ಆರನೇ ಮಹಾಧಿವೇಶನ-ಕೊನೆಯ ಐಕ್ಯ ಮಹಾಧಿವೇಶನ

Communist100 File copy
ಶತಮಾನೋತ್ಸವ ಲೇಖನಮಾಲೆ-೪೭

ಐದನೇ ಮಹಾಧಿವೇಶನ ಮತ್ತು ಆರನೇ ಮಹಾಧಿವೇಶನದ ನಡುವಿನ ಮಧ್ಯಂತರ ಅವಧಿಯು ದೇಶದ ರಾಜಕೀಯ ಜೀವನದ ಹಾಗೂ ಕಮ್ಯುನಿಸ್ಟ್ ಪಕ್ಷದ ಒಳಗಡೆಯ ಅನೇಕ ಮಹತ್ವಪೂರ್ಣ ಬೆಳವಣಿಗೆಗಳನ್ನು ಕಂಡಿತು. ಅಮೃತಸರ್ ಮಹಾಧಿವೇಶನದ ನಂತರ ಭಾರತದ ರಾಜಕೀಯ ಚಿತ್ರಣದಲ್ಲಿ ಪ್ರಭಾವ ಬೀರಿದ ಎರಡು ದೊಡ್ಡ ಘಟನೆಗಳೆಂದರೆ ಕೇರಳದ ಬೆಳವಣಿಗೆ ಮತ್ತು ಭಾರತ-ಚೀನಾ ಸಂಬಂಧಗಳು ಕೆಟ್ಟಿಹೋಗಿದ್ದುದು. ಕೇರಳ ಕಮ್ಯುನಿಸ್ಟ್ ಸರ್ಕಾರವನ್ನು ವಜಾಮಾಡಿರುವುದರ ವಿರುದ್ಧ ಪಕ್ಷವು ದೇಶಾದ್ಯಂತ ಐಕ್ಯ ಪ್ರತಿಭಟನೆಗಳನ್ನು ಪ್ರಾರಂಭಿಸಿತು. ಆದರೆ ಅದೇ ವೇಳೆಗೆ ಎರಡನೆಯ ವಿಷಯವು ಪಕ್ಷದೊಳಗಡೆ ಗಂಭೀರ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು.

ಕೇರಳದಲ್ಲಿನ ಕಮ್ಯುನಿಸ್ಟ್ ಸರ್ಕಾರವನ್ನು ಕಿತ್ತುಹಾಕಿದ್ದರ ವಿರುದ್ಧ ಪಕ್ಷವು ನಡೆಸಿದ ಆಂದೋಲನವು ಹಿಂದೆಂದಿಗಿಂತಲೂ ಅತ್ಯಂತ ವ್ಯಾಪಕವಾಗಿ ಬೆಳೆದ ಆಂದೋಲನವಾಗಿತ್ತು. ಈ ಸನ್ನಿವೇಶದಲ್ಲಿ ಭಾರತ-ಚೀನಾ ನಡುವಿನ ಗಡಿ ವಿವಾದವನ್ನು ಕಾಂಗ್ರೆಸ್ ಪಕ್ಷ ಹಾಗೂ ಇತರ ಪ್ರತಿಗಾಮಿ ಶಕ್ತಿಗಳು ಕಮ್ಯುನಿಸ್ಟ್ ಪಕ್ಷದ ಮೇಲೆ ದಾಳಿ ಮಾಡಲು ಬಳಸಿದವು.

ಕಾರ್ಯಕ್ರಮಾತ್ಮಕ ಪ್ರಶ್ನೆಗಳ ಮೇಲೆ, ಪ್ರಸಕ್ತ ನೀತಿಗಳ ಕುರಿತು ಹಾಗೂ ಜಾಗತಿಕ ಕಮ್ಯುನಿಸ್ಟ್ ಚಳವಳಿಯು ಎದುರಿಸುತ್ತಿದ್ದ ಸೈದ್ಧಾಂತಿಕ ಪ್ರಶ್ನೆಗಳ ಮೇಲೆ ಪಕ್ಷದೊಳಗಡೆ ಗಂಭೀರ ಭಿನ್ನಾಭಿಪ್ರಾಯಗಳು ಉದ್ಭವಿಸಿದವು. ರಾಷ್ಟ್ರೀಯ ಮಂಡಳಿಯು ಎರಡು ಆಯೋಗಗಳನ್ನು – ಆರನೇ ಮಹಾಧಿವೇಶನದಲ್ಲಿ ಮಂಡಿಸುವ ಸಲುವಾಗಿ ಪಕ್ಷದ ಕಾರ್ಯಕ್ರಮ ಮತ್ತು ರಾಜಕೀಯ ನಿರ್ಣಯ ಸಿದ್ಧಪಡಿಸಲು – ನೇಮಿಸಿತು. ಈ ಎರಡೂ ಆಯೋಗಗಳು ಯಾವುದೇ ಒಂದು ಸಮಾನ ತಿಳಿವಳಿಕೆಗೆ ಬರಲು ಸಾಧ್ಯವಾಗಲಿಲ್ಲ. ಆದಕಾರಣ ಪಕ್ಷದ ಮಹಾಧಿವೇಶನದ ಮುಂದೆ ಎರಡೆರಡು ಕರಡು ಕಾರ್ಯಕ್ರಮಗಳು ಮತ್ತು ಕರಡು ರಾಜಕೀಯ ನಿರ್ಣಯಗಳು ಮಂಡಿಸಲ್ಪಟ್ಟವು.

6th congress-2

ಕಮ್ಯುನಿಸ್ಟ್ ಪಕ್ಷದ ವಿರುದ್ಧ ಪ್ರತಿಗಾಮಿ ಶಕ್ತಿಗಳು ಮತ್ತು ಕಾಂಗ್ರೆಸ್ ಪಕ್ಷ ದ್ವೇಷಪೂರಿತ ಪ್ರಚಾರ ನಡೆಸಿದ್ದರೂ, ಕಾಂ. ಇಎಂಎಸ್ ನಂಬೂದಿರಿಪಾಡ್ ಅವರು ಹೋದ ಪ್ರತಿಯೊಂದು ರಾಜ್ಯದಲ್ಲೂ ಅಪಾರ ಜನಸಮುದಾಯ ಅವರನ್ನು ಸ್ವಾಗತಿಸಿತ್ತು. ಕೇರಳ ಚುನಾವಣೆ ಪ್ರಚಾರಕ್ಕೆ ಪಕ್ಷದ ನಿರೀಕ್ಷೆಗೂ ಮೀರಿ ಭಾರಿ ಮೊತ್ತದ ನಿಧಿ ಸಂಗ್ರಹವಾಯಿತು. ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ(೧೯೬೦) ಪಕ್ಷವು ಸೋತಿತಾದರೂ, ಶೇಕಡಾವಾರು ಮತದಾನದಲ್ಲಿ ಸರಿಸುಮಾರು ಮೂರು ಅಂಶಗಳಷ್ಟು ಹೆಚ್ಚು ಮತ ಗಳಿಸಿತ್ತು. ಪಕ್ಷವು ಪ್ರಮುಖ ಪಾತ್ರ ವಹಿಸಿದ್ದ ಪಂಜಾಬಿನ ಅಭಿವೃದ್ಧಿ ಶುಲ್ಕ ವಿರುದ್ಧದ ಹೋರಾಟವಲ್ಲದೇ, ತಮಿಳುನಾಡು, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅದು ರೈತರ ನಿರ್ದಿಷ್ಟ ಬೇಡಿಕೆಗಳಾದ ಭೂಮಿತಿ ಹಾಗೂ ಭೂಸುಧಾರಣೆ ಶಾಸನಗಳ ಬಗ್ಗೆ ರೈತಾಪಿ ಜನರನ್ನು ಸಕ್ರಿಯವಾಗಿ ಅಣಿನೆರೆಸಿತ್ತು. ಹಲವಾರು ರಾಜ್ಯಗಳಲ್ಲಿ ಪಾದಯಾತ್ರೆಗಳನ್ನು ಸಂಘಟಿಸಿತ್ತು. ಪಶ್ಚಿಮ ಬಂಗಾಳದಲ್ಲಿ, ಈ ಚಳವಳಿಯು ಲಕ್ಷಾಂತರ ಎಕರೆ ಭೂಮಿಯನ್ನು ನಿಜವಾದ ಉಳುಮೆದಾರರಿಗೆ ಉಚಿತವಾಗಿ ಹಂಚುವಂತೆ ಸರ್ಕಾರವನ್ನು ಒತ್ತಾಯಿಸಿತ್ತು.

ಅನೇಕ ವರ್ಷಗಳ ನಂತರ, ಅತ್ಯಂತ ದೊಡ್ಡ ಕಾರ್ಮಿಕ ವರ್ಗದ ಕಾರ್ಯಾಚರಣೆಯಾದ ಜುಲೈ ೧೯೬೦ರ ಕೇಂದ್ರ ಸರ್ಕಾರಿ ನೌಕರರ ಮುಷ್ಕರದಲ್ಲಿ ಕೂಡ ಪಕ್ಷವು ಮಧ್ಯಪ್ರವೇಶ ಮಾಡಿತ್ತು. ಮೊಟ್ಟಮೊದಲ ಬಾರಿಗೆ, ಸರ್ಕಾರಿ ಸೇವೆಗಳ ಎಲ್ಲಾ ಕಾರ್ಮಿಕರೂ ಏರಿಳಿತವಾಗುವ ತುಟ್ಟಿಭತ್ಯೆ ಮತ್ತು ಕನಿಷ್ಠ ಸಂಬಳ ಬೇಡಿಕೆಗಳನ್ನು ಮುಂದಿರಿಸಿದ್ದರು. ರಕ್ಷಣಾ ಇಲಾಖೆಗಳ ವಿಭಾಗಗಳೂ ಮುಷ್ಕರದಲ್ಲಿ ಭಾಗವಹಿಸಿದ್ದವು ಮತ್ತು ರೈಲ್ವೆ  ಸೇವೆಯನ್ನೂ ಕೂಡ ಅದು ತಟ್ಟಿತ್ತು. ಕಾಂಗ್ರೆಸ್ ಸರ್ಕಾರವು ತೀವ್ರ ದಾಳಿ ಶುರುಮಾಡಿತು. ೨೧,೦೦೦ ಜನರನ್ನು ಬಂಧಿಸಿತು ಮತ್ತು ಏಳು ಕಾರ್ಮಿಕರ ಸಾವಿಗೆ ಕಾರಣವಾಯಿತು. ಸಾಕಷ್ಟು ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಸಿದ್ಧತೆ ಮಾಡಿಕೊಳ್ಳುವಲ್ಲಿ ವಿಫಲವಾದ ಕಾರಣ ಆ ಕಾರ್ಮಿಕರ ಬೆಂಬಲಕ್ಕೆ ಸಾರ್ವಜನಿಕರನ್ನು ಅಣಿನೆರೆಸಲು ಸಾಧ್ಯವಾಗಲಿಲ್ಲ ಎಂದು ಪಕ್ಷವು ಸ್ವಯಂವಿಮರ್ಶಾತ್ಮಕವಾಗಿ ಪುನರಾವಲೋಕನ ಮಾಡಿಕೊಂಡಿತು. ಹಲವಾರು ಕಾರ್ಮಿಕ ಸಂಘಗಳು ಒಟ್ಟುಗೂಡಿ ನಡೆಸಿದ ಕಾರ್ಮಿಕ ವರ್ಗದ ಐಕ್ಯ ಕಾರ್ಯಾಚರಣೆಗಳನ್ನು ಕೂಡ ಈ ಮೂರು ವರ್ಷಗಳಲ್ಲಿ ಪಕ್ಷ ಕಂಡಿತು.

ಈ ಎಲ್ಲಾ ಹೋರಾಟಗಳ ಕಾರಣಗಳಿಂದಾಗಿ, ಹಲವಾರು ಮರುಚುನಾವಣೆಗಳಲ್ಲಿ ಪಕ್ಷದ ಸಾಧನೆಯು ಸಕಾರಾತ್ಮಕವಾಗಿತ್ತು. ಅವುಗಳಲ್ಲಿ ಗಮನಾರ್ಹವಾದದ್ದು ಭೂಪಾಲ್ ಮುನಿಸಿಪಾಲಿಟಿ ಚುನಾವಣೆಯಲ್ಲಿನ ಗೆಲುವು. ತನ್ನ ಮೈತ್ರಿಕೂಟದ ಪಕ್ಷಗಳೊಂದಿಗೆ ಪಕ್ಷವು ಭೂಪಾಲ್ ಮುನಿಸಿಪಾಲಿಟಿಯಲ್ಲಿ ಬಹುಮತ ಗಳಿಸಿತ್ತು. ಅದೇ ರೀತಿಯಲ್ಲಿ ಮುಂಬಯಿ ಕಾರ್ಪೊರೇಷನ್ನಿನಲ್ಲಿ ಕೂಡ, ಸಂಯುಕ್ತ ಮಹಾರಾಷ್ಟ್ರ ವೇದಿಕೆಯಡಿಯಲ್ಲಿ ಸ್ಪರ್ಧೆ ಮಾಡಿ ಪಕ್ಷವು ೧೮ ಸ್ಥಾನಗಳನ್ನು ಗಳಿಸಿತ್ತು. ಗುಜರಾತ್ ಮತ್ತು ಮಹಾರಾಷ್ಟ್ರ ಭಾಷಾವಾರು ರಾಜ್ಯಗಳ ರಚನೆಯಲ್ಲಿ ಪಕ್ಷವು ವಹಿಸಿದ ಕ್ರಿಯಾಶೀಲ ಪಾತ್ರವು ಮುಂಬಯಿ ಗೆಲುವಿನಲ್ಲಿ ಪ್ರತಿಫಲನವಾಗಿತ್ತು.

ಮಾರ್ಚ್ ೧೯೫೯ ಮತ್ತು ಫೆಬ್ರವರಿ ೧೯೬೧ರ ನಡುವೆ, ಭಾರತ-ಚೀನಾ ಗಡಿ ವಿವಾದ ಬಗೆಗಿನ ತನ್ನ ನಿಲುವನ್ನು ವಿವರಿಸಿ ಹತ್ತು ಹೇಳಿಕೆಗಳನ್ನು ಪಕ್ಷವು ನೀಡಿತ್ತು. ಚಿಯಾಂಗ್ ಕೈ ಶೇಕ್ ಮತ್ತು ಸಾಮ್ರಾಜ್ಯಶಾಹಿ ಅಮೆರಿಕದ ಸಹಾಯ ಮತ್ತು ಕುಮ್ಮಕ್ಕಿನಿಂದ ದಲಾ ಲಾಮಾ ನೇತೃತ್ವದ ಶಕ್ತಿಗಳ ವಿಫಲ ದಂಗೆಯು ಕೆಲಮಟ್ಟಿಗೆ ಭಾರತ-ಚೀನಾ ನಡುವಿನ ಸ್ನೇಹಪೂರ್ಣ ಸಂಬಂಧವನ್ನು ಹಾಳುಗೆಡವಿತ್ತು ಮತ್ತು ಅಡ್ಡಿಪಡಿಸಿತ್ತು. ಹಿಂದೂ ಮಹಾಸಭಾ, ಜನಸಂಘ, ಸ್ವತಂತ್ರ ಪಕ್ಷಗಳನ್ನು ಪ್ರತಿನಿಧಿಸುವ ಪ್ರತಿಗಾಮಿ ಶಕ್ತಿಗಳು ಮತ್ತು ಕಾಂಗ್ರೆಸ್ ಪಕ್ಷದೊಳಗಿನ ಬಲಪಂಥೀಯ ಗುಂಪುಗಳು ಟಿಬೆಟ್‌ನಲ್ಲಿನ ಬೆಳವಣಿಗೆಗಳನ್ನು ವಿರೂಪಗೊಳಿಸಿದ್ದವು ಮತ್ತು ತಮ್ಮ ಪ್ರತಿಗಾಮಿ ಕಾರ್ಯಸೂಚಿಯನ್ನು ಮುಂದೊತ್ತಲು ಆ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡಿದ್ದವು. ಭಾರತದ ನೆಲೆಯನ್ನು ಬಳಸಿಕೊಂಡು ಚೀನಾದ ವಿರುದ್ಧ ತಮ್ಮ ಕಾರ್ಯಚಟುವಟಿಕೆಗಳನ್ನು ಮುಕ್ತವಾಗಿ ನಡೆಸಲು ಅನುಮತಿ ನೀಡಬೇಕೆಂದು ಮತ್ತು ‘ಟಿಬೆಟ್ ಸರ್ಕಾರ’ವಾಗಿ ಇಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕೆಂದೂ ಅವು ಒತ್ತಾಸಿದ್ದವು. ಭಾರತದ ವಿದೇಶಾಂಗ ನೀತಿಯನ್ನು ಮತ್ತು ಭಾರತ-ಚೀನಾದ ನಡುವಿನ ‘ಪಂಚಶೀಲ’ ಒಪ್ಪಂದವನ್ನು ಕೂಡ ಆ ಶಕ್ತಿಗಳು ವಿರೋಧಿಸಿದ್ದವು. ಈ ಹಿನ್ನೆಲೆಯಲ್ಲಿ ಮತ್ತು ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಿಲ್ಲದ ಕಾರಣ, ಎರಡು ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ ಮತ್ತು ಹಿಮಾಲಯದ ಪ್ರದೇಶದಲ್ಲಿ ವಿಷಾದಕರ ಘಟನೆಗಳು ನಡೆದಿವೆ ಎಂದು ಪಕ್ಷವು ಅಭಿಪ್ರಾಯಪಟ್ಟಿತು.

‘ಗಡಿಗೆ ಸಂಬಂಧಪಟ್ಟ ಎಲ್ಲಾ ವಿವಾದಗಳನ್ನು ಪರಸ್ಪರ ಮಾತುಕತೆಗಳ ಮೂಲಕ ಇತ್ಯರ್ಥಪಡಿಸಿ ಕೊಳ್ಳಬಹುದು’ ಎಂಬ ವಿಶ್ವಾಸವನ್ನು ಪಕ್ಷ ವ್ಯಕ್ತಪಡಿಸಿತು. ಸಾಮ್ರಾಜ್ಯಶಾಹಿ ಶಕ್ತಿಗಳು ಭಾರತ-ಚೀನಾ ನಡುವಿನ ವಿವಾದವನ್ನು ಬಳಸಿಕೊಂಡು ನಮ್ಮ ಸ್ವತಂತ್ರ ವಿದೇಶಾಂಗ ನೀತಿಯನ್ನು ತ್ಯಜಿಸಲು ಒತ್ತಡ ಹೇರುತ್ತಿವೆ ಮತ್ತು ಆ ಮೂಲಕ ಆಫ್ರೋ-ಏಶಿಯನ್ ಒಗ್ಗಟ್ಟನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ ಎಂದು ಅದು ಮುನ್ನೆಚ್ಚರಿಕೆ ನೀಡಿತು. ‘ಜನರ ಗಮನವನ್ನು ಅವರ ದಿನಿನಿತ್ಯದ ಸಮಸ್ಯೆಗಳಿಂದ ಬೇರೆಡೆ ಸೆಳೆಯಲು ಮತ್ತು ದೇಶದ ಪ್ರಜಾಪ್ರಭುತ್ವ ಚಳವಳಿಯನ್ನು ದಿಕ್ಕು ತಪ್ಪಿಸಲು ಮತ್ತು ದಮನ ಮಾಡಲು’ ಈ ಬೆಳವಣಿಗೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದನ್ನೂ ಪಕ್ಷವು ಗಮನಿಸಿತು. ಜನಸಂಘ ಮತ್ತು ಇತರ ಪ್ರತಿಗಾಮಿ ಶಕ್ತಿಗಳು ‘ಹೊಸ ವಿದೇಶಾಂಗ ನೀತಿ, ಹೊಸ ರಕ್ಷಣಾ ಮಂತ್ರಿ ಮತ್ತು ಹೊಸ ಪ್ರಧಾನ ಮಂತ್ರಿ’ಗಾಗಿ ಕರೆ ಕೊಟ್ಟರೆ, ಪಕ್ಷವು ಆ ಕರೆಯನ್ನು ವಿರೋಧಿಸಿತು ಮತ್ತು ಆ ಉದ್ವಿಗ್ನತೆಯ ಪರಿಹಾರಕ್ಕೆ ಉನ್ನತ ರಾಜಕೀಯ ಮಟ್ಟದಲ್ಲಿ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿತು. ಉದ್ವಿಗ್ನತೆಯನ್ನು ತಗ್ಗಿಸಿದ ನೆಹರೂ ಮತ್ತು ಚೌ ಎನ್-ಲೈ ನಡುವಿನ ಮಾತುಕತೆಯನ್ನು ಪಕ್ಷ ಸ್ವಾಗತಿಸಿತು.

೮೧ ಕಮ್ಯುನಿಸ್ಟ್ ಪಕ್ಷಗಳ ನವೆಂಬರ್ ೧೯೬೦ರ ಮಾಸ್ಕೋ ಸಮ್ಮೇಳನದಲ್ಲಿ ಕಮ್ಯುನಿಸ್ಟ್ ಪಕ್ಷವು ಭಾಗವಹಿಸಿತು. ಸುದೀರ್ಘ ಚರ್ಚೆಗಳ ನಂತರ ಅದು ಒಂದು ಹೇಳಿಕೆಯನ್ನು ಅಂಗೀಕರಿಸಿತು. ಆ ಹೇಳಿಕೆಯನ್ನು ಸಿದ್ಧಪಡಿಸುವಲ್ಲಿ ಮತ್ತು ಸಮ್ಮೇಳನದಲ್ಲಿ ಕೂಡ ಪಕ್ಷದ ಪ್ರತಿನಿಧಿಗಳು ಸಕ್ರಿಯವಾದ ಪಾತ್ರ ವಹಿಸಿದರು. ಇಂತಹ ಒಂದು ಸನ್ನಿವೇಶದಲ್ಲಿ ಪಕ್ಷದ ಆರನೇ ಮಹಾಧಿವೇಶನವು ೧೯೬೧ರ ಏಪ್ರಿಲ್ ೭ ರಿಂದ ೧೬ ರವರೆಗೆ ವಿಜಯವಾಡದಲ್ಲಿ ನಡೆಯಿತು. ೧,೭೭,೫೦೧ ಸದಸ್ಯತ್ವವನ್ನು ಪ್ರತಿನಿಧಿಸಿ, ೪೩೯ ಪ್ರತಿನಿಧಿಗಳು ಮತ್ತು ೧೭ ಮತದಾನದ ಹಕ್ಕಿಲ್ಲದ ಪ್ರತಿನಿಧಿಗಳು ಹಾಗೂ ವೀಕ್ಷಕರು ಮಹಾಧಿವೇಶನದಲ್ಲಿ ಪಾಲ್ಗೊಂಡರು. ಪ್ರತಿನಿಧಿಗಳ ಜೈಲುವಾಸವನ್ನು ಕೂಡಿಸಿದರೆ ೧೪೯೪ ವರ್ಷಗಳು, ೧೦ ತಿಂಗಳು ೨೮ ದಿನಗಳಾದರೆ, ಭೂಗತರಾಗಿದ್ದ ವಿವರವನ್ನು ಲೆಕ್ಕಹಾಕಿದರೆ ಅದು ೯೯೮ ವರ್ಷಗಳು ೯ ತಿಂಗಳು ಆಗಿತ್ತು. ಇದು ಪಕ್ಷದ ಮತ್ತು ಅದರ ನಾಯಕತ್ವದ ಹೋರಾಟದ ಶಕ್ತಿಯನ್ನು ಪ್ರತಿಫಲಿಸಿತ್ತು.

ಕಾರ್ಯಕ್ರಮಾತ್ಮಕ ಪ್ರಶ್ನೆಗಳ ಮೇಲೆ, ಪ್ರಸಕ್ತ ನೀತಿಗಳ ಕುರಿತು ಹಾಗೂ ಜಾಗತಿಕ ಕಮ್ಯುನಿಸ್ಟ್ ಚಳವಳಿಯು ಎದುರಿಸುತ್ತಿದ್ದ ಸೈದ್ಧಾಂತಿಕ ಪ್ರಶ್ನೆಗಳ ಮೇಲೆ ಪಕ್ಷದೊಳಗಡೆ ಗಂಭೀರ ಭಿನ್ನಾಭಿಪ್ರಾಯಗಳು ಉದ್ಭವಿಸಿದವು. ರಾಷ್ಟ್ರೀಯ ಮಂಡಳಿಯು ಎರಡು ಆಯೋಗಗಳನ್ನು – ಆರನೇ ಮಹಾಧಿವೇಶನದಲ್ಲಿ ಮಂಡಿಸುವ ಸಲುವಾಗಿ ಪಕ್ಷದ ಕಾರ್ಯಕ್ರಮ ಮತ್ತು ರಾಜಕೀಯ ನಿರ್ಣಯ ಸಿದ್ಧಪಡಿಸಲು – ನೇಮಿಸಿತು. ಈ ಎರಡೂ ಆಯೋಗಗಳು ಯಾವುದೇ ಒಂದು ಸಮಾನ ತಿಳಿವಳಿಕೆಗೆ ಬರಲು ಸಾಧ್ಯವಾಗಲಿಲ್ಲ. ಆದಕಾರಣ ಪಕ್ಷದ ಮಹಾಧಿವೇಶನದ ಮುಂದೆ ಎರಡೆರಡು ಕರಡು ಕಾರ್ಯಕ್ರಮಗಳು ಮತ್ತು ಕರಡು ರಾಜಕೀಯ ನಿರ್ಣಯಗಳು ಮಂಡಿಸಲ್ಪಟ್ಟವು.

ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಘೋಷ್ ಆರನೇ ಮಹಾಧಿವೇಶನದ ಮುಂದೆ ಇಟ್ಟ ತಮ್ಮ ವರದಿಯಲ್ಲಿ ಪಕ್ಷದೊಳಗಡೆ ಇರುವ ತೀವ್ರ ಭಿನ್ನಾಭಿಪ್ರಾಯಗಳನ್ನು ಮಂಡಿಸಿದರು: “ಈ ಕೆಳಗಿನ ವಿಷಯಗಳ ಬಗ್ಗೆ ನಾವು ಭಿನ್ನಾಭಿಪ್ರಾಯ ಹೊಂದಿದ್ದೇವೆ: (೧) ಹೊಸ ಸ್ವತಂತ್ರ ದೇಶಗಳಿಗೆ ಸಂಬಂಧಪಟ್ಟಂತೆ ಮಾಸ್ಕೋ ಹೇಳಿಕೆಯಲ್ಲಿನ ಸೂತ್ರಗಳ ನಿಜವಾದ ಪರಿಣಾಮಗಳು; (೨) ನಮ್ಮದೇ ದೇಶದಲ್ಲಿನ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿ; (೩) ಪಕ್ಷದ ಮುಂದಿರುವ ತಕ್ಷಣದ ಕಾರ್ಯಭಾರಗಳು. ಈ ಭಿನ್ನಾಭಿಪ್ರಾಯಗಳೊಂದಿಗೆ, ಒಂದು ಸಮಾನ ರಾಜಕೀಯ ನಿರ್ಣಯ ರೂಪಿಸಲು ನಮಗೆ ಸಾಧ್ಯವಾಗದು”.

ಪಕ್ಷದ ಮಹಾಧಿವೇಶನದ ಮುಂದೆ ಬಹುಸಂಖ್ಯಾತ ರಾಷ್ಟ್ರೀಯ ಮಂಡಳಿ ಸದಸ್ಯರು ಮಂಡಿಸಿದ ರಾಜಕೀಯ ನಿರ್ಣಯವು ವರ್ಗ ಶಾಮೀಲಿನ ತಿಳಿವಳಿಕೆಯನ್ನು ಪ್ರತಿಫಲಿಸಿತು. ಹೀಗಾಗಿ ಆರನೇ ಮಹಾಧಿವೇಶನದಲ್ಲಿ ಪಕ್ಷವು ತೀವ್ರವಾದ ಬಿಕ್ಕಟ್ಟನ್ನು ಎದುರಿಸಿತು. ರಾಜಕೀಯ ವರದಿ ಮತ್ತು ಪ್ರಧಾನ ಕಾರ್ಯದರ್ಶಿಯ ಭಾಷಣದ ಆಧಾರದಲ್ಲಿ ರಾಜಕೀಯ ನಿರ್ಣಯದ ತಿದ್ದುಪಡಿಗೆ ಅವಕಾಶ ಕಲ್ಪಿಸುವ ಮೂಲಕ ವಿಭಜನೆಯನ್ನು ತಪ್ಪಿಸಲಾಯಿತು. ಕರಡು ಕಾರ್ಯಕ್ರಮಗಳನ್ನು ಮಂಡನೆಯ ನಂತರ ತಡೆಹಿಡಿಯಲಾಯಿತು ಮತ್ತು ರಾಷ್ಟ್ರೀಯ ಮಂಡಳಿಗೆ ವಹಿಸಿಕೊಡಲಾಯಿತು.

ಅಮೃತಸರ ಮಹಾಧಿವೇಶನದ ತೀರ್ಮಾನಗಳನ್ನು ಮತ್ತು ಕೆಲಸಗಳನ್ನು ಜಾರಿಮಾಡುವಲ್ಲಿನ ವಿಫಲತೆಯ ಬಗ್ಗೆ ಮಹಾಧಿವೇಶನದ ಮುಂದೆ ಮಂಡಿಸಲಾದ ಸಂಘಟನಾತ್ಮಕ ವರದಿಯು ಗಮನ ಹರಿಸಿತು. ‘ಸಂಸದೀಯ ಸಾಂವಿಧಾನಿಕ ವಾತಾವರಣದ ಬೆಳವಣಿಗೆಯ ಕಾರಣದಿಂದ ಮತ್ತು ಭಾಗಶಃ ಪಕ್ಷದ ಯಾವ ಮಟ್ಟದ ಘಟಕಗಳೂ ಇಂತಹ ಅನ್ಯ ಪ್ರವೃತ್ತಿಗಳ ವಿರುದ್ಧ ಹೋರಾಡುವ ಕೆಲಸವನ್ನು ಮಾಡದ ಕಾರಣದಿಂದಾಗಿ ಉಂಟಾದ’ ಪಕ್ಷದ ಶಿಸ್ತಿನ ಬಗ್ಗೆ ರೂಢಿಗತ ಸಡಿಲತೆಯನ್ನು ಕೂಡ ವರದಿಯು ಗುರುತಿಸಿತು. ‘ಶಿಸ್ತನ್ನು ಮರುಸ್ಥಾಪಿಸಲು, ಮಾತು ಮತ್ತು ಕೃತಿ ನಡುವಿನ ಕಂದರವನ್ನು ಮುಚ್ಚಲು ಮತ್ತು ಸಂಗಾತಿ ಸಂಬಂಧಗಳನ್ನು ಬಲಪಡಿಸಲು’ ‘ತಿದ್ದುಪಡಿ ಚಳವಳಿಯ ಅಗತ್ಯದ’ ಕುರಿತು ವರದಿ ಎತ್ತಿಹೇಳಿತು. ಪಕ್ಷದ ಮೂಲ ಸಂಘಟನಾ ನಿಯಮಗಳನ್ನು ಇನ್ನೂ ಉಪೇಕ್ಷೆ ಮಾಡುತ್ತಿರುವುದರ ಬಗ್ಗೆ ಅದು ವಿಷಾದ ವ್ಯಕ್ತಪಡಿಸಿತು.

ಪರಿಷ್ಕರಣವಾದಿ ಪ್ರವೃತ್ತಿಗಳು ವ್ಯಾಪಕವಾಗಿ ರೂಢಿಯಲ್ಲಿರುವುದನ್ನು ಗಮನಿಸಿದ ಅದು, “ಬಂಡವಾಳಶಾಹಿ ಸಂಸತ್ತಿನ ಸಾರ್ಥಕತೆ ಮತ್ತು ಹೋರಾಟದ ಸಂವಿಧಾನಾತ್ಮಕ ಸ್ವರೂಪ ಮಾತ್ರವೇ ಜನರ ವಿಶ್ವಾಸಗಳಿಸುವ ಮಾರ್ಗ ಎಂದು ನಂಬುವುದು ಪಕ್ಷದ ಪ್ರಮುಖ ಸಮಿತಿಗಳು ಮತ್ತು ಕಾರ್ಯಕರ್ತರ ಪರಿಪಾಟವಾಗಿದೆ” ಎಂದು ಹೇಳಿತು. ನಿಧಾನವಾಗಿ ಆದರೆ ಖಂಡಿತವಾಗಿ ಜನರಲ್ಲಿ ಬೆಳೆಯುತ್ತಿರುವ ಸಮಾಜವಾದಿ ಚಿಂತನೆಗಳು ಮತ್ತು ಅದರಿಂದಾಗಿ ದೇಶದಲ್ಲಿರುವ ಎಡಪಕ್ಷಗಳು ಮತ್ತು ಎಡಪಂಥೀಯರ ಗುಂಪು ಅಷ್ಟೇ ನಿಧಾನವಾಗಿ ಮತ್ತು ಖಂಡಿತವಾಗಿ ಕಾಂಗ್ರೆಸ್ ಸರ್ಕಾರದ ಸ್ಥಾನವನ್ನು ತುಂಬುವ ಸಾಧ್ಯತೆ ಕಮ್ಯುನಿಸ್ಟ್ ಪಕ್ಷದ ಮುಂದಿದೆ ಎಂಬ ಚಿಂತನೆಗಳು ಪಕ್ಷದ ಆಲೋಚನೆಗಳನ್ನು ಮತ್ತು ಚಟುವಟಿಕೆಗಳನ್ನು ನಿರ್ಧರಿಸುತ್ತಿವೆ. ಇದು ಪಕ್ಷದ ಪ್ರಧಾನ ಚಟುವಟಿಕೆಯು ಸಾಮೂಹಿಕ ಕೆಲಸದಿಂದ ಸಂಸದೀಯ ಕೆಲಸಗಳ ಕಡೆ ಕ್ರಮೇಣವಾದ ಪಲ್ಲಟಕ್ಕೆ ಕಾರಣವಾಯಿತು. ಅದು ಮತ್ತೆ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಬದುಕು ಮತ್ತು ಕೆಲಸಗಳ ಬಗೆಗಿನ ದೃಷ್ಟಿಕೋನದಲ್ಲಿ ನಿಧಾನವಾದ ಬದಲಾವಣೆಗೆ ಕಾರಣವಾಯಿತು.”

೧೯೫೭ರ ೧೨ ಪಕ್ಷಗಳ ಘೋಷಣೆಯಲ್ಲಿ ನೀಡಿದ್ದ ಎಚ್ಚರಿಕೆಯ ಕಡೆ ಗಮನ ಹರಿಸಲು ಪಕ್ಷವು ವಿಫಲವಾಯಿತು ಎಂದು ಆ ವರದಿಯು ಸ್ವವಿಮರ್ಶಾತ್ಮಕವಾಗಿ ಹೇಳಿಕೊಂಡಿತು: “ಮಾರ್ಕ್ಸ್‌ವಾದದ ಕ್ರಾಂತಿಕಾರಿ ಸತ್ವವನ್ನು ಕೊಲ್ಲಲು, ಸಮಾಜವಾದದ ಬಗ್ಗೆ ಕಾರ್ಮಿಕ ವರ್ಗ ಮತ್ತು ದುಡಿಯುವ ಜನರ ನಂಬಿಕೆಯನ್ನು ಹಾಳುಗೆಡವಲು ಪರಿಷ್ಕರಣವಾದಿಗಳು ಯತ್ನಿಸುತ್ತಾರೆ. ಶ್ರಮಿಕ ಕ್ರಾಂತಿಯ ಚಾರಿತ್ರಿಕ ಅಗತ್ಯವನ್ನು ಮತ್ತು ಬಂಡವಾಳಶಾಹಿ ವ್ಯವಸ್ಥೆಯಿಂದ ಸಮಾಜವಾದಿ ವ್ಯವಸ್ಥೆಗೆ ಬದಲಾಗುವ ಕಾಲಾವಧಿಯಲ್ಲಿ ಶ್ರಮಿಕ ವರ್ಗದ ಸರ್ವಾಧಿಕಾರವನ್ನು ಅವರು ನಿರಾಕರಿಸುತ್ತಾರೆ. ಮಾರ್ಕ್ಸ್‌ವಾದಿ-ಲೆನಿನ್‌ವಾದಿ ಪಕ್ಷದ ಪ್ರಧಾನ ಪಾತ್ರವನ್ನು ಅವರು ನಿರಾಕರಿಸುತ್ತಾರೆ. ಶ್ರಮಿಕರ  ಅಂತರರಾಷ್ಟ್ರೀಯತೆಯ ಸಿದ್ಧಾಂತವನ್ನು ತಿರಸ್ಕರಿಸುತ್ತಾರೆ ಮತ್ತು ಪಕ್ಷ ಸಂಘಟನೆಯ ಲೆನಿನ್‌ವಾದಿ ಸಿದ್ಧಾಂತವನ್ನು ಮತ್ತು ಎಲ್ಲಕ್ಕೂ ಮಿಗಿಲಾಗಿ ಪ್ರಜಾಸತ್ತಾತ್ಮಕ ಕೇಂದ್ರವಾದವನ್ನು ತಿರಸ್ಕರಿಸಲು ಕರೆ ನೀಡುತ್ತಾರೆ. ಕಮ್ಯುನಿಸ್ಟ್ ಪಕ್ಷವನ್ನು ಒಂದು ಸಮರಶೀಲ ಕ್ರಾಂತಿಕಾರಿ ಸಂಘಟನೆಯಿಂದ ಒಂದು ರೀತಿಯ ಚರ್ಚಾಸ್ಪರ್ಧೆಯ ಸಂಘ (ಡಿಬೇಟಿಂಗ್ ಸೊಸೈಟಿ)ವನ್ನಾಗಿ ಪರಿವರ್ತಿಸುವ ಪರವಾಗಿದ್ದಾರೆ.” ಪಕ್ಷದ ಸಂಘಟನೆಯ ವಿಷಯದಲ್ಲಿ ಪರಿಷ್ಕರಣವಾದವನ್ನು ಮಣಿಸಲು ‘ಸ್ಫೂರ್ತಿದಾಯಕವಾದ ಕರೆ’ಯನ್ನು ನೀಡಬೇಕೆಂದು ಅದು ಮಹಾಧಿವೇಶನವನ್ನು ಒತ್ತಾಯಿಸಿತು.

ಮೂರು-ಶ್ರೇಣಿಯ ಸಮಿತಿ ಸ್ವರೂಪವನ್ನು ಮುಂದುವರಿಸಬೇಕು ಮತ್ತು ಪಡೆದ ಮತಗಳಿಗೆ ಅನುಸಾರವಾಗಿ ಪಕ್ಷದ ಸದಸ್ಯತ್ವವನ್ನು ವಿಸ್ತರಿಸಬೇಕು ಎಂದು ಕೂಡ ಸಂಘಟನಾತ್ಮಕ ವರದಿಯು ಕರೆಕೊಟ್ಟಿತು. ಈ ಸಲಹೆಗಳು ಪರಿಷ್ಕರಣವಾದಿ ಪ್ರಭಾವವನ್ನು ಪ್ರತಿಫಲಿಸುತ್ತವೆ, ಈ ಪ್ರವೃತ್ತಿಯನ್ನೇ ಹೊರಹಾಕಲು ಕೋರಲಾಯಿತು.

ಆದಕಾರಣ ಆರನೇ ಮಹಾಧಿವೇಶನವು ಹೊಂದಾಣಿಕೆಯ ಮಹಾಧಿವೇಶನವಾಯಿತು ಮತ್ತು ಪಕ್ಷವನ್ನು ವಿಭಜಿಸಿದ ಎಲ್ಲಾ ಸೈದ್ಧಾಂತಿಕ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳು ಪರಿಹಾರ ಕಾಣದೆ ಹಾಗೆಯೇ ಉಳಿದವು. ಸಾಧಿಸಿದ ಒಂದೇ ಒಂದು ಸಮಾನ ತಿಳಿವಳಿಕೆ ಯಾವುದೆಂದರೆ, ೧೯೬೨ರಲ್ಲಿ ನಡೆಯಲಿದ್ದ ಚುನಾವಣೆಯಲ್ಲಿ ಅನುಸರಿಸಬೇಕಾಗಿದ್ದ ಸಮಗ್ರ ತಂತ್ರಗಳ ಬಗ್ಗೆಯಷ್ಟೆ.

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

 

Leave a Reply

Your email address will not be published. Required fields are marked *