ಆಯಕಟ್ಟಿನ ಖಾತೆಗಳಿಗಾಗಿ ಮಂತ್ರಿಗಳ ಅಸಹ್ಯ ಪೈಪೋಟಿ

ಕೊನೆಗೂ ಬಸವರಾಜ್ ಬೊಮ್ಮಾಯಿ ರವರ ಸಚಿವ ಸಂಪುಟ ರಚನೆಯಾಗಿದೆ. ಯಡಿಯೂರಪ್ಪರವರ ಸಂಪುಟವನ್ನು ರಚಿಸಲು 25 ದಿನ ಕಾಯಿಸಿದ್ದ ಬಿಜೆಪಿ ವರಿಷ್ಠರು ಬೊಮ್ಮಾಯಿರವರ ಸಂಪುಟವನ್ನು ಒಂದೇ ವಾರದಲ್ಲಿ ರಚಿಸಿ ಅಚ್ಚರಿಯನ್ನುಂಟು ಮಾಡಿದ್ದಾರೆ. ಮುಖ್ಯಮಂತ್ರಿಯೂ ಸೇರಿದಂತೆ ಬೊಮ್ಮಾಯಿ ಸಂಪುಟದ ಒಟ್ಟು ಬಲ ಮೂವತ್ತು ಆಗಿದೆ. ನಾಲ್ಕು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿದೆ. ತನ್ನ ಕಿರಿಯ ಮಗ ಬಿ. ವೈ. ವಿಜಯೇಂದ್ರಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಆಯಕಟ್ಟಿನ ಖಾತೆಯನ್ನು ಕೊಡಬೇಕೆಂದು ಬಿಗಿಪಟ್ಟು ಹಾಕಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಡಾಯದ ಬೆದರಿಕೆಯನ್ನು ಒಡ್ಡಿದ್ದರು. ಬಸವರಾಜ ಬೊಮ್ಮಾಯಿ ಮೂಲಕ ತನ್ನ ಪುತ್ರನ ಪರವಾಗಿ ಪಕ್ಷದ ವರಿಷ್ಠರ ಮೇಲೆ ಯಡಿಯೂರಪ್ಪ ಒತ್ತಡ ಹೇರಿದ್ದರು. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪನವರ ಜೊತೆಗೆ ಮಾತನಾಡಿ ಅವರನ್ನು ಸದ್ಯಕ್ಕೆ ಖೆಡ್ಡಾಕ್ಕೆ ಕೆಡವಲು ಯಶಸ್ವಿಯಾದರು. ಮುಂದಿನ ದಿನಗಳಲ್ಲಿ ವಿಜಯೇಂದ್ರಗೆ ಅವಕಾಶ ನೀಡುವ ಭರವಸೆಯಿಂದಾಗಿ ಯಡಿಯೂರಪ್ಪ ಯಾವ ದುಡುಕಿನ ನಿರ್ಧಾರಕ್ಕೆ ಮುಂದಾಗದೆ ಕಾದು ನೋಡಲು ನಿರ್ಧರಿಸಿದಂತೆ ಕಾಣುತ್ತದೆ.

ಇದನ್ನು ಓದಿ: ಜನವಿರೋಧಿ ಆಡಳಿತ ಹಾಗೂ ಅಧಿಕಾರಕ್ಕಾಗಿ ಬಿಜೆಪಿಯೊಳಗೆ ಕಚ್ಚಾಟ

ಬಿ.ಎಸ್. ಯಡಿಯೂರಪ್ಪರವರ ಕಿರಿಯ ಪುತ್ರ ವಿಜಯೇಂದ್ರ ಕುರಿತು ಮಾಜಿ ಮುಖ್ಯಮಂತ್ರಿ ತೋರುತ್ತಿರುವ ವ್ಯಾಮೋಹ ಅಸಹ್ಯವಾಗಿದೆ. ಇದುವರೆಗೂ ವಿಧಾನಸಭೆಗಾಗಲಿ ವಿಧಾನಪರಿಷತ್ತಿಗಾಗಲಿ ಜನರಿಂದ ಚುನಾಯಿತರಾದವರಲ್ಲ. ಅಪ್ಪನ ಆತುರತೆಗೆ ಮರುಳಾಗಿ ಅಧಿಕಾರ ಲಾಲಸನಾಗುವುದನ್ನು ಜನ ಮೆಚ್ಚಲಾರರು. ಅಪ್ಪನ ಮುಖ್ಯಮಂತ್ರಿ ಸ್ಥಾನವನ್ನು ದುರುಪಯೋಗ ಪಡಿಸುತ್ತಿದ್ದ ಆರೋಪಗಳು ಈಗಾಗಲೇ ಕೇಳಿಬಂದಿವೆ. ಅಪ್ಪನನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವಂತೆ ಪಕ್ಷದ ವರಿಷ್ಠರ ಮೇಲೆ ಮಠಾಧೀಶರನ್ನು ಅಣಿನೆರೆಸುವಲ್ಲಿ ವಿಜಯೇಂದ್ರರ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಲಾಗುತ್ತದೆ. ಯಡಿಯೂರಪ್ಪ ಕುಟುಂಬದಲ್ಲಿ ಅನುವಂಶಿತ ರಾಜಕಾರಣ ಮೊಳಕೆಯೊಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಮಿತಿಮೀರಿದ ಪುತ್ರ ವ್ಯಾಮೋಹ ಕರ್ನಾಟಕದ ಬಿಜೆಪಿಗೆ ತಲೆನೋವು ತಂದಿದೆ. ತಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗಲೇ ತನ್ನ ಪುತ್ರ ವಿಜಯೇಂದ್ರನಿಗೆ ಸೂಕ್ತ ಸ್ಥಾನ ಕಲ್ಪಿಸಬೇಕೆಂಬುದು ಅವರ ಆಸೆಯಾಗಿತ್ತು. ತಾನು ಮುಖ್ಯಮಂತ್ರಿ ಆಗಿರುವಾಗಲೇ ಇದನ್ನು ಸಾಧಿಸಬೇಕೆಂಬ ಹಠ ಅವರದಾಗಿತ್ತು. ತಾನು ಮುಖ್ಯಮಂತ್ರಿ ಆಗಿರುವಾಗಲೇ ವರಿಷ್ಠರು ತನ್ನ ಮಾತಿಗೆ ಬೆಲೆ ಕೊಡದೆ ಇರುವಾಗ ತಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ತನ್ನ ಮಾತು ಯಾರು ಕೇಳುತ್ತಾರೆ ಎಂದು ಅವರು ಯೋಚಿಸುತ್ತಿದ್ದಂತೆ ಕಾಣುತ್ತದೆ. ಆದರೆ ವಿಜಯೇಂದ್ರ ಈ ಆರೋಪವನ್ನು ನಿರಾಕರಿಸುತ್ತಿದ್ದಾರೆ.

ಬೊಮ್ಮಾಯಿ ಸಚಿವ ಸಂಪುಟ ಪಕ್ಷದ ಕೇಂದ್ರ ವರಿಷ್ಠರ ಸೃಷ್ಟಿ ಆಗಿರುವುದು ಸ್ಪಷ್ಟವಾಗಿ ಕಾಡುತ್ತದೆ. 29 ಮಂತ್ರಿಗಳ ಪೈಕಿ 23 ಹಳೆಯ ಮುಖಗಳೇ. ಕೇವಲ ಆರು ಜನ ಹೊಸಬರಿಗೆ ಅವಕಾಶ ದೊರಕಿದೆ. ಸಂಪುಟ ಸೇರುವ ಹಲವು ಆಕಾಂಕ್ಷಿಗಳ ನಿರೀಕ್ಷೆ ಸುಳ್ಳಾಗಿದೆ. ಸಚಿವ ಸ್ಥಾನ ಗಳಿಂದ ವಂಚಿತರಾದ ಶಾಸಕರು ಮತ್ತು ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದಾರೆ. ಕೆಲವು ಶಾಸಕರು ನೇರವಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಹಲವು ಶಾಸಕರ ಬೆಂಬಲಿಗರು ಬಿಜೆಪಿ ವರಿಷ್ಠರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದಾರೆ. ಕೆಲವರು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧವೇ ಆರೋಪ ಮಾಡಿದ್ದಾರೆ. ಇದರ ಪರಿಣಾಮ ಏನಾಗಬಹುದು ಎಂಬುದು ಕುತೂಹಲಕಾರಿಯಾಗಿದೆ.

ಇದನ್ನು ಓದಿ: ಬೊಮ್ಮಾಯಿ ಸರ್ಕಾರದಿಂದ ಏನನ್ನು ನಿರೀಕ್ಷಿಸಬಹುದು?

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದು ಬೊಮ್ಮಾಯಿ ರವರಿಗೆ ಇನ್ನೊಂದು ತಲೆನೋವಾಗಿ ಪರಿಣಮಿಸಲಿದೆ. ಆಯಕಟ್ಟಿನ ಖಾತೆಗಳ ಮೇಲೆ ಎಲ್ಲಾ ಮಂತ್ರಿಗಳು ಕಣ್ಣಿಟ್ಟಿದ್ದಾರೆ. ಖಾತೆಗಳ ಹಂಚಿಕೆ ವಿಷಯದಲ್ಲೂ ಬೊಮ್ಮಾಯಿ ಸ್ವತಂತ್ರರಾಗಿರಲಾರರು. ವರಿಷ್ಠರ ಒಪ್ಪಿಗೆ ಪಡೆದು ಅಂತಿಮ ನಿರ್ಣಯ ಕೈಗೊಳ್ಳಬೇಕಾಗುವುದು. ಮುಖ್ಯಮಂತ್ರಿರವರ ತವರು ಜಿಲ್ಲೆಯಲ್ಲೇ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಟ್ಟಾರೆಯಾಗಿ ಅತೃಪ್ತ ಶಾಸಕರು ತಂಡಗಳನ್ನು ರಚಿಸಿಕೊಂಡು ಕಾರ್ಯನ್ಮುಖರಾಗುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಮಂತ್ರಿಗಳ ಖಾತೆ ಹಂಚಿಕೆ ಹಾಗೂ ಜಿಲ್ಲೆಗಳಿಗೆ ಉಸ್ತುವಾರಿ ನೇಮಕ ಮುಂತಾದ ವಿಷಯಗಳಲ್ಲಿ ಮುಂದಿನ ದಿನಗಳಲ್ಲಿ ಗೊಂದಲದ ಬೆಳವಣಿಗೆಗಳನ್ನು ಮತ್ತು ಅಶಿಸ್ತಿನ ವರ್ತನೆಯನ್ನು ನಿರೀಕ್ಷಿಸಬಹುದು. ಇದರಿಂದಾಗಿ ಅಧಿಕಾರಕ್ಕಾಗಿ, ಹಣ ಮಾಡುವುದಕ್ಕಾಗಿ ಬಿಜೆಪಿ ಇಂದು ಉಳಿಯಲಾರದು ಎಂಬುವುದು ನೂರಕ್ಕೆ ನೂರು ಸತ್ಯ. ಬಿಜೆಪಿ ಸಹ ಇತರ ಬಲಪಂಥೀಯ ಪಕ್ಷಗಳಂತೆ ಒಂದು ಲಾಭಕೋರ ರಾಜಕೀಯ ಪಕ್ಷ ಎಂಬುದರಲ್ಲಿ ಅನುಮಾನವಿಲ್ಲ. ಅದೊಂದು ಭಿನ್ನವಾದ ಜನಪರವಾದ ಪಕ್ಷ ಎಂಬುದು ಸುಳ್ಳು ಎನ್ನುವುದು ಇದರಿಂದ ಸಾಬೀತಾಗುತ್ತದೆ.

Leave a Reply

Your email address will not be published. Required fields are marked *