ಗುಡಿಸಲುವಾಸಿಗಳನ್ನು ಕೊವಿಡ್‍ ಕಾಲದಲ್ಲಿ ವಸತಿಹೀನರಾಗಿಸಬೇಡಿ- ರೈಲ್ವೆ ಮಂತ್ರಿಗಳಿಗೆ ಬೃಂದಾ ಕಾರಟ್‍ ಪತ್ರ

ಗುಡಿಸಲುವಾಸಿಗಳಿಗೆ ಪುನರ್ವಸತಿ ಮತ್ತು ಪರಿಹಾರದ ವ್ಯವಸ್ಥೆ ಮಾಡದೆ ಅವರನ್ನು ಒಕ್ಕಲೆಬ್ಬಿಸದಂತೆ ತಡೆಯಬೇಕು ಎಂದು ಸಿಪಿಐ(ಎಂ)  ಪೊಲಿಟ್‍ ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍ ರೈಲ್ವೆ ಮಂತ್ರಿ ಪೀಯೂಷ್ ಗೋಯಲ್‍ ಅವರಿಗೆ ಪತ್ರ ಬರೆದಿದ್ದಾರೆ.

ಆಗಸ್ಟ್ 31 ರಂದು ಸರ್ವೋಚ್ಚ ನ್ಯಾಯಾಲಯ ದಿಲ್ಲಿಯಲ್ಲಿ ರೈಲ್ವೆ ಭೂಮಿಯ ಮೇಲೆ  ರೈಲು ಹಳಿಗಳ ಬಳಿ ಇರುವ ಎಲ್ಲ ಗುಡಿಸಲುಗಳನ್ನು ಮೂರು ತಿಂಗಳ ಒಳಗೆ  ತೆಗೆಯಬೇಕು ಎಂದು ತೀರ್ಪಿತ್ತಿದೆ. ಆದರೆ ಒಂದು ವರ್ಷದ ಹಿಂದೆ  ದಿಲ್ಲಿ ಹೈಕೋರ್ಟ್‍ ಗುಡಿಸಲುವಾಸಿಗಳನ್ನು ಅವರಿದ್ದಲ್ಲಿಂದ ಎಬ್ಬಿಸಿ ಬೇರೆಡೆಯಲ್ಲಿ ನೆಲೆಗೊಳಿಸುವ ಅಗತ್ಯವಿದ್ದರೆ ಅವರ ಪುನರ್ವಸತಿಯ ವ್ಯವಸ್ಥೆಯನ್ನು ಮಾಡಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು. ಬಹುಶಃ ಗುಡಿಸಲುವಾಸಿಗಳನ್ನು ಈ ವಿಚಾರಣೆಯಲ್ಲಿ ಪಾರ್ಟಿ ಮಾಡದ್ದರಿಂದ ಸುಪ್ರಿಂ ಕೋರ್ಟಿಗೆ ದಿಲ್ಲಿ ಹೈಕೋರ್ಟಿನ ತೀರ್ಪಿನ ಬಗ್ಗೆ ತಿಳಿದಿಲಿಕ್ಕಿಲ್ಲ. ಇಲ್ಲವಾಗಿದ್ದರೆ ಸರ್ವೋಚ್ಚ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠ ಇಂತಹ ಒಂದು ಅಮಾನವೀಯ ತೀರ್ಪನ್ನು, ಅದೂ ಮಹಾಸೋಂಕಿನ ಸಮಯದಲ್ಲಿ ನೀಡುತ್ತಿರಲಿಲ್ಲ ಎಂದು ಬೃಂದಾ ಕಾರಟ್‍ ಹೇಳಿದ್ದಾರೆ.

ಬೇಜವಾಬ್ದಾರಿ, ಮನಸ್ಸಾಕ್ಷಿ ಒಪ್ಪಲಾರದ ಕೃತ್ಯ

“ಅದೇನೇ ಇರಲಿ, ರೈಲ್ವೆ ಮಂತ್ರಿಯಾಗಿ ನಿಮಗೆ ಗುಡಿಸಲುವಾಸಿಗಳನ್ನು ಮರುನೆಲೆಗೊಳಿಸುವ ಮತ್ತು ಮರುವಸತಿ ಕಲ್ಪಿಸುವ ಅಧಿಕಾರ ಇದೆ” ಎಂದು ಬೃಂದಾ ಅವರು ತಮ್ಮ ಪತ್ರದಲ್ಲಿ ರೈಲ್ವೆ ಮಂತ್ರಿಗಳಿಗೆ ಹೇಳಿದ್ದಾರೆ. ಸುಪ್ರಿಂ ಕೋರ್ಟಿನ ಮುಂದೆ ಸಲ್ಲಿಸಿರುವ  ಅಂದಾಜಿನ ಪ್ರಕಾರ ಸುಮಾರು 48,000 ಗುಡಿಸಲುವಾಸಿಗಳನ್ನು ಅವರಿದ್ದಲ್ಲಿಂದ ಎಬ್ಬಿಸಬೇಕಾಗಿದೆ. ಅಂದರೆ ಹೆಂಗಸರು, ಮಕ್ಕಳು ಸೇರಿದರೆ ಸುಮಾರು 2.5ಲಕ್ಷದಿಂದ 3 ಲಕ್ಷ ಜನಗಳನ್ನು ಅವರ ನೆಲೆಗಳಿಂದ ಎಬ್ಬಿಸಬೇಕಾಗಿದೆ. ಮಹಾಸಾಂಕ್ರಾಮಿಕ ಸಂದರ್ಭದಲ್ಲಿ ಇದು ಒಂದು ಆರೋಗ್ಯ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಸಾಕಷ್ಟು ಮಂದಿಯನ್ನು ಅಪಾಯಕ್ಕೀಡು ಮಾಡಬಹುದು. ದಿಲ್ಲಿ ಈಗ ಕೊವಿಡ್‍-19 ಹರಡಿಕೆಯ ಎರಡನೇ ಅಲೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜನಗಳನ್ನು ಒಕ್ಕಲೆಬ್ಬಿಸುವುದು ಅತ್ಯಂತ ಬೇಜವಾಬ್ದಾರಿ ಕೃತ್ಯವಾಗುತ್ತದೆ.

ಎರಡನೆಯದಾಗಿ, ಲಾಕ್ಡೌನಿನಿಂದಾಗಿ, ಗುಡಿಸಲುವಾಸಿಗಳ ವರಮಾನದಲ್ಲಿ ತೀವ್ರ ಇಳಿಕೆಯಾಗಿದೆ. ಹೀಗೆ ಈಗಾಗಲೇ ಸಂಕಟಪಡುತ್ತಿರುವ  ಅವರನ್ನು ವಸತಿಹೀನ ನಾಗರಿಕರನ್ನಾಗಿ ಮಾಡುವುದು ಮನಸ್ಸಾಕ್ಷಿ ಒಪ್ಪಲಾರದ ಒಂದು ಕೃತ್ಯವಾಗುತ್ತದೆ  ಎಂಬುದನ್ನು ಮಂತ್ರಿಗಳ ಗಮನಕ್ಕೆ ತಂದಿರುವ  ಈ ಪತ್ರ “ ಕಾಲಕಾಲಕ್ಕೆ ಅಂಗೀಕರಿಸಿದ ರಾಷ್ಟ್ರೀಯ ವಸತಿ ಕುರಿತಂತಹ ಧೋರಣಾ ಚೌಕಟ್ಟುಗಳು ಕೊಳೆಗೇರಿ ವಾಸಿಗಳನ್ನು ಅವರಿದ್ದಲ್ಲೇ ಮರುನೆಲೆಗೊಳಿಸುವುದನ್ನು ಪ್ರೋತ್ಸಾಹಿಸುತ್ತದೆ, ಅದು ತೀರಾ ಸಾಧ್ಯವೇ ಇಲ್ಲವೆಂದಾಗ ಮಾತ್ರವೇ ಬೇರೆಡೆಯಲ್ಲಿ ನೆಲೆಗೊಳಿಸಲಾಗುತ್ತದೆ ಎಂಬುದು ತಮಗೆ ತಿಳಿದೇ ಇದೆ.

ಈ ಪ್ರಕರಣದಲ್ಲಿ ಈಗಿದ್ದಲ್ಲೇ ಅಭಿವೃಧ‍್ಧಿ ಸಾಧ್ಯವೇ ಎಂದು ಯೋಚಿಸಲಾಗುತ್ತಿಲ್ಲ, ಮಾತ್ರವಲ್ಲ ಮರುವಸತಿಯ ಬಗ್ಗೆಯೂ ಯೋಚಿಸಲಾಗುತ್ತಿಲ್ಲ. ಆದ್ದರಿಂದ ಮರುನೆಲೆ, ಮರುವಸತಿ  ಮತ್ತು  ಪರಿಹಾರವಿಲ್ಲದೆ ಜನಗಳನ್ನು ಒಕ್ಕಲೆಬ್ಬಿಸುವುದನ್ನು ತಡೆಯಬೇಕು ಎಂದು ತಮ್ಮನ್ನು ಕೋರುತ್ತೇನೆ. ಜನಗಳು, ಕುಟುಂಬಗಳು ತಮ್ಮ  ಆಯ್ಕೆಯಿಂದೇನೂ ಗುಡಿಸಲುಗಳಲ್ಲಿ ವಾಸಿಸುತ್ತಿಲ್ಲ  ಅಥವ ವಸತಿಹೀನರಾಗಿಲ್ಲ., ಕೇಂದ್ರದಲ್ಲಿನ ಸರಕಾರಗಳ ಧೋರಣೆಗಳಿಂದಾಗಿ ಅಂಚಿಗೆ ತಳ್ಳಲ್ಪಟ್ಟಿ.ದ್ದಾರೆ ಮನೆ ಹೊಂದುವುದು ಒಂದು ಮೂಭೂತ ಮಾನವ ಹಕ್ಕು, ಅದು ಉದಾರ ದಾನವೇನಲ್ಲ”  ಎಂಬ ಸಂಗತಿಯನ್ನು  ತಮ್ಮ ಪತ್ರದ ಕೊನೆಯಲ್ಲಿ ಬೃಂದಾ ಕಾರಟ್‍ ರೈಲ್ವೆ ಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

Leave a Reply

Your email address will not be published. Required fields are marked *