ಭ್ರಷ್ಠತೆಯ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಿ-ವಿಧಾನಸಭೆ ವಿಸರ್ಜಿಸಿ ಜನತೆಯಿಂದ ಹೊಸ ಆದೇಶ ಪಡೆಯಿರಿ

ಗುತ್ತಿಗೆದಾರರ ಬಳಿ ಪ್ರತಿ ಗುತ್ತಿಗೆಯ ಸಂದರ್ಭದಲ್ಲೂ ಶೇಕಡಾ 40ಕ್ಕೂ ಅಧಿಕ ಪ್ರಮಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಮತ್ತು ಮಂತ್ರಿಗಳು ಲಂಚವನ್ನು ಪಡೆಯುತ್ತಿದ್ದು ಅದನ್ನು ತಡೆಯುವಂತೆ ಗುತ್ತಿಗೆದಾರರ ಸಂಘದವರು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಗುತ್ತಿಗೆ ಕೆಲಸದಲ್ಲಿ ಗುತ್ತಿಗೆದಾರರಿಂದ ಇವರು ಲಂಚ ಪಡೆಯುತ್ತಿರುವುದು ಹೊಸದೇನಲ್ಲಾ!. ಆದರೇ ಗುತ್ತಿಗೆದಾರರೇ ದೂರು ನೀಡುವಷ್ಠು ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದನ್ನು ಇದು ಎತ್ತಿ ತೋರುತ್ತದೆ. ಈ ಕಾರಣ ಮತ್ತು ಗುತ್ತಿಗೆದಾರರ ಲಾಭಗಳೆಲ್ಲಾ ಸೇರಿದರೇ ಕಾಮಗಾರಿಯೆಂಬುದು ಶೇಕಡಾ 40ಕ್ಕಿಂತಲೂ ಕಡಿಮೆ ಬಂಡವಾಳದಿಂದ ನಡೆಸಲ್ಪಡುತ್ತದೆಂಬುದು ಇದರಿಂದ ಸ್ಪಷ್ಠವಾಗುತ್ತದೆ. ಆದ್ದರಿಂದಲೇ ರಾಜ್ಯದ ರಸ್ತೆ, ಕಟ್ಟಡ ಮತ್ತಿತರೇ ನಿರ್ಮಾಣ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುವುದು ಕಂಡು ಬರುತ್ತದೆ.

ಸರಕಾರಗಳ ಇಂತಹ ದೌರ್ಬಲ್ಯಗಳಿಂದಾಗಿಯೇ ಭಾರೀ ಲೂಟಿಗೊಳಪಡಿಸಲಾದ ಅಕ್ರಮ ಗಣಿಗಾರಿಕೆ ಮುಂತಾದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಸಾರ್ವಜನಿಕ ಸಂಪನ್ಮೂಲಗಳು ಲೂಟಿಗೊಳಪಡುತ್ತಿವೆ.

ಇದೇ ಪರಿಸ್ಥಿತಿ ರಾಜ್ಯ ಸರಕಾರದ ವಿವಿಧ ಇಲಾಖೆಗಳು ಮತ್ತು ಅಭಿವೃದ್ದಿ ನಿಗಮಗಳಲ್ಲಿಯೂ ಕಾಣಬಹುದಾಗಿದೆ. ಬಹುತೇಕ ಇವುಗಳ ಫಲಾನುಭವಿಗಳು ಶಾಸಕರುಗಳ ಹಿಂಬಾಲಕರು ಮತ್ತು ಹಣ ಅಥವಾ ದೊಡ್ಡ ಪ್ರಮಾಣದ ಲಂಚ ನೀಡುವವರಾಗಿದ್ದಾರೆ. ನಿಜ ಫಲಾನುಭವಿಗಳು ಶಾಸಕರುಗಳ ಕೃಪೆಯಿಲ್ಲದೇ, ಲಂಚ ನೀಡಲಾಗದೇ ಕಛೇರಿಗಳ ಸುತ್ತ ಗಿರಕಿ ಹೊಡೆದು ಬೇಸ್ತು ಬೀಳುತ್ತಿದ್ದಾರೆ‌. ಇತ್ತೀಚೆಗೆ ಗಂಗಾ ಕಲ್ಯಾಣ ಯೋಜನೆಯಲ್ಲಿನ ಭಾರಿ ಅವ್ಯವಹಾರ ಮತ್ತು ಭ್ರಷ್ಠಾಚಾರವನ್ನು ಸರಕಾರ ರಚಿಸಿದ ಸದನ ಸಮಿತಿ ಬಹಿರಂಗ ಪಡಿಸಿದೆ.

ಆಸ್ತಿ-ಪಾಸ್ತಿಗಳ ವರ್ಗಾವಣೆ ಮತ್ತೊಂದು ಪಾಲು ವಿಭಾಗದ ಸಂದರ್ಭದಲ್ಲಿಯೂ,ಭೂಮಿಗಳ ಸರ್ವೇ ಮಾಡಿಸುವಾಗಲೂ ರೈತರೂ ಸೇರಿದಂತೆ ನಾಗರೀಕರು ತೀವ್ರ ಆಕ್ರೋಷ ಗೊಂಡಿದ್ದಾರೆ. ಕಂದಾಯ ಇಲಾಖೆಯು ಗಬ್ಬೆದ್ದು ನಾರುತ್ತಿದೆ.ಪೋಲೀಸ್ ಇಲಾಖೆಯು ಸೇರಿದಂತೆ ಇತರೆಲ್ಲಾ ಇಲಾಖೆಗಳು ಇದರಿಂದ ಹೊರತಲ್ಲ.

ಈ ಎಲ್ಲವೂ ದೇಶದ ಮುಂದೆ ರಾಜ್ಯವನ್ನು ತಲೆ ತಗ್ಗಿಸುವಂತೆ ಮಾಡಿವೆ. ಭ್ರಷ್ಠಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ದೂಡಿವೆ. ಈ ಎಲ್ಲಾ ಅನುಚಿತ ಬೆಳವಣಿಗೆಗಳಿಗೆ ಕಾರಣವಾದ ತಮ್ಮ ಸರಕಾರದ ದುರ್ನಡೆಗಳನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ.

ಸದರಿ ಭ್ರಷ್ಠತೆಯ ಮೇಲೆ ನಿಯಂತ್ರಣ ಸಾಧಿಸಲು ತಾವು ಘೋಷಿಸಿದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೈಗೊಳ್ಳಲಾಗುವುದೆಂಬ ತನಿಖೆಯು ನಿರರ್ಥಕವಾದುದಾಗಿದೆ. ಆದ್ದರಿಂದ,

1) ಈ ಕೂಡಲೇ ಸದರಿ ಭ್ರಷ್ಠಾಚಾರದ ವಿಚಾರಗಳನ್ನು ನ್ಯಾಯಾಂಗದ ಸುಪರ್ಧಿಯಲ್ಲಿ ಉನ್ನತ ನ್ಯಾಯಾಂಗದ ತನಿಖೆಗೆ ಒಳಪಡಿಸಬೇಕು.

2) ಈ ಎಲ್ಲದಕ್ಕೂ ತಮ್ಮದೇ ಸರಕಾರ ಮತ್ತು ಮಂತ್ರಿಮಂಡಲವೇ ನೇರ ಹೊಣೆಗಾರನಾಗಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಿ ಜನರಿಂದ ಮರಳಿ ಆದೇಶ ಪಡೆಯಲು ಚುನಾವಣೆಗೆ ಮುಂದಾಗಬೇಕು.

ಈ ಕುರಿತು ಸೂಕ್ತ ಕ್ರಮವಹಿಸುವಂತೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

 ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *