ಕಾಮ್ರೇಡ್ ಪುರುಷೋತ್ತಮ ಕಲಾಲ್‌ಬಂಡಿರವರಿಗೆ ಲಾಲ್‌ ಸಲಾಂ

IMG-20200821-WA0000ಕಟ್ಟಡ ಕಾರ್ಮಿಕರ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರು ಮತ್ತು ವಿಜ್ಞಾನ ಚಳುವಳಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಕಾಮ್ರೇಡ್ ಪುರುಷೋತ್ತಮ ಕಲಾಲಬಂಡಿ ಅವರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಶ್ರದ್ದಾಂಜಲಿ ಸಲ್ಲಿಸುತ್ತದೆ.

ರಾಯಚೂರು ಜಿಲ್ಲೆಯಲ್ಲಿ ಸಿಪಿಐ(ಎಂ) ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಕಾಮ್ರೇಡ್ ಪುರುಷೋತ್ತಮ ಕಲಾಲಬಂಡಿ ಅವರು ಇಂದು ದಿನಾಂಕ ೨೦-೮-೨೦ ರಂದು ಮಧ್ಯಾಹ್ನ ೪.೩೦ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ರಾಯಚೂರು ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಮತ್ತು ೧೯೮೦-೮೫ ಕಾಲಘಟ್ಟದಲ್ಲಿ ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆ ಗಳ ವಿರುದ್ಧ ಮತ್ತು ಸ್ಥಳೀಯರಿಗೆ ಕೆಪಿಸಿ ಯಲ್ಲಿ ಉದೋಗ ನೀಡುವಂತೆ ಅಂದು ಡಿವೈಎಫ್‍ಐ ಯುವಜನ ಸಂಘಟನೆ ನೇತೃತ್ವದಲ್ಲಿ ಚಳುವಳಿಯ ನಡೆಸಿದರ ಭಾಗವಾಗಿ ಜಿಲ್ಲೆಯ ನೂರಾರು ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಪ್ರಮುಖ ಹೋರಾಟಗಾರರಾಗಿದ್ದರು. ಜೊತೆಗೆ ಅಗಿನ ಕಾಲದಲ್ಲಿ ಸೈಕಲ್ ರೀಕ್ಷಾ, ಆಟೋ ಚಾಲಕರ ಕಾರ್ಮಿಕರ ಸಂಘಗಳನ್ನು ಕಟ್ಟಿ ಮತ್ತು ರಾಯಚೂರು ನಗರದ ಜಲಾಲ್ ನಗರ, ಎಲ್.ಬಿ.ಎಸ್. ನಗರ, ಮಡ್ಡಿಪೇಟೆ, ಸಿಯಾತಲಾಬ್, ಹರಿಜನವಾಡ ಹೀಗೆ ಹಲವಾರು ವಾರ್ಡಗಳ ಜನರ ಮೂಲಭೂತ ಸೌಕರ್ಯ ಗಳಿಗೆ ಮತ್ತು ವಸತಿ ಹೀನರಿಗೆ ವಸತಿಗಾಗಿ ಮತ್ತು ಹಕ್ಕು ಪತ್ರಗಳಿಗಾಗಿ ಅಂದು ಪಕ್ಷ ನಡೆಸಿದ ಚಳುವಳಿಯಲ್ಲಿ ಪ್ರಮುಖವಾಗಿ ತೋಡಗಿಸಿಕೂಂಡು ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಕ್ರಮವಹಿಸಿದ್ದರು.

ಇತ್ತೀಚೆಗೆ ಅವರು ಕುಟುಂಬದ ಸಮೇತ ಬೆಂಗಳೂರುನಲ್ಲಿ ನೆಲ್ಲೆಸಿದ್ದರು. ಬೆಂಗಳೂರಿನಲ್ಲಿ ಕೂಡ ಅವರು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯಡಿ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ಮತ್ತು ವಿಜ್ಞಾನ ತಂತ್ರಜ್ಞಾನಗಳ ಸಂಘಟನೆಯಲ್ಲಿ ತೊಡಗಿಸಿಕೊಂಡು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು ಮತ್ತು ನಿರಂತರವಾಗಿ ಚುಳುವಳಿಯಲ್ಲಿ ತೂಡಗಿದ್ದರು.

ಲಾಕ್ ಡೌನ್ ಕಾಲಾವಧಿಯಲ್ಲಿ ಜ್ಞಾನ ಭಾರತಿ ವಾರ್ಡ್ನಲ್ಲಿ ಸಿಐಟಿಯು ಪರವಾಗಿ ಕರೋನ ವಾರಿಯರ್ ಆಗಿ ಕಾರ್ಮಿಕ ಇಲಾಖೆಯ ಸಿದ್ದ ಆಹಾರವನ್ನು ಕಟ್ಟಡ ಕಾರ್ಮಿಕರಿಗೆ ಒದಗಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಕಾರ್ಮಿಕ ಇಲಾಖೆಯು ನೀಡಿದ್ದ ಫುಡ್ ಕಿಟ್ಗಳನ್ನು ಸಾವಿರಾರು ಕಟ್ಟಡ ಕಾರ್ಮಿಕರಿಗೆ ವಿತರಿಸಲು ಶ್ರಮಿಸಿದ್ದರು. ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದರು. ಅವರು ಇದ್ದಕ್ಕಿದ್ದಂತೆ ನಿಧನರಾದದ್ದು ಅತ್ಯಂತ ದು:ಖಕರ ಮತ್ತು ಅವರ ಅಗಲ್ಲಿಕೆಯಿಂದ ರಾಜ್ಯದ ದುಡಿಯುವ ವರ್ಗದ ಚಳುವಳಿಗೆ ತುಂಬ ನಷ್ಟವಾಗಿದೆ ಎಂದು ಸಿಪಿಐ(ಎಂ) ಕಂಬನಿ ಮಿಡಿದಿದೆ.

ಸಮ ಸಮಾಜದ ಕನಸುಗಾರ, ಛಲಗಾರ

‘ಕಾಮ್ರೇಡ್! ನಾನೊಬ್ಬ  ಮಾರ್ಕ್ಸ್ ವಾದಿ ಹಾಗೂ ಒಬ್ಬ ವಿಜ್ಞಾನ ಚಳವಳಿಯ ಕಾರ್ಯಕರ್ತ ನನ್ನಂತ ಒಬ್ಬ ಸಾಮಾಜಿಕ ಕಾರ್ಯಕರ್ತ ಈ ಕೊವೀಡ್ ನಂತಹ ಸಮಯದಲ್ಲಿ ಜನರಿಗಾಗಿ ಕೆಲಸ ಮಾಡುತ್ತಾ ಸಾವನಪ್ಪುವುದರಲ್ಲಿ ತುಂಬಾ ಸಂತೋಷಪಡುತ್ತೇನೆ. ಸಾವಿಗಾಗಿ ಹೆದರುವಂತಹದ್ದು ಏನಿದೆ?’

ಇಂದು ಸ್ವತಃ ಸಾವನ್ನು ಸಂತೋಷದಿಂದಲೇ ಸ್ವೀಕರಿಸಿದ ಕಾಮ್ರೇಡ್ ಪುರುಷೋತ್ತಮ ಕಲಾಲಬಂಡಿಯ ನೇರ ಹಾಗೂ ಸಮಕಾಲೀನ ಜಗತ್ತಿನಲ್ಲಿಯೇ ವಿರಳಾತಿ ವಿರಳ ಎನಿಸುವ ನುಡಿ.

ಹೌದು ಅವರಿಗೆ ಹುಟ್ಟು ಮತ್ತು ಸಾವಿನ ಕುರಿತಾಗಿ ಸ್ಪಷ್ಟ ತಿಳುವಳಿಕೆ ಇತ್ತು. ಅವರಿಗೆ ನಾಳೆ ಬಗೆಗಿನ ನಂಬಿಕೆಗಿಂತ ಇವತ್ತು ಏನು ಮಾಡುತ್ತೇವೆ ಮತ್ತು ಮಾಡಬೇಕು ಎನ್ನುವುದರ ಮೇಲೆಯೇ ಅಪಾರವಾದ ನಂಬಿಕೆ. ಹಾಗಾಗಿ ನನಗೆ ನಾಳೆ ಸಿಗುತ್ತವೋ ಇಲ್ಲವೋ ನಾಳೆ ಎನ್ನುವುದು ಭವಿಷ್ಯ ಇವತ್ತು ಮತ್ತು ಈಗ ನಾವು ಮಾಡುವುದಷ್ಟೇ ವಾಸ್ತವ ಎನ್ನುತ್ತಲೇ ಯಾವ ಬಡಜನರಲ್ಲಿ ಅಕ್ಷರ, ಅರಿವು, ವಿಜ್ಞಾನ, ವೈಜ್ಞಾನಿಕ ವಿಚಾರಧಾರೆ ಬೆಳೆಸಬೇಕೆಂದು ಹಗಲು ರಾತ್ರಿಗಳನ್ನು ಒಂದಾಗಿಸಿ ಜನರ ನಡುವೆಯೇ ಅವಿರತವಾಗಿ ಮತ್ತು ಅವಿಶ್ರಾಂತ ಕೆಲಸ ಮಾಡುತ್ತಲೇ ನಿರ್ಗಮಿಸಿದ ಅಪರೂಪದ ಸಂಗಾತಿ ಪುರುಷೋತ್ತಮ ಕಲಾಲಬಂಡಿ.

ಅವರ ಬಗ್ಗೆ ಏನು ಹೇಳುವುದು? ಕಳೆದು ಐವತ್ತಕ್ಕಿಂತ ಹೆಚ್ಚಿನ ವರ್ಷಗಳನ್ನು ಅವರು ಒಬ್ಬ ಕಮ್ಯುನಿಸ್ಟ್ ಕಾರ್ಯಕರ್ತ ಹಾಗೂ ನಾಯಕನಾಗಿ ಜನರ ನಡುವೆ ಕಳೆದಿದ್ದಾರೆ. ಆ ಬಗ್ಗೆ ಅವರನ್ನು ತೀರ ಹತ್ತಿರದಿಂದ ಬಲ್ಲ ಅವರೊಂದಿಗೆ ಒಡನಾಡಿದ ಅನೇಕ ಸಾಂಸ್ಕೃತಿಕ ಹಾಗೂ ವಿಜ್ಞಾನ ಮತ್ತು ಜನಪರ ಚಳವಳಿಗಳ ಹಿರಿಯ ಗಣ್ಯರು ಈಗಾಗಲೇ ಸರಣಿ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದು ತಮ್ಮ ನುಡಿ ನಮನ ಸಲ್ಲಿಸಿದ್ದಾರೆ. ಅವರ ಬದುಕೊಂದು ತೆರೆದ ಪುಟ.

ನನಗಾದರೂ ಮೂವತ್ತು ವರ್ಷಗಳಿಂದ ಅವರ ಹೆಸರು ಚಿರಪರಿಚಯವಾಗಿತ್ತು. ಆದರೆ ಅವರೊಂದಿಗೆ ನೇರ ಸಂಪರ್ಕವಿರಲಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಬೆಂಗಳೂರಿಲ್ಲಿರುವ ವಿಶೇಷವಾಗಿ ಹೈದರಾಬಾದ್ ಕರ್ನಾಟಕದ ಕಲುಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮೊದಲಾದ ಜಿಲ್ಲೆಗಳಿಂದ ಕೂಲಿಗಾಗಿ ವಲಸೆ ಬಂದು ನಾಯಂಡಳ್ಳಿ, ನಾಗರಬಾವಿ, ಜ್ಞಾನಭಾರತಿ, ಕೆಂಗೇರಿ, ಮೊದಲಾದ ಪ್ರದೇಶಗಳಲ್ಲಿ ವಾಸವಿರುವ ಅಸಂಖ್ಯಾತ ಬಡಜನರು, ಅವರ ಕುಟುಂಬ ಹಾಗೂ ವಿಶೇಷವಾಗಿ ಅವರ ಮಕ್ಕಳ ನಡುವೆ ಅವರು ಪ್ರತಿದಿನ ಕೆಲ ಕಾರ್ಯಕರ್ತರನ್ನು ಜೊತೆಗೂಡಿಸಿಕೊಂಡು ಅವರು ವಾಸಿಸುವ ಶೆಡ್ ಗಳ ಮುಂದೆಯೇ ನಡೆಸುತ್ತಿದ್ದ ಅರಿವಿನ ಚಟುವಟಿಕೆಗಳಂತೂ ಎಲ್ಲರ ಗಮನ ಸೆಳೆದಂತೆ ನನ್ನನ್ನೂ ಸೆಳೆದವು.

ಇದೇ ಸಂಧರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ದಾಳಿ ಇಟ್ಟ ಕೊವೀಡ್ ವೈರಸ್ ಮತ್ತು ಇದರಿಂದ ಕೆಲಸ ವಿಲ್ಲದೆ ಕಂಗಾಲಾದ ಬಡಜನರು ಅದರಲ್ಲೂ ವಲಸೆ ಕಾರ್ಮಿಕರ ಪರಿಸ್ಥಿತಿಯಂತೂ ಕಲಾಲಬಂಡಿಯಂತಹ ಎಪ್ಪತ್ತು ವರ್ಷದ  ಮನುಷ್ಯನ ನಿದ್ದೆಗೆಡಿಸಿತು. ಅದರಲ್ಲೂ ನಾನೊಬ್ಬ ಮಾರ್ಕ್ಸ್ ವಾದಿಯಾಗಿ, ವಿಜ್ಞಾನ ಚಳವಳಿಯ ಕಾರ್ಯಕರ್ತನಾಗಿ ಈ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಅದೊಂದು ನನಗೆ ನಾನೇ ಮಾಡಿಕೊಳ್ಳುವ ಅವಮಾನವೇ ಸರಿ ಎಂದು ಭಾವಿಸಿಕೊಂಡು ಹೆಗಲಿಗೆ ಬ್ಯಾಗ್ ಹೇರಿಸಿಕೊಂಡು ಬೀದಿಗೆ ಇಳಿದೇ ಬಿಟ್ಟರು.! ಅವರ ಆ ಉತ್ಸಾಹಕ್ಕೆ ಮತ್ತೆ ನೀರು ಎರೆದಿದ್ದು ಸಿಐಟಿಯು ರಾಜ್ಯ ಸಮಿತಿ ಇತರೆ ಕಾರ್ಮಿಕ ಸಂಘಟನೆಗಳೊಂದಿಗೆ ಮತ್ತು ಕಾರ್ಮಿಕ ಇಲಾಖೆ ಮೂಲಕ ಜಾರಿಗೊಳಿಸಿದ “ಕೊವೀಡ್ ವಾರಿಯರ್” ಎನ್ನುವ ಒಂದು ಪರವಾನಗಿ ಕಾರ್ಡು!

ಅಷ್ಟು ಸಿಕ್ಕಿದ್ದೆ ತಡ ಅಕ್ಷರಶಃ ಮನೆಯನ್ನೇ ಮರೆತರು. ಪುರುಷೋತ್ತಮ್ ಕಲಾಲಬಂಡಿ. ಕೊವೀಡ್ ವಾರಿಯರ್ ಎನ್ನುವ ಬ್ಯಾಡ್ಜ್ ಅನ್ನು ಒಲಂಪಿಕ್ಸ್ ನಲ್ಲಿ ಗೆದ್ದ ಚಿನ್ನದ ಮೆಡಲ್ ಎನ್ನುವಂತೆ ಸದಾ ಕೊರಳಿಗೆ ಹಾಕಿಕೊಂಡೇ ಹಗಲು ರಾತ್ರಿಗಳನೆನ್ನದೆ ಹಲವಾರು ವಲಸೆ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಅವರಿವರ ಕೈಕಾಲುಗಳ ಹಿಡಿದು, ಕೆಲವರನ್ನು ಮನವೂಲಿಸಿ ಜೊತೆಗೆ ಕಾರ್ಮಿಕ ಇಲಾಖೆಯಿಂದ ದೊರೆತ ಸಿದ್ದ ಆಹಾರ ಪಟ್ಟಣ, ನಂತರ ರೇಷನ್ ಕಿಟ್ ಗಳನ್ನು ಬಡಜನರ ಗುಡಿಸಲುಗಳಿಗೆ ತಲುಪಿಸಿ ಕೊವೀಡ್ ಎನ್ನುವ ವೈರಸ್ ನಿಂದ ಆರಿಹೋಗಿದ್ದ ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕನ್ನು ಹೊತ್ತಿಸಿದರು.

ಲಾಕ್ ಡೌನ್ ಅವಧಿಮುಗಿದು ಪರಿಹಾರ ಸಾಮಾಗ್ರಿಗಳನ್ನು ನೀಡುವ ಕೆಲಸ ನಿಲ್ಲುತ್ತಿದ್ದಂತೆ, ಬಹುಪಾಲು ಕಟ್ಟಡ ನಿರ್ಮಾಣ ಕಾರ್ಮಿಕರಾಗಿಯೇ ಬೆಂಗಳೂರಿಗೆ ಬಂದು ಕಂಗಾಲಾದ ಜನರಿಗೆ ಕೊವೀಡ್ ೫೦೦೦ ಪರಿಹಾರ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗೆ ಸದಸ್ಯರನ್ನಾಗಿಸುವುದು ಅದಕ್ಕಾಗಿ ಆ ಬಡಜನರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿದರು. ಜೊತೆ ಜೊತೆಗೆ ಅವರಲ್ಲಿ ಮೌಡ್ಯದ ವಿರುದ್ದ ಮತ್ತು ವೈಜ್ಞಾನಿಕ ತಿಳುವಳಿಕೆ ಮೂಡಿಸುತ್ತಲೇ ಮತ್ತು ಅವರ ಮಕ್ಕಳಿಗೆ ಶಿಕ್ಷಣದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸುವ ನಿರಂತರ ಮತ್ತು ಪ್ರತಿ ನಿತ್ಯ ಎಂಬಂತೆ ನಡೆಸುತ್ತಲೇ ಬಂದರು. ಅವರ ಆ ನಿರಂತರವಾದ ಕೆಲಸದಿಂದಾಗಿಯೇ  ಬೆಂಗಳೂರು ದಕ್ಷಿಣ ಜಿಲ್ಲೆಯ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಕೂಡ ಆದರು. ಆ ಬಳಿಕವಂತೂ ಅವರ ಕ್ರಿಯಾಶೀಲತೆ ಮತಷ್ಟು ಹೆಚ್ಚಾಯಿತು.

ನಿನ್ನೆ ದಾಬೋಲ್ಕರ್ ಹತ್ಯೆಯಾದ ದಿನ ಇಡೀ ದೇಶದ ವಿಜ್ಞಾನ ಕಾರ್ಯಕರ್ತರು ವೈಜ್ಞಾನಿಕ ಮನೋವೃತ್ತಿ ದಿನ ಆಚರಣೆ ಮಾಡಿದರು. ಬೆಂಗಳೂರಿನ ಬನಶಂಕರಿ ಯಲ್ಲಿರುವ ಕರಾವಿಪ ಕಚೇರಿಯಲ್ಲಿ  ವಿಜ್ಞಾನ ಚಳವಳಿಯ ಹತ್ತಾರು ಗೆಳೆಯರು ಸೇರಿದ್ದರು.  ಸ್ವತಃ ಬೆಂಗಳೂರು ಸೈನ್ಸ್ ಕಲೆಕ್ಟಿವ್ ಕಾರ್ಯದರ್ಶಿಯಾದ ಪುರುಷೋತ್ತಮ್ ಖಂಡಿತ ಅಲ್ಲಿರಬೇಕಿತ್ತು!

ಏನೇ ಆಗಲಿ, ನೀವು ಇಷ್ಟೊಂದು ಅವಸರ ಮಾಡಬಾರದಿತ್ತು, ಸಂಗಾತಿ. ನಿಮ್ಮ ಜೊತೆ ಮಾತನಾಡುವುದು ಬಹಳವಿತ್ತು. ಹೋಗಿ ಬನ್ನಿ ನಿಮ್ಮ ಕೆಲಸ ನಾವು ಮುಂದುವರೆಸುತ್ತೇವೆ.

ಕೆ.ಮಹಾಂತೇಶ

Leave a Reply

Your email address will not be published. Required fields are marked *