ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಹಾಗೆಂದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು

ಡಿಜಿಟಲ್‍ ಪ್ರಚಾರ ಮತ್ತು ನಿಧಿ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಚುನಾವಣಾ ಅಯೋಗಕ್ಕೆ ಯೆಚುರಿ ಪತ್ರ

ಅಪಾರದರ್ಶಕವಾದ ಚುನಾವಣಾ ಬಾಂಡುಗಳ ನಂತರ, ಕೊವಿಡ್‍ ನೆಪ ಮಾಡಿಕೊಂಡು ಡಿಜಿಟಲ್‍ ಚುನಾವಣಾ ಪ್ರಚಾರದ ಬಗ್ಗೆ ಬಹಳವಾಗಿ ಮಾತಾಡಲಾಗುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆಗಳನ್ನು ಡಿಜಿಟಲ್‍ ಚುನಾವಣೆಯಾಗಿ ನಡೆಸಬೇಕು ಎಂಬ ಚುನಾವಣಾ ಅಯೋಗದ ನಿರ್ಧಾರಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಸದ್ಯಕ್ಕೆ ಬದಿಗಿಟ್ಟಿದೆ. ಇದನ್ನು ಶಾಶ್ವತವಾಗಿ ಕೈಬಿಡಬೇಕು, ಚುನಾವಣೆಗಳು ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುವಂತೆ ಖಾತ್ರಿಪಡಿಸಬೇಕಾದ ಸಂವಿಧಾನಿಕ ಹೊಣೆಯಿರುವ ಭಾರತದ ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಹಾಗೆಂದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕಾದ್ದು ಅಗತ್ಯವಾಗಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ  ಸೀತಾರಾಮ್‍ ಯೆಚುರಿ ಮುಖ್ಯ ಚುನಾವಣಾ ಅಯುಕ್ತ ಸುನಿಲ್‍ ಅರೋರಾ ಅವರಿಗೆ ಆಗಸ್ಟ್  17ರಂದು ಒಂದು ಪತ್ರ ಬರೆದಿದ್ದಾರೆ. ಡಿಜಿಟಲ್ ಚುನಾವಣಾ ಪ್ರಚಾರದ ಪ್ರಯತ್ನಗಳು ಮತ್ತು ಇತ್ತೀಚೆಗೆ ಬೆಳಕಿಗೆ ಬಂದ ಎರಡು ಸಂಗತಿಗಳ ಹಿನ್ನೆಲೆಯಲ್ಲಿ ಅವರು ಈ ಪತ್ರವನ್ನು ಬರೆದಿದ್ದಾರೆ. ಅವರ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

Sitaram yechuryಚುನಾವಣಾ ಆಯೋಗ ಬಿಹಾರ ವಿಧಾನಸಭಾ ಚುನಾವಣೆಗಳ ವೇಳೆಯಲ್ಲಿ 64 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಎಲ್ಲ ಮತದಾರರು ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡುವ ತನ್ನ ನಿರ್ಧಾರಕ್ಕೆ ವ್ಯಾಪಕ ಪ್ರತಿಕ್ರಿಯೆ ಬಂದ ನಂತರ ಅದನ್ನು ಸದ್ಯಕ್ಕೆ ನಿಲ್ಲಿಸಿದೆ. ಆದರೆ ಅದನ್ನು ಶಾಶ್ವತವಾಗಿ ಕೈಬಿಡಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಮತದಾರರ ಭೌತಿಕ ರುಜುವಾತಿನ ನೀತಿಯನ್ನು ಖಾತ್ರಿಪಡಿಸಬೇಕು.

ಇದುವರೆಗೆ ಆಯೋಗ ಯಾವುದೇ ಸುಧಾರಣೆ ಆರಂಭಿಸುವ ಮೊದಲು ಸಮಾಲೋಚನೆಗಳನ್ನು ನಡೆಸುವ ವಾಢಿಕೆಯಿತ್ತು. ಸಮಾಲೋಚನೆಯ ಆ ಹಕ್ಕನ್ನು ನಿರಾಕರಿಸಲಾಗಿದ್ದರೂ ವಿವೇಚನಾಪೂರ್ಣ ತರ್ಕಗಳಿಗೆ ಸಕಾರಾತ್ಮ ಕಸ್ಪಂದನೆ ದೊರೆಯುತ್ತದೆ ಎಂದು ನಾವು ನಂಬಿದ್ದೇವೆ.  ಆದ್ದರಿಂದ ನಾವು ಡಿಜಿಟಲ್‍ ಚುನಾವಣಾ ಪ್ರಚಾರ ಮತ್ತು ಇನ್ನೂ ಮುಖ್ಯವಾಗಿ, ಅದರಡಿಯಲ್ಲಿರುವ ಚುನಾವಣಾ ಪ್ರಚಾರಕ್ಕೆ ಗಮನಾರ್ಹ ಪ್ರಮಾಣದಲ್ಲಿ ಹಣದ ಪ್ರಶ‍್ನೆಯತ್ತ ತಮ್ಮ ಗಮನ ಸೆಳೆಯುತ್ತೇವೆ.

ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಹಾಸೋಂಕಿನ ರಂಪಾಟದಿಂದಾಗಿ ಇಡೀ ಚುನಾವಣೆಯನ್ನು ಒಂದು ಡಿಜಿಟಲ್ ವೇದಿಕೆಯಲ್ಲಿ ನಡೆಸಬೇಕು ಎಂಬ ಪ್ರಸ್ತಾವ ಇಟ್ಟುದನ್ನು ಹೆಚ್ಚಿನ ರಾಜಕೀಯ ಪಕ್ಷಗಳು ವಿರೋಧಿಸಿದ್ದು, ಲಭ್ಯತೆಯ ಅಪಾರ ಕೊರತೆಯ ಕಾರಣಕ್ಕಾಗಿಯಷ್ಟೇ ಅಲ್ಲ. ಬದಲಿಗೆ, ಮತದಾರರನ್ನು ಸಂಪರ್ಕಿಸಲು ಬೇಕಾಗಬಹುದಾದ ಅಪಾರ ಹಣಕಾಸು ಸಂಪನ್ಮೂಲಗಳ ಪ್ರಶ್ನೆಯಿಂದಾಗಿ.

ಈ ಬೆಳವಣಿಗೆಗಳನ್ನು ಪರಿಶೀಲಿಸಿ. 2019ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್‍ ಷಾ, ತಮ್ಮ ಪಕ್ಷ ತನ್ನ 32 ಲಕ್ಷ ವಾಟ್ಸ್ ಆಪ್‍ ಗುಂಪುಗಳ ಜಾಲದೊಂದಿಗೆ, ಯಾವುದೇ ಸಂದೇಶವನ್ನು ಅದು ನಿಜವಿರಲಿ, ಸುಳ್ಳಿರಲಿ, ಕೆಲವೇ ಗಂಟೆಗಳೊಳಗೆ ಹರಡಿಸಿ ಬಿಡಬಲ್ಲದು ಎಂದು ಬಹಿರಂಗವಾಗಿಯೇ ಹೇಳಿದ್ದರು. ಹುಸಿ ಸುದ್ದಿಗಳಲ್ಲಿ ಬಹುಪಾಲು ಭಾರತದಿಂದಲೇ ಉತ್ಪಾದನೆಗೊಂಡದ್ದು ಎಂದು ಅಂತರ್ರಾಷ್ಟ್ರೀಯ ನಿಜಾಂಶ ಪತ್ತೆ ಹಚ್ಚುವ ವೆಬ್‍ ತಾಣಗಳ ಗಮನಕ್ಕೆ ಬಂದಿದೆ ಎಂಬುದನ್ನು ಇದಕ್ಕೆ ಸೇರಿಸಿಕೊಂಡು ನೋಡಿ. ಮತ್ತು ಈಗ, ಬಿಹಾರ ವಿಧಾನಸಭಾ ಚುನಾವಣೆಗಳ ಮೊದಲು, ಈ ಪಕ್ಷ ಒಂದು ವರ್ಚುವಲ್ ಚುನಾವಣಾ ಪ್ರಚಾರವನ್ನು ಆರಂಭಿಸಿಯೇ ಬಿಟ್ಟಿದೆ. ಷಾ ರವರ ಭಾಷಣಗಳಿಗೆ 72,000 ಎಲ್‍.ಇ.ಡಿ. ಟಿವಿ ಪರದೆಗಳನ್ನು ಹಾಕಲಾಗಿದೆ. 60 ವರ್ಚುವಲ್‍ ರ್ಯಾಲಿಗಳನ್ನು ನಡೆಸಿದ ನಂತರ, ಬಿಜೆಪಿ ತನ್ನ ಚುನಾವಣಾ ಪ್ರಚಾರದ ಪ್ರಯತ್ನಗಳಲ್ಲಿ 9500 ಐಟಿ ಸೆಲ್‍ ಮುಖ್ಯಸ್ಥರುಗಳ , ಪ್ರತಿಯೊಂದು ಮತಗಟ್ಟೆಗೆ ಒಂದರಂತೆ 72,000 ವಾಟ್ಸ್ ಆಪ್‍ ಗುಂಪುಗಳನ್ನು ಸಂಯೋಜಿಸುವುದಾಗಿ ಹೇಳಿಕೊಂಡಿದೆ. ಇದರಲ್ಲಿ 50,000 ಕಳೆದೆರಡು ತಿಂಗಳಲ್ಲೇ ರಚನೆಗೊಂಡವುಗಳು.

ತಂತ್ರಜ್ಞಾನ-ಆಧಾರಿತವಾದ ಇಂತಹ ಒಂದು ವ್ಯವಸ್ಥೆಯನ್ನು ಏರ್ಪಡಿಸಲು ಬೇಕಾದ ಮಾನವಶಕ್ತಿಯನ್ನು ನಿಯೋಜಿಸಲು ತಗಲುವ ವೆಚ್ಚ ತಲೆ ತಿರುಗುವಂತೆ ಮಾಡುವಷ್ಟು ಅಗಾಧ.  ಚುನಾವಣಾ ಬಾಂಡುಗಳ ಮೂಲಕ ಅನಾಮಧೇಯ ನಿಧಿ ನೀಡಿಕೆ ಬರುವ ಮೊದಲೂ ಕೂಡ ಕಾರ್ಪೊರೇಟ್‍ ದೇಣಿಗೆಗಳ ಅಂಕಿ-ಅಂಶಗಳಿಂದ ಬಿಜೆಪಿ ಮತ್ತು ಇತರ ಎಲ್ಲ ಪಕ್ಷಗಳ ನಡುವಿನ ಅಂತರ ಅಪಾರ ಎಂಬುದು ಸಾರ್ವಜನಿಕವಾಗಿ ಲಭ್ಯವಿರುವ ಅಂಕಿ-ಅಂಶಗಳಿಂದ ಸ್ಪಷ್ಟವಾಗಿತ್ತು. ಇದು ಗರಿಷ್ಟ ಮಿತಿಯೇ ಇಲ್ಲದ ಅನಾಮಧೇಯ ಕಾರ್ಪೊರೇಟ್‍ ನಿಧಿ ಸಂಗ್ರಹದೊಂದಿಗೆ ಚುನಾವಣಾ ಪ್ರಜಾಪ್ರಭುತ್ವದ ಮರಣನಾದವಾಗುತ್ತದೆ.

ಈ ಹಿಂದೆ ಚುನಾವಣಾ ಆಯೋಗ ಚುನಾವಣಾ ಬಾಂಡುಗಳು “ರಾಜಕೀಯ ಪಕ್ಷಗಳಿಗೆ ರಾಜಕೀಯ ನಿಧಿಸಂಗ್ರಹದ ಪಾರದರ್ಶಕತೆಯ ಮೇಲೆ ಗಂಭೀರ ದುಷ್ಪರಿಣಾಮಗಳ” ಸೂಚನೆಯಾಗಲಿದೆ ಎಂದು ಸುಪ್ರಿಂ ಕೋರ್ಟಿಗೆ ಹೇಳಿತ್ತು. ಮತ್ತು 2017ರ ಹಣಕಾಸು ಕಾಯ್ದೆಯಲ್ಲಿ ಆಮೂಲಾಗ್ರ ಬದಲಾವಣೆಗಳು ಮತ್ತು ನಂತರ ಆದಾಯ ತೆರಿಗೆ ಕಾಯ್ದೆಯಲ್ಲೂ, ಹಾಗೆಯೇ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲೂ ಬದಲಾವಣೆಗಳ ಮೂಲಕ ವ್ಯಾಪ್ರಿಯಿಂದ ಚುನಾವಣಾ ಬಾಂಡುಗಳನ್ನು ಈ ಕುರಿತು ಕಡ್ಡಾಯವಾಗಿ ವರದಿ ಮಾಡಬೇಕೆನ್ನುವ ನಿಯಮಾವಳಿಗಳ ವ್ಯಾಪ್ತಿಯಿಂದ ಹೊರತೆಗೆಯಲಾಗಿದೆ ಎಂಬ ಸಂಗತಿಯತ್ತವೂ ಅದು ಬೊಟ್ಟು ಮಾಡಿತ್ತು.

“ಚುನಾವಣಾ ಬಾಂಡುಗಳ ಮೂಲಕ ಪಡೆದ ದೇಣಿಗೆಗಳನ್ನು ವರದಿ ಮಾಡದಿರುವ ಸನ್ನಿವೇಶದಲ್ಲಿ, ರಾಜಕೀಯ ಪಕ್ಷಗಳ ದೇಣಿಗೆಗೆಳ ವರದಿಯನ್ನು ಪರಿಶೀಲಿಸಿದಾಗ, ಅವು ರಾಜಕೀಯ ಪಕ್ಷಗಳು ಸರಕಾರೀ ಕಂಪನಿಗಳಿಂದ ಮತ್ತು ವಿದೇಶಿ ಮೂಲಗಳಿಂದ ದೇಣಿಗೆ ಪಡೆಯವುದನ್ನು ನಿಷೇಧಿಸಿರುವ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಬಿ ಯನ್ನು ಉಲ್ಲಂಘಿಸಿ ಯಾವುದೇ ದೇಣಿಗೆ ಪಡೆದಿದೆಯೇ ಎಂದು ತಿಳಿಯಲು ಸಾಧ್ಯವಾಗುವದಿಲ್ಲ” ಎಂದೂ ಚುನಾವಣಾ ಆಯೋಗ ತನ್ನ ಅಫಿಡವಿಟ್‍ನಲ್ಲಿ ಹೇಳಿತ್ತು.

ಅಲ್ಲದೆ ಈ ಅಫಿಡವಿಟ್‍ನಲ್ಲಿ ಚುನಾವಣಾ ಬಾಂಡುಗಳ ಬಗೆಗಿನ ಈ ಎಲ್ಲ ಸಂದೇಹಗಳನ್ನು ಮೇ 2017ರಲ್ಲಿ ಬರೆದ ಪತ್ರದಲ್ಲಿ ಕಾನೂನು ಮಂತ್ರಾಲಯಕ್ಕೆ ತಿಳಿಸಲಾಗಿತ್ತು ಎಂದೂ ಚುನಾವಣಾ ಆಯೋಗ ಹೇಳಿದೆ. ಈ ತಿದ್ದುಪಡಿಗಳು ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಪಡೆದ ದೇಣಿಗೆಗಳು, ಅವುಗಳ ಪರಿಶೋಧಿಸಿದ ವಾರ್ಷಿಕ ಲೆಕ್ಕಪತ್ರ ಮತ್ತು ಚುನಾವಣಾ ವೆಚ್ಚದ ಹೇಳಿಕೆಗಳ ವರದಿಗಳನ್ನು ಸಲ್ಲಿಸುವುದನ್ನು ಕುರಿತು ಪ್ರಕಟಿಸಿರುವ ಮಾರ್ಗಸೂಚಿಗಳ ಹಳಿ ತಪ್ಪಿಸಿವೆ ಎಂದು ತನ್ನ ಅಸಮ್ಮತಿಯನ್ನು ಕೂಡ ಅದು ವ್ಯಕ್ತಪಡಿಸಿತ್ತು.

ಹಣಕಾಸು ಕಾಯ್ದೆ, 2017 ಜನತಾ ಪ್ರಾತಿನಿಧ್ಯ ಕಾಯ್ದೆ, 1951, ಆದಾಯ ತೆರಿಗೆ ಕಾಯ್ದೆ ಮತ್ತು ಕಂಪನಿ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳನ್ನು ತಿದ್ದುಪಡಿ ಮಾಡಿತು. 2016ರ ಹಣಕಾಸು ಕಾಯ್ದೆಯಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಟಿಪ್ಪಣಿ ಮಾಡುತ್ತ ಚುನಾವಣಾ ಆಯೋಗ ತನ್ನ ಅಫಿಡವಿಟ್‍ನಲ್ಲಿ ಇದು 2010ರ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ(ಎಫ್‍ಸಿಆರ್‍ಎ)ಯಲ್ಲಿ ಬದಲಾವಣೆಗಳನ್ನು ತಂದು ಭಾರತೀಯ ಕಂಪನಿಗಳಲ್ಲಿ ಹೆಚ್ಚಿನ ಪಾಲುದಾರಿಕೆ ಹೊಂದಿರುವ ವಿದೇಶಿ ಕಂಪನಿಗಳಿಂದ ದೇಣಿಗೆ ಪಡೆಯಲು ಅವಕಾಶವಾಗುತ್ತದೆ, “ಇದು ಎಫ್‍ಸಿಆರ್‍ಎ ಕಾಯ್ದೆಯಲ್ಲಿ ನಿರೂಪಿಸಿರುವಂತೆ ಎಲ್ಲ ವಿದೇಶಿ ಮೂಲಗಳಿಂದ ದೇಣಿಗೆಗಳನ್ನು ನಿಷೇಧಿಸಿರುವ ಈಗಿನ ಕಾನೂನಿನಲ್ಲಿ ತಂದಿರುವ ಒಂದು ಬದಲಾವಣೆ. ಇದು ಭಾರತದಲ್ಲಿನ ರಾಜಕೀಯ ಪಕ್ಷಗಳಿಗೆ ಯಾವುದೇ ಅಡೆತಡೆಯಿಲ್ಲದೆ ವಿದೇಶಿ ಹಣ ಬರಲು, ಆಮೂಲಕ ಭಾರತೀಯ ಧೋರಣೆಗಳ ಮೇಲೆ ವಿದೇಶಿ ಕಂಪನಿಗಳು ಪ್ರಭಾವ ಬೀರುವಂತಾಗುತ್ತದೆ” ಎಂದಿತ್ತು.

ಚುನಾವಣಾ ಬಾಂಡು ಯೋಜನೆಯನ್ನು ಹೆಚ್ಚಿನ ಪಾರದರ್ಶಕತೆ ತರಲೆಂದು ತಂದಿದ್ದರೆ, ಇಂತಹ ದೇಣಿಗೆಗಳ ವಿವರಗಳನ್ನು ಸಾರ್ವಜನಿಕಗೊಳಿಸುವುದನ್ನು ನಿರ್ಬಂಧಿಸಬಾರದು ಎಂದು ಹಲವು ತಜ್ಞರೂ ಅಭಿಪ್ರಾಯ ಪಟ್ಟಿದ್ದಾರೆ.

ಆದ್ದರಿಂದ ಚುನಾವಣಾ ಆಯೋಗ ಸುಪ್ರಿಂ ಕೋರ್ಟಿನ ಸಮ್ಮಖ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಮುಂದಿಟ್ಟಿರುವ ತರ್ಕಗಳ ಪ್ರಕಾರವೂ ಎಲ್ಲರಿಗೂ ಸಮಾನ ನೆಲೆಯಲ್ಲಿ ಸ್ಪರ್ಧೆಗೆ ಅವಕಾಶ ಮಾತ್ರವಲ್ಲ, ಮುಕ್ತ ಮತ್ತು ನ್ಯಾಯಯುತ ಮತದಾನವೂ ಸಾಧ್ಯವಾಗುವದಿಲ್ಲ.

ಈ ನಡುವೆ, ಇನ್ನೆರಡು ಬೇರೆ ಪ್ರಶ್ನೆಗಳು ಬೆಳಕಿಗೆ ಬಂದಿವೆ, ಇವು ಪ್ರಮುಖ ಪ್ರಶ್ನೆಗಳನ್ನೆತ್ತಿವೆ. ಮೊದಲನೆಯದಾಗಿ, ರಹಸ್ಯಮಯ ‘ನಮೋ ಟಿವಿ ಈಗಿರುವ ಕಾನೂನಿಗೆ(ಪರಿಶಿಷ್ಟ-1) ವಿರುದ್ಧವಾಗಿ 2019ರ ಲೋಕಸಭಾ ಚುನಾವಣೆಗಳ ವೇಳೆಯಲ್ಲಿ ಆರಂಭವಾಯಿತು, ಮತ್ತು ಚುನಾವಣೆಗಳ ನಂತರ ರಹಸ್ಯ ರೀತಿಯಲ್ಲಿ ಕಣ್ಮರೆಯಾಯಿತು. ಇದು ಡಿಟಿಹೆಚ್ ವೇದಿಕೆಗಳು ನಡೆಸುತ್ತಿರುವ ವಾಹಿನಿ, ಇದಕ್ಕೆ ಬಿಜೆಪಿ ಹಣ ತೆರುತ್ತದಷ್ಟೇ ಎಂದು ಎಪ್ರಿಲ್‍ 2019ರಲ್ಲಿ ಚುನಾವಣಾ ಆಯೋಗದ ವಕ್ತಾರರು ಹೇಳಿದರು. ಆದರೆ ಆಯೋಗಕ್ಕೆ ಬಿಜೆಪಿ ಸಲ್ಲಿಸಿರುವ ಖರ್ಚು-ವೆಚ್ಚದ ವಿವರಗಳಲ್ಲಿ ಇದನ್ನು ತೋರಿಸಿಲ್ಲ ಎಂದು ಈಗ ಪ್ರಕಟಗೊಂಡಿದೆ, ಇದಂತೂ ಚುನಾವಣಾ ಅಪರಾಧವೇ. ತಕ್ಷಣ ಏಳುವ ಪ್ರಶ್ನೆಯೆಂದರೆ ಈ ವಿಷಯದಲ್ಲಿ ಚುನಾವಣಾ ಆಯೋಗ ಬಿಜೆಪಿಯ ವಿರುದ್ದ ಯಾವುದಾದರೂ ಶಿಕ್ಷಾಕ್ರಮವನ್ನು ಕೈಗೊಂಡಿದೆಯೇ? ಇಲ್ಲವಾದರೆ, ಏಕಿಲ್ಲ? ಒಂದು ಸಂಪೂರ್ಣ ಅಸಂದಿಗ್ಧ ದೃಢ ಕ್ರಮ ಇಲ್ಲದಿರುವುದು, ಚುನಾವಣಾ ದುರಾಚರಣೆಗಳನ್ನು ಮುಲಾಜಿಲ್ಲದೆ ಕಿತ್ತುಹಾಕುವುದಂತೂ ಒತ್ತಟ್ಟಿಗಿರಲಿ, ಸಮಾನ ನೆಲೆಯ ಸ್ಪರ್ಧೆಯನ್ನು ಖಾತ್ರಿಗೊಳಿಸುವ ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಗಂಭೀರವಾಗಿ ಪ್ರಶ್ನಿಸಬೇಕಾಗುತ್ತದೆ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ.

ಎರಡನೇ ಪ್ರಶ್ನೆ ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ಸಂಬಂಧಪಟ್ಟಿರುವಂತದ್ದು. ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ 2019ರ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಆಯೋಗದ ಚುನಾವಣಾ-ಸಂಬಂಧಿ ಜಾಹೀರಾತುಗಳನ್ನು ಆನ್‍ಲೈನಿನಲ್ಲಿ ಪ್ರಕಟಿಸುವುದನ್ನು ಬಿಜೆಪಿ ಪದಾಧಿಕಾರಿಯೊಬ್ಬರ ಒಡೆತನದ ಒಂದು ಜಾಹೀರಾತು ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗೆ ವಹಿಸಿದ್ದರು ಎಂದು ಈಗ ಬೆಳಕಿಗೆ ಬಂದಿದೆ. ನಂತರ ಸ್ವತಃ ಭಾರತದ ಚುನಾವಣಾ ಆಯೋಗವೇ 2019ರ ಲೋಕಸಭಾ ಚುನಾವಣೆಗಳಿಗೆ ಇದೇ ಸಾಮಾಜಿಕ ಮಾಧ್ಯಮ ಏಜೆನ್ಸಿಯನ್ನು ನೇಮಿಸಿಕೊಳ್ಳಲು ಅಧಿಕಾರ ನೀಡಿದೆ ಎಂಬುದೂ ಪ್ರಕಟಗೊಂಡಿದೆ. ಈ ವಿಷಯದಲ್ಲಿ ಈಗ ಸಾಕಷ್ಟು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯ ಇವೆ. ಚುನಾವಣಾ ಆಯೋಗಕ್ಕೆ ಸ್ವತಂತ್ರ ಸಂವಿಧಾನಿಕ ಸ್ಥಾನಮಾನವಿದೆ, ಸಂವಿಧಾನದ ಕಲಮು 324 ನ್ಯಾಯ ವರ್ತನೆಯನ್ನು ಖಾತ್ರಿಪಡಿಸಬೇಕಾದ  ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಗುರುತಿಸಿದೆ. ಆದ್ದರಿಂದ ಭಾರತದ ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಹಾಗೆಂದು ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕಾದ್ದು ಅಗತ್ಯವಾಗಿದೆ.

Leave a Reply

Your email address will not be published. Required fields are marked *