ಪ್ರಧಾನಿಗಳಿಂದ ಮೂರೂ ಕೃಷಿ ಕಾಯ್ದೆಗಳ ರದ್ದಿನ ಪ್ರಕಟಣೆ – ವ್ಯಾಪಕ ಪರಿಣಾಮಗಳ ವಿಜಯ

ಪ್ರಕಾಶ್ ಕಾರಟ್

prakash karat
ಪ್ರಕಾಶ್ ಕಾರಟ್

ಹಿಂದುತ್ವ-ನವಉದಾರವಾದಿ ಸರ್ವಾಧಿಕಾರಶಾಹೀ ಆಳ್ವಿಕೆಯ ವಿರುದ್ಧದ ಹೋರಾಟ ಒಂದು ಹೊಸ ಮಜಲನ್ನು ತಲುಪಿದೆ ಎನ್ನುವುದು ಸ್ಪಷ್ಟವಾಗಿದೆ. ರೈತ ಚಳವಳಿ ಸಾಧಿಸಿರುವ ಅಭೂತಪೂರ್ವ ಏಕತೆ ಹಾಗೂ ಅದು ದುಡಿಯುವ ವರ್ಗದ ಚಳವಳಿಯೊಂದಿಗೆ ಸಾಧಿಸಿರುವ ಐಕಮತ್ಯದ ಸ್ವರೂಪದಲ್ಲಿ ದೇಶದಲ್ಲಿ ವರ್ಗ ರಾಜಕೀಯ ಮೇಲೆದ್ದು ಬಂದಿದೆ. ಎಡ ಶಕ್ತಿಗಳ ದೃಷ್ಟಿಯಲ್ಲಿ ಈ ಬೆಳವಣಿಗೆಗಳು ಎಲ್ಲ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸುವ ದಿಸೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಹಿಂದುತ್ವ-ಸರ್ವಾಧಿಕಾರಶಾಹೀ ಆಳ್ವಿಕೆಗೆ ಒಂದು ಪರಿಣಾಮಕಾರೀ ಪರ್ಯಾಯವನ್ನು ಕಟ್ಟಲು ಅದು ನೆರವಾಗಲಿದೆ.

ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿ ಶರಣಾಗಿದ್ದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ನೇತೃತ್ವದಲ್ಲಿ ನಡೆದ ರೈತರ ಸಂಘಟಿತ ಚಳವಳಿಗೆ ಸಂದ ಐತಿಹಾಸಿಕ ವಿಜಯವಾಗಿದೆ. ಕಾರ್ಪೊರೇಟ್-ಪರವಾದ ಕೆಲವು ಕೃಷಿ ಕ್ರಮಗಳನ್ನು ರದ್ದುಪಡಿಸಿದ್ದಷ್ಟೇ ಅಲ್ಲ, ಇದು ಇನ್ನೂ ವ್ಯಾಪಕವಾದ ಪರಿಣಾಮಗಳನ್ನು ಬೀರಬಲ್ಲ ಮಹತ್ವದ ವಿಜಯವಾಗಿದೆ.

ಮೊದಲ ಹಾಗೂ ಅತಿ ಪ್ರಮುಖ ವಿಷಯವೆಂದರೆ, ರೈತ-ಆಧಾರಿತ ಕೃಷಿ ಮೂಲಕ ರೈತರ ಜೀವನೋಪಾಯದ ಹಕ್ಕುಗಳನ್ನು  ಯಶಸ್ವಿಯಾಗಿ ರಕ್ಷಿಸಿಕೊಂಡಿರುವುದು ಮೋದಿ ಸರ್ಕಾರ ಅನುಸರಿಸುತ್ತಾ ಬಂದಿರುವ ನವ-ಉದಾರವಾದಿ ಕಾರ್ಯಸೂಚಿಗೆ ಆಗಿರುವ ಒಂದು ಹಿನ್ನಡೆ.

ಎರಡನೆಯದಾಗಿ, ರೈತರ ಆಂದೋಲನದ ಯಶಸ್ಸು ಸರ್ವಾಧಿಕಾರಶಾಹಿಗೆ  ಮತ್ತು ಪ್ರಜಾಪ್ರಭುತ್ವವನ್ನು ತುಳಿಯುವವರಿಗೆ ಕೊಟ್ಟಿರುವ ಬಲವಾದ ಹೊಡೆತವಾಗಿದೆ. ದುಡಿಯುವ ವರ್ಗದ ಬೆಂಬಲದೊಂದಿಗೆ ನಡೆದ ಅನ್ನದಾತರ ಸಾಮೂಹಿಕ ಚಳವಳಿಯು ಸ್ವತಃ ಸಂಸತ್ತನ್ನೇ ಅವಮಾನಿಸಿ ಸಂಸದೀಯ ನಿಯಮಗಳನ್ನು ಮೊಟಕುಗೊಳಿಸಿದ ಹಾಗೂ ಬದಿಗೊತ್ತಿದ ಸರ್ವಾಧಿಕಾರಶಾಹೀ ವ್ಯವಸ್ಥೆಗೆ ಹೊಡೆತ ನೀಡಿದೆ.

ಮೂರು ಕೃಷಿ ಕಾನೂನುಗಳನ್ನು ಮೊದಲಿಗೆ 2020ರ ಜೂನ್‌ನಲ್ಲಿ ಯಾವುದೇ ಸಮಾಲೋಚನೆ ನಡೆಸದೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗಿತ್ತು ಹಾಗೂ ಸ್ಥಾಯೀ ಸಮಿತಿಗೆ ಕಳಿಸದೆ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ರಾಜ್ಯಸಭೆಯಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲಿಸದೇ ಮತ್ತು ಪ್ರತಿಪಕ್ಷ ಸದಸ್ಯರ ದನಿಯನ್ನು ಅಡಗಿಸಿ ಪಾಸುಮಾಡಿಸಿಕೊಳ್ಳಲಾಯಿತು. ಈ ಸರ್ವಾಧಿಕಾರಶಾಹೀ ವ್ಯವಸ್ಥೆಯನ್ನು ರೈತರ ಸಾಮೂಹಿಕ ಆಂದೋಲನ ನುಚ್ಚು ನೂರು ಮಾಡಿದೆ.

pm modi 191121ಸುಗ್ರೀವಾಜ್ಞೆಗಳ ಆಳ್ವಿಕೆಗೆ ಸವಾಲು ಸಾಮೂಹಿಕ ಹೋರಾಟದ ದಾರಿ

ಈ ಹಿಂದೆಯೂ, ಭೂ ಸ್ವಾಧೀನ ಕಾನೂನು ತಿದ್ದುಪಡಿ ಮಾಡಲು 2015ರಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಭೂಮಿ ಅಧಿಕಾರ್ ಆಂದೋಲನ್ ಎಂಬ ಸಂಯುಕ್ತ ವೇದಿಕೆಯಿಂದ ಆ ಸುಗ್ರೀವಾಜ್ಞೆ ವಿರುದ್ಧ ನಡೆಸಿದ ಹೋರಾಟದ ಫಲವಾಗಿ ಲೋಕಸಭೆಯಲ್ಲಿ ಅಂಗೀಕಾರವಾದ ಆ ಆಧ್ಯಾದೇಶವನ್ನು ಸರ್ಕಾರ ಕೈಬಿಡಬೇಕಾಗಿ ಬಂತು.

ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿದ ನಂತರ ಸರ್ಕಾರ ಈ ಪಾಠವನ್ನು ಮರೆತು ಸುಗ್ರೀವಾಜ್ಞೆ ಮತ್ತು ಸಂಸತ್ತಿನ ಮೂಲಕ ಪ್ರಜಾಪ್ರಭುತ್ವ-ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಪರಿಪಾಠವನ್ನೇ ಬೆಳೆಸಿಕೊಂಡಿತು. ಸಂವಿಧಾನದ 370ನೇ ವಿಧಿಯ ರದ್ದತಿ ಹಾಗೂ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಅವುಗಳಲ್ಲಿ ಸೇರಿವೆ. ಹೀಗಾಗಿ, ಈಗಿನ ಬೆಳವಣಿಗೆಯಿಂದಾಗಿ ಭವಿಷ್ಯದಲ್ಲಿ ಈ ರೀತಿ ಮಾಡುವುದಕ್ಕೂ ಮುಂಚೆ ಮೋದಿ ಸರ್ಕಾರ ಎರಡೆರಡು ಬಾರಿ ಚಿಂತಿಸುವುದು ಅಗತ್ಯವಾಗಿದೆ.

ಮೂರನೆಯದಾಗಿ, ವರ್ಷದಷ್ಟು ದೀರ್ಘಕಾಲ ನಡೆದ ರೈತರ ಚಳವಳಿಯು ಹಿಂದುತ್ವ-ನವ-ಉದಾರವಾದಿ ಆಡಳಿತದ ನೀತಿಗಳ ವಿರುದ್ಧ ನಡೆಸಬೇಕಾದ ಹೋರಾಟಕ್ಕೆ ದಾರಿಯನ್ನು ತೊರಿಸಿಕೊಟ್ಟಿದೆ. ಅದರಲ್ಲೂ ವಿಶೇಷವಾಗಿ, ಸಂಸದೀಯ ಪ್ರತಿಪಕ್ಷ ದುರ್ಬಲ ಹಾಗೂ ಪರಿಣಾಮಕಾರಿ ಆಗಿಲ್ಲದಿರುವ ಸನ್ನಿವೇಶದಲ್ಲಿ, ಜನರನ್ನು ಅಣಿನೆರೆಯಿಸಿ ಪ್ರತಿರೋಧ ಕಟ್ಟಲು ಸಂಯುಕ್ತ ವೇದಿಕೆಗಳ ಮೂಲಕ ಸಾಮೂಹಿಕ ಹೋರಾಟಗಳನ್ನು ರೂಪಿಸುವುದೇ ಉತ್ತಮ ದಾರಿ ಎನ್ನುವುದನ್ನು ತೋರಿಸಿಕೊಟ್ಟಿದೆ.

ಹಿಮ್ಮಟ್ಟಿದ್ದು ಯಾಕೆ?

ಮೋದಿ ಸರ್ಕಾರ ಈ ಹಂತದಲ್ಲಿ ಹಿಂದಕ್ಕೆ ಸರಿದದ್ದು  ಯಾಕೆಂಬ ಪ್ರಶ್ನೆ ಉದ್ಭವವಾಗುತ್ತದೆ. ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗವು ರೈತ ಚಳವಳಿಯ ಪ್ರಮುಖ ಕೇಂದ್ರವಾಗಿತ್ತು. ದಬ್ಬಾಳಿಕೆ ಮೂಲಕ ಚಳವಳಿಯನ್ನು ಹತ್ತಿಕ್ಕಲು ಮತ್ತು ಸಿಖ್ ರೈತ ನಾಯಕರನ್ನು ಖಲಿಸ್ತಾನಿಗಳು ಮತ್ತು ರಾಷ್ಟ್ರ-ವಿರೋಧಿಗಳು ಎಂದು ಬಿಂಬಿಸಲು ಮೋದಿ ಸರ್ಕಾರ ಮಾಡಿದ ಪ್ರಯತ್ನಗಳಿಂದಾಗಿ ಇಡೀ ಪಂಜಾಬಿನ ಜನರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳುವಂತಾಯಿತು. ಪರಿಸ್ಥಿತಿ ಎಲ್ಲಿವರೆಗೆ ಹೋಗಿದೆಯೆಂದರೆ ಯಾವುದೇ ಬಿಜೆಪಿ ನಾಯಕ ಪಂಜಾಬ್‌ನ ಯಾವುದೇ ಹಳ್ಳಿಗೆ ಕಾಲಿಡುವಂತಿಲ್ಲ. ಪಂಜಾಬ್ ವಿಧಾನ ಸಭೆ ಚುನಾವಣೆಗೆ ಇನ್ನು ಕೆಲವೇ ವಾರವಿರುವಾಗ, ಎಲ್ಲ ಕಡೆಯಿಂದ ದಾಳಿಗೊಳಗಾಗಿರುವ ಬಿಜೆಪಿ ಏಕಾಂಗಿತನದ ಪರಿಸ್ಥಿತಿಯಿಂದ ಹೊರಬರಲು ಹತಾಶೆಯ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿ ಬಂತು.

ಪಂಜಾಬ್‌ನಲ್ಲಿ ಚುನಾವಣಾ ಭವಿಷ್ಯವನ್ನು ತ್ಯಾಗ ಮಾಡಲು ಸಾಧ್ಯವಿದೆ ಎಂದು ಬಿಜೆಪಿ ಯೋಚಿಸಿದರೂ ಉತ್ತರ ಪ್ರದೇಶದಲ್ಲಿ ತೂಗುತ್ತಿರುವ ಅಪಾಯದ ಕತ್ತಿಯನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವ ಸ್ಥಿತಿಯಲ್ಲಿ ಅದು ಇಲ್ಲ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಳೆದೊಂದು ವರ್ಷದಿಂದ ಇಡೀ ರೈತಾಪಿ ವರ್ಗ ಒಗ್ಗಟ್ಟಾಗಿ ಚಳವಳಿಯ ಪರವಾಗಿ ಎದ್ದು ನಿಂತಿದೆ. 2014ರ ಲೋಕಸಭೆ ಹಾಗೂ 2019ರ ವಿಧಾನಸಭೆ ಚುನಾವಣೆಗಳಲ್ಲಿ ರೈತರ ಗಣನೀಯ ವಿಭಾಗ ಬಿಜೆಪಿಗೆ ಬೆಂಬಲ ನೀಡಿತ್ತು. 2013ರ ಮುಜಾಫರ್‌ನಗರ ಗಲಭೆಗಳಿಂದ ಜಾಟ್ ಹಾಗೂ ಮುಸ್ಲಿಮರಲ್ಲಿ ಉಂಟಾದ ಬಿರುಕನ್ನು ಮುಚ್ಚಲು ಕಿಸಾನ್ ಚಳವಳಿ ದೊಡ್ಡ ಪ್ರಮಾಣದಲ್ಲಿ ನೆರವಾಯಿತು. 2013ರ ಗಲಭೆಯು ಪರಿಸ್ಥಿತಿಯನ್ನು ಧ್ರುವೀಕರಿಸಲು ಬಿಜೆಪಿಗೆ ನೆರವಾಗಿತ್ತು. ಆದರೆ, ಮುಜಾಫರ್‌ನಗರದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಬೃಹತ್ ರ‍್ಯಾಲಿ ಪ್ರಬಲವಾದ ಸಂದೇಶ ಸಾರಿತ್ತು.

ಕೇಂದ್ರ ಸಚಿವರೊಬ್ಬರ ಮಗ ಕಾರು ಹರಿಸಿ ನಾಲ್ಕು ರೈತರ ಹತ್ಯೆಗೆ ಕಾರಣವಾದ ಉತ್ತರ ಪ್ರದೇಶದ ಲಖಿಂಪುರ ಖೇರಿಯ ದೌರ್ಜನ್ಯದಿಂದಾಗಿ ರೈತರ ಪರ ಬೆಂಬಲ ಹಾಗೂ ಸಹಾನುಭೂತಿ ಇಡೀ ರಾಜ್ಯದಲ್ಲಿ ಇನ್ನಷ್ಟು ಹೆಚ್ಚಾಗಿದೆ.

ಬಿಜೆಪಿ ಮಟ್ಟಿಗೆ ಉತ್ತರ ಪ್ರದೇಶವು ಬಹಳ ಜತನದಿಂದ ರಕ್ಷಿಸಬೇಕಾದ ಕಿರೀಟದ ರತ್ನವಾಗಿದೆ. ಅಮಿತ್ ಷಾ ಮತ್ತೆ-ಮತ್ತೆ ಹೇಳುತ್ತಿರುವಂತೆ, 2022ರ ಅಸೆಂಬ್ಲಿ ಚುನಾವಣೆಯ ಗೆಲುವು 2024ರ ಲೋಕಸಭೆ ಚುನಾವಣೆಯ ಗೆಲುವಿಗೆ ಹಾದಿ ಮಾಡಿಕೊಡಬೇಕಾಗಿದೆ. ಕಿಸಾನ್ ಆಂದೋಲನದಿಂದ ಉಂಟಾಗಿರುವ ಅಪಾಯ ಹಾಗೂ ಆದಿತ್ಯನಾಥ ಸರ್ಕಾರದ ದಮನಕಾರೀ ಆಡಳಿತದಿಂದಾಗಿ ಬೆಂಬಲ ಕುಸಿಯುತ್ತಿರುವುದರಿಂದ ಬಿಜೆಪಿಗೆ ಅಪಾಯ ಇನ್ನೂ ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ನಷ್ಟದ ಪ್ರಮಾಣವನ್ನು ತಗ್ಗಿಸಲು ಮೋದಿ ಹಿಮ್ಮೆಟ್ಟುವ  ತಂತ್ರಕ್ಕೆ ಶರಣಾಗಿದ್ದಾರೆ. ಈ ನಡೆಯ ಹಿಂದೆ ಇನ್ನೂ ಒಂದು ವಾಸ್ತವವಿದೆ. ಕಿಸಾನ್ ಚಳವಳಿ ಹಾಗೂ ಅದು ಎತ್ತಿರುವ ಪ್ರಶ್ನೆಗಳು ಮುನ್ನೆಲೆಯಲ್ಲಿ ಇರುವಾಗ ವಿಭಜನಕಾರಿ ಕೋಮು ಅಜೆಂಡಾದ ಮೇಲೆ ಜನರ ಗಮನ ಕೇಂದ್ರೀಕರಿಸುವಂತೆ ಮಾಡುವುದು ಬಿಜೆಪಿಗೆ ಕಷ್ಟ ಎನ್ನುವುದೇ ಆ ವಾಸ್ತವ ಸಂಗತಿ.

ರೈತರ ಪ್ರಶ್ನೆ ತನ್ನ ಹಾದಿಯಿಂದ ಸರಿದಿರುವುದರಿಂದ ತನ್ನ ಪ್ರಚೋದನಕಾರಿ ಹಿಂದುತ್ವ ಅಜೆಂಡಾವನ್ನು ಎತ್ತಲು ಪರಿಸ್ಥಿತಿ ಹದಗೊಳ್ಳಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಆದರೆ, ರೈತರ ಪ್ರಶ್ನೆಗಳು ಮಾಯವಾಗುವ ಪ್ರಮೇಯವೇ ಇಲ್ಲ.

repeal-laws&codes 261121
ಕೃಪೆ: ಸಾತ್ವಿಕ್ ಗಡೆ, ದಿ ಹಿಂದು

ಚಳವಳಿಯ ಕಾವು ಇಳಿಯದು

ಯಾಕೆಂದರೆ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದು ಮಾತ್ರವಲ್ಲದೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಶಾಸನಾತ್ಮಕ ಖಾತ್ರಿ ಎರಡನೇ ಜೀವನ್ಮರಣ ಪ್ರಶ್ನೆ ಎಂದು ಎಸ್‌ಕೆಎಂ ಸ್ಪಷ್ಟಪಡಿಸಿದೆ. ರೈತ ಸಮುದಾಯಕ್ಕೆ ಮಾರಕವಾಗಲಿರುವ, ವಿದ್ಯುತ್ ವಿತರಣೆಯ ಖಾಸಗೀಕರಣಕ್ಕೆ ಅನುಕೂಲವಾಗುವ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದೆ ಪಡೆಯಬೇಕೆಂಬುದು ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಗಳ ಮೇಲ್ಲೆ ಚಳವಳಿಯನ್ನು ಹೇಗೆ ಕಟ್ಟಬೇಕು ಎನ್ನುವುದನ್ನು ಎಸ್‌ಕೆಎಂ ನಿರ್ಧರಿಸಲಿದೆ.

ಏನೇ ಇರಲಿ; ಹಿಂದುತ್ವ-ನವ-ಉದಾರವಾದಿ ಸರ್ವಾಧಿಕಾರಶಾಹೀ ಆಳ್ವಿಕೆಯ ವಿರುದ್ಧದ ಹೋರಾಟ ಒಂದು ಹೊಸ ಮಜಲನ್ನು ತಲುಪಿದೆ ಎನ್ನುವುದು ಮಾತ್ರ ಸ್ಪಷ್ಟ. ರೈತ ಚಳವಳಿ ಸಾಧಿಸಿರುವ ಅಭೂತಪೂರ್ವ ಏಕತೆ ಹಾಗೂ ಅದು ದುಡಿಯುವ ವರ್ಗದ ಚಳವಳಿಯೊಂದಿಗೆ ಸಾಧಿಸಿರುವ ಐಕಮತ್ಯದ ಸ್ವರೂಪದಲ್ಲಿ ದೇಶದಲ್ಲಿ ವರ್ಗ ರಾಜಕೀಯ ಮೇಲೆದ್ದು ಬಂದಿದೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನೀಡಿದ್ದ 2020 ನವೆಂಬರ್ 26ರ ಸಾರ್ವತ್ರಿಕ ಮುಷ್ಕರದ ಕರೆಯೊಂದಿಗೆ ಸಾಮೂಹಿಕ ಹೋರಾಟ ಆರಂಭವಾಗಿತ್ತು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ‘ದೆಹಲಿ ಚಲೋ’ ಘೋಷಣೆಯೊಂದಿಗೆ ನಡೆದ ಚಳವಳಿಯೊಂದಿಗೆ ಅದು ಸಮನ್ವಯಗೊಂಡಿತ್ತು. ಆಗಿನಿಂದ, ರೈತರು ಹಾಗೂ ಕಾರ್ಮಿಕರ ಹೋರಾಟಗಳು ಒಂದಕ್ಕೊಂದು ಬೆಸೆದು ನಡೆಯುತ್ತಿವೆ.

ಆಯಾಯ ರಂಗಗಳಲ್ಲಿ ವಿಸ್ತೃತ ಒಗ್ಗಟ್ಟನ್ನು ರೂಪಿಸುವಲ್ಲಿ ಎಡಪಂಥೀಯ ನೇತೃತ್ವದ ಕಿಸಾನ್ ಮತ್ತು ಕಾರ್ಮಿಕ ಸಂಘಟನೆಗಳ ಪಾತ್ರ ಮಹತ್ತರವಾಗಿದೆ. ರೈತ-ಕಾರ್ಮಿಕರ ಜಂಟಿ ಹೋರಾಟಗಳನ್ನು ರೂಪಿಸುವಲ್ಲಿ ಅವು ಮಹತ್ವದ ಪಾತ್ರ ನಿರ್ವಹಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ನಡೆಸಲು ಕರೆ ನೀಡಲಾಗಿರುವ ಎರಡು ದಿನಗಳ ಮುಷ್ಕರದ ಕರೆಯೂ ಸೇರಿದಂತೆ ಮುಂಬರುವ ಹೋರಾಟಗಳಿಗೆ ಕಾರ್ಯಾಚರಣೆಯ ಈ ಸಹಯೋಗವು ನೆರವಾಗಲಿದೆ.

ಸಿಪಿಐ(ಎಂ) ಮತ್ತು ಎಡ ಶಕ್ತಿಗಳ ದೃಷ್ಟಿಯಲ್ಲಿ ಈ ಬೆಳವಣಿಗೆಗಳು ಎಲ್ಲ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸುವ ದಿಸೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಹಿಂದುತ್ವ-ಸರ್ವಾಧಿಕಾರಶಾಹೀ ಆಳ್ವಿಕೆಗೆ ಒಂದು ಪರಿಣಾಮಕಾರೀ ಪರ್ಯಾಯವನ್ನು ಕಟ್ಟಲು ಅದು ನೆರವಾಗಲಿದೆ.

ಅನು: ವಿಶ್ವ

Leave a Reply

Your email address will not be published. Required fields are marked *