ಕರ್ನಾಟಕದ ಉದ್ಯೋಗ ಪರಿಸ್ಥಿತಿ: 2018-21

ಭಾರತದ ಪ್ರಮುಖ ಎಡಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ 23ನೇ ಮಹಾಧಿವೇಶನ ಎಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಸಮ್ಮೇಳನ ಜನವರಿ 2 ರಿಂದ 4 ರ ವರೆಗೆ ಗಂಗಾವತಿಯಲ್ಲಿ ನಡೆಯಲಿದೆ. ಕರ್ನಾಟಕದ ಜನತೆಯ, ಅದರಲ್ಲೂ ಕಾರ್ಮಿಕರ, ರೈತರ ಮತ್ತು ಇತರ ದುಡಿಯುವ ಜನವಿಭಾಗಗಳ ಹಿತರಕ್ಷಣೆಯಲ್ಲಿ ಕಳೆದ ಮೂರು ವರ್ಷಗಳ ಅನುಭವಗಳು ಮತ್ತು ಅದರ ಬೆಳಕಿನಲ್ಲಿ ಮುನ್ನಡೆಯ ದಾರಿಯನ್ನು ರೂಪಿಸುವುದು ಈ ಸಮ್ಮೇಳನದ ಪ್ರಮುಖ ಕಾರ್ಯಸೂಚಿ. ದುಡಿಯುವ ಜನವಿಭಾಗಗಳ ನಡುವೆ ಕೆಲಸ ಮಾಡುತ್ತಿರುವವರ ಪ್ರತಿನಿಧಿಗಳು ಇದನ್ನು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಮುಖಂಡತ್ವ ಸಿದ್ಧಪಡಿಸಿರುವ ಕರಡು ವರದಿಯ ಕೆಲವು ಅಂಶಗಳನ್ನು ಇಲ್ಲಿ ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಆವರ್ತಕ ಕಾರ್ಮಿಕ ಬಲದ ಸಮೀಕ್ಷೆ ೨೦೧೮-೧೯ ರ ವಾರ್ಷಿಕ ವರದಿಯಂತೆ ರಾಜ್ಯದಲ್ಲಿ ಕಾರ್ಮಿಕ ಬಲದ ಭಾಗವಹಿಸಿಕೆ (LFPR) ದರವು ೫೧.೨ ಶೇಕಡವಾಗಿದೆ. ಅಂದರೆ ಉದ್ಯೋಗ ಮಾಡುವ ವಯೋಮಾನದ ೧೫ ವರ್ಷ ವಯಸ್ಸಿನ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಉದ್ಯೋಗ ಮಾಡುತ್ತಾ ಅಥವಾ ಅರೆಸುತ್ತಾ ಸಕ್ರಿಯರಾಗಿದ್ದಾರೆ. ಇದು ಗ್ರಾಮೀಣ ಪ್ರದೇಶದಲ್ಲಿ ೫೨.೫ ರಷ್ಟಿದ್ದರೆ, ನಗರ ಪ್ರದೇಶದಲ್ಲಿ ೪೯.೧ ರಷ್ಟಿದೆ. ಮಹಿಳೆಯರ ಪ್ರಮಾಣ ನಗರದಲ್ಲಿ ೨೦.೫ ಮತ್ತು ಗ್ರಾಮೀಣದಲ್ಲಿ ೨೭.೬ ಹಾಗೂ ಒಟ್ಟಾರೆ ೨೪.೯ ರಷ್ಟಿದೆ.

ಕಾರ್ಮಿಕ ಜನಸಂಖ್ಯೆ ಪ್ರಮಾಣ (WPR) ಒಟ್ಟಾರೆ ೪೯.೩ ನಗರದಲ್ಲಿ ೪೬.೫ ಮತ್ತು ಗ್ರಾಮೀಣದಲ್ಲಿ ೫೧.೧ ಶೇಕಡವಾಗಿದೆ. ಅಂದರೆ ಪ್ರತಿ ಸಾವಿರ ಜನರಲ್ಲಿ ೪೯೩ ಜನ ಉದ್ಯೋಗ ಹೊಂದಿದ್ದಾರೆ. ಒಟ್ಟಾರೆ ಪ್ರತಿ ಸಾವಿರ ಮಹಿಳೆಯರಲ್ಲಿ ೨೪೨ ಮಹಿಳೆಯರು ಮಾತ್ರ ಉದ್ಯೋಗ ಹೊಂದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ೨೭೨ ಮತ್ತು ನಗರ ಪ್ರದೇಶಗಳಲ್ಲಿ ೧೯೩ ಮಹಿಳೆಯರು ಉದ್ಯೋಗ ಹೊಂದಿದ್ದಾರೆ.

ಜನರು ತೊಡಗಿಕೊಂಡಿರುವ ಸಾಮಾನ್ಯ ಪ್ರಧಾನ ಚಟುವಟಿಕೆ ಮತ್ತು ಅಂಗಚಟುವಟಿಕೆ ಆಧಾರದಂತೆ ಉದ್ಯೋಗ ಸ್ಥಿತಿ ಆಧಾರಿತ ಪ್ರತಿ ನೂರು ಕಾರ್ಮಿಕರಲ್ಲಿ ೪೬ ಸ್ವಯಂ ಉದ್ಯೋಗಿಗಳು, ೨೭ ಕೂಲಿ ವೇತನ ಉದ್ಯೋಗಿಗಳು ಮತ್ತು ೨೭ ಸಾಮಾನ್ಯ ಉದ್ಯೋಗಿಗಳಾಗಿದ್ದಾರೆ.

Udyoga paristiti kostka 01

ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿನ ಉದ್ಯೋಗ

ರಾಜ್ಯದ ಸಂಘಟಿತ ವಲಯದಲ್ಲಿನ ಉದ್ಯೋಗ ಪ್ರಮಾಣವು ೨೦೨೦ ಜೂನ್ ಅಂತ್ಯಕ್ಕೆ ೨೪.೧೧೯ ಲಕ್ಷಗಳಿದ್ದು, ಸಾರ್ವಜನಿಕ ವಲಯದ ಉದ್ಯೋಗ ಕ್ಷೇತ್ರವು ೧೦.೩೦ ಲಕ್ಷ (೪೨.೭೨ ಶೇಕಡ)ಮತ್ತು ಖಾಸಗಿ ಕ್ಷೇತ್ರವು ೧೩.೮೧ ಲಕ್ಷ (೫೭.೨೮ ಶೇಕಡ) ರಷ್ಟು ಗಾತ್ರವನ್ನು ಹೊಂದಿದೆ. ಸಾರ್ವಜನಿಕ ವಲಯದಲ್ಲಿ ೦.೧೪ ರಷ್ಟು ಇಳಿಕೆಯಾಗಿದ್ದರೆ ಖಾಸಗಿ ವಲಯದಲ್ಲಿ ೦.೨೬ ರಷ್ಟು ಏರಿಕೆಯಾಗಿದೆ.

ನಿರುದ್ಯೋಗ ಪರಿಸ್ಥಿತಿ

ರಾಜ್ಯದಲ್ಲಿ ಪ್ರತಿ ಒಂದು ಸಾವಿರ ಜನರಲ್ಲಿ ಒಟ್ಟಾರೆ ೩೬ ಜನರು ನಿರುದ್ಯೋಗಿಗಳಾಗಿದ್ದರೆ, ನಗರ ಪ್ರದೇಶದಲ್ಲಿ ೫೧ ಜನರು ಮತ್ತು ಗ್ರಾಮೀಣ ಪ್ರದೇಶದಲ್ಲಿ ೨೭ ಜನರು ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ಸಾವಿರ ಮಹಿಳೆಯರಲ್ಲಿ ಒಟ್ಟಾರೆ ೨೮ ಮಹಿಳೆಯರು ನಿರುದ್ಯೋಗಿಗಳಾಗಿದ್ದರೆ, ನಗರದಲ್ಲಿ ೬೧ ಮತ್ತು ಗ್ರಾಮೀಣದಲ್ಲಿ ೧೪ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ ಎಂದು ೨೦೧೮-೧೯ ವಾರ್ಷಿಕ ವರದಿ ಗುರುತಿಸಿದೆ.

ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೊಂದಾಯಿಸಿದವರ ಸಂಖ್ಯೆಯು ನವೆಂಬರ್ ೨೦೨೦ ರಲ್ಲಿ ೩.೨೧ ಲಕ್ಷ ಇದ್ದರೆ, ಮಾರ್ಚ್ ೨೦೧೯ ರಲ್ಲಿ ೩.೪೩ ಲಕ್ಷ ನೊಂದಾಯಿಸಿದ್ದರು. ನವೆಂಬರ್ ೨೦೨೦ ರಲ್ಲಿ ೩೫೦೫ ಸ್ನಾತಕೋತ್ತರ ಪದವೀಧರರು, ೪೫೦೪೮ ಪದವೀಧರರು, ೧೧೮೩೮ ಡಿಪ್ಲಮೋ ಹೊಂದಿದವರು, ೪೨೨೭೨ ಐಟಿಐ ತರಬೇತಿ ಮತ್ತು ಇತರೆ ಪ್ರಶಸ್ತಿ ಪತ್ರ ಹೊಂದಿದವರು, ೧೮೯೫೩೯ ಹತ್ತನೇ ತರಗತಿ ತೇರ್ಗಡೆಯಾದವರು, ೨೮೮೯೬ ಹತ್ತನೇ ತರಗತಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿದವರು ನೋಂದಾಯಿಸಿಕೊಂಡಿದ್ದಾರೆ.

ಈ ಕಾಲಾವಧಿಯಲ್ಲಿ ಅಧಿಸೂಚಿತ ಹುದ್ದೆಗಳು ನಿರಂತರವಾಗಿ ಇಳಿಕೆಯಾಗಿದ್ದರೆ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳಗಳ ಮೂಲಕ ಆಯ್ಕೆಯಾದವರು ಒಳಗೊಂಡು ಉದ್ಯೋಗ ಪಡೆದವರ ಸಂಖ್ಯೆ ಏರಿಳಿತವನ್ನು ಈ ಕೆಳಗಿನ ಕೋಷ್ಠಕ-೨ರಲ್ಲಿನ ಅಂಕಿ ಅಂಶಗಳಲ್ಲಿ ಕಾಣಬಹುದು.

Udyoga paristiti kostka 02

ರಾಜ್ಯದಲ್ಲಿ ೧೮ ರಿಂದ ೫೦ ವರ್ಷ ವಯಸ್ಸಿನ ಒಟ್ಟು ೧೦,೭೧,೦೩೮ ಉದ್ಯೋಗ ಆಕಾಂಕ್ಷಿಗಳು (೪,೩೬,೪೧೫ ಮಹಿಳೆಯರು ಮತ್ತು ೬,೩೪,೬೨೩ ಪುರುಷರು), ನವೆಂಬರ್ ೨೦೨೦ರ ಅಂತ್ಯಕ್ಕೆ ಕೌಶಲ್ಯ ಕರ್ನಾಟಕ ಡಾಟ್ ಕಾಮ್‌ನಲ್ಲಿ ನೋಂದಣಿಯಾಗಿದ್ದಾರೆ. ಅವರಲ್ಲಿ ೨.೫ ಲಕ್ಷ ಪರಿಶಿಷ್ಟ ಜಾತಿ ಮತ್ತು ೮೭,೮೧೭ ಪರಿಶಿಷ್ಟ ಪಂಗಡ ಹಾಗೂ ೧೧,೩೦೩ ಅಂಗವಿಕಲರು ನೋಂದಾಯಿಸಿಕೊಂಡಿದ್ದಾರೆ.

ಕೋವಿಡ್ ಲಾಕ್ಡೌನ್ ಪರಿಣಾಮವಾಗಿ ದೊಡ್ಡ ಪ್ರಮಾಣದ ಉದ್ಯೋಗ ನಾಶವುಂಟಾಗಿದೆ. ಲಾಕ್ಡೌನ್‌ನಿಂದಾಗಿ ಒಂದೆರೆಡು ತಿಂಗಳಲ್ಲೆ ೬ ಶೇಕಡ ವಿದ್ದ ನಿರುದ್ಯೋಗ ದರವು ೨೦ ಶೇಕಡಕ್ಕೆ ಏರಿಕೆಯಾಗಿರುವುದು ವರದಿಯಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಏಕಾನಮಿ (ಅಒIಇ) ನಡೆಸಿದ ಸರ್ವೆ ಪ್ರಕಾರ ೨೦೨೦ ಏಪ್ರಿಲ್‌ನಲ್ಲಿ ನಿರುದ್ಯೋಗ ದರವು ೨೬.೩ ಶೇಕಡವಾರು ಅಂಶ ಏರಿಕೆಯಾಗಿ ೨೯.೮ ಶೇಕಡಕ್ಕೆ ತಲುಪಿದೆಯಂತೆ. ರಾಷ್ಟ್ರೀಯ ನಿರುದ್ಯೋಗ ಸರಾಸರಿಯು ೨೩.೫ ಶೇಕಡವಿದ್ದಾಗ ರಾಜ್ಯದ ನಿರುದ್ಯೋಗ ದರವು ೨೯.೮ ರಷ್ಟಕ್ಕೆ ಏರಿಕೆಯಾಗುವ ಮೂಲಕ ಏಪ್ರಿಲ್ ೨೦೧೯ ರಲ್ಲಿ ಅತ್ಯಂತ ಕಡಿಮೆಯಿದ್ದ ೦.೫ ಶೇಕಡದಿಂದ ಪ್ರಸಕ್ತ ಪರಿಸ್ಥಿತಿ ತಲುಪಿದೆ ಎಂದು ವರದಿಯು ಗುರುತಿಸಿದೆ.

೨೦೧೯-೨೦ ರಲ್ಲಿದ್ದ ೮೦,೩೭೯ ಅತಿಸಣ್ಣ ಕೈಗಾರಿಕೆಗಳ ಸಂಖ್ಯೆ ೨೦೨೦-೨೧ ರಲ್ಲಿ ೬೭,೦೩೧ಕ್ಕೆ ಕುಸಿದಿದ್ದು, ಕಾರ್ಮಿಕರ ಸಂಖ್ಯೆಯು ೩,೮೯,೨೪೪ ರಿಂದ ೨,೬೬,೭೦೪ಕ್ಕೆ ಕುಸಿದಿದೆ. ಸಣ್ಣ ಕೈಗಾರಿಕೆಗಳ ಸಂಖ್ಯೆ ೧೬,೦೬೯ ರಿಂದ ೧೪,೨೭೬ಕ್ಕೆ ಕುಸಿದು ಕಾರ್ಮಿಕರ ಸಂಖ್ಯೆಯು ೨,೫೭,೪೦೮ ರಿಂದ ೨,೦೮,೨೭೩ ಕ್ಕೆ ಕುಸಿದಿದೆ. ಅಂದರೆ ರಾಜ್ಯದ ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಒಟ್ಟು ೧,೭೧,೬೩೯ ಕಾರ್ಮಿಕರು ಕಡಿಮೆಯಾಗಿದ್ದಾರೆ,   ನಿಜಾರ್ಥದಲ್ಲಿ ಉದ್ಯೋಗ ಕಳೆದು ಕೊಂಡಿದ್ದಾರೆ. ೨೦೧೭-೧೮ ರಲ್ಲಿ ಅತಿಸಣ್ಣ, ಸಣ್ಣ, ಮದ್ಯಮ ಉದ್ಯಮಗಳಲ್ಲಿ ಪ್ರತಿ ಉದ್ಯಮಕ್ಕೆ ೯.೦೮ ಉದ್ಯೋಗಗಳಿದ್ದರೆ ೨೦೨೦-೨೧ ರಲ್ಲಿ ಪ್ರತಿ ಉದ್ಯಮಕ್ಕೆ ಕೇವಲ ೬.೬ ಉದ್ಯೋಗಗಳಿವೆ.

Udyoga paristiti kostka 03

ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ವರದಿಯಂತೆ ಒಟ್ಟು ೬೫.೪೫ ಲಕ್ಷ ಅಂತರರಾಜ್ಯ ವಲಸೆ ಕಾರ್ಮಿಕರಿದ್ದಾರೆ. ಕೋವಿಡ್ ಲಾಕ್ಡೌನ್ ಕಾರಣ ಮೊದಲನೆ ಅಲೆಯ ವೇಳೆ ತಮ್ಮ ತವರು ರಾಜ್ಯಗಳಿಗೆ ಮರು ವಲಸೆ ಹೋಗಿರುವ ಕಾರ್ಮಿಕರು ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಹಿಂತಿರುಗಿಲ್ಲ. ಅದೇ ವೇಳೆ ನಗರ ಪ್ರದೇಶಗಳಲ್ಲಿದ್ದ ಅಸಂಘಟಿತ ಕಾರ್ಮಿಕರು ಗ್ರಾಮಾಂತರ ಪ್ರದೇಶಗಳಿಗೆ ವಾಪಸ್ಸಾಗಿದ್ದವರು, ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಹಿಂತಿರುಗಿಲ್ಲ.

ಉದ್ಯೋಗ ಖಾತ್ರಿ ಉದ್ಯೋಗದ ವಾಸ್ತವತೆ

ಗ್ರಾಮಾಂತರ ಪ್ರದೇಶಗಳಲ್ಲೂ ಪೂರ್ಣ ರೀತಿಯಲ್ಲಿ ಇವರಿಗೆಲ್ಲಾ ಉದ್ಯೋಗ ಸೃಜಿಸುವ ಯತ್ನವನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕೈಗೊಳ್ಳಲಿಲ್ಲ. ಕೆಲಸದ ದಿನಗಳನ್ನು ವಾರ್ಷಿಕ ೨೦೦ ದಿನಗಳಿಗೆ ಹೆಚ್ಚಿಸಿ ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಒದಗಿಸಬೇಕು, ನಗರ ಪ್ರದೇಶಗಳಿಗೂ ವಿಸ್ತರಿಸಬೇಕೆಂಬ ಬೇಡಿಕೆ ಪರಿಗಣಿಸಲಿಲ್ಲ. ಪರಿಣಾಮವಾಗಿ ೧೦೦ ದಿನಗಳ ಉದ್ಯೋಗ ಖಾತ್ರಿ ಕೆಲಸಗಳ ಶಾಸನಬದ್ಧ ಹಕ್ಕನ್ನು ಖಾತ್ರಿಪಡಿಸುವ ಬದಲು ಪ್ರತಿಕುಟಂಬಕ್ಕೆ ೨೦೧೯-೨೦ರಲ್ಲಿ ೪೨ ಮಾನವ ದಿನಗಳ ಕೆಲಸವನ್ನು ಒದಗಿಸಿದ್ದರೆ. ೨೦೨೦-೨೧ ರಲ್ಲಿ ಡಿಸೆಂಬರ್ ೨೦೨೦ರ ಅಂತ್ಯಕ್ಕೆ ಸರಾಸರಿ ೪೨.೩೩ ಮಾನವ ದಿನಗಳ ಕೆಲಸಗಳನ್ನು ಸರ್ಕಾರ ಒದಗಿಸಿದೆ.

೨೦೧೯-೨೦ ರಲ್ಲಿ ಲಭ್ಯವಿದ್ದ ೬೦೪೪.೭೧ ಕೋಟಿ ರೂಗಳ ಅನುದಾನದಲ್ಲಿ ೪೭೪೮.೧೪ ಕೋಟಿ ರೂಗಳ ವೆಚ್ಚದೊಂದಿಗೆ ೧೧೧೯.೧೩ ಲಕ್ಷ ಮಾನವ ದಿನಗಳನ್ನು ಸೃಜಿಸಿ ೨೨.೩೮ ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಆದರೆ ೨೦೨೦-೨೧ ರಲ್ಲಿ ಒದಗಿಸಿದ ಅನುದಾನವನ್ನು ೪೮೭೭.೬೭ ಕೋಟಿ ರೂಗಳಿಗೆ ಇಳಿಸಿ, ಡಿಸೆಂಬರ್ ೨೦೨೦ ರ ಅಂತ್ಯದ ವೇಳೆಗೆ ೪೧೯೭.೯೦ ಕೋಟಿ ರೂಗಳ ವೆಚ್ಚದೊಂದಿಗೆ ಕೇವಲ ೧೧೪೬.೮೪ ಲಕ್ಷ ಮಾನವ ದಿನಗಳನ್ನು ಸೃಜಿಸಿ ೨೯.೩೪ ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ೨೦೧೯-೨೦ರಲ್ಲಿ ೨೧೨೪೧ ಕುಟುಂಬಗಳು ೧೦೦ ದಿನಗಳ ಉದ್ಯೋಗ ಪೂರೈಸಿದ್ದರೆ ೨೦೨೦-೨೧ ರಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ೩೦೦೨೮ ಕುಟುಂಬಗಳು ೧೦೦ ದಿನಗಳ ಉದ್ಯೋಗ ಪೂರೈಸಿವೆ ಎಂಬ ಅಂಕಿ ಅಂಶವು ಕೋವಿಡ್ ಮತ್ತು ಲಾಕ್ಡೌನ್‌ನಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ನಗರಗಳಿಂದ ಹಿಂತಿರುಗಿದ್ದ ಅಸಂಘಟಿತರಿಗೆ ಉದ್ಯೋಗ ಒದಗಿಸದೆ ಬಿಜೆಪಿ ಸರ್ಕಾರ ವಂಚಿಸಿದೆ ಎಂಬುದನ್ನು ತೋರುತ್ತದೆ. ಪ್ರತಿ ಕುಟುಂಬಕ್ಕೆ ನೀಡಲಾದ ಕೆಲಸದ ಸರಾಸರಿ ಮಾನವ ದಿನಗಳು ಅಲ್ಪಪ್ರಮಾಣದಲ್ಲಿ ಏರಿಕೆಯಾಗಿರುವಾಗ ಉದ್ಯೋಗ ಚೀಟಿ ಪಡೆದ ಕುಟುಂಬಗಳ ಸಂಖ್ಯೆ ೭.೪೪ ಲಕ್ಷ ಹೆಚ್ಚಳವಾಗಿರುವುದು ಗ್ರಾಮೀಣ ಸಂಕಷ್ಟವನ್ನು ಬಿಂಬಿಸುತ್ತದೆ.

Udyoga paristiti kostka 04

ಉದ್ಯೋಗದ ಹೊಸ ಸ್ವರೂಪ

ಡಿಜಿಟಲ್ ಲೇಬರ್ ಪ್ಲಾಟ್‌ಫಾರ್ಮ್ (ಗಿಗ್ ಆರ್ಥಿಕತೆ) ಇತ್ತೀಚಿನ ಅವಧಿಯಲ್ಲಿ ರೂಪಾಂತರವಾಗುತ್ತಿರುವ ಅತ್ಯಂತ ಮಹತ್ವದ ಉದ್ಯೋಗ ಸ್ವರೂಪಗಳಲ್ಲಿ ಒಂದೆಂದರೆ, ’ಡಿಜಿಟಲ್ ಲೇಬರ್ ಪ್ಲಾಟ್‌ಫಾರ್ಮ್’ಗಳ ಬೆಳವಣಿಗೆ. ಇದರಲ್ಲಿ ಎರಡು ರೀತಿಗಳಿವೆ: ಒಂದು ವೆಬ್ ಆಧಾರಿತ (ಕ್ರೌಡ್ ವರ್ಕ್), ಮತ್ತೊಂದು ಸ್ಥಳ-ಆಧಾರಿತ ಅಪ್ಲಿಕೇಶನ್ಸ್ (ಆಪ್ಸ್). ಇಲ್ಲಿ ಕೆಲಸದ ವಿಧಾನಗಳು ಹಿಂದಿನಿಂದ ಬಂದ ಹಲವಾರು ಕೆಲಸದ ವಿಧಾನಗಳ ರೀತಿಯಲ್ಲೇ ಕಾಣುತ್ತವೆ. ಆದರೆ ಆ ಕೆಲಸಗಳನ್ನು ಡಿಜಿಟಲ್ ಸಾಧನಗಳೆಂಬ ಮಧ್ಯವರ್ತಿಗಳ ಮೂಲಕ ನಿರ್ವಹಿಸುವ ವಿಧಾನಗಳು ಮಾತ್ರ ತಂತ್ರಜ್ಞಾನದ ಬೆಳವಣಿಗೆಯ ಉತ್ಪನ್ನವಾಗಿದ್ದು, ಅವೇ ಡಿಜಿಟಲ್ ಲೇಬರ್ ಪ್ಲಾಟ್‌ಫಾರ್ಮ್‌ಗಳಾಗಿವೆ.

ವೆಬ್ ಆಧಾರಿತ ಎಂದರೆ ಭೌಗೋಳಿಕವಾಗಿ ಚದುರಿಕೊಂಡಿರುವ ಸಮೂಹಗಳಿಗೆ ಬಹಿರಂಗ ಕರೆಯ ಮೂಲಕ ಕೆಲಸವನ್ನು ಹೊರಗುತ್ತಿಗೆ ನೀಡುವುದು.  ಒಂದು ಕಂಪ್ಯೂಟರ್ ಅಥವಾ ಇಂಟರ್‌ನೆಟ್ ಸಂಪರ್ಕ ಬಳಸಿ ಜಗತ್ತಿನ ಯಾವುದೇ ಮೂಲೆಯಿಂದಾದರೂ ಮಾಡಬಹುದಾದ ಬಹುತೇಕ ಕ್ಲೆರಿಕಲ್ ಕೆಲಸಗಳನ್ನು – ಇಮೇಜ್ ಐಡೆಂಟಿಫಿಕೇಷನ್, ಟ್ರಾನ್ಸ್‌ಕ್ರಿಪ್ಶನ್ ಮತ್ತು ಅನ್ನೋಟೇಶನ್, ಕಂಟೆಂಟ್ ಮಾಡರೇಷನ್, ಡೇಟಾ ಕಲೆಕ್ಷನ್ ಮತ್ತು ಪ್ರೊಸೆಸಿಂಗ್, ಆಡಿಯೋ ಮತ್ತು ವಿಡಿಯೋ ಟ್ರಾನ್ಸ್‌ಕ್ರಿಪ್ಶನ್, ಮುಂತಾದವುಗಳನ್ನು – ಇದು ಒಳಗೊಂಡಿದೆ. ಕೆಲಸವನ್ನು ನೀಡುವವರು ಈ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ ತಮಗೆ ಆಗಬೇಕಾದ ಕೆಲಸವನ್ನು ಅದರಲ್ಲಿ ಹಾಕುತ್ತಾರೆ. ಇದರಲ್ಲಿ ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡುವ ಕಾರ್ಮಿಕರಿಗೆ ನಿಗದಿಪಡಿಸಿದ ಮೊತ್ತವನ್ನು ನೀಡಲಾಗುತ್ತದೆ. ಈ ಕಾರ್ಮಿಕರಿಗೆ ಕಾಯ್ದೆಗಳ ಮತ್ತು ಸಾಮಾಜಿಕ ಸುರಕ್ಷತೆಗಳ ಯಾವುದೇ ರಕ್ಷಣೆ ಇವುಗಳಲ್ಲಿ ಇಲ್ಲ. ಮಾಡಿದ ಕೆಲಸಕ್ಕೆ ಹೇಗೆ ಮತ್ತು ಎಲ್ಲಿ ಹಣ ನೀಡಲಾಗುವುದು, ಇವರ ಕೆಲಸವನ್ನು ಹೇಗೆ ಮೌಲ್ಯಮಾಪನ ಮಾಡಲಾಗುವುದು, ಸಮಸ್ಯೆಯಾದಲ್ಲಿ ಕಾರ್ಮಿಕರಿಗೆ ಪರಿಹಾರದ ದಾರಿ ಏನಿದೆ, ಮುಂತಾದ ಅಂಶಗಳು ಇಲ್ಲದ ಷರತ್ತುಗಳಿಗೆ ಬಹುತೇಕ ಕಾರ್ಮಿಕರು ಒಳಪಟ್ಟಿರುತ್ತದೆ. ಇದರಿಂದ ಕಾರ್ಮಿಕರು ಅಪಾರವಾದ ಶೋಷಣೆಗೆ ಒಳಗಾಗುತ್ತಿದ್ದಾರೆ.

ಸ್ಥಳ-ಆಧಾರಿತ ಅಪ್ಲಿಕೇಶನ್ಸ್, ಅಂದರೆ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ವ್ಯಕ್ತಿಗಳಿಗೆ ಕೆಲಸವನ್ನು ಹಂಚುವುದು. ವಸತಿ, ಸಾರಿಗೆ, ಎಲ್ಲಾ ರೀತಿಯ ವಸ್ತುಗಳ ಡೆಲಿವರಿ, ಗೃಹ ಕೆಲಸಗಳು ಮುಂತಾದ ಕೆಲಸಗಳನ್ನು ಇದು ಒಳಗೊಂಡಿದೆ. ಬೆಂಗಳೂರು ಮತ್ತು ಇತರ ನಗರಗಳಲ್ಲಿ ಇದನ್ನು ವ್ಯಾಪಕವಾಗಿ ಬಹಿರಂಗವಾಗಿ ಕಾಣಬಹುದು. ಅಮೇಜಾನ್, ಫ್ಲಿಪ್‌ಕಾರ್ಟ್, ಊಬರ್, ಓಲಾ, ಸ್ವಿಗ್ಗಿ, ಜೊಮಾಟೊ, ಬಿಗ್ ಬ್ಯಾಸ್ಕೆಟ್, ಹೀಗೆ ನೂರಾರು ಕಂಪನಿಗಳಲ್ಲಿ ಕಾರ್ಮಿಕರು ಗಂಟೆಗಳ ಆಧಾರದಲ್ಲಿ, ಡೆಲಿವರಿಯ ಆಧಾರದಲ್ಲಿ, ಟ್ರಿಪ್‌ಗಳ ಆಧಾರದಲ್ಲಿ ಕೆಲಸ ಮಾಡುವುದನ್ನು ಕಾಣಬಹುದು. ಈ ಆಪ್ ಆಧಾರಿತ ಕೆಲಸಗಳು ಕಾರ್ಮಿಕರ ಕೆಲಸದ ಸ್ವರೂಪವನ್ನೇ ಬದಲಾಯಿಸಿಬಿಟ್ಟಿದೆ. ಎಲ್ಲಾ ಕೆಲಸಗಳನ್ನೂ ಅತಂತ್ರಗೊಳಿಸುತ್ತಾ, ಅಸಂಘಟಿತಗೊಳಿಸುತ್ತಾ ಇದು ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲೂ ಇಂತಹ ತಂತ್ರಜ್ಞಾನಗಳ ಬೆಳವಣಿಗೆ ಹೆಚ್ಚಾಗಲಿದೆ. ಹೀಗಾಗಿ ಇಂತಹ ಕ್ಷೇತ್ರಗಳಿಗೆ ಸಂಬಂಧಿಸಿ ಇರುವ ಕಾಯ್ದೆ ಮತ್ತು ಕಾನೂನುಗಳನ್ನು ಪುನರ್ ರೂಪಿಸಲು ಮತ್ತು ನೂತನವಾದ ಕಾನೂನುಗಳನ್ನು ಜಾರಿಗೆ ತರುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಲೇಬರ್ ಪ್ಲಾಟ್‌ಫಾರ್ಮ್‌ಗಳ ವಿಧಾನವನ್ನು ಅರ್ಥ ಮಾಡಿಕೊಂಡು ಕಾರ್ಮಿಕರನ್ನು ಸಂಘಟಿಸಲು ಮುಂದಾಗಬೇಕಾಗಿದೆ. ಗಿಗ್ ಕಾರ್ಮಿಕರಿಗೆಂದು ರಾಜ್ಯ ಸರ್ಕಾರವು ನೂತನ ಕಾನೂನು ರೂಪಿಸಲು ನಡೆಸಿದ ಯತ್ನಗಳನ್ನು ಕಾರ್ಮಿಕ ಕಾನೂನು ಸಂಹಿತೀಕರಣದ ನಂತರ ಕೈಬಿಟ್ಟಿದೆ.

ಕಾರ್ಮಿಕರ ಪರಿಸ್ಥಿತಿ

ಕೋವಿಡ್ ಸಾಂಕ್ರಾಮಿಕ ರೋಗದ ಲಾಕ್ಡೌನ್‌ನಿಂದ ಸಂಘಟಿತ ಮತ್ತು ಅಸಂಘಟಿತ ಎರಡೂ ಕ್ಷೇತ್ರಗಳಲ್ಲಿ ಕಾರ್ಮಿಕರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಗ್ರಾಮೀಣ ಭೂರಹಿತರು ಮತ್ತು ಬಡ ರೈತರು ಕೃಷಿಯಿಂದ ಹೊರದೂಡಲ್ಪಡುತ್ತಿದ್ದಾರೆ. ಇಂತಹವರು ನಗರಗಳಲ್ಲಿ ಆಟೋ, ಟ್ಯಾಕ್ಸಿ, ಸೆಕ್ಯೂರಿಟಿ ಗಾರ್ಡ್‌ಗಳು, ಬೀದಿ ಬದಿ ವ್ಯಾಪಾರ, ಮನೆಗೆಲಸ, ಕಟ್ಟಡ ಕೆಲಸ ಮುಂತಾದ ಅಸಂಘಟಿತ ಕಾರ್ಮಿಕರ ಸಾಲಿಗೆ ಸೇರುತ್ತಿದ್ದಾರೆ. ಕರ್ನಾಟಕದ ಗ್ರಾಮೀಣ ನಿರುದ್ಯೋಗಿ ಯುವಕರು ಮತ್ತು ನಗರದ ಅರೆ-ಉದ್ಯೋಗಿ ಮತ್ತು ನಿರುದ್ಯೋಗಿ ಯುವಕರು ಆಪ್ ಆಧಾರಿತ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಆಟೋ ಚಾಲಕರು ಓಲಾ ಊಬರ್ ವ್ಯಾಪ್ತಿಗೆ ಒಳಪಡುವಿಕೆಯ ಪ್ರಕ್ರಿಯೆ ತೀವ್ರಗೊಂಡಿದೆ. ಕೋವಿಡ್ ಲಾಕ್ಡೌನ್‌ನಿಂದಾಗಿ ಖಾಸಗಿ ಸಾರಿಗೆ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿ, ಕೆಲಸ ತೊರೆಯುತ್ತಿರುವ ಪ್ರವೃತ್ತಿ ಕಾಣಲಾಗುತ್ತಿದೆ.

ಅಸಂಘಟಿತ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೊರ ರಾಜ್ಯಗಳ ವಲಸೆ ಕಾರ್ಮಿಕರು ಮುಖ್ಯವಾಗಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯಗಳ ಬಡವರು ಕಟ್ಟಡ ಕಾರ್ಮಿಕರಲ್ಲಿ ಗಣನೀಯವಾಗಿದ್ದಾರೆ. ವಲಸೆ ಅಸಂಘಟಿತ ಕಾರ್ಮಿಕರಾಗಿ ಕಡಿಮೆ ಕೂಲಿಗೆ, ಸರಿಯಾದ ವಸತಿಯಿಲ್ಲದೆ ಶೆಡ್ಡುಗಳಲ್ಲಿ ವಾಸಿಸುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಉದ್ಯೋಗಾವಕಾಶಗಳು ಉತ್ತರ ಭಾರತದವರ ಪಾಲಾಗುತ್ತಿವೆ ಎಂಬ ಅಸಮಾಧಾನವೂ ಜನರ ನಡುವೆ ಬೆಳೆಯುತ್ತಿದೆ. ಮುಂದೆ ಇದು ಭಾಷಾ ಸಮಸ್ಯೆಗೂ ಎಡೆಮಾಡಿ ಕೊಡಬಹುದಾಗಿದೆ. ಆಟೋ, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆಗೆಲಸದ ಕಾರ್ಮಿಕರ ಸಾಮಾಜಿಕ ಸುರಕ್ಷತೆಯ ಪ್ರಶ್ನೆಗಳ ಮೇಲೆ ಮತ್ತು ಕೋವಿಡ್ ಪರಿಹಾರಕ್ಕಾಗಿ ಹಲವು ಹೋರಾಟಗಳನ್ನು ಲಾಕ್ಡೌನ್ ನಡುವೆ ನಡೆಸಲಾಗಿದೆ.

ಚಳುವಳಿಯಿಂದಾಗಿ ನೌಕರರು ಪಡೆದಿರುವ ಸೌಲಭ್ಯಗಳು, ಗೌರವಧನ ಹೆಚ್ಚಳದಂತಹ ಸಾಧನೆಗಳಿಗೆ ಕಾರಣವಾದ ಸ್ಕೀಂ ನೌಕರರ ಚಳುವಳಿ ಮುರಿಯಲು ಒಂದೆಡೆ ಟ್ರಸ್ಟ್ ಹೆಸರಿನಲ್ಲಿ ಅಂಗನವಾಡಿ ನೌಕರರನ್ನು ಸಂಘಟಿಸುವ ಮತ್ತೊಂದೆಡೆ ರಾಷ್ಟ್ರಿಯ ಶಿಕ್ಷಣ ನೀತಿಯಡಿ ಇಡೀ ಯೋಜನೆಯನ್ನೇ ಇಲ್ಲದಾಗಿಸುವ ಯತ್ನ ನಡೆದಿದೆ. ಈ ಸವಾಲನ್ನು ಎದುರಿಸಬೇಕಿದೆ.  ಪರಂಪರಾಗತ ಬೀಡಿ, ಗೇರು ಮುಂತಾದ ಕೈಗಾರಿಕಾ ಕಾರ್ಮಿಕರು ಉದ್ದಿಮೆಗಳು ಎದುರಿಸುತ್ತಿರುವ ಸವಾಲುಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಚಾಯಿತಿ ಮತ್ತು ಬಿಸಿಊಟ ನೌಕರರು ವರ್ಷಾನುಗಟ್ಟಲೆ ಸಂಬಳ ಇಲ್ಲದೆ ದುಡಿಯಬೇಕಾಗಿ ಬಂದಿದೆ. ಸ್ಕೀಂ ನೌಕರರು ನೇರ ನಗದು ವರ್ಗಾವಣೆ, ISಏಅಔಓ ಅದಮ್ಯ ಚೇತನ ಮುಂತಾದ ಸ್ವಯಂ ಸೇವಾ ಸಂಘಟನೆಗಳ ಅಪಾಯವನ್ನು ಎದುರಿಸಬೇಕಾಗಿ ಬಂದಿದೆ.

ಸಂಘಟಿತ ಕಾರ್ಮಿಕರ ಕಾಯ್ದೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿರುವಾಗಲೇ, ಬಹುಸಂಖ್ಯಾತ ಕಾರ್ಮಿಕರು ಕಾರ್ಮಿಕ ಸಂಘಗಳ ಅಡಿಯಲ್ಲಿ ಸಂಘಟಿತರಾಗಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ರಾಜ್ಯ ಬಿಜೆಪಿ ಸರ್ಕಾರವು ನಿಶ್ಚಿತ ಅವಧಿಯ ಕಾರ್ಮಿಕರಿಗೆ (ಈಖಿಇ) ಅನುವುಗೊಳಿಸುವ ತಿದ್ದುಪಡಿಯನ್ನು ಕೈಗಾರಿಕಾ ಕಾರ್ಮಿಕರ ಸ್ಥಾಯಿ ಆದೇಶಗಳಿಗೆ ಮಾಡಿದ ಕಾರಣ ಮಾಲೀಕರಿಗೆ ಈಖಿಇ ಗಳ ನೇಮಕಕ್ಕೆ ಮುಕ್ತ ಅವಕಾಶ ನೀಡಿದೆ. ಪರಿಣಾಮವಾಗಿ ಬಹುತೇಕ ದೊಡ್ಡ ಕಾರ್ಖಾನೆಗಳಲ್ಲಿ ಏನಾದರೂ ಮಾಡಿ ಖಾಯಂ ಕಾರ್ಮಿಕರನ್ನು ಸ್ವಯಂ ನಿವೃತ್ತಿಗೆ ದೂಡುವ, ಗುತ್ತಿಗೆ ಕಾರ್ಮಿಕರಿಗೂ ಪ್ರತ್ಯೇಕಗೊಳ್ಳಲು ವಿಶೇಷ ಪರಿಹಾರ ನೀಡುವ ಪ್ರಯತ್ನಗಳು ನಡೆದಿವೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆಯುವ, ಬೇರ್ಪಡೆಗೊಳ್ಳುವ ಪ್ರವೃತ್ತಿಯು ತೀವ್ರಗೊಂಡಿದೆ. ಪರಿಣಾಮವಾಗಿ ಡಿಪ್ಲಮೊ, ಇಂಜಿನಿಯರಿಂಗ್ ಪದವಿ ಪಡೆದವರು ಈಖಿಇ ಗಳಾಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಾ ವ್ಯಾಪಕವಾಗುತ್ತಿದೆ. ದಿವಾಳಿ ಮತ್ತು ಪಾಪರಿಕೆ ಸಂಹಿತೆಯಡಿ, ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬುನಲ್‌ಗಳಿಗೆ ದಿವಾಳಿ ಅರ್ಜಿ ಸಲ್ಲಿಸಿ ಅದರ ಪರಿಹಾರದ ನೆಪದಲ್ಲಿ ಕಾರ್ಮಿಕರನ್ನು ಬೀದಿಗೆ ತಳ್ಳು, ಸಾಲಗಳನ್ನು ಮನ್ನಾ ಮಾಡಿಸಿಕೊಂಡು ಮತ್ತೊಂದು ಹೆಸರಿನಲ್ಲಿ ಕಂಪನಿ ತೆರೆದು ಅನಿವಾರ್ಯವಾದಲ್ಲಿ ಅದೇ ಕಾರ್ಮಿಕರನ್ನು ಕಡಿಮೆ ವೇತನಕ್ಕೆ ಶರತ್ತುಬದ್ಧವಾಗಿ ಕೆಲಸಕ್ಕೆ ನೂತನವಾಗಿ ಸೇರಿಸಿಕೊಳ್ಳುವ ಪ್ರವೃತ್ತಿಗಳು ತೀವ್ರವಾಗಿವೆ. ರಾಜ್ಯ ರಸ್ತೆ ಸಾರಿಗೆ ನೌಕರರು ರಾಜ್ಯ ಸರ್ಕಾರಿ ನೌಕರರಾಗಬೇಕು ಮತ್ತು ವೇತನ ಆಯೋಗದ ಸೌಲಭ್ಯ ಪಡೆಯಬೇಕೆಂದು ನಡೆಸಿದ ಮುಷ್ಕರಕ್ಕೆ ಪ್ರತಿಕಾರವಾಗಿ ರಾಜ್ಯ ಸರ್ಕಾರ ನಡೆಸಿರುವ ಅಮಾನತ್ತು ಮತ್ತು ವಜಾಗೊಳಿಸುವ ಕ್ರಮಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದೊಡ್ಡ ಕೈಗಾರಿಕೆಗಳ ಕಾರ್ಮಿಕರ ನಡುವೆ ಮೋದಿ ಪರ ಕ್ರಿಯಾಶೀಲತೆ ಹೆಚ್ಚಿದೆ. ಅದೇ ವೇಳೆ ನೀತಿಗಳ ವಿರುದ್ಧ ಮುಷ್ಕರಗಳಲ್ಲಿ, ಹೋರಾಟಗಳಲ್ಲಿ ಭಾಗವಹಿಸುತ್ತಿರುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಕಾರ್ಮಿಕರಲ್ಲಿ ಬೆಳೆದು ಬರುತ್ತಿರುವ ಅತೃಪ್ತಿಯ ಮನೋಭಾವವನ್ನು ಸರ್ಕಾರದ ನೀತಿಗಳ ವಿರುದ್ಧದ ಹೋರಾಟ ಚಳುವಳಿಯಾಗಿ ಮಾರ್ಪಡಿಸಲು ಕಾರ್ಮಿಕರ ನಡುವೆ ವ್ಯಾಪಕ ರಾಜಕೀಯ ಪ್ರಚಾರಾಂದೋಲನಗಳನ್ನು ಸಂಘಟಿಸಬೇಕಿದೆ.

Leave a Reply

Your email address will not be published. Required fields are marked *