ಆಸಿಫ್ ಹತ್ಯೆ: ಆರೋಪಿಗಳನ್ನು ಮತ್ತು ದ್ವೇಷ ಭಾಷಣ ಮಾಡಿದವರನ್ನು ಬಂಧಿಸಿ-ಹರ್ಯಾಣ ಮುಖ್ಯಮಂತ್ರಿಗೆ ಬೃಂದಾ ಕಾರಟ್ ಪತ್ರ

ಹರ್ಯಾಣದ ಖೇರ ಖಲೀಲ್‌ಪುರ ಗ್ರಾಮದಲ್ಲಿ ಮೇ 16ರಂದು 28 ವರ್ಷದ ಆಸಿಫ್ ಎಂಬವರನ್ನು ಕ್ರಿಮಿನಲ್ ಪಡೆಯೊಂದು ಅಮಾನುಷವಾಗಿ ಕೊಂದು ಹಾಕಿತು. ಈ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಸಿಪಿಐ(ಎಂ) ಮತ್ತು ಸಿಪಿಐನ ನಿಯೋಗವೊಂದು ಈ ಗ್ರಾಮಕ್ಕೆ ಭೇಟಿ ನೀಡಿ ಆಸಿಫ್‌ನ ಕುಟುಂಬದವರನ್ನು ಮತ್ತು ನುಹ್ ಜಿಲ್ಲಾಧಿಕಾರಿಯನ್ನೂ ಭೇಟಿ ಮಾಡಿತು. ಈ ಭೇಟಿಯ ನಂತರ ನಿಯೋಗದ ಮುಖಂಡತ್ವ ವಹಿಸಿದ್ದ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಹರ್ಯಾಣದ ಮುಖ್ಯಮಂತ್ರಿ ಖಟ್ಟರ್ ಅವರಿಗೆ ಪತ್ರ ಬರೆದು ಆಸಿಫ್‌ನ ಹತ್ಯೆಯ ಆರೋಪಿಗಳನ್ನು ಮತ್ತು ಕೋಮುವಾದಿ ದ್ವೇಷ ಭಾಷಣಗಳನ್ನು ಮಾಡಿ ಪರಿಸ್ಥಿತಿÀಯನ್ನು ಕೋಮುಗ್ರಸ್ತಗೊಳಿಸಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಆಸಿಫ್‌ಗೆ ಕೇವಲ 28 ವರ್ಷವಾಗಿದ್ದು ಪತ್ನಿ ಮತ್ತು ಮೂವರು ಚಿಕ್ಕ ಮಕ್ಕಳಿದ್ದಾರೆ, ಅವರಲ್ಲಿ ಕೊನೆಯದ್ದು ಕೇವಲ 5 ತಿಂಗಳ ಮಗು. ಈ ಕುಟುಂಬಕ್ಕೆ ಪರಿಹಾರ ಮತ್ತು ಹಣಕಾಸು ನೆರವನ್ನು ಒದಗಿಸಬೇಕು ಎಂದೂ ಬೃಂದಾ ಅವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಆಸಿಫ್ ತನ್ನ ಊರಿನಲ್ಲಿನ ಎಲ್ಲ ಸಮುದಾಯಗಳ ಜನಗಳಿಗೂ ಸಹಾಯ ಮಾಡುತ್ತಿದ್ದ ವ್ಯಕ್ತಿ. ಆದ್ದರಿಂದ ಈ ಆರೋಪಿಗಳ ಕ್ರಿಮಿನಲ್ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದ. ಇವರಲ್ಲಿ ಕೆಲವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಲವು ಕೇಸುಗಳು ಈ ಮೊದಲೇ ಇದ್ದವು ಎಂದು ತಿಳಿದು ಬಂದಿದೆ. ಅವರು ಆಸಿಫ್À ಮೇಲೆ ಗುರಿಯಿಟ್ಟಿದ್ದರು. ಆತ, ತನ್ನ ಸೋದರ ಸಂಬಂಧಿ ರಶೀದ್ ಜತೆ ಬರುವಾಗ ಈ ಹಂತಕರು, ಹೊರಗಡೆಯಿಂದ ಕರೆಸಿದ ಗೂಂಡಾಗಳ ಜತೆಗೂಡಿ ಆಸಿಫ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ತಿಳಿದು ಬಂದಿದೆ. ರಶೀದ್ ಮೇಲೂ ಹಲ್ಲೆ ನಡೆಸಿದರು. ರಶೀದ್ ಕೂಡ ಸತ್ತನೆಂದು ಭಾವಿಸಿ ಅವರು ಹೊರಟು ಹೋದರು. ಬದುಕುಳಿದ ರಶೀದ್ ಈಗ ಈ ಹಲ್ಲೆಯ ಮುಖ್ಯ ಸಾಕ್ಷಿಯಾಗಿದ್ದು ಹಲ್ಲೆಕೋರರಲ್ಲಿ ಹಲವರನ್ನು ಗುರುತಿಸಿದ್ದಾನೆ.

ಮೊದಲಿಗೆ ಪೊಲೀಸರು ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಬಂಧಿಸಿದರು. ಇದು ಕುಟುಂಬದವರಲ್ಲಿ ವಿಶ್ವಾಸ ಮೂಡಿಸಿತು. ಆದರೆ ಮೇ 30ರಂದು ಪರಿಸ್ಥಿತಿ ಬದಲಾಯಿತು. ಒಂದು ತಿಂಗಳಿಂದ ಕೋವಿಡ್ ನಿಂದಾಗಿ ಹಾಕಿದ್ದ ಸೆಕ್ಷನ್ 144ನ್ನು ಉಲ್ಲಂಘಿಸಿ ಇಂದ್ರಿ ಎಂಬ ಸಮೀಪದ ಹಳ್ಳಿಯಲ್ಲಿ ಒಂದು ‘ಹಿಂದು ಮಹಾಪಂಚಾಯತ್ʼ ಎಂಬುದು ನಡೆಯಿತು. ಇದನ್ನು ಕರ್ಣಿ ಸೇನಾ ಅದರ ಅಧ್ಯಕ್ಷ ಸೂರಜ್ ಪಾಲ್ ಅಮ್ಮು ನೇತೃತ್ವದಲ್ಲಿ ಸಂಘಟಿಸಿತು ಎಂದು ತಿಳಿದು ಬಂದಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸಿದ ಪೋಸ್ಟರಿನಲ್ಲಿ “ಮೊದಲು ಧರ್ಮವನ್ನು ಉಳಿಸಬೇಕು-ನಂತರ ಜಾತಿಗಳನ್ನು ತಂತಾನೇ ಉಳಿಸಬಹುದು” ಎಂಬ ಸಂದೇಶವಿತ್ತು. ಅಂದರೆ ಕೆಲವರ ಕ್ರಿಮಿನಲ್ ಚಟುವಟಿಕೆಗಳಿಗೆ ಕೋಮು ಬಣ್ಣವನ್ನು ಹಚ್ಚಿ ಅವರನ್ನು ರಕ್ಷಿಸುವ ಪ್ರಯತ್ನ ಇದಾಗಿತ್ತು. ಸಾವಿರಾರು ಮಂದಿ ಭಾಗವಹಿಸಿದ್ದ ಈ ಸಮಾರಂಭದಲ್ಲಿ ಭಾಷಣಕಾರರು ಒಬ್ಬರಾದ ಮೇಲೆ ಒಬ್ಬರಂತೆ ಅಲ್ಪಸಂಖ್ಯಾತ ಸಮುದಾಯದ ಮೇಲೆ ದ್ವೇಷ ಕಾರುವ ಉದ್ರೇಕಕಾರಿ ಭಾಷಣಗಳನ್ನು ಮಾಡಿ ಕ್ರಿಮಿನಲ್‌ಗಳು ಮಾಡಿದ ಕೊಲೆ ಕೃತ್ಯಗಳನ್ನು ಸಮರ್ಥಿಸಿಕೊಂಡರು, ಮತ್ತು ಬಂಧಿತ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಈ ಭಾಷಣಕಾರರಲ್ಲಿ ಒಬ್ಬ, ನರೇಶ್ ಕುಮಾರ್ ಎಂಬಾತ, ಕಳೆದ ವರ್ಷ ಜುನೈದನನ್ನು ಬಡಿದು ಸಾಯಿಸಿದ ಪ್ರಕರಣದ ಪ್ರಮುಖ ಆರೋಪಿ. ಅವನು ಜಾಮೀನಿನ ಮೇಲೆ ಬಂದಿದ್ದ. ಆಳುವ ಪಕ್ಷದ ಸ್ಥಳೀಯ ಮುಖಂಡರೂ ಈ ‘ಮಹಾಪಂಚಾಯತ್’ನಲ್ಲಿ ಭಾಗವಹಿಸಿದ್ದರು. ಈ ಸಭೆ ಸೆಕ್ಷನ್ 144 ನ್ನು ಉಲ್ಲಂಘಿಸಿದ್ದಲ್ಲದೆ, ದ್ವೇಷಭಾಷಣಗಳು, ಮತ್ತು ಸಮುದಾಯಗಳ ನಡುವೆ ಸೆಳೆತವನ್ನು ಸೃಷ್ಟಿಸುವ ಕಾನೂನುಬಾಹಿರ ಕೃತ್ಯಗಳು ಕೂಡ ಇಲ್ಲಿ ನಡೆದಿವೆ. ಇದನ್ನು ಖಂಡಿಸುವ ಬದಲು ಇಲ್ಲಿಯ ಬಿಜೆಪಿ ಶಾಸಕ, ಈ ಜನಗಳಿಗೆ ತಮ್ಮ ಬೇಡಿಕೆಗಳನ್ನು ಎತ್ತುವ ಹಕ್ಕು ಇದೆ ಎಂದು ಸಮರ್ಥಿಸಿಕೊಂಡಿರುವುದು ಸಹಜವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಅಭದ್ರತೆಯ ಭಾವನೆಯನ್ನು ಉಂಟು ಮಾಡಿದೆ. ಇದಾದ ಕೆಲವೇ ದಿನಗಳಲ್ಲಿ ನಾಲ್ವರು ಬಂಧಿತರ ಬಿಡುಗಡೆಯಾಗಿದೆ. ಇದು ಈ ‘ಮಹಾಪಂಚಾಯತು’ ಹೇರಿದ ಒತ್ತಡದ ಪರಿಣಾಮ ಎಂಬುದು ಸ್ಪಷ್ಟ ಎಂದು ಈ ಘಟನೆಗಳನ್ನು ಪ್ರಸ್ತಾಪಿಸುತ್ತ ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಹರ್ಯಾಣದ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.

ಇಲ್ಲಿರುವ ಪ್ರಶ್ನೆ ಸೆಕ್ಷನ್ 144 ಇರುವಾಗ ಈ ‘ಮಹಾಪಂಚಾಯತ್’ಗೆ ಅವಕಾಶ ಹೇಗೆ ನೀಡಲಾಯಿತು ಎಂಬುದು. ಎರಡನೆಯದಾಗಿ, ದ್ವೇಷ ಭಾಷಣಗಳನ್ನು ಮಾಡಿದವರಲ್ಲಿ ಯಾರನ್ನೂ ಬಂಧಿಸಿಲ್ಲ. ಮೂರನೆಯದಾಗಿ, ಪೊಲೀಸ್ ಕೂಡಲೇ ನರೇಶ್ ಕುಮಾರನ ಜಾಮೀನು ರದ್ದು ಮಾಡಿ, ಅವನ ಮೇಲೆ ಹೊಸ ಕೇಸ್ ಹಾಕಿ ಬಂಧಿಸಲಿಲ್ಲವೇಕೆ? ನಾಲ್ಕನೆಯದಾಗಿ, ಪ್ರತ್ಯಕ್ಷ ಸಾಕ್ಷಿ ನೇರವಾಗಿ ಗುರುತಿಸಿದ್ದರೂ ನಾಲ್ವರು ಆರೋಪಿಗಳನ್ನು ಬಿಡುಗಡೆ ಮಾಡಿದ್ದೇಕೆ? ಐದನೆಯದಾಗಿ, ಈ ಹತ್ಯೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಇದ್ದಿದ್ದರೂ ಅವರನ್ನು ಬಂಧಿಸಿಲ್ಲವೇಕೆ ಎಂದು ಬೃಂದಾ ಅವರು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಈ ಎಲ್ಲ ಪ್ರಶ್ನೆಗಳ ಮೇಲೆ ಅಗತ್ಯ ಮತ್ತು ಸೂಕ್ತ ಕ್ರಮಗಳನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ, ಅಂದರೆ ಎಲ್ಲ ಆರೋಪಿಗಳನ್ನು ಮತ್ತು ‘ಹಿಂದೂ ಮಹಾಪಂಚಾಯತ್’ ಎಂಬುದನ್ನು ಸಂಘಟಿಸಿದವರನ್ನು, ಹಾಗೂ ಅಲ್ಲಿ ದ್ವೇಷ ಭಾಷಣ ಮಾಡಿದವರನ್ನು ಬಂಧಿಸುವ ಮತ್ತು ಜುನೈದ್ ಕೇಸಿನ ಆರೋಪಿ ನರೇಶ್ ಕುಮಾರ್ ಜಾಮೀನನ್ನು ರದ್ದು ಮಾಡುವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿರುವ ಬೃಂದಾ ಕಾರಟ್, ಆಸಿಫ್‌ನ ಕುಟುಂಬಕ್ಕೆ ಪರಿಹಾರ ಮತ್ತು ಹಣಕಾಸು ನೆರವನ್ನು ಒದಗಿಸಬೇಕು ಎಂದೂ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಆಸಿಫ್ ಕುಟುಂಬದವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಬೃಂದಾ ಕಾರಟ್ ಅಲ್ಲದೆ, ಸಿಪಿಐನ ಕೇಂದ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಹಾಗೂ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್ ಕೌರ್, ಸಿಪಿಐ(ಎಂ) ಹರ್ಯಾಣ ರಾಜ್ಯ ಕಾರ್ಯದರ್ಶಿ ಸುರಿಂದರ್ ಸಿಂಗ್, ಸಿಪಿಐ ರಾಜ್ಯ ಕಾರ್ಯದರ್ಶಿ ದರಿಯಾವ್ ಸಿಂಗ್ ಕಶ್ಯಪ್, ಸವಿತಾ, ಉಷಾ ಸರೋಹ, ಮೇಜರ್ ಎಸ್ ಐ ಪ್ರಜಾಪತಿ, ವಿನೋದ್ ಭಾರಧ್ವಾಜ್, ಸರಫುದ್ದೀನ್ ಮೆವಾತಿ, ಜಫರ್, ಅರ್ಷದ್ ಖಾನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *