯಾಯಿತಿಗಳನ್ನು ನೀಡುವ ಮೋದಿ ಸರ್ಕಾರ ರೈತರ ಸಾಲವನ್ನು ಒಂದೇ ಒಂದು ಬಾರಿ ಮನ್ನಾಮಾಡಲು ಮನಸ್ಸು ಮಾಡುತ್ತಿಲ್ಲ. ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ ನೀಡಲು ತಯಾರಿಲ್ಲ. ಭೂ ಸುಧಾರಣಾ ಕಾಯ್ದೆಗೆ ಬಂಡವಾಳಶಾಹಿ ಪರ ತಿದ್ದುಪಡಿ ಮಾಡಿ ರೈತರ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಲಪಟಾಸಿ ರೈತರನ್ನು ಬೀದಿಪಾಲು ಮಾಡುವ ಷಡ್ಯಂತ್ರ ರೂಪಿಸಲಾಗುತ್ತಿದೆ. ಕೃಷಿಯ ಕಾರ್ಪೋರೇಟೀಕರಣವೂ ಈ ಷಡ್ಯಂತ್ರದ ಭಾಗವಾಗಿದ್ದು ಕೃಷಿ ಮಾರುಕಟ್ಟೆಯೊಳಗೂ ಕಾರ್ಪೋರೇಟ್ ಕಂಪನಿಗಳಿಗೆ ಪ್ರವೇಶ ಒದಗಿಸಲು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.

ಕೃಷಿ ಕ್ಷೇತ್ರದಲ್ಲಿ ರೈತರೊಂದಿಗೆ ಬೆವರುಸುರಿಸಿ ದುಡಿಯುತ್ತಿರುವ ಕೃಷಿಕೂಲಿಕಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ದಿವಾಳಿಯಾಗುತ್ತಿರುವ ರೈತನಿಗೆ ಈಗ ಕೃಷಿ ಕೂಲಿಕಾರರಿಗೆ ಯೋಗ್ಯ ವೇತನ ನೀಡಿ ದುಡಿಸುವುದು ಅಸಾಧ್ಯವಾಗುತ್ತಿದೆ. ಕೂಲಿಕಾರರು ದುಡಿಮೆಯನ್ನು ಅರಸಿ ವಲಸೆ ಹೋಗುವುದು ಅನಿವಾರ್‍ಯವಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಗರಿಷ್ಟ ಅನುದಾನ ಒದಗಿಸಿ ಅದರ ವಿಸ್ತರಣೆ ಹಾಗೂ ಸಮರ್ಪಕ ಅನುಷ್ಠಾನ ಕೇಂದ್ರ ಸರ್ಕಾರದ ಆದ್ಯತೆಯಾಗಿಲ್ಲ.

ಜನಸಾಮಾನ್ಯರ ಮೇಲೆ ಹೊರೆ:

ಕೊವಿಡ್-೧೯ ರ ಹಾವಳಿ ಮತ್ತು ಅದು ಸೃಷ್ಟಿಸಿರುವ ಆತಂಕಕ್ಕೆ ಒಳಗಾಗಿ ಕಂಗೆಟ್ಟ ದೇಶದ ಜನಸಾಮಾನ್ಯರಿಗೆ ಅಗತ್ಯ ಆರ್ಥಿಕ ನೆರವು, ಮಾನವೀಯ ಹಾರೈಕೆಯನ್ನು ಒದಗಿಸಬೇಕಾದ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಜನರ ಮೇಲೆ ಹೊರಲಾಗದ ಹೊರೆಗಳನ್ನು ಹೇರುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ನಿರಂತರ ಬೆಲೆಯೇರಿಕೆಯಿಂದ ಅಗತ್ಯ ಸರಕುಗಳ ಬೆಲೆಗಳು ಗಗನಕ್ಕೇರುತ್ತಿವೆ. ನಿರುದ್ಯೋಗ ಉಲ್ಬಣಗೊಂಡಿದೆ. ಅವಶ್ಯಕ ವಸ್ತುಗಳ ಕಾಯ್ದೆಯನ್ನು ತೆಗೆದುಹಾಕಲು ಸಂಚು ಹೂಡಲಾಗಿದೆ. ಇದು ದೇಶದ ಆಹಾರ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದ್ದು ದೇಶದಲ್ಲಿ ಈಗ ಇರುವ ಪಡಿತರ ವ್ಯವಸ್ಥೆಯನ್ನೇ ನಾಶ ಮಾಡಲಿದೆ.

ಕೋಮುವಾದಿ ದ್ರುವೀಕರಣ:

ಮೋದಿ ನೇತೃತ್ವದ ಸರ್ಕಾರ ಕೋಮುವಾದಿ ದ್ರುವೀಕರಣವನ್ನು ತೀವ್ರಗೊಳಿಸಲು ಮೊದಲ ಆದ್ಯತೆ ನೀಡುತ್ತಿದೆ. ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ಕಟ್ಟಲು ಭೂಮಿ ಪೂಜೆ ಮಾಡಿ ಸಂಭ್ರಮಿಸುವ ಮೂಲಕ ಮತ್ತೊಂದು ಸುತ್ತಿನ ಬಾವೋದ್ರೇಕಕ್ಕೆ ಆಸ್ಪದ ಮಾಡಿಕೊಡಲಾಗಿದೆ. ಕೋಮು ಹಿಂಸಾಚಾರದಲ್ಲಿ ತೊಡಗಿದ ಆರೆಸ್ಸೆಸ್/ಬಿಜೆಪಿ ಮತ್ತು ಅದರ ಸಂಘಟನೆಗಳ ಕಾರ್ಯಕರ್ತರ ಪಾತ್ರವನ್ನು ಮುಚ್ಚಿಹಾಕಲಾಗುತ್ತದೆ ಮತ್ತು ಅವರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಮುಸ್ಲಿಂ ದಾರ್ಮಿಕ ಅಲ್ಪಸಂಖ್ಯಾತರ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಕೊವಿಡ್-೧೯ ರ ಹಾವಳಿ ಸಂದರ್ಭದಲ್ಲಿಯೂ ಮುಸ್ಲಿಂ ಸಮುದಾಯದವರನ್ನು ಹೀನಾಯ ಅಪಪ್ರಚಾರಕ್ಕೆ ಒಳಪಡಿಸಲಾಯಿತು.

ನಾಗರಿಕ ಹಕ್ಕುಗಳ ಮೇಲೆ ದಾಳಿ:

ಮೋದಿ ಸರ್ಕಾರ ದೇಶ ಕಂಡ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂದು ಚರಿತ್ರೆಯಲ್ಲಿ ದಾಖಲಾಗುತ್ತಿದೆ. ಭಿನ್ನ ಅಭಿಪ್ರಾಯದ ಅಭಿವ್ಯಕ್ತಿಯನ್ನು ಈ ಸರ್ಕಾರ `ದೇಶ-ವಿರೋಧಿ’ ಎಂದು ಪರಿಗಣಿಸುತ್ತದೆ ಮತ್ತು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿನಲ್ಲಿ ಇಡಲಾಗುತ್ತದೆ. ಹಲವು ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಆರೋಗ್ಯ ಸಂಬಂದಿ ವಿಷಯಗಳ ಆಧಾರದಲ್ಲಿ ಬಿಡುಗಡೆ ಮಾಡಬೇಕೆಂಬ ಆಗ್ರಹವನ್ನು ಕಡೆಗಣಿಸಲಾಗುತ್ತದೆ.

ಸರ್ವಾಧಿಕಾರಿಶಾಹಿ ಓಟ:

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೊರೊನಾ ಸೋಂಕಿನ ನೆಪದಲ್ಲಿ ಅಧಿಕಾರದ ಕೇಂದ್ರೀಕರಣದ ತನ್ನ ಓಟವನ್ನು ತೀವ್ರಗೊಳಿಸಿದೆ. ನಮ್ಮ ಸಂವಿಧಾನದ ಮೂಲ ನೀತಿಯಾಗಿರುವ ಒಕ್ಕೂಟ ತತ್ವವನ್ನು ಅದು ನಿರಾಕರಿಸುತ್ತದೆ. ಎಲ್ಲ ನಿರ್ಧಾರಗಳನ್ನು ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಇಂತಹ ಏಕಪಕ್ಷೀಯ ನಿರ್ಧಾರಗಳ ದುಷ್ಪರಿಣಾಮಗಳನ್ನು ರಾಜ್ಯಗಳ ಮೇಲೆ ಹೊರಿಸಲಾಗುತ್ತಿದೆ.

ಕೊರೊನಾ ಸೋಂಕನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರಗಳು ಮುಂಚೂಣಿಯಲ್ಲಿದ್ದರೂ ಅವರಿಗೆ ಸಂಪನ್ಮೂಲಗಳನ್ನು ಒದಗಿಸುವ ಬದಲು ಅವರಿಗೆ ಸಲ್ಲಬೇಕಾದ ಜಿಎಸ್‌ಟಿ ಬಾಕಿಗಳನ್ನು ನಿರಾಕರಿಸಲಾಗುತ್ತಿದೆ.

ಸಂವಿಧಾನಿಕ ಸಂಸ್ಥೆಗಳು ಶಿಥಿಲ:

ಬಿಜೆಪಿ ಸರ್ಕಾರ ಎಲ್ಲ ಸ್ವತಂತ್ರ ಸಂವಿಧಾನಿಕ ಸಂಸ್ಥೆಗಳನ್ನು ಶಿಥಿಲಗೊಳಿಸುತ್ತದೆ. ಸಂಸತ್ತಿನ ಕಾರ್ಯನಿರ್ವಹಣೆಯನ್ನು ಮಿತಗೊಳಿಸಲಾಗಿದೆ. ನ್ಯಾಯಾಂಗ ಕಾರ್ಯನಿರ್ವಹಿಸುತ್ತಿರುವ ವೈಖರಿ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಂವಿಧಾನದ ಕಲಂ ೩೭೦ ಮತ್ತು ೩೫ಎ ರದ್ದತಿಯನ್ನು ಮತ್ತು ಸಿಎಎಯನ್ನು ಪ್ರಶ್ನಿಸುವ ಹಲವಾರು ಮಹತ್ವದ ಅರ್ಜಿಗಳನ್ನು ಇತ್ಯರ್ಥ ಮಾಡದೆ ಬಾಕಿಯಿಡಲಾಗಿದೆ. ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಸರಿಸುಮಾರು ಅಸಾಧ್ಯವಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಹೆಚ್ಚಾಚ್ಚಾಗಿ ಕೇಂದ್ರ ಸರ್ಕಾರದ ರಾಜಕೀಯ ಅಂಗಗಳಂತೆ ಕೆಲಸ ಮಾಡುತ್ತಿವೆ.

ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವುದು:

ಬಿಜೆಪಿ ಪ್ರಜಾಸತ್ತಾತ್ಮಕವಾಗಿ ಚುನಾಯಿಸಲ್ಪಟ್ಟ ಬೇರೆ ಪಕ್ಷಗಳ ಸರ್ಕಾರಗಳನ್ನು ಯಾವುದೇ ಸಂಕೋಚವಿಲ್ಲದೆ ಉರುಳಿಸಲು ಕಾರ್ಯೋನ್ಮುಖವಾಗಿದೆ. ತಾನು ಅಕ್ರಮವಾಗಿ ಗಳಿಸಿರುವ ಅಪಾರ ಹಣವನ್ನು ಬಳಸಿಕೊಂಡು ನಗ್ನ ಕುದುರೆ ವ್ಯಾಪಾರದ ಮೂಲಕ ಪಕ್ಷಾಂತರಗಳನ್ನು ಸೃಷ್ಟಿಸುತ್ತಿದೆ.

ಕೇರಳದ ಎಲ್‌ಡಿಎಫ್ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ:

ಕೇರಳದಲ್ಲಿ, ಯು.ಎ.ಇ. ಕಾನ್ಸುಲೇಟ್‌ನ ವಿಳಾಸವಿರುವ ರಾಜತಾಂತ್ರಿಕ ಬ್ಯಾಗೇಜ್ ಮೂಲಕ ನಡೆದಿರಬಹುದಾದ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣವನ್ನು ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್. ಮತ್ತು ಬಿಜೆಪಿ ಜತೆಗೂಡಿ ಎಲ್‌ಡಿಎಫ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಳಸುತ್ತಿವೆ. ಸುಳ್ಳು ಆರೋಪಗಳ ಮೇಲೆ ಮುಖ್ಯಮಂತ್ರಿಗಳ ರಾಜಿನಾಮೆಗೆ ಆಗ್ರಹಿಸುತ್ತಿವೆ. ಈ ಪ್ರಕರಣ ನಿಷಿದ್ದ ಚಿನ್ನದ ಮುಟ್ಟುಗೋಲಿಗೆ ಸಂಬಂಧಪಟ್ಟದ್ದು. ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರಿದ ವಿಷಯವಲ್ಲ. ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳು ಕೇಳಿದ್ದಾರೆ. ಎನ್‌ಐಎ ಈಗ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಿದೆ.

ಶಿಕ್ಷಣದ ಡಿಜಿಟಲ್ ವಿಭಜನೆ ಬೇಡ:

ಮೂಲ ರಚನೆಗಳ ಕೊರತೆ, ಕಂಪ್ಯೂಟರುಗಳು, ಸ್ಮಾರ್ಟ್ ಪೋನ್ ಮುಂತಾದ ಉಪಕರಣಗಳ ಅಭಾವ ಶಿಕ್ಷಣದ ಡಿಜಿಟಲ್ ವಿಭಜನೆಯನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳ ಒಂದು ದೊಡ್ಡ ವಿಭಾಗ ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಅಂತರ್ಜಾಲ ಮೂಲ ರಚನೆಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿಸಲು ಸಂಪನ್ಮೂಲಗಳನ್ನು ಒದಗಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ಹಾಗೂ ಅಗತ್ಯ ಉಪಕರಣಗಳನ್ನು ಖರೀದಿಸಲು ಹಣಕಾಸು ನೆರವನ್ನು ನೀಡಬೇಕು. ಇದಿಲ್ಲದೆ ಯಾವುದೇ ಡಿಜಿಟಲ್ ಬೋದನೆ/ಪರೀಕ್ಷೆ ನಡೆಸಬಾರದು. ಡಿಜಿಟಲ್ ಶಿಕ್ಷಣ ಭೌತಿಕ ಬೋಧನಾ ಕ್ರಮಕ್ಕೆ ಬದಲಿಯಾಗುವುದಿಲ್ಲ.

ಬಿಹಾರ ವಿಧಾನಸಭಾ ಚುನಾವಣೆ:

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಸೋಲುವುದು ಬಿಹಾರ ಮತ್ತು ದೇಶದ ಜನತೆಯ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ. ಎಡ ಪಕ್ಷಗಳು ಈ ಗುರಿ ಸಾಧನೆಗಾಗಿ ಶ್ರಮಿಸುತ್ತಿವೆ. ಬಿಜೆಪಿ ಈ ಚುನಾವಣೆಯಲ್ಲಿ ಭಾರೀ ಪ್ರಮಾಣದ ಹಣವನ್ನು ಬಳಸಿಕೊಂಡು ಈಗಾಗಲೇ ಬೃಹತ್ ಪ್ರಮಾಣದ ಡಿಜಿಟಲ್ ಪ್ರಚಾರವನ್ನು ಆರಂಭಿಸಿದೆ. ಚುನಾವಣೆಯನ್ನು ಡಿಜಿಟಲ್ ಪ್ರಚಾರ ಮತ್ತು ಡಿಜಿಟಲ್ ಮತದಾನದಿಂದ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಈ ಪ್ರಸ್ತಾವನೆಗೆ ಬಿಜೆಪಿ ಮತ್ತು ಜೆಡಿಯುನ ಬೆಂಬಲ ಇದೆ. ಸಿಪಿಐ(ಎಂ) ಮತ್ತು ಎಡಪಕ್ಷಗಳು ಇದನ್ನು ವಿರೋಧಿಸುತ್ತವೆ.

ಏಕೆಂದರೆ, ಇದರಿಂದ ಬಹುದೊಡ್ಡ ಜನ ವಿಭಾಗಗಳನ್ನು ಚುನಾವಣೆಯಲ್ಲಿ ಭಾಗವಹಿಸದಂತೆ ಹೊರಗಿಡಲು ಸಾಧ್ಯವಾಗಲಿದೆ ಮಾತ್ರವಲ್ಲ ಭಾರೀ ಪ್ರಮಾಣದ ಅಕ್ರಮಗಳನ್ನು ನಡೆಸಲು ಸಾಧ್ಯವಾಗಲಿದೆ. ಚುನಾವಣೆಯನ್ನು ಸರಿಯಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಹಣದ ದುರ್ಬಳಕೆಯನ್ನು ಅದು ತಡೆಯಬೇಕು. ಚುನಾವಣಾ ಬಾಂಡುಗಳನ್ನು ರದ್ದುಗೊಳಿಸಬೇಕು.

ಜಮ್ಮು ಮತ್ತು ಕಾಶ್ಮೀರ:

ಸಂವಿಧಾನದ ಕಲಂ ೩೭೦ ಮತ್ತು ೩೫ಎ ರದ್ದು ಮಾಡಿ ಒಂದು ವರ್ಷವಾದರೂ, ಪ್ರಮುಖ ಮುಖಂಡರು ಸೇರಿದಂತೆ ಸಾವಿರಾರು ಜನಗಳನ್ನು ಬಂಧನದಲ್ಲಿಟ್ಟರೂ, ಜನರ ಸಾಮಾಜಿಕ-ಆರ್ಥಿಕ ಜೀವನವನ್ನು ಛಿದ್ರಗೊಳಿಸಿಯೇ ಬಿಟ್ಟರೂ ಮತ್ತು ಸಂಪರ್ಕ ಜಾಲವನ್ನು ಕಡಿತಗೊಳಿಸಿದರೂ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಇಲ್ಲಿ ಕಳೆದ ಒಂದು ವರ್ಷ ಕಾಲ ಹೇರಲಾದ ರಾಜಕೀಯ ಲಾಕ್‌ಡೌನ್ ಅವಧಿಯಲ್ಲಿ ಹೊರಗಿನಿಂದ ಬರುವವರಿಗೆ ಆಸ್ತಿಗಳನ್ನು ಖರೀದಿಸಲು ಅನುವಾಗುವಂತೆ ನೆಲೆಸಿಗ ಸ್ಥಾನಮಾನದ ನಿರೂಪಣೆಯನ್ನು ಬದಲಿಸಿದೆ. ಆ ಮೂಲಕ ಕಾಶ್ಮೀರ ಕಣಿವೆಯಲ್ಲಿ ಜನಸಂಖ್ಯಾ ಸ್ವರೂಪದಲ್ಲಿ ಪರಿವರ್ತನೆಯನ್ನು ತಂದಿದೆ. ಜನಗಳ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಗಂಭೀರ ಉಲ್ಲಂಘನೆ ಮುಂದುವರೆದಿದೆ. ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರನ್ನು ರಾಷ್ಟ್ರ ವಿರೋಧಿಗಳೆಂದು ಪರಿಗಣಿಸಿ ಕರಾಳ ಕಾನೂನುಗಳ ಅಡಿಯಲ್ಲಿ ಶಿಕ್ಷಿಸಲಾಗುತ್ತಿದೆ.

ಈ ಎಲ್ಲ ಅಂಶಗಳನ್ನು ಒಳಗೊಂಡ ಈ ಕೆಳಗಿನ ೧೬ ಆಗ್ರಹಗಳನ್ನು ಕೇಂದ್ರ ಸರ್ಕಾರದ ಮುಂದಿಡಲು ೨೦೨೦ ಅಗಸ್ಟ್ ೨೦ ರಿಂದ ೨೬ ರವರೆಗೆ ದೇಶಾದ್ಯಂತ ಪ್ರತಿಭಟನಾ ವಾರಾಚರಣೆ ನಡೆಸಬೇಕೆಂದು ಸಿಪಿಐ(ಎಂ) ಕೇಂದ್ರ ಸಮಿತಿ ಕರೆನೀಡಿದೆ. ಈ ಕರೆಯನ್ನು ಯಶಸ್ವಿಗೊಳಿಸಲು ಎಲ್ಲ ದೇಶಪ್ರೇಮಿ ಶಕ್ತಿಗಳು, ಸಂಘಟನೆಗಳು ಮುಂದಾಗಬೇಕೆಂದು ವಿನಂತಿಸುತ್ತೇವೆ.

ಪ್ರಮುಖ ಆಗ್ರಹಗಳು

  1. ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಬಡ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ ೬ ತಿಂಗಳವರೆಗೆ ತಿಂಗಳಿಗೆ ರೂ.೭,೫೦೦ ನಗದು ವರ್ಗಾವಣೆ ಮಾಡಬೇಕು.
  2. ತಕ್ಷಣದಿಂದಲೇ ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳವರೆಗೆ ಪ್ರತಿಯೊಬ್ಬ ವ್ಯಕ್ತಿಗೆ ೧೦ ಕೆ.ಜಿ.ಯಂತೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು.
  3. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಿ ಕೂಲಿ ದರವನ್ನು ಏರಿಸಿ, ವರ್ಷದಲ್ಲಿ ೨೦೦ ದಿನಗಳ ಕೆಲಸದ ಖಾತ್ರಿಯನ್ನು ಒದಗಿಸಬೇಕು. ಒಂದು ನಗರ ಉದ್ಯೋಗ ಖಾತ್ರಿ ಕಾಯ್ದೆಯನ್ನು ತರಬೇಕು. ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಪ್ರಕಟಿಸಬೇಕು.
  4. ಅಂತರ ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ಮತ್ತು ಸೇವಾ ಷರತ್ತುಗಳ ನಿಯಂತ್ರಣ) ಕಾಯ್ದೆ ೧೯೭೯ ನ್ನು ತೆಗೆದುಹಾಕುವ ಪ್ರಸ್ತಾವವನ್ನು ರದ್ದು ಮಾಡಬೇಕು, ಬದಲಿಗೆ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು.
  5. ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಕನಿಷ್ಟ ಜಿಡಿಪಿಯ ಶೇ. ೩ ಕ್ಕೆ ಹೆಚ್ಚಿಸಬೇಕು.
  6. ಅಗತ್ಯ ವಸ್ತುಗಳ ಕಾಯ್ದೆಯನ್ನು ತೆಗೆದುಹಾಕುವ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಎಲ್ಲ ಸುಗ್ರೀವಾಜ್ಞೆಗಳನ್ನು ರದ್ದುಮಾಡಬೇಕು.
  7. ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು/ತಿದ್ದುಪಡಿ/ಅಮಾನತು ಮಾಡುವ ಎಲ್ಲಾ ಪ್ರಸ್ತಾವಗಳನ್ನು ಹಿಂತೆಗೆದುಕೊಳ್ಳಬೇಕು.
  8. ಸಾರ್ವಜನಿಕ ವಲಯದ ಉದ್ದಿಮೆಗಳ, ವಿಶೇಷವಾಗಿ ಭಾರತೀಯ ರೈಲ್ವೆ, ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು, ಬ್ಯಾಂಕ್/ವಿಮೆ, ರಕ್ಷಣಾ ಉತ್ಪಾದನಾ ವಲಯಗಳಲ್ಲಿನ ಉದ್ದಿಮೆಗಳ ಖಾಸಗೀಕರಣವನ್ನು ರದ್ದುಮಾಡಬೇಕು.
  9. ಪ್ರಧಾನ ಮಂತ್ರಿಗಳ ಹೆಸರಿನಲ್ಲಿರುವ ಒಂದು ಖಾಸಗಿ ಟ್ರಸ್ಟ್ ನಿಧಿಯಲ್ಲಿ ಸಂಗ್ರಹವಾಗಿರುವ ಎಲ್ಲ ನಿಧಿಗಳನ್ನು ಮಹಾಸೋಂಕನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಿಗೆ ವರ್ಗಾಸಬೇಕು.
  10. ಮಹಾಸೋಂಕನ್ನು ಎದುರಿಸಲು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸುತ್ತಿರುವುದರಿಂದ ಮಹಾಸೋಂಕಿಗೆ ತುತ್ತಾಗಿರುವ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳ ಪ್ರಕಾರ ಒಂದು ಸಲದ ಹಣಕಾಸು ನೆರವನ್ನು ಪ್ರಕಟಿಸಬೇಕು.
  11. ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು/ಒಬಿಸಿ ಮತ್ತು ವಿಕಲಾಂಗರಿಗೆ ಮೀಸಲಾತಿಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು. ಎಲ್ಲ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
  12. ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅವರ ಹಿಂದಿನ ಸೆಮಿಸ್ಟರುಗಳ ಸಾಧನೆಗಳ ಆಧಾರದಲ್ಲಿ ಪರೀಕ್ಷಿಸಬೇಕು ಮತ್ತು ಪದವಿಗಳನ್ನು ಕೊಡಬೇಕು.
  13. ಜಮ್ಮು ಮತ್ತು ಕಾಶ್ಮೀರದಲ್ಲಿ ಅಗಸ್ಟ್ ೨೦೧೯ ರಿಂದ ಬಂಧನದಲ್ಲಿರುವ ಎಲ್ಲರನ್ನು ತಕ್ಷಣ ಬಿಡುಗಡೆ ಮಾಡಬೇಕು. ಎಲ್ಲ ಸಂಪರ್ಕಗಳನ್ನು ಮತ್ತೆ ಸ್ಥಾಪಿಸಬೇಕು ಮತ್ತು ಜನಗಳ ಮುಕ್ತ ಓಡಾಟಕ್ಕೆ ಅವಕಾಶ ಕೊಡಬೇಕು.
  14. ಯು.ಎ.ಪಿ.ಎ., ಎನ್.ಎಸ್.ಐ. ರಾಜದ್ರೋಹದ ಕಾಯ್ದೆ ಮುಂತಾದ ಕರಾಳ ಕಾನೂನುಗಳ ಅಡಿಯಲ್ಲಿ ಬಂಧಿಸಿ ಜೈಲುಗಳಲ್ಲಿ ಇಟ್ಟಿರುವ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು.
  15. ಪರಿಸರ ಪರಿಣಾಮ ನಿರ್ಧಾರದ (ಇ.ಐ.ಎ.) ೨೦೨೦ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು.
  16. ಹೆಚ್ಚುತ್ತಿರುವ ದಲಿತರ ಮೇಲಿನ ಹಿಂಸಾಚಾರ, ಮಹಿಳೆಯರ ವಿರುದ್ಧದ ಕೌಟುಂಬಿಕ ಹಾಗೂ ಲೈಂಗಿಕ ದೌರ್ಜನ್ಯಗಳನ್ನು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಮತ್ತು ಆದಿವಾಸಿ ಬುಡಕಟ್ಟು ಜನಗಳ ಶೋಷಣೆ ಮಾಡುತ್ತಿರುವವರನ್ನು ಕಠಿಣವಾಗಿ ಶಿಕ್ಷಿಸಬೇಕು.

ಯು. ಬಸವರಾಜು, ಕಾರ್ಯದರ್ಶಿ ಸಿಪಿಐ(ಎಂ) ರಾಜ್ಯ ಸಮಿತಿ

Leave a Reply

Your email address will not be published. Required fields are marked *