ವಿದ್ಯುತ್ ದರ ಏರಿಕೆಯನ್ನ ಮತ್ತು ಸಾರ್ವಜನಿಕ ವಿದ್ಯುತ್ ರಂಗದ ಖಾಸಗೀಕರಣವನ್ನು ತಡೆಯಲು ಒತ್ತಾಯ

ಕರ್ನಾಟಕ ರಾಜ್ಯದ ಬಿಜೆಪಿ ಸರಕಾರವು ವಿದ್ಯುತ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದ ವಿವರ ಕೆಳಗಿನಂತಿವೆ:

ಇವರಿಗೆ,
ಶ್ರೀ ಬಿ.ಎಸ್. ಯಡಿಯೂರಪ್ಪರವರು
ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ,
ವಿಧಾನಸೌಧ, ಬೆಂಗಳೂರು.

ಮಾನ್ಯರೇ ,

ವಿಷಯ: ವಿದ್ಯುತ್ ದರ ಏರಿಕೆಯನ್ನ ಮತ್ತು ಸಾರ್ವಜನಿಕ ವಿದ್ಯುತ್ ರಂಗದ
ಖಾಸಗೀಕರಣವನ್ನು ತಡೆಯಲು ಒತ್ತಾಯಿಸಿ ಮನವಿ

ರಾಜ್ಯದಾದ್ಯಂತ ವಿದ್ಯುತ್ ಬೆಲೆ ಏರಿಕೆಗೆ ಕ್ರಮವಹಿಸಲು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅನುಮತಿ ನೀಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಪ್ರಕಟಣೆ ಹೊರಡಿಸಿದೆ.

ರಾಜ್ಯದ ಜನತೆ ಒಂದೆಡೆ ಆರ್ಥಿಕ ಬಿಕ್ಕಟ್ಟು ಮತ್ತು ಇನ್ನೊಂದೆಡೆ ಕೋವಿಡ್ ಭೀತಿ ಮತ್ತು ಲಾಕ್‌ಡೌನ್‌ಗಳ ನಿರುದ್ಯೋಗದ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವಾಗ, ಕೇಂದ್ರ ಸರಕಾರ ಪೆಟ್ರೊಲಿಯಂ ಉತ್ಪನ್ನಗಳ ಬೆಲೆಗಳನ್ನು ವ್ಯಾಪಕವಾಗಿ ಏರಿಸಿ ಗಾಯದ ಮೇಲೆ ಬರೆ ಎಳೆದರೇ, ಈಗ ತಮ್ಮ ಸರಕಾರ ವಿದ್ಯುತ್ ಬೆಲೆ ಏರಿಕೆಗೆ ಕ್ರಮವಹಿಸುವ ಮೂಲಕ ನಾನೇನು ಕಡಿಮೆ ಇಲ್ಲವೆಂಬಂತೆ ಮತ್ತೊಂದು ಬರೆ ಎಳೆಯಲು ಮುಂದಾಗಿರುವ ದುರ್ನಡೆಯನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ. ಕೂಡಲೇ ವಿದ್ಯುತ್ ಬೆಲೆ ಏರಿಕೆಯ ಎಲ್ಲಾ ಕ್ರಮಗಳನ್ನು ತಡೆಯುವಂತೆ ಒತ್ತಾಯಿಸುತ್ತದೆ.

ಸರಾಸರಿ ತಲಾ ಯುನಿಟ್‌ಗೆ, ವಿವಿಧ ಪ್ರಮಾಣಗಳಲ್ಲೂ ಈಗಿನ ದರಕ್ಕೆ ತಲಾ ಹತ್ತು ಪೈಸೆಗಳಷ್ಟು ಹೆಚ್ಚಿಸಲು ಮತ್ತು ನಿಗಧಿತ ಶುಲ್ಕಕ್ಕೆ 10 ರೂ. ಗಳ ಹೆಚ್ಚಳ ಮಾಡಲಾಗಿದೆ ಮಾತ್ರವಲ್ಲಾ ಕ್ರಮೇಣ ವರ್ಷ ವರ್ಷವೂ ಅದರ ಹೆಚ್ಚಳಕ್ಕೆ ಕ್ರಮವಹಿಸಲಾಗುವುದೆಂಬ ಇಂಗಿತವನ್ನು ವ್ಯಕ್ತಪಡಿಸಿದೆ. ಇವುಗಳಲ್ಲದೇ ಈ ಹೆಚ್ಚುವರಿ ಬೆಲೆಗೆ ಗ್ರಾಹಕರು ಸೇವಾ ತೆರಿಗೆಯನ್ನು ನೀಡಬೇಕಾಗಿದೆ. ಒಟ್ಟಾರೇ ಶೇಕಡಾ 3.5 ಬೆಲೆ ಏರಿಕೆಗೆ ಕ್ರಮವಹಿಸಲಾಗಿದೆ.  ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಬೆಲೆ ಏರಿಕೆಗೆ ಕ್ರಮವಹಿಸಿರುವುದು ಆಶ್ಚರ್ಯಕರವಾಗಿದೆ.

ಈಗಿನ ಬೆಲೆ ಏರಿಕೆಯು ಏಪ್ರಿಲ್ ಒಂದರಿಂದಲೇ ಜಾರಿಗೆ ಬರುವಂತೆ ಕ್ರಮವಹಿಸಲಾಗಿರುವುದರಿಂದ ಜನತೆ ಏಪ್ರಿಲ್ ಒಂದರಿಂದಲೇ ಹೆಚ್ಚುವರಿ ಬೆಲೆಯ ಬಾಕಿಯನ್ನು ಇನ್ನು ಮುಂದಿನ ದಿನಗಳಲ್ಲಿ ನೀಡಬೇಕಾಗಿದೆ.

ಇದು ಜನತೆಯ ಮೇಲೆ ಹೇರಲಾದ ನೇರವಾದ ಮತ್ತೊಂದು ದೊಡ್ಡ ಹೊರೆ ಮಾತ್ರವೇ ಆಗಿಲ್ಲ, ಬದಲಿಗೆ, ಇದು, ಈ ಕೂಡಲೇ ಎಲ್ಲ ಉತ್ಪನ್ನಗಳ ಮತ್ತು ಅಗತ್ಯ ವಸ್ತುಗಳ ಮತ್ತಷ್ಟು ಬೆಲೆ ಏರಿಕೆಯ ಹೊರೆಯಾಗಲಿದೆ.

ಆರ್ಥಿಕ ಸಂಕಷ್ಠದಲ್ಲಿರುವ ಕೈಗಾರಿಕೆಗಳ ಮೇಲೆ ಇದು ಗಧಾಪ್ರಹಾರ ಮಾಡಲಿದೆ. ಅವುಗಳು ಬೇಗನೇ ಮುಚ್ಚುವಂತೆ ಮತ್ತು ಅಲ್ಲಿನ ಕಾರ್ಮಿಕರು ಹಾಗೂ ಕೈಗಾರಿಕಾ ಮಾಲೀಕರನ್ನು ಬೀದಿಪಾಲು ಮಾಡಲಿದೆ. ಮಾತ್ರವಲ್ಲಾ, ನಿರುದ್ಯೋಗ ಮತ್ತು ಬಡತನ ಹಾಗೂ ದಾರಿದ್ರ್ಯ ಹೆಚ್ಚಳಗೊಳ್ಳಲು ನೆರವು ನೀಡಲಿದೆ.

ಆದರೇ, ಇದು ಕೇವಲ, ಅದಾನಿ, ಜಿಂದಾಲ್ ಮುಂತಾದ ಖಾಸಗೀ ವಿದ್ಯುತ್ ಕಂಪನಿಗಳ ಭಾರೀ ಲೂಟಿಗೆ ನೆರವಾಗಲಿದೆ.

ಹೀಗಾಗಿ, ಈ ಬೆಲೆ ಏರಿಕೆಗೆ ತಮ್ಮ ಸರಕಾರ ಏನೇ ಸಮರ್ಥನೆ ನೀಡಿದರೂ, ಅದು ಈ ಖಾಸಗೀ ಕಂಪನಿಗಳ ಲೂಟಿಕೋರ ಲಾಭದಾಸೆಯ ಒತ್ತಡದ ಕಾರಣದಿಂದ ಬಂದಿರುವುದು ಸ್ಪಷ್ಟವಿದೆ.

ಈಗಲೂ ವಿದ್ಯುತ್ ಸರಬರಾಜು ಕಂಪನಿಗಳು ಶೇಕಡಾ 14ರಷ್ಠು ಪ್ರಸರಣೆ ಮತ್ತು ವಿತರಣೆಯಲ್ಲಿನ ವಿದ್ಯುತ್  ಸೋರಿಕೆಯನ್ನು ತಡೆಯಲು ವಿಫಲವಾಗಿವೆ. ಅಂತರರಾಷ್ಟ್ರೀಯವಾಗಿ ವಿದ್ಯುತ್ ಪ್ರಸರಣ ಮತ್ತು ವಿತರಣೆಯ ನಷ್ಠದ ಪ್ರಮಾಣವನ್ನು ಸರಾಸರಿ ಶೇ 7.5 ಎಂದು ಗುರುತಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ,  ಕರ್ನಾಟಕದ ಈ ನಷ್ಠದ ಸೋರಿಕೆಯ ಪ್ರಮಾಣವನ್ನು  ಶೇಕಡಾ 5ರಷ್ಟು ಕಡಿತ ಮಾಡಲು ಕ್ರಮವಹಿಸಿದರೂ ಮತ್ತು ಅದೇ ರೀತಿ, ಖಾಸಗೀ ಕಂಪನಿಗಳಿಂದ ಉತ್ಪಾದನಾ ವೆಚ್ಚಕ್ಕಿಂತಲೂ ದುಬಾರಿ ಬೆಲೆಗೆ ವಿದ್ಯುತ್ ಖರೀದಿಸುವುದನ್ನು ನಿಲ್ಲಿಸಿದಲ್ಲಿ, ಇಂತಹ ಬೆಲೆ ಏರಿಕೆಯ ಕ್ರಮಗಳು ಅಗತ್ಯವಿರುವುದಿಲ್ಲ.

ತಮ್ಮ ಸರಕಾರ ಈ ಕುರಿತು ಕ್ರಮವಹಿಸದೇ, ಸಂಕಷ್ಠದಲ್ಲಿರುವ ಗ್ರಾಹಕರನ್ನು ಲೂಟಿ ಮಾಡಲು, ಲೂಟಿಕೋರ ಕಂಪನಿಗಳಿಗೆ ನೆರವಾಗುವಂತೆ ಪದೇ ಪದೇ ಬೆಲೆ ಏರಿಕೆಗೆ ಕ್ರಮವಹಿಸಿರುವುದು ಅಕ್ಷಮ್ಯವಾಗಿದೆ.

ಬೆಲೆ ಏರಿಕೆಗೆ ಅವಕಾಶಗಳಿರದಂತೆ ತಡೆಯುವ ಅನ್ಯ ಮಾರ್ಗಗಳಿದ್ದರೂ ಆ ಕಡೆಗೆ ಗಮನ ಹರಿಸದೇ ಕೇವಲ ಲೂಟಿಕೋರ ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ವಿದ್ಯುತ್ ಬೆಲೆ ಏರಿಕೆಗೆ ಕ್ರಮವಹಿಸುತ್ತಿರುವುದು ವಿದ್ಯುತ್ ಕ್ಷೇತ್ರವನ್ನು ಪೂರ್ಣ ಪ್ರಮಾಣದಲ್ಲಿ ಖಾಸಗೀ ಲೂಟಿಗೆ ತೆರೆಯುವ ಸಂಚಿನ ಭಾಗವೆಂಬುದನ್ನು ಇದು ಮತ್ತೊಮ್ಮೆ ಒತ್ತಿ ಹೇಳುತ್ತದೆ.

ರಾಜ್ಯದ ದಶ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ವಿದ್ಯುತ್ ಕ್ಷೇತ್ರದ ಕರ್ನಾಟಕ ವಿದ್ಯುತ್ ನಿಗಮ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ಮತ್ತು ಐದು ವಿತರಣೆಯ ಭಾರೀ ಕಂಪನಿಗಳ ಆಸ್ತಿ ಹಾಗು ರಾಜ್ಯದ ಆರು ಕೋಟಿಗೂ ಅಧಿಕ ಗ್ರಾಹಕ ಸಮುದಾಯದ ಲೂಟಿಗಾಗಿ ಲೂಟಿ ಕೋರ ಕಾರ್ಪೋರೇಟ್ ಕಂಪನಿಗಳು ಜೊಲ್ಲು  ಸುರಿಸುತ್ತಾ ಕಾಯ್ದು ಕುಳಿತಿರುವುದು ಸುಳ್ಳೇನಲ್ಲಾ !

ಇದೆಲ್ಲದಕ್ಕೆ ಪೂರಕವಾಗಿ, ಅದಾಗಲೇ ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆಯ ಹಂತಗಳನ್ನು ಪೂರ್ಣ ಪ್ರಮಾಣದಲ್ಲಿ ಖಾಸಗೀಯವರಿಗೆ ವಹಿಸಿ ಕೊಡುವ ವಿದ್ಯುತ್ ತಿದ್ದುಪಡಿ ಮಸೂದೆ – 2020 ಪಾರ್ಲಿಮೆಂಟ್ ಮುಂದಿರುವುದರಿಂದ ಇದನ್ನು ಸರಿಯಾಗಿಯೇ ಅರ್ಥೈಸಬಹುದಾಗಿದೆ. ತಮ್ಮ ಸರಕಾರವೂ ಇದರ ವಿರುದ್ದವಾಗಿ ಮಾತನಾಡಿಯೂ ಇಲ್ಲ.

ಆದ್ದರಿಂದ, ರಾಜ್ಯದ ಸಾರ್ವಜನಿಕ ರಂಗದ ವಿದ್ಯುತ್ ಕ್ಷೇತ್ರವನ್ನು ರಕ್ಷಿಸಿ ಬಲ ಪಡಿಸಲು, ಕರ್ನಾಟಕದ 30.65 ಲಕ್ಷ ನೀರಾವರಿ ಪಂಪ್ ಸೆಟ್ ವಿದ್ಯುತ್ ಬಳಕೆದಾರರು ಹಾಗೂ 26.88 ಲಕ್ಷ ಭಾಗ್ಯ/ ಕುಠೀರ ಜ್ಯೋತಿ ಬಳಕೆದಾರರು ಮತ್ತು ಮೂರು ಲಕ್ಷ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು,ರಾಜ್ಯದ ಸುಮಾರು 26 ಸಾವಿರ ಗ್ರಾಮ ಹಾಗೂ ನಗರಗಳ ಸಾರ್ವಜನಿಕ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ ನಿರ್ವಹಿಸುವ  ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲ ಗ್ರಾಹಕ ಸಮುದಾಯಗಳನ್ನು ಲೂಟಿಕೋರ ಖಾಸಗೀ ಕಾರ್ಪೊರೇಟ್ ಕಂಪನಿಗಳಿಂದ ಸಂರಕ್ಷಿಸಲು, ಸಾರ್ವಜನಿಕ ಸಂಸ್ಥೆಗಳ ಖಾಸಗೀ ಕರಣದ ದೇಶ ಹಾಗೂ ಜನ ವಿರೋಧಿ ಕ್ರಮಗಳನ್ನು ಈ ಕೂಡಲೇ ನಿಲ್ಲಿಸಬೇಕು.

ಈ ಕುರಿತು ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆಯ ಬೇಕು ಮತ್ತು ಏರಿಸಿದ ವಿದ್ಯುತ್ ದರಗಳನ್ನು ವಾಪಾಸು ಪಡೆಯ ಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ನೈಜ ಅಬಿವೃದ್ಧಿಯ ಹಾಗೂ ಸಮಸ್ತ ಗ್ರಾಹಕರ  ಪರವಾಗಿ ಒತ್ತಾಯಿಸುತ್ತದೆ.

 

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *