ಕಾಂ.ಗೌತಮ್ ದಾಸ್ ನಿಧನ

ಸಿಪಿಐ(ಎಂ)ನ ತ್ರಿಪುರಾ ರಾಜ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸಮಿತಿ ಸದಸ್ಯ ಕಾಂ.ಗೌತಮ್ ದಾಸ್ ಸೆಪ್ಟೆಂಬರ್ 16ರ ಮುಂಜಾನೆ ನಿಧನರಾಗಿದ್ದಾರೆ. ಕೊಲ್ಕತಾದ ಆಸ್ಪತ್ರೆಯೊಂದರಲ್ಲಿ ಅವರು ಕೋವಿಡ್‌ಗೆ ಶುಶ್ರೂಷೆ ಪಡೆಯುತ್ತಿದ್ದರು. ಅವರಿಗೆ 70 ವರ್ಷವಾಗಿತ್ತು. ಅವರ ನಿಧನಕ್ಕೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಳವಾದ ಆಘಾತ ಮತ್ತು ದುಃಖ ವ್ಯಕ್ತಪಡಿಸಿದೆ.

ತಮ್ಮ ಶಾಲಾದಿನಗಳಿಂದಲೂ ತ್ರಿಪುರಾದ ವಿದ್ಯಾರ್ಥಿ ಆಂದೋಲನದ ಭಾಗವಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಗೌತಮ್ ದಾಸ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಪಕ್ಷದ ಪತ್ರಿಕೆ ‘ದೇಶೇರ್ ಕಥಾ’ ವಾರಪತ್ರಿಕೆಯಲ್ಲಿ ಕೆಲಸ ಮಾಡಲಾರಂಭಿಸಿದರು. ಮುಂದೆ 1979ರಲ್ಲಿ ಅದು ದಿನಪತ್ರಿಕೆಯಾದಾಗ ಅದರ ಸ್ಥಾಪಕ ಸಂಪಾದಕರಾದರು. ಈ ಹೊಣೆಗಾರಿಕೆಯನ್ನು ಅವರು 2015ರಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳುವವರೆಗೂ ಅತ್ಯುತ್ಕೃಷ್ಟ ರೀತಿಯಲ್ಲಿ ನಿಭಾಯಿಸಿದರು. ದೇಶೇರ್ ಕಥಾವನ್ನು ಒಂದು ಪೂರ್ಣ ಪ್ರಮಾಣದ ಸುದ್ದಿಪತ್ರಿಕೆಯಾಗಿ ಬೆಳೆಸುವಲ್ಲಿ ಅವರದ್ದು ಪ್ರಮುಖಪಾತ್ರ. ಅವರು ಅಗರ್ತಲಾ ಪ್ರೆಸ್ ಕ್ಲಬ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ತ್ರಿಪುರಾದ ಸಾಂಸ್ಕೃತಿಕ ಆಂದೋಲನದಲ್ಲೂ ಅವರು ಸಕ್ರಿಯರಾಗಿದ್ದರು, ತ್ರಿಪುರಾ ಸಂಸ್ಕೃತಿ ಸಮನ್ವಯ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿದ್ದರು.

1968ರಲ್ಲಿ ಸಿಪಿಐ(ಎಂ) ಸೇರಿದ ಅವರು 1986ರಲ್ಲಿ ರಾಜ್ಯ ಸಮಿತಿಗೆ, 1994ರಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿಗೆ ಮತ್ತು 2018ರಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಚುನಾಯಿತರಾದರು. 2015ರಲ್ಲಿ ಸಿಪಿಐ(ಎಂ)ನ 21ನೇ ಮಹಾಧಿವೇಶನದಲ್ಲಿ ಕೇಂದ್ರ ಸಮಿತಿಗೆ ಆಯ್ಕೆಯಾದರು. ಕಳೆದ ಮೂರು ವರ್ಷಗಳಲ್ಲಿ ಅವರು ಪಕ್ಷವನ್ನು ಭಯೋತ್ಪಾದಕ ಆಳ್ವಿಕೆಯ ನಡುವೆ ಮುನ್ನಡೆಸಲು ಅವಿಶ್ರಾಂತವಾಗಿ ದುಡಿಯುತ್ತಿದ್ದರು.

ಅವರ ಕುಟುಂಬ ಮೂಲತಃ ಈಗ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್‌ನದ್ದಾಗಿರುವುದರಿಂದ ಬಾಂಗ್ಲಾದೇಶದ ಬಗ್ಗೆ ಅವರಿಗೆ ವಿಶೇಷ ಒಲವು. ಇದು ಅಲ್ಲಿನ ರಾಜಕೀಯ ಪಕ್ಷಗಳೊಂದಿಗೆ ಸಿಪಿಐ(ಎಂ) ಪರವಾಗಿ ಸೌಹಾರ್ದ ಸಂಬಂಧಗಳನ್ನು ಇರಿಸಿಕೊಳ್ಳಲು ನೆರವಾಗಿತ್ತು.

ಅತ್ಯಂತ ಸರಳ ಜೀವನ ನಡೆಸಿರುವ ಅವರು ಪಕ್ಷದ ಧ್ಯೇಯೋದ್ದೇಶಗಳಿಗೆ ಉನ್ನತ ವಿಧೇಯತೆ ಮತ್ತು ಬದ್ಧತೆ ಹೊಂದಿದ್ದ ಒಬ್ಬ ಸಂಗಾತಿ. ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ, ತ್ರಿಪುರಾದಲ್ಲಿ ಸಿಪಿಐ(ಎಂ) ದುಷ್ಟ, ಹಿಂಸಾತ್ಮಕ ದಾಳಿಗಳನ್ನು ಧೀರತೆಯಿಂದ ಎದುರಿಸುತ್ತಿರುವ ಸಂದರ್ಭದಲ್ಲಿ ಅವರ ನಿರ್ಗಮನ ಒಂದು ದೊಡ್ಡ ನಷ್ಟ ಎಂದು ಹೇಳಿದೆ, ಅವರ ಪತ್ನಿ ತಪತಿ ಸೆನ್, ಮಗಳು ಸ್ವಗತ ದಾಸ್ ಮತ್ತು ಕುಟುಂಬದ ಇತರ ಸದಸ್ಯರಿಗೆ ಹಾರ್ದಿಕ ಸಂತಾಪವನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *