ಜಮ್ಮು ಮತ್ತು ಕಾಶ್ಮೀರದಲ್ಲಿ ಸವಾಲುಗಳನ್ನು ಎದುರಿಸಲು ಜನತಾ ಮೈತ್ರಿಕೂಟದ ಉದಯ

KaratA copy
          ಪ್ರಕಾಶ ಕಾರಟ್

ಜಮ್ಮು ಮತ್ತು ಕಾಶ್ಮೀರದಲ್ಲಿ ‘ಗುಪ್ಕರ್ ಘೋಷಣೆಗೆ ಜನತಾ ಮೈತ್ರಿ’(ಪಿಎಜಿಡಿ)ಯ ಉದಯ ಜನವಾದಿ ರಾಜಕೀಯ ಮತ್ತು ಜಮ್ಮು-ಕಾಶ್ಮೀರದ ಜನತೆಯ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಕಾಯ್ದುಕೊಳ್ಳುವ ಹೋರಾಟಕ್ಕೆ ಶುಭಸೂಚನೆ.

ಮೊದಲ ಗುಪ್ಕರ್ ಘೋಷಣೆ ಬಂದದ್ದು ಆಗಸ್ಟ್ 4, 2019ರಂದು; ಅಂದು ಆರು ಪಕ್ಷಗಳು ಶ್ರೀನಗರದ ಗುಪ್ಕರ್ ರಸ್ತೆಯಲ್ಲಿರುವ ಫಾರುಕ್ ಅಬ್ದುಲ್ಲ ಅವರ ನಿವಾಸದಲ್ಲಿ ಸಭೆ ಸೇರಿ ಇದನ್ನು ಪ್ರಕಟಿಸಿದವು. ಅದರಿಂದಲೇ ಈ ಹೆಸರು ಬಂದಿರುವುದು. ಆ ಹೇಳಿಕೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು, ಕಲಮು 370 ಮತ್ತು ಕಲಮು 35ಎ ಕಾಪಾಡಿಕೊಳ್ಳುವ ಬಗ್ಗೆ ಮಾತಾಡಿತ್ತು. ಮರುದಿನವೇ, ಆಗಸ್ಟ್ 5ರಂದು ಮೋದಿ ಸರಕಾರ ಸಂಸತ್ತಿನಲ್ಲಿ ಕಲಮು 370 ಮತ್ತು 35ಎ ಅನ್ನು ರದ್ದುಗೊಳಿಸಲು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ ಹಾಕಲು ಮುಂದಾಯಿತು.

ಜಮ್ಮು ಮತ್ತು ಕಾಶ್ಮೀರದ ಮೇಲೊಂದು ಭಂಡ ಪ್ರಹಾರದೊಂದಿಗೆ, ಬಿಜೆಪಿ ಮತ್ತು ಅದರ ಬಾಲಬಡುಕರನ್ನು ಬಿಟ್ಟು ಎಲ್ಲ ರಾಜಕೀಯ ಮುಖಂಡರುಗಳ ಮತ್ತು ಕಾರ್ಯಕರ್ತರ ವ್ಯಾಪಕ ಬಂಧನಗಳು ನಡೆದವು. ನಂತರ ಬಂದ ಲಾಕ್‌ಡೌನ್ ಒಂದಿಡೀ ಜನತೆಯ ಮೇಲೆ, ಅವರ ಮೂಲ ಹಕ್ಕುಗಳ ಮೇಲೆ ಒಂದು ಅತ್ಯಂತ ಕ್ರೂರ  ನಿರ್ಬಂಧವಾಗಿತ್ತು.

2020ರ ಆಗಸ್ಟ್ 22ರಂದು ಹೆಚ್ಚಿನ ರಾಜಕೀಯ ಪಕ್ಷಗಳ ಮುಖಂಡರ(ಮಹಬೂಬ ಮುಫ್ತಿಯವರನ್ನು ಬಿಟ್ಟು) ಬಿಡುಗಡೆಯ ನಂತರ ಗುಪ್ಕರ್ ಗುಂಪಿನ ಎರಡನೇ ಸಭೆ ನಡೆಯಿತು. ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್, ಅವಾಮಿ ನ್ಯಾಶನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮುಖಂಡರು ಹಿಂದಿನ ಗುಪ್ಕರ್ ಹೇಳಿಕೆಗೆ ತಾವು ಈಗಲೂ ಬದ್ಧರಾಗಿದ್ದೇವೆ ಎಂದು ಪ್ರಕಟಿಸಿದರು. “ಸಂವಿಧಾನದ ಅಡಿಯಲ್ಲಿ ಖಾತ್ರಿಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮತ್ತೆ ಸ್ಥಾಪಿಸಲು ಮತ್ತು ಸಮಯ-ಸಮಯಕ್ಕೆ ನೀಡಿದ ವಚನಗಳಿಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ” ಎಂದು ಅವರು ಹೇಳಿದರು. “ರಾಜ್ಯದ ಯಾವುದೇ ರೀತಿಯ ವಿಭಜನೆ ನಮಗೆ ಒಪ್ಪಿಗೆಯಿಲ್ಲ” ಎಂದು ಅವರು ಘೋಷಿಸಿದರು.

ಗುಪ್ಕರ್ ಘೋಷಣೆ-2 ವಿಶೇಷ ಸ್ಥಾನಮಾನ, ರಾಜ್ಯದ ದರ್ಜೆ ಮತ್ತು ಜನತೆಯ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಬದ್ಧರಾದ ಶಕ್ತಿಗಳು ಮತ್ತೆ ಒಂದುಗೂಡುವತ್ತ ಮೊದಲ ಹೆಜ್ಜೆಯಾಗಿತ್ತು.

ಪಿಡಿಪಿ ಅಧ್ಯಕ್ಷರಾದ ಮೆಹಬೂಬ ಮುಫ್ತಿಯವರ ಬಿಡುಗಡೆಯ ನಂತರ ಅಕ್ಟೋಬರ್ 15ರಂದು ಮತ್ತೊಂದು ಸಭೆ ನಡೆಯಿತು. ಅಲ್ಲಿ ‘ಗುಪ್ಕರ್ ಘೋಷಣೆಗೆ ಜನತಾ ಮೈತ್ರಿ’ಯನ್ನು ರಚಿಸಲು ನಿರ್ಧರಿಸಲಾಯಿತು. ನ್ಯಾಶನಲ್ ಕಾನ್ಫರೆನ್ಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್, ಅವಾಮಿ ನ್ಯಾಶನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಈ ಆರು ಪಕ್ಷಗಳ ಮೈತ್ರಿ ಇದು. ಸಿಪಿಐ ಕೂಡ ಮೈತ್ರಿಕೂಟವನ್ನು ಸೇರಿತು, ಇತರ ಕೆಲವು ಪಕ್ಷಗಳು ತಮ್ಮ ಬೆಂಬಲ ಪ್ರಕಟಿಸಿದರು. ಏಳು ಪಕ್ಷಗಳ ಗುಂಪು ಅಕ್ಟೋಬರ್ 24ರಂದು ಮತ್ತೆ ಸಭೆ ಸೇರಿ ಮೈತ್ರಿಕೂಟದ ಪದಾಧಿಕಾರಿಗಳನ್ನು ಪ್ರಕಟಿಸಿದೆ.

ಜಮ್ಮು ಮತ್ತು ಕಾಶ್ಮೀರದ ಜನತೆಯ ಅಸ್ಮಿತೆ ಮತ್ತು ಹಕ್ಕುಗಳ ಮೇಲೆ ನಡೆಯುತ್ತಿರುವ ಸತತ ದಾಳಿಗಳನ್ನು ಎದುರಿಸಲು ಇಲ್ಲಿನ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳ ಐಕ್ಯತೆ ಅಗತ್ಯವಾಗಿದೆ. ಇಂತಹ ಸಮಯದಲ್ಲಿ ‘ಗುಪ್ಕರ್ ಘೋಷಣೆಗೆ ಜನತಾ ಮೈತ್ರಿ’ ಮೂಡಿ ಬಂದಿದೆ. ಈ ಜನತಾ ಮೈತ್ರಿಕೂಟದ ಪ್ರಯತ್ನಗಳನ್ನು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮತ್ತು ಒಕ್ಕೂಟ ತತ್ವವನ್ನು ರಕ್ಷಿಸುವ ಒಟ್ಟಾರೆ ಹೋರಾಟದ ಭಾಗವಾಗಿ ಕಾಣಬೇಕು.

ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಆಗಸ್ಟ್ 22ರ ಸಭೆಯಲ್ಲಿ ಭಾಗವಹಿಸಿದ್ದರು, ನಂತರದ ಎರಡು ಸಭೆಗಳಲ್ಲಿ ಭಾಗವಹಿಸಲಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡತ್ವ ಕಲಮು 370ನ್ನು ರದ್ದು ಮಾಡಿದ ರೀತಿಯ ಬಗ್ಗೆಯಷ್ಟೇ ತನ್ನ ವಿರೋಧ ಎಂಬ ನಿಲುವು ತಳೆದು, ಅದನ್ನು ಮತ್ತೆ ಸ್ಥಾಪಿಸಬೇಕೆಂದು ತಾನೇನೂ ಕೇಳುತ್ತಿಲ್ಲ ಎಂದು ಪರೋಕ್ಷವಾಗಿ ಸೂಚಿಸಿದೆ. ಇದೇ ನಿಲುವನ್ನು, ಇತ್ತೀಚೆಗೆ ಬಿಹಾರ ಚುನಾವಣಾ ಪ್ರಚಾರದ ವೇಳೆಯಲ್ಲಿ ಮೋದಿ ಕಲಮು 370ನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿರುವವರನ್ನು ಟೀಕಿಸಿದಾಗ, ಕಾಂಗ್ರೆಸ್ ವಕ್ತಾರರು ಪುನರುಚ್ಚರಿಸಿರುವುದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸಿನ ಚಂಚಲ ನಿಲುವಿಗೆ ಕಾರಣವಾಗಿರಬಹುದು.

ಜಮ್ಮು ಮತ್ತು ಕಾಶ್ಮೀರವು ಭಾರತೀಯ ಒಕ್ಕೂಟದೊಂದಿಗೆ ಸೇರುವ ಬಗ್ಗೆ ಶೇಖ್ ಅಬ್ದುಲ್ಲ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದವರು ಜವಹರಲಾಲ್ ನೆಹರೂ ಮತ್ತು ಸರ್ದಾರ್ ಪಟೇಲ್, ಇದರ ಫಲಿತಾಂಶವೇ ಸಂವಿಧಾನದ ಕಲಮು 370ರ ರೂಪೀಕರಣ  ಎಂಬುದನ್ನು ಕಾಂಗ್ರೆಸ್ ಮರೆಯಬಾರದು. ನೆಹರೂರವರು ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ತಾನಮಾನದ ಆಧಾರದಲ್ಲಿ ಭಾರತೀಯ ಒಕ್ಕೂಟದಲ್ಲಿ ಸುಲಲಿತವಾಗಿ ಸೇರಿಕೊಂಡದ್ದು ಭಾರತೀಯ ಪ್ರಭುತ್ವದ ಜಾತ್ಯತೀತ ಸ್ವರೂಪವನ್ನು ಸಾಬೀತು ಮಾಡಿದೆ ಎಂದುಕಂಡರು. ಕಾಂಗ್ರೆಸ್ ಪಕ್ಷ ಯಾವುದೇ ರೀತಿಯಲ್ಲಿ ಈ ಜಾತ್ಯತೀತ ಪರಂಪೆಯನ್ನು ಬಿಟ್ಟುಕೊಡಬಾರದು.

 ಎರಡು ಪ್ರಧಾನ ಪ್ರತಿಸ್ಪರ್ಧಿ ಪಕ್ಷಗಳನ್ನು -ನ್ಯಾಶನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಯನ್ನು – ಒಟ್ಟಿಗೆ ತಂದ ಈ ಹೊಸ ರಾಜಕೀಯ ಮೈತ್ರಿಕೂಟ ಸರಿಯಾದ ಸಮಯದಲ್ಲೇ ಬಂದಿದೆ. ಏಕೆಂದರೆ ಜನತೆಯ ಅಸ್ಮಿತೆ ಮತ್ತು ಹಕ್ಕುಗಳ ಮೇಲೆ ನಡೆಯುತ್ತಿರುವ ಸತತ ದಾಳಿಗಳನ್ನು ಎದುರಿಸಲು ಜಮ್ಮು ಮತ್ತು ಕಾಶ್ಮೀರದ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳ ಐಕ್ಯತೆ ಅಗತ್ಯವಾಗಿದೆ.

ಕೇಂದ್ರ ಸರಕಾರ ಈಗಷ್ಟೇ ಈ ಕೇಂದ್ರಾಡಳಿತ ಪ್ರದೇಶದ ಭೂಮಿ ಕಾನೂನುಗಳಲ್ಲಿ ಒಂದು ಬದಲಾವಣೆಯನ್ನು ಪ್ರಕಟಿಸಿದೆ. ಈ ಮೂಲಕ ಹೊರಗಿನ ಜನಗಳು ಇಲ್ಲಿ ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ಮೊದಲು ರಾಜ್ಯದ ಶಾಶ್ವತ ನಿವಾಸಿಗಳು ಮಾತ್ರವೇ ಹೀಗೆ ಮಾಡಲು ಸಾಧ್ಯವಿತ್ತು. ಈ ಕ್ರಮ, ಈ ಹಿಂದೆ ತಂದ ಕಾಯಂ ನಿವಾಸದ ಕಾಯ್ದೆಗಿಂತಲೂ ಮುಂದೆ ಹೋಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಭೂಮಿ ಮತ್ತು ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳಲು ಮತ್ತು ಈ ಪ್ರದೇಶದ ಜನಸಂಖ್ಯಾ ಸಂಯೋಜನೆಯನ್ನು ಬದಲಿಸುವ ಪ್ರಕ್ರಿಯೆಗೆ ಒಂದು ಬಹಿರಂಗ ಆಹ್ವಾನವಾಗಿದೆ.

ಜನತಾ ಮೈತ್ರಿಕೂಟದ ಮುಂದೆ ಸಂವಿಧಾನದ ಅಡಿಯಲ್ಲಿ ಸ್ವಾಯತ್ತತೆಯನ್ನು ಮತ್ತೆ ನೆಲೆಗೊಳಿಸುವ ಹೋರಾಟದಲ್ಲಿ ಬಹಳ ಕಠಿಣ ಕಾರ್ಯಭಾರ ಇದೆ. ಹಾಗೆ ಮಾಡಲು, ಅದು ಮೊದಲಿಗೆ ಪ್ರಜಾಪ್ರಭುತ್ವ ರಾಜಕೀಯವನ್ನು ಮತ್ತು ಭಾರತದ ಎಲ್ಲ ನಾಗರಿಕರಿಗೂ ಸಿಗಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾಗಿದೆ. ಜನತಾ ಮೈತ್ರಿಕೂಟ, ತಾನು ಕಾಶ್ಮೀರ ಕಣಿವೆ-ಕೇಂದ್ರಿತ ಕೂಟ ಎಂಬ ಭಾವನೆಯನ್ನು  ಹೋಗಲಾಡಿಸಬೇಕು, ಅದಕ್ಕಾಗಿ ಜಮ್ಮು ಮತ್ತು ಲಡಾಖಿನ ಪ್ರಜಾಪ್ರಭುತ್ವ ಶಕ್ತಿಗಳು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ರಾಜಕೀಯವಾಗಿ ತಲುಪಲು ಪ್ರಯತ್ನಿಸಬೇಕು ಮತ್ತು ಬಿಜೆಪಿ-ಆರೆಸ್ಸೆಸ್ ಕೂಟದ ವಿಭಜನಕಾರಿ ರಾಜಕೀಯವನ್ನು ಎದುರಿಸಬಲ್ಲ ಒಂದು ಸರ್ವಸಾಮಾನ್ಯ ವೇದಿಕೆಯನ್ನು ಕಟ್ಟಬೇಕು.

ಈ ಜನತಾ ಮೈತ್ರಿಕೂಟ ದೇಶದ ಎಲ್ಲ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಶಕ್ತಿಗಳ ಬೆಂಬಲವನ್ನು ಪಡೆಯಬೇಕು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯದ ದರ್ಜೆಯ ಮೇಲೆ ಪ್ರಹಾರ ಒಕ್ಕೂಟ ತತ್ವದ ಮೇಲೆ ಈಗ ನಡೆಯುತ್ತಿರುವ ಇನ್ನೂ ವ್ಯಾಪಕವಾದ ಧಾಳಿಗಳ ಮುನ್ಸೂಚನೆಯಾಗಿತ್ತು. ಬಿಜೆಪಿ ಸರಕಾರದ ಕೇಂದ್ರೀಕರಣದ ಧಾವಂತ ಎಲ್ಲ ಒಕ್ಕೂಟ ವಿಧಿ-ವಿಧಾನಗಳನ್ನು ಮತ್ತು ರಾಜ್ಯಗಳ ಹಕ್ಕುಗಳನ್ನು ತುಳಿದು ಹಾಕುತ್ತಿದೆ. ಇತ್ತೀಚಿನ ಕೃಷಿ ಮಸೂದೆಗಳಲ್ಲಿ ಕಂಡಂತೆ, ಸಂವಿಧಾನದ ರಾಜ್ಯ ಪಟ್ಟಿಯಲ್ಲಿ ಇರುವ ವಿಷಯಗಳಲ್ಲಿ ಕೇಂದ್ರ ಸರಕಾರದ ಅತಿಕ್ರಮಣ, ಜಿಎಸ್‌ಟಿ ಪರಿಹಾರದ ಬಾಕಿಗಳನ್ನು ತೆರುವ ಕೇಂದ್ರ ಸರಕಾರದ ಬದ್ಧತೆಯನ್ನು ಈಡೇರಿಸಲು ನಿರಾಕರಣೆ ಮತ್ತು ರಾಜ್ಯ ಆಡಳಿತದ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಲು ರಾಜ್ಯಪಾಲರುಗಳ ಬಳಕೆ ಒಕ್ಕೂಟ ತತ್ವ-ವಿರೋಧಿ ಧಾವಂತದ ಲಕ್ಷಣಗಳು. ಜನತಾ ಮೈತ್ರಿಕೂಟದ ಪ್ರಯತ್ನಗಳನ್ನು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮತ್ತು ಒಕ್ಕೂಟತತ್ವವನ್ನು ರಕ್ಷಿಸುವ ಒಟ್ಟಾರೆ ಹೋರಾಟದ ಭಾಗವಾಗಿ ಕಾಣಬೇಕು.

ಬಿಜೆಪಿ ತನ್ನ ಎಂದಿನ “ರಾಷ್ಟ್ರ-ವಿರೋಧಿ’, ‘ಪಾಕಿಸ್ತಾನದ ಆದೇಶಪಾಲನೆ’ ಇತ್ಯಾದಿ ಚರ್ವಿತಚರ್ವಣದೊಂದಿಗೆ ಜನತಾ ಮೈತ್ರಿಕೂಟದ ಮೇಲೆ ದಾಳಿ ಮಾಡಿದೆ. ಆದರೆ ಮೋದಿ ಸರಕಾರಕ್ಕೆ ನೆಲದ ವಾಸ್ತವತೆಗಳ ಅರಿವು ಇರಬೇಕು. ಒಂದು ವರ್ಷಕ್ಕೂ ಹೆಚ್ಚಿನ ಪಾಶವೀ ದಮನದಿಂದಾಗಿ  ಜನಗಳಲ್ಲಿನ ಪರಕೀಯ ಭಾವ, ವಿಶೇಷವಾಗಿ ಕಣಿವೆ ಪ್ರದೇಶದಲ್ಲಿ ಹಿಂದೆಂದೂ ಕಾಣದ ಮಟ್ಟವನ್ನು ತಲುಪಿದೆ. ಕೇಂದ್ರ ಸರಕಾರ  ಇಡೀ ರಾಜ್ಯದಲ್ಲಿನ ಎಲ್ಲ ಸಂಬಂಧಪಟ್ಟವರೊಂದಿಗೆ ಒಂದು ಸಂವಾದವನ್ನು ಆರಂಭಿಸಲು ಸಿದ್ಧವಾಗದಿದ್ದರೆ, ಒಂದು ಪ್ರಜಾಸತ್ತಾತ್ಮಕವಾದ ಮುಂದಿನ ದಾರಿ ಸಾಧ್ಯವಿಲ್ಲ. ಮೋದಿ ಸರಕಾರ ಮತ್ತು ಬಿಜೆಪಿ ಎಷ್ಟೇ ಕಟ್ಟಾ ಭದ್ರತಾ ಮತ್ತು ಕಾನೂನು-ವ್ಯವಸ್ಥೆಯ ನಿಲುವನ್ನು ತಳೆದರೂ, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ರಾಜಕೀಯವಾಗಿಯೇ ನಿರ್ವಹಿಸಬೇಕೇ ಹೊರತು ಕಾನೂನು-ವ್ಯವಸ್ಥೆ ಅಥವ ಭದ್ರತೆಯ ಸಮಸ್ಯೆಯಾಗಿ ಅಲ್ಲ ಎಂಬ ಮೂಲ ಸಂಗತಿಯನ್ನು ಅವು ಉಪೇಕ್ಷಿಸಲು ಸಾಧ್ಯವಿಲ್ಲ. ವಾಜಪೇಯಿ ಸರಕಾರದ ಕಾಲದಲ್ಲಿ ಸಂವಾದಕ್ಕೆ ರಾಜಕೀಯ ಪ್ರಯತ್ನಗಳನ್ನು ಮಾಡಲಾಯಿತು, ಅದರಲ್ಲಿ ಲಾಹೋರಿಗೆ ಪ್ರಧಾನಿಗಳ ಬಸ್ ಪ್ರವಾಸವೂ ಸೇರಿತ್ತು. ಆಗಿನ ಗೃಹಮಂತ್ರಿ ಎಲ್.ಕೆ.ಅಡ್ವಾಣಿಯವರ ಅಡಿಯಲ್ಲಿ, ಹಿಜ್ಬುಲ್ ಮುಜಾಹಿದೀನ್ ಪ್ರತಿನಿಧಿಗಳೂ ಸೇರಿದಂತೆ ಉಗ್ರಗಾಮಿ ಗುಂಪುಗಳೊಂದಿಗೂ ಮಾತುಕತೆಗಳನ್ನು ನಡೆಸಲಾಯಿತು.

ಸದಾ ಭಾರತದ ಬೆಂಬಲಕ್ಕೆ ನಿಂತಿರುವ ಕಾಶ್ಮೀರದಲ್ಲಿನ ಮುಖ್ಯಧಾರೆಯ ರಾಜಕೀಯ ಶಕ್ತಿಗಳೊಂದಿಗೆ ಮುಖಾಮುಖಿಯಾಗುವ ಆಶಯ ಮೋದಿ ಸರಕಾರಕ್ಕೆ ಇಲ್ಲವಾದರೆ, ಈ ಬಗೆಹರಿಸಲಾಗದಂತೆ ಕಾಣುವ ಸಮಸ್ಯೆಯ ಇತ್ಯರ್ಥದಲ್ಲಿ ಪ್ರಗತಿ ಸಾಧ್ಯವಿಲ್ಲ. ಇದು ದೇಶದ ಒಕ್ಕೂಟ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಜಕೀಯ ವ್ಯವಸ್ಥೆಯ ಮೇಲೆ ಒಂದು ಜೀವನ್ಮರಣ ಪರಿಣಾಮವನ್ನು ಬೀರುತ್ತಲೇ ಇರುತ್ತದೆ.

Leave a Reply

Your email address will not be published. Required fields are marked *