ಕೇಂದ್ರ ಬಜೆಟ್ 2021-22: ಜನತೆಗೆ ಬಹುದೊಡ್ಡ ವಿಶ್ವಾಸದ್ರೋಹ

ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ದುಪ್ಪಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನತೆಗೆ ಕೇಂದ್ರ ಬಜೆಟ್ 2021-22 ಒಂದು ವಿಶ್ವಾಸದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕಟುವಾಗಿ ಟೀಕಿಸಿದೆ.

ಕೋವಿಡ್ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಇನ್ನೂ ಮುಗಿದಿಲ್ಲ ಮತ್ತು ಲಸಿಕೆಗಳ  ವೆಚ್ಚ ಅಗತ್ಯವಿರುವ ಹೆಚ್ಚುವರಿ ಖರ್ಚುಗಳಲ್ಲಿ ಒಂದು ಮಾತ್ರ. ಉದ್ಯೋಗ, ಜೀವನೋಪಾಯ ಮತ್ತು ಆದಾಯಗಳ ನಾಶ ಮತ್ತು ಬೇಡಿಕೆಯ ಕುಸಿತ ಆರ್ಥಿಕ ಬಿಕ್ಕಟ್ಟಿನ ಪ್ರಮುಖ ಅಂಶಗಳು. ಇದನ್ನು ನಿವಾರಿಸಲು ಇನ್ನೂ ದೊಡ್ಡ ಹೆಚ್ಚುವರಿ ವೆಚ್ಚಗಳ ಅಗತ್ಯವಿದೆ. ಇಂತಹ ಹಿನ್ನೆಲೆಯಲ್ಲಿ ಹಿಂದಿನ ವರ್ಷದ ಅತ್ಯಂತ ಅಸಮರ್ಪಕ ಮಟ್ಟದ ಖರ್ಚುಗಳನ್ನು ಕೂಡ ಕಡಿತಗೊಳಿಸುವ ಮತ್ತು ಕಾರ್ಪೊರೇಟ್ ಗಳಿಗೆ ರಿಯಾಯಿತಿಗಳನ್ನು ನೀಡುವ ಕೇಂದ್ರ ಬಜೆಟ್ ಬಂದಿದೆ. ಇದು ಒಂದು ಅನಾಹುತಕ್ಕೆ ಆಹ್ವಾನ ನೀಡಿದಂತೆಯೇ,  ಜನಗಳಿಗೆ ಹೆಚ್ಚಿನ ಸಂಕಷ್ಟಗಳಿಗೆ ಮತ್ತು ಈಗಾಗಲೇ ಭಾರತದ  ಲಕ್ಷಣವಾಗಿ ಬಿಟ್ಟಿರುವ ಹೊಲಸು ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ,  ಕಾರ್ಪೊರೇಟ್ ಪರವಾದ ಈ ಬಜೆಟ್ ವಿರುದ್ಧ ಪ್ರತಿಭಟಿಸಬೇಕು ಮತ್ತು ತಕ್ಷಣವೇ ನಗದು ವರ್ಗಾವಣೆ, ಉಚಿತ ಆಹಾರ ಮತ್ತು ಸಾರ್ವತ್ರಿಕ ಉದ್ಯೋಗ ಖಾತರಿ ಕಾರ್ಯಕ್ರಮಗಳಿಗಾಗಿ ಹೋರಾಟಗಳನ್ನು ಚುರುಕುಗೊಳಿಸಬೇಕು ಎಂದು ಜನತೆಗೆ ಕರೆ ನೀಡಿದೆ.

ಈ ಬಜೆಟ್  ದುಡಿಯುವ ಜನಗಳಿಗೆ ಹೆಚ್ಚೆಚ್ಚು ಯಾತನೆ ಮತ್ತು ಸಂಕಟಗಳನ್ನು ಹೇರಿ ಬೆರಳೆಣಿಕೆಯಷ್ಟು ದೊಡ್ಡ ಉದ್ಯಮ ಗುಂಪುಗಳ ಹಿತಾಸಕ್ತಿಗಳನ್ನು ಉತ್ತೇಜಿಸುವ ಅಚಲವಾದ ಬದ್ಧತೆಯನ್ನು ಮೋದಿ ಸರ್ಕಾರ ಹೊಂದಿದೆ ಎಂಬುದಕ್ಕೆ  ಒಂದು ಬಹು ಒಳ್ಳೇ ಉದಾಹರಣೆಯಾಗಿದೆ. ಇದರಲ್ಲಿ ಬಹಳಷ್ಟು ಅಬ್ಬರದ ಮಾತುಗಳಿದ್ದರೂ, ವಾಸ್ತವವಾಗಿ  ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಸರ್ಕಾರವು ನಿರಾಕರಿಸಿರುವುದು ಇದನ್ನೇ ಬಿಂಬಿಸುತ್ತದೆ.. 2021-22ಕ್ಕೆ ಬಜೆಟ್ ಮಾಡಲಾದ ಕೇಂದ್ರ ಸರ್ಕಾರದ ಒಟ್ಟು ಖರ್ಚು ರೂ.34.8 ಲಕ್ಷ ಕೋಟಿ ಎಂಬ ಸಂಖ್ಯೆ 2020-21ರ ಸಂಖ್ಯೆಯನ್ನೇ ಹೋಲುತ್ತದೆ. ಅಂದರೆ ರೂಪಾಯಿಯ ನಿಜಮೌಲ್ಯವನ್ನು ಪರಿಗಣಿಸಿದರೆ  ವಾಸ್ತವವಾಗಿ ವೆಚ್ಚವನ್ನು ಕಡಿತಗೊಳಿಸಲಾಗಿದೆ. ಇದು ಸರಕಾರ ಜನರತ್ತ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೈಬಿಟ್ಟು, ರಾಷ್ಟ್ರದ ಉತ್ಪಾದಕ ಸ್ವತ್ತುಗಳ ಮೇಲೆ ಹೆಚ್ಚಿನ ನಿಯಂತ್ರಣವೂ ಒಳಗೊಂಡಂತೆ ಸವಲತ್ತು ಪಡೆದಿರುವ ಕೆಲವೇ ಮಂದಿಯ ಅದೃಷ್ಟವನ್ನು ಹೆಚ್ಚಿಸುತ್ತಿರುವುದನ್ನು ತೋರಿಸುತ್ತದೆ.

ಈಗ ಕೊನೆಗೊಳ್ಳುತ್ತಿರುವ (2020-2021) ವರ್ಷದಲ್ಲಿ ಹಣಕಾಸಿನ ಕೊರತೆ ಜಿಡಿಪಿ ಯ ಶೇಕಡಾ 9.5 ರಷ್ಟಿದೆ,  ಇದು ಸರಕಾರ ಜನಗಳಿಗಾಗಿ ಹೆಚ್ಚು ಖರ್ಚು ಮಾಡಿದ್ದರಿಂದಾಗಿ ಎಂದು ಹೇಳಿಕೊಳ್ಳುತ್ತದೆ. ಆದರೆ ಪ್ರಥಮತಃ ಇದು  ವೆಚ್ಚದ ಹೆಚ್ಚಳದಿಂದಾಗಿ ಅಲ್ಲ, ಆದಾಯವು ಕುಸಿಯುತ್ತಿರುವುದರಿಂದಾಗಿ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತೀವ್ರವಾಗಿ ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಮೇಲೆ ಭಾರೀ ಹೆಚ್ಚುವರಿ ತೆರಿಗೆ ಹೊರೆಯನ್ನು ಸರ್ಕಾರ ಸಿನಿಕತನದಿಂದ  ಹೇರಿದ್ದರೂ ಕೂಡ, ಈ ಕುಸಿತ ಸಂಭವಿಸಿದೆ. ಈ ಬಜೆಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು ಸಂಪನ್ಮೂಲಗಳ ವರ್ಗಾವಣೆ ಕಳೆದ ವರ್ಷದ ಪರಿಷ್ಕೃತ ಅಂದಾಜಿಗಿಂತ ನಲವತ್ತು ಸಾವಿರ ಕೋಟಿ ರೂ.ಗಿಂತಲೂ ಕಡಿಮೆಯಾಗಿದೆ. 2020-21ರಲ್ಲಿ ಕಾರ್ಪೊರೇಟ್ ಮತ್ತು ಆದಾಯ ತೆರಿಗೆಗಳಲ್ಲಿ ದೊಡ್ಡ ಕೊರತೆ ಉಂಟಾಗಿದೆ ಮಾತ್ರವಲ್ಲ, ಸರಕಾರವು ಕಾರ್ಪೊರೇಟ್ ವಲಯ ಮತ್ತು ಶ್ರೀಮಂತರು ಕೊವಿಡ್‍-ಪೂರ್ವದಲ್ಲಿ ಪಾವತಿ ಮಾಡಿದಷ್ಟೂ ತೆರಿಗೆಗಳನ್ನು ಕೂಡ 2021-22ರಲ್ಲಿ  ತೆರಲಾರರು ಎಂದು ನಿರೀಕ್ಷಿಸುವ ಮೂಲಕ ಅವರು “ಸಂಕಟ”ದಲ್ಲಿದ್ದಾರೆ ಎಂದು ಗುರುತಿಸಲು ಉತ್ಸುಕವಾಗಿದೆ! ಏಕೆಂದರೆ 2020-21ರಲ್ಲಿ ಕಾರ್ಪೊರೇಟ್ ತೆರಿಗೆ ಮತ್ತು ಆದಾಯ ತೆರಿಗೆಗಳ  ಬಜೆಟ್ ಅಂದಾಜು ಕ್ರಮವಾಗಿ 6.81 ಮತ್ತು 6.38 ಲಕ್ಷ ಕೋಟಿ ರೂ.ಗಳಾಗಿದ್ದರೆ, 2021-22ರ ಬಜೆಟಿನಲ್ಲಿ ಇದು ಅನುಕ್ರಮವಾಗಿ 5.47 ಮತ್ತು 5.61 ಲಕ್ಷ ಕೋಟಿ ರೂ.ಗೆ ಇಳಿದಿದೆ ಎಂಬ ಸಂಗತಿಯತ್ತ  ಪೊಲಿಟ್‍ ಬ್ಯುರೊ ಗಮನ ಸೆಳೆದಿದೆ.

2020-21ರಲ್ಲಿ 34.5 ಲಕ್ಷ ಕೋಟಿ ರೂ.ಗಳಷ್ಟು ಸರ್ಕಾರ ವೆಚ್ಚ ಮಾಡಿದೆ ಎಂಬ ಪರಿಷ್ಕೃತ ಅಂದಾಜುಗಳು ಸಹ ನಿಜವಾದ ಖರ್ಚಿನಲ್ಲಿ ಹಣದುಬ್ಬರದಿಂದಾಗಿ ಆಗಿರುವ ಹೆಚ್ಚಳವನ್ನು  ಪ್ರತಿನಿಧಿಸುತ್ತವೆ,  2020 ರ ಡಿಸೆಂಬರ್ ಅಂತ್ಯದವರೆಗೆ ಇದರಲ್ಲಿ ಖರ್ಚಾಗಿರುವುದು ಕೇವಲ 22.8 ಲಕ್ಷ ಕೋಟಿ ರೂ.ಗಳು ಮಾತ್ರ ಎಂಬ ಅಂಕಿಯತ್ತವೂ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಗಮನ ಸೆಳೆದಿದೆ. ಕೇಂದ್ರ ಸರ್ಕಾರದ ವೆಚ್ಚಗಳ ಪರಿಷ್ಕೃತ ಅಂದಾಜುಗಳು ಮತ್ತು  ಬಜೆಟ್ ಅಂದಾಜುಗಳಲ್ಲಿ ಇರುವ  4 ಲಕ್ಷ ಕೋಟಿ ರೂ. ಗಳ ವ್ಯತ್ಯಾಸವು ಮುಖ್ಯವಾಗಿ ಆಹಾರ ಸಬ್ಸಿಡಿಗಾಗಿ ಭಾರತ ಆಹಾರ ನಿಗಮ(ಎಫ್.ಸಿ.ಐ.)ಕ್ಕೆ ರಾಷ್ಟ್ರೀಯ ಸಣ್ನ ಉಳಿತಾಯಗಳ ನಿಧಿ(ಎನ್‌ಎಸ್‌ಎಸ್ಎಫ್) ಯಿಂದ  ಸಾಲವನ್ನು ಸ್ಥಗಿತಗೊಳಿಸಿ ಅದನ್ನು ಬಜೆಟ್‌ಗೆ ವರ್ಗಾಯಿಸಿದ ನಿಬಂಧನೆಯಿಂದಾಗಿ ಉಂಟಾಗಿದೆ. ಮತ್ತು 2021-22ರಲ್ಲಿ ಆಹಾರ ಸಬ್ಸಿಡಿಗಳಿಗಾಗಿ ನೀಡಿಕೆಯನ್ನು 2020-21ಕ್ಕೆ ಹೋಲಿಸಿದರೆ 41% ಕಡಿತಗೊಳಿಸಲಾಗುತ್ತದೆ ಎಂಬುದು ಕೂಡ ಗಮನಾರ್ಹ.

ಹಣಕಾಸು ಸಚಿವರ ಭಾಷಣವು ಹೊರಗೆಡಹಿರದ ಸಂಗತಿಯೆಂದರೆ, ಹಲವಾರು ಬಾಬ್ತುಗಳಲ್ಲಿ , 2020-21ರಲ್ಲಿ ಖರ್ಚು ವಾಸ್ತವವಾಗಿ ಬಜೆಟ್‍ ನಲ್ಲಿ ತೋರಿಸಿದ್ದಕ್ಕಿಂತ ಕಡಿಮೆಯಾಗಿದೆ. ಇವುಗಳಲ್ಲಿ ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ, ವೈಜ್ಞಾನಿಕ ಇಲಾಖೆಗಳು, ನಗರಾಭಿವೃದ್ಧಿ, ಪಿಂಚಣಿ ಮತ್ತು ಅಂಗವೈಕಲ್ಯ ವ್ಯವಹಾರಗಳು ಮುಂತಾದವುಗಳು ಸೇರಿವೆ. ಈ ಕಡಿತಗಳನ್ನು ಮುಂದಿನ ವರ್ಷದಲ್ಲೂ ಸಹ ಮುಂದುವರಿಸಲಾಗುತ್ತಿದೆ, 2020-21 ರಲ್ಲಿ ಹೆಚ್ಚಿದ ಖರ್ಚಿನ ಕೆಲವೇ ಬಾಬ್ತುಗಳಲ್ಲಿ ಕೂಡ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಬಾಬ್ತುಗಳಲ್ಲಿ, ವೆಚ್ಚಗಳನ್ನು ಕಡಿತ ಮಾಡುವ ಪ್ರಸ್ತಾವನೆ ಈ  ಬಜೆಟ್ ನಲ್ಲಿದೆ. ಆರೋಗ್ಯ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸಲಾಗುತ್ತಿದೆ ಎಂಬ ಹಣಕಾಸು ಸಚಿವರ ಹೇಳಿಕೆಯ ಹೊರತಾಗಿಯೂ, ಬಜೆಟ್ ದಾಖಲೆಗಳು  ತೋರಿಸುವುದು ಬೇರೆಯೇ ಆಗಿದೆ.  2021-22ರ ಆರೋಗ್ಯಕ್ಕಾಗಿ ಬಜೆಟ್ ಹಂಚಿಕೆ 74,600 ಕೋಟಿಗಳು, ಇದು ಕಳೆದ ವರ್ಷದ ಪರಿಷ್ಕೃತ ಅಂದಾಜಿಗಿಂತ 8000 ಕೋಟಿ ರೂ. ಕಡಿಮೆ. ಇಂತಹ ಕಡಿತಗಳ ಮೂಲಕವೇ ಹಣಕಾಸು ಸಚಿವರು ಒಟ್ಟು ಖರ್ಚಿನಲ್ಲಿ ಕಡಿತವನ್ನು ಸಾಧಿಸುತ್ತಿದ್ದಾರೆ. ಇದು ಜನಗಳೊಂದಿಗೆ   ಆಡುತ್ತಿರುವ ದೊಡ್ಡ ಆಟ, ದೈತ್ಯ ಮೋಸವೇ ಅಗಿದೆ ಎಂದು ಪೊಲಿಟ್‍ ಬ್ಯುರೊ ವರ್ಣಿಸಿದೆ.

ಅರ್ಥವ್ಯವಸ್ಥೆಯನ್ನು ಉತ್ತಮಪಡಿಸಲು ಈ ಸರ್ಕಾರದ ಸಿದ್ದೌಷಧವೆಂದರೆ  ಭಾರತದ ರಾಷ್ಟ್ರೀಯ ಸ್ವತ್ತುಗಳನ್ನು ಮಾರಾಟ ಮಾಡುವುದು ಮತ್ತು ಲಾಭ ಗಳಿಸುವ ಸಾರ್ವಜನಿಕ ವಲಯದ ಕಂಪನಿಗಳನ್ನು ಕೂಡ ಖಾಸಗೀಕರಣಗೊಳಿಸುವುದು. ಈ ಬಜೆಟ್‌ನಲ್ಲಿ ಪ್ರಕಟಿಸಿರುವ ಹಣವಾಗಿ ಪರಿವರ್ತನೆ ಮಾಡುವ ಪರಿಯೋಜನೆಯಲ್ಲಿ ಸಾರ್ವಜನಿಕ ವಲಯದ ಕಂಪನಿಗಳು ಪ್ರಸ್ತುತ ಹೊಂದಿರುವ ಬೆಲೆಬಾಳುವ ಭೂಮಿಯನ್ನು ಮಾರಾಟ ಮಾಡುವುದು ಸೇರಿದೆ. ಹೂಡಿಕೆ ಹಿಂಪಡಿಕೆಯ ಮೂಲಕ 1.75 ಲಕ್ಷ ಕೋಟಿ ರೂ.ಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ವಿಮೆಯಲ್ಲಿ ಎಫ್‌.ಡಿ.ಐ.ಯನ್ನು ಶೇಕಡಾ 74 ಕ್ಕೆ ಹೆಚ್ಚಿಸುವುದು ಅತ್ಯಂತ ಆಕ್ಷೇಪಾರ್ಹ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಖಾಸಗೀಕರಣದ ಈ ಧಾವಂತವು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬುಡಮೇಲು ಮಾಡುವ ಒಂದು ಕೃತ್ಯ ಮತ್ತು “ಆತ್ಮ ನಿರ್ಭರತಾ’” ಎಂಬ ಘೋಷಣೆಯ ಅಪಹಾಸ್ಯವಾಗಿದೆ ಎಂದು ಟೀಕಿಸಿದೆ.

ಕೋವಿಡ್ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಇನ್ನೂ ಮುಗಿದಿಲ್ಲ ಮತ್ತು ಲಸಿಕೆಗಳ  ವೆಚ್ಚ ಅಗತ್ಯವಿರುವ ಹೆಚ್ಚುವರಿ ಖರ್ಚುಗಳಲ್ಲಿ ಒಂದು ಮಾತ್ರ. ಉದ್ಯೋಗ, ಜೀವನೋಪಾಯ ಮತ್ತು ಆದಾಯಗಳ ನಾಶ ಮತ್ತು ಬೇಡಿಕೆಯ ಕುಸಿತ ಆರ್ಥಿಕ ಬಿಕ್ಕಟ್ಟಿನ ಪ್ರಮುಖ ಅಂಶಗಳು. ಇದನ್ನು ನಿವಾರಿಸಲು ಇನ್ನೂ ದೊಡ್ಡ ಹೆಚ್ಚುವರಿ ವೆಚ್ಚಗಳ ಅಗತ್ಯವಿದೆ. ಇಂತಹ ಹಿನ್ನೆಲೆಯಲ್ಲಿ ಹಿಂದಿನ ವರ್ಷದ ಅತ್ಯಂತ  ಅಸಮರ್ಪಕ ಮಟ್ಟದ ಖರ್ಚುಗಳನ್ನು ಕೂಡ ಕಡಿತಗೊಳಿಸುವ  ಮತ್ತು ಕಾರ್ಪೊರೇಟ್ ಗಳಿಗೆ ರಿಯಾಯಿತಿಗಳನ್ನು ನೀಡುವ ಕೇಂದ್ರ ಬಜೆಟ್  ಒಂದು ಅನಾಹುತಕ್ಕೆ  ಆಹ್ವಾನ ನೀಡಿದಂತೆಯೇ.  ಇದು ಜನಗಳಿಗೆ ಹೆಚ್ಚಿನ ಸಂಕಷ್ಟಗಳಿಗೆ ಮತ್ತು ಈಗಾಗಲೇ  ಭಾರತದ  ಲಕ್ಷಣವಾಗಿ ಬಿಟ್ಟಿರುವ ಹೊಲಸು ಅಸಮಾನತೆಗಳನ್ನು ಮತ್ತಷ್ಟು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಎಚ್ಚರಿಸಿದೆ.

ಕಾರ್ಪೊರೇಟ್ ಪರವಾದ ಈ ಬಜೆಟ್ ವಿರುದ್ಧ ಪ್ರತಿಭಟಿಸಬೇಕು ಮತ್ತು ತಕ್ಷಣವೇ ನಗದು ವರ್ಗಾವಣೆ, ಉಚಿತ ಆಹಾರ ಮತ್ತು ಸಾರ್ವತ್ರಿಕ ಉದ್ಯೋಗ ಖಾತರಿ ಕಾರ್ಯಕ್ರಮಗಳಿಗಾಗಿ ಹೋರಾಟಗಳನ್ನು ಚುರುಕುಗೊಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಜನತೆಗೆ ಕರೆ ನೀಡಿದೆ.

Leave a Reply

Your email address will not be published. Required fields are marked *