ಮೊಟ್ಟೆಯನ್ನು ತಿನ್ನುವುದು ಅಥವ ತಿನ್ನದಿರುವುದು ಮಕ್ಕಳ ಹಕ್ಕು

ನಿತ್ಯಾನಂದಸ್ವಾಮಿ

‘ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದು ಅವರವರ ಇಷ್ಟಕ್ಕೆ ಬಿಟ್ಟದ್ದು. ತಾವು ಬಯಸಿದ್ದನ್ನು ತಿನ್ನಲು ಜನರಿಗೆ ತಡೆಯೊಡ್ಡಬೇಡಿ. ಕೆಲವರ ಅಹಂ ಸಂತೃಪ್ತಿಗೊಳಿಸಬೇಡಿ’ ಎಂದು ಇತ್ತೀಚೆಗೆ ಗುಜರಾತ್ ಹೈಕೋರ್ಟ್ ಹೇಳಿದೆ. ಶಾಲೆಗಳಲ್ಲಿ ಮಕ್ಕಳಿಗೆ ಊಟದ ಜೊತೆಯಲ್ಲಿ ಮೊಟ್ಟೆ ನೀಡುವುದನ್ನು ವಿರೋದಿಸುತ್ತಿರುವ ನಮ್ಮ ಕೆಲವು ಮಠಾಧೀಶರ ಕಣ್ಣು ತೆರೆಯಿಸಲು ಗುಜಾರಾತ್ ಹೈಕೋರ್ಟ್ ನೀಡಿದ ಸ್ಪಷ್ಟ ಹೇಳಿಕೆ ಸಹಕಾರಿಯಾಗಬಹುದು. ನಮ್ಮ ಆ ಕೆಲವು ಮಠಾಧೀಶರಿಗೆ ಊ.ಮ.ಹೇ. ಬಿಟ್ಟು ಮಾಡಲು ಬೇರೆ ಕೆಲಸ ಇದ್ದಂತೆ ಕಾಣುವುದಿಲ್ಲ. ಆಗಾಗ ಎಚ್ಚರಗೊಂಡು ತಾರ್ಕಿಕವಲ್ಲ ಹೇಳಿಕೆ ನೀಡಿ ಸುದ್ದಿಮಾಡುತ್ತಾರೆ.

ಮಕ್ಕಳಿಗೆ ತಿನ್ನಲು ಮೊಟ್ಟೆ ನೀಡುವ ವಿಷಯದಲ್ಲಿ ಮಠಾಧೀಶರ ಹಸ್ತಕ್ಷೇಪ ಸಲ್ಲದು. ನಮ್ಮ ಮಕ್ಕಳು ಎನ್ನುವ ಕಾರಣಕ್ಕೆ ಅವರ ಹಕ್ಕುಗಳನ್ನು ನಿರಾಕರಿಸುವುದು ಸರಿಯೆ? ಡಿಸೆಂಬರ್ 10 ವಿಶ್ವ ಮಾನವ ಹಕ್ಕುಗಳ ದಿನ. ಅಲ್ಲವೆ? ಮಕ್ಕಳು ಮಾನವರಲ್ಲವೆ? ಅವರಿಗೂ ಹಕ್ಕುಗಳು ಇರಬೇಕಲ್ಲವೆ? ಜಾತಿ ಧರ್ಮದ ಹೆಸರಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವುದರಿಂದ ಮಕ್ಕಳ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಆಗುವುದಿಲ್ಲವೆ?

ಊಟ, ಉಪಹಾರಕ್ಕೆ ಏನಿರಬೇಕು ಎಂಬುದನ್ನು ತಾವೇ ನಿರ್ಧರಿಸುವ ಹಕ್ಕನ್ನು ನಮ್ಮ ಮಕ್ಕಳಿಗೆ ನಾವೇ ಕೊಟ್ಟಿಲ್ಲ. ತಮಗೆ ಬೇಕಾದುದ್ದನ್ನು ಪಡೆದು ತಿನ್ನುವುದು ಅವರಿಗೆ ಸಾಧ್ಯವಿಲ್ಲದ ಮಾತು. ತಮ್ಮ ಮಕ್ಕಳ ಆರೋಗ್ಯಕರ ಬೆಳವಣಿಗೆಯನ್ನು ಬಯಸುವ ಪೋಷಕರು, ತಮ್ಮ ಮಕ್ಕಳನ್ನು ದೇಶಕ್ಕಾಗಿ ಬೆಳೆಸಬಯಸುವವರು ಮಕ್ಕಳಿಗೆ ಆಯ್ಕೆಯ ಹಕ್ಕನ್ನು ಉದಾರವಾಗಿಯೇ ನೀಡಬೇಕು. ಆದರೆ ನಮ್ಮ ದೇಶದಲ್ಲಿ ಶೇ.50 ರಷ್ಟು ಮಕ್ಕಳು ಮತ್ತು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿರುತ್ತಾರೆ. ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅವರಿಗೆ ಶಾಲೆಯಲ್ಲಿ ಮೊಟ್ಟೆ ನೀಡುವ ಕ್ರಮವನ್ನು ನಾವೆಲ್ಲರೂ ಬೆಂಬಲಿಸಬೇಕು.

ಮನೆಯಲ್ಲಿ ಬಹಳಷ್ಟು ಪಾಲಕರಿಗೆ ಊಟದ ಜೊತೆಯಲ್ಲಿ ತಮ್ಮ ಮಕ್ಕಳಿಗೆ ಮೊಟ್ಟೆ ನೀಡುವುದು ಸಾಧ್ಯವಾಗದು. ಶಾಲೆಯಲ್ಲಿ ಅದನ್ನು ಒದಗಿಸಲು ಸಾಧ್ಯವಾದರೆ ಅದು ಅತ್ಯಂತ ಸ್ವಾಗತಾರ್ಹ ವಿಚಾರ. ಮೊಟ್ಟೆ ತಿನ್ನುಲು ಬಯಸುವ ಪ್ರತಿಯೊಂದು ಮಗುವಿಗೂ ಅದು ತಪ್ಪದೆ ಸಿಗುತ್ತಿರಬೇಕು. ಮೊಟ್ಟೆ ತಿನ್ನಬೇಕು ಎಂದು ಒತ್ತಾಯಿಸುವುದು. ಈ ಹಂತದಲ್ಲಿ ಅವರಿಗೆ ಅದು ಸಾಧ್ಯವಾಗದಿರಬಹುದು. ಆದರೆ ಹದ್ದಿನಂತೆ ಬಂದು ಮಕ್ಕಳ ಕೈಯಿಂದ ಅದನ್ನು ಕಿತ್ತುಕೊಳ್ಳಲು ಮಠಾಧೀಶರು ತಮ್ಮ ಕಾವಿ ಪೋಷಾಕನ್ನು ಬಳಸಿ ಬೆದರಿಸಲು ಮುಂದಾಗಬಾರದು. ಒಂದು ಮಗು, ಅದು ಯಾವುದೇ ಜಾತಿ ಕುಟುಂಬದಿಂದ ಬಂದಿರಲಿ, ಅದು ಮೊಟ್ಟೆ ನೀಡಿದರೆ ಅದು ತಿನ್ನಲು ಕಲಿತರೆ ಪಾಲಕರ ತಮ್ಮ ಮಕ್ಕಳ ಕುರಿತಾದ ಆತಂಕ ಪರಿಹಾರವಾಗುವುದು. ಮಕ್ಕಳ ಅಪೌಷ್ಠಿಕತೆಗೆ ದಿನಕ್ಕೊಂದು ಮೊಟ್ಟೆ ಔಷಧಿಯಂತೆ ಕೆಲಸ ಮಾಡುವುದು. ಹೀಗೆ ಎಲ್ಲಾ ಜಾತಿ ಧರ್ಮಗಳ ಮಕ್ಕಳು ಆರೋಗ್ಯಕರವಾಗಿ ಬೆಳೆದು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಲು ಸಮರ್ಥರಾಗುವರು. ಅಪೌಷ್ಟಿಕತೆಗೆ ಬಲಿಯಾದ ಮಕ್ಕಳು ಕೋವಿಡ್ ಅಂತಹ ಸಾಂಕ್ರಾಮಿಕಕ್ಕೆ ಸುಲಭವಾಗಿ ಸಿಕ್ಕಿಹಾಕಿಕೊಂಡು ಪಾಲಕರಿಗೂ, ದೇಶಕ್ಕೂ ಸಮಸ್ಯೆಯಾಗಿ, ಆರ್ಥಿಕ ಹೊರೆಯಾಗಿ ಪರಿಣಮಿಸುವರು.

ಇಂದು ನಮ್ಮ ದೇಶದಲ್ಲಿ ನಮ್ಮ ಆಹಾರ ಪದ್ಧತಿಗಳು ದ್ವೇಷದ ರಾಜಕಾರಣಕ್ಕೆ ಬಲಿಯಾಗುತ್ತಿವೆ. ಕೆಲವರು ತಮ್ಮ ಆಹಾರ ಪದ್ಧತಿಯೇ ಶ್ರೇಷ್ಠ ಎಂಬ ಮನೋಭಾವ ಉಳ್ಳವರಾಗಿದ್ದು ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕುತ್ತಿರುತ್ತಾರೆ. ಯಾವ ಆಹಾರವೂ ಮೇಲಲ್ಲ, ಯಾವುದೂ ಕೀಳಲ್ಲ. ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಮೊಟ್ಟೆ ಪರಿಪೂರ್ಣ ಆಹಾರ ಎಂದು ದೇಶ, ವಿದೇಶಗಳ ತಜ್ಞರು ಒಪ್ಪಿಕೊಂಡಿದ್ದಾರೆ.

ಬುದ್ಧ ಭಾರತ ಕಂಡ ಮಹಾನ್ ಚಿಂತಕ. ಆತ ಅಹಿಂಸೆಯನ್ನು ಬಲವಾಗಿ ಪ್ರತಿಪಾದಿಸಿದರೂ ಸಸ್ಯಹಾರವನ್ನು ಪ್ರತಿಪಾದಿಸಲಿಲ್ಲ. ಆತನ ಭಕ್ತರು, ಬೌಧ ಭಿಕ್ಷಗಳು ಮಾಂಸಹಾರವನ್ನೇ ಸೇವಿಸುತ್ತಾರೆ. ಅದಕ್ಕೆ ಚಾರಿತ್ರಿಕ ಕಾರಣಗಳು ಇರಬಹುದು. ನಮ್ಮ ದೇಶದ ಜನ ತಮ್ಮ ಆಹಾರ ಪದ್ಧತಿಗಳನ್ನು ಬೆಳೆಸಿಕೊಂಡು ಬಂದಿದ್ದಾರೆ ಬದಲಾಯಿಸಿಕೊಂಡಿದ್ದಾರೆ. ಬೇರೆಯವರಿಂದ ಪಡೆದುಕೊಂಡಿದ್ದಾರೆ. ಈ ಕುರಿತು ಪೂರ್ವಾಗ್ರಹಗಳಿಗೆ ಅವಕಾಶ ಇರಬಾರದು. ನಮಗೆ ದ್ವೇಷ ಇರಬೇಕಾಗಿಲ್ಲ. ಆಹಾರ ಪದ್ದತಿಗಳು ಬೇರೆ ಬೇರೆಯಾಗಿದ್ದರೂ ನಾವೆಲ್ಲರೂ ಅನ್ಯೋನ್ಯವಾಗಿ ಬದುಕಲು ಸಾಧ್ಯವಿದೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಮಾತ್ರ ಚೌಕಾಸಿ ಸಲ್ಲದು. ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟದ ಜೊತೆಯಲ್ಲಿ ಮೊಟ್ಟೆ ನೀಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬಾರದು. ಇಲ್ಲಿ ಪಾಲಕರ ಇಷ್ಟ ಮುಖ್ಯವಲ್ಲ. ಮಕ್ಕಳ ಬಯಕೆಯೇ ಮುಖ್ಯ.

Leave a Reply

Your email address will not be published. Required fields are marked *